Previous ಉಳವಿ ಬಸವಕಲ್ಯಾಣ Next

ಸೊಲ್ಲಾಪುರ

ಕರ್ನಾಟಕದ ಬಿಜಾಪುರ ಜಿಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ 'ಸೊನ್ನಲಿಗೆ'ಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ. ಸೊಲ್ಲಾಪುರವು ೧೨ನೆಯ ಶತಮಾನದ ಐತಿಹಾಸಿಕ ವ್ಯಕ್ತಿ ಶಿವಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿಯಾಗಿದೆ. ಬರಗಾಲಪೀಡಿತ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಿದ್ಧರಾಮೇಶ್ವರರು ೪೦೦೦ ಶಿವಶರಣರೊಂದಿಗೆ , ಕೆರೆಯನ್ನು ತೋಡಿದರು ಮತ್ತು ದೇವಾಲಯಗಳನ್ನು ನಿರ್ಮಿಸಿದರು. ಇವರಿಗೆ ಅಲ್ಲಮ ಪ್ರಭುವಿನಿಂದ ಉಪದೇಶವಾಗಿ ಇವರು ಚೆನ್ನಬಸವಣ್ಣನವರಿಂದೆ ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗಾಯತರಾದರು. ಇವರು ಸೊಲ್ಲಾಪುರದಲ್ಲಿಯೇ ಸಜೀವ ಸಮಾಧಿಗೇರಿದರು.

ಹೆಸರಿನ ಮೂಲ

ಸೊಲ್ಲಾಪುರ ಜಿಲ್ಲೆ ಪುರಾತನ ಕಾಲದಿಂದಲೂ ಆಂಧ್ರಭೃತ್ಯರು, ಚಾಲುಕ್ಯರು, ರಾಷ್ಟ್ರಕೂಟರು, ಯಾದವರು ಮತ್ತು ಬಹಮನಿ ಸುಲ್ತಾನ ಇತ್ಯಾದಿ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸೊಲ್ಲಾಪುರ ಎಂಬ ಹೆಸರು ಸೋಳಾ ( ಹದಿನಾರು) ಮತ್ತು ಪುರ ( ಹಳ್ಳಿ) ಎಂಬ ಪದಗಳಿಂದ ಬಂದಿರಬೇಕು ಅನ್ನುತ್ತಾರೆ. ಈಗಿನ ಸೊಲ್ಲಾಫುರದಲ್ಲಿ ಆದಿಲಪುರ, ಅಹಮದ್ ಪುರ, ಚಪಲದೇವ, ಫತೇಹ್ ಪುರ, ಜಾಮದಾರವಾಡಿ, ಕಲಜಾಪುರ, ಖದರಪುರ, ಖಂಡೇರ್‍ವಕಿವಾಡಿ, ಮುಹಮ್ಮದ್ ಪುರ, ರಾನಾಪುರ, ಸಂದಾಲಪುರ, ಶೇಕ್ ಪುರ, ಸೋಲಾಪುರ, ಸೋನಲಗಿ, ಸೋನಾಪುರ ಮತ್ತು ವೈದಕ್ ವಾಡಿ ಎಂಬ ಹದಿನಾರು ಹಳ್ಳಿಗಳು ಅಡಕವಾಗಿವೆ. ಆದರೆ ಈಚೆಗಿನ ಸಂಶೋಧನೆಯ ಪ್ರಕಾರ ಈ ನಂಬಿಕೆ ನಿರಾಧಾರವಾದದ್ದು. ಕಾಮಟಿ ಎಂಬಲ್ಲಿ ಸಿಕ್ಕಿರುವ, ಶಕೆ ೧೨೩೮ರ, ಯಾದವರ ಪತನದ ನಂತರದ ಕಾಲದ, ಒಂದು ಸಂಸ್ಕೃತ ಶಾಸನದ ಪ್ರಕಾರ ಈ ಊರಿನ ಹೆಸರು ಸೋನಾಲಿಪುರ. ಸೊಲ್ಲಾಪುರ ಕೋಟೆಯೊಳಗಿನ ಒಂದು ಶಾಸನದ ಪ್ರಕಾರ , ಈ ಊರನ್ನು ಸೋನಾಲಪುರ ಎಂದು ಕರೆಯಲಾಗುತ್ತಿತ್ತು. ಕೋಟೆಯ ಬಾವಿಯಮೇಲಿನ ಬರಹದ ಪ್ರಕಾರ ಊರಿನ ಹೆಸರು ಸಂದಾಲಪುರ ಎಂದಿತ್ತು.

ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.

ಇತಿಹಾಸ

ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. ೧೯೫೬ರ ರಾಜ್ಯಗಳ ಪುನರ್‍ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ ಮಹಾರಾಷ್ಟ್ರಕ್ಕೆ ಸೇರಿತು.

ಪ್ರವಾಸ

ಸೊಲ್ಲಾಪುರ ಮುಂಬಯಿಯಿಂದ ೪೩೩ ಕಿ.ಮೀ, ಪುಣೆಯಿಂದ ೨೪೪ ಕಿ.ಮೀ ದೂರದಲ್ಲಿದೆ. ಸೊಲ್ಲಾಪುರ ದೆಹಲಿ, ಹೈದರಾಬಾದು, ಬೆಂಗಳೂರು ಮೊದಲಾದ ನಗರಗಳಿಗೆ ರೈಲು ಮತ್ತು ರಸ್ತೆಯ ನೇರ ಸಂಪರ್ಕ ಹೊಂದಿದೆ.

ಪ್ರೇಕ್ಷಣೀಯ ಸ್ಥಳಗಳು

ಶ್ರೀ ಸಿದ್ಧರಾಮೇಶ್ವರ ದೇವಾಲಯ
ಹಿಪ್ಪರಗಿ ಕೆರೆ
ಕಂಬಾರ ಕೆರೆ ( ಹೊಸ ಹೆಸರು - ಸಂಭಾಜಿ ಕೆರೆ)
ಭುಯಿ - ಕೋಟ್ ಕೋಟೆ - ೧೫ನೆಯ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಕಟ್ಟಲ್ಪಟ್ಟದ್ದು.
ಹುತಾತ್ಮಾ ಉದ್ಯಾನವನ
ನಾನಜ ಪಕ್ಷಿ ಅಭಯಧಾಮ (೨೫ ಕಿ.ಮೀ ದೂರ)
ಭೀಮಾನದಿ ತೀರ
ನಲದುರ್ಗ ಕೋಟೆ ( ಸುಮಾರು ೪೫ ಕಿ.ಮೀ ದೂರ)

ಪರಿವಿಡಿ (index)
*
Previous ಉಳವಿ ಬಸವಕಲ್ಯಾಣ Next