ಬಸವನ ಬಾಗೆವಾಡಿ | ಇಂಗಳೇಶ್ವರ |
ಬಿಜನಳ್ಳಿ |
ಕಲ್ಯಾಣದ ಪ್ರಧಾನಿ ಬಸವಣ್ಣನವರು ಒಂದುದಿನ ಒಡ್ಡೋಲಗಕ್ಕೆ ಹೋಗುತ್ತಿರುವಾಗ ಹರಳಯ್ಯನವರು ’ಶರಣು’ ಎಂದು ಕೈ ಮುಗಿದರು. ಬಸವಣ್ಣನವರು ’ಶರಣು ಶರಣಾರ್ಥಿ’ ಎಂದು ಕೈ ಮುಗಿದರು. ಬಸವಣ್ಣನವರು ಎರಡುಬಾರಿ ಶರಣೆಂದುದನ್ನು ಕೇಳಿ ಸ್ತಂಭೀಭೂತರಾದ ಹರಳಯ್ಯ ನಿಂತಲ್ಲಿಯೇ ನಿಂತರು. ಪತ್ನಿ ಕಲ್ಯಾಣಮ್ಮ ಹುಡುಕಿಕೊಂಡು ಬರುವವರೆಗೆ ಅಲ್ಲಿಯೇ ನಿಂತಿದ್ದರು. ಬಸವಣ್ಣನವರು ತಮ್ಮ ಮೇಲೆ ಹೆಚ್ಚಿನ ’ಶರಣು’ ಹೊರೆ ಹೊರಸಿದ್ದನ್ನು ಪತ್ನಿಗೆ ವಿವರಿಸಿದರು. ತಮ್ಮ ತೊಡೆಯ ಚರ್ಮದಿಂದ ಚಮ್ಮಾವುಗೆಯ ಮಾಡಿ ಬಸವಣ್ಣನವರ ಪಾದಗಳಿಗೆ ಅರ್ಪಿಸುವುದೇ ಇದಕ್ಕೆ ಪರಿಹಾರ ಎಂದು ನಿರ್ಧರಿಸಿದರು.
ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ |
ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.
ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ ಆ ಚಮ್ಮಾವುಗೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ’ಇವು ದೇವರ ಪಾದರಕ್ಷೆಗಳು’ ಎಂದರು.
ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ! -ಬಸವಣ್ಣ [1]
ಆ ಸಂದರ್ಭದ ಹಿನ್ನೆಲೆಯಲ್ಲಿ ಬಸವಣ್ಣನವರು ಮೇಲೆ ತಿಳಿಸಿದ ವಚನವನ್ನು ಹೇಳಿದ್ದಾರೆ. ಹರಳಯ್ಯ ದಂಪತಿ ನಿರ್ಮಿಸಿದ ಈ ಚಮ್ಮಾವುಗೆಗಳಿಗೆ ದೇವರ ಸೃಷ್ಟಿಯಾದ ಈ ಪೃಥ್ವಿ ಸಮ ಬರುವುದಿಲ್ಲ ಎಂದು ಬಸವಣ್ಣನವರು ಹೇಳಬೇಕಾದರೆ ಹರಳಯ್ಯ ದಂಪತಿ ಎಂಥ ಪವಿತ್ರ ಜೀವಗಳು ಎಂಬುದರ ಅರಿವಾಗುವುದು.
ಹರಳಯ್ಯನವರ ವಚನಗಳು ಸಿಕ್ಕಿಲ್ಲ. ಆದರೆ ಅವರು ಬಸವಣ್ಣನವರಿಗೆ ಕೊಟ್ಟ ಕಲಾತ್ಮಕ ಚಮ್ಮಾವುಗೆಗಳು ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿವೆ. ಬಸವಣ್ಣನವರು ಸ್ಪರ್ಶಿಸಿದ ಇನ್ನೊಂದು ಚರವಸ್ತು ಈ ಜಗತ್ತಿನಲ್ಲಿ ಉಳಿದಿಲ್ಲವಾದ ಕಾರಣ ಈ ಚಮ್ಮಾವುಗೆಗಳು ಅಮೂಲ್ಯವಾಗಿವೆ.
ಸುಮಾರು ೨ ದಶಕಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪರಿಣೀತರ ತಂಡವೊಂದು ಬಿಜನಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟು ಚಮ್ಮಾವುಗೆಯ ಒಂದು ಸಣ್ಣ ತುಣುಕನ್ನು ತೆಗೆದುಕೊಂಡು ಹೋಗಿ ಇವು ಮಾನವರ ಚರ್ಮವೆಂದು ಧೃಢೀಕರಿಸಿದ್ದಾರೆ.
ಹರಳಯ್ಯನವರು ಬಸವಣ್ಣನವರಿಗಾಗಿ ತಯಾರಿಸಿದ ಚಮ್ಮಾವುಗೆಗಳು ಬಿಜನಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿವೆ. ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಎಡ ತೊಡೆಯ ರೂಪಾಯಿ ಅಗಲ ಚರ್ಮ ಎಡ ಚಮ್ಮಾವುಗೆಯಲ್ಲಿ ಇದೆ. ಅದೇರಿತಿ ಹರಳಯ್ಯನವರ ಬಲ ತೊಡೆಯ ರೂಪಾಯಿಯಗಲ ಚರ್ಮ ಬಲ ಚಮ್ಮಾವುಗೆಯಲ್ಲಿದೆ. ಈ ಅನುಪಮ ತ್ಯಾಗದ ಚರ್ಮದ ತುಕಡಿಗಳಿಗೆ ಇಡೀ ಮಾನವಕುಲ ತಲೆಬಾಗಬೇಕಿದೆ. ಆದರೆ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದರಿಂದ ಅವುಗಳ ಮೇಲೆ ಮಾಲೀಕತ್ವ ಸಾಧಿಸಲು ಕೆಲವರು ಯತ್ನಿಸುತ್ತಿದ್ದಾರೆ. ನಾಡಿನ ಈ ಅಮೂಲ್ಯ ಆಸ್ತಿಯ ಬಗ್ಗೆ ಸರ್ಕಾರಕ್ಕೆ ಪರಿಜ್ಞಾನವೇ ಇಲ್ಲ. ಬಸವಕಲ್ಯಾಣ ಪ್ರಾಧಿಕಾರದ ಅಡಿಯಲ್ಲಿ, ಬಿಜನಳ್ಳಿಯಲ್ಲಿಯೇ ಈ ಚಮ್ಮಾವುಗೆಗಳಿಗಾಗಿ ನಯನಮನೋಹರವಾದ ಸ್ಮಾರಕಭವನವನ್ನು ನಿಮಿಸಬೇಕು. ಆ ಮೂಲಕ ಬಿಜನಳ್ಳಿಯನ್ನು ಸಮಾನತೆಯ ಯಾತ್ರಾಸ್ಥಳವನ್ನಾಗಿಸಬೇಕು.
[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: 604, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
*ಬಸವನ ಬಾಗೆವಾಡಿ | ಇಂಗಳೇಶ್ವರ |