Previous ಮಹಾಗುರು ಬಸವಣ್ಣ ಸಂಸ್ಥಾಪಿಸಿದ ಲಿಂಗಾಯತ ಧರ್ಮ ಜಾತಿಗಣತಿಯ ಕುರಿತು ಸ್ಪಷ್ಟೀಕರಣ Next

ವೀರಶೈವವೋ? ಲಿಂಗಾಯತವೋ? ಅಥವಾ ವೀರಶೈವ-ಲಿಂಗಾಯತವೋ ನೀವೇ ತೀರ್ಮಾನಿಸಿಕೊಳ್ಳಿರಿ.

*

- ಎಂ.ಆರ್.ಪಂಪನಗೌಡ, ಬಿ.ಈ.ಎಂ.ಐ.ಈ

ವೀರಶೈವ-ಲಿಂಗಾಯತ :- ಇವುಗಳಲ್ಲಿ ಯಾವುದು ಸರಿ ಎಂಬುದರ ಜಿಜ್ಞಾಸೆ ಹಾಗೂ ಚರ್ಚೆಗೆ ಅಂತಿಮ ಉತ್ತರ.

ಉಲ್ಲೇಖ : ಕೇದಾರಪೀಠದ ಶ್ರೀಗಳ (ವಿಜಯವಾಣಿ ಪುಟ ಸಂ-6 ದಿನಾಂಕ 19.01.2015) ಹಾಗೂ ಡಾ|| ಚಿದಾನಂದ ಮೂರ್ತಿಗಳ (ಸಂಯುಕ್ತ ಕರ್ನಾಟಕದ ದಿನಾಂಕ: ಜನೇವರಿ 23, ಪುಟ ಸಂಖ್ಯೆ-09 ‘ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕನಲ್ಲ’ ಎಂಬ ಪತ್ರಿಕಾ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ.

ವಿಶ್ವದ ಐದೂ ಖಂಡಗಳನ್ನು ಒಳಗೊಂಡ Land mass (ಲ್ಯಾಂಡ್ ಮಾಸ್)ಗೆ ‘ಗೊಂಡ್ವಾನ ಲ್ಯಾಂಡ್’ ಎಂದು ಸಮಾಜ ಶಾಸ್ತ್ರಜ್ಞರು/ತಳಿಶಾಸ್ತ್ರಜ್ಞರು/ಭೂಗರ್ಭ ಶಾಸ್ತ್ರಜ್ಞರು ವೈಜ್ಞಾನಿಕ ತಳಹದಿಯ ಮೂಲಕ ಪ್ರತಿಪಾದಿಸಿದ್ದಾರೆ. ಇಲ್ಲಿಯ ಮೂಲ ನಿವಾಸಿಗಳನ್ನು ‘ಗೊಂಡರೆಂದೂ’ ಅವರು ಪ್ರಸ್ತುತ ಭಾರತದ 10-15 ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವೆಂದು ಮಾನ್ಯವಾಗಿದ್ದು, ಅದರಿಂದ ಕವಲೊಡೆದ ಇತರೆ ಅನೇಕ ಜಾತಿಗಳು ಬೇರೆ ಬೇರೆ ಸಾಮಾಜಿಕ ಸ್ತರದಲ್ಲಿ ಇವೆಯೆಂದು ಡಾ|| ಎಂ.ಸಿ.ಕಂಗಾಲಿ ಹಾಗೂ ಅನೇಕ ಬುಡಕಟ್ಟು , ಭಾಷಾ, ಜನಾಂಗೀಯ ವಿದ್ವಾಂಸರು ಪ್ರತಿಪಾದಿಸಿದ್ದಾರೆ. ‘ಗೊಂಡ’ ಶಬ್ದದ ಸಂಸ್ಕೃತೀಕರಣವೇ ‘ಗೌಡ’ ಎಂದು ದ್ರಾವಿಡ ವಿದ್ವಾಂಸರ ವಾದ. ಸಿಂಧೂ ನದಿತೀರದ ಸಂಸ್ಕೃತಿ, ಭಾಷೆ ಹಾಗೂ ಸಂಸ್ಕೃತಿಯೇ ಹಿಂದೂಗಳಿಗೆ ಮೂಲ. ಅವರ ಭಾಷೆ ಹಾಗೂ ಪೌರಾಣಿಕ ಹಿನ್ನೆಲೆಯಲ್ಲಿ 33 ಕೋಟಿ ದೇವತೆಗಳ, 88 ಸಂ.ಭೂ.ಶೇಖರರ ಪರಂಪರೆ ಇದ್ದ ಬಗ್ಗೆ ಇಂದಿಗೂ ನಂಬಿಕೆಯಿದೆ. ಅವರ ರಾಜನಿಗೆ ಸಂ.ಭೂ.ಶೇಖರ ಎಂದರೆ ಸಂಯೂಗ್ ಭೂಯಂಗ್ ಶೇಖರ ಅರ್ಥಾತ್ ಐದು ಭೂಖಂಡಗಳ ಒಡೆಯ ಎಂದೂ, ಅವರ ರಾಜನನ್ನು ಸಂ.ಭೂ ವೇನ್ ಅಥವಾ ‘ಸಾಯವೇನ್’ ಅಥವಾ ‘ಶೈವನ್’ ಎಂದೂ ಅಂದರೆ ಐದೂ ಖಂಡಗಳ ದೇವನೆಂದೂ ಸಹ ಕರೆಯುತ್ತಾರೆ. ಅವರು ಪ್ರತಿನಿತ್ಯ ಪ್ರತಿಪಾದಿಸುವ, ಪೂಜಿಸುವ ಮಂತ್ರವೇ ವರು ವರು ಸಂಭೂ ವರು ವರು ಮಹಾದೇವ. ಅಂದರೆ –‘ಹರ ಹರ ಸಂಭೂ ಹರ ಹರ ಮಹಾದೇವ’- ಅದಕ್ಕೆ ಹಿಂದಿ ಹಾಗೂ ಆಧುನಿಕ ಭಾರತೀಯ ಭಾಷೆಗಳಲ್ಲಿ ಅರ್ಥ – ಒಬ್ಬೊಬ್ಬ ಸಂ. ಭೂ.ವು ನಮ್ಮ ದೇವನಾಗಿದ್ದಾನೆ.

ಗೊಂಡರಲ್ಲಿ 33 ಕೋಟಿ ದೇವತೆಗಳ-7 ದೇವತಾ ಗುಂಪುಗಳ/750 ಬೆಡಗು/5 ಗುರುವಿನ ಗುಂಪುಗಳ/ ಗೋತ್ರಗಳ-2250 ಉಪಗೋತ್ರಗಳ ಸ್ಟಷ್ಟ ವಿಭಜನೆ ಹಾಗೂ ಗೋತ್ರದ ವ್ಯವಸ್ಥೆ ಇಂದಿಗೂ ಇದೆ. ಈ ವ್ಯವಸ್ಥೆ ಸಪ್ತ ಮಾತೃಕೆ-ಸಪ್ತನಾಗ-ವೈದಿಕರ ಸಪ್ತ ಗೋತ್ರಗಳ-ಪಂಚ ಪೀಠಗಳ ಪರಿಕಲ್ಪನೆಯ ಮೂಲ.

ಈ ವ್ಯವಸ್ಥೆಯು ಮಧ್ಯಪ್ರದೇಶದ ಬಾಲಾಘಾಟ ಜಿಲ್ಲೆಯ ‘ಲಾಂಜಿಗಡ’ ದಲ್ಲಿ ನಡೆಯಿತೆಂದೂ, ಅಲ್ಲಿಂದ ದೀಕ್ಷಿತರಾಗಿ ಬಂದವರೇ ಲಾಳಗೊಂಡರೆಂಬ ಐತಿಹ್ಯವಿದೆ. ಸಂ.ಭೂ.ವು ‘ಗೊಂಡರ ನಾಗಗೋತ್ರಜನು, ನಾಗವಂಶಜರು, ಗೋತ್ರಜರು, ‘ಮಹಾಭಾರತದ’ ಯುದ್ಧದಲ್ಲಿ ಯಾರ ಪಕ್ಷವನ್ನೂ ಬೆಂಬಲಿಸದ ಕಾರಣ ಅವರನ್ನು ಮಹಾಭಾರತದ ಯುದ್ಧದ ನಂತರ ಖಾಂಡವವನ ದಹನದ ಮೂಲಕ ಬೇರೆ ಭಾಗಗಳಿಗೆ ಹಾಗೂ ದಕ್ಷಿಣ ಭಾರತಕ್ಕೆ ವಲಸೆ ಬಂದುದಕ್ಕೆ ಪುರಾಣಗಳಲ್ಲಿ ಸ್ಪಷ್ಟ ದಾಖಲೆಗಳಿವೆ. ಇದಕ್ಕೆ ಕುರುಹಾಗಿ ನಾಗರಖಂಡ, ನಾಗರಕೋಯಿಲ್, ನಾಗಪಟ್ಟಣಂ, ನಾಗಾಲ್ಯಾಂಡ್, ನಾಗಪುರ, ನಾಗುಲಹಳ್ಳಿ, ನಾಗನಹಳ್ಳಿ ಇತ್ಯಾದಿ-ನಾಗ, ಸಿಂದ ಹೆಸರಿನ ಸ್ಥಳನಾಮಗಳು ಭಾರತದಾದ್ಯಂತ ಹಾಗೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೇರಳವಾಗಿ ದೊರೆಯುತ್ತವೆಯಲ್ಲದೇ ‘ನಾಗ ವಂಶಜರ’ ಮಾರಣಹೋಮದ ಪ್ರಾಯಶ್ಚಿತ್ತಕ್ಕಾಗಿ ಪಾಂಡವರ ಅರಸನಾದ ಜನಮೇಜಯನು ಯಜ್ಞ ಮಾಡಿ ಪ್ರಾಯಶ್ಚಿತ್ತ ಪಟ್ಟ ಬಗ್ಗೆ ಶಾಸನಗಳಲ್ಲಿ ದಾಖಲೆಗಳಿವೆ. ‘ನಾಳಗೊಂಡೇಶ್ವರ ಪುರಾಣ ಮಹಾ ಕಾವ್ಯಂ’ ದಲ್ಲೂ ಇದಕ್ಕೆ ಪೂರಕ ಅಂಶಗಳಿವೆ.

ಗೊಂಡರ 750 ಬೆಡಗು/ಉಪಬೆಡಗುಗಳನ್ನು, ಗೋತ್ರಗಳನ್ನು – ಕ್ರಿ.ಪೂ. ಐದನೇ ಸಹಸ್ರನಾಮದ ಹೊತ್ತಿಗೆ-ಋಷಿಮೂಲಕ್ಕೆ ತಳಕು ಹಾಕಲಾಗಿದೆ.
ಈ ಗೊಂಡರ ಗೋತ್ರ ವ್ಯವಸ್ಥೆಯೇ ವೈದಿಕರ ಗೋತ್ರಗಳಿಗೆ, ಅವೈದಿಕರ ಬೆಡಗುಗಳಿಗೆ, ಶೈವರ ಪಂಚ ಪೀಠಗಳಿಗೆ, ಲಿಂಗಾಯತರು ಹಾಗೂ ವೀರಶೈವರಲ್ಲಿರುವ ಮನೆದೇವರುಗಳ ವ್ಯವಸ್ಥೆಯ ಮೂಲ. ಇದು ರಕ್ತಶುದ್ದಿಗಾಗಿ ಹಾಗೂ ಸೃಷ್ಟಿಯ ಜೀವಿಗಳ ಸಮತೋಲನಕ್ಕಾಗಿ ಬುಡಕಟ್ಟು ವ್ಯವಸ್ಥೆಯಲ್ಲಿ ಸಂ.ಭೂ.ವಿನಿಂದ ಆದ ವ್ಯವಸ್ಥೆ.

ಭರತ ಖಂಡವನ್ನು ಆಳಿದ ಮಹಾಭಾರತೋತ್ತರ ಅನೇಕ ರಾಜವಂಶಗಳು ಈ ನಾಗ, ಸಿಂದ, ಗೊಂಡರ ಮೂಲವಾಗಿದ್ದು, ಅವರು ತಮ್ಮ ಮೂಲವನ್ನು ‘ಅಹಿಚ್ಚತ್ರಪುರ’ವೆಂದು ‘ಫಣೇಂದ್ರ ಕುಲೋದ್ಭವ’ರೆಂದು ಹೇಳಿಕೊಂಡಿದ್ದು, ಡಾ|| ಎಂ.ಸಿ.ಕಂಗಾಲಿ ಹಾಗೂ ಗೊಂಡರ ವಿದ್ವಾಂಸರ ಪ್ರಕಾರ ಅವರೆಲ್ಲ ನಾಗಗೋತ್ರಜರೆಂದೂ, ಗೊಂಡಿ ಭಾಷೆಯಲ್ಲಿ ಆಯಾ ರಾಜವಂಶಗಳ ಅರ್ಥ, ಅವರ ಗೋತ್ರ ಮೂಲವನ್ನು ಸೂಚಿಸುತ್ತದೆ ಎಂದು ದಾಖಲಿಸಿದ್ದಾರೆ. ಉದಾ: ನಂದ-ಎತ್ತು,ವೃಷಭ. ಕದಂಬ-ಬಾಳೆಎಲೆ,ಕದಂಬ, ಹಂದಿ; ಪಂದಿ, ಚಾಲುಕ್ಯರು ಹಾಗೂ ಹಂಡೆ ಅರಸರ ಮೂಲವನ್ನು ಸೂಚಿಸುತ್ತದೆ.

ಇಂದಿಗೂ ಹಿಂದೂ(ಸಿಂಧು)ಗಳ ಅಧಿದೇವತೆ ‘ದೇವರ ದೇವ ಮಹಾದೇವ’ ನನ್ನು ನಾಗಧಾರಿಯಾಗಿ, ವಿಷ್ಣುವನ್ನು ನಾಗಾಶ್ರಯನಾಗಿ, ಬುದ್ಧ, ಮಹಾವೀರ- ಇವರನ್ನು ‘ನಾಗರ ಎಡೆಯ’ ಆಶ್ರಯದ ಹಿನ್ನೆಲೆಯಲ್ಲಿ ತೋರಿಸುವುದು ಅವರ ನಾಗವಂಶದ ಮೂಲ ಹಾಗೂ ಅವರ ಆಶ್ರಯನವನ್ನು ಸಂಕೇತಿಸುತ್ತದೆ.

ಚರಿತ್ರೆಯಲ್ಲಿ ಬೌದ್ಧ ಧರ್ಮದ ಸಮ್ಮೇಳನವೊಂದರಲ್ಲಿ ಬೌದ್ಧ ಧರ್ಮದ ಸಮಾವೇಶದಲ್ಲಿ ‘ಶಿವನಪೂಜೆ’ ಇಲ್ಲವಾಗಿದ್ದುದರ ಸಲುವಾಗಿ ನಾಗಾಗೋತ್ರಜರು ದಂಗೆಯೆದ್ದ ಪರಿಣಾಮವಾಗಿ ‘ಮೊದಲು ಶಿವನಿಗೆ’ ನಮನ ಸಲ್ಲಿಸಿ ನಂತರ ‘ಬುದ್ಧನಿಗೆ’ ನಮನ ಸಲ್ಲಿಸಿದ ಮೇಲೆಯೇ ಸಭೆ ಶಾಂತವಾಗಿ ನಡೆಯಿತೆಂಬ ಅಂಶ ದಾಖಲಾಗಿದೆ.

ಇಂದಿಗೂ “ನಾಗಾ ಸಾಧುಗಳ” ಮಂತ್ರವೂ ಸಹ ಕೇವಲ ‘ಹರ ಹರ ಸಂಭೋ, ಹರ ಹರ ಮಹಾದೇವ’ ಎಂದಿದೆ. ಈ ಘಟನಾವಳಿಗಳ ಹಿನ್ನೆಲೆಯಲ್ಲಿಯೇ ‘ರಾಮಾಯಣ - ರಕ್ಕಸರಿಗೆ ಮಾರಿ, ಭಾರತ - ಗೋತ್ರಕ್ಕೆ ಮಾರಿ’ ಎಂದು ಸೂಕ್ಷ್ಮವಾಗಿ ವಿಶ್ವಗುರು ಬಸವಣ್ಣನವರು ಹೇಳಿದ್ದಾರೆ. ಹಾಗೂ ಅವರ ಅನುಯಾಯಿಗಳು ‘770’ ಅಮರ ಗಣಂಗಳಿಗೆ ನೀನು ಅನ್ವಯವಾಗುವ ‘ಏಕ ದೇವ ಪೂಜಾ ಪದ್ದತಿ’ ಯನ್ನು ಅನುಷ್ಠಾನಗೊಳಿಸಿದೆಯಾದ್ದರಿಂದ ನೀನೇ ಜಗತ್ತಿನ ಗುರುವೆಂದು ಒಪ್ಪಿ ಸಾರಿದ್ದಾರೆ. ಇವು ‘750’ ಗೊಂಡ ಬುಡಕಟ್ಟಿನ ಹಾಗೂ ‘20’ ಮಿಶ್ರ ಬುಡಕಟ್ಟಿನ ಗೋತ್ರಗಳು/ ಜಾತಿಗಳು ಎಂದು ಜ್ಞಾತವಾಗುತ್ತವೆ. ಈ ಗೋತ್ರ ಸಂಖ್ಯೆಯನ್ನು 18 ಶರಣರು ದಾಖಲಿಸಿದ್ದಾರೆ.

ಹಿಂದೂ ಕಾನೂನು ಯಾರಿಗೆ ಅನ್ವಯವಾಗುತ್ತದೆ ಎನ್ನುವಲ್ಲಿ ಅದು ಹಿಂದುಗಳಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್ಖರಿಗೆ ಅಲ್ಲದೇ ವೀರಶೈವ/ಲಿಂಗಾಯತರಿಗೆ ಅನ್ವಯವಾಗುತ್ತದೆ ಎಂದು ಹೇಳುವಲ್ಲಿ ‘ವೀರಶೈವ’ ಹಾಗೂ ‘ಲಿಂಗಾಯತ’ ಎಂಬ ಎರಡೂ ಸಮುದಾಯಗಳಿಗೆ ಎಂದಾಗುತ್ತದೆ.

‘ವೀರಶೈವವು’ ದಕ್ಷ ಯಜ್ಞದ ಹಿನ್ನಲೆ ಹೊಂದಿದ್ದು, ಶಿವನ ಪಾರಮ್ಯವನ್ನು ಎತ್ತಿ ಹಿಡಿದ ಒಂದು ಸಂಕೇತ ಹಾಗೂ ಗುಂಪನ್ನು ಪ್ರತಿನಿಧಿಸುತ್ತದೆ. ಅಲ್ಲದೇ ‘ಲಿಂಗಾಯತ’ವು ‘770’ ಗಣಗಳ/ಬುಡಕಟ್ಟುಗಳ ಮೂಲಿಗನಾದ ಶಿವನನ್ನು ಹಾಗೂ ಅವನ ಪರಂಪರೆಯವನನ್ನು ‘ಸಾತ್ವಿಕಗೊಳಿಸಿ’ ಬಯಲೇ ಬ್ರಹ್ಮವೆಂಬ ಮಿಟ್ಟೆಯ ಭಂಡರ ಮಾತು ಕೇಳಲಾಗದು, ಪೂಜೆ ಮಾಡಲಾಗದೆಂದು ವಿಶ್ವಗುರು ಬಸವಣ್ಣನವರೇ ಹೇಳಿದ್ದಾರೆ ಹಾಗೂ ಪ್ರತಿಪಾದಿಸಿದ್ದಾರೆ. ಹೇಗೆ ಚಿತ್ರದಲ್ಲಿರುವ ಕಬ್ಬನ್ನು ತಿನ್ನಲು ಸಾಧ್ಯವಿಲ್ಲವೋ ಹಾಗೆಯೇ ಬಯಲನ್ನೂ ಸಹ ಪೂಜಿಸಲು ಸಾಧ್ಯವಿಲ್ಲ. ಮುಂದುವರೆದು ವಿಶ್ವಗುರು ಬಸವಣ್ಣನವರು ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲ ಸಂಗಮದೇವ ಎಂದು ಹೇಳಿದ್ದಾರೆ.

ಶಿವ ಹಾಗೂ ಬಸವರ ಸಂಬಂಧ ತಾತ-ಮುತ್ತಾತರೊಂದಿಗೆ ಹಾಗೂ ಆತನ ಪರಂಪರೆಯೊಂದಿಗೆ – ಗೋತ್ರದೊಂದಿಗೆ – ಇರುವ ಸಂಬಂಧವಾಗಿದ್ದು, ಡಾರ್ವಿನ್ ಸಿದ್ದಾಂತ ಹೇಳುವ ಹಾಗೆ ಮಕ್ಕಳು, ತಂದೆ ತಾಯಿಗಳನ್ನು ಹೋಲುತ್ತವೆ ಹಾಗೂ ಭಿನ್ನವಾಗಿರುತ್ತವೆ ಎಂಬ ಸತ್ಯವೇ ಆಗಿದೆ. ಅಸಲಿಗೆ ಪಂಚ ಪೀಠಗಳು ವಾದಿಸುವ ಹಾಗೆ ಸಿದ್ಧಾಂತ ಶಿಖಾಮಣಿ ಗ್ರಂಥ ಸೊನ್ನಲಿಗೆ ಸಿದ್ಧರಾಮೇಶ್ವರ ಕುಲ ಸಂಜಾತನಾದ ಶಿವಾಚಾರ್ಯನಿಂದ 16-17 ನೇ ಶತಮಾನದಲ್ಲಿ ರಚಿತವಾಗಿದೆ . ಡಾ|| ಚಿದಾನಂದ ಮೂರ್ತಿ ಅವರ ಈ ವಾದ ಸರಿಯಾಗಿದೆ. ಈ ಬಗ್ಗೆ ಎರಡು ಮಾತಿಲ್ಲ, ಹಾಗೆಯೇ ‘ಬಸವ ಪೂರ್ವದ-ವೀರಶೈವ’ರ ಬಹುಪಾಲು ಜನರು ‘ಲಿಂಗಾಯತ’ರಾದ ಮಾತ್ರಕ್ಕೆ ‘ವೀರಶೈವ’ರೆಲ್ಲರೂ ಲಿಂಗಾಯತರಲ್ಲ ಹಾಗೂ ಎಲ್ಲಾ ವೀರಶೈವರು ಲಿಂಗಾಯತರಲ್ಲ. ಕೇದಾರ ಶ್ರೀಗಳು ಹಾಗೂ ಜಾ|| ಚಿ|| ಮೂ|| ಗಳಿಬ್ಬರೂ ‘ಲಿಂಗಾಯತ’ರನ್ನು ದಾರಿತಪ್ಪಿಸುವ ಕಾಯಕದಲ್ಲಿದ್ದಾರೆ. ಇವರಿಬ್ಬರಿಗೂ ಒಂದು ಸ್ಪಷ್ಟನೆಯೆಂದರೆ- ಈ ಈರ್ವರೂ ವಿಶ್ವಗುರು ಬಸವಣ್ಣನವರ ಸಮಗ್ರ ವಚನಗಳನ್ನು ಓದಿಲ್ಲ. ವಿಶ್ವಗುರು ಬಸವಣ್ಣನವರ 1416 ವಚನಗಳ ಪೈಕಿ ಕೇವಲ ಒಂದು ವಚನದಲ್ಲಿ ‘ವೀರಶೈವ’ (ವ.ಸಂ.1159) ವನ್ನು ಲಿಂಗಾಯತನ/ರ ಹಂತವೆಂದು ಹೇಳಿದ್ದು, ಶಿವನನ್ನು 175 ಸಲ, ‘ಲಿಂಗ’ವೆಂಬ ಶಬ್ದವನ್ನು ‘614’ ಸಲ ಉಲ್ಲೇಖಿಸಿದ್ದಾರೆ. ಅಲ್ಲದೇ ಅನುಭವ ಮಂಟಪದ ಎಲ್ಲರೂ (770 ಅಮರ ಗಣಂಗಳು) ಬಸವಣ್ಣನವರನ್ನು ತಮ್ಮ ಗುರುವೆಂದೂ, ಲಿಂಗಾಯತದ ಮೊದಲಿಗನೆಂದೂ ಗುರುತಿಸಿದ್ದಾರೆ. ಸರ್ವಜ್ಞ ಮೂರ್ತಿಯ ಈ ವಚನ. ಈ ಅಪ್ರಬುದ್ಧರ ಗಮನಕ್ಕೆ, ಪ್ರಲಾಪಕ್ಕೆ ಉತ್ತರವೆಂಬಂತೆ “ಹರನೇ ತಾ ಗುರುವಾಗಿ, ಮರ್ತ್ಯಲೋಕಕ್ಕೆ ಬಂದ ಪರಶಿವಲಿಂಗವನು ಕರಕೆ ತಂದುಕೊಟ್ಟ ಗುರುವೇ ಬಸವಣ್ಣ” ಎಂದಿದ್ದಾರೆ. ಹಾಗೆಯೇ ಮುಂದುವರೆದು ‘‘ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ’ ಹುಸಿಮಾತನಾಡಿ ಕೆಡದಿರಿ, ಲಿಂಗಾಯತಕೆ ಬಸವನೇ ಕರ್ತೃ ಸರ್ವಜ್ಞ” ಎಂದಿದ್ದಾರೆ.

ಇವರಿಬ್ಬರೂ ಲಿಂಗಾಯಿತರನ್ನು ಮೂರ್ಖರನ್ನಾಗಿಸುವಲ್ಲಿ, ಹಾದಿ ತಪ್ಪಿಸುವಲ್ಲಿ ನಿಸ್ಸೀಮರು ಹಾಗೂ ಅಡ್ಡಪಲ್ಲಕ್ಕಿಯಂಥ ಗುಲಾಮಗಿರಿಯ ಸಂಕೇತಗಳನ್ನು ಮೆರೆಸುವವರು ಎಂದು ಭಾವಿಸಬಹುದು. ಇಂತಹವರ ವಿತಂಡವಾದದಿಂದ ಬಸವನೆಂಬ ಸೂರ್ಯನ ಬೆಳಕಿ ಗೆ ತಾತ್ಕಾಲಿಕ ಕೊಡೆಯಂತೆ ಮುಸುಕು ಹಾಕಬಹುದಷ್ಟೇ ಹೊರತು ಶಾಶ್ವತವಾಗಿ ಸೂರ್ಯನನ್ನು ಮರೆಮಾಚಲಾಗದು. ಇದರ ಹಿಂದೆ ಬ್ರಾಹಣದ್ವೇಷವೂ ಅಡಗಿದೆ ಹಾಗೂ ಕೆಲಸ ಮಾಡುತ್ತಿದೆ. ಇಂತಹ ಅಸಂಬದ್ದ ಪ್ರಲಾಪಗಳು ಕ್ರಿ.ಶ.2032 ರ ವರೆವಿಗೂ ಆಗುತ್ತದೆ ಹಾಗೂ ಅದರ ನಂತರ ‘ಬಸವಣ್ಣನವರೇ ಗುರುವೆಂದು’ ಇಳೆಯ ಮನುಜರೆಲ್ಲರೂ ಒಪ್ಪುತ್ತಾರೆಂದು ಕಾಲಜ್ಞಾನ ವಚನಗಳಲ್ಲಿಯೇ ದಾಖಲಾಗಿದೆ.

ವಿಶ್ವಗುರು ಬಸವಣ್ಣನವರು ದೇವರೇ ತಮ್ಮ ಗುರುವೆಂದು ಹೇಳಿದ ವಚನಗಳ ದಾಖಲೆಯೊಂದಿಗೆ ಸಮಾಪ್ತಿಗೊಳಸುತ್ತಿದ್ದೇನೆ.
828.
ಮುನ್ನಿನ ಜನ್ಮದಲಿ ಗುರು ಲಿಂಗ ಜಂಗಮವ ಪೂಜಿಸಲರಿಯದ ಕಾರಣ
ಬಹು ಜನ್ಮಕ್ಕೆ ತಂದಿಕ್ಕಿದೆಯಯ್ಯಾ ಎನ್ನನು.
ಎನಗೆ ಗುರಪಥವ ತೋರಿದವರಾರು?
ಲಿಂಗಪಥವ ತೋರಿದವರಾರು?
ಜಂಗಮ ಪಥವ ತೋರಿದವರಾರು?
ಪಾದೋದಕ ಪ್ರಸಾದವ ತೋರಿದವರಾರು?
ತೋರುವ ಮನವೆ ನೀವೆಂದರಿತೆ.
ಎನಗಿನ್ನಾವ ಭಯವಿಲ್ಲ ಕೂಡಲಸಂಗಮದೇವಾ.

1065.
ಜಂಗಮವೇ ಜ್ಞಾನರೂಪು, ಭಕ್ತನೆ ಆಚಾರರೂಪು ಎಂಬುದು ತಪ್ಪದು ನೋಡಯ್ಯ
ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯ, ಜ್ಞಾನವಿಲ್ಲದನ್ನಕ್ಕರ?
ತಲೆಯಿಲ್ಲದ ಮುಂಡದಂತೆ, ಜ್ಞಾನ ಉದಯವಾಗದ ಮುನ್ನವೇ
ತಲೆದೋರುವ ಆಚಾರವುಂಟೆ ಜಗದೊಳಗೆ?
ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ,
ಜ್ಞಾನದಿಂದ ಪ್ರಸಾದವಲ್ಲದೆ,
ಜ್ಞಾನವನುಳಿದು ತೋರುವ ಘನವ ಕಾಣೆನು,
ಎನ್ನ ಆಚಾರಕ್ಕೆ ನೀನು ಜ್ಞಾನರೂಪವಾದ ಕಾರಣ
ಸಂಗನಬಸವಣ್ಣನೆಂಬ ಹೆಸರುವಡೆದೆನು.
ಅನಾದಿ ಪರಶಿವನು ನೀನೆ ಆಗಿ,
ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ,
ನಾನೆತ್ತ ಶಿವತತ್ವವೆತ್ತಯ್ಯ?
ಕೂಡಲಸಂಗಮದೇವಾ ನೀ ಸಾಕ್ಷಿಯಾಗಿ,
ಮೂರುಲೋಕವೆಲ್ಲವು ಬಲ್ಲದು ಕಾಣಾ, ಪ್ರಭುವೆ !

1173.
ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ,
ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ,
ಮಂತ್ರಕೆ ನಿಮ್ಮ ನಾಮಾಮೃತವೆ ಮುಖ್ಯವಯ್ಯಾ,
ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ,
ನಿಮ್ಮಿಂದಧಿಕರನಾರನೂ ಕಾಣೆನಯ್ಯಾ,
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ.

1159.
ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ !
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವದೈವಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಲಿಲ್ಲ; ಮಾಡಲೆಂತೂ ಬಾರದು
!
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು
ಕಾಣಾ ಕೂಡಲಸಂಗಮದೇವಾ.

1392.
ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿ ಮತಿ ನೀವೇ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೇ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೇ ಕಂಡಯ್ಯ,
ಕೂಡಲಸಂಗಮದೇವಾ ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.

ಎಂ.ಆರ್.ಪಂಪನಗೌಡ,
ಬಿ.ಈ.ಎಂ.ಐ.ಈ
ಎಂ.ಎ (ಚರಿತ್ರೆ) ಡಿಪ್ಲೊಮಾ-ಎಪಿಗ್ರಫಿ
ಮನೆ ಸಂ.259, ‘ಪ್ರೌಢದೇವರಾಯ ನಿಲಯ’,
ಶಾಸ್ತ್ರೀನಗರ, 2ನೇ ಅಡ್ಡರಸ್ತೆ,
ಬಸವಭವನ ಹತ್ತಿರ, ಬಳ್ಳಾರಿ-583103.
ಸೆಲ್.ನಂ : 09448142825

ಸಂದರ್ಭ ಸೂಚಿ, ಆಧಾರ

1. ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ ಹಾಗೂ ಓದು. ಮೂಲ(ಹಿಂದಿ)-ಡಾ|| ಎಂ.ಸಿ.ಕಂಗಾಲಿ. ಕನ್ನಡಕ್ಕೆ ಡಾ|| ಕೆ.ವಿ.ಬ್ಯಾಳಿ
2. ‘ಗೊಂಡ್ವಾನ ದರ್ಶನ’ - ಸಂ|| ಎಂ.ಆರ್.ಪಂಪನಗೌಡ ಪ್ರ : ಲಾಳಗೊಂಡೇಶ್ವರ ಎಜ್ಯುಕೇಷನಲ್ ಟ್ರಸ್ಟ್ (ರಿ) ಶಾನವಾಸಪುರ, ಬಳ್ಳಾರಿ ಜಿಲ್ಲೆ-
ಪ್ರ: 2010
3. ಡಾ|| ಎಂ.ಸಿ.ಕಂಗಾಲಿಯವರ ಸಮಗ್ರ ಗೊಂಡಿ ಧರ್ಮಶಾಸ್ತ್ರ ಹಾಗೂ ಸಾಹಿತ್ಯದ ಪುಸ್ತಕಗಳು (ಸುಮಾರು-20) ಗೊಂಡ್ವಾನ ಸಾಹಿತ್ಯ ಪರಿಷತ್- ನಾಗಪುರ ಪ್ರಕಟಣೆ.
4. ಬಸವಣ್ಣನವರ ಸಮಗ್ರ ವಚನಗಳು. ಪ್ರ : ವಿಶ್ವಕಲ್ಯಾಣ ಮಿಸನ್, ಬೆಂಗಳೂರು. ಪ್ರ: 2010
5. ಬಸವ ದರ್ಶನ - ಸಂ|| ಜಗದ್ಗುರು ಮಾತಾಜಿ. ಪ್ರ : ವಿಶ್ವಕಲ್ಯಾಣ ರಾಜಾಜಿನಗರ, ಬೆಂಗಳೂರು. ಪ್ರ: 2010
6. ವೀರಭದ್ರ ಚರಿತ್ರೆ. ಕನ್ನಡಕ್ಕೆ ಅನುವಾದ - ಲೇ|| ಗುತ್ತಿ ಚಂದ್ರಶೇಖರ ರೆಡ್ಡಿ ಪ್ರಕಾಶಕರು - ಶ್ರೀ ವೀರಭದ್ರಸ್ವಾಮಿ ದೇವಸ್ಥಾನ – ರಾಯಚೋಟಿ, ಕಡಪಾ ಜಿಲ್ಲೆ. ಆಂಧ್ರಪ್ರದೇಶ-2010
7. ತುರುಕಾನೆ ಪಂಚಮರ ಇತಿಹಾಸ. ಪ್ರಕಟಣೆ : ಪೂವಲ್ಲಿ ಪಂಚವಣ್ಣೆಗಿ ಬೃಹನ್ಮಠ (1997)
8. ಕುರುಗೋಡು ನೀಲಮ್ಮನವರ ಸಾಂಸ್ಕøತಿಕ ಅಧ್ಯಯನ. ಡಾ|| ಕೆ.ಎಂ.ಮೇತ್ರಿ; ಡಾ|| ಮೃತ್ಯುಂಜಯ ರುಮಾಲೆ ಕನ್ನಡ ಸಾಹಿತ್ಯ ಪರಿಷತ್ - ಬಳ್ಳಾರಿ ಘಟಕ (ಪ್ರಕಟಣೆ-2008)
9. ಶ್ರೀನಾಳಗೊಂಡೇಶ್ವರ ಪುರಾಣ ಕಾವ್ಯ. ಲೇ. ಶ್ರೀಮದ್ ರಾಜಯೋಗಿ ಬ್ರಹ್ಮಶ್ರೀ ಸಿದ್ಧಾಂತ ಸಿದ್ಧರಾಮಶಾಸ್ತ್ರಿಗಳು ಶಿಖರ ಮಠ –
ರಾಯಚೂರು. (ಪ್ರಕಟಣೆ-1963)

ಪರಿವಿಡಿ (index)
*
Previous ಮಹಾಗುರು ಬಸವಣ್ಣ ಸಂಸ್ಥಾಪಿಸಿದ ಲಿಂಗಾಯತ ಧರ್ಮ ಜಾತಿಗಣತಿಯ ಕುರಿತು ಸ್ಪಷ್ಟೀಕರಣ Next