ಕನ್ನಡನಾಡಿನಲ್ಲಿ ಶರಣಕ್ಷೇತ್ರಗಳ ಸಾಂಸ್ಕೃತಿಕ ಪರಂಪರೆ ಅತ್ಯಂತ ಶ್ರೀಮಂತವಾದುದು. ಶರಣರು ಕಾಲದಿಂದ ಕಾಲಕ್ಕೆ ಬಿತ್ತಿ ಬೆಳೆದ 'ಅಂತರಂಗ ಶುದ್ದಿ ಬಹಿರಂಗ ಶುದ್ದಿಯ ತಾಣಗಳು, ಆಯಾಕಾಲದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ ಶರಣರು ಜಾತೀಯತೆಯ ವಿರುದ್ಧ, ಮೂಢ ಸಂಪ್ರದಾಯದ ವಿರುದ್ಧ, ಅಮಾನವೀಯತೆಯ ವಿರುದ್ಧ, ವೈಯಕ್ತಿಕವಾಗಿ ಅಷ್ಟೇ ಅಲ್ಲ ; ಸಾಮೂಹಿಕವಾಗಿ ಹೋರಾಡಿ ನಾಡನ್ನು ಶುಚಿಗೊಳಿಸುತ್ತ ಬಂದವರು. ಅಂಥ ಶರಣರು ಹುಟ್ಟಿ ಬೆಳೆದ, ಬೆಳಗಿದ, ಶರಣಕ್ಷೇತ್ರಗಳು ಸ್ಪೂರ್ತಿಯ ತಾಣಗಳು. ಅವು ನಮ್ಮ ಸಾಂಸ್ಕೃತಿಕ, ರಾಷ್ಟ್ರೀಯ ಪಳೆಯುಳಿಕೆಗಳು, ಅವುಗಳ ರಕ್ಷಣೆ ನಮ್ಮ ಪುರಾತನ ಸಂಸ್ಕೃತಿಯ ರಕ್ಷಣೆ ಎಂಬ ತಿಳಿವಳಿಕೆ ಅತ್ಯಾವಶ್ಯಕ. ಇಂದು ಶರಣಕ್ಷೇತ್ರಗಳ ಪುನರುತ್ಥಾನ ಕಾರ್ಯದ ಬಗೆಗೆ ಪ್ರಾಮಾಣಿಕ, ಅರ್ಪಣಾ ಮನೋಭಾವದ ಕಾರ್ಯ ಯೋಜನೆ ಸಿದ್ಧವಾಗಬೇಕಿದೆ.
ಶರಣಕ್ಷೇತ್ರಗಳನ್ನು ಕೇವಲ ಭಕ್ತಿ ಶ್ರದ್ಧೆಯಿಂದ, ಮಿಂದು, ಮಡಿಯುಟ್ಟು ದರ್ಶನ ಪಡೆದರೆ, ಕೈಮುಟ್ಟಿ ಪೂಜಿಸಿದರೆ ಸಾಲದು. ಅವು ಪೂರ್ವಜರ ಸ್ಮಾರಕಗಳು, "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಇದೇ ಶರಣಧರ್ಮದ ಮಹತ್ವದ ತಿರುಳು. ಇದನ್ನು ನಂಬಿ ನಡೆದ ಬಸವಪೂರ್ವದ ಶರಣ ಜೇಡರ ದಾಸಿಮಯ್ಯ, ಶರಣ ಕೆಂಭಾವಿ ಭೋಗಣ್ಣ, ಕೊಂಡಗುಳಿ ಕೇಶಿರಾಜರಂತಹವರ ವೈಯಕ್ತಿಕ ಪ್ರಯೋಗ, ಬಸವಕಾಲದ ಶರಣರ ಸಮಷ್ಠಿ ಪ್ರಜ್ಞೆಗೆ ವ್ಯಾಪಕ ಆಯಾಮ ದೊರಕಿಸಿಕೊಟ್ಟಿತು. ಗುರು ಬಸವಣ್ಣನಿಂದ ಅಂತ್ಯಜ ಶರಣರವರೆಗೆ ಸರ್ವಜನತೆ ಕ್ರಾಂತಿಯಲ್ಲಿ ಪಾಲ್ಗೊಂಡುದೇ ಜಾಗತಿಕ ಐತಿಹಾಸಿಕ ಘಟನೆ. ಅಂದಿನ, ಕಾಲದ 'ನಡೆಯೊಂದು ಪರಿ ನುಡಿಯೊಂದು ಪರಿ'ಯಾಗಿದ್ದ ಜನಮನದ ಎರಡೆಂಬ ಭಾವವ ಬೆಸೆದು ಒಂದುಗೂಡಿಸಿದುದು ಶರಣ ಸಂಸ್ಕೃತಿ, ವ್ಯಕ್ತಿ ತನ್ನ ಸಾಧನೆ ಸಿದ್ದಿ, ನಡೆ ನುಡಿಯಿಂದ 'ಶರಣ'ನೆನಿಸಿದ ಕಾಲವದು.
ಗುರು ಬಸವಣ್ಣ ಕಟ್ಟಬೇಕೆಂದುದು ಸ್ಥಾವರ ಸಮಾಜವನ್ನಲ್ಲ ; ಅದು ಚಲನಶೀಲತೆಯುಳ್ಳ ಜಂಗಮ ಸಮಾಜವನ್ನು, ವರ್ಗವರ್ಣರಹಿತ, ಲಿಂಗಭೇದ ರಹಿತ ಸಮಾಜವನ್ನು ಅವರು ಆಶಿಸಿದರು. ಇಂಥ ಆಶಯವೇ ೧೨ನೇ ಶತಮಾನದಲ್ಲಿ ಶರಣಕ್ಷೇತ್ರದ ನೆಲೆಯೆನಿಸಿದ ಕಲ್ಯಾಣಪಟ್ಟಣ. 'ಸಮಯ ಕಲ್ಯಾಣ'ವೆನಿಸಿದರೆ, ಮುಂದೆ ಬಂದ ಕೊಡೆಕಲ್ಲ ಸಂಪ್ರದಾಯದವರು ಬಸವಣ್ಣನ ಈ ಕಲ್ಯಾಣಪಟ್ಟಣ ವನ್ನು 'ವಿಜಯ ಕಲ್ಯಾಣ'ವೆಂದು ಕರೆದರು. ಭಕ್ತ ಬಸವಣ್ಣ ಆ ಕಾಲದ ಸಮಯಾಚಾರಿ ಎನಿಸಿದ. ಹರಳಯ್ಯ ಮಧುವಯ್ಯಗಳ ಕಲ್ಯಾಣ ಕಟ್ಟುವ ಕೆಲಸ ಎಳಹೂಟ್ಟೆಯ ಭೀಕರ ಆಘಾತದಿಂದ ಕಟ್ಟಿದ ಕಲ್ಯಾಣ ಕೆಟ್ಟುಹೋದುದು ವಿಪರ್ಯಾಸ.
ಕಲ್ಯಾಣಕ್ರಾಂತಿಯಿಂದ ಶರಣರಗಷ್ಟೇ ಅಲ್ಲ ; ಅನುಭಾವ ಪೂರಿತ ವಚನಸಾಹಿತ್ಯಕ್ಕೂ ವಿಪತ್ತು ಆವರಿಸಿತು. ಈ ಸಂದಿಗ್ಧತೆಯ ಕ್ರಾಂತಿಕಾರಕ ಬದಲಾವಣೆ ಸಮಯಕಲ್ಯಾಣ, ವಿಜಯಕಲ್ಯಾಣ ವೆನಿಸಿತು. ಬಿಜ್ಜಳನ ಸೈನ್ಯದ ಕಣ್ಣಾವಲಿನಿಂದ ತಪ್ಪಿಸಿ ತಂದ ಅಪರೂಪದ ವಚನಸಾಹಿತ್ಯವನ್ನು ಹಂಪೆಯ ಪರಿಸರದಲ್ಲಿ ಅಡಗಿಸಿಡಲಾಯಿತು. ಹೀಗೆ ಇಟ್ಟ ಚಿಂತನಶೀಲ ವಚನಸಾಹಿತ್ಯಕ್ಕೆ ಸತ್ವಪೂರ್ಣ ವಾತಾವರಣ ದೊರತುದೇ ತಡ, ಲಿಂಗಾಯತ ಸಾಹಿತ್ಯವನ್ನು ಸಾಮಾಜಿಕ ರಾಜಕೀಯ ಧಾರ್ಮಿಕ ನೇತಾರರು ಹಂಪೆಯ ಪ್ರದೇಶದಲ್ಲಿ ನಡೆಸಿದ ಸಾಮೂಹಿಕ ಪ್ರಯತ್ನ 'ಪರತರ ಶಿವಾನುಭವಿಗಳ ಅಪರಿಮಿತ ಗೃಹಂ ಪರಿಕಿಪರಿಗಿದು ವಿಜಯಕಲ್ಯಾಣ'ವೆಂಬ ಸ್ವರೂಪ ವಿಜಯ ನಗರಕ್ಕೆ ಪ್ರಾಪ್ತವಾಯಿತು. ಕಲ್ಯಾಣದ ಕಟ್ಟುವಿಕೆಯ ಕೆಲಸದ ಮುಂದುವರಿಕೆಯಿಂದ ವಿಜಯ ನಗರ 'ವಿಜಯ ಕಲ್ಯಾಣ'ವೆನಿಸಿತು. ಇದು ಕಟ್ಟುತ್ತ ಬಂದ ಕಲ್ಯಾಣದ ದ್ವಿತೀಯ ಘಟ್ಟ, ಮುಸ್ಲಿಮರ ಅಭಿಯೋಗದಿಂದ ವಿಜಯನಗರ ಹಾಳಾಗುವುದರ ಜೊತೆಗೆ ಕಟ್ಟಿದ ಕಲ್ಯಾಣವೂ ಕೆಟ್ಟು ಹೋದುದು ದ್ವಿತೀಯ ವಿಪರ್ಯಾಸ.
ಕೊಡೆಕಲ್ಲ ಬಸವಣ್ಣ ವಿಜಯಕಲ್ಯಾಣದಿಂದ ಪ್ರೇರಿತರಾಗಿ ಮಕ್ಕಳಾದ ರಾಚಪ್ಪಯ್ಯ, ಗುಹೇಶ್ವರ, ಸಂಗಯ್ಯ, ಶಿಷ್ಯರಾದ ಮಂಟೇಸ್ವಾಮಿ ಮತ್ತು ಸಿದ್ಧಪ್ಪಾಜಿ ಕೆಟ್ಟು ಹೋದ ಕಲ್ಯಾಣವನ್ನು ಕೊಡೆಕಲ್ಲ ಪ್ರದೇಶದಲ್ಲಿ ಪ್ರಾರಂಭಿಸಿ 'ಬಾಹ್ಯದೊಳು ಗುರು ಲಿಂಗ ಜಂಗಮಗಳ ಆರಾಧನೆಯನ್ನು ಬಿಟ್ಟುಕೊಟ್ಟು ಕಾಯದೊಳು ಗುರು ಲಿಂಗ ಜಂಗಮಾರಾಧನೆಯ' ಆಂದೋಲನವನ್ನು ಅಧಿಕಾರಕ್ಕೆ ತಂದನು. ಈತ ನಿರೂಪಿಸಿದ ಕಲ್ಯಾಣ 'ಅಮರಕಲ್ಯಾಣ' ವೆನಿಸಿತು.
ಕ್ರಿ.ಶ. ೧೭ನೆಯ ಶತಮಾನದಲ್ಲಿ ಕಲಬುರ್ಗಿ ತಾಲ್ಲೂಕಿನ ನಾಗಾವಿ ಪರಿಸರದ ಆಂದೋಲನದಲ್ಲಿ ಗುರುಗುಂಡಬಸವ, ಕೊಪ್ಪಳದ ರಾಮಯ್ಯ, ಕಕ್ಕಳಮೇಲದ ಅಲ್ಲಮಪ್ರಭು, ಸಾಲೋಟಗಿಯ ಶಿವ ಯೋಗೀಶ್ವರ, ತಿಂಥಿಣಿ ಮೋನಪಯ್ಯ, ಗಗನಾಪುರದ ಗಂಗಪ್ಪಯ್ಯ ಮೊದಲಾದವರ ಸಹಯೋಗದಿಂದ ಕೊಡೆಕಲ್ಲ ಬಸವಣ್ಣನ ಸಂಪ್ರದಾಯದ ಮುಂದುವರಿಕೆಯಾಯಿತು. ಈ ಕಲ್ಯಾಣ 'ಧರ್ಮ ಕಲ್ಯಾಣ'ವೆನಿಸಿತು.
ಶರಣ ಸಂಸ್ಕೃತಿಯಲ್ಲಿ ಕ್ರಿ.ಶ. ೧೨ನೆಯ ಶತಮಾನದಿಂದ ಮೊದಲ್ಗೊಂಡು ೨೦ನೆಯ ಶತಮಾನದವರೆಗೆ ಸಮಯಕಲ್ಯಾಣ, ವಿಜಯಕಲ್ಯಾಣ, ಅಮರಕಲ್ಯಾಣ, ಧರ್ಮ ಕಲ್ಯಾಣ, ಶಾಸನೋಕ ಶರಣರ ಮಾಲಿಕೆಯಲ್ಲಿ 'ಶಾಸನ ಕಲ್ಯಾಣ' ಹೀಗೆ ಕಟ್ಟುತ್ತ ಬಂದ ಐದು ಕಲ್ಯಾಣಗಳು ಇಂದಿನವರೆಗೂ ಶರಣ ಕ್ಷೇತ್ರಗಳಾಗಿ ಮೆರೆಯುತ್ತಿವೆ. ಇಂಥ ಪ್ರಮುಖ ಶರಣಕ್ಷೇತ್ರಗಳ ವಿಸ್ತ್ರತ ರೂಪದ ಸಂಶೋಧನಾತ್ಮಕ ಅಧ್ಯಯನ ಇಲ್ಲಿದೆ.
ಪಂಚಕಲ್ಯಾಣ ಕ್ಷೇತ್ರಗಳ ತಲಸ್ಪರ್ಶಿ ಅಧ್ಯಯನಕ್ಕೆ ಈಗ ಸಕಾಲವಾಗಿದೆ. 'ಸಮಯ ಕಲ್ಯಾಣ' ಹಾಗೂ 'ಶಾಸನ ಕಲ್ಯಾಣ'ದ ಶರಣರು ರಚಿಸಿದ ವಚನಸಾಹಿತ್ಯ ಹಾಗೂ ಶಾಸನಸಾಹಿತ್ಯ ನಮ್ಮ ಮನಸ್ಸನ್ನು ಸ್ಪಂದಿಸಿದ್ದಷ್ಟು ನಂತರದ ವಿಜಯಕಲ್ಯಾಣ, ಅಮರ ಕಲ್ಯಾಣ, ಧರ್ಮಕಲ್ಯಾಣಗಳ ವಚನಸಾಹಿತ್ಯ ಮನಸ್ಸನ್ನು ಸ್ಪಂದಿಸದೆ ಹೋಯಿತು. ಸಮಯಕಲ್ಯಾಣದ ಶರಣರ ತತ್ತ್ವಸಿದ್ಧಾಂತಗಳನ್ನು ನಂಬಿ ಅವರ ಮಾನವೀಯತೆಗೆ ಮಾರುಹೋದ ಶರಣ ಶರಣೆ ಯರು ಬಾಳಿ ಬೆಳಗಿದ, ಸಮಾಧಿಸ್ಥರಾದ, ಲಿಂಗಾರ್ಚನೆ ಮಾಡಿಕೊಂಡ, ಹಾಗೆಯೆ ಶರಣತತ್ತ್ವ ಸಿದ್ಧಾಂತದಂತೆ ಜೀವಿಸಿ ಅನ್ಯರ ಜನಮನದಲ್ಲಿ ಬಿತ್ತಿ ಬೆಳೆಯಲು ಪರಿಶ್ರಮಿಸುತ್ತ ಬಂದಿರುವ ಶಿವಯೋಗಿಗಳ ಮತ್ತು ಅನುಭಾವಿಗಳ ಸಂಬಂಧ ಸ್ಥಳಗಳು ಭಕ್ತಿ ಗೌರವದ ಕೇಂದ್ರಗಳೆನಿಸಿವೆ. ಹೀಗೆ ವಿವಿಧ ಹಿನ್ನೆಲೆಗಳು ಕಾರಣ ವಾಗಿ ಶರಣರ ಅನುಭಾವಿಗಳ, ಶಿವಯೋಗಿಗಳ ಸಂಪರ್ಕ ಸಾಧ್ಯತೆ ಪಡೆದ ಸ್ಥಳಗಳನ್ನು ಶರಣಕ್ಷೇತ್ರಗಳೆಂದು ಗುರುತಿಸಲಾಗಿದೆ.
ಗುರು ಬಸವಣ್ಣನವರು ಲಿಂಗೈಕ್ಯರಾದ ಶರಣಕ್ಷೇತ್ರ ಕೂಡಲಸಂಗಮ, ಅಲ್ಲಮಪ್ರಭು, ಮಹಾದೇವಿಯಕ್ಕ ಗಳು ಬಯಲಾದ ಶ್ರೀಶೈಲಕ್ಷೇತ್ರ, ಶಿವಯೋಗಿ ಸಿದ್ಧರಾಮನ ಸೊನ್ನಲಾಪುರ ಇವೆಲ್ಲ ಸ್ಥಾವರಲಿಂಗ ಕ್ಷೇತ್ರಗಳಾಗಿದ್ದರೂ ಅಲ್ಲಿ ಸ್ಥಾವರಲಿಂಗಗಳ ಸಂಬಂಧವಿಲ್ಲದಿರುವುದ ರಿಂದ ಇವುಗಳನ್ನು ಶರಣ ಕ್ಷೇತ್ರಗಳೆಂದು ಸ್ಪಷ್ಟವಾಗಿ ನಂಬಲಾಗಿದೆ. ಇಂತಹ ಮಹತ್ವದ ಕ್ಷೇತ್ರಗಳು ಕರ್ನಾಟಕದುದ್ದಕ್ಕೂ ಹಬ್ಬಿ ಹರಡಿ ನಿಂತಿವೆ. ಇಂತಹ ಕ್ಷೇತ್ರಗಳನ್ನು ಕುರಿತು ಪರಿಚಯ, ಗ್ರಂಥಗಳು, ಲೇಖನಗಳು, ಶರಣ ತತ್ವ ಚಿಂತನ ಕೃತಿಗಳು, ಮಾರ್ಗಸೂಚಿ ನಕಾಶೆ, ವಾಸ್ತವ್ಯಕ್ಕೆ ಅನುಕೂಲತೆಗಳು, ಕ್ಷೇತ್ರ ಪ್ರವಾಸಕ್ಕೆ ಋತುಮಾನ, ಶರಣಕ್ಷೇತ್ರಗಳನ್ನು ಕುರಿತು ಬರೆದ ಗ್ರಂಥಗಳ ಮಾರಾಟ ವ್ಯವಸ್ಥೆ, ಕ್ಷೇತ್ರ ಪರಿಚಯ ಮಾಡಿಸುವ ಕೃತಿಗಳು 'ಮಾರ್ಗದರ್ಶಕ' ಆಕರಗಳೆನಿಸುತ್ತವೆ.
ಬಸವರಾಜದೇವರ ರಗಳೆಯನ್ನು ಹರಿಹರ, ಹರಿಹರ ಮಹತ್ವ ವನ್ನು ರಾಘವಾಂಕ, ರಾಘವಾಂಕ ಚರಿತ್ರೆಯನ್ನು ಸಿದ್ಧನಂಜೇಶ ಬರೆಯುವುದರ ಮೂಲಕ ನಿರ್ಮಾಣ ಪ್ರಜ್ಞೆ ಪ್ರಕಟಿಸಿದ ಕವಿಗಳು. ಇವರಲ್ಲಿ ಪಾಲ್ಕುರಿಕೆ ಸೋಮಾರಾಧ್ಯ, ಪಂಡಿತಾರಾಧ್ಯರು, ಬಸವಾದಿ ಪ್ರಮಥರವರೆಗಣ ಶಿವಭಕ್ತರನ್ನು ತಮ್ಮ 'ಗಣಸಹಸ್ರ ನಾಮಾವಳಿ' ಯಲ್ಲಿ ಬಿಂಬಿಸಿ ತೋರಿಸಿದರು. ತರುವಾಯದ ಚರಿತೆಗೆ ಲೆಕ್ಕಣಿಕೆಗೆ 'ವಿಸ್ತರಿಸುವೆ ಧರೆಯ ನೂತನರ ಚಾರಿತ್ರ್ಯಮಂ' ಎನ್ನುವ ಶಿವತತ್ತ ಚಿಂತಾಮಣಿಯ ಲಕ್ಕಣ್ಣ ದಂಡೇಶ,
ಲಕ್ಕಣ್ಣ ದಂಡೇಶ ಮಲ್ಲಣಾರ್ಯರು ಹೇಳಿ
ದಕ್ಕಜದ ನೂತನರ ಕಥೆಗಳನ್ನಲ್ಲದೆ ಮತ್ತೆ
ಮುಕ್ಕಣ್ಣನೊಲುಮೆಯಂ ಪಡೆದ ಶರಣ
ರ ಕಥೆಯನೊರೆದನಾ ಗುರುರಾಯನು ||
ಎನ್ನುವ ಸಿದ್ಧನಂಜೇಶರು ಶರಣರ ಚರಿತ್ರೆಗಳನ್ನು ಮುಂದುವರೆಸಿರುವರು. ಇವರ ಪ್ರಯತ್ನದಿಂದಾಗಿ ಸಮಸ್ತ ಶರಣರನ್ನು ಬಿಟ್ಟರೂ ಕೆಲವರ ಚರಿತ್ರೆಯನ್ನಾದರೂ ಉಳಿಸಲು ಸಾಧ್ಯವಾಗುತ್ತದೆ.
ಗುರು ಬಸವಣ್ಣನವರು ನಂದಿಯ ಅವತಾರ, ಮಡಿವಾಳ ಮಾಚಿದೇವ, ಏಕಾಂತ ರಾಮಯ್ಯರು ವೀರಭದ್ರನ ಅವತಾರ, ನಂದೀಶ್ವರ ಮಲ್ಲಯ್ಯ, ಅಮರಗುಂಡದ ಮಲ್ಲಿಕಾರ್ಜುನರು ಶ್ರೀಶೈಲ ಮಲ್ಲಿಕಾರ್ಜುನನ ಅವತಾರ, ಚೌಡದಾನಪುರದ ಶಿವದೇವರು, ತೋಂಟದ ಸಿದ್ದಲಿಂಗಯತಿಗಳು, ಪರಶಿವನ ಅವತಾರ ಎಂಬ ಹೇಳಿಕೆಗಳು 'ಜಗದೈಕ ಗುರು ಸಿದ್ಧರಾಮಂ', 'ಸನ್ನುತ ಗುರು ಸಿದ್ಧರಾಮಂ,' ನೆಲುವಿಗೆಯ ಸಾತಯ್ಯ ಹುಳಿಯುಮೇಶ್ವರ ಚಿಕ್ಕಯ್ಯ, 'ಲಿಂಗೈಕ್ಯದೇಹಿ', 'ಶರಣಸಂತಾನ' ಎನಿಸಿದ ಅಮುಗಿದೇವ, 'ಲಿಂಗಕ್ಕಂ ಜಂಗಮಕ್ಕಂ ಹಿಂಗದೆ ದಾಸತ್ವಂ ಮಾಳ್ವುದೇ ಬೆಸನೆಂದಾ ಸಂಗನ ಬಸವನ ಆಚರಣೆಯ ಶಿವದೇವ, ತೋಂಟದ ಸಿದ್ದಲಿಂಗನಂತೂ 'ಜ್ಞಾನಕ್ರಿಯಾ ಸ್ವರೂಪನುಂ' ಸರ್ವಾಂಗಲಿಂಗಿ ಷಟ್‌ಸ್ಥಲಜ್ಞಾನಿ, ಸರ್ವಾಚಾರಸಂಪನ್ನ ಪಾದೋದಕ ಪ್ರಸಾದ ಪ್ರತಿಷ್ಠಾಚಾರ್ಯ, ಅಷ್ಟಾವರಣ ಲಂಕರಣ' ಎಂದು ಕೀರ್ತಿತನಾಗಿರುವನು. ಇದಲ್ಲದೆ ಲಿಂಗಾಯತರಿಗೆ ಪೂಜ್ಯವಾಗಿರುವ ಅಷ್ಟಾವರಣದ ಅಂಗಗಳಾದ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ಮಂತ್ರ, ರುದ್ರಾಕ್ಷಿ ಪದಗಳು, ಲಿಂಗಾಯತಕ್ಕೆ ವಿಶಿಷ್ಟವಾಗಿರುವ ಶಿವಪುರಿ, ಗಣಮಠ, ಗಣಕುಮಾರ, ಗಣಕುಮಾರಿ, ವಿಭೂತಿಪಟ್ಟ ಎಂಬ ಲಿಂಗಾಯತ ಪಾರಿಭಾಷಿಕಗಳು ಶರಣಧರ್ಮದ ಪಟ್ಟಿಕೆಯನ್ನು ಸೂಚಿಸಿವೆ.
'ಶಿವತತ್ತ್ವ ಚಿಂತಾಮಣಿ' ಅಮೂಲ್ಯ ಕೃತಿಯ ಕರ್ತೃ ಲಕ್ಕಣ್ಣ ದಂಡೇಶ ಲಿಂಗಾಯತನೆಂದು ಪ್ರತೀತಿ ಇದೆ. ಇವನ ಗುರು ಪಾಶುಪತ ನಾಗಿರುವನು. ಹೀಗೆ ಒಂದೆಡೆ ಸ್ಥಾವರಲಿಂಗಪೂಜೆ ದೇವಾಲಯ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದುದು ಇಂಥವರನ್ನು ಸಂಕ್ರಮಣ ಕಾಲದ ಪ್ರಗತಿಪರ ಲಿಂಗಾಯತರೆನ್ನಬೇಕಾಗುತ್ತದೆ. ಮುಂದೆ ಲಿಂಗಾಯತ ಉನ್ನತಮಟ್ಟ ಮುಟ್ಟಿದರೂ ಶೈವಧರ್ಮದ ಪ್ರಮುಖ ಕರ್ತವ್ಯ ದೇವಾಲಯ ನಿರ್ಮಾಣ ಮೂರ್ತಿಪೂಜೆಗಳು ಯಾವ ಕಾಲಕ್ಕೂ ಲಿಂಗಾಯತದಿಂದ ಹೊರಗಾಗಲಿಲ್ಲ. ಇಷ್ಟೇ ಏಕೆ ನಿಜವಾದ ಲಿಂಗಾಯತದ ಆಚರಣೆಗಳೇ ದೇವಸ್ಥಾನ ನಿರ್ಮಾಣ, ಮೂರ್ತಿಪೂಜೆ, ಆರಾಧನೆ ಎಂಬಷ್ಟರ ಮಟ್ಟಿಗೆ ವೇಷತೊಟ್ಟು ಕನ್ನಡನಾಡಿನಲ್ಲಿ ಉಳಿದು ಬಂದಿವೆ.
ಹೀಗಾಗಿ ಶರಣಕ್ಷೇತ್ರಗಳು, ಲಿಂಗಾಯತ ಶರಣರನ್ನು ಕುರಿತ ಶಾಸನಗಳಲ್ಲಿ ದೇವಾಲಯ, ಜೀರ್ಣೋದ್ಧಾರ, ದಾನದತ್ತಿ ಸ್ವೀಕಾರ ಗಳು, ಲಿಂಗಪ್ರತಿಷ್ಠೆ, ತಪ್ಪದೆ ಬಂದಿವೆ. ಸ್ವತಃ ಗುರು ಬಸವಣ್ಣನವರ ವಂಶಜ ಕವಿಳಾಸಪುರದ ಹಾಲಬಸದಿದೇವ ದೇವಗಿರಿಯಾದವರ ಮಂತ್ರಿ ವರ್ಯರಾದ ಚೌಡಿಸೆಟ್ಟಿ ಮತ್ತು ನಾಗರಸರಿಂದ ದಾನ ಸ್ವೀಕರಿಸಿದ್ದು, ಏಕಾಂತದ ರಾಮಯ್ಯ ದೇವಸ್ಥಾನದ ಆಚಾರ್ಯನಾಗಿ ಮಂಡಳೇಶ್ವರರಿಂದ ದತ್ತಿ ಪಡೆದುದು, ಅಷ್ಟೇ ಅಲ್ಲ ಅಬ್ಬಲೂರು, ಕುಡುತಿನಿ ಇಂಗಳಗಿ ತಾಳಿಕೋಟೆ ಶರಣಕ್ಷೇತ್ರಗಳಲ್ಲಿರುವ ಶಾಸನಗಳು ಭಾವ ಭಾಷೆ ಸನ್ನಿವೇಶಕ್ಕೆ ತಕ್ಕಂತೆ ವೀರೋಚಿತವಾಗಿವೆ. ಧರ್ಮಾಧರ್ಮಗಳ ಅಸ್ತಿತ್ವ ಉಳಿಯುವಿಕೆಯಲ್ಲಿ ಇವೆಲ್ಲ ಆವಶ್ಯಕವೆನಿಸುತ್ತವೆ. ಇಂಥ ಶರಣರು ನೆಲೆನಿಂತ ಪುಣ್ಯಮಯ ಶರಣಕ್ಷೇತ್ರಗಳು ಲಿಂಗಾಯತರಿಗೆ ಭಕ್ತಿಶ್ರದ್ಧೆಯ ಪ್ರಮುಖ ತಾಣಗಳೆನಿಸಿವೆ.
ಶರಣಕ್ಷೇತ್ರಗಳಿಗೆ ಸಂಬಂಧಿಸಿ 'ಪುರಾತನ ನೂತನರೆನಿಸಿದ ಅಸಂಖ್ಯಾತ ಗಣಂಗಳ' ಪ್ರಶಸ್ತಿ ಹೊತ್ತ ಗದ್ಯಭಾಗಗಳು ಇಲ್ಲಿವೆ. ಅವುಗಳನ್ನು ಪರಿಷ್ಕರಿಸಿ ಸಂಗ್ರಹಿಸುವ, ಪುಸ್ತಕರೂಪದಲ್ಲಿ ಪ್ರಕಟಿಸುವ, ಶರಣರ ವಿಗ್ರಹಗಳ ರಕ್ಷಣೆ, ಶರಣರ ಶಾಸನಗಳ ಸಂರಕ್ಷಣೆ, ಶರಣಕ್ಷೇತ್ರಗಳ ಸಂರಕ್ಷಣೆ, ಶರಣರನ್ನು ಕುರಿತು ಹೊಸ ಹೊಸ ಶಾಸನಗಳು, ಮೂರ್ತಿಶಿಲ್ಪಗಳ ಶೋಧನೆ, ಶರಣ ಕಾರ್ಯ ಕ್ಷೇತ್ರಗಳ ಉತ್ಪನನಗಳು ಇಂದು ಅತಿಮುಖ್ಯವಾಗಿದ್ದು ಶರಣಕ್ಷೇತ್ರ ಗಳ ವಿಸ್ತ್ರತ ಅಧ್ಯಯನ ಕೈಗೊಳ್ಳುವ ಸಂಶೋಧಕರು ಗಮನದಲ್ಲಿರಿಸಿ ಕೊಂಡು ಅಧ್ಯಯನ ಕೈಕೊಳ್ಳಬೇಕಾಗುತ್ತದೆ.