ಸುತ್ತೂರು ಕ್ಷೇತ್ರ
ಲಿಂಗಾಯತ ಶರಣಕ್ಷೇತ್ರಗಳಲ್ಲಿ ಸುತ್ತೂರು ಜಗದ್ಗುರು ವೀರ ಸಿಂಹಾಸನ ಶ್ರೀ ಪೀಠವೆಂದು ಖ್ಯಾತಿ ಪಡೆದುದು. ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಜನಪರ ಬದುಕಿನ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಸಾವಿರ ವರ್ಷಗಳಿಂದ ನೀಡುತ್ತ ಬಂದ ಶರಣಪೀಠ. ಲಿಂಗಾಯತರ ಬಹುಮುಖ್ಯ ತತ್ವಗಳೆನಿಸಿದ ಕಾಯಕ ಮತ್ತು ದಾಸೋಹದಲ್ಲಿ ನಿಷ್ಠೆಯುಳ್ಳ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿಕೊಂಡ ಪುಣ್ಯದ ತಾಣ.
ಕ್ಷೇತ್ರ ಮಹತ್ವ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಪ್ರಮುಖ ಶರಣ ಕೇಂದ್ರ, ಪಶ್ಚಿಮಕ್ಕೆ ಕಪಿಲಾನದಿ ತಟದಲ್ಲಿ ವೀರಸಿಂಹಾಸನ ಪೀಠದ ಸಂಸ್ಥಾಪಕ ಆದಿ ಜಗದ್ಗುರು ಶಿವರಾತ್ರೀಶ್ವರ ಮಹಾಪೂಜ್ಯರು ಸಾವಿರ ವರ್ಷಗಳ ಹಿಂದೆ ಲಿಂಗೈಕ್ಯರಾದ ಪವಿತ್ರ ಸ್ಥಾನ, ಪ್ರಸ್ತುತ ಪೀಠದ ಗುರುಪರಂಪರೆ ಇಂದು ಸುತ್ತೂರನ್ನು ಆಧ್ಯಾತ್ಮಿಕ ಸಾಧನೆಯ ಕೇಂದ್ರವನ್ನಾಗಿಸಿದೆ. ಹತ್ತನೆಯ ಶತಮಾನದ ವೇಳೆಗೆ 'ಶ್ರೋತ್ರಿಯೂರು' ಎಂದು ಹೆಸರಾದ ಈ ಪುಣ್ಯಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರೀಶ್ವರರು ಪೀಠದ ಸಂಸ್ಥಾಪಕರು. ಪೂಜ್ಯರ ಮೂಲ ಬೆಂಗಳೂರು ಬಳಿಯ ರಾಮನಗರದ ಬಳಿ ಇರುವ ಸಿದ್ಧಗಿರಿ. ಪುಣ್ಯ ತಾಣದಿಂದ ಆಗಮಿಸಿ ಸುತ್ತೂರಿನ ಬಳಿ ಕಪಿಲಾ ನದಿಯ ಪಾತ್ರದ ಹೆಬ್ಬಂಡೆಯೊಂದರ ಮೇಲೆ ಶಿವಯೋಗ ಮಗ್ನರಾದಂತೆ ತೋರುತ್ತದೆ. ಸುತ್ತೂರಿನ ಬಳಿ ಅಂದು ಜರುಗಬಹುದಿದ್ದ ಭೀಕರ ಹೋರಾಟವನ್ನು ಮಿತ್ರತ್ವದಲ್ಲಿ ಪರ್ಯಾವಸಾನ ಗೊಳಿಸಿದ ಕೀರ್ತಿ ಪೂಜ್ಯರದು.
ವೀರಸಿಂಹಾಸನಪೀಠದ ದ್ವಿತೀಯ ಪೂಜ್ಯರು ಈಶಾನೇಶ್ವರ ಒಡೆಯರು. ಶರಣಧರ್ಮದ ಪುನರುತ್ಥಾನ ಪ್ರಸಾರಕಾರ್ಯಕ್ಕೆ ಒತ್ತುಕೊಟ್ಟು ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಗ್ರ ಕ್ರಾಂತಿಗೆ ಸ್ಪಂದಿಸಿದವರು. ಶ್ರೀಪೀಠದ ಪೀಠಾರೋಹಣ ಮಾಡಿದ ಶಿವಾಚಾರ್ಯರು ಇಪ್ಪತ್ತ ಮೂರು ಹೆಸರುಗಳು ಮಾತ್ರ ದೊರೆತಿದ್ದು ಇಂದು ಜಗದ್ಗುರು ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಇಪ್ಪತ್ನಾಲ್ಕನೆಯವರು.
ಕಲ್ಯಾಣ ಕ್ರಾಂತಿಯ ತರುವಾಯ ಚದುರಿದ ಶರಣರ ಸಮೂಹದಲ್ಲಿ ಮುಸುಡಿ ಚೌಡಯ್ಯ ಎಂಬ ಶರಣರು ಸುತ್ತೂರಿಗೆ ಬಂದರು. ಈ ವೇಳೆಗೆ ಶರಣ ಕೇಂದ್ರ ಸುತ್ತೂರಿನ ಧಾರ್ಮಿಕ ಧೈಯೋದ್ದೇಶಗಳನ್ನು ಲಿಂಗಾಯತ ಮುಖ್ಯವಾಹಿನಿಯ ಮೂಲಕ ಮೆರೆಯಿಸಿದ ಕೀರ್ತಿ ಪೀಠದ ನಿಜಲಿಂಗ ಆಚಾರ್ಯರದು. ಹೀಗೆ ಬಂದ ಶರಣ ಸಂತತಿ ವೈಚಾರಿಕತೆ ಆಧುನಿಕ ಚಿಂತನ ಮಂಥನಗಳಿಗೆ ತೆರೆದುಕೊಳ್ಳುತ್ತ ಸುತ್ತೂರು ಶರಣ ಕೇಂದ್ರವನ್ನು ಸ್ವಯಂಪರಿಪೂರ್ಣ ನೆಲೆಯನ್ನಾಗಿ ಪರಿವರ್ತನೆಗೊಳಿಸಿರುವರು.
ಇಂದಿನ ಜಗದ್ಗುರು ವೀರಸಿಂಹಾಸನ ಮಠ
ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠಕ್ಕೆ ಚೈತನ್ಯ ವಿತ್ತ ಜಗದ್ಗುರು ಶ್ರೀ ವೀರಸಿಂಹಾಸನ ಮಠ ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪುಣ್ಯಕೇಂದ್ರ. ಹತ್ತಾರು ಶಾಖಾ ಮಠಗಳನ್ನು ಹೊಂದಿರುವ ಶ್ರೀಪೀಠ ತನ್ನ ಧಾರ್ಮಿಕ ಚೌಕಟ್ಟಿನಲ್ಲಿ ವರ್ಷದುದ್ದಕ್ಕೂ ಕ್ರಿಯಾಶೀಲವಾಗಿರುವುದು ವಿಶೇಷ.
ಸುತ್ತೂರು ಕ್ಷೇತ್ರದಲ್ಲಿರುವ ಶ್ರೀಮಠ, ಸಮೀಪದಲ್ಲಿ ಕಪಿಲಾ ನದಿ ತೀರದಲ್ಲಿರುವ ಆದಿಗುರುಗಳ ಗದ್ದುಗೆಯ ಪವಿತ್ರ ಸನ್ನಿಧಾನ, ಗ್ರಾಮದೊಳಗೆ ಇರುವ ಶ್ರೀಮಠದ ಭಾಗವಾಗಿರುವ ಮಹದೇಶ್ವರರ ಪವಿತ್ರ ಗದ್ದುಗೆ, ಅಂದು ಅವರು ಬೀಸುತ್ತಿದ್ದರೆನ್ನಲಾದ ರಾಗಿಕಲ್ಲು, ಶ್ರೀಮಠದ ಒಳಗಿರುವ ಅಪರೂಪದ ವರ್ಣಚಿತ್ರಗಳು, ಲಿಂಗಪೂಜೆ ಮಾಡಿಕೊಳ್ಳುತ್ತಿದ್ದ ಗದ್ದುಗೆ, ಹೊಳೆಯುವ ಬೆಳ್ಳಿ ಪಲ್ಲಕ್ಕಿ, ಎದುರಿಗೆ ಶಿಲಾಶಾಸನಗಳ ಸಂಗ್ರಹ, ಅಂದು ಮಂತ್ರಮಹರ್ಷಿಗಳು ಲಿಖಿಸಿದ ಕೋಟಿ ಕೋಟಿ ಷಡಕ್ಷರ ಮಂತ್ರಗಳ ಹೊತ್ತಿಗೆಗಳು, ಆವರಣದಲ್ಲಿರುವ ಪುರಾತನ ಸೋಮೇಶ್ವರ ದೇವಾಲಯ, ಸನಿಹದ ಸಂಸ್ಕೃತ ವೇದಪಾಠ ಶಾಲೆಗಳು ಇಷ್ಟೆಲ್ಲ ಇವೆ.
ಪೂಜ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರೆಗೆ ಎಳೆದುಬಂದ ಸುತ್ತೂರು ಮಠದ ಸಂಸ್ಕೃತಿ ತೇರನ್ನು ಮುಂದುವರೆಸಿ ಕೊಂಡು ಬಂದವರು ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು. ಸೇವಾತತ್ಪರತೆ, ಸಂಕಲ್ಪಶಕ್ತಿ, ಕರ್ತೃತ್ವಶೀಲ ಮನಸ್ಸು, ಕ್ರಿಯಾಶೀಲ ಸಮಾಜದ ನಿರ್ಮಾಪಕರು. ಇಂದು ಪ್ರಾಥಮಿಕ ಶಾಲೆಯಿಂದ ಮೊದಲ್ಗೊಂಡು ನಾಲ್ಕಾರು ವಿಶ್ವವಿದ್ಯಾಲಯಗಳ ಗಾತ್ರವನ್ನು ಮೀರಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಕಾನೂನು, ಪತ್ರಿಕೋದ್ಯಮ, ಸಾಹಿತ್ಯ, ಪುಸ್ತಕ ಪ್ರಕಟನೆ, ಸಹಕಾರ ಗೃಹನಿರ್ಮಾಣ, ಗ್ರಾಮಾಭಿವೃದ್ಧಿ, ವೈದ್ಯಕೀಯ, ಕಲೆ, ಸಂಗೀತ, ತತ್ವಪ್ರಸಾರ, ಅನಾಥರ ಸೇವೆ, ಆಡಳಿತ ತರಬೇತಿ, ಯೋಗಶಿಕ್ಷಣ, ಹೀಗೆ ಒಂದೇ ಎರಡೇ, ಪೂಜ್ಯರ ಮುಂದಾ ಲೋಚನೆ, ಅತ್ಯಾಧುನಿಕ ಶಿಕ್ಷಣದ ಆವಶ್ಯಕತೆಗೆ ಅನುಸಾರವಾಗಿ ಕಾಲಾತೀತ ಮೌಲ್ಯಗಳ ಪುನರ್ ಪ್ರತಿಷ್ಠಾಪನೆ ಯೋಜನೆ ಮಹಾವಿದ್ಯಾ ಪೀಠದ ಮಹದಾಶಯಗಳಲ್ಲಿ ಒಂದಾಗಿದೆ.
ಮಹಾವಿದ್ಯಾಪೀಠದ ಆಶ್ರಯದಲ್ಲಿ ಇಂದು ೨೫೦ಕ್ಕೂ ಮೀರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಅಭ್ಯಾಸನಿರತ ವಿದ್ಯಾರ್ಥಿಗಳ ಸಂಖ್ಯೆ ೩೫ ಸಾವಿರಕ್ಕೂ ಮಿಕ್ಕಿದೆ. ಸದ್ಯಕ್ಕೆ ಕರ್ನಾಟಕ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳು ತಮಿಳುನಾಡಿನ ನೀಲಗಿರಿ, ಸೇಲಂ, ಕೊಯಮತ್ತೂರು ಜಿಲ್ಲೆಗಳು, ಉತ್ತರಪ್ರದೇಶದ ನೊಯಿಡಾ ಮುಂತಾದ ಕಡೆಗಳಲ್ಲಿ ಮಹಾವಿದ್ಯಾಪೀಠದ ಸಂಸ್ಥೆಗಳು ವಿಸ್ತ್ರತಗೊಂಡಿರುವುದು ಶ್ರೀಗಳ ಕರ್ತೃತ್ವಶಕ್ತಿ ಪ್ರತೀಕ.