Previous ಶರಣರು ಮತ್ತು ಆ೦ತರಿಕ ಸ್ವಾತ೦ತ್ರ್ಯ ನಿತ್ಯ ನಿರಂಜನ ಅಲ್ಲಮ ಪ್ರಭುದೇವರು Next

ವೀರಶೈವ ಒಂದು ವೃತ - ಲಿಂಗಾಯತ ಸ್ವತಂತ್ರ ಧರ್ಮ

*

- ಡಾ. ಶಶಿಕಾಂತ ಪಟ್ಟಣ ಪೂನಾ

ವೀರಶೈವ ಮತ್ತು ಲಿಂಗಾಯತ ಇವು ಬಸವ ಪೂರ್ವ ಮತ್ತು ನಂತರದ ಚರ್ಚೆ ಗುರು ವಿರಕ್ತ ಪರಂಪರೆ ವಾದ ಹೇಗೆ ಮತ್ತು ಏಕೆ ಹುಟ್ಟಿಕೊಂಡವು ? ಗುರು ಬಸವಣ್ಣನವರು ೧೨ನೆ ಶತಮಾನದ ಜಾಗತಿಕ ಮಟ್ಟದಲ್ಲಿ ಸರ್ವಕಾಲಿಕ ಸಮಕಾಲೀನ ಸಮಾನತೆ ಸಾರುವ ಅತ್ಯಂತ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿದರು. ಶ್ರೇಣೀಕೃತವಲ್ಲದ ಲಿಂಗ ಆಶ್ರಮ ವರ್ಗ ವರ್ಣ ವರ್ಣ ಬೇಧ ಹೊರತು ಪಡೆಸಿದ ಜಗತ್ತಿನ ಎಲ್ಲಾ ವಿದ್ವಾ೦ಸರಿಂದ ಮೆಚ್ಚುಗೆಗೆ ಪಾತ್ರವಾದ ಲಿಂಗಾಯತ ಧರ್ಮ ಹೇಗೆ ತನ್ನ ಅಸ್ತಿತ್ವ ಕಳೆದುಕೊಳ್ಳ ಹತ್ತಿತು ಎಂಬುದನ್ನು ಚಿಂತಿಸುವುದು ಈ ಲೇಖನದ ಉದ್ಧೇಶ.

ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ.


ಗುರು ಬಸವಣ್ಣನವರ ಆಗಮನವನ್ನು ಜನಪದಿಗರು ತುಂಬು ಮನದಿಂದ ಸ್ವಾಗತಿಸಿದ್ದಾರೆ.

ಅಲ್ಲಿಯವರೆಗೆ ಶೈವಗಳ ಕಾಪಲಿಕ, ಕಾಳಮುಖಿ, ಲಕುಲಿಶ ಹೀಗೆ ಬೇರೆ ಬೇರೆ ಪ್ರಬೇಧಗಳಿದ್ದವು. ಉತ್ತರಾಗಮದ ಭಾಗವಾಗಿ ೧೮ ಮತ್ತು ೧೯ನೆ ಶತಮಾನದಲ್ಲಿ ಆಂಧ್ರ ಮೂಲದಿಂದ ಬಂದ ಆರಾಧ್ಯ ವೀರಶೈವ ವೃತವು ಒಂದು ಪುರೋಹಿತ ಮಾಹೇಶ್ವರ ವರ್ಗವನ್ನು ನಿರ್ಮಿಸುವ ಕುತಂತ್ರದಿಂದ ಬಸವ ಧರ್ಮಿಯರ ಮೇಲೆ ತನ್ನ ಸವಾರಿ ನಡೆಸಿತು. ಬಸವ ಧರ್ಮ ಇದು ಸ್ವತಂತ್ರ ಧರ್ಮ ಅಪ್ಪ ಬಸವಣ್ಣನವರು ಕೊಟ್ಟ ಗುರು ಲಿಂಗ ಜಂಗಮ -ಕಾಯಕ ದಾಸೋಹ ತತ್ವಗಳ ಮೂಲಕ ಸರ್ವರೊಳಗೆ ಸಮಾನತೆ ತಂದ ಶ್ರೇಷ್ಠ ಧರ್ಮ.

ಕಲ್ಲಿನಿಂದ ಮನುಜ ಹುಟ್ಟಬಹುದೇ? ಹುಟ್ಟಿದರೆ ಅವರು ಮಂಗೋಲಿಯನ್ ಕೆರೆಬಿಯನ್ ಆಫ್ರಿಕನ್ ನಿಗ್ರೋ ಪಿಗ್ಮಿ ಹೀಗೆ ಯಾವ ಜನಾಂಗವನ್ನೊ ಶಿವಾಚಾರ್ಯರು ಹೋಲುತ್ತಿದ್ದರು. ಇದೊಂದು ಕಾಲ್ಪನಿಕ ಅವೈಜ್ಞಾನಿಕ ಕಟ್ಟು ಕಥೆ.

ವಚನ ಸಾಹಿತ್ಯ 16ನೇ ಶತಮಾನದ ಸಮಯದಲ್ಲಿ, ಬೇರೆ ಬೇರೆ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಸಂಕಲನಕಾರರಿಂದ ಪ್ರಕ್ಷಿಪ್ತತೆ ಗೊಂಡಿದೆ.

12ನೆ ಶತಮಾನದ ನಂತರ 15ನೆ ಶತಮಾನದಲ್ಲಿ ಸಂಕಲನ ಪರಿಷ್ಕರಣೆ ನಡೆಯಿತು. ನಂತರ16ನೆಯ ಶತಮಾನದಲ್ಲಿ ಉದ್ದೇಶ ಪೂರಿತ ಪ್ರಕ್ಷಿಪ್ತತೆ ನಡೆಯಿತು. ಅಂದಿನ ಕವಿಗಳು ಆಚಾರ್ಯ ಮೂಲದಿಂದ ಬಂದವರಾಗಿದ್ದರಿಂದ ಸಂಸ್ಕೃತ ಮತ್ತು ವೀರಶೈವ ಪದಗಳನ್ನು ಅನಗತ್ಯವಾಗಿ ವಚನಗಳಲ್ಲಿ ಸೇರ್ಪಡಿಸಿದರು ಆರಾಧ್ಯ ಪರಂಪರೆಯವರು ಶರಣ ಸಾಹಿತ್ಯವನ್ನು ತಿರುಚಲು ವಿರೂಪಗೊಳಿಸಲು ಯತ್ನಿಸಿದ್ದಾರೆ. ಅಚ್ಚ ಕನ್ನಡದಲ್ಲಿಯೇ ಸಾಹಿತ್ಯ ರಚಿಸಿದ ಶರಣರಿಗೆ ಸಂಸ್ಕೃತದ ವ್ಯಾಮೊಹವೆಕೆ? ಇದೊಂದು ಅಪ್ಪಟ ಸುಳ್ಳು ಮತ್ತು ಕೃತ್ರಿಮತೆ.

ವೀರಶೈವ ಧರ್ಮವೆನ್ನುವವರಿಗೆ ನನ್ನ ಪ್ರಶ್ನೆ? ಆಂಧ್ರದ ಕೊಲ್ಲಿಪಾಕಿನಲ್ಲಿ ಉಧ್ಭವವಾದ ರೇಣುಕಾಚಾರ್ಯರು. ಏಕ ಕಾಲಕ್ಕೆ ಕೇದಾರ ಶ್ರೀಶೈಲ ಉಜ್ಜೈನಿ ಮತ್ತು ಕಾಶಿಯ ಶ್ರೀ ಶಿವಾಚಾರ್ಯರು ಜನ್ಮ ತಾಳಿದರೆ ಅಥವಾ ಒಬ್ಬೊಬ್ಬರಾಗಿ ಕಲ್ಲು ಸೀಳಿ ಹುಟ್ಟಿ ಬಂದರೆ? ಕಲ್ಲಿನಿಂದ ಮಾನವ ಹುಟ್ಟುವುದು ಸಾಧ್ಯವಿಲ್ಲ.

ವೀರಶೈವ ವೃತ -ಇದೊಂದು ಕಾಲ್ಪನಿಕ ಕಟ್ಟು ಕಥೆ.

ಕಾರಣ ಅದಕ್ಕೆ ಧರ್ಮ ಗುರುವಿಲ್ಲ, ಧರ್ಮ ಗ್ರಂಥವಿಲ್ಲ, ಧರ್ಮ ಸೂತ್ರಗಳಿಲ್ಲ. ಸಿದ್ಧಾಂತ ಶಿಖಾಮಣಿ ಇದು ಬಸವೊತ್ತರದ ಕೃತಿಯೆಂದು ಸಿದ್ಧವಾಗಿದೆ. ಅಷ್ಟೆ ಏಕೆ ಆ ಕೃತಿಯ ಮೊದಲನೆಯ ಪುಟದಲ್ಲಿ "ಓಂ ಶ್ರೀ ಗುರು ಬಸವಲಿಂಗಾಯನಮ:" ಎಂದು ದಾಖಲಿಸಲಾಗಿದೆ. ಬಹುದೇವೊಪಾಸನೆಯನ್ನು ಆಚರಿಸುವ ವೀರಶೈವ ಹೇಗೆ ಧರ್ಮವಾಗುತ್ತದೆ?

15-16ನೆ ಶತಮಾನದಲ್ಲಿ ವೀರಶೈವ ಪದ ಬಳಕೆಯಲ್ಲಿ ಬಂತು. 1886 ರ ವೇಳೆಗೆ ಲಿಂಗಾಯತ ಮುಖಂಡರನ್ನು ನಂಬಿಸಿ ಕೃತಕ ವೀರಶೈವ ಸಾಹಿತ್ಯ ಹುಟ್ಟ ಹಾಕಿದರು.
ಅವರಲ್ಲಿ.
೧ ) ಹುಬ್ಬಳ್ಳಿಯ ಚೆನ್ನವೀರಸ್ವಾಮಿಗಳು.
೨) ಬಾರ್ಸಿಯ ಪ್ರಭುಲಿಂಗಯ್ಯನವರು,
೩) ಸೀತಾರಾಮ ಶಾಸ್ತ್ರಿ ರೆತ್ರೆಕರ (ಬರ್ಸಿ) ಸಂಸ್ಕೃತ ಪಂಡಿತ.
೪ ) ದಡ್ಡಿರಗಪ್ಪಶೆಟ್ಟಿ
೫ ) ಯಜಮಾನ ವೀರಸಂಗಪ್ಪನವರು.

ಇವರು ಕೃತ್ರಿಮವಾಗಿ ರಚಿಸಿದ ಸಾಹಿತ್ಯವನ್ನು
1) ಚಿಕ್ಕ ಬಳ್ಳಾಪೂರದ ವಿರುಪಾಕ್ಷ ಶಾಸ್ತ್ರಿಗಳು
2) ರಾಯಚೂರು ಕೃಷ್ಣಾಮಾಚಾರ
3) ಫಕೀರ ಪರ್ವತ ಬಸವಲಿಂಗ ಶಿವಬಸವ ಶಾಸ್ತ್ರಿಗಳು.
4) ಕರವೇ ವೆಂಕಟ ರಂಗೋ
ಇವರ ಸಹಾಯದಿಂದ ರಚಿಸಿ ಪರಿಶೀಲಿಸಿ ತಾವು ಲಿಂಗಿ ಬ್ರಾಹ್ಮಣ ಎಂದು ಸಾದಿಸ ಹೊರಟಿದ್ದು ಮೊದಲನೆಯ ತಪ್ಪು. ಇದನ್ನು 1886ರಲ್ಲಿ ಸೆಪ್ಟೆಂಬರ್ 11 ರಿಂದ 25 ವರೆಗೆ ಬೆಳಗಾವಿಯ ಶಿವಾನಂದ ಥೀಯೇಟರ್ ಬಳಿಯ ಶಿವಾನಂದ ಪ್ರಿ೦ಟಿಂಗ್ ಪ್ರೆಸ್ಸಿನಲ್ಲಿ ಪ್ರಕಟ ಗೊಳಿಸಿದ್ದಾರೆ. "ವೀರಶೈವ ನಿರ್ಣಯ ಚಿಂತಾಮಣಿ" ಇದರಲ್ಲಿ ಈ ವಿಷಯವನ್ನು ಕಾಣಬಹುದು.

ಪರಳಿ ವೈಜನಾಥ ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಅಂದಿನ ಹಿರಿಯ ಮುಖಂಡರಾದ ವಾರದ ಮಲ್ಲಪ್ಪನವರಿಂದ ಸಿದ್ದರಾಮಪ್ಪ ಪಾವಟೆ ಅವರ ಕಾನೂನಿನ ನೆರವಿಂದ ಲಿಂಗಾಯತರು "ಲಿಂಗಿ ಬ್ರಾಹ್ಮಣ" ಎಂದು ವಾದಿಸಿ ತಾವು ಬ್ರಾಹ್ಮಣ ರಿಗೆ ಸಮಾನರು ಶೂದ್ರರಲ್ಲ ಅಂತಾ ಸಾಧಿಸಿದರು, ಇದು ಲಿಂಗಾಯತ ಧರ್ಮಕ್ಕೆ ಕೊಟ್ಟ ಪೆಟ್ಟು.

1904 ರಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಸ್ಥಾಪಿಸಿದ್ಧು ಲಿಂಗಾಯತ ಧರ್ಮಕ್ಕೆ ಕೊನೆಯ ಏಟು. 1910 ರಲ್ಲಿ ಶಿವಯೋಗ ಮಂದಿರ ಸ್ಥಾಪಿಸಿ ಕೇವಲ ಒಂದೇ ವರ್ಗಕ್ಕೆ ಮತಗಳ ಒಡೆತನಕ್ಕೆ ಹಚ್ಚುವ ಕಾರ್ಯಕ್ಕೆ ಸಿದ್ಧರಾದರು.

ವೀರಶೈವರಿಗೆ ಅರವತ್ತು ಆಚರಣೆಗಳಿವೆ. ಅವು ಯಾವವು ಬಸವ ತತ್ವಕ್ಕೆ ಸರಿ ಬಾರವು. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕನೆಂದು ಸಮಕಾಲೀನ ವಚನಕಾರರು ನಂತರದ ಕವಿಗಳು ಮತ್ತು ಜನಪದ ಕವಿಗಳು ಅನೇಕ ಸಾಧಕರು ಜನ ಗಣತಿಯ ಸೆನ್ಸಸ್ ಹಾಗು ಕೋರ್ಟ್ ಆದೇಶಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಹೇಳುವಲ್ಲಿ ಸಹಾಯಕವಾಗಿವೆ.

ಇಂತಹ ಅನೇಕ ಖೊಟ್ಟಿ ದಾಖಲೆಯನ್ನು ಮುಂದು ಮಾಡಿ ಮುಂದೆ ಹಾನಗಲ ಕುಮಾರ ಸ್ವಾಮೀಗಳು ಅವರು ಬ್ಯಾಡಗಿ ವಿರಕ್ತ ಮಠದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿ ಗಳು ಅನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ವೀರಶೈವ ಪಂಚಾಚಾರ್ಯರ ಚರಿತ್ರೆ ಎಂಬ ಕೃತಿಯನ್ನು 1958 ರಲ್ಲಿ ರಚಿಸಿದ್ದಾರೆ. ಅದರಲ್ಲಿ ಅವರು ಸ್ಪಷ್ಟವಾಗಿ ರೇಣುಕ ಒಂದು ಕಲ್ಪನೆ ಆದರೆ ರೇವುಣಸಿದ್ಧರೆ -ರೇಣುಕರು ಎಂದು ವಾದಿಸಿದ್ದಾರೆ. ಪುಟ157-159.

ಮುಂದೆ ಕಾಶಿನಾಥ ಶಾಸ್ತ್ರಿಗಳಿಗೆ ಚಿತ್ರದುರ್ಗ ಮಠದ ಪೀಠ ತಪ್ಪುವುದೋ ಅಂದೇ ಅವರು ಗುರು ವಿರಕ್ತ ಪಂಚ ಪೀಠ ಮಾಡಿಕೊಳ್ಳುತ್ತಾರೆ. ಈ ಹಿಂದೆ ವ್ಯವಸ್ಥಿತವಾಗಿ ಕ್ರೊಢೀಕರಿಸಿದ ಖೊಟ್ಟಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಮೊಂಡುವಾದವನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

1872 ರಿಂದ 1989 ವರೆಗಿನ ಎಲ್ಲ ಗೆಜೆಟ್ಟಗಳಲ್ಲಿ ಲಿಂಗಾಯತ ಎಂದು ನಮೂದಿಸಲಾಗಿದೆ. ಕೆಲವು ಕಡೆ ವೀರಶೈವ ಅಂತಾ ದಾಖಲಾದರೂ ಸಹಿತ ಅದು ಲಿಂಗಾಯತ ಧರ್ಮದ ಒಂದು ಒಳ ಪಂಗಡ ಎಂದು ಹೇಳಲಾಗಿದೆ.

ಇನ್ನು ಶ್ರೀಶೈಲ ಪೀಠದ ಆದಿ ಜಗದ್ಗುರು ಮಲ್ಲಿಕಾರ್ಜುನ ಪಂಡಿತರು ಬಸವಣ್ಣನವರನ್ನು ಭೇಟಿ ಆಗಲು ಕಲ್ಯಾಣಕ್ಕೆ ಬರುತಿರಲು ಬಸವಣ್ಣನವರು ಐಕ್ಯವಾದ ಸುದ್ಧಿ ಕೇಳಿ ಅವರು ಐಕ್ಯವಾದ ಘಟನೆ ದಾಖಲಾಗಿದೆ. ತಮ್ಮ ವಚನಗಳಲ್ಲಿ ಶ್ರೀಶೈಲ ಪೀಠದ ಆದಿ ಜಗದ್ಗುರು ಮಲ್ಲಿಕಾರ್ಜುನ ಪಂಡಿತರು ಬಸವಣ್ಣ ತಮ್ಮ ಆರಾಧ್ಯ ದೈವವೆಂದು ಹೊಗಳಿದ್ದಾರೆ.

ಪಾಶ್ಚಿಮಾತ ಸಂಶೋಧಕರಾದ ಎಂತ್ಹೊವಾನ್, ಕ್ಯಾಂಪಬೆಲ್, ಆರ್ ಸಿ ಕಾರ್ ಮುಂತಾದ ನೂರಾರು ಜನರು ಬಸವಣ್ಣನೆ ಲಿಂಗಾಯತ ಧರ್ಮದ ಸ್ಥಾಪಕ ಎಂದು ಸ್ಪಷ್ಟ ಪಡಿಸುತ್ತಾರೆ. ವಸ್ತು ಸ್ಥಿತಿ ಹೀಗಿರುವಾಗ ಕೆಲ ಅರೆ ಬರೆ ಜ್ಞಾನಿಗಳು ಸ್ವಾಮಿಗಳು ತಾವೇ ವೀರಶೈವ ಮತ ಸ್ಥಾಪಕರೆಂದು ಅದು ಬಸವ ಪೂರ್ವ ಧರ್ಮವೆಂದು ಬೊಗಳೆ ಬಿಡುತ್ತಾರೆ.

ಇನ್ನು ಲಿಂಗಾಯತರಿಗೆ ಮಠಗಳ ವ್ಯವಸ್ಥೆ ಇಲ್ಲಾ ಭಕ್ತರ ಮನೆಗಳೇ ಮಠಗಳು. ಮಠಗಳು ಭಕ್ತರನ್ನು ದಾಸ್ಯತ್ವಕ್ಕೆ ತಳ್ಳುತ್ತವೆ. ಭಕ್ತ ಪ್ರಧಾನ ಧರ್ಮವೇ ಲಿಂಗಾಯತ ಬಸವ ಧರ್ಮ ಗುಲಾಮಗಿರಿಯ ಧರ್ಮವಲ್ಲ.

ವೀರಶೈವ ಒಂದು ಆಚರಣೆ ಹಾಗು ವೃತ ಆದರೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಒಂದು ಸ್ವತಂತ್ರ ಧರ್ಮ.

*
Previous ಶರಣರು ಮತ್ತು ಆ೦ತರಿಕ ಸ್ವಾತ೦ತ್ರ್ಯ ನಿತ್ಯ ನಿರಂಜನ ಅಲ್ಲಮ ಪ್ರಭುದೇವರು Next