ಕುರುಗೋಡ ಶರಣಸ್ಮರಣೆಯ ಕೇಂದ್ರ
೧೨ನೆಯ ಶತಮಾನದಲ್ಲಿ ಕುರುಗೋಡ ಸಿಂದರು, ಕಲ್ಯಾಣ ಚಾಲುಕ್ಯರ ಮಂಡಲೇಶ್ವರರು. ಪರಮ ಶಿವಭಕ್ತರು. ಬಸವಾದಿ ಪ್ರಮಥರೊಂದಿಗೆ ಕುರುಗೋಡ ದೊರೆ ರಾಚಮಲ್ಲನೂ ಇದ್ದನೆಂದು ಸಾರುವ ಸಾನಂದಚರಿತೆ 'ಬೇಗೆಯೊಳು ಲಿಂಗಮಂ ನುಂಗಿಯುಗುಳುತ್ತಲನುರಾಗಿಸಿದ ಕುರುಗೋಡ ರಾಚಮಲ್ಲಯ್ಯಂಗಳ್' ಎಂದು ಸಾರುವ ವೀರಶೈವಾಮೃತ ಮಹಾಪುರಾಣಗಳ ಪ್ರಕಾರ ಬರುವ ಮೊದಲನೆಯ ರಾಚಮಲ್ಲನು ಈ ಶರಣ ಸಂಪ್ರದಾಯದ ಮನೆತನದಲ್ಲಿ
ಭಕ್ತಿಯ ಮನೆ ಭಕ್ತಿಯ ನೆರೆ
ಭಕ್ತಿಯವತಿ ಭಕ್ತಿಯೊಳೆ ಭಕ್ತಿಯ ರಾಜ್ಯಂ
ಭಕ್ತಿಯ ಭಂಡಾರರ ಶಿವ
ಭಕ್ತಿಯ ಸಿರಿ ಬಂದು ನೆಲಸಿತ್ತೀ ಕುರುಗೋಡೋಳ್.
ಎಂದು ಕುರುಗೋಡ ಶಾಸನ ವರ್ಣಿಸಿದೆ ಈ ಶರಣ ಪ್ರಭಾವದ ಪ್ರದೇಶದಲ್ಲಿ ರಕ್ಷಣೆ ಬಯಸಿ ಬಂದ ಶರಣರು ಕೆಲಕಾಲ ನೆಲೆ ನಿಂತಂತೆ ಕಂಡುಬರುತ್ತದೆ.
ಕುರುಗೋಡ ಪ್ರಾಚೀನ ಕಾಲದಿಂದ ಬೆಳೆದುಬಂದ ಶರಣಕ್ಷೇತ್ರ. ಕುಮಾರಸ್ವಾಮಿ ಬೆಟ್ಟ, ಕುರುಗೋಡಿನ ಕಲ್ಲೇಶ್ವರ, ತ್ರಿಕೂಟೇಶ್ವರ, ಓರುವಾಯಿ ವಿಶ್ಲೇಶ್ವರ ಮತ್ತು ರಾಮಲಿಂಗೇಶ್ವರ, ಸಿರಿಗುಪ್ಪದ ಸ್ವಯಂಭು ಕೇತಲ ದೇವಾಲಯ ಕುರುಗೋಡನ್ನು ಶರಣಕ್ಷೇತ್ರ ವನ್ನಾಗಿಸಿದೆ.
ಬಳ್ಳಾರಿ ತಾಲ್ಲೂಕಿನ ಕುರುಗೋಡ ಶರಣಕ್ಷೇತ್ರ, ಶಾಸನ ಸಾಹಿತ್ಯ ಪ್ರಕಾರ ಕ್ರಿ.ಶ. ೭ನೆಯ ಶತಮಾನದಲ್ಲಿ ಬಾದಾಮಿ ಚಾಲುಕ್ಯ ಸಾಮ್ರಾಟರಿಗೆ ಸೇರಿದ ಕೋಟೆ ಇದಾಗಿತ್ತು. ಕಲ್ಯಾಣದ ಚಾಲುಕ್ಯರ ಬಲ್ಲು ಕುಂದೆ ನಾಡು ಪಶ್ಚಿಮೋತ್ತರಗಳಲ್ಲಿ ತುಂಗಭದ್ರೆ ಪೂರ್ವದಲ್ಲಿ ಉಪನದಿಯಾದ ವೇದಾವತಿ ಮಧ್ಯದ ಪ್ರದೇಶವನ್ನೊಳಗೊಂಡಿದೆ. ತುಂಗಭದ್ರ ನದಿಯ ದಂಡೆಯ ಮೇಲಿರುವ ಸಿರುಗುಪ್ಪ ಹಂಪೆಗಳು ಬಲ್ಲ ಕುಂದೆ ನಾಡಿನಲ್ಲಿದ್ದು ಸೊಂಡೂರು ಪಕ್ಕದ ಕುಮಾರಸ್ವಾಮಿ ಬೆಟ್ಟವು ಈ ನಾಡಿನ ಪ್ರಮುಖ ಕಾರ್ತಿಕೇಯಸ್ವಾಮಿ ತಪೋವನವೆನಿಸಿದೆ. ಕುಡುತಿನಿ ಕೊಳಗಲ್ಲುಗಳೂ ಕಾರ್ತಿಕೇಯ ಸ್ವಾಮಿಯ ಪುಣ್ಯಸ್ಥಳಗಳೆನಿಸಿವೆ. 'ತಪೋವನಂಗಳ ರಾಜಧಾನಿ' ಪಟ್ಟಣ ಎಂದು ಕರೆಸಿಕೊಂಡಿದೆ.
ಇಲ್ಲಿಯ ಶಾಸನಗಳು ಕಾಳಾಮುಖ ಸಮನ್ವಯವನ್ನು 'ಎಕ್ಕೋಟಿ ಸಮಯ'ವೆಂದೂ ಕಾಳಾಮುಖ ಮಠವನ್ನು 'ಎಕ್ಕೋಟಿಮಠ'ವೆಂದೂ ಅಲ್ಲಿಯ ಸ್ಥಾನಾಚಾರ್ಯರನ್ನು 'ಎಕ್ಕೋಟಿ ಚಕ್ರವರ್ತಿ'ಗಳೆಂದು ಕರೆದಿವೆ. ಕೆಲ ಆಚಾರ್ಯರು ರಾಜಪೂಜಿತರೆನಿಸಿದ್ದರು. ಬಲ್ಲ ಕುಂದೆ ನಾಡಿನ ಸಿಂದಿಗೆರೆ ಓರುವಾಯಿ ಕುಡುತಿನಿ ಕೊಳಗಲ್ಲು ಮೊದಲಾದವು ಕಾಳಾಮುಖ ಪಾಶುಪತ ಶೈವ ಕೇಂದ್ರಗಳೆನಿಸಿದ್ದವು.
ಬಸವಪೂರ್ವಯುಗದ ಶರಣರ ಭಾವಭ್ರಮಿತ ಉಗ್ರಶಕ್ತಿ ಕ್ರಮೇಣ ಶಮನಗೊಳ್ಳುತ್ತ ಬಂದು ಸಾತ್ವಿಕ ರೂಪ ಪಡೆಯಿತು. ಶರಣರು ಕನ್ನಡನಾಡಿನಲ್ಲಿಯೆ ನೂತನ ಆಂದೋಲನವನ್ನು ಅವತಾರಗೊಳಿಸಿದರು. ಯುಗಪುರುಷ ಗುರು ಬಸವಣ್ಣನವರ ನೇತೃತ್ವದಲ್ಲಿ ಬಸವಯುಗ ಅರಳಿತು. ಇದೇ ವೇಳೆಗೆ ಬಲ್ಲ ಕುಂದೆ ನಾಡಿನ ಪಾಶುಪತ ಕಾಳಾಮುಖದ ಅಭಿನವೀಕರಣ ಲಿಂಗಾಯತಧರ್ಮವಾಗಿ ಕನ್ನಡನಾಡಿನಲ್ಲಿ ಮೆರೆಯಿತು. ಈ ಪ್ರಭಾವ ಅಂದು ರಾಜ್ಯಭಾರ ಕೈಕೊಂಡಿದ್ದ ಅನೇಕ ಲಿಂಗಾಯತ ರಾಜಮನೆತನಗಳ ಮೇಲೆ ವಿಶೇಷವಾಯ್ತು. ಶರಣಪ್ರೇರಿತ ವ್ಯಾಪಾರ ವಹಿವಾಟು, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ಸಾಹಿತ್ಯ ಜಾಗ್ರತಿಗಳು ಕನ್ನಡನಾಡಿನ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ವೆನಿಸಿವೆ.
ಕುರುಗೋಡ ಸಿಂದರು ಬಸವಾದಿ ಶರಣ ಪ್ರಭಾವಕ್ಕೆ ಸಿಕ್ಕು ಲಿಂಗಾಯತರಾದವರು. ಸಾನಂದಚರಿತೆ, ವೀರಶೈವಾಮೃತ ಮಹಾಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮೊದಲಾದ ಲಿಂಗಾಯತ ಕೃತಿಗಳು ಈ ಮನೆತನದ ರಾಚಮಲ್ಲರಂಥ ಶರಣರನ್ನು ಬಸವಾದಿಗಳ ಸಾಲಿನಲ್ಲಿ ಸ್ಮರಿಸಿರುವುದುಂಟು. ಕುರುಗೋಡ ಸಿಂದ ಮನೆತನದ ಇಬ್ಬರು ರಾಚಮಲ್ಲರು ಶಿವಭಕ್ತರು. ಬಿಜ್ಜಳನ ದಬ್ಬಾಳಿಕೆಗೆ ಒಳಗಾಗದೇ ಶರಣರ ಸಮೂಹವನ್ನು ತಮ್ಮೊಳಗಿರಿಸಿಕೊಂಡು ಆಶ್ರಯ ನೀಡಿ ಹಿರಿಮೆ ಮೆರೆದಿರುವರು. ಕಲ್ಯಾಣಕ್ರಾಂತಿಯ ತರುವಾಯ ಕಲ್ಯಾಣ ಬಿಟ್ಟ ಶರಣ ಸಮೂಹ ಆಂಧ್ರದ ಶ್ರೀಶೈಲ, ಇತರೆಡೆಗಳಲ್ಲಿ ತೆರಳಿದಂತೆ ಕುರುಗೋಡ ಸಿಂದರ ಆಶ್ರಯ ಬಯಸಿ ಹಂಪಿಗೆ ಬಂದು ನೆಲೆಸಿರುವ ಸಾಧ್ಯತೆಗಳಿವೆ. ಶರಣರೊಡನೆ ವಚನಸಾಹಿತ್ಯ ಹಂಪೆಗೆ ಬಂದುದರಿಂದ ಕನ್ನಡದ ಶರಣಕವಿ ಹರಿಹರ ರಾಘವಾಂಕರಂಥವರಿಗೆ ಬಸವಾದಿ ಶರಣರ ಚರಿತ್ರೆ ರಚಿಸಲು ಸುಲಭವಾಗಿದೆ.
ಕುರುಗೋಡ ಸಾಂಸ್ಕೃತಿಕ ಕೇಂದ್ರ ಒಂಬತ್ತು ದೇವಸ್ಥಾನಗಳನ್ನು ಹೊಂದಿದೆ. ಅವುಗಳ ಕಲಾಪೂರ್ಣ ಕೆತ್ತನೆಯಿಂದ ವಿಖ್ಯಾತಿ ಪಡೆದಿದೆ. ಗ್ರಾಮದ ಪಶ್ಚಿಮಕ್ಕೆ ಬಸವೇಶ್ವರ ಗುಡಿ ಇದ್ದು ಅದರಲ್ಲಿ ಸುಮಾರು ೧೨ ಅಡಿ ಎತ್ತರದ ಬಸವಣ್ಣನ ವಿಗ್ರಹವಿದೆ. ಪಕ್ಕದಲ್ಲಿ ನೀಲಮ್ಮನ ಮಠವಿದೆ. ಕುರುಗೋಡಿಗೆ ೮ ಮೈಲು ದೂರದಲ್ಲಿ ಸಿಂದಿಗೆರೆ ಇದೆ. ಈಕೆ ಅರಸನ ಮಗಳು. ಬದುಕಿನಲ್ಲಿ ಆಧ್ಯಾತ್ಮವನ್ನು ಅಳವಡಿಸಿ ಕೊಂಡು ಪವಾಡಗೈದ ಶರಣೆ ಆಕೆ.
ಕುರುಗೋಡಿನ ಸ್ವಯಂಭು ಬಸವೇಶ್ವರ ಪ್ರಾಚೀನ ವಿಗ್ರಹ. ಅದರ ಕುರುಹಿನ + ಕೋಡು = ಕುರುಗೋಡು ಎನಿಸಿದೆ. ಶರಣರಲ್ಲಿ ಉಳಿಯುಮೇಶ್ವರ ಚಿಕ್ಕಣ್ಣನೆಂಬ ವಚನಕಾರ ಉಳಿಯುಮೇಶ್ವರ ಸ್ಥಾನಪತಿಯಾಗಿದ್ದರೆ, ಕ್ರಿ.ಶ. ೧೨ನೆಯ ಶತಮಾನದ ಶರಣ ಹಾವಿನಹಾಳ ಕಲ್ಲಯ್ಯನ ಉಲ್ಲೇಖವನ್ನೊಳಗೊಂಡ ಶಾಸನ ಕಶ್ವರ ಗುಡಿಯಲ್ಲಿದೆ. ಕಲ್ಯಾಣ ಕ್ರಾಂತಿಯನಂತರವೂ ಹಾವಿನಹಾಳ ಕಲ್ಲಯ್ಯ ಬದುಕಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯ. ಕಲ್ಯಾಣದ ವಿಪ್ಲವದ ತರುವಾಯ ಕಲ್ಯಾಣ ತ್ಯಜಿಸಿದ ಶರಣ ಪರಮಭಕ್ತರಾದ ಕುರುಗೋಡ ರಾಜರ ಆಶ್ರಯಕ್ಕೆ ಬಂದಿರಬೇಕು. ಚೆನ್ನಬಸವಪುರಾಣ ದಲ್ಲಿ ಶ್ವಾನನಿಂದ ವೇದವನ್ನೋದಿಸಿ ವಿಪ್ರರ ಬಾಯಿ ಮುಚ್ಚಿಸಿದ ಶರಣ ಹಾವಿನಹಾಳ ಕಲ್ಲಯ್ಯ, ವಿಜಾಪುರದಿಂದ ವಾಯುವ್ಯಕ್ಕೆ ೩೬ ಮೈಲು ದೂರದಲ್ಲಿರುವ ಹಾವಿನಹಾಳ ಗ್ರಾಮ ಈತನದು. ಅಕ್ಕಸಾಲಿಗ ವೃತ್ತಿಯಲ್ಲಿ ನಿಪುಣನಾದ ಈತ, ರುದ್ರಮುನಿಗಳಿಂದ ದೀಕ್ಷೆ ಹೊಂದಿ ಪ್ರತಿನಿತ್ಯ ಕಶ್ವರ ಗುಡಿಗೆ ಹೋಗಿ ಆರಾಧ್ಯದೈವ ಪೂಜಿಸುವ ಪರಿಪಾಠ ಹೊಂದಿದ್ದ. ಅಲ್ಲದೆ 'ಮಹಾಲಿಂಗ ಕಲ್ಲೇಶ್ವರ' ಅಂಕಿತ ವಚನ ರಚಿಸಿದ್ದು, ಸಿಂದ ಮನೆತನದ ಬಗೆಗೆ, ಅಂದಿನ ಸಾಂಸ್ಕೃತಿಕ ಬದುಕಿನ ಬಗ್ಗೆ, ದೊರೆ ರಾಚಮಲ್ಲನ ಉದಾರ ಮನೋಭಾವದ ಬಗ್ಗೆ ಮಹತ್ತರ ವಿಷಯ ವಿವೇಚಿಸಿದ್ದಾನೆ.
ಭಕ್ತಿಯ ಮನೆ ಭಕ್ತಿಯ ನೆಲೆ
ಭಕ್ತಿಯವತಿ ಭಕ್ತಿಯೇಳ ಭಕ್ತಿಯ ರಾಜ್ಯಂ
ಈತ ಭಕ್ತಿಯ ಭಂಡಾರದ ಶಿವ
ಈ ಭಕ್ತಿಯ ಸಿರಿ ಬಂದು ನೆಲಸಿ ಕುರುಗೋಡೊಳ್
ಸಿಂದವಂಶದ ರಾಚಮಲ್ಲದೊರೆ ಶಿವಪಾದ ಶಿಖಾಮಣಿ, ಶಿವೈಕ್ಯ ಚೂಡಾಮಣಿ, ಅರ್ಜಿತ ಶಿವಪಾದ ಎಂದು ಕೀರ್ತಿತನಾಗಿರುವನು. ಎರಡನೆಯ ರಾಚಮಲ್ಲನು ಅವನಷ್ಟೇ ಶರಣಶ್ರೇಷ್ಠ, ಶಿವನ ಒಡ್ಡೋಲಗದಲ್ಲಿ ಬಸವಾದಿ ಪ್ರಮಥರೊಂದಿಗೆ ಕುರುಗೋಡ ರಾಚಮಲ್ಲನೂ ಇದ್ದನೆಂದು ಸಾರುವ ಸಾನಂದ ಚರಿತೆ 'ಬೇಗೆಯೊಳು ಲಿಂಗಮಂ ನುಂಗಿಯುಗುಳುತ್ತಲನುರಾಗಿಸಿದ ಕುರುಗೋಡ ರಾಚಮಲ್ಲಯ್ಯಂಗಳ್' ಎಂಬ ವೀರಶೈವಾಮೃತ ಪುರಾಣ ಸಾರಿದೆ.
ಸಿಂದ ಮನೆತನದ ರಾಚಮಲ್ಲ-I ರಾಚಮಲ್ಲ-II ಈ ಅಜ್ಜ ಮೊಮ್ಮಕ್ಕಳಿಬ್ಬರೂ ವಚನಕಾರರ ಚಳವಳಿಯಿಂದ ಪ್ರಭಾವಿತರಾಗಿರಬೇಕು. ಅಂತೆಯೇ ಭೈರವೇಶ್ವರ ಕಥಾಮಣಿಸೂತ್ರ ರತ್ನಕರದಲ್ಲಿ ಗಂಡಗತ್ತರಿ ನಾಚಯ್ಯ, ಚಿಕ್ಕ ರಾಚಮಲ್ಲಯ್ಯ, ಮತ್ತು ರಾಚ ಮಲ್ಲಯ್ಯರು ಕೂಡಿಕೊಂಡು 'ಪ್ರಚುರಾ ನಂದಾಬಿವೀಚಿ'ಯಿಂದ ಗಂಡುಗತ್ತರಿ ಕಾಯಕಕ್ಕೆ ಹೋಗುತ್ತಿದ್ದುದನ್ನು ಪ್ರಸ್ತಾಪಿಸಿರುವರು. 'ಭಕ್ತರಂ ಪಿರಿದು ಮನ್ನಿಸುತ್ತ' ಅನೇಕ ದಾನದತ್ತಿಗಳನ್ನು ನೀಡಿ ನಿಷ್ಠಾಪೂರ್ಣ ಭಕ್ತಿಗೆ ಶಿವಮೆಚ್ಚಿ ತನ್ನ ಪರಿವಾರದೊಡನೆ ಪ್ರತ್ಯಕ್ಷನಾದಾಗ ಮಹಾವಿಭೂತಿಯಿಂದ ಗಣಾಡಂಬರವಂ ಮಾಡಿ ಶಿವಾರ್ಚನೆ ಗೈದು ಕುದುರೆಯೇರಿ ಕೈಲಾಸಕ್ಕೆ ಹೋದನೆಂದು ದಾನವ್ರತ ವೀರವ್ರತ ಗಳೆರಡರಲ್ಲೂ ಅಪ್ರತಿಮರೆನಿಸಿದ್ದ ರಾಚಮಲ್ಲನ ಗುಣಗಾನವನ್ನು ಅನೇಕ ಶಾಸನಗಳು ಬಿಚ್ಚು ಮನಸ್ಸಿನಿಂದ ಉಗ್ಗಡಿಸಿವೆ.
ದೊರೆ ರಾಚಮಲ್ಲನ 'ಮಹೇಶ್ವರ ಪದ ಪದ್ಮ ರಾಜಹಂಸ' 'ಕಲಿಕಾಲ ನಂದೀಶ'ನೆಂಬ ಹೆಗ್ಗಳಿಕೆಗಳು ರಾಚಮಲ್ಲನ ಶಿವಭಕ್ತಿಯನ್ನು ವ್ಯಕ್ತಪಡಿಸುವಂತಿವೆ. ಈ ಮನೆತನದಲ್ಲಿ ಇರುಂಗೋಳ, ಎರಡನೆಯ ರಾಚಮಲ್ಲ, ವೀರ ಕಲಿದೇವರಸ, ಮುಂತಾದ ದೊರೆಗಳು ಲಿಂಗಾಯತಭಿಮಾನಿಗಳೆನಿಸಿದ್ದರು. ಕುರುಗೋಡಿನ ಉಜಾಳೇಶ್ವರ ದೇವಾಲಯದ ಅಂತರಾಳದ ಕೆಳಭಾಗದಲ್ಲಿ ಚೌರಿಹಿಡಿದು ನಿಂತ ಎರಡು ವಿಗ್ರಹಗಳಲ್ಲಿ 'ಶ್ರೀ ಲೋಕಾಪುರದ ಏಚಲದೇವಿ' ಎಂಬ ಉಲ್ಲೇಖವಿದ್ದು ಈಕೆ ಇರುಂಗೊಳನ ಪತ್ನಿ ಉಜಾಳೇಶ್ವರ ದೇವಾಲಯದ ನಿರ್ಮಾಪಕಿಯಾಗಿರುವ ಸಾಧ್ಯತೆ ಇದೆ.
ಇಂಥ ಶರಣಸಾನ್ನಿಧ್ಯದ ಕೇಂದ್ರ ಕುರುಗೋಡಿಗೆ ಬಂದ ಶರಣರು ಕೆಲಕಾಲ ವಿಶ್ರಾಂತಿ ಪಡೆದುದರಿಂದ ಕಲ್ಯಾಣಕ್ರಾಂತಿಯ ತರುವಾಯ ಇವರಿಗೆ ಬೆಂಬಲವಾಗಿ ಆಶ್ರಯವನ್ನೊದಗಿಸಿ ತಮ್ಮ ಹಿರಿಮೆ ಮೆರೆದಿರುವರು. ಅಂದಿನಿಂದ ಇಂದಿನವರೆಗೂ ಕುರುಗೋಡ ಶರಣಸ್ಮರಣೆಯ ಕೇಂದ್ರವೆನಿಸಿದೆ.