Previous ಲಿಂಗಾಯತರ ಪ್ರಮುಖ ಹಬ್ಬಗಳು ಲಿಂಗಾಯತ ಮತ್ತು ಪ್ರಜಾಪ್ರಭುತ್ವ Next

ಲಿಂಗಾಯತ ಮತ್ತು ಇಷ್ಟಲಿಂಗ

*

ಇಷ್ಟಲಿಂಗವೆಂದರೇನು?

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಲಿಂಗಾಯತ ಧರ್ಮದ ಮುಖ್ಯ ಲಾಂಛನ ಇಷ್ಟಲಿಂಗ ಗುರುವಿನಿಂದ ದೀಕ್ಷೆಯ ಮೂಲಕವಾಗಿ ಪಡೆದುಕೊಂಡು ದೇಹದ ಮೇಲೆ ಸದಾಕಾಲವೂ ಧರಿಸಿಕೊಂಡು ಪೂಜಿಸಲ್ಪಡುವ ಗೋಲಾಕಾರದ ಕಪ್ಪು ವರ್ಣದ ಲಾಂಛನವಿದು. ಅತ್ಯಂತ ಹೊಳಪಿನ ಕಪ್ಪು ಹೊರ ಮೈ ಇರುವ ಗೋಲಾಕಾರದ ಈ ಕುರುಹಿಗೆ ಇಷ್ಟಲಿಂಗವೆಂಬ ಹೆಸರು ಏಕೆ ಕೊಡಲ್ಪಟ್ಟಿರಬಹುದು?

ಭಾರತೀಯ ಪರಂಪರೆಯಲ್ಲಿ ಅತಿ ಮುಖ್ಯ ವಾಹಿನಿಯಾಗಿರುವ ಹಿಂದೂ ಸಂಸ್ಕೃತಿಯಲ್ಲಿ ’ಇಷ್ಟ ದೈವ’ ಎಂಬ ಪದವು ಬಳಕೆಯಾಗುವುದುಂಟು ಆ ಇಷ್ಟ ದೈವಗಳು ಬೇರೆ ಬೇರೆಯಾಗಿ ಇರುವುದೇ ಅಲ್ಲದೆ ಅವುಗಳ ಮತ್ತು ಭಕ್ತನ ಸಂಬಂಧ ವೈಯುಕ್ತಿಕವೂ, ಪ್ರತ್ಯೇಕವೂ ಆಗಿರಬಹುದು. ಒಬ್ಬೊಬ್ಬರ ಇಷ್ಟ ದೈವ ಅವರ ವೈಯುಕ್ತಿಕ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದಂತೆ ಒಂದೊಂದಿದ್ದು ಒಂದೇ ಮನೆಯವರಲ್ಲಿ ಬೇರೆ ಬೇರೆ ಇಷ್ಟ ದೈವಂಗಳಿರಬಹುದಾಗಿದೆ ಕೂಡ. ಹಲವಾರು ಇಷ್ಟದೈವಂಗಳ ಕಷ್ಟ ತಪ್ಪಿಸುವ ಉದ್ದೇಶ ಹೊತ್ತು ಹುಟ್ಟಿದ ಉಪಾಸ್ಯ ವಸ್ತುವಾದ ಈ ಕುರುಹು "ಇಷ್ಟಲಿಂಗ" ಎಂಬ ಅಭಿದಾನ ತಾಳಿರಲಿಕ್ಕೂ ಸಾಕು.

ಎರಡನೆಯದಾಗಿ ಇದು ಕಾಟಾಚಾರದ ವಸ್ತುವಾಗದೆ ಇಷ್ಟ ಪಟ್ಟು ಸಾಧಕನು ತನ್ನ ಆತ್ಮ ದರ್ಶನ, ಸ್ವರೂಪ ಸಾಕ್ಷಾತ್ಕಾರಕ್ಕಾಗಿ ಪಡೆದುಕೊಳ್ಳುವ ಕಾರಣ ಇದು ಇಷ್ಟಲಿಂಗವು. "ಇಷ್ಟಿ’ ಎಂದರೆ ಪೂಜೆ, ಉಪಾಸನೆ, ಈ ಪೂಜೆ ಆಥವಾ ಉಪಾಸನೆಗೆ ಅತ್ಯಂತ ಸೂಕ್ತವು, ಶ್ರೇಷ್ಠವೂ ಆದ ಕಾರಣ ಇದು ಇಷ್ಟಲಿಂಗ. ಅನಿಷ್ಟಗಳು ತನ್ನ ಅಂತರಂಗದಲ್ಲೇ ಇರಬಹುದು. ಬಹಿರಂಗದಲ್ಲೇ ಇರಬಹುದು, ಘಟದೊಳಗೆ ಇರಬಹುದು ಮಠದೊಳಗೆ ಇರಬಹುದು; ಸಮಾಜದೊಳಗಿರಬಹುದು. ಅವುಗಳನ್ನು ತೊಡೆದುಹಾಕಿ ಇಷ್ಟವನ್ನು, ಒಳಿತನ್ನು, ಲೇಸನ್ನು ಪ್ರತಿಷ್ಠಾಪಿಸುವ ಮನೋಬಲ, ಬುದ್ದಿ ಬಲ ಆತ್ಮಬಲಗಳನ್ನು ಬೆಳೆಸುವುದು ಯಾವುದೋ ಅದೇ ಇಷ್ಟಲಿಂಗ.

ಪಾರಲೌಕಿಕ ಉದ್ದೇಶಹೊಂದಿ ಆತ್ಮಾನುಭೂತಿಯನ್ನೇ ಮುಖ್ಯ ಧ್ಯೇಯವನ್ನಾಗಿ ಇಟ್ಟುಕೊಂಡು ಅರ್ಚಿಸುವ ಭಕ್ತರು ಬಲು ವಿರಳ ಹೆಚ್ಚಿನ ಜನರು ಲೌಕಿಕ ಕಾಮನೆ. ಇಷ್ಟಾರ್ಥಗಳ ಸಿದ್ದಿಗಾಗೆಯೇ ಅರ್ಚಿಸುವುದು. ಆದ್ದರಿಂದ ಬೇಡುವವರ ಇಷ್ಟಾರ್ಥ ಸಿದ್ಧಿಗಳನ್ನು ಪೊರೈಸಲು ಸಮರ್ಥವಾದುದು ಇಷ್ಟಲಿಂಗ.

೧. ಏನ ಬೇಡಿದಡಿವ ನಮ್ಮ ಕೂಡಲಸಂಗಮದೇವ.
೨. ಹಾಡಿದೊಡೆ ಎನ್ನೊಡೆಯನ ಹಾಡುವೆ,
ಬೆಡಿದಡೆ ಎನ್ನೊಡೆಯನ ಬೇಡುವೆ.
ಎಂದು ಬಸವಣ್ಣನವರು ನುಡಿಯುವುದು ಈ ದೃಷ್ಟಿಯಿಂದಲೇ.

ಬಸವಣ್ಣನವರ ವಚನಗಳು

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು
ಆದಿ ಮಧ್ಯಾಂತರವಿಲ್ಲದ ಲಿಂಗವು,
ಸ್ವತಂತ್ರ ಲಿಂಗವು ನಿತ್ಯ ನಿರ್ಮಲ ಲಿಂಗವು
ಅಯೋನಿ ಸಂಭವನಯ್ಯಾ, ನಮ್ಮ ಕೂಡಲಸಂಗಮದೇವನು.

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲ ವಿಸ್ತಾರದ ರೂಹು ನೀನೇ ದೇವಾ
’ವಿಶ್ವತೋಚಕ್ಷು ನೀನೇ ದೇವಾ
’ವಿಶ್ವತೋಮುಖ’ ನೀನೇ ದೇವಾ
’ವಿಶ್ವತೋಬಾಹು’ ನೀನೇ ದೇವಾ
’ವಿಶ್ವತ:ಪಾದ ನೀನೇ ದೇವಾ, ಕೂಡಲಸಂಗಮದೇವ

ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗದ ಸ್ಥಾನ

ಲಿಂಗಾಯತ ಧರ್ಮದಲ್ಲಿ ಮುಖ್ಯ ಧಾರ್ಮಿಕ ಲಾಂಛನಗಳೆಂದರೆ ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ. ಪಾದೋದಕ , ಪ್ರಸಾದ ಗಳು ಒಳಗೆ ಸ್ವೀಕರಿಸುವಂತಹವು, ಮಂತ್ರವು ಅಂತರಂಗದಲ್ಲಿ ಜಪಿಸಲ್ಪಡುವಂತಹದು, ದೇಹದ ಮೇಲೆ ಸ್ಪಷ್ಟವಾಗಿ ಕಾಣುವಂತಹವು ಎಂದರೆ ವಿಭೂತಿ, ರುದ್ರಾಕ್ಷಿ ಮತ್ತು ಇಷ್ಟಲಿಂಗ; ವಿಭೂತಿ ಮತ್ತು ರುದ್ರಾಕ್ಷಿಗಳು ಉಳಿದೆಲ್ಲ ಭಕ್ತರು (ಹಿಂದು, ಹಾಗೂ ಬೇರೆ ಧರ್ಮದವರು) ಧರಿಸಲ್ಪಡುವಂತಹವು ಆದರೆ, ಲಿಂಗಾಯತ ಧರ್ಮದ ಅನುಯಾಯಿಗಳಿಗೆ ವಿಶೇಷವಾದ, ವಿಶಿಷ್ಟವಾದ ಲಾಂಛನ ಇಷ್ಟಲಿಂಗವೊಂದೇ! ಉಳಿದ ಧಾರ್ಮಿಕ ಲಾಂಛನಗಳಾದ ವಿಭೂತಿ, ರುದ್ರಾಕ್ಷಿ ಮುಂತಾದವು ಪೋಷಕವಾದುವು ಮಾತ್ರ.

ಹೀಗಾಗಿಯೇ ಈ ಇಷ್ಟಲಿಂಗಧಾರಿಗಳ ಧರ್ಮಕ್ಕೆ ಲಿಂಗಾಯತ ಧರ್ಮ, ಲಿಂಗವಂತ ಧರ್ಮ ಎಂದು ಹೆಸರು. ಬಳಕೆಯಲ್ಲಿರುವ ಬೇರೆ ಕೆಲವು ಸಮಾಜ ವಾಚಕ ಪದಗಳೆಂದರೆ ವೀರಶೈವ ಧರ್ಮ, ಶರಣ ಧರ್ಮ, ಬಸವ ಧರ್ಮ, ವಚನ ಧರ್ಮ ಮುಂತಾದವು. ಈ ಪದಗಳು ಸಮಾಜದಲ್ಲಿ ರೂಢಿಗತವಾಗಿರುವುದರಿಂದ ಬಳಸಲ್ಪಡುವವೇ ವಿನಾ, ಹೆಚ್ಚು ತಾತ್ವಿಕ ಅರ್ಥವನ್ನು ಒಳಗೊಂಡ ಪದಗಳಲ್ಲ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
*
Previous ಲಿಂಗಾಯತರ ಪ್ರಮುಖ ಹಬ್ಬಗಳು ಲಿಂಗಾಯತ ಮತ್ತು ಪ್ರಜಾಪ್ರಭುತ್ವ Next
cheap jordans|wholesale air max|wholesale jordans|wholesale jewelry|wholesale jerseys