ಶರಣಕ್ಷೇತ್ರ ಉಡುಗಣಿ
ಶಿವಮೊಗ್ಗ ಜಿಲ್ಲೆಯ ಉಡುಗಣಿ ತಡಿಗಣಿ ಅ೦ದಿನ ಉಡುತಡಿ ಎಂಬ ಮಾತನ್ನು ವಿಮರ್ಶಕರು ಒಪ್ಪಿರುವರು. ಉಡುಗಣಿ ಎಂಬ ಗ್ರಾಮ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭುದೇವರ ಜನ್ಮಸ್ಥಳವಾದ ಬಳ್ಳಿಗಾವೆಗೆ ಸಮೀಪದಲ್ಲಿಯೆ ಇದೆ. ಉಡುಗಣಿ ತಡುಗಣಿಗಳಲ್ಲಿ ಕೆಲವು ಐತಿಹಾಸಿಕ ಅವಶೇಷಗಳು, ಕುರುಹುಗಳು ದೊರೆಯುತ್ತವೆ. ಇತ್ತೀಚೆಗೆ ಉಡುಗಣಿಯಲ್ಲಿ ದಿಗಂಬರೆಯಾಗಿ ನಿಂತಿರುವ ಒಂದು ಸ್ತ್ರೀಯ ವಿಗ್ರಹವು ದೊರಕಿದ್ದು ಅದನ್ನು ಅಲ್ಲಿಯ ಬಸವೇಶ್ವರರ ದೇವಸ್ಥಾನದಲ್ಲಿ ಇಟ್ಟಿರುವರು. ಇದು ಮಹಾದೇವಿಯಕ್ಕನ ಪ್ರತಿಕೃತಿ ಎಂಬ ದೃಢ ನಿರ್ಧಾರ ಅಲ್ಲಿಯ ಜನರಲ್ಲಿದೆ.
ಇಂದಿನ ಉಡುಗಣಿಯಲ್ಲಿ ಮಲ್ಲಿಕಾರ್ಜುನನ ದೇವಸ್ಥಾನವಿದೆ. ಅದನ್ನು 'ಪರದೇಸಿ ಮಲ್ಲಪ್ಪನ ಗುಡಿ' ಎಂದು ಕರೆಯುತ್ತಾರೆ. ಮಹಾದೇವಿಯಕ್ಕನ ಆರಾಧ್ಯದೈವ ಚನ್ನಮಲ್ಲಿಕಾರ್ಜುನನ ಹೆಸರಿನಲ್ಲಿಯೆ ಈ ಗುಡಿ ಪ್ರತಿಷ್ಠಾಪಿಸಿರುವ ಸಂಭವ ಇಲ್ಲದಿಲ್ಲ. ಉಡುಗಣಿ ಊರ ಸುತ್ತಲೂ ರಕ್ಷಣೆಗಾಗಿ ಕೋಟೆಗೋಡೆ ಇದ್ದಿರಬಹುದಾದ ಕೆಲವು ಕುರುಹುಗಳು ಇಂದಿಗೂ ಸಿಗುತ್ತಿವೆ. ಈಗ ಜೀರ್ಣವಾದ ಕೋಟೆಯ ಅವಶೇಷವನ್ನು ಜನತೆ ಕೌಶಿಕನ ಕೋಟೆ ಎಂದು ಸಾಂಕೇತಿಕವಾಗಿ ಕರೆಯುವಲ್ಲಿ ಈ ಪ್ರದೇಶವು ಹಿಂದೆ ಕೌಶಿಕನೆಂಬ ಅಧಿಕಾರಿಯ ಆಧಿಪತ್ಯಕ್ಕೆ ಒಳಗಾಗಿದ್ದಿರಬಹುದೆಂದು ತಿಳಿಯುತ್ತದೆ. ಉಡುಗಣಿಯ ಅನತಿ ದೂರದಲ್ಲಿ ಹಿರೇಕೌಶಿ ಚಿಕ್ಕ ಕೌಶಿ ಎಂಬ ಎರಡು ಚಿಕ್ಕ ಗ್ರಾಮಗಳಿವೆ. ಇವು ಕೌಶಿಕನ ಹೆಸರಿನಲ್ಲಿ ಕರೆದ ಊರುಗಳೂ ಎಂಬಂತೆ ಸ್ಥಳನಾಮಗಳು ವಿದಿತಪಡಿಸಿವೆ.
ಅಲ್ಲಮಪ್ರಭುವಿನ ಗುರುಗಳಾದ ಅನಿಮಿಷಯ್ಯನವರು ಶಿವಯೋಗ ಸಮಾಧಿಯಲ್ಲಿ ಕುಳಿತ 'ಅನಿಮಿಷಯ್ಯನ ಕೊಪ್ಪ' ಎಂಬ ಗ್ರಾಮವೂ ಉಡುಗಣಿಯ ಅನತಿ ದೂರದಲ್ಲಿದೆ. ಉಡುತಡಿ ಪ್ರದೇಶದ ಪರಿಸರದಲ್ಲಿ ದೊರಕುವ ಪ್ರಾಚ್ಯ ದಾಖಲೆಗಳನ್ನು ಗಮನಿಸಿದರೆ ಮಹಾದೇವಿಯಕ್ಕನ ಜನ್ಮಸ್ಥಳ ಉಡುತಡಿಯೆ ಅನ್ನುವ ವಿಷಯದಲ್ಲಿ ಭಿನ್ನಾಭಿಪ್ರಾಯಕ್ಕೆ ಎಳ್ಳಷ್ಟೂ ಎಡೆ ಇಲ್ಲ. ಅಂತೆಯೆ ಪ್ರಸಿದ್ಧ ವಿದ್ವಾಂಸರು ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು "ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿ, ಇದು ಅಲ್ಲಮಪ್ರಭು ದೇವರನ್ನು ಜಗತ್ತಿಗೆ ಕೊಟ್ಟ ಬಳ್ಳಿಗಾವೆಯ ಸಮೀಪದಲ್ಲಿಯೇ ಇದ್ದ ಗ್ರಾಮ. ಇವೆರಡೂ ಈಗ ಶಿವಮೊಗ್ಗ ಜಿಲ್ಲೆಯಲ್ಲಿಯೆ ಇವೆ. ಇತಿಹಾಸ ಪ್ರಸಿದ್ಧವಾದ ಬಳ್ಳಿಗಾವೆ ಒಂದು ಚಿಕ್ಕ ಹಳ್ಳಿಯಾಗಿ ಉಳಿದಿದೆ. ಉಡುತಡಿ ಈಗ ಉಡುಗಣಿ ತಡಗಣಿ ಎಂದು ಎರಡು ಹಳ್ಳಿಗಳಾಗಿ ಪರಿಣಮಿಸಿವೆ. ಅನೇಕ ಶರಣರನ್ನು ಕರ್ನಾಟಕಕ್ಕೆ ಕೊಟ್ಟ ಈ ಭಾಗದಿಂದ ಸಾಧನೆಯ ಮಾರ್ಗದಲ್ಲಿ ಮನೋಧರ್ಮದಲ್ಲಿ ಸಿದ್ಧಿಯ ನಿಲುವಿನಲ್ಲಿ ನಿಲುಗಡೆಯಲ್ಲಿ ಸಾದೃಶ್ಯವನ್ನುಳ್ಳ ಎರಡು ಮಹಾಚೇತನಗಳು ಸ್ವಲ್ಪ ಹೆಚ್ಚು ಕಡಿಮೆ ಏಕಕಾಲದಲ್ಲಿ ಮೂಡಿ ಬಂದವು' ಎಂದು ಸಮಂಜಸವಾದ ತಮ್ಮ ಅಭಿಪ್ರಾಯ ತಿಳಿಸಿರುವರು.
ಶರಣಕ್ಷೇತ್ರ ಕರವೂರು
ಪ್ರಭುದೇವನ ಜನ್ಮಸ್ಥಳವನ್ನು ತಿಳಿಸುವ ಕೆಲವು ಪುರಾಣಗಳು 'ಕರವೂರು' ಎಂದು ತಿಳಿಸಿವೆ. ಬಳ್ಳಿಗಾವೆ ನಾಡಿನ ಪ್ರಸಿದ್ಧವಾದ 'ಗೋಗಾವಿ' ಎಂಬ ಗ್ರಾಮವೂ ಪ್ರಭುವಿನ ಜನ್ಮಸ್ಥಳವೆಂದು ಹೇಳಲಾಗುತ್ತದೆ. ಈ ಗ್ರಾಮ ಶೀಲವಂತಯ್ಯನ ಕೊಪ್ಪಲಿನ ಹತ್ತಿರವಿದೆ. ಶಿವಶರಣೆಯರಾದ ಸತ್ಯಕ್ಕೆ ಪಿಟ್ಟವ್ವೆಯರ ಊರಾದ ಹಿರಿಯ ಜಂಬೂರಿನ ಪರಿಸರದಲ್ಲಿದೆ. ಆ ಊರು ನಾಗಿ-ಭೋಗಿ ಎಂಬ ಹಳ್ಳಿಗಳನ್ನು ಒಳಗೊಂಡಿತ್ತೆಂದು ತಿಳಿದುಬರುತ್ತದೆ. ಅಲ್ಲಿ ಇಂದಿಗೂ ಸಿದ್ದೇಶ್ವರ ದೇವಾಲಯವಿದೆ. ಕ್ರಿ.ಶ. ೧೧೧೭ರ ಚಾಲುಕ್ಯ ತ್ರಿಭುವನ ಮಲ್ಲನ ಕಾಲದ ಶಾಸನ ಗೋಗಾವೆಯ ಚಾರಿತ್ರಿಕತೆಯನ್ನು ಸಾರುತ್ತಿದೆ. ಈ ಭಾಗ ಪ್ರಾಚೀನ ಕರ್ನಾಟಕದ ಸತ್ತಲಿಗೆ ೭೦ರ ನಾಡು ಎಂದು ಪ್ರಸಿದ್ಧವಾಗಿದೆ.
ಬಳ್ಳಿಗಾವೆಯ ಕಲಾಪ್ರಸಿದ್ಧ ದೇವಾಲಯ ತ್ರಿಪುರಾಂತಕೇಶ್ವರ ದೇವಾಲಯದ ಹಿಂಭಾಗದ ಕುಡಿಯುವ ನೀರಿನ ಹೊಂಡದ ಪಕ್ಕದಲ್ಲಿರುವ ಕಲ್ಲುಮಂಟಪವನ್ನು ಪ್ರಭುವಿನ ಜನ್ಮಸ್ಥಳವೆಂದು ಹೇಳುತ್ತಾರೆ. ಈಗ ಅದು ವಿರಕ್ತಮಠವೆಂದು ಪ್ರಸಿದ್ಧವಾಗಿದೆ. ತ್ರಿಪುರಾಂತಕ ದೇವಾಲಯ ೧೧-೧೨ನೇ ಶತಮಾನಗಳಲ್ಲಿ ಸುಪ್ರಸಿದ್ಧವಾಗಿತ್ತೆಂದು ಅಲ್ಲಿರುವ ಶಾಸನಗಳಿಂದ ತಿಳಿದು ಬರುತ್ತದೆ. ಈ ದೇವಾಲಯಕ್ಕೆ ಹೊಂದಿಕೊಂಡು ಒಂದು ವಿದ್ಯಾಪೀಠವಿದ್ದಿತೆಂದೂ ಅದಕ್ಕೆ ಅನೇಕ ರಾಜರೂ ದಂಡನಾಯಕರೂ ದತ್ತಿ ನೀಡಿದ ಉಲ್ಲೇಖಗಳಿವೆ. ಬಳ್ಳಿಗಾವೆಯ ಸುಪ್ರಸಿದ್ಧವಾದ ಪಂಚ ಮಠಗಳಲ್ಲಿ ಈ ತ್ರಿಪುರಾಂತಕವೂ ಒಂದೆಂಬುದನ್ನು ಸ್ಮರಿಸಬಹುದಾಗಿದೆ. ಅಂತೆಯೆ ಸುಪ್ರಸಿದ್ಧವಾದ ಕೇದಾರೇಶ್ವರ (ಕೋಡಿಮಠ) ದೇವಸ್ಥಾನದ ಆವರಣದಲ್ಲಿ ಒಂದು ಪ್ರಭುಲಿಂಗ ದೇವಾಲಯವಿದೆ. ಮೂರು ಗರ್ಭಗುಡಿಯುಳ್ಳ ಶಿವಾಲಯವಿದು. ಮಧ್ಯದಲ್ಲಿ ಪ್ರಭುಲಿಂಗ, ಎಡಬಲದಲ್ಲಿ ಬ್ರಹ್ಮ ವೀರಭದ್ರ ಪ್ರತಿಮೆಗಳಿವೆ. ಜಾತ್ರೆಯ ಸಮಯದಲ್ಲಿ ಉತ್ಸವ ಹೊರಟಾಗ ಜನರು ಹರಹರ ಪ್ರಥಮ ಕೇದಾರೇಶ್ವರ ಉಘೇ ಉಘೇ ಎಂದೂ, ಪ್ರಥಮ ಕಲ್ಯಾಣದ ಪ್ರಭುದೇವ ಉಘೇ ಉಘೇ ಎಂದೂ ಘೋಷಣೆ ಮಾಡುತ್ತಾರೆ.