Previous ಬಾಲಸಂಗಣ್ಣ ನಿಜಗುಣಯೋಗಿ Next

ವೀರ ಗೊಲ್ಲಾಳ-ಕಾಟಕೋಟ ವಚನಗಳು

86
ಆಡು ಆರುದಿಂಗಳು ಹುಟ್ಟಿ, ಮೂರುದಿನ ಬದುಕಿ,
ಒಂದುದಿನ ಸತ್ತಿತ್ತು.
ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು.
ಮರಿಯು ಮೊಲೆಯ ನುಂಗಿ, ಕುರುಹಿನೊಳಗಡಗಿತ್ತು.
ಆಡು ಕುರಿ ಬಂದ ಬಟ್ಟೆಯ ಸೋಧಿಸಿಕೊಂಡು,
ತೋಳನ ತೊಡಕಿನಲ್ಲಿ ಸಾಯದೆ, ಅರಿ ವೀರಬೀರೇಶ್ವರಲಿಂಗವಾ.

87
ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ , ದೊಡ್ಡೆಯ ಹೊಡೆವುತ್ತ ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ ,
ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.
88
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.

89
ಕೊರಡು ಕೊನರುವಲ್ಲಿ, ಬರಡು ಕರೆವಲ್ಲಿ,
ಕಲ್ಲಿನ ಶಿಲೆಯೊಡೆದು ರೂಪುದೋರುವಲ್ಲಿ,
ಬಳ್ಳವಲ್ಲಾಡದೆ ಲಿಂಗವಾಹಲ್ಲಿ, ಇಂತವರಲ್ಲಿಯ ಗುಣವೊ ?
ಇಂತಿವೆಲ್ಲವನರಿವ ಕಲ್ಲೆದೆಯವನ ಗುಣವೊ ?
ಇಂತಿವ ಬಲ್ಲಡೆ ವಿಶ್ವಾಸದಲ್ಲಿಯೆ ವೀರಬೀರೇಶ್ವರಲಿಂಗವು ತಾನಾಗಿಪ್ಪ.

90
ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ,
ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ,
ಫಲವಿಲ್ಲದ ವೃಕ್ಷದ ಹೂವ ಕಂಡು, ವಿಹಂಗಕುಲ ಚರಿಸದೆ ಮಚ್ಚಿದಂತೆ,
ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು,
ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.
91
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ,
ಐದು ವರ್ಣದ ಸಂಚಿಗ
ಇವರೊಳಗಾದ ನಾನಾ ವರ್ಣದ
ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ,
ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ,
ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು,
ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು,
ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
92
ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ.
ಷಡುಸ್ಥಲವ ಮುನ್ನವೆ ಅರಿಯೆ.
ತತ್ತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ.
ಮಿಕ್ಕಾದ ಸತ್ಕ್ರೀಯದಲ್ಲಿ ನಡೆದಿಹೆನೆಂದಡೆ
ಭಕ್ತಿ ಜ್ಞಾನ ವೈರಾಗ್ಯ ತ್ರಿವಿಧ ಲಕ್ಷ್ಯವಿಧ ನಾನಲ್ಲ.
ನಿಷ್ಠೆಯಲ್ಲಿ ದೃಷ್ಟವ ಕಂಡಿಹನೆಂದಡೆ ವಿಶ್ವಾಸ ಎನಗಿಲ್ಲ.
ವಿರಕ್ತಿಯಲ್ಲಿ ವೇಧಿಸಿಹೆನೆಂದಡೆ,
ತ್ರಿವಿಧ ಮಲದ ಮೊತ್ತದೊಳಗೆ ಮತ್ತನಾಗಿದೇನೆ.
ಮತ್ತೆ ನಿಶ್ಚಯವನರಿದಿಹೆನೆಂದಡೆ,
ಆತ್ಮಂಗೆ ಲಕ್ಷವಿಡುವದೊಂದು ಗೊತ್ತ ಕಾಣೆ.
ಇಂತೀ ಕಷ್ಟತನುವಿನಲ್ಲಿ ಬಂದು, ಧೂರ್ತನಾಗಿ ಕೆಟ್ಟುಹೋಗುತ್ತಿದೇನೆ.
ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ,
ಎನಗೆ ಸದ್ಭಕ್ತಿಯ ಬೀರಿ, ವಿಶ್ವಾಸಿಗಳಿಗೆಲ್ಲಕ್ಕೆ ಕೃತ್ಯದೊಳಗಾಗಿ,
ನಿತ್ಯನೇಮಂಗಳಲ್ಲಿ ಅಚ್ಚೊತ್ತಿದಂತಿರು.
ನೀನೆ ಮುಕ್ತನಹೆ, ನಿಜನಿತ್ಯನಹೆ, ಜಗಕೆ ಕತರ್ೃವಹೆ.
ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ,
ಮಹಾಮಹಿಮ ವೀರಬೀರೇಶ್ವರಾ.
93
ಹೋತನ ಕೊಯ್ದು, ಕುರಿಯ ಸುಲಿದು,
ಮರಿಯ ಕೊರಳನೊತ್ತಿ , ಕಾವಲ ಕುನ್ನಿಯ ಕೆಡಹಿ,
ತೋಳನ ಕುಲವ ಗೆದ್ದು, ಕುರುಬನ ಕುರುಹಿನ ಕುಲವಡಗಿ,
ನೆರೆ ಅರಿವಿನ ಕುಲದಲ್ಲಿ ಅಡಗಬೇಕು,
ವೀರಬೀರೇಶ್ವರಲಿಂಗವನರಿದ ಶರಣ.
94
ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ,
ತಗರ ತಡದು, ಹಿಂಡನೊಬ್ಬುಳಿತೆಮಾಡಿ,
ಹುಲಿ ತೋಳ ಚೋರ ಭಯಮಂ ಕಳೆದು,
ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
95
ಹೋತು ಹುಸಿ, ಆಡು ಬಹುಮಾತಿನ ನೀತಿ,
ಕುರಿ ಸಕಲೇಂದ್ರಿಯದ ನೆಲ ಹೊಲ, ತಗರು ತಥ್ಯಮಿಥ್ಯದ ಹೋರಟೆ,
ಹುಲಿ ದ್ವೇಷದಾಗರ, ತೋಳ ಕೊಂದು ತಿಂಬ ಕಾಟ.
ಚೋರ ಮೃತ್ಯು ಇಂತಿವು ಮೊದಲಾದ
ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ,
ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ ?
ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ,
ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು,
ನೆರೆ ವೀರಬೀರೇಶ್ವರಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಬಾಲಸಂಗಣ್ಣ ನಿಜಗುಣಯೋಗಿ Next