ಮುರುಗೋಡ ಹಾಗೂ ಇತರ ಪ್ರದೇಶಗಳು
ಗೋವೆ ಕದಂಬರಿಗೆ ಲಿಂಗಾಯತ ಶರಣರ ಸಂಪ್ರದಾಯವಿದೆ. ಚಟ್ಟಯ್ಯನನ್ನು 'ಧರ್ಮಾವತಾರ'ನೆಂದು ಶಾಸನಗಳು ಕರೆದಿದ್ದು ಗೋವೆಯ ವಜ್ರಕಾಯ ಶಿವನ ಒಡೋಲಗದಲ್ಲಿ ಶರಣರೊಂದಿಗೆ ಇದ್ದನೆಂದು ಕುಮಾರ ಪದ್ಮರಸನ ಸಾನಂದ ಚರಿತೆ ತಿಳಿಸಿದೆ. ಮುರುಗೋಡ ತಲುಪಿದ ನಂತರ ಶರಣರ ಉತ್ಸಾಹ ಇಮ್ಮಡಿಸಿದೆ. ಇಷ್ಟರಲ್ಲಿಯೇ ಚೆನ್ನಬಸವಣ್ಣನವರು ಕಾದರವಳ್ಳಿಯಲ್ಲಿ ಠಾಣ್ಯ ಹಾಕಿದ್ದು ಶರಣರಿಗೆ ಈ ಕಾಳಗದಲ್ಲಿ ವಿಜಯವಾಗಿರುವ ಸೂಚನೆಗಳೂ ಅಲ್ಲಿಯ ಶಿಲ್ಪದಲ್ಲಿ ಕಂಡು ಬರುತ್ತವೆ. ಕಾದರವಳ್ಳಿ ನೆರೆಯ ಹುಣಸೀಕಟ್ಟೆಯಲ್ಲಿ ಶರಣರು ಪಲ್ಲಕ್ಕಿಯಲ್ಲಿ ಒಬ್ಬ ಯೋಗಿಯನ್ನು ಕುಳ್ಳಿರಿಸಿ ಸಂತೋಷದಿಂದ ಮೆರವಣಿಗೆ ಮಾಡಿದ ಚಿಹ್ನೆಗಳು ಈ ಶಿಲ್ಪದಲ್ಲಿದ್ದು, ಶಿಲ್ಪ ಸದ್ಯ ಹುಣಸೀಕಟ್ಟೆಯ ಶಾಲೆಯಲ್ಲಿದೆ.
ಕಾರಿಮನೆಯಿಂದ ಶರಣರು ಮುಂದೆ ಬೈಲಹೊಂಗಲ ಸಂಪಗಾವಿ, ಹುಣಸೀಕಟ್ಟೆ, ನಾಗಲಾಪುರಕ್ಕೆ ಬಂದಿರುವುದುಂಟು. ನಾಗಲಾಪುರ ಸ್ಥಳನಾಮ ಅಕ್ಕನಾಗಮ್ಮನವರನ್ನು ಸ್ಮರಿಸುವಂತಿದೆ. ಇಂದಿಗೂ ಅಕ್ಕನಾಗಮ್ಮನ ಗುಡಿ ನಾಗಲಾಪುರದಲ್ಲಿದೆ. ತಿಗಡಿಯಲ್ಲಿ ಶರಣ ಹರಳಯ್ಯನವರ ಮಡದಿ ಕಲ್ಯಾಣಮ್ಮನವರ ಸಮಾಧಿ ಇದೆ. ಕಲ್ಲೂರಿನಲ್ಲಿ ಕಲ್ಯಾಣಮ್ಮನು ಲಿಂಗೈಕ್ಯಳಾಗಿದ್ದು ಅಲ್ಲಿಯೇ ಮೂರು ವಿಗ್ರಹಗಳಿವೆ. ಇಂದಿಗೂ ಅದರ ಸ್ಮರಣೆಗೆ ಜಾತ್ರೆ ನೆರವೇರುತ್ತದೆ. ಕಾದರವಳ್ಳಿಯಲ್ಲಿ ಬಿಜ್ಜಳನ ಸೈನಿಕರ ಹೋರಾಟ, ಕಕ್ಕೇರಿಯಲ್ಲಿ ಕಕ್ಕಯ್ಯನವರ ಐಕ್ಯ ಸಮಾಧಿ, ಶಿಲಾಮೂರ್ತಿಗಳು ಪೂಜೆಗೊಳ್ಳುತ್ತಿವೆ.
ಬಿಜ್ಜಳನ ಉಡಾಫೆತನದಿಂದ ರೊಚ್ಚಿಗೆದ್ದ ಅವನ ಸೈನ್ಯ ಶರಣರನ್ನು ಸದೆ ಬಡಿಯುತ್ತ ಉಳಿವಿಯ ಮಹಾಮನೆವರೆಗೂ ಹೋದಂತಿದೆ. ಬಯಲುಬಸವನಲ್ಲಿ ಚೆನ್ನಬಸವಣ್ಣ ಓಲಗವ ಕರೆದಿರಲು ಬಿಜ್ಜಳನ ದಾಳಿಯಿಂದ ತೊಟ್ಟು ಬಂದ ಹಾವುಗೆಗಳನ್ನು ಬಿಟ್ಟು ಹೋಗಿದ್ದು ಇವು ದಾಳಿಯ ಸಂಜ್ಞೆಗಳೇ ಆಗಿವೆ. ಯುದ್ಧವನ್ನು ಎದುರಿಸುತ್ತಲೇ ಮಹಾಮನೆಯನ್ನು ಪ್ರವೇಶಿಸಿರುವರು. ಹತ್ತಿರದಲ್ಲಿ ಜಗಳಬೆಟ್ಟ, ರಾಕ್ಷಸಿಬೆಟ್ಟ, ಕಿನ್ನರಿ ಬ್ರಹ್ಮಯ್ಯನ ಹೊಳೆಯ ಗತಿಯನ್ನೇ ಬದಲಿಸಿ ಮಹಾಮನೆಯ ಬಾಗಿಲಿಗೆ ಬರುವಂತೆ ಮಾಡಿದ ಶ್ರೇಯಸ್ಸು ಶರಣರದು. ಈಗ ಹೊಳೆ ಮಹಾಮನೆಯಲ್ಲಿಯೆ ಧುಮುಕುತ್ತದೆ.
ಗವಿಯನ್ನು ಪ್ರವೇಶಿಸಿ ಒಳಗೆ ಕುಳಿತುಕೊಳ್ಳಲು ಬರುವ ಸಾವಿರಾರು ಜನರಿಗೆ ಮಂಟಪಗಳಿವೆ. ಪ್ರವಾಹ ದಾಟಿ ಬಂಡೆಗಳನ್ನು ಏರಿ ಒಂದೊಂದು ಅಂಗುಲದಷ್ಟು ಸ್ಥಳದಲ್ಲಿ ಹೆಜ್ಜೆಯನ್ನಿಟ್ಟು ಮೆಲ್ಲನೆ ಹೊಟ್ಟೆ ಹೊಸೆದು ತೆವಳಿಕೊಂಡು ಈ ವಿಸ್ಮಯಕಾರಿ ಗುಹೆಯನ್ನು ಪ್ರವೇಶಿಸಿದರೆ ಅಲ್ಲಿ ವೀರಭದ್ರನ ವಿಗ್ರಹವಿರುವುದನ್ನು ನಾವು ಕಾಣುತ್ತೇವೆ. ಇಂತಹ ಚೆನ್ನ ಬಸವಣ್ಣನ ಗುಡಿಗಳು, ನಂದಿ ಕಂಬಗಳು, ನಾಡಿನ ಎಲ್ಲೆಲ್ಲಿ ಇವೆಯೋ ಅದೇ ಶಿವ ಶರಣರು ನಡೆದು ಬಂದ ದಾರಿ ಎಂಬುದು ನನಗೆ ಕ್ಷೇತ್ರಕಾರ್ಯದಿಂದ ಬಂದ ಸ್ಪಷ್ಟ ತಿಳುವಳಿಕೆ. ಗವಿಯನ್ನು ಪ್ರವೇಶಿಸಿದ ಶರಣರು ಕೆಲಕಾಲವಾದರೂ ಇಲ್ಲಿ ನಿಂತುಕೊಂಡು ಧರ್ಮ ತತ್ವಪ್ರಸಾರದ ಬಗ್ಗೆ ಸಮಾಲೋಚನೆ ಕೈಕೊಂಡು ಶರಣಧರ್ಮ ಪ್ರಸಾರ ಕೈಕೊಂಡುದನ್ನು ಅಲ್ಲಗಳೆಯುವಂತಿಲ್ಲ.
ಲಿಂಗಾಯತಧರ್ಮ ಒಂದು ಸಂಘಟಿತ ಶಕ್ತಿ ಎಂದು ಮನವರಿಕೆ ಮಾಡಿಕೊಂಡಿದ್ದ ಚೆನ್ನಬಸವಣ್ಣ ತೃಪ್ತಿ ಪಡೆದು ತಮ್ಮ ೨೬ ನೆಯ ಕಿರಿಯ ವಯಸ್ಸಿನಲ್ಲಿ ಉಳವಿಯಲ್ಲಿ ಲಿಂಗೈಕ್ಯರಾಗಿರುವವರು. ಚೆನ್ನಬಸವಣ್ಣನೊಡನೆ ಅನೇಕ ಶರಣರು ಉಳವಿ ಕ್ಷೇತ್ರದಲ್ಲಿ ನೆಲೆನಿಂತಿದ್ದು ಸದ್ಯ ಅವರ ಉಲ್ಲೇಖಗಳನ್ನು ಶೋಧಿಸಬೇಕಿದೆ.
ಚೆನ್ನಬಸವಪುರಾಣದ ಪ್ರಕಾರ ತಾವು ನೆರವೇರಿಸಲು ಹುಟ್ಟಿಬಂದ ಕಾರ್ಯವನ್ನು ಪೂರೈಸಿದ ಶರಣರು ಶಿವನ ಕರೆಗೆ ಓಗೊಟ್ಟರು, ಹೊನ್ನರಳಿಯ ಮರಕ್ಕೆ ಕಟ್ಟಿದ ಜೋಕಾಲಿ ಬೇರೆ ನಿರ್ಜವನೈದುದನ್ನು ಕಾವ್ಯ ತಿಳಿಸಿದೆ. ಇಂದಿಗೂ ಚೆನ್ನಬಸವಣ್ಣ ನೆಟ್ಟ ಅರಳಿಯ ಮರವೊಂದು ಉಳವಿಕ್ಷೇತ್ರದ ಪರಿಸರದಲ್ಲಿ ಬೃಹತ್ತಾಗಿ ಬೆಳೆದಿದೆ. ಸ್ವಾದಿ ಸದಾಶಿವರಾಯನ ಉಳವಿ ಮಹಾತ್ಮ ಈ ಸಂದರ್ಭವನ್ನು
ಹೊನ್ನ ಅರಳಿಯ ಮರನ ಕೊನೆಯನು ಚೆನ್ನಬಸವನು ನೆಟ್ಟು ತಾ
ಚಿನ್ನದೊಟ್ಟಿಲ ಕಟ್ಟಿ ಗಣಗಳ ಚದುರುತನದಲ್ಲಿ ತೂಗುತ
ಪನ್ನಗಾಭರಣನ ಸಮೀಪಕೆ ಪರಮಹರುಷದಿ ಕಳುಹಿ ತಾ
ಇನ್ನು ಭಕ್ತಿಯ ಮಾಳ್ವೆನೆನುತಲಿ ಇಹನುಳುವೆಯ ಕ್ಷೇತ್ರದಿ ||
ಎಂದು ಸಾರಿದ್ದಾನೆ. ಹೀಗಾಗಿ ಶರಣ ಚೆನ್ನಬಸವಣ್ಣನು ಶರಣಕ್ಷೇತ್ರ ಉಳವಿಯಲ್ಲಿ ಕ್ರಿ.ಶ. ೧೧೬೮ ಫೆಬ್ರವರಿ ತಿಂಗಳಿನಲ್ಲಿ ತನ್ನ ೨೬ನೆಯ ವರ್ಷ ವಯಸ್ಸಿನಲ್ಲಿ ಪರಶಿವನ ನೆಲೆ ಸೇರಿದ. ಅಂದಿನಿಂದ ಶರಣರ ಪುಣ್ಯಕ್ಷೇತ್ರ ಉಳವಿ ಭಕ್ತಾದಿಗಳನ್ನು ಆಕರ್ಷಿಸಿದೆ. ಶರಣರು ಅದನ್ನೊಂದು ಲಿಂಗಾಯತ ಪ್ರಮುಖ ಆರಾಧನೆಯ ಕೇಂದ್ರವನ್ನಾಗಿಸಿದ್ದಾರೆ. ಇಂದು ಅಖಿಲಭಾರತ ಮಟ್ಟದ ಲಿಂಗಾಯತರ ಗಮನವನ್ನು ಸದಾ ತನ್ನೆಡೆಗೆ ಸೆಳೆಯುವ ಪರಮ ಪವಿತ್ರ ಕ್ಷೇತ್ರ ಉಳವಿ ಎನಿಸಿದೆ.
ಸ್ವಾದಿ ದೊರೆ ಸದಾಶಿವರಾಯನಿಗೆ ಸತ್ಸಂಗದೊಂದಿಗೆ ಅನುಭಾವ ಅನುಕಂಪಗಳು ಹುಟ್ಟಿನೊಂದಿಗೆ ಜನಜನಿತವಾಗಿ ಬಂದಿದ್ದವು. ಅಂತೆಯೇ ಆತನ ಬದುಕು ಶರಣಸೇವೆಯಲ್ಲಿ ಸಾರ್ಥಕಗೊಂಡಿದೆ. ೧೨ನೆಯ ಶತಮಾನದ ಶರಣರು ತಮ್ಮ ಉಳವಿ ಪ್ರವಾಸದಲ್ಲಿ ಸೋದೆವರೆಗೂ ಹೋಗಿದ್ದನ್ನು ಆತನ 'ಉಳವಿ ಮಹಾತ್ಮ' ಕೃತಿ ವಿವರಿಸಿದೆ. ತನ್ನ ನಾಲ್ಕನೆಯ ಮಗನಿಗೆ ಚೆನ್ನ ಬಸವಣ್ಣನ ಹೆಸರಿಟ್ಟು ಉಳವಿಯಲ್ಲಿ ಚೆನ್ನಬಸವೇಶ್ವರ ದೇವಸ್ಥಾನ ಶಿರಸಿಯ ಮಾರಿಕಾಂಬಾ ದೇವಸ್ಥಾನ ಕಟ್ಟಿದ ಕೀರ್ತಿ ಈತನದು.
ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಉಳವಿ ಕ್ಷೇತ್ರದಲ್ಲಿ ಚೆನ್ನ ಬಸವಣ್ಣನವರ ಸಮಾಧಿಯ ಮೇಲೆ ಒಂದು ಗದ್ದುಗೆ ಇರಬೇಕು. ೧೬ನೆಯ ಶತಮಾನದಲ್ಲಿ ಸೋದೆ ಸದಾಶಿವರಾಯ ಅದರ ಜೀರ್ಣೋದ್ಧಾರ ಮಾಡಿ ದೊಡ್ಡದೊಂದು ಗುಡಿಯನ್ನು ರಚಿಸಿ ದಂತಿದೆ. ಮೊದಮೊದಲು ಕಟ್ಟಿಗೆಯ ದೇವಸ್ಥಾನ ಕಟ್ಟಿ ಅದರ ಮೇಲ್ಬಾಗಕ್ಕೆ ತಾಮ್ರದ ತಗಡು ಬಂಗಾರದ ಕಳಸ ಇಟ್ಟಂತೆ ಉಲ್ಲೇಖವಿದೆ. ತಾಮ್ರದ ತಗಡಿನ ತುಂಬ ಸೋದೆ ದೊರೆಗಳ ಇತಿಹಾಸ, ಶರಣರ ಕಾಲದಲ್ಲಿ ಸೋದೆ, ಉಳವಿಯ ಚರಿತ್ರೆಯಂತಹ ಇತಿಹಾಸ ಬರೆಸಿರುವ ಸಾಧ್ಯತೆ ಇದೆ. ಕಾಲಾಂತರದಲ್ಲಿ ಈ ತಾಮ್ರದ ತಗಡು ಮಾರಾಟಗೊಂಡಿವೆ. ಇಂದಿಗೂ ಉಳವಿ ದೇವಸ್ಥಾನದ ನವರಂಗದ ೪ ಸುಂದರ ಕಲಾತ್ಮಕ ಸುಳುಹು ಹೊಳಹುಗಳಿಂದ ಕೂಡಿದ ಉಳವಿ ಚೆನ್ನಬಸವೇಶ್ವರ ಮೂಲ ದೇವಸ್ಥಾನದ ಕಂಬಗಳು ಮೈಸೂರಿನ ಜಾನಪದ ಮ್ಯೂಸಿಯಂನಲ್ಲಿ ಭದ್ರವಾಗಿವೆ.
ಉಳವಿಯ ಚೆನ್ನಬಸವೇಶ್ವರರಿಗೆ ತೇರು, ಜಾತ್ರೆಯ ವ್ಯವಸ್ಥೆ ಮಾಡಿದಂತಿದೆ. ಈ ಭಾಗದ ಪಾಳೆಯಗಾರ ಹೆಂಜೇಯನಾಯಕ ನೆಂಬವನು ಚೆನ್ನಬಸವಣ್ಣನವರಿಗೆ ದಾನವಾಗಿ ಕೊಟ್ಟ ಬೃಹದಾಕಾರದ ಘಂಟೆ ದೇವಸ್ಥಾನದ ಆವರಣದಲ್ಲಿದೆ.
ಹೀಗೆ ಶರಣಕ್ಷೇತ್ರ ಉಳವಿ ಕಾಲದಿಂದ ಕಾಲಕ್ಕೆ ಅಭಿವೃದ್ಧಿ ಗೊಂಡು ಇಂದಿಗೂ ಉಳವಿ ಪರಿಸರದ ಚೆನ್ನಬಸವೇಶ್ವರ ದೇವಸ್ಥಾನ, ಹರಳಯ್ಯನ ಚಿಲುಮೆ, ಅಕ್ಕನಾಗಮ್ಮನ ಗವಿ, ವಿಭೂತಿ ಕಣಜ, ಆಕಳಗವಿ ರುದ್ರಾಕ್ಷಿ ಮಂಟಪ, ಕೆಳದಿ ಸ್ವಾದಿ ಅರಸರ ಕುರುಹುಗಳು, ಆತ್ಮಲಿಂಗ ಕಿನ್ನರಿ ಬ್ರಹ್ಮಯ್ಯನ ಹೊಳೆ, ಮಹಾಮನೆಯ ಮಂಗಳ ತಾಣ, ರಥೋತ್ಸವಗಳು ೧೨ನೆಯ ಶತಮಾನದ ಚೆನ್ನಬಸವಾದಿ ಶರಣರ ಸ್ಮರಣೆಯನ್ನು ನಿಚ್ಚಳವಾಗಿ ಮಾಡಿಕೊಡುವಂತಿವೆ. ಉಳವಿ ಕ್ಷೇತ್ರವನ್ನು ಶರಣ ಕ್ಷೇತ್ರವನ್ನಾಗಿಸಿ ಜಾಗತಿಕ ಮಟ್ಟದಲ್ಲಿ ಮೆರೆಯು ವಂತೆ ಮಾಡಿವೆ.
ಸೊಗಲ ಸೋಮೇಶ್ವರನ ಸಾನ್ನಿಧ್ಯದಿಂದ ಸೊಗಲಕ್ಷೇತ್ರವು ಶರಣ ಕ್ಷೇತ್ರವಾದರೆ, ಮುರುಗೋಡ ಅದರ ಮಹಾದ್ವಾರವೆಂಬಂತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಸೊಗಲ ಮತ್ತು ಮುರುಗೋಡ ತುಂಬ ಅನ್ನೋನ್ಯವಾಗಿವೆ. ಬೈಲುಹೊಂಗಲದಿಂದ ೬ ಕಿ.ಮೀ. ಸೊಗಲದಿಂದ ೩ ಕಿ.ಮೀ. ಅಂತರದ್ದು ಮುರುಗೋಡ, ಅಲ್ಲಿರುವ ಶರಣರ ಕುರುಹುಗಳು ಅಪಾರ, ಕಲ್ಯಾಣ ಕ್ರಾಂತಿಯಿಂದಾಗಿ ಉಳವಿಕ್ಷೇತ್ರದೆಡೆ ಮುನ್ನಡೆದ ಶರಣಸಮೂಹ ಮಾರ್ಗಮಧ್ಯದ ಮುರುಗೋಡದಲ್ಲಿ ಬಿಜ್ಜಳನ ಸೈನ್ಯ ಎದುರಿಸಿ, ಅಳಿಯ ಬಿಜ್ಜಳನಿಗೆ ಪ್ರಾಣರಕ್ಷಣೆ ನೀಡಿ, ಮುರಿಯ ತಿವಿದು, ಜಯ ಸಂಪಾದಿಸಿ ಶರಣರು ಮೆಟ್ಟಿದ ಧರೆ ಪಾವನವೆಂಬಂತೆ ಇಂದು ಮುರುಗೋಡ ಮಹಾಂತ ಸ್ವಾಮಿಗಳವರಿಂದ ಈ ಕ್ಷೇತ್ರ ಪಾವನವಾಗಿದೆ. ಮುರುಗೋಡದ ಮಹಾಂತ ದೀಕ್ಷಿತರು ಸೊಗಲದಲ್ಲಿ ತಮ್ಮ ಉಗ್ರತಪಸ್ಸನ್ನು ಆಚರಿಸಿದರೆ, ಗರಗದ ಮಡಿವಾಳಸ್ವಾಮಿಗಳವರು ಸೊಗಲದ ಸಿದ್ಧನ ಗವಿಯಲ್ಲಿ ಆತ್ಮಸಾಕ್ಷಾತ್ಕಾರ ಪಡೆದಿರುವರು. ಹೊಸೂರು, ನೇಸರಗಿ, ಅ೦ಬಡಗಟ್ಟಿ, ದೆಗಲೊಳ್ಳಿ, ನಿಚ್ಚಣಿಕೆ ಗರಗ ಮೊದಲಾದ ಗ್ರಾಮಗಳಲ್ಲಿ ಇಂದಿಗೂ ಶರಣರ ಕುರುಹು ಚಲ್ಲುವರಿದುದು ಕಡುಬರುತ್ತದೆ. ಎಲ್ಲಮ್ಮ ಗುಡ್ಡ ನವಿಲುತೀರ್ಥಗಳು ದೈವೀಕ್ಷೇತ್ರಗಳಾಗಿ ಬೆಳಗುತ್ತಿವೆ.