Previous ಸುತ್ತೂರು ಶರಣ ಕ್ಷೇತ್ರಗಳು Lingayat Piligram Centers Next

ಹಂಪಿ

ಹಂಪಿ ಕ್ಷೇತ್ರ

ಹಂಪಿ ಇಂದು ಅಂತರರಾಷ್ಟ್ರೀಯ ಪುಣ್ಯಕ್ಷೇತ್ರ. ವಿಶೇಷ ಅಭಿಧಾನದಿಂದ ಪ್ರಸಿದ್ಧವಾದ ಅಷ್ಟೇ ಪೂಜ್ಯನೀಯವಾದ ಮಹಾಪೂಜ್ಯ ಸ್ಥಳ. ಹಂಪಿ ಮತ್ತು ಪಂಪಾವಿರೂಪಾಕ್ಷನೆಂಬ ಪವಿತ್ರ ಹೆಸರುಗಳು ಈ ಕ್ಷೇತ್ರಗಳ ಮಹತ್ವ ಮತ್ತು ಪ್ರಭಾವಕ್ಕೆ ಪ್ರೇರಕವಾಗಿವೆ. ಶಿವಪ್ರಧಾನವಾದ ಈ ಮಹತ್ವದ ಕ್ಷೇತ್ರ ಪ್ರಾಚೀನ ಇತಿಹಾಸವನ್ನೊಳ ಗೊಂಡಿದೆ. ಭಾರತೀಯ ಚರಿತ್ರೆಯಲ್ಲಿ ಹಂಪಿ ವಿಶ್ವಪರಂಪರೆಯ ಸ್ಥಾನದಲ್ಲಿದೆ. ಸಪ್ತರ್ಷಿಗಳ ಅಭಿಪ್ರಾಯದಂತೆ ಹಂಪಿ ದಕ್ಷಿಣಕಾಶಿ ಎನಿಸಿ ಮೆರೆದ ಭೂಮಿ. ವಿರೂಪಾಕ್ಷ ಸ್ವಾಮಿ ದೇವಾಲಯ, ಹಿಂದೆ ಇರುವ ಬಂಡೆಗಲ್ಲು ಗುಹೆಗಳಲ್ಲಿ ಈಗಲೂ ಕಾಣಬರುವ ಸಮಕಾಲೀನ ವರ್ಣಚಿತ್ರಗಳು ಹಂಪೆಯ ಪ್ರಾಚೀನತೆ ಯನ್ನು ಸ್ಪಷ್ಟಪಡಿಸುವಂತಿವೆ.

ಶ್ರೀ ವಿರೂಪಾಕ್ಷಸ್ತು ವಿಶ್ವೇಶ್ವರಃ ತುಂಗಭದ್ರಾ ತು ಜಾಹ್ನವೀ
ಪಂಪಾಕಾಶಿ ಸಮಾದಿವ್ಯ ಭುಕ್ತಿ ಮುಕ್ತಿ ಪ್ರದಾಯಿನೀ ||

ಪರಶಿವನು ತಪಸ್ಸಿಗಾಗಿ ಆಯ್ಕೆ ಮಾಡಿಕೊಂಡ ಪ್ರದೇಶ ಹೇಮಕೂಟ. ವಿರೂಪಾಕ್ಷ ಗಿರಿಜೆಯರ ವಿವಾಹಮಂಟಪದ ಪ್ರದೇಶ. ಶಿವನ ಗಿರಿಜೆಯೆ ಇಲ್ಲಿ ಪಂಪಾಂಬಿಕೆ.

ಕ್ಷೇತ್ರ ಮಹತ್ವ

ಭೂ ಸರ್ವೆಕ್ಷಣ ಮತ್ತು ಪುರಾತತ್ವ ಉತ್ಪನನಗಳ ಸಾಕ್ಷಾಧಾರಗಳು ಹಾಗೂ ಶಿಲಾಯುಧಗಳು ಪ್ರಸ್ತುತ ಕ್ಷೇತ್ರದ ಪ್ರಾಚೀನತೆಯ ಬಗ್ಗೆ ಬೆಳಕು ಬೀರುವಂತಿವೆ. ರಾಮಾಯಣದ ಇತಿಹಾಸದೊಂದಿಗೆ ಬೆರೆತ ಶ್ರೀರಾಮಚಂದ್ರ ಹಂಪೆಯ ವಿರೂಪಾಕ್ಷಲಿಂಗ ಪೂಜಿಸಿದ ಉಲ್ಲೇಖ ಧಾರ್ಮಿಕ ಶ್ರೇಷ್ಠತೆಯನ್ನು ಸಾರುವಂತಿದೆ. ಹೇಮಕೂಟ ಬೆಟ್ಟ ಮತ್ತು ಮನ್ಮಥ ಕುಂಡಗಳ ಪಶ್ಚಿಮಕ್ಕೆ ನದಿಗೆ ಹೋಗುವ ಮಾರ್ಗದುದ್ದಕ್ಕೂ ದೇವಾಲಯ ಪ್ರಾಚ್ಯ ದಾಖಲೆಗಳು ದೊರಕುತ್ತಿವೆ. ಹಂಪೆ ಮೂಲತಃ ವೀರಭದ್ರನ ಉಪಾಸನೆಯ ಕೇಂದ್ರವಾಗಿದ್ದು ವೀರಭದ್ರನ ನಾಮಧೇಯವೇ ವಿರೂಪಾಕ್ಷಪುರವೆನಿಸಿದೆ. ಶೈವ ಶಾಖೆಗಳ ಲೊಂದಾದ ಪಾಶುಪತಪಂಥ ಕಾಳಾಮುಖ ಪಂಥಗಳು ನೆಲಸಿದ ಈ ಪ್ರದೇಶ ಅರುವತ್ತುಮೂವರ ಅಚಲಭಕ್ತಿ ನಕುಲೀಶ ಪಾಶುಪತರ ಸ್ಥಾವರಪೂಜೆ ದೇವಾಲಯ ನಿರ್ಮಾಣಗಳೆಂಬ ಆಚರಣೆಗಳನ್ನು ನಡೆಸುತ್ತ ಬಂದ ಶೈವಗುರುಗಳ ಪ್ರಸಿದ್ಧ ಕೇಂದ್ರ, ಹನ್ನೆರಡನೆಯ ಶತಮಾನದ ಶರಣರ ಲಿಂಗಾಯತ ಧರ್ಮದ ಪುನರುತ್ಥಾನವಾಗಿ ಆಚಾರ ವಿಚಾರಗಳಿಂದ ಲಿಂಗಾಯತದ ಪ್ರಭಾವಪೂರ್ಣ ಪ್ರತಿಭೆಯಾಗಿ ಹಂಪಿ ಕಂಗೊಳಿಸಿದೆ. ಶರಣರ ಶರಣ ಸಂಸ್ಕೃತಿಗೆ ಒಂದು ಮಹತ್ವದ ವೇದಿಕೆಯಾಗಿ ತಾತ್ವಿಕ ಪ್ರಾಯೋಗಿಕ ವಿಚಾರಗಳಿಗೆ ಒಂದು ನೆಲೆಯೆನಿಸಿದೆ.

ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣಕ್ರಾಂತಿಯಿಂದಾಗಿ ದಿಕ್ಕು ದಿಕ್ಕಿಗೆ ಚದುರಿ ಹೋಗಿದ್ದ ಶರಣರು ಶೈವಕ್ಷೇತ್ರವಾದ ಹಂಪಿಯತ್ತ ಆಗಮಿಸಿದ್ದರಿಂದ ಹಂಪಿ ಶರಣಕ್ಷೇತ್ರವಾಗಿ ಮೆರೆದಿದೆ. ಈ ಹಿನ್ನೆಲೆ ಯಲ್ಲಿ ಹಂಪಿ ಶರಣರ ಶರಣತತ್ವದ, ವಚನ ಸಾಹಿತ್ಯದ ಮತ್ತು ಸ್ವದೇಶಿ ಸಂವೇದನೆಯ ಪುನಶ್ಚತನ ಕೇಂದ್ರವೆನಿಸಿದೆ. ಶರಣರ ಸಮಗ್ರ ಕ್ರಾಂತಿಯ ಫಲ ಅಮೂಲ್ಯವಾದ ವಚನಸಾಹಿತ್ಯವನ್ನು ಹಂಪಿಯ ಪರಿಸರದಲ್ಲಿ ಅಡಗಿಸಿಡಲಾಯಿತು ಎಂದು ಕಾಲಜ್ಞಾನ ವಚನಗಳು ಸಾರಿವೆ. ಹಂಪೆ 'ಪರತರ ಶಿವಾನುಭವಿಗಳ ಅಪರಿಮಿತ ಗೃಹಂ ಪರಿಕಿಪರಿಗಿದು ವಿಜಯಕಲ್ಯಾಣ'ವೆನಿಸಿತು. ಹಿಂದೆ ಕಲ್ಯಾಣದಲ್ಲಿ ನಡೆದಿದ್ದ ವಚನಸಾಹಿತ್ಯ ಸೃಷ್ಟಿಯ ಕಟ್ಟುವಿಕೆಯ ಮಹತ್ವದ ಕಾರ್ಯದ ಮುಂದುವರಿಕೆಯಾಗಿ ವಿಜಯಕಲ್ಯಾಣ ಶರಣಸನ್ನಿಧಾನ ದಿಂದ ವಿಜಯಕಲ್ಯಾಣವೆನಿಸಿದೆ.

ಪಂಪಾಕ್ಷೇತ್ರದ ಸಾಹಿತ್ಯ ಕೊಡುಗೆ

ವಿಜಯನಗರದ ಪ್ರೌಢದೇವರಾಯನ ಆಳ್ವಿಕೆಯ ಕಾಲಾವಧಿ, ಲಿಂಗಾಯತ ಸಾಹಿತ್ಯ, ಧರ್ಮ, ಸಂಸ್ಕೃತಿಗಳ ದೃಷ್ಟಿಯಿಂದ ತುಂಬ ಮಹತ್ವದ ಘಟ್ಟ. ವಚನ ಸಾಹಿತ್ಯದ ಪುನರುಜ್ಜಿವನ, ಹೊಸ ಸಾಹಿತ್ಯ ಸೃಷ್ಟಿ, ನೂತನ ಸಾಹಿತ್ಯಪ್ರಕಾರಗಳ ಹುಟ್ಟು, ಹಳೆಯ ಸಾಹಿತ್ಯ ರೂಪಗಳ ಮರುಹುಟ್ಟು, ವಚನ ಮತ್ತು ಕಾವ್ಯಗಳಿಗೆ ಟೀಕೆ, ಟಿಪ್ಪಣಿ, ವ್ಯಾಖ್ಯಾನ ರಚನೆ, ಸ್ಥಳಕಟ್ಟು ಜೋಡಣೆ, ತಾತ್ವಿಕ ವಿವರಣೆ ವಿವೇಚನೆ ಚಳವಳಿಯ ರೀತಿಯಲ್ಲಿ ಮುಂದುವರೆದವು. ಈ ಕಾರಣದಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಂಪಿಯ ಇತಿಹಾಸ ಒಂದು ವೈಶಿಷ್ಟ್ಯಪೂರ್ಣ ಯುಗವೆಂದು, ಲಿಂಗಾಯತ ಸಾಹಿತ್ಯದ ಸುವರ್ಣಯುಗ, ವಸಂತಕಾಲ ವೆಂದು ಕರೆಸಿಕೊಂಡಿದೆ.

ವಿಜಯನಗರದ ದೊರೆಗಳು ಹಂಪೆಯ ಅಧಿದೈವ ವಿರೂಪಾಕ್ಷನನ್ನು ಕುಲದೈವವನ್ನಾಗಿಸಿಕೊಂಡಿದ್ದರು. ವಿರೂಪಾಕ್ಷನ ದೈವತ್ವದಲ್ಲಿ ಕನ್ನಡ ಕವಿ ಹರಿಹರನದು ಅಚಲವಾದ ವಿಶ್ವಾಸ. ಇಲ್ಲಿಯ ಒಂದು ಶಾಸನ 'ಪಂಪಾ ವಿರೂಪಾಕ್ಷ ಸಾಕ್ಷಾತ್ ಕುಲ ಪರಮದೈವ'ವೆಂದು ಹೆಸರಿಸಿದೆ. ಅಂತೆಯೇ ಹರಿಹರ ತನ್ನನ್ನು 'ಪರಮಾನಂದಾ ಪಂಪಾಪುರದರಸನ ಪಂಪಾವಿರೂಪಾಕ್ಷ ಸಾಕ್ಷಾತ್ ಸುಪುತ್ರಂ' ಎಂದು ಕರೆದುಕೊಂಡಿರುವನು. ವಿಜಯನಗರದ ದೊರೆ ೨-ನೆಯ ದೇವ ರಾಯನ ದಂಡನಾಯಕ (ಕ್ರಿ.ಶ. ೧೪೨೪-೪೬) ಲಕ್ಕಣ್ಣ ದಂಡೇಶನ ಲೋಕೋತ್ತರ ಕೃತಿ ಶಿವತತ್ವ ಚಿಂತಾಮಣಿಯಲ್ಲಿ ವಿಜಯನಗರವನ್ನು ವಿಜಯಕಲ್ಯಾಣ, ವಿಜಯಕಲ್ಯಾಣಪುರ ಎಂದು ಕರೆದಿರುವಲ್ಲಿ ಔಚಿತ್ಯವಡಗಿದೆ. ಶರಣಕ್ಷೇತ್ರ ಹಂಪಿ ಶರಣ ಸಂಸ್ಕೃತಿಗೆ ಒಂದು ಮಹತ್ವದ ವೇದಿಕೆಯಾಗಿ, ತಾತ್ವಿಕ ಪ್ರಾಯೋಗಿಕ ವಿಚಾರಗಳಿಗೆ ಒಂದು ನೆಲೆಯಾಗಿದ್ದು ಕಲ್ಯಾಣನಗರದಂತೆ, ಹದಿನಾಲ್ಕು ಹದಿನೈದನೆಯ ಶತಮಾನದಲ್ಲಿ ಹಂಪಿ ಲಿಂಗಾಯತಧರ್ಮದ ಪುನಶ್ಚತನಯುಗಕ್ಕೆ ಬುನಾದಿ ಹಾಕಿದೆ.

ಮೈಸೂರು ಜಿಲ್ಲೆಯ ಹರದನಹಳ್ಳಿಯಲ್ಲಿದ್ದ ಲಿಂಗಾಯತ ಮಠಾಧಿಪತಿ ಗೋಸಲ ಚೆನ್ನಬಸವೇಶ್ವರರು 'ಕ್ಷೇತ್ರಜ್ಞ ಸುಮನೋವಾದ' ಎಂಬ ಸಂಸ್ಕೃತ ಕೃತಿಯನ್ನು ರಚಿಸಿ ತಮ್ಮ ವಿದ್ವತ್ತಿನಿಂದ ಖ್ಯಾತರಾಗಿದ್ದರು. ಇವರ ಶಿಷ್ಯರಾದ ತೋಂಟದ ಸಿದ್ಧಲಿಂಗಯತಿಗಳು (ಸು. ೧೫೦೦) ಏಳುನೂರು ವಿರಕ್ತರು, ಮೂರು ಸಾವಿರ ಜಂಗಮರೊಂದಿಗೆ ಇರುತ್ತಿದ್ದರು. ಗೂಳೂರು ಸಿದ್ದವೀರಣಾಚಾರ್ಯ, ಬೋಳ ಬಸವೇಶ್ವರ, ಗುಮ್ಮಳಾಪುರದ ಸಿದ್ಧಲಿಂಗ, ಕಟ್ಟಿಗೆಹಳ್ಳಿ ಸಿದ್ಧಲಿಂಗ, ಸ್ವತಂತ್ರ ಸಿದ್ಧಲಿಂಗ, ಮುರಿಗೆಯ ಶಾಂತವೀರ, ಕಂಬಳಿಯದೇವ, ಎಡದೊರೆ ಗುರುಸಿದ ವೀರ, ಇವರ ಶಿಷ್ಯವರ್ಗದಲ್ಲಿ ಪ್ರಮುಖರು. ಇವರು ಹಂಪೆಯಲ್ಲಿ ಕೆಲಕಾಲ ನಿಂತು ಅಲ್ಲಿನ ವಿರಕ್ತರಿಗೂ ಲಿಂಗಾಯತರಿಗೂ ಸ್ಫೂರ್ತಿ ನೀಡಿದರು.

ಪ್ರೌಢರಾಯನ ಕಾಲಕ್ಕೆ ಲಿಂಗಾಯತ ಧರ್ಮವು ಅತ್ಯುನ್ನತ ಸ್ಥಿತಿಯಲ್ಲಿದ್ದುದು ಗೋಚರವಾಗುತ್ತದೆ. ದೊರೆ ಹಾಗೂ ಅವನ ಮಂತ್ರಿಗಳು ಅನೇಕ ದೇವಾಲಯ ನಿರ್ಮಿಸಿದ್ದಲ್ಲದೆ ಜೀರ್ಣೋದ್ಧಾರ ಕಾರ್ಯ ಕೈಕೊಂಡಿರುವುದು, ಲಕ್ಕಣ್ಣ ದಂಡೇಶ 'ಶಿವಸಮಯ ಸಾರ್ವ ಭೌಮ'ನೆನಿಸಿದ್ದಲ್ಲದೆ 'ಜಂಗಮ ದಾಸೋಹಿ' ಎನಿಸಿರುವನು. ಲಕ್ಕಣ್ಣ, ಭಂಡಾರ ಜಕ್ಕಣಾಮಾತ್ಯ, ಕಲೆಹದ ಕೇತಿಸೆಟ್ಟಿ, ಮೊದಲಾದವರು ಲಿಂಗಾಯತದ ಅಭಿವೃದ್ಧಿಗೆ 'ಲಕ್ಕಸಂಖ್ಯೆಯ ವಿತ್ತಮಂ' ವೆಚ್ಚ ಮಾಡಿದರು' ಎರಡನೆಯ ದೇವರಾಯ, ಲಿಂಗಾಯತ ಕವಿಗಳಿಗೆ ವಚನಕಾರರಿಗೆ ಆಶ್ರಯ ನೀಡಿದಲ್ಲದೆ ಅಂದು ರಾಜಗುರುವಾಗಿದ್ದ ಕಾಶೀವಿಲಾಸ ಮಲ್ಲಿಕಾರ್ಜುನ ಕ್ರಿಯಾಶಕ್ತಿ ಯತಿಯ ಸಮ್ಮುಖದಲ್ಲಿ ಎಷ್ಟೋ ಲಿಂಗಾಯತ ದೇವಾಲಯ ಗಳಿಗೆ ದತ್ತಿ ಕೊಟ್ಟಿರುವರು. ಈತನ ಕಾಲದಲ್ಲಿ ಚಾಮರಸಕವಿ, ಕಲ್ಲು ಮಠದ ಪ್ರಭುದೇವರು, ನಿರ್ವಾಣಿ ಬೋಳೇಶ, ಬತ್ತಲೇಶ್ವರ ಮುಂತಾದ ನೂರೊಂದು ವಿರಕ್ತರು ಇದ್ದರೆಂದು ಹೇಳಲಾಗಿದೆ.

ಶಿವತತ್ವಚಿಂತಾಮಣಿಯ ಲಕ್ಕಣ್ಣ ದಂಡೇಶ ಹಂಪಿಯಲ್ಲಿ ಪ್ರಸನ್ನ ವಿರೂಪಾಕ್ಷ ದೇವಸ್ಥಾನ, ವಿರೂಪಾಕ್ಷಪುರ ಕಟ್ಟಿಸಿ ಸುವರ್ಣ ಕಲಶದಿಂದ ಪರಿಶೋಭಿಸುವ ಗೋಪುರ, ಮನ್ಮಥಕುಂಡ, ಕೆರೆ, ಉದ್ಯಾನವನ ಮುಂತಾದವನ್ನು ಕಟ್ಟಿಸಿ ತನ್ನ ಒಡೆಯ ದೇವರಾಯನಿಗೆ ಶ್ರೇಯಸ್ಸಾಗಲೆಂದು ಶ್ರೀ ವಿರೂಪಾಕ್ಷದೇವರಿಗೆ ದೀಪಾರಾಧನೆ, ನಿತ್ಯೋತ್ಸವ, ಪಕೋತ್ಸವ, ಮಾಸೋತ್ಸವ, ರಥೋತ್ಸವ, ಮುಂತಾದ ಮಂಗಲಕಾರ್ಯಗಳು ನಿರಂತರ ನಡೆಯಲು ಮುಳುಸೀಮೆಗೆ ಸಲುವ ವಿರೂಪಾಕ್ಷಪುರ, ಗುಟ್ಟೇಹಳ್ಳಿ, ಕುಂಬೇಬಂಡೆ, ತರಪಲ ಗ್ರಾಮಗಳನ್ನು ಧಾರಾಪೂರ್ವಕ ಕೊಟ್ಟಿರುವನು.

ಪಂಪಾಕ್ಷೇತ್ರದ ತೀರ್ಥಗಳು

ಪಂಪಾಕ್ಷೇತ್ರದ ಪೂರ್ವದ್ವಾರದಲ್ಲಿ ಕಿನ್ನರೇಶ್ವರ, ದಕ್ಷಿಣ ದ್ವಾರದಲ್ಲಿ ಜಂಬುಕೇಶ್ವರ, ಪಶ್ಚಿಮದ್ವಾರದಲ್ಲಿ ಸೋಮೇಶ್ವರ, ಉತ್ತರದಲ್ಲಿ ವಾಣಿಭದ್ರೇಶ್ವರರಿದ್ದು ಮಧ್ಯದಲ್ಲಿ ಪರಮತೇಜೋ ರಾಶಿ ವಿರೂಪಾಕ್ಷನು ಶೋಭಿಸಿರುವನು. ಒಂದೊಂದು ದ್ವಾರವೂ ಒಂದೊಂದು ಯೋಜನಾಂತರ ಪರಿಮಿತವಾಗಿವೆ. ಅಬಳವೇದದ ಉಕ್ಕಡ, ಉಪನಿಷತ್ತುಗಳ ಡಂಗುರ, ಶಾಸ್ತ್ರಕೋಟಿಗಳ ಘರವಟಿಕೆ, ತರ್ಕದ ಜಯಭೇರಿ, ಸಕಳಾಗಮಗಳ ನಿಸ್ಸಾಳಧ್ವನಿ, ಮಂತ್ರದೇವತೆಗಳ ಉಗ್ರಡಣೆ, ಪಂಚಾಕ್ಷರಿಯ ಪಹರೆಯಿಂದ ಹಂಪೆ ಶೋಭಿಸುತ್ತಿತ್ತು.

ಹಂಪೆಯ ಮನ್ಮಥತೀರ್ಥದಲ್ಲಿ ಸೋಮತೀರ್ಥ, ಮಹಾಕಾಳ ತೀರ್ಥ, ತಾರಾತೀರ್ಥ, ಸೂರ್ಯತೀರ್ಥ, ವತ್ಸತೀರ್ಥ, ಕಾವ್ಯತೀರ್ಥ, ಮಾರ್ಕಂಡೇಶಯತೀರ್ಥ, ಗಜಾಶ್ವತೀರ್ಥ, ಬ್ರಹ್ಮತೀರ್ಥ ಮುಂತಾದ ಹನ್ನೊಂದು ತೀರ್ಥಕ್ಷೇತ್ರಗಳಿದ್ದು ತುಂಗಭದ್ರೆಯ ತಟದಲ್ಲಿ ವಸಿಷ್ಠಾಶ್ರಮ ಹಾಗೂ ಬದರಿಕಾಶ್ರಮ ಮತ್ತು ಅಲ್ಲಿ ಪಾಪವಿನಾಶಿನೀ ತೀರ್ಥ, ದಾಶಶ್ವ ಮೇಧಾವಿಧಾನದ ತೀರ್ಥಗಳ ಬಗ್ಗೆ ಪ್ರಾಚೀನ ಕಾವ್ಯಗಳು ತಿಳಿಸಿವೆ.

ಪಂಪಾವಿರೂಪಾಕ್ಷನ ಸಮೀಪದಲ್ಲಿ ತುಂಗಭದ್ರೆಯ ದಂಡೆಯ ಮೇಲೆ ಶ್ರೀ ತೋಂಟದ ಸಿದ್ಧಲಿಂಗಯತಿಗಳು ಶಿವಯೋಗ ಸಮಾಧಿಯಲ್ಲಿ ಹಲವು ದಿನ ತಂಗಿದ್ದರು. ಪ್ರೌಢ ದೇವರಾಯನು ಅವರ ದರ್ಶನ ಪಡೆದು, ಹಂಪೆಯ ವಿರೂಪಾಕ್ಷೇಶ್ವರ ರಥೋತ್ಸವ ಕಾಲದಲ್ಲಿ ಶ್ರೀ ತೋಂಟದ ಸಿದ್ದಲಿಂಗಯತಿಗಳ ಪರಂಪರೆಯ ಗುರುಗಳನ್ನು ಸನ್ಮಾನಿಸಿ ಅವರನ್ನು ಬೇರೊಂದು ರಥದಲ್ಲಿ ಕುಳ್ಳಿರಿಸಿ ಮೆರೆಯಿಸಿದ ಪ್ರಸಂಗ ರೋಮಾಂಚನಕಾರಿಯಾಗಿದೆ. ತೋಂಟದ ಸಿದ್ಧಲಿಂಗರ ಶಿಷ್ಯ ಘನಲಿಂಗಿದೇವರ ವಚನ, ನಿಜಗುಣ, ಚಂದಿಮರಸರು, ಕರಸ್ಥಲ ನಾಗಿದೇವರೊಳಗಾದ ಎಲ್ಲ ವಿರಕ್ತರು ಆವಕ್ರಿಯೆಯಲ್ಲಿ ಆಚರಿಸಿ ಲಿಂಗೈಕ್ಯರಾದರೆಂದು ಕೆಟ್ಟು ನುಡಿವ ಭವಿ ಹೇತುಗಳು ನೀವು ಕೇಳಿರೋ' ಎಂಬ ವಚನದಲ್ಲಿ ವಿದ್ಯಾಭಿಮಾನಿ ವಿರಕ್ತರು ಜಕ್ಕಣಾರ್ಯರ ಏಕೋತ್ತರಶತಸ್ಥಲವನ್ನು ವಿಜಯನಗರ ದಲ್ಲಿ ಮೆರವಣಿಗೆ ಮಾಡಿದ್ದರಂತೆ. ಪ್ರೌಢರಾಯನ ಕಾಲದಲ್ಲಿ ನಡೆದ ಲಿಂಗಾಯತಧರ್ಮದ ಚಟುವಟಿಕೆಗಳ ಫಲವಾಗಿ ಶಿವಮೊಗ್ಗ ಜಿಲ್ಲೆಯ ತೆಂಗಿನಪುರದ ವೀರಭದ್ರ ದೇವಾಲಯದ ಶಕ ೧೩೪೦ ವಿಳಂಬ ಸಂವತ್ಸರದ ಒಂದು ಶಾಸನ ದೊರೆಯನ್ನು 'ವೀರಶೈವಾಗಮಸಾರ ಸಂಪನ್ನ' ಎಂದು ಕರೆದು ಗೌರವಿಸಿದೆ.

ಶರಣಕ್ಷೇತ್ರ ಹಂಪಿಯಲ್ಲಿ ಲಿಂಗಾಯತ ಧರ್ಮದ ಕುರುಹುಗಳು

ಶರಣಕ್ಷೇತ್ರ ಹಂಪಿಯಲ್ಲಿ ಇಂದಿಗೂ ಲಿಂಗಾಯತದ ಕುರುಹು ಗಳಾಗಿ ಲಿಂಗಾಯತ ಮಠಗಳಲ್ಲಿ ವಿರೂಪಾಕ್ಷಪಂಡಿತನ ಮಠ, ಚಾಮರಸನ ಮಠ (ಆಶ್ರಮ), ಹಾನುವಾಳಮಠ, ಪ್ರಭುದೇವರ ಕಲ್ಲು ಮಠ, ಕಾಶಿಮಠ, ಅಥವಾ ಕರಿಸಿದ್ದೇಶ್ವರ ಮಠ ಕೊಟ್ಟೂರು ಸ್ವಾಮಿ ಮಠ ಗಳೆಂಬ ಹಿರಿಯ ಮಠಗಳಿವೆ. ಶಿಲ್ಪಗಳಲ್ಲಿ ಸರ್ವಾಂಗ ಲಿಂಗ, ಲಿಂಗಕ್ಕೆ ಲಿಂಗವೇ ಪೀಠ ಆಗಿರುವ ಶಿಲ್ಪಾಕೃತಿ, ವೀರಭದ್ರನ ಮೂರ್ತಿಶಿಲ್ಪ ಅಷ್ಟತನುಮೂರ್ತಿ ಶಿವ ಪಂಪಾವಿರೂಪಾಕ್ಷ, ಗಂಧದ ಬಸವಯ್ಯನು ನಿರ್ಮಿಸಿದ ಶಿಲ್ಪಗಳು, ಮೂರು ಮುಖಗಳ ಬಸವ ಮೂರ್ತಿ, ಜಂಬುಕೇಶ್ವರ ದೇವಾಲಯದ ಶಿಲ್ಪಿಗಳು, ಮೇರೆಕಲ್ಲು ಗಳು, ಗಿರಿಜಾ ಕಲ್ಯಾಣ ಕಾಮದಹನದ ವರ್ಣಚಿತ್ರಗಳು ಜಂಬುನಾಥ ಸ್ವಾಮಿ ದೇವಾಲಯ ಮತ್ತು ಎಮ್ಮೆ ಬಸವೇಂದ್ರ, ಕೋಳೂರು ಕೊಡಗೂಸು ಚೆನ್ನಕ್ಕ, ತಿರುವಣ್ಣಿಯ ಮೀನುಗಾರ ಅತಿಭಕ್ತ, ಕುಂಬಾರ ಗುಂಡಯ್ಯ, ಮಾನಕಂಜರಾಯಿ, ಆತನ ಮಗಳು ಸೋಮಪ್ರಭಾ ದೇವಿ, ವೀಣೆ ಕಾಯಕದ ಮಾದರಸ, ಸತ್ಯಕ್ಕ, ಬೇಡರಕಣ್ಣಪ್ಪ, ಏಕಾಂತದ ರಾಮಯ್ಯ, ಗುಂಡಬ್ರಹ್ಮಯ್ಯ ಇವರ ವಿಗ್ರಹಗಳು ಹಂಪಿ ಕ್ಷೇತ್ರದಲ್ಲಿವೆ.

ಹಂಪಿಯ ಪ್ರಾಚ್ಯ ಅವಶೇಷಗಳು

ಹಂಪೆಯ ಅತ್ಯಂತ ಪ್ರಾಚೀನ ದೇವಸ್ಥಾನವೆಂದರೆ ಪಂಪಾ ವಿರೂಪಾಕ್ಷ ತೀರ್ಥಕ್ಷೇತ್ರ. ಈ ದೇವಾಲಯದ ಪ್ರಾಚೀನ ಉಲ್ಲೇಖ ಕ್ರಿ.ಶ. ೯೮೮ರ ಹಂಪಿಯ ಶಾಸನ, ಕ್ರಿ.ಶ. ೧೧೯೯ರ ವೇಳೆಗೆ ಇಲ್ಲಿ ವಿರೂಪಾಕ್ಷ ದೇವಾಲಯದೊಂದಿಗೆ ಹಂಪಾದೇವಿ, ಭೈರವಗೃಹ ಹಾಗೂ ಬ್ರಹ್ಮಶ ಸದನಗಳಿದ್ದವು. ಗುಡಿಯ ಹಿಂದೆ ರಾಚಮಲ್ಲೇಶ್ವರನ ಗುಡಿ ಹಾಗೂ ಬಲಕ್ಕೆ ಸತ್ರ ಈಗಲೂ ಇವೆ.

ವಿರೂಪಾಕ್ಷ ದೇವಾಲಯ ಹೇಮಕೂಟದ ಉತ್ತರ ತುಂಗ ಭದ್ರೆಯ ದಕ್ಷಿಣ ತುದಿಯಲ್ಲಿದೆ. ಈ ಗುಡಿಗೆ ಎರಡು ಆವರಣಗಳಿದ್ದು ಒಂಬತ್ತು ಅಂತಸ್ತುಳ್ಳ ಮೊದಲ ಗೋಪುರವನ್ನು 'ಬಿಟ್ಟಪ್ಪಯ್ಯ ಗೋಪುರ'ವೆಂದು ಕರೆದರೆ, ವಿರೂಪಾಕ್ಷ ವಸಂತೋತ್ಸವ ಚಂಪೂವಿ ನಲ್ಲಿ ಶ್ರೀ ವಿಷ್ಟದೇವ ಗುರು ಗೋಪುರ' ಎಂದು ಕರೆದಿರುವುದುಂಟು. ಪೂರ್ವಕ್ಕಿರುವ ಗೋಪುರ ಪ್ರವೇಶ ಮಾಡಿದರೆ, ಮೊದಲ ಆವರಣ ದಲ್ಲೇ ಅನೇಕ ಮಂಟಪಗಳಿವೆ. ಬಲಕ್ಕೆ ಪೂಜಾಮಂಟಪವಿದೆ. ಸನಿಹದಲ್ಲಿ ಮನ್ಮಥ ಕುಂಡವಿದೆ. ಈ ಗೋಪುರದ ಮುಂದಿನ ಮೂರಂತಸ್ತಿನ ಚಿಕ್ಕ ಗೋಪುರ 'ರಾಯಗೋಪುರ'ವೆನಿಸಿದೆ. ಕ್ರಿ.ಶ. ೧೫೧೦ರಲ್ಲಿ ಕೃಷ್ಣದೇವರಾಯ ದೊರೆ ತನ್ನ ಪಟ್ಟಾಭಿಷೇಕದ ಸಮಯದಲ್ಲಿ ಕಟ್ಟಿಸಿದ ಕಟ್ಟಡವಿದು. ನಂದಿಮಂಟಪದ ಮುಂದೆ ಮಹಾರಂಗ ಮಂಟಪ ಮಹಾಮಂಟಪದ ಮಾಳಿಗೆಯ ಒಳಮೈ ಕಲಾವಿನ್ಯಾಸದಿಂದ ಒಳಗೊಂಡಿವೆ. ಪೂರ್ವಭಾಗದಲ್ಲಿ ಮೆರವಣಿಗೆಯ ವರ್ಣಚಿತ್ರದ ಯತಿ ಬಹುಶಃ ಕೃಷ್ಣದೇವರಾಯನ ರಾಜಗುರು ವ್ಯಾಸರಾಯ ತೀರ್ಥರಾಗಿರುವ ಸಾಧ್ಯತೆ ಇದೆ.

ಗರ್ಭಗೃಹಕ್ಕೆ ದಕ್ಷಿಣಾಪಥವಿದೆಯಾದರೂ ಜನಸಾಮಾನ್ಯರಿಗೆ ಪ್ರವೇಶ ನಿಷೇಧ. ಗರ್ಭಗೃಹದಲ್ಲಿ ಪ್ರತಿಷ್ಠಾಪಿತವಾಗಿರುವ ಲಿಂಗವೇ ಹೇಮಕೂಟ ನಿವಾಸಿಯಾದ ಪಂಪಾವಿರೂಪಾಕ್ಷ. ಪಂಪಾ ಮಹಾತ್ಮೆಯ ಪ್ರಕಾರ ಪಂಪಾದೇವಿಯ ತಪಸ್ಸಿಗೆ ಮೆಚ್ಚಿದ ಶಿವ ಅವಳನ್ನು ವರಿಸಿ ಇಲ್ಲಿಯೆ ನೆಲೆನಿಂತ ಸ್ಮಾರಕವೇ ಪಂಪಾಕ್ಷೇತ್ರವೆನಿಸಿದೆ. ವಿರೂಪಾಕ್ಷ ಗುಡಿಯ ಹೊರಗೋಡೆಯ ಮೇಲೆ ವಿಜಯನಗರ ಕಾಲದ ವರ್ಣಚಿತ್ರ ಗಳಿವೆ. ರಾಜಗೋಪುರದ ಒಳಪ್ರವೇಶದ ಎಡಕ್ಕೆ ಸೂರ್ಯ ನಾರಾಯಣ, ಮುಕ್ತಿ ನರಹಿಂತ, ಪಾತಾಳೇಶ್ವರ ಬಲಕ್ಕೆ ಲಕ್ಷ್ಮೀ ನರಸಿಂಹ, ಮಹಿಷಾಸುರ ಮರ್ದಿನಿ ಮುಂತಾದ ಮಂದಿರಗಳಿವೆ. ಎಡಬದಿಯ ನವದುರ್ಗೆಯರು ಚಾಲುಕ್ಯರ ಸಪ್ತಮಾತೃಕೆಯರು, ಮೊಗಸಾಲೆಯಲ್ಲಿ ಸರಸ್ವತಿಪುಸ್ತಕ, ವೀಣಾಪಾಣಿ ಮುಂದೆ ಮಹಿಷಾ ಸುರಮರ್ದಿನಿ, ಪಶ್ಚಿಮಕ್ಕೆ ವಿದ್ಯಾರಣ್ಯರ ಗುಡಿ ಇದೆ.

ವಿರೂಪಾಕ್ಷದೇವರ ಉತ್ತರಕ್ಕೆ ಪಂಪಾದೇವಿ ಹಾಗೂ ಭುವನೇಶ್ವರಿಯ ಮಂದಿರಗಳಿವೆ. ಭುವನೇಶ್ವರಿ ಗರ್ಭಗುಡಿಯ ಮೇಲ್ಬಾವಣಿ ಮೇಲೆ ನವಗ್ರಹಗಳ ಕೆತ್ತನೆ ತುಂಬ ಸುಂದರವಿದೆ. ಗರ್ಭಗೃಹದ ಬಾಗಿಲು ಬೆರಗುಗೊಳಿಸುವ ಕಲಾವಿನ್ಯಾಸದಿಂದ ಕೂಡಿದೆ. ಸೋಪಾನದ ಕೆಳಗೆ ಗುಲಗಂಜಿ ಮಾಧವಗುಡಿಯ ಮಾಧವ ವಿಗ್ರಹ ಸುಂದರಶಿಲ್ಪ. ಇಲ್ಲಿಂದ ಹೊರಗೆ ಮಹಿಷಾಸುರ ಮರ್ದಿನಿ ಹಾಗೂ ಹೇಮಗರ್ಭ ಗಣಪ, ವಿರಾಜಿಸುವ ಕನಕಗಿರಿ ಗೋಪುರ, ಅದರ ಬಲಭಾಗದಲ್ಲಿರುವುದೇ ಮನ್ಮಥಕುಂಡ, ಶಿವನ ಮತ್+ ಮುಖವೇ ಮನ್ಮುಖವಾಗಿದ್ದು ಈಗ ಮನ್ಮಥಕುಂಡವಾಗಿದೆ. ಪಂಪಾದೇವಿಯ ಫಲ ಪುಷೋತ್ಸವ ದಿನ ಕುಂಡದಲ್ಲಿ ತೆಪ್ಪ ತೇಲಿ ಬಿಡುವುದು. ಈ ಕುಂಡದ ಎದುರು ಷಣ್ಮುಖಸ್ವಾಮಿ, ಶಿವಮಂದಿರಗಳಿವೆ. ಮೊದಲು ಕಟ್ಟಿದ ರಾಯ ರಾಚಮಲ್ಲ ಬ್ರಹ್ಮಶ ಸದನ ಇಲ್ಲಿದ್ದು ಈಗ ಕಣ್ಮರೆಯಾಗಿದೆ.

ಉತ್ತರಗೋಪುರ ಪೂರ್ವಾಭಿಮುಖ ಚಿಕ್ಕ ದಾರಿಯಲ್ಲಿ ನಡೆದರೆ ಪೂರ್ವದ ಮಹಾಗೋಪುರದತ್ತ ಬರುತ್ತೇವೆ. ಈ ಬೀದಿಯ ಇಕ್ಕೆಲಗಳಲ್ಲಿಯ ಮಂಟಪಗಳು ಆಗಿನ ಕಾಲಕ್ಕೆ ಪ್ರವಾಸಿಗಳ ವಾಸ ಸ್ಥಾನಗಳಾಗಿದ್ದವು. ಈಗ ಇಂದಿನವರ ಅತಿಥಿಗೃಹಗಳೂ ಆಗಿವೆ. ಇಲ್ಲಿಯೇ ಮಾತಂಗ ಪರ್ವತಾಭಿಮುಖವಾಗಿ ಸಾಗಿದರೆ ಅನತಿದೂರ ದಲ್ಲಿ ಬಹುಶಃ ಕೃಷ್ಣದೇವರಾಯನ ತಂಗುದಾಣವಾಗಿರುವ ಸಾಧ್ಯತೆ ಇದೆ. ಮಂಟಪದ ಹಿಂದೆ ಮಹಾನಂದಿಮೂರ್ತಿ ಇದೆ. ವಿಜಯನಗರ ಕಾಲಕ್ಕೆ ವಿರೂಪಾಕ್ಷ ಉತ್ಸವ ರಥ ಇಲ್ಲಿಯವರೆಗೂ ಬರುವ ರೂಢಿ ಇತ್ತು.

ಇಲ್ಲಿಯ ಮೂರು ಮಾರ್ಗಗಳಲ್ಲಿ ಎಡದ ದಾರಿ ಕೋದಂಡ ರಾಮನ ದೇವಸ್ಥಾನ, ವಿಠಲಗುಡಿ ಅಚ್ಯುತನ ಗುಡಿಯತ್ತ ಸಾಗಿದರೆ, ಮತ್ತೊಂದು ದಾರಿ ಮಾತಂಗಪರ್ವತದತ್ತ ಕರೆದೊಯ್ಯುತ್ತದೆ. ಪರ್ವತಶ್ರೇಣಿ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡುತ್ತವೆ. ಪರ್ವತಾಗ್ರದಿಂದ ಇನ್ನೊಂದೆಡೆ ವಿರೂಪಾಕ್ಷಪುರ, ಮಗುದೊಂದಿಗೆ ಕೃಷ್ಣಾಪುರ, ಮತ್ತೊಂದೆಡೆ ಅಚ್ಯುತಾಪುರ, ವಿಠಲಾಪುರ ಕಣ್ಮನ ತಣಿಸುವಂತಹ ಪರ್ವತಾಗ್ರವೇ ಇಡೀ ವಿಜಯನಗರದ ಪಕ್ಷಿನೋಟ ಮಾಡಿಸುತ್ತದೆ.

ವಿರೂಪಾಕ್ಷ ದೇವಾಲಯದ ಉತ್ತರಕೂಟವೇ ಹೇಮಕೂಟ. ಇದು ಕೋಟೆಗೋಡೆಯಿಂದ ಸುತ್ತುವರಿಯಲ್ಪಟ್ಟಿದ್ದು ದಕ್ಷಿಣ ಮತ್ತು ಪೂರ್ವದಿಕ್ಕುಗಳಲ್ಲಿ ಪ್ರವೇಶದ್ವಾರ ಹೊಂದಿದೆ. ಹೇಮಕೂಟ ದೊಡ್ಡ ದೊಡ್ಡ ಬಂಡೆಗಲ್ಲುಗಳಿಂದ ನಿರ್ಮಿತವಾಗಿದೆ. ಬಂಡೆಗಲ್ಲುಗಳ ಮೇಲೆ ಕಲ್ಲು ಜೋಡಿಸಿ ಕಟ್ಟಿದ ಗುಡಿಗಳು ಆರೇಳು ಶತಮಾನಗಳಿಂದ ಸುಭದ್ರವಾಗಿ ನಿಂತುಕೊಂಡಿವೆ. ಹೇಮಕೂಟದ ದಕ್ಷಿಣಕ್ಕೆ ಕಡಲೆಕಾಳು ಗಣಪತಿ, ಆಕಾರದಲ್ಲಿ ದೊಡ್ಡದಾದರೂ ಶ್ರೇಷ್ಠ ಕಲಾಕೃತಿ ಸಾಸಿವೆಕಾಳು ಗಣಪತಿ, ಇಲ್ಲಿಂದ ಮುಂದೆ ವಿಷ್ಣು ಪಾದದ ಗುಡಿ ಇದೆ.

ಕೃಷ್ಣದೇವರಾಯ ಕ್ರಿ.ಶ. ೧೫೧೩ರಲ್ಲಿ ಉದಯಗಿರಿ ಗೆದ್ದು ಅಲ್ಲಿಂದ ಬಾಲಕೃಷ್ಣನ ವಿಗ್ರಹ ತಂದು ಇಲ್ಲಿ ಪ್ರತಿಷ್ಠಿಸಿದ್ದು, ಉದಯಗಿರಿಯ ವಿಜಯಯಾತ್ರೆಯನ್ನು ಸೂಚಿಸಿವೆ. ಮಾರ್ಗಮಧ್ಯದಲ್ಲಿ ಮುದ್ದು ವೀರಣ್ಣನ ಗುಡಿ ಇದ್ದು, ಈಗ ಈತನೇ ಉದ್ಧಾನ ವೀರಭದ್ರನಾಗಿರುವನು. ನೆಲಮಟ್ಟಕ್ಕಿಂತಲೂ ಕೆಳಗಿರುವ ಪಾತಾಳ ಲಿಂಗೇಶ್ವರ ಗುಡಿ ಇದೆ. ವಿಜಯನಗರ ಕಾಲದಲ್ಲಿ ರಚನೆಯಾದ ಅನೇಕ ದೇವಸ್ಥಾನಗಳಿವೆ. ಮಾರ್ಗದಲ್ಲಿಯ 'ಕಮಲಮಹಲ' ವಿಜಯ ನಗರದ ರಾಜಮನೆತನದ ರಾಣಿಯರ ಈಜುಗೊಳ, ಗಚ್ಚುಗಾರೆ, ಯಿಂದಾದ ಈ ಮನೆಯ ಅಟ್ಟದ ಮಧ್ಯೆ ಗುಮ್ಮಟಾಕಾರ ಬಹುಶಃ ರಾಣಿವರ್ಗದವರಿಗೆ ಕಲಾಶಿಕ್ಷಣ ಇಲ್ಲಿ ದೊರೆಯುತ್ತಿರಬೇಕು. ಕಮಲ ಮಹಲಿನಿಂದ ಪೂರ್ವಕ್ಕೆ ಗಜಶಾಲೆ ಒಟ್ಟು ೧೧ ಕೊಠಡಿಗಳು, ಮಾರ್ಗ ಮದ್ಯದಲ್ಲಿ ತಿರುಮಲರಾಯ ಪಟ್ಟಣ, ನಾಗಲಾಪುರಗಳು ಶೋಭಿಸಿವೆ.

ಪರಿವಿಡಿ (index)
Previous ಸುತ್ತೂರು ಶರಣ ಕ್ಷೇತ್ರಗಳು Lingayat Piligram Centers Next