Previous ಕುರುಗೋಡ ಗುಮ್ಮಳಾಪುರ Next

ಗುಡ್ಡಾಪುರ

ಗುಡ್ಡಾಪುರ ಕ್ಷೇತ್ರ

ಶರಣರು ಹೆಣ್ತನಕ್ಕಿತ್ತ ಗೌರವ ಗುಡ್ಡಾಪುರದ ದಾನಮ್ಮ. ವೀರಗಣಾಚಾರ ವೃತ್ತಿ ಅನುಸರಿಸಿ ಧರ್ಮಕ್ಕಾಗಿ ಖಡ್ಗವೆತ್ತಿದ ಶರಣೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡುಗಳಲ್ಲಿ ಪೂಜೆಗೊಳ್ಳುತ್ತಿರುವ ದಾನಮ್ಮ ಇಂದು ಅಂತರರಾಷ್ಟ್ರೀಯ ಶರಣೆ ಎನಿಸಿರುವಳು.

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಗುಡ್ಡಾಪುರ ವಿಜಾಪುರದಿಂದ ವಾಯುವ್ಯದಿಕ್ಕಿಗೆ ಮೂವತ್ತು ಮೈಲು ದಕ್ಷಿಣೋತ್ತರ ಗುಡ್ಡಗಳ ಸಾಲಿನಲ್ಲಿ ಶೋಭಿಸುತ್ತಿರುವ ಶರಣಕ್ಷೇತ್ರ. ಹೆಣ್ಣು ಮಗಳೊಬ್ಬಳು ಶರಣರು ತೋರಿದ ಸನ್ಮಾರ್ಗದಲ್ಲಿ ವಿಶಿಷ್ಟ ಸಾಧನೆ ಪಡೆದು ದೇವತ್ವವನ್ನು ಸಾರಿದ್ದು ಬಸವಾದಿ ಶರಣರು ಹೆಣ್ತನಕ್ಕಿತ್ತ ಗೌರವವಿದು. ಗುಡ್ಡಾಪುರದ ಭೌಗೋಲಿಕ ಪರಿಸರ, ಸಮೀಪದ ಗುಡಿಯ ಪರಿಸರದ ಮಲ್ಲಿಕಾರ್ಜುನ, ಸೋಮೇಶ್ವರ, ವೀರಭದ್ರ ದೇವಾಲಯಗಳಿವೆ. ಇಂದಿಗೂ ಕರ್ನಾಟಕದ ಬೆಳಗಾವಿ, ಗೋಕಾಕ, ರಬಕವಿ, ನಿಪ್ಪಾಣಿ, ಬನಹಟ್ಟಿ, ಜಮಖಂಡಿ, ಘಟಪ್ರಭಾ, ಗದಗ, ಮಹಾರಾಷ್ಟ್ರದ ವಾತಾಖ್ಯಪುರ ಇಂದಿನ ವಾಡಪುರ, ಸೊಲ್ಲಾಪುರ, ವೈರಾಗಿ, ವಡವಲ, ಚಿಮ್ಮಣಗೇರಿಗಳಲ್ಲಿ ದಾನಮ್ಮನ ದೇವಸ್ಥಾನ ಗಳಿವೆ. ದಾನಮ್ಮ ವಿಗ್ರಹರೂಪದಲ್ಲಿ ಪೂಜೆಗೊಳ್ಳುತ್ತಿರುವಳು. ವೀರಭದ್ರನ ಗುಡಿಗಳಲ್ಲಿ ದಾನಮ್ಮನ ಮೂರ್ತಿ ಪ್ರತಿಷ್ಠೆಗೊಂಡಿದೆ.

ಗುಡ್ಡಾಪುರದ ಶರಣಕ್ಷೇತ್ರವನ್ನು ಪ್ರವೇಶಿಸಿದರೆ ಉತ್ತರದಿಕ್ಕಿನಲ್ಲಿ ಮಹಾದ್ವಾರ, ದೊಡ್ಡದಾದ ಎತ್ತರವಾದ ದೀಪಸ್ತಂಭ, ಅಡಿಗಲ್ಲೇಶನ ಗುಡಿಯ ಬಳಿ ಮತ್ತೊಂದು ದೀಪಸ್ತಂಭವಿದೆ. ಐದು ಗೋಪುರ ಗಳನ್ನೊಳಗೊಂಡ ದೇವಸ್ಥಾನ ಸಂಕೀರ್ಣ, ಕಣ್ಮನ ಸೆಳೆವ ಪ್ರಕೃತಿ ಇಲ್ಲಿಯದು. ಐದು ಗೋಪುರಗಳನ್ನು ದಾನಮ್ಮ, ಸೋಮನಾಥ, ಮಲ್ಲಿಕಾರ್ಜುನ ವೀರಭದ್ರ ಅಡಿಗಲ್ಲೇಶನ ಹೆಸರಿನಲ್ಲಿ ಕರೆಯುವು ದುಂಟು. ದೇವಸ್ಥಾನದ ವಿಸ್ತಾರ ಅಂಕಣ, ದಾನಮ್ಮನ ಮೂರ್ತಿಯ ಎದುರಿನಲ್ಲಿ ನಂದಿವಿಗ್ರಹ, ಗರ್ಭಗುಡಿ ಉತ್ತರಾಭಿಮುಖವಾಗಿದ್ದು ಮಂಟಪದ ಪಶ್ಚಿಮ ದಿಕ್ಕಿನಲ್ಲಿ ಸೋಮೇಶ್ವರಲಿಂಗದ ದೇವಸ್ಥಾನವಿದೆ. ಈ ಸೋಮೇಶ್ವರನೇ ದಾನಮ್ಮನ ಇಷ್ಟದೈವ, ದಾನಮ್ಮ ತನ್ನ ಶಿವಯೋಗ ಸಾಧನೆಯನ್ನು ಇಲ್ಲಿಯೆ ಕೈಕೊಂಡಂತಿದೆ. ಇಲ್ಲಿಯ ವೀರಭದ್ರ ಮಲ್ಲಿಕಾರ್ಜುನ ಮೂರ್ತಿಗಳು ಬೇರೆ ಬೇರೆ ಮಂಟಪ ಗಳಲ್ಲಿ ಪ್ರತಿಷ್ಠೆಗೊಂಡಿವೆ. ಸೋಮೇಶ್ವರನ ಶಿರದ ಮೇಲೆ ಸರ್ಪವಿದ್ದು ಸೊಲ್ಲಾಪುರದ ಸಿದ್ದರಾಮನ ವಿಗ್ರಹವನ್ನು ಹೋಲುವಂತಿದೆ. ದಾನಮ್ಮನ ವಿಗ್ರಹದ ಎದುರಿನಲ್ಲಿ ಆಕೆಯ ಗುರುವಿನ ಹೆಸರಿನಲ್ಲಿ ಕಲ್ಲಿನ ಪಾದುಕೆಗಳು ಪೂಜೆಗೊಳ್ಳುತ್ತಿವೆ. ಗುಡಿಯ ಹೊರಭಾಗದಲ್ಲಿ ಆನೆ ಸಿಂಹಗಳನ್ನು ಕಂಡರಿಸಲಾಗಿದೆ. ಯಾತ್ರಿಕರ ಸಲುವಾಗಿ ೨೫ ರೂಮುಗಳಿದ್ದು ಗುಡಿಯ ಬಳಿಯ ಬಾವಿಯಿಂದ ಪೌಳಿಗಳಿಗೆ ನಲ್ಲಿಯ ಮೂಲಕ ನೀರು ಸರಬರಾಜುಗೊಳ್ಳುತ್ತದೆ.

ಷೋಡಶ ಗಣದಲ್ಲಿ ಗುಡ್ಡಮ್ಮೆಯದು ಸುಪ್ರಸಿದ್ಧವಾದ ಹೆಸರು. ವೈಷ್ಣವರು ಕಿತ್ತೊಗೆದ ಅಣಂಪೂರ 'ಬಾಲಬ್ರಹ್ಮಶಲಿಂಗ'ವನ್ನು ತನ್ನ ಷೋಡಶಗಣದ ಬೆಂಬಲದಿಂದ ಪುನಃ ಸ್ಥಾಪಿಸಿದ ವೀರಮಹಿಳೆಯ ಬಗ್ಗೆ ಅನೇಕ ಶಾಸನಗಳು ಎಡೆಪಡೆದಿವೆ. ಕ್ರಿ.ಶ. ೧೧೮೪ರ ತಾಳೀಕೋಟೆ ಶಾಸನ, ಕ್ರಿ.ಶ. ೧೨೦೯ರ ಇಂಗಳಗಿ ಶಾಸನ, ದತ್ತಿ ದಾಖಲೆ ಇಲ್ಲದ ವಿಜಾಪುರ ಶಾಸನ, ಕ್ರಿ.ಶ. ೧೨೭೮ರ ವಿಜಾಪುರ ಶಾಸನಗಳು ವರದಾನಿ ಗುಡ್ಡಮ್ಮೆಯ ಮಹತಿ ವ್ಯಕ್ತಪಡಿಸಿವೆ. ತಾಳಿಕೋಟೆ ಶಾಸನದಲ್ಲಿ "..... ಪರಿಯಳಿಗೆ ಅಣಿಲೆವಾಡ ಉಣಕಲ್ಲು, ಸಂಪಗಾವಿ, ಅಬ್ಬಲೂರು ಮಾರುಡಿಗೆ ಅಣಂಪೂರು, ಕರಹಾಡ ಕೆಂಭಾವಿ ಬಮ್ಮುಕೂರ ಮೊದಲಾಗಿ ಅನನ್ತದೇಶದೇಶಾನ್ತರ ದಲಿದಿರಾದ ಪರಸಮಯಿಗಳ ಪಡಡಿಸಿ" ಎಂಬ ವಾಕ್ಯವಿದ್ದು ಇಲ್ಲಿಯ 'ಅಣಂಪೂರು' ಗುಡ್ಡಟ್ಟೆಯನ್ನು ಸೂಚಿಸುತ್ತದೆ. ಇಲ್ಲಿಯ ವೀರವರ್ಣನೆ ಇವಳ ಕಲಿತನಕ್ಕೆ ಸುಭದ್ರ ಹಿನ್ನೆಲೆಯಾಗಿ ನಿಂತಿದೆ. ಕ್ರಿ.ಶ. ೧೨೦೯ರ ಇಂಗಳಗಿ ಶಾಸನ ಗುಡ್ಡಗಳ ಹಿರಿತನದಲ್ಲಿ ಬಲವೈಗಳ ಕಾಲು ತೊಳೆದು ಶಿವಲಿಂಗಗಳಿಗೆ ದತ್ತಿ ನೀಡಿದುದನ್ನು ವಿವರಿಸಿದೆ. ಈ ಗುಡ್ಡವ್ವೆಯು ಷೋಡಶಗಣಕ್ಕೆ ಸಂಬಂಧಿಸಿದವಳೆಂಬುದು ವಿದ್ವಾಂಸರ ಮತ. ಈ ಶಾಸನದಲ್ಲಿ ಅಸಂಖ್ಯಾತ ಮಹಾವೀರ ಗಣಂಗಳನ್ನು 'ಕಂಕರನಂ ಸೆಂಡಾಡುವ' ಎಂಬ ಪದ್ಯ ಈಕೆಯ ಕಲಿತನಕ್ಕೆ ಪೂರಕವಾಗಿದೆ. ವಿಜಾಪುರದ ಶಾಸನದಲ್ಲಿ ಕ್ಷೇತ್ರವಾಸಿಯ ತ್ರಿಕಾಲ ಪೂಜೆಯ ಬಗ್ಗೆ, ಆತನಿಗೆ ಕೊಟ್ಟ ದಾನಗಳು, ಗುಡ್ಡಾದೇವಿಯ ಭಂಡಾರ, ದಾನಚಿಂತಾಮಣಿ ಮಳೆ' ಎಂಬ ಪಾರಿಭಾಷಿಕ ಪದಗಳು ಅವಳ ಮಹತ್ವ ಬಿಂಬಿಸಿವೆ. ವಿಜಾಪುರದ ಮತ್ತೊಂದು ಶಾಸನದಲ್ಲಿ 'ಶ್ರೀ ವರದಾನಿ ಶ್ರೀ ಪುರುಶೇಶ್ವರದೇವರ ಪ್ರತಿಷ್ಠೆ ಮಾಡಿ ಪುರವಂ ರಚಿಸಿ ದೇವರುಗಳ ಅಂಗಭೋಗ ರಂಗ ಭೋಗಕ್ಕೆ ಶ್ರೀ ಮಂಡಳಿಕ ಮಹಾದೇವ ರಾಣೆಯರು ದತ್ತಿ ಕೊಟ್ಟ ಉಲ್ಲೇಖವಿದೆ. ಶ್ರೀ ವರದಾನಿಯ ಪ್ರತಿಷ್ಠಾಪನಾ ಉಲ್ಲೇಖ ಆ ಕಾಲದಲ್ಲಿ ನಡೆಯುತ್ತಿದ್ದ ಗುಡ್ಡವ್ವೆಯ ಮೂರ್ತಿಪೂಜೆಯನ್ನು ತಿಳಿಸುತ್ತದೆ. ಅರ್ಚಕನಿಗಿರಬೇಕಾದ ಅರ್ಹತೆಗಳು, ವರದಾನಿ, ದಾನಚಿಂತಾಮಣಿ ಎಂಬ ವರದಾನಿಯ ವಿಶೇಷಣಗಳು ಗಮನಾರ್ಹವೆನಿಸಿವೆ. ಈ ದೇವಸ್ಥಾನ ೧೧ನೆಯ ಶತಮಾನಕ್ಕೆ ಸೇರಿದುದು ಎಂದು ತಿಳಿದುಬರುತ್ತದೆ.

ದಾನಮ್ಮನ ವಿಗ್ರಹಗಳು ದೇವಸ್ಥಾನಗಳು ಹನ್ನೆರಡು ಹದಿನೈದು ಹದಿನೆಂಟನೆಯ ಶತಮಾನಗಳಲ್ಲಿ ಜೀರ್ಣೋದ್ಧಾರಗೊಂಡಿವೆ. ವರದಾನಿಯಮ್ಮ ವಿಗ್ರಹ ಅಚಲವಾದ ಮೂರ್ತಿ, ಪ೦ಚಕೋನದ ಪೀಠದ ಮೇಲೆ ಉತ್ತರಾಭಿಮುಖವಾಗಿ ಕುಳಿತ ದೇವಿಯ ಕಪ್ಪು ಶಿಲಾಮೂರ್ತಿ ಕಣ್ಮನ ಸೆಳೆಯುವಂತಿವೆ. ದಾನಮ್ಮ ಕುಳಿತ ಭಂಗಿ ಪೂರ್ಣ ಪದ್ಮಾಸನವಾಗಿಲ್ಲ. ಈಕೆ ಉಗ್ರ ದೇವತೆ ಎಂಬಂತೆ ಕೈಗಳು ಮೊಣಕಾಲ ಮೇಲಿದ್ದು ಎಡಗೈಯಲ್ಲಿ ಇಷ್ಟಲಿಂಗವಿದೆ. ಬಲಗೈ ಜಪಮಾಲೆ, ವರದಹಸ್ತ ಅಂಗೈಯ ಚಕ್ರ ನಕ್ಷತ್ರಗಳು ಗೋಚರಿಸುತ್ತವೆ. ಕೊರಳಲ್ಲಿ ಕಂಠಾಭರಣಗಳು, ತೋಳುಗಳಿಗೆ ರುದ್ರಾಕ್ಷಿ ತರಹದ ತೋಳಬಂದಿ ನಡುವಿಗೆ ನಡಪಟ್ಟಿ, ಭುಜಗಳಿಗೆ ಆಭರಣಗಳು, ಕಿವಿಗಳಿಗೆ ದೊಡ್ಡದಾದ ಓಲೆಗಳು, ಮೂಗಿಗೆ ನತ್ತು ಮೈಪೂರ್ತಿ ರುದ್ರಾಕ್ಷಿ ಮಾಲೆ, ಹಣೆಯ ಮೇಲೆ ಮೂರು ಬೆರಳು ವಿಭೂತಿ, ದೇವಿಯ ಮುಖದ ಮೇಲೆ ರಾರಾಜಿಸಿವೆ.

ವರದಾನೇಶ್ವರಿ ದಿನದ ಮೂರು ಹೊತ್ತು ಮುಂಜಾನೆ ಹತ್ತು ವರ್ಷದ ಕುವರಿ, ಮಧ್ಯಾಹ್ನ ಲೀಲಾ ವಿನೋದಿನಿ, ಧೀರಗಂಭೀರೆ ಯಾದರೆ, ರಾತ್ರಿ ಮಮತೆ ಮೈದಳೆದ ವಾತ್ಸಲ್ಯರೂಪಿ ತಾಯಿಯಂತೆ ವೃದ್ಧೆಯಾಗಿ ಕಾಣಿಸಿಕೊಳ್ಳುತ್ತಾಳೆ. ಮೈಮೇಲೆ ವಿಭಿನ್ನ ಹೂಗಳು, ತಲೆಯ ಮೇಲೆ ದಂಡೆ, ಮೂಗುತಿ, ಕಣ್ಣಬಟ್ಟು, ರುದ್ರಾಕ್ಷಿಸರ, ಬಂಗಾರ ಕಾಸಿನ ಸರ ಅಲಂಕೃತಗೊಂಡ ತಾಯಿ ತ್ರಿಕಾಲ ಪೂಜೆಯಲ್ಲಿ ಮಮತಾಮಯಿಯಾಗಿ ಗೋಚರಿಸುತ್ತಾಳೆ. ತಾಯಿಯ ಬಳಿ ಉಡಿಅಕ್ಕಿ ಗಂಟು, ಜೋಡು ತೆಂಗಿನಕಾಯಿ ನೀರು ತುಂಬಿದ ತಂಬಿಗೆ ಆರತಿ, ದಂಡ ಇವು ನಿತ್ಯೋತ್ಸವದಲ್ಲಿ ಕಂಡುಬರುವ ಪೂಜಾ ಪರಿಕರಗಳು. ಉತ್ಸವ ಸೋಮವಾರ, ಪ್ರತಿ ಅಮಾವಾಸ್ಯೆ, ಶ್ರಾವಣದಿನ ಜರುಗುತ್ತವೆ. ಬಂದ ಭಕ್ತರು ಹೋಳಿಗೆ ಎಡೆಯ ಮೂಲಕ ದಾಸೋಹ ಕಾರ್ಯ ಕೈಕೊಳ್ಳುತ್ತಾರೆ.

ಗುಡ್ಡಮ್ಮೆ: ಚಾರಿತ್ರಿಕ ಅಂಶಗಳು

ಲಕ್ಕಣ್ಣದಂಡೇಶನ ಶಿವತತ್ವ ಚಿಂತಾಮಣಿ, ಭೀಮಕವಿಯ ಬಸವಪುರಾಣ, ಹರಿಹರನ ಮಹಾದೇವಿಯಕ್ಕನ ರಗಳೆ, ಪದ್ಮಣಾಂಕನ ಪದ್ಮರಾಜ ಪುರಾಣ, ಕಿಕ್ಕೇರಿ ನಂಜುಂಡಾರಾಧ್ಯನ ಭೈರವೇಶ್ವರ ಕಾವ್ಯಗಳು ಗುಡ್ಡಮ್ಮೆಯ ಚಾರಿತ್ರಿಕ ಅಂಶಗಳ ಬಗ್ಗೆ ಬೆಳಕು ಬೀರುತ್ತವೆ. ಹಳಕಟ್ಟಿಯವರು ಶಿವಾನುಭವ ಪತ್ರಿಕೆಯ ಸಂಪುಟ ಒಂದು, ಸಂಚಿಕೆ ಎರಡರಲ್ಲಿ ಗುಡ್ಡಮ್ಮೆಯನ್ನು ಕುರಿತು ಬರೆದಿರುವರು. ಬಸವೇಶ್ವರನ ಕಾಲದ ವರದಾನಿಗುಡ್ಡಮ್ಮ ಧರ್ಮ ಪ್ರಸಾರ ಕಾರ್ಯದಲ್ಲಿ ಖಡ್ಗ ಹಿಡಿದು ಹೋರಾಡಿದ ಶೈವ ವೈಷ್ಣವರಲ್ಲಿದ್ದ ತಾರತಮ್ಯ ಹೊಡೆದೋಡಿಸಿ ಶಿವಸರ್ವೊತ್ತಮತ್ವ ಸಾರಿದ ಮಹಿಳೆ. ಎಂದು ವಿವರಿಸಿರುವರು.

ಕವಿ ಹರಿಹರನ ಪ್ರಕಾರ ಅಕ್ಕಮಹಾದೇವಿಗಿಂತ ಮೊದಲೇ ಬಂದು ಹೋದ ದಾನಮ್ಮ, ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿದ ಕುರುಹುಗಳು ಕಾಣಿಸುವುದಿಲ್ಲ. ಬಹುಶಃ ಉಳಿದ ಶರಣೆಯರಿಗಿಂತ ಭಿನ್ನವಾಗಿ ಪಂಚಾಚಾರ ಗಣಾಚಾರವನ್ನು ಅಳವಡಿಸಿ ಕೊಂಡವಳು. ವರದಾನಿಯಮ್ಮನನ್ನು ಕುರಿತು ಅನೇಕರು ಚಾರಿತ್ರಿಕ ಕೃತಿ ರಚಿಸಿರುವುದುಂಟು. ಅದರಲ್ಲಿ ಗಮನಿಸಬೇಕಾದ ಕೃತಿ ಪ್ರೊ. ಕೆ.ಜಿ. ಕುಂದಣಗಾರ ಪ್ರಕಟಿಸಿದ Inscriptions in Northern Karnatak of Kolapur State' ಗ್ರಂಥ'. ಇದರಲ್ಲಿಯ ಶಾಸನವೊಂದು ದೇವಗಿರಿ ಯಾದವ ವಂಶದ ಮಹಾದೇವರಸನ ಮಾಂಡಲಿಕ ಸಾಯಿದೇವನು ವಿಜಾಪುರ ಜಿಲ್ಲೆಯ ಉತ್ತರಭಾಗವನ್ನು ಆಳುತ್ತಿದ್ದು ವಾತಾಖ್ಯಪುರ ಎಂಬಲ್ಲಿ ವರದಾನಿಯ ಹೆಸರಿನಿಂದ ಒಂದು ದೇವಾಲಯ ಕಟ್ಟಿಸಿ ಅದಕ್ಕೆ ಉಂಬಳಿ ಹಾಕಿಕೊಟ್ಟದ್ದನ್ನು ತಿಳಿಸಿದೆ. ಸಾಯಿದೇವನು ವರದಾನಿಯ ಹೆಸರಿನಲ್ಲಿ ಲಿಂಗಪ್ರತಿಷ್ಠೆ ಮಾಡಿಸಿದುದು ಈ ಶಾಸನದ ವಿಷಯ.

ಉಮರಾಣಿಯಿಂದ ಎಂಟು ಮೈಲು ಉತ್ತರಕ್ಕಿರುವ ಸಂಕಗ್ರಾಮ ಸಂಗಮನಾಥನ ಕ್ಷೇತ್ರ. ಶಿವಭಕ್ತರಾದ ಅನಂತರಾವ ಶಿರಸಮ್ಮನವರ ಕುವರಿ ದಾನಮ್ಮ, ಅವರು ಮದುವೆಯಾದ ಕ್ಷೇತ್ರವೇ ಸಂಕತೀರ್ಥ ವೆಂದು ಹೆಸರುವಾಸಿಯಾಗಿದೆ. ಗುಡ್ಡಾಪುರದಿಂದ ಹದಿನಾಲ್ಕು ಮೈಲು ಅಂತರದ ನಿಸರ್ಗರಮ್ಮ ಸುಂದರತಾಣವಿದು. ಸಂಕತೀರ್ಥದಲ್ಲಿ ಸಂಗಮನಾಥ ಹೆಸರಿನ ಸ್ಥಾವರ ಲಿಂಗಗಳು ಪೂಜೆಗೊಳ್ಳುತ್ತಿವೆ. ದೇವಾಲಯದ ಮುಂಬದಿಗೆ ನೀರಿನ ಪುಟ್ಟ ಹೊಂಡವಿದೆ. ಬಲಭಾಗ ದಲ್ಲಿ ದೊಡ್ಡ ಅರಳಿಮರ ಸಂಕಕ್ಷೇತ್ರಕ್ಕೆ ಬರುವ ಭಕ್ತರಿಗೆ ಮುಕ್ತಿಯ ಸೋಪಾನವೆನಿಸಿದೆ. ಹೀಗೆ ದಾನಮ್ಮ ಆಧ್ಯಾತ್ಮಿಕರಂಗವಷ್ಟೇ ಅಲ್ಲ ; ದುಷ್ಟರನ್ನು ಖಡ್ಗ ಹಿಡಿದು ದಂಡಿಸಿ ನಾಡನ್ನು ರಕ್ಷಿಸಿಕೊಂಡು ಬಂದಿದ್ದಾಳೆ. ಇಂದು ಗುಡ್ಡಮ್ಮನ ಚಾರಿತ್ರಿಕ ಮಹತಿಯಿಂದ ಗುಡ್ಡಾಪುರ ಶರಣಕ್ಷೇತ್ರವಾಗಿ ಮೆರೆಯುತ್ತಿದೆ.

ಪರಿವಿಡಿ (index)
Previous ಕುರುಗೋಡ ಗುಮ್ಮಳಾಪುರ Next