ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ಧಾರವಾಡ

*

ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ, ಧಾರವಾಡ ಒಂದು ವಿಶ್ವಸ್ಥ ಸಂಸ್ಥೆ ಇದ್ದು ೧೯೬೮ರಲ್ಲಿ ಸ್ಥಾಪನೆಗೊಂಡಿದೆ. ಪರಮ ಪೂಜ್ಯ ಲಿಂಗೈಕ್ಯ ಮಹಾ ಜಗದ್ಗುರು ಲಿಂಗಾನಂದ ಸ್ವಾಮಿಗಳು ೧೯೬೭ರಲ್ಲಿ ಜಮೀನನ್ನು ಖರೀದಿಸಿ ಅಕ್ಕಮಹಾದೇವಿ ಆಶ್ರಮ ನಿರ್ಮಾಣ ಆರಂಭಿಸಿದರು. ವೀರ ವಿರಾಗಿಣಿ ಜಗನ್ಮಾತಾ ಅಕ್ಕಮಹದೇವಿಯ ಹೆಸರಿನಲ್ಲಿ ಅನುಭಾವ ಪೀಠವೊಂದನ್ನು ಸ್ಥಾಪಿಸಿ ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಲಿಂಗಾನಂದ ಸ್ವಾಮಿಗಳು ಅದಕ್ಕೆ ಪೂಜ್ಯ ಶ್ರೀ ಮಾತೆ ಮಹಾದೇವಿಯವರನ್ನು ಪ್ರಥಮ ಪೀಠಾಧೀಶರನ್ನಾಗಿ ದಿನಾಂಕ ೨೧-೦೪-೧೯೭೦ರಂದು ಪೀಠಾರೋಹಣ ಮಾಡಿಸಿದರು. ಈ ಐತಿಹಾಸಿಕ ಪೀಠಾರೋಹಣವು ನಡೆದುದು ಜಗನ್ಮಾತಾ ಅಕ್ಕಮಹಾದೇವಿ ಜಯಂತಿಯಂದು.

ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ ವತಿಯಿಂದ ಪ್ರಾರ್ಥನಾ ಮಂದಿರ- ಬಸವ ಮಂಟಪವನ್ನು ಮತ್ತು ದಾಸೋಹ ಶಾಲೆಯನ್ನು ಕಟ್ಟಿಸಲಾಗಿದೆ. ಪ್ರತಿ ಭಾನುವಾರ ಶರಣ ಸಂಗಮ-ಸಾಮೂಹಿಕ ಪ್ರಾರ್ಥನೆಯು ಬೆಳಿಗ್ಗೆ ೧೧ರಿಂದ ೧-೩೦ರ ವರೆಗೆ ನಡೆಯುತ್ತದೆ. ಪ್ರಾರ್ಥನೆ-ಪ್ರವಚನದ ನಂತರ ಪ್ರಸಾದ ದಾಸೋಹವಿರುತ್ತದೆ. ಶರಣರ ಜಯಂತಿ, ಲಿಂಗೈಕ್ಯ ಸಂಸ್ಮರಣೆಯನ್ನು ವಿಶೇಷ ದಿನಗಳನ್ನು ಆಚರಿಸಲಾಗುವುದು. ಶಿವರಾತ್ರಿಯಂದು ಗಣಮೇಳವನ್ನು ಪಥ ಸಂಚಲನವನ್ನು ಬಸವ ಜಯಂತಿಯಂದು ಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆಯನ್ನು ಶರಣ-ಶರಣೆಯರ ಪಥ ಸಂಚಲನವನ್ನು ಏರ್ಪಡಿಸಲಾಗುವುದು. ಎಡದ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಎಂಬ ಧರ್ಮಪಿತ ಬಸವಣ್ಣನವರ ವಾಣಿಯನ್ನು ಅನುಸರಿಸಲೋಸುಗ ಆನಾಥಾಶ್ರಮವನ್ನು ನಡೆಸುಲಾಗುತ್ತಿದ್ದು ಸುಮಾರು ೫೦ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.

೪೦ ವರ್ಷ ಕಾಲ ಅಖಂಡವಾಗಿ ಸಂಚರಿಸಿ ಧರ್ಮ ಪ್ರಚಾರ ಮಾಡಿದ ಜಂಗಮ ಮೂರ್ತಿ ಪೂಜ್ಯ ಲಿಂಗಾನಂದ ಸ್ವಾಮಿಗಳು ದಿನಾಂಕ ೩೦-೦೬-೧೯೯೨ರಂದು ಲಿಂಗೈಕ್ಯರಾಗಿ ಕ್ರಿಯಾ ವಿಶ್ರಾಂತಿಯನ್ನು ಹೊಂದಿದರು. ಕೂಡಲ ಸಂಗಮದಲ್ಲಿ ದಿನಾಂಕ ೧೩-೦೧-೧೯೯೨ರಂದು ಬಸವ ಧರ್ಮದ ಪ್ರಮೋಚ್ಚ ಪೀಠವನ್ನು ಏರಿದ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಲಿಂಗೈಕ್ಯರಾದ ಬಳಿಕ ಪೂಜ್ಯ ಗುರುಗಳ ಸದಿಚ್ಚೆಯಂತೆ ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು ಬಸವ ಧರ್ಮದ ಮಹಾ ಜಗದ್ಗುರು ಪೀಠವನ್ನು ದಿನಾಂಕ ೧೩-೦೧-೧೯೯೬ರಂದು ಆರೋಹಣ ಮಾಡಿದರು. ಮತ್ತು ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠಕ್ಕೆ ದ್ವಿತೀಯ ಪೀಠಾಧೀಶರನ್ನಾಗಿ ಪೂಜ್ಯ ಶ್ರೀ ಸದ್ಗುರು ಮಾತೆ ಗಂಗಾದೇವಿಯವರನ್ನು ೧೯೯೬ರ ಅಕ್ಕನ ಹುಣ್ಣಿಮೆಯಂದು ಪೀಠಾರೋಹಣ ಮಾಡಿಸಿದರು.

ಉಭಯ ಜಗದ್ಗುರುಗಳೂ ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಾದ ದೆಹಲಿ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡುಗಳಲ್ಲಿ ಸಂಚರಿಸಿ ಪ್ರವಚನ, ಸಮ್ಮೇಳನಗಳನ್ನು ಮಾದಿರುವುದೇ ಅಲ್ಲದೆ ಸಂಸ್ಥೆಯ ಶಾಖೆಗಳನ್ನು ಬಸವ ಮಂಟಪಗಳನ್ನು ತೆರೆದಿದ್ದಾರೆ. ಕೂಡಲಸಂಗಮದಲ್ಲಿ ಪ್ರತಿ ವರ್ಷವೂ ಜನವರಿ ೧೧ರಿಂದ ೧೫ರ ವರೆಗೆ ಶರಣ ಮೇಳ, ಬಸವ ಕಲ್ಯಾಣದಲ್ಲಿ ಅಶ್ವಯುಜ ಶುದ್ಧ ತ್ರಯೋದಶಿ, ಚತುರ್ದಶಿ ಮತ್ತು ಹುಣ್ಣಿಮೆಯಂದು ಕಲ್ಯಾಣ ಪರ್ವ, ಮಹಾರಾಷ್ಟ್ರದ ಕೊಲ್ಹಾಪುರ ಜೆಲ್ಲೆಯ ಹಾತ್ ಕಣಗಲೆ ತಾಲೋಕಿನ ಅಲ್ಲಮಗಿರಿಯಲ್ಲಿ ಲಿಂಗಾಯತ ಗಣಮೇಳವನ್ನು ಯುಗಾದಿಯಿಂದ ೩ ದಿವಸಗಳ ಕಾಲ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಪೂಜ್ಯ ಮಾತಾದ್ವಯರದು.

ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ
ಜಗನ್ಮಾತಾ ಅಕ್ಕಮಹಾದೇವಿ ಆಶ್ರಮ
ಉಳವಿ ರಸ್ತೆ, ರೈಲ್ವೆ ಗೇಟ್ ಹತ್ತಿರ
ಧಾರವಾಡ- ೫೮೦೦೦೩
ದೂ: ೦೮೩೬-೩೨೦೪೧೨೧

*
ಪರಿವಿಡಿ (index)
Previousಲಿಂಗಾಯತರ ನೈತಿಕತೆಅನುಭವ ಮಂಟಪNext
*