ಗುಮ್ಮಳಾಪುರ ಕ್ಷೇತ್ರ
ಬೆಂಗಳೂರಿನ ಪೂರ್ವಕ್ಕೆ ಆನೇಕಲ್ಲು ಸಮೀಪದಲ್ಲಿರುವ ಗುಮ್ಮಳಾಪುರ ಸುಪ್ರಸಿದ್ಧ ಧಾರ್ಮಿಕ ಕೇಂದ್ರ, ನಾಲ್ಕು ಶೂನ್ಯ ಸಂಪಾದನೆಗಳ ಉಗಮ ಗುಮ್ಮಳಾಪುರದ ಪರಿಸರದಲ್ಲಿ ಆದುದು. ಕ್ರಿ.ಶ. ೧೨ನೆಯ ಶತಮಾನ ಮೊದಲ್ಗೊಂಡು ಹದಿನಾಲ್ಕು ಹದಿನೈದು ಹದಿನಾರು ಶತಮಾನಗಳಲ್ಲಿ ಔನ್ನತ್ಯದ ಗುರಿ ಮುಟ್ಟಿದ ಶರಣಕ್ಷೇತ್ರವಿದು. ಗುಮ್ಮಳಾಪುರ, ಲಿಂಗಾಯತ ಧರ್ಮದ ಇತಿಹಾಸದಲ್ಲಿ ಗಣನೀಯ ಸ್ಥಾನ ಪಡೆದಿದೆ.
'ಶಿವನ ಪಟ್ಟವರ್ಧನರಿಪ್ಪರಾಪುರಂ ಗುಮ್ಮಹಾಳಪುರ' ಎಂಬ ವಾಕ್ಯ ೧೨ನೆಯ ಶತಮಾನದಲ್ಲಿ ಗುಬ್ಬಿಯ ಮಲ್ಲಣಾರ್ಯನ 'ಗಣಭಾಷಿತ ರತ್ನ ಮಾಲೆ'ಯಲ್ಲಿದೆ. ಇದನ್ನು ಸಂಕಲಿಸಿ ಅದರಲ್ಲಿ ನೂರೊಂದು ಸ್ಥಲಗಳನ್ನು ನಿರೂಪಿಸುವ ಪ್ರಯತ್ನ ಕೈಕೊಂಡುದುಂಟು. ಗುಮ್ಮಳಾಪುರದಲ್ಲಿ ಚೊಕ್ಕದೇವಪ್ಪಯ್ಯ, ಗುಬ್ಬಿಯ ಮಲ್ಲಣ್ಣ, ನಮ್ಮಣ್ಣ (ಅಮ್ಮಣ್ಣ) ನಾಗಪ್ಪ ಈ ಮೊದಲಾದ ಶರಣರಿದ್ದರೆಂದು ಅವರ ಅಧೀನದಲ್ಲಿ ದಾಸೋಹದ ಮಠಗಳಿದ್ದವೆಂದು ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ ತಿಳಿಸಿದೆ. ಲಿಂಗಾಯತ ಪ್ರಮುಖ ಕೇಂದ್ರಗಳಲ್ಲಿ ಗುಮ್ಮಳಾಪುರ ಒಂದೆನಿಸಿದೆ. ಲಕ್ಕಣ್ಣದಂಡೇಶನ ಸಮಕಾಲೀನ ಅಥವಾ ಹಿರಿಯ ಸಮಕಾಲೀನನಾದ ಗುಬ್ಬಿಯ ಮಲ್ಲಣ್ಣ ಗುಬ್ಬಿಯಲ್ಲಿರದೇ ಗುಮ್ಮಹಾಳಪುರದಲ್ಲಿದ್ದುದು, ಅಂತೆಯೇ ಗುಮ್ಮಳಾಪುರ ದಲ್ಲಿ 'ಸಲ್ಲಲಿತ ಶತಗಣಂಗಳು' ಪ್ರಸಿದ್ಧರಾಗಿದ್ದರೆಂದು ವಾಚ್ಯವಾಗಿಯೇ ಹೇಳಿದ್ದಾನೆ. ಇದರಿಂದ ನೂರೊಂದು ವಿರಕ್ತರ ಕಲ್ಪನೆ ಲಕ್ಕಣ್ಣ ದಂಡೇಶನಿಗಿಂತ ಹಿಂದೆಯೆ ಇದ್ದುದು ಸ್ಪಷ್ಟವಾಗುತ್ತದೆ. ಇವರೆಲ್ಲ ಇದ್ದುದು ಗುಮ್ಮಳಾಪುರದಲ್ಲಿ ಎಂಬುದು ಲಕ್ಷಿಸತಕ್ಕ ಸಂಗತಿಯಾಗಿದೆ.
ನೂರೊಂದು ವಿರಕ್ತರ ಮಾತು ವಿಜಯನಗರದಲ್ಲಿ ಆಗಿಹೋದ ಶರಣರಿಗೆ ರೂಢಗೊಂಡು ಗುಮ್ಮ ಹಾಳದೊಂದಿಗಿನ ಅವರ ಸಂಬಂಧ ಮರೆಮಾಚಿದಂತಿದೆ. ೧೬ನೆಯ ಶತಮಾನದಲ್ಲಿ ತೋಂಟದ ಸಿದ್ದಲಿಂಗಯತಿಗಳ ಪರಂಪರೆ ಹೇಳಿಕೊಳ್ಳುವ (ಬೋಳ ಬಸವರ ನೇರ ಶಿಷ್ಯ) ಗುಮ್ಮಳಾಪುರ ಸಿದ್ದಲಿಂಗನಿಗೆ ಒಂದು ಶತಮಾನ ಹಿನ್ನೆಲೆ ಇದೆ ಎಂಬ ಮಾತನ್ನು ಗಮನಿಸಬೇಕು. ಎಂದರೆ ಹರದನಹಳ್ಳಿ, ಕಗ್ಗೆರೆ, ಕುಣಿಗಲ್ಲುಗಳ ಪರಿಸರದಲ್ಲಿ ಗುಮ್ಮಹಾಳಪುರ ಹೆಚ್ಚು ಜಾಗ್ರತವಾಗಿತೆಂದು ಭಾವಿಸಲೇ ಬೇಕಾಗುತ್ತದೆ. ನೂರೊಂದು ವಿರಕ್ತರ ಐತಿಹ್ಯ ಮತ್ತು ಹೆಸರುಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯ ಇಂದು ಹೆಚ್ಚಿದೆ.
ಸುಗಟೂರು ಅರಸುಮನೆತನದ ದಾಖಲೆಗಳೊಂದಿಗೆ ಶರಣಕ್ಷೇತ್ರದ ಇತಿಹಾಸ ದೊರಕುತ್ತದೆ. ಕ್ರಿ.ಶ. ೧೪೭೪ರ ವೇಳೆಗೆ ಚಿಕ್ಕತಮ್ಮಗೌಡನ ಕಾಲದಲ್ಲಿ ಗುಮ್ಮಳಾಪುರ ತಾಮ್ರಶಾಸನದಿಂದ ಅಶೇಷ ವೀರಮಾಹೇಶ್ವರರು ಈ ರಾಯನಿಂದ ಹಲವು ಗ್ರಾಮಗಳನ್ನು ವೆಂಕಟೇಶ್ವರ ಉಪಾಧ್ಯ ಎಂಬ ವಿಪ್ರರಿಗೆ ದತ್ತಿ ಬಿಟ್ಟ ವಿವರಗಳಿವೆ. ಗುಮ್ಮಳಾಪುರಕ್ಕೆ ಸೇರಿದ ಗುರುನಂಜೇಶ ಅಥವಾ ನಂಜೇದೇವ ಕೆಂಪೇಗೌಡನಿಗಷ್ಟೇ ಅಲ್ಲದೆ ಸುಗಟೂರು ಮುಮ್ಮಡಿ ತಮ್ಮಗೌಡನಿಗೂ ಗುರುವಿನ ಸ್ಥಾನದಲ್ಲಿದ್ದವರು. ಈತನ ಹೆಸರನ್ನು ಉಲ್ಲೇಖಿಸುವ ಕ್ರಿ.ಶ. ೧೬೨೯ರ ಶಾಸನವೊಂದು ಸರ್ಜಾಪುರ ಸಮೀಪದ ಬೆಳನಹಳ್ಳಿಯನ್ನು ದತ್ತಿಬಿಟ್ಟ ಉಲ್ಲೇಖವಿದೆ. ಸುಗಟೂರು ದೊರೆ ಚಿಕ್ಕತಮ್ಮೇಗೌಡ ಮಹಾಶಿವಭಕ್ತನಿದ್ದು ಕುರುಡರಿಗೆ ಕಣ್ಣಿತ್ತನೆಂದೂ, ಹರಭಜನೆ, ಗುರುಭಕ್ತಿ ಜಂಗಮಾರಾಧನೆಗಳನ್ನು ನಡೆಸುತ್ತಿದ್ದನೆಂದೂ ಶಂಕರಸಂಹಿತೆಯಿಂದ ತಿಳಿದು ಬರುತ್ತದೆ. ಅಂತೆಯೆ ಲಕ್ಕಣ್ಣ ದಂಡೇಶ ತನ್ನ ಶಿವತತ್ತ್ವ ಚಿಂತಾಮಣಿಯಲ್ಲಿ ಶರಣಕ್ಷೇತ್ರ ಗುಮ್ಮಳಾಪುರದ ಮಹತ್ವವನ್ನು ವ್ಯಕ್ತಪಡಿಸಿರುವನು. ಗುಮ್ಮಳಾಪುರದಲ್ಲಿ ಚೊಕ್ಕ ದೇವಪ್ಪಯ್ಯ, ಗುಬ್ಬಿಯ ಮಲ್ಲಣ್ಣರು, ಇದ್ದ ಬಗೆಗೆ ವಿವರಗಳಿವೆ. ಗುಮ್ಮಳಾಪುರದಲ್ಲಿ ಅನೇಕ ಶರಣರು ಶರಣಧರ್ಮ ಬೆಳಗಿರುವರು. ಪರಮ ಶಿವಭಕ್ತ ಚೊಕ್ಕದೇವಪಾರ್ಯ ಶೂನ್ಯ ಸಂಪಾದನೆಯ ಸಿದ್ದಲಿಂಗ ಮೊದಲಾದವರಿಗೆ ಜನ್ಮವಿತ್ತ ಗುಮ್ಮಳಾಪುರ ಲಿಂಗಾಯತ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ತೋಂಟದ ಸಿದ್ದಲಿಂಗ ಶಿವಯೋಗಿಗಳ ವರಪುತ್ರರಾದ ಗುಮ್ಮಳಾಪುರ ಸಿದ್ಧಲಿಂಗದೇವರ ಸಮಕಾಲೀನರಾಗಿ ನಿರಂಜನ ಪೀಠವನ್ನು ಮೊದಲು ಏರಿದರು. ಸಿದ್ದಲಿಂಗ ಶಿವಯೋಗಿಗಳು ಅವರ ಶಿಷ್ಯರಾದ ಬೋಳ ಬಸವೇಶ್ವರ ಅನಂತರ ಮೂರನೆಯವರಾಗಿ ಗುಮ್ಮಳಾಪುರದ ಸಿದ್ಧಲಿಂಗದೇವರು ನಿರಂಜನಪೀಠ ಅಲಂಕರಿಸಿರುವರು. ಸಿದ್ದಲಿಂಗ ದೇವರ 'ಷಟ್‌ಸ್ಥಲ ಲಿಂಗಾಂಗ ಸಂಬಂಧದ ನಿರ್ವಚನ' ಮತ್ತು 'ಶೂನ್ಯಸಂಪಾದನೆ' ಎಂಬ ಕೃತಿ ರಚಿಸಿರುವರು. ಸಿದ್ದಲಿಂಗದೇವರು 'ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ' ಎಂಬ ಅಂಕಿತದಲ್ಲಿ ಬರೆದಿರುವ ೧೮ ವಚನಗಳು ಅವರ ಲಿಂಗಾಂಗ ಸಾಮರಸ್ಯದ ನಿಲುವನ್ನು ವ್ಯಕ್ತಪಡಿಸುವಂತಿವೆ.
ಶೂನ್ಯಸಂಪಾದನೆ ಸಿದ್ದಲಿಂಗರ ದ್ವಿತೀಯ ಕೃತಿ, ಶಿವಪ್ರಸಾದಿ ಮಹಾದೇವಯ್ಯಗಳು ಹಾಗೂ ಕೆಂಚವೀರಣ್ಣೊಡೆಯರು ಪ್ರಸ್ತಾಪ ಮಾಡಿರುವುದರಿಂದ ಮೂರನೆಯ ಶೂನ್ಯ ಸಂಪಾದನೆ ಎಂಬ ಮಹತ್ವ ಇದಕ್ಕಿದೆ. ಸಿದ್ಧಲಿಂಗರ ಶೂನ್ಯ ಸಂಪಾದನೆಗೆ ಗೂಳೂರು ಸಿದ್ದವೀರಣ ಚಾರ್ಯರ ಶೂನ್ಯಸಂಪಾದನೆ ಮೂಲ ಮಾತ್ರಿಕೆಯಾಗಿರುವದು ಗಮನಾರ್ಹ.
ಲಿಂಗಾಯತ ಕೃತಿ ಶಿವತತ್ತ್ವ ಚಿಂತಾಮಣಿಯು ಶಿವಸಮಯ ಪಟ್ಟ ವರ್ಧನರಿಪ್ಪರಾಪುರಂ ಗುಮ್ಮಹಾಳ" ಎಂದು ಶರಣಕ್ಷೇತ್ರ ಗುಮ್ಮಳಾಪುರವನ್ನು ಸ್ತುತಿಸಿ ಅಲ್ಲಿದ್ದ 'ಚೊಕ್ಕದೇವಪ್ಪಯ್ಯ' ಎಂಬ ಶರಣರ ಇತಿಹಾಸವನ್ನು ಬಿಚ್ಚಳಿಸಿದೆ. ವೀರಶೈವಾಮೃತ ಮಹಾಪುರಾಣ ತಿಳಿಸು ವಂತೆ ಈ ಚೊಕ್ಕದೇವಪ್ಪಯ್ಯನೆ ಶರಣ ಚಿಕ್ಕದೇವಪ್ಪನಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ನಿಜಲಿಂಗ ಚಿಕ್ಕಯ್ಯ
ಈತನು ಶೂನ್ಯಸಂಪಾದನೆಯನ್ನು ರಚಿಸಿದ ಶರಣ ಹಲಗೆದೇವರ ಗುರು, "ನಿಜಲಿಂಗಚಿಕ್ಕಾಭಿಧಾನವನುಳ್ಳವರ ಶೀಲವಂತದೇವರು" ಎಂಬ ವೀರಶೈವಾಮೃತ ಮಹಾಪುರಾಣದ ಹೇಳಿಕೆಯಂತೆ ಇವನ ಇನ್ನೊಂದು ಹೆಸರು ಶರಣ ಶೀಲವಂತದೇವ.
ಬಿಟ್ಟ ಮಂಡೆಯ ಪ್ರಭು:
ಗುಮ್ಮಳಾಪುರದ ಶರಣ ಬಿಟ್ಟಮಂಡೆಯ ಪ್ರಭು ಅಲ್ಲಮ ಪ್ರಭುದೇವರ ಅವತಾರವೆನಿಸಿದ ಮಹನೀಯ. ಹರಿವ ಉರಗ ಬಂದು ಚರಣಕ್ಕೆ ನಮಿಸಿ ಮೂರು ಸಲ ಪ್ರದಕ್ಷಿಣೆ ಹಾಕಿದ್ದು, ಮದೋನ್ಮತ್ತ ವಾದ ಗಜ ಬಂದು ಪಾದಕ್ಕೆ ನಮಸ್ಕರಿಸಿ ಪ್ರದಕ್ಷಿಣೆ ಮಾಡಿದ್ದು, ಗುಮ್ಮಳಾಪುರದಲ್ಲಿ ಕಲ್ಲಬಸವನು ಕೆರೆಯಲು ಸುರದುಂದುಭಿ ಮೊಳಗಿದ್ದು, ಸ್ತನ ಹರಿದ ಸ್ತ್ರೀಗೆ ಸ್ತನ ಸರಿಮಾಡಿಕೊಟ್ಟಿದ್ದು ಬಿಟ್ಟ ಮಂಡೆಯ ಪ್ರಭುವಿನ ವೈವಿಧ್ಯಮಯ ಪವಾಡಗಳು. ಇವನ ಕಾರುಣ್ಯದಿಂದ ಸೋವೊರ ಚಿಕ್ಕಬಸವೇಶನು ದಾಸೋಹ ಮಾಡಿ ಕೀರ್ತಿ ಪಡೆದನು.
ಜಂಗುಳಿದೇವ:
ಏಳುನೂರೊಂದು ವಿರಕ್ತರು ಭಾರತದ ಬಹುದೊಡ್ಡ ದಾರ್ಶನಿಕರು, ಅನುಭಾವಿಗಳೆಂದು ಸಂಘಟನಾ ವಿಶಿಷ್ಟರೆಂದು ವಿದ್ವಾಂಸರು ಗುರುತಿಸಿರುವರು. ಇವರ ತರುವಾಯ ಶರಣರನ್ನು ಉಲ್ಲೇಖಿಸುವ ಚನ್ನಬಸವಪುರಾಣ
ಗುಮ್ಮಳಾಪುರದೊಳಿಹ ಜಂಗುಳಿ
ವೀರಪ್ಪನುಂ ಸುಪ್ರಸಾದಿದೇವರ್ಮುಖ್ಯ
ಚಾರುಚರಮೂರ್ತಿಗಳ ಬಂದ ಜಂಗಮಕಿರದೆ
ವಾರಿಯಿಂ ದಾಸೋಹಮಂ ಮಾಳ್ವರು
ಎಂಬಲ್ಲಿಯ ಜಂಗುಳಿದೇವ, ಪ್ರಸಾದಿದೇವ, ಚಾರುಚರಮೂರ್ತಿಗಳು ಈ ಶಾಸನದಿಂದ ವ್ಯಕ್ತಪಡುವುದುಂಟು.
ಪ್ರಸಾದಿದೇವ:
ಪ್ರಥಮ ಶೂನ್ಯ ಸಂಪಾದನೆಯ ಕರ್ತೃ ಶಿವಗಣಪ್ರಸಾದಿ ಮಹಾ ದೇವನದು ಲಿಂಗಾಯತ ಇತಿಹಾಸದಲ್ಲಿ ಉಚ್ಚಮಟ್ಟದ ಹೆಸರು. ಈತನನ್ನು ರಾಘವಾಂಕ ಚರಿತೆ 'ಶುದ್ಧ ಪ್ರಸಾದರು ಮಹಾದೇವಯ್ಯ' ಎಂದು ಕರೆದಿದೆ. ಶಿವಗಣಪ್ರಸಾದಿ ಮಹಾದೇವಯ್ಯನ ತರುವಾಯ ಬಂದ ಶೂನ್ಯಸಂಪಾದನಾಕರ್ತೃಗಳಾದ ಕೆಂಚವೀರಣ್ಯಡೆಯರ ಗುಬ್ಬಿ ಕ್ಷೇತ್ರ, ಸಿದ್ಧಲಿಂಗಯತಿಗಳ ಗುಮ್ಮಳಾಪುರ ಕ್ಷೇತ್ರ, ಸಿದ್ಧ ವೀರಣ್ಡೆಯರ ಗೂಳೂರು ಕ್ಷೇತ್ರಗಳು ಅಕ್ಕಪಕ್ಕದ ಪುಣ್ಯಕ್ಷೇತ್ರ ಗಳು. ಅದಕ್ಕಾಗಿ ಮೊದಲನೆಯ ಶೂನ್ಯಸಂಪಾದನಾಕರ್ತೃ ಶಿವಗಣ ಪ್ರಸಾದಿ ಮಹಾದೇವಯ್ಯನು ಇದೇ ಕ್ಷೇತ್ರಕ್ಕೆ ಸಂಬಂಧಪಟ್ಟವನು. ಹೀಗಾಗಿ ಬಹುಶಃ ಈತನದು ಗುಮ್ಮಳಾಪುರವಾಗಿರುವ ಸಾಧ್ಯತೆ ಇದೆ. ಗುಬ್ಬಿಯ ಕೆಂಚವೀರಣ್ಯಡೆಯ ಗೂಳೂರಿನ ಸಿದ್ಧವೀರಣ್ಣೊಡೆಯರು ತಮ್ಮ ಶೂನ್ಯಸಂಪಾದನೆಗಳಲ್ಲಿ ಶಿವಗಣಪ್ರಸಾದಿ ಮಹಾ ದೇವಯ್ಯ ಗಳನ್ನು ನಾಮಮಾತ್ರ ನಿರ್ದೇಶನ ಮಾಡಿದರೆ, ಗುಮ್ಮಳಾಪುರದ ಸಿದ್ದಲಿಂಗಯತಿಗಳು ಶ್ರೀಮದನೇಕ ಬ್ರಹ್ಮಾಂಡ ಭಾಂಡ ಗರ್ಭಿಕೃತ ನಿತ್ಯ ನಿರಂಜನ ನಿರುಪಮ ವರನಾಮ ರೂಪುಕ್ರಿಯಾ ವಿರಹಿತ ಸಕಲ ನಿಷ್ಕಲಮಯನ ಸುಪ್ರಸಾದಿ ಮಹಾದೇವಂ' ಎಂಬ ವಿಶೇಷ ಗೌರವ ವ್ಯಕ್ತಪಡಿಸಿರುವುದಕ್ಕೆ ಈತನ ಮೂಲಕ್ಷೇತ್ರ ಗುಮ್ಮಳಾಪುರವೆಂಬುದೇ ಆಗಿರುವುದು ಕಾರಣವಾಗಿದೆ. ಎರಡನೆಯದಾಗಿ ಚನ್ನಬಸವಪುರಾಣದಲ್ಲಿ
ಗುಮ್ಮಳಾಪುರದೊಳಿಹ ಜಂಗುಳಿ
ವೀರಪ್ಪನುಂ ಸುಪ್ರಸಾದಿದೇವರ್ಮುಖ್ಯ
ಚಾರುಚರಮೂರ್ತಿಗಳ ಬಂದ ಜಂಗಮಕಿರದೆ
ವಾರಿಧಿಯಿಂ ದಾಸೋಹಮಂ ಮಾಳ್ವರು
ಎಂಬ ಪದ್ಯದಲ್ಲಿ ಬರುವ ಗುಮ್ಮಳಾಪುರದ ಸುಪ್ರಸಾದಿದೇವಂ ಎಂಬುದು ಮೇಲಿನ ಊಹೆಗೆ ಪೂರಕ ಮಾಹಿತಿ ನೀಡುತ್ತದೆ. ಇಲ್ಲಿಯ ಚಾರುತರಮೂರ್ತಿ 'ದಾಸೋಹಮಂ ಮಾಳ್ಪು' ಎಂಬ ಪದಗಳು ಪ್ರಸಾದಿ ಮಹಾದೇವಯ್ಯಂಗಳಿಗೆ ಸಂಪೂರ್ಣ ಒಪ್ಪುತ್ತವೆ. ಅದಕ್ಕಾಗಿ ಶೂನ್ಯ ಸಂಪಾದನೆಯ ಪ್ರಸಾದಿ ಮಹದೇವ ಗ್ರಾಮ ಗುಮ್ಮಳಾಪುರ ವೆಂದು ಹೇಳಬಹುದಾಗಿದೆ.
ಇದು ನಿಜವಿದ್ದಲ್ಲಿ ಪ್ರಸ್ತುತ ಗುಮ್ಮಳಾಪುರ ಶಾಸನ ಹೇಳುವ ಪ್ರಸಾದಿದೇವನು ಶೂನ್ಯಸಂಪಾದನೆ ಕೃತಿಯ ಕರ್ತೃವಾಗಿರಬಹುದೇ? ಎಂಬ ಸಂಶಯ ಉದ್ಭವಿಸುತ್ತಿದೆ. ಈ ಶಾಸನದ ಕಾಲ ಕ್ರಿ.ಶ. ೧೪೭೪. ಕ್ರಿ.ಶ. ೧೪೯೦ರ ಸುಮಾರಿಗೆ ಬಾಳಿದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯವರ್ಗದ ಗುಮ್ಮಳಾಪುರದ ಸಿದ್ಧಲಿಂಗಯತಿ, ಗೂಳೂರು ಸಿದ್ಧವೀರಣ್ಣೊಡೆಯರು ಮುಂದಣ ಎರಡು ಶೂನ್ಯ ಸಂಪಾದನೆಗಳನ್ನು ರಚಿಸಿರುವರು. ಅದರಿಂದ ಪ್ರಸಾದಿ ಮಹಾದೇವಯ್ಯಗಳ ಕಾಲಕ್ಕೆ ಧಕ್ಕೆ ಬಾರದು. ಶಾಸನೋಕ್ತ 'ಪ್ರಸಾದಿ ದೇವನು' ಶಿವಗಣ ಪ್ರಸಾದಿ ಮಹಾದೇವಯ್ಯನೆಂದೂ ಈತನ ಶೂನ್ಯ ಸಂಪಾದನೆಯ ತರುವಾಯ ೨೫ ವರ್ಷಗಳ ಅವಧಿಯಲ್ಲಿ ಮಿಕ್ಕ ಶೂನ್ಯಸಂಪಾದನೆಗಳು ಹುಟ್ಟಿವೆ ಎಂದೂ ಹೇಳಬಹುದು.
ಗುರುರಾಜ ಚರಿತ್ರೆ (೧೬-೧೬ರಲ್ಲಿ) ಸುಪ್ರಸಾದಿ ದೇವನೆಂಬುವ ನೊಬ್ಬಸುಣ್ಣದಲ್ಲಿ ಪ್ರಸಾದ ಬೀಳಲು ಎಲ್ಲ ಸುಣ್ಣವನ್ನು ಸೇವಿಸಿದನೆಂಬ ಕಥೆ ಬರುತ್ತದೆ. ಈತನಿಗೂ ಶೂನ್ಯಸಂಪಾದನೆ ಕರ್ತೃವಿಗೂ ಸಂಬಂಧವಿಲ್ಲ. ಮಿಕ್ಕ ಶಾಂತದೇವ, ಚಿಕ್ಕವೀರದೇವ, ಶರಣವೀರದೇವ, ಶಾಂತದೇವ, ನಾಗದೇವ ಮಲ್ಲಿಕಾರ್ಜುನಾರಾಧ್ಯ ಬಸವಣ್ಣ ದೇವರ ಬಗ್ಗೆ ಡಾ. ಕಲಬುರ್ಗಿ ಚರ್ಚಿಸಿರುವರು.
ಲಕ್ಕಣ್ಣದಂಡೇಶ ತನ್ನ ಶಿವತತ್ವ ಚಿಂತಾಮಣಿಯಲ್ಲಿ ಗುಮ್ಮಳಾಪುರವನ್ನು ಪ್ರಸ್ತಾಪಿಸುತ್ತ "ಅಲ್ಲಿ ತಿಂಥಿಣಿವಡೆದು ನೆರೆ ಭಕ್ತಿಮಯವಾಗಿ ಸಲ್ಲಲಿತ ಶತಗಣಂಗಳು" ಇದ್ದುದನ್ನು ಸೂಚಿಸುತ್ತ 'ಹದಿನಾಡೊಳೆಸೆದ ಬೊಮ್ಮನಹಳ್ಳಿಯಲ್ಲಿರ್ಪ ಮದನಹರ ಶರಣ ವೀರಣ್ಣನನ್ನು ಸ್ಮರಿಸಿರುವರು. ಇಲ್ಲಿ 'ಶತಗಣಂ' ಪದದ ಮೂಲಕ ನೂರೊಂದು ವಿರಕ್ತರನ್ನು ಬೊಮ್ಮನಹಳ್ಳಿಯ ವೀರಣ್ಣ, ಹೆಸರಿನ ಮೂಲಕ ಈ ವಿರಕ್ತಸಮೂಹದ ಪ್ರಮುಖ ವ್ಯಕ್ತಿಯೂ ಬೊಮ್ಮೂರಿನವನೂ ಆದ ಕರಸ್ಥಲದ ವೀರಣ್ಣನನ್ನು ಸೂಚಿಸಿದ್ದಾನೆ. ವೀರಣ್ಣನು ಗುಮ್ಮಳಾಪುರದ ಸಮೀಪದ ಬೊಮ್ಮೂರಿನವನೆಂಬುದು ಕರಸ್ಥಲ ನಾಗಲಿಂಗನ ಚರಿತ್ರೆಯಿಂದ ತಿಳಿದು ಬರುವದು. ನೆರೆಯ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಇವನ ಶಿಷ್ಯ ಕರಸ್ಥಲ ನಾಗಲಿಂಗನ ಗವಿಯಿರುವದೂ, ನಾಗಲಿಂಗನು ಗುಮ್ಮಳಾಪುರದ ಶರಣರ ಹಮ್ಮು ಬಿಡಿಸಿದನೆಂದು ಈ ನಾಗಲಿಂಗನ ಚರಿತ್ರೆ ಮತ್ತು ಬಿಡಿ ಹಾಡುಗಳಲ್ಲಿ ಬರುವದು. ಗುಮ್ಮಳಾಪುರದ ತಾಮ್ರಶಾಸನ (೧೪೭೪) ಶಾಂತದೇವ ಶರಣಚನ್ನವೀರದೇವ, ನಾಗದೇವರ ಪ್ರಸ್ತಾಪವಿರುವದು, ಈ ನೂರೊಂದು ವಿರಕ್ತ ಸಮೂಹ ಮೂಲತಃ ಗುಮ್ಮಳಾಪುರ ಪ್ರದೇಶದ್ದೆಂದು ಸ್ಪಷ್ಟಪಡಿಸುತ್ತವೆ.
ಗುಮ್ಮಳಾಪುರದ ಗೌರಮ್ಮ
ವಿಜಯನಗರದ ಅರಸ ವೆಂಕಟಪತಿರಾಯನು ಪೆನುಗೊಂಡೆಯಿಂದ ರಾಜ್ಯಭಾರ ಮಾಡುತ್ತಿದ್ದನು. ಅವನ ಕೈಕೆಳಗೆ ಚತುರ್ಥಗೋತ್ರದ ಇಮ್ಮಡಿ ಕೆಂಪೇಗೌಡನು ಎಲಹಂಕನಾಡ ಪ್ರಭುವಾಗಿದ್ದನೆಂದು ಗೌರಮ್ಮನ ಗುಡಿಯ ಶಾಸನದಿಂದ ತಿಳಿದುಬರುತ್ತದೆ. ಇಮ್ಮಡಿ ಕೆಂಪೇಗೌಡನ ತಂದೆ ಕೆಂಪೇಗೌಡನೆಂದೂ ತಾತ ಕೆಂಪನಂಜೇಗೌಡ ನೆಂದೂ ತಿಳಿಯುತ್ತದೆ.
ಎಲಹಂಕನಾಡಪ್ರಭು ಇಮ್ಮಡಿ ಕೆಂಪೇಗೌಡನ ರಾಜ್ಯದ ಅವಧಿಯಲ್ಲಿ ಗುಮ್ಮಳಾಪುರದ ಉತ್ತರಕ್ಕಿರುವ ಆನೇಕಲ್ ಪ್ರದೇಶವು ಸುಗಟೂರು ವಂಶದ ದೊರೆ ಇಮ್ಮಡಿ ತಮ್ಮೇಗೌಡನ ಅಧೀನ ದಲ್ಲಿತ್ತು. ತಮ್ಮೇಗೌಡನು ಕ್ರಿ.ಶ. ೧೬೧೪ರ ಶಾಸನವೊಂದರಲ್ಲಿ 'ನಂಮ ರಾಜ್ಯದ ಸಿಂಹಾಸನಕ್ಕೆ ಆಪ್ತರಾದ ಪಟ್ಟದ ಗುರು ನಂಜೇ ದೇವರು' ಎಂಬ ಮಾತಿದೆ. ದಾನ ಸ್ವೀಕರಿಸಿದ ವ್ಯಕ್ತಿ ನಂಜೇದೇವರು ಅಯ್ಯನವರು. ಈತನನ್ನು ಭಾರದ್ವಾಜಗೋತ್ರದ ಪಡಿವಿಡಿಗೋತ್ರದ ಕೊಲ್ಲಿಪಾಕೆ ರೇವಣಸಿದ್ದೇಶ್ವರನ ಸಂಪ್ರದಾಯಸ್ಥನೆಂದೂ ಗುಮ್ಮಳಾಪುರದ ಸಿಂಹಾಸನಕ್ಕೆ ಕರ್ತೃವೆಂದೂ ಕರೆದಿದ್ದು, ಇವನ ತಂದೆ ಚೆನ್ನಮಲ್ಲಿಕಾರ್ಜುನದೇವ ಮತ್ತು ತಾತ ನಂಜೇದೇವರು ಎಂದು ಉಲ್ಲೇಖಿಸಲಾಗಿದೆ. ಮೇಲೂರಿಗೆ ಸೇರಿದ ಗುಮ್ಮಳಾಪುರವನ್ನು ದಾನವಾಗಿ ನೀಡಿದ್ದು, ಮೇಲೂರು ಈಗ ಹಾಳಾಗಿ ಗುಮ್ಮಳಾಪುರ ಮಾತ್ರ ಇಂದಿಗೂ ಶರಣಕ್ಷೇತ್ರವಾಗಿ ಬೆಳಗುತ್ತಿದೆ.
ಕ್ರಿ.ಶ. ೧೬೨೯ರ ಸರ್ಜಾಪುರ ಶಾಸನದಲ್ಲಿ ಮುಮ್ಮಡಿ ತಮ್ಮೇಗೌಡನು ಈತನಿಗೆ 'ಬೆಳವನಹಳ್ಳಿ' ಎಂಬ ಗ್ರಾಮವನ್ನು ದತ್ತಿ ಬಿಟ್ಟ ವಿವರವಿದೆ. 'ಇಮ್ಮಡಿ ಕೆಂಪೇಗೌಡನ ಜಯಪ್ರಶಸ್ತಿ'ಯಲ್ಲಿ ಗುಮ್ಮಳಾಪುರದ ಗುರುನಂಜೇಶನ ಪ್ರಸ್ತಾಪ ಬಂದಿದೆ. ಈ ಎರಡೂ ಪಾಳೆಯಗಾರ ವಂಶೀಯರು ಲಿಂಗಾಯತಧರ್ಮಕ್ಕೆ ಪೋಷಕರಾಗಿದ್ದ ಅಂಶ ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣದಿಂದ ತಿಳಿದು ಬರುತ್ತದೆ. ಇವರು ಪರಸ್ಪರ ಬಾಂಧವ್ಯವುಳ್ಳವರಾಗಿದ್ದ ಅಂಶ ಅರಿವಾಗುತ್ತದೆ. ಪ್ರಸ್ತುತ ಶಾಸನದಲ್ಲಿ ಪ್ರಯುಕ್ತವಾಗಿರುವ ನಂಜೇದೇವ ಅಯ್ಯನವರು ಗುರುವಿನ ಸ್ಥಾನದಲ್ಲಿದ್ದರೆಂದು ಹೇಳಬಹುದು. ಪ್ರಸ್ತುತ ಗುಮ್ಮಳಾಪುರದಲ್ಲಿರುವ ಲಿಂಗಾಯತ ಮಠವು ಬಾಳೆ ಹೊನ್ನೂರು ಸಿಂಹಾಸನದ ಶಾಖಾಮಠವಾಗಿದೆ.
ಹೀಗಾಗಿ ಗುಮ್ಮಳಾಪುರ ಪ್ರಾಚೀನಕಾಲದಲ್ಲಿಯ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವೆನಿಸಿತ್ತು. ಅದರಲ್ಲೂ ಲಿಂಗಾಯತಧರ್ಮ ಇತಿಹಾಸ ದಲ್ಲಿ ಇದು ಗಣನೀಯ ಸ್ಥಾನ ಸಂಪಾದಿಸಿದೆ. ಗುಮ್ಮಳಾಪುರದಲ್ಲಿ ಪ್ರಭುಗ ಮತ್ತು ಹಲಗ ಎಂಬ ಇಬ್ಬರು ಲಿಂಗಾಯತ ಕವಿಗಳು ಆಗಿಹೋದಂತೆ ಕರ್ನಾಟಕ ಕವಿಚರಿತೆ ವರದಿ ಮಾಡಿದೆ. ಈ ಸ್ಥಲದ ವೀರಣ್ಣೊಡೆಯರ ಹೆಸರು ಪ್ರಸಿದ್ಧ ಲಿಂಗಾಯತ ಕೃತಿ ಶೂನ್ಯ ಸಂಪಾದನೆ ಯೊಂದಿಗೆ ಸಂಬಂಧಪಟ್ಟಿದೆ. ಹದಿನೈದನೆಯ ಶತಮಾನಕ್ಕೆ ಸೇರಿದ ಗುಮ್ಮಳಾಪುರದ ಸಿದ್ದಲಿಂಗೇಶ್ವರ ಕವಿಯು "ಷಟ್‌ಸ್ಥಲದ ಲಿಂಗಾಂಗ ಸಂಬಂಧ ನಿರ್ವಚನ' ಎಂಬ ಕೃತಿ ರಚಿಸಿರುವನು. ಈತನು ತೋಂಟದ ಸಿದ್ದಲಿಂಗನ ಶಿಷ್ಯನೆಂಬುದು ಸರ್ವವಿದಿತ.
ಗುಮ್ಮಳಾಪುರದ ಜನತೆಯ ಹೃದಯದಲ್ಲಿ ಲಿಂಗಾಯತ ಭಕ್ತರ ಚಾರಿತ್ರಿಕ ಕಥೆಗಳು ಮನೆಮಾಡಿಕೊಂಡಿವೆ. ಶರಣೆ ಗೌರಮ್ಮ ಎಂಬುವಳು ಈ ಕಾಲದ ಶರಣೆ. ಆಕೆಯ ಪರಿಷೆ ಇಲ್ಲಿ ಪ್ರತಿವರ್ಷ ಜರುಗುವ ಪ್ರಮುಖ ಆಕರ್ಷಣೆ. ಒಂದು ತಿಂಗಳ ಕಾಲ ನಡೆಯುವ ಈ ಪರಿಷೆಯು ಪ್ರಮುಖ ದೇವತೆ ಗೌರಮ್ಮ, ಗೌರೀ ತಿಂಗಳ ಮೊದಲ ಮಣ್ಣಿನಲ್ಲಿ ಗೌರಿಯ ವಿಗ್ರಹ ಮಾಡಿ ವಿಜೃಂಭಣೆಯಿಂದ ಪ್ರತಿಷ್ಠಾಪಿಸಿ ಮಹಾನವಮಿ ತಿಂಗಳ ಅಮಾವಾಸ್ಯೆ ಕಳೆದ ಮೇಲೆ ಬರುವ ಗುರುವಾರದಂದು ಗೌರಿಯನ್ನು ನೀರಿಗೆ ಕಳಿಸುತ್ತಾರೆ. ಈ ದೇವಿ ಗೌರಿ ಒಂದು ವರ್ಷ ಬಾಣಂತಿ. ಇನ್ನೊಂದು ವರ್ಷ ಬಸರಿ ಎಂಬ ನಂಬಿಕೆ ಗುಮ್ಮಳಾಪುರದ ಸಹೃದಯರ ಮನಸ್ಸಿನಲ್ಲಿದೆ. ಒಟ್ಟಾರೆ ಗುಮ್ಮಳಾಪುರ ಪ್ರಾಚೀನಕಾಲದಿಂದ ಶರಣಕ್ಷೇತ್ರವಾಗಿ ಮೆರೆದಿದೆ.
ಗುಮ್ಮಳಾಪುರದ ಪರಂಪರಾಗತ ರೀತಿ ನೀತಿ, ಎಡವರಿಯದೇ ಬಂದ ಲಿಂಗಾಯತ ಪರಂಪರೆ ಮತ್ತು ಅಲ್ಲಿಯ ಶರಣರ, ವಿಸ್ತ್ರತ ಅಧ್ಯಯನ, ಆ ಕ್ಷೇತ್ರ ಮಹತ್ವ ತಿಳಿಯಬೇಕಾದ ಆವಶ್ಯಕತೆ ಇಂದು ಪ್ರಸ್ತುತವಿದೆ.