Previous ಕಿತ್ತೂರು ಸಂಸ್ಥಾನ ಸುತ್ತೂರು Next

ಸಿದ್ಧಗಂಗಾ

ಸಿದ್ದಗಂಗಾ ಗುರುಪರಂಪರೆ

ತುಮಕೂರಿನ ಸಿದ್ದಗಂಗಾ ಕ್ಷೇತ್ರ ಪುಣೆ ಬೆಂಗಳೂರು ಹೆದ್ದಾರಿಯ ಮೇಲೆ ಇದ್ದು ಬೆಂಗಳೂರಿನಿಂದ ೬೬ ಕಿ.ಮೀ. ದೂರದಲ್ಲಿದೆ. ಸಿದ್ಧಗಂಗಾಕ್ಷೇತ್ರದ ಸ್ಥಾಪಕರು ಗೋಸಲ ಸಿದ್ದೇಶ್ವರರು. ಹರದನಹಳ್ಳಿಯ ಶೂನ್ಯಸಿಂಹಾಸನದ ಅಧಿಪತಿಗಳಾಗಿದ್ದವರು. ಸುಮಾರು ೬೦೦ ವರ್ಷಗಳ ಹಿಂದೆ ಸಿದ್ದಗಂಗಾಮಠ ಸ್ಥಾಪನೆಯಾಗಿದೆ. ಗೋಸಲ ಸಿದ್ದೇಶ್ವರರು ಸಿದ್ಧಗಂಗಾ ಕ್ಷೇತ್ರದಲ್ಲಿ ನಿರಂಜನ ಜಗದ್ಗುರು ಪೀಠ ಸ್ಥಾಪಿಸಿದ ಪ್ರಥಮ ಪೂಜ್ಯರು. ತೋಂಟದ ಸಿದ್ದಲಿಂಗೇಶ್ವರರ ಕಾಲಕ್ಕಿಂತ ಒಂದು ಶತಮಾನಕ್ಕೆ ಮೊದಲೇ ಸಿದ್ಧಗಂಗಾ ಕ್ಷೇತ್ರ ಸಂಸ್ಥಾಪಿತವಾಗಿದೆ.

ಸಿದ್ಧಗಂಗೆ : ಯಾತ್ರಿಕರ ಪುಣ್ಯಧಾಮ

ಸಿದ್ದಲಿಂಗೇಶ್ವರರ ರಥೋತ್ಸವ ಮಹಾ ಶಿವರಾತ್ರಿ ಸಂದರ್ಭದಲ್ಲಿ ಆಗುವಂತಹದು. ಇದಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಪ್ರತಿದಿನ ಸಹಸ್ರ ಸಂಖ್ಯೆಯನ್ನು ಮೀರುತ್ತದೆ. ಬಂದ ಪ್ರತಿಯೊಬ್ಬರಿಗೂ ಪ್ರಸಾದದ ವ್ಯವಸ್ಥೆ ಇದ್ದು, ಗ್ರಾಮೀಣ ಬಂಧುಗಳ ಜಾನುವಾರುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಸಿದ್ಧಲಿಂಗೇಶ್ವರರ ಜಾತ್ರೆಯಲ್ಲಿ ದೇವತಾ ಉತ್ಸವಗಳು ಗೋಸಲ ಸಿದ್ದೇಶ್ವರರ ಉತ್ಸವದಿಂದ ಪ್ರಾರಂಭಗೊಳ್ಳುತ್ತ ವೃಷಭವಾಹನ, ಗಜವಾಹನ, ಹುಲಿವಾಹನ, ನಂದಿವಾಹನ, ಹುತ್ತದ ವಾಹನ, ಅಶ್ವ ವಾಹನ, ಬಿಲ್ವ ವೃಕ್ಷವಾಹನ, ನವರಂಗ ಪಾಲಕಿ ಉತ್ಸವ, ಮಹಾ ಶಿವರಾತ್ರಿ ಪೂಜೆ, ಮುತ್ತಿನ ಪಾಲಕಿ ಉತ್ಸವ, ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ, ರುದ್ರಾಕ್ಷಿಮಂಟಪೋತ್ಸವ, ಬೆಳ್ಳಿ ಪಾಲಕಿ ಉತ್ಸವ, ಪಂಚಬ್ರಹ್ಮೋತ್ಸವ, ಶಿವಾನುಭವ ಸಮ್ಮೇಳನ, ತೆಪ್ಪೋತ್ಸವಗಳೊಂದಿಗೆ ಜರುಗುತ್ತವೆ.

ಸಿದ್ಧಗಂಗಾ ಕ್ಷೇತ್ರದಲ್ಲಿಯ ಪಂಚಬ್ರಹೋತ್ಸವ ಶರಣ ಸಂದೇಶವನ್ನು ಸಾರುವಂತಿದೆ. ಅಣ್ಣ ಬಸವಣ್ಣನವರು ಸಾರಿದ 'ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ' ಎಂಬ ದಿವ್ಯವಾಣಿಯನ್ನು ಆಚರಣೆಗೆ ತರುವ ವಿಶೇಷ ಉತ್ಸವ ಇಲ್ಲಿ ಜರುಗುತ್ತದೆ. ಬೇರೆ ಬೇರೆ ಮಠದ ಪೂಜ್ಯರನ್ನು ಗೌರವಪೂರ್ವಕ ಕರೆತಂದು ಲಿಂಗ ಪೂಜಾದಿಗಳನ್ನು ನೆರವೇರಿಸಿ ಪ್ರಸಾದತೃಪ್ತಿಯನ್ನುಂಟುಮಾಡಿ ಅವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅಲಂಕೃತರನ್ನಾಗಿಸುವಲ್ಲಿ ಪರಮಪೂಜ್ಯ ಶ್ರೀಗಳೂ ಪಲ್ಲಕ್ಕಿ ಸೇವೆ ನಡೆಸುವ ಸೇವಾ ಸಂಸ್ಕೃತಿ ಶರಣರ ತತ್ವಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.

ಪ್ರೇಕ್ಷಣೀಯ ಸ್ಥಳಗಳು

ಸಿದ್ದಗಂಗಾ ಶರಣಕ್ಷೇತ್ರದ ಬೆಟ್ಟದ ಮೇಲಿರುವ ಸಿದ್ಧಲಿಂಗೇಶ್ವರ ಹಾಗೂ ತೀರ್ಥಕುಂಡದ ದೇವಮಂದಿರಗಳು ಪ್ರಶಾಂತ ಪ್ರಕೃತಿಯ ಮಧ್ಯದಲ್ಲಿ ಅರಳಿನಿಂತಿವೆ. ಬೆಟ್ಟದ ಬುಡದಲ್ಲಿ ಗೋಸಲ ಸಿದ್ದೇಶ್ವರ ರಿಂದ ಸ್ಥಾಪಿತವಾದ ಹಳೆಯ ಮಠ, ಪಕ್ಕದಲ್ಲಿಯೆ ಶೋಭಿತವಾದುದು ಉದ್ಧಾನ ಸ್ವಾಮಿಗಳ ಗದ್ದುಗೆ, ಪಕ್ಕದಲ್ಲಿ ತೇರುಮನೆ, ಅದರ ಬದಿಯಲ್ಲಿ ನಿರ್ಮಾಣದ ಕಾರ್ಯದಲ್ಲಿ ತನ್ಮಯಗೊಂಡಿರುವ ಶಿವಯೋಗಮಂದಿರ, ಪಕ್ಕದಲ್ಲಿ ಶ್ರೀಮಠದ ದರ್ಶನಕ್ಕೆ ಆಗಮಿಸಿದ ಗೌರವ ಸದಸ್ಯರ ವಸತಿಗೆ ಕೆಂಪಹೊನ್ನಯ್ಯನವರ ಅತಿಥಿಗೃಹ, ವಿದ್ಯಾರ್ಥಿನಿಲಯಗಳು, ಪಕ್ಕದಲ್ಲಿ ಬೃಹತ್ತಾದ ಪ್ರಸಾದನಿಲಯ, ಅಲ್ಲಿರುವ ಪೂಜ್ಯರ ಗದ್ದುಗೆ, ಪಕ್ಕದ ಗೋಶಾಲೆ, ಶ್ರೀಗಳವರ ಕಾರ್ಯಾಲಯ, ಉದ್ದರಣೆ, ಯಂತ್ರ ಬರೆವ ಮಂಚ, ಅಟವೀ ಸ್ವಾಮಿಗಳ ಗದ್ದುಗೆ, ಶ್ರೀ ದರ್ಶನಮಂಟಪ, ಪ್ರಫುಲ್ಲ ಭವನ, ಸಿದ್ಧಗಂಗಾ ಮಾಸಪತ್ರಿಕಾಲಯ, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯ, ಶ್ರೀ ಉದ್ದಾನೇಶ್ವರ ಸಮುದಾಯ ಭವನ, ಬೃಹತ್ ಕಲ್ಯಾಣಿ, ಅಂಧಮಕ್ಕಳ ಶಾಲೆ, ಅಕ್ಕಿಗಿರಣಿ, ತೆಂಗಿನತೋಟ, ವಜ್ರಮಹೋತ್ಸವ ಸ್ಮಾರಕ ಭವನಗಳಾದ ಬೃಹತ್ ವಿದ್ಯಾರ್ಥಿನಿಲಯ, ಭವ್ಯ ಭೋಜನ ಶಾಲೆ, ಶ್ರೀ ಸಿದ್ದಲಿಂಗೇಶ್ವರ ವೇದ ಮತ್ತು ಸಂಸ್ಕೃತ ಕಾಲೇಜು, ವಸ್ತುಪ್ರದರ್ಶನದ ಕಟ್ಟಡಗಳು, ರಂಗಮಂದಿರ, ಶ್ರೀ ಬಸವೇಶ್ವರ ಶಿಕ್ಷಕ ತರಬೇತಿ ಸಂಸ್ಥೆ, ಶಿಕ್ಷಕರ ವಸತಿಗೃಹ, ಹೂವಿನತೋಟ, ನೋಡಿದರೆ ಎಲ್ಲವೂ ಶಿವಮಯ, ಮುಟ್ಟಿದರೆ ಬಸವಮಯ, ನೋಡಲೆಂದು ಬಂದವರಿಗೆ ಶಿವಬಸವಮಯ.

ಶ್ರೀ ಕ್ಷೇತ್ರಕ್ಕೆ ಆಗಮಿಸಿದವರು ಮೊಟ್ಟಮೊದಲು ನೋಡಬೇಕಾದ ಅವಿಸ್ಮರಣೀಯ ದೃಶ್ಯ ಪೂಜ್ಯರ ಸನ್ನಿಧಾನದಲ್ಲಿ ಏಳು ಸಾವಿರ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಕುಳಿತು ಬೈಗು ಬೆಳಗು ಸಂದರ್ಭದಲ್ಲಿ ಮಾಡುವ ಸಾಮೂಹಿಕ ಪ್ರಾರ್ಥನಾ ಸಭೆ, ಶ್ರೀಕ್ಷೇತ್ರ ರೂಪಿಸುತ್ತಿರುವ ಜಂಗಮಲಿಂಗಗಳೆಂಬುದು ಅನುಭಾವಿಗಳು ನಂಬಿದ ನುಡಿ.

ಶಿಕ್ಷಣ ಮಾನವನ ಬದುಕಿಗೆ ಸುಂದರ ಚೌಕಟ್ಟನ್ನು ರಚಿಸುವ ಮಾಧ್ಯಮ. ಯಾವುದೇ ರಾಷ್ಟ್ರದ ಸಂಪತ್ತು ಎಂದರೆ ಶಿಕ್ಷಣ ಪಡೆದ ಜನಾಂಗ, ಜ್ಞಾನಕ್ಷೇತ್ರಕ್ಕೆ ತಕ್ಕುದಾದುದು ಬೇರೊಂದಿಲ್ಲ ಎಂಬುದನ್ನು ಮನಗಂಡ ಸಿದ್ಧಗಂಗೆಯ ಪೂಜ್ಯರು ಸಿದ್ಧಗಂಗಾ ಗುರುಪರಂಪರೆ ಸಿದ್ದಗಂಗಾ ಕ್ಷೇತ್ರವನ್ನು ಪ್ರಾಚೀನ ಅರ್ವಾಚೀನ ಶಿಕ್ಷಣದ ಕೇಂದ್ರ ವನ್ನಾಗಿಸಲು ಪ್ರಯತ್ನಿಸುತ್ತ ಬಂದಿರುವರು. ಅನಕ್ಷರತೆಯನ್ನು ಹಣೆಯಬರಹವಾಗಿಸಿಕೊಂಡ ಶೋಷಿತ ಜನಾಂಗದ ವಿದ್ಯಾರ್ಥಿಗಳ ಅಕ್ಷರಜ್ಞಾನಕ್ಕೆ ಸಿದ್ಧಗಂಗಾ ಗುರುಕುಲ ರಾಷ್ಟ್ರೀಯ ಮತ್ತು ಧಾರ್ಮಿಕ ಐಕ್ಯತೆಗಳ ಸಂಕೇತವಾಗಿ ಇಡೀ ದೇಶ ತನ್ನ ಕಡೆಗೆ ದೃಷ್ಟಿ ಹರಿಸುವಂತೆ ಇಂದು ಬೆಳೆದು ಬಂದಿದೆ.

ಶ್ರೀಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಪಾಠಶಾಲೆ, ಹಿರಿಯ ಪ್ರಾಥಮಿಕ ಪಾಠಶಾಲೆ, ಎರಡು ಪ್ರೌಢಶಾಲೆಗಳು, ಶಿಕ್ಷಕರ ತರಬೇತಿ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ವಾಣಿಜ್ಯ ವಿದ್ಯಾಸಂಸ್ಥೆ, ಅಂಧ ಮಕ್ಕಳ ಪಾಠಶಾಲೆ, ಸಂಗೀತ ಪಾಠಶಾಲೆ, ಇಷ್ಟಲಿಂಗಕ್ಕೆ ಛಿದ್ರಸವಿಡುವ ಶಾಲೆ, ಚಿತ್ರಕಲಾ ಶಾಲೆಗಳು ಕಾರ್ಯತತ್ಪರವಾಗಿದ್ದು ಐದು ಸಾವಿರಕ್ಕೆ ಮಿಕ್ಕಿ ವಿದ್ಯಾರ್ಥಿಗಳು ಅಸನ ವಸನ ವಸತಿಗಳ ಆಶ್ರಯ ಪಡೆದುದು ಜೊತೆಗೆ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಹೆಸರಿನಲ್ಲಿ ಶ್ರೀ ನಾಡಿನ ವಿವಿಧ ಭಾಗಗಳಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಶಿಕ್ಷಕರ ತರಬೇತಿ ಸಂಸ್ಥೆ, ಶಿಕ್ಷಣ ಮಹಾವಿದ್ಯಾಲಯ, ಪೂರ್ವ ಪ್ರಾಥಮಿಕ ಪಾಠಶಾಲೆಗಳು, ಸಂಸ್ಕೃತ ಪಾಠಶಾಲೆಗಳು ಕಾರ್ಯತತ್ಪರವಾಗಿವೆ. ಈ ಶಿಕ್ಷಣ ಸಂಸ್ಥೆಗಳ ಬಳಿವಿಡಿಯಲ್ಲಿ ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಮುಖ ಸಂಸ್ಥೆಯೆನಿಸಿದ್ದು ರಾಷ್ಟ್ರದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಷ್ಠಿತ ಕಾಲೇಜು ಎಂದು ಗೌರವ ಪಡೆದಿದೆ. ೧೯೯೧ರಲ್ಲಿ 'ರಜತ ಮಹೋತ್ಸವ' ಆಚರಿಸಿ ಮುನ್ನಡೆಯುತ್ತ ಬಂದಿದೆ.

ಸಿದ್ಧಗಂಗಾ ಕ್ಷೇತ್ರ ಬಸವತತ್ವದ ಪ್ರಯೋಗಶಾಲೆ ಎನಿಸಿದೆ. ಇಲ್ಲಿಯ ದಾಸೋಹ 'ಹೊತ್ತಿದ ಒಲೆ ಆರದಂತೆ' ಅಡವಿಸ್ವಾಮಿಗಳ ಹರಕೆ ಇಲ್ಲಿ ಸಾರ್ಥಕಗೊಂಡಿದೆ. ಶ್ರೀಮಠ ಲಿಂಗಾಯತ ಪರಂಪರೆಯ ವಿರಕ್ತಮಠ, ಶ್ರೀಮಠದ ಸಂಪನ್ಮೂಲಗಳು ಭಕ್ತಾದಿಗಳು, ರಾಜ್ಯ ಮಟ್ಟ, ಕೇಂದ್ರ ಸರಕಾರದ ಸಹಾಯಧನ. ವಿದ್ಯಾರ್ಥಿಗಳ ಮುಖದಲ್ಲಿ ಸಿದ್ಧಲಿಂಗೇಶ್ವರರನ್ನು ಕಾಣುತ್ತಿರುವ ಸಿದ್ಧಲಿಂಗರ ಕಾರುಣ್ಯಶಿಶು ಶಿವಕುಮಾರ ಸ್ವಾಮಿಗಳಂಥವರಿಂದಲೇ ನಾಡಿನಲ್ಲಿ ಪುಣ್ಯದ ಕಣ ಉಳಿದಿರುವುದು. "ಎದ್ದಾಗ ನಿಮಧ್ಯಾನ, ಬಿದ್ದಾಗ ನಿಮಧ್ಯಾನ, ಮಗ್ಗಲು ಬದಲಿಸುವಲ್ಲಿ ನಿಮಧ್ಯಾನ, ಸಿದ್ದಲಿಂಗ ವಿದ್ಯೆ ಸರಿಮೇಲು ದಾನ" ಎನ್ನುವಲ್ಲಿ ಸಿದ್ಧಗಂಗೆ ಶರಣಕ್ಷೇತ್ರವಾಗಿ ಮೆರೆಯುತ್ತಿದೆ.

ಪರಿವಿಡಿ (index)
Previous ಕಿತ್ತೂರು ಸಂಸ್ಥಾನ ಸುತ್ತೂರು Next