Previous ತೊರಗಲ್ಲು ಮುರುಗೋಡ Next

ಗೊಡಚಿ

ಗೊಡಚಿ ಕ್ಷೇತ್ರ

ಈ ಗೊಡಚಿಯಲ್ಲಿ ಶರಣಸಮೂಹಕ್ಕೂ ಬಿಜ್ಜಳನ ಸೈನಿಕರಿಗೂ ಘೋರ ತುಮುಲವಾಗಿದೆ. ಶರಣ ಶಿಷ್ಟಾಚಾರದಂತೆ ಶರಣ ಮಡಿವಾಳ ಮಾಚಿದೇವ ಮರಣಾಂತಿಕ ಗಾಯಗಳಿಂದ ಹಿಂದೆ ಸರಿದಂತಿದೆ. ಅಷ್ಟರಲ್ಲಿ ಕೂಡಲಸಂಗಮದಿಂದ ಗುರು ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ಎಲ್ಲ ಶರಣರನ್ನು ವಿಹ್ವಲಗೊಳಿಸಿದೆ. ಮಡಿವಾಳ ಮಾಚಿದೇವನ ಮನಸ್ಸಿಗೆ ಹಿರಿದಾದ ಆಘಾತವಾಗಿದೆ. ಶರಣರನ್ನೆಲ್ಲ ತನ್ನ ಬೆನ್ನಿಗೆ ಕಟ್ಟಿಕೊಟ್ಟು ಮುಂದುವರೆದ ಮಡಿವಾಳ ಮಾಚಿದೇವನಿಗೆ ಗುರು ಬಸವಣ್ಣನ ಐಕ್ಯಸ್ಥಿತಿಯಿಂದ ದಿಕ್ಕುತೋಚದಂತೆ ಆಗಿ.

ಮಡಿವಾಳ ಮಾಚಿದೇವರು ನೊಂದು ಲಿಂಗಪೂಜೆಗೆ ಕುಳಿತಿದ್ದವನು ಗೊಡಚಿಯಲ್ಲಿಯೇ ಐಕ್ಯನಾಗಿರುವನು. ಮಡಿವಾಳ ಮಾಚಿದೇವ ಶರಣಸಮೂಹಕ್ಕೆ ಮುಂಚೂಣಿಯ ವೀರನಾಗಿದ್ದು ಕಲ್ಯಾಣದಿಂದ ಸುರಕ್ಷಿತವಾಗಿ ಶರಣರ, ವಚನ ಸಾಹಿತ್ಯದ, ಲಿಂಗಾಯತಧರ್ಮದ ಗೌರವ ಕಾಯ್ದು ಗೊಡಚಿಯಲ್ಲಿ ಲಿಂಗೈಕ್ಯನಾದ.

ಇಂದಿಗೂ ಗೊಡಚಿ ಪುಣ್ಯಕ್ಷೇತ್ರದಲ್ಲಿ ವೀರಭದ್ರನ ದೇವಾಲಯ ಸ್ಥಾಪಿಸಿದ್ದು ವೀರಭದ್ರನ ದೇವಸ್ಥಾನದ ಹಿಂಭಾಗದಲ್ಲಿ ಮುದಿವೀರಭದ್ರನೆಂದು ಪೂಜಿಸುವ ಚಿಕ್ಕಗುಡಿಯಲ್ಲಿ ಮನುಷ್ಯಾ ಕಾರದ ವಿಗ್ರಹ ನಿಸ್ಸಂದೇಹವಾಗಿ ಮುದಿವೀರಭದ್ರನೋಪಾದಿ ಒಬ್ಬ ಶಿವಶರಣನದು. ಇಷ್ಟಲಿಂಗ ಕಟ್ಟಿದ ಕಾಶಿ ಜಂಬೆ ರುದ್ರಾಕ್ಷಿ ಮಾಲೆ ಇವುಗಳಿಂದೊಡಗೂಡಿದ ಧೀರ ತೇಜಸ್ವಿ ವ್ಯಕ್ತಿಯ ಮುಖ ಮಂಡಲವಿದ್ದು ಮಡಿವಾಳ ಮಾಚಿದೇವರ ಸ್ಮಾರಕ ಮೂರ್ತಿಯ ಆಗಿರುವ ಸಾಧ್ಯತೆ ಇದೆ. ಮಾಚಿದೇವರು ವೀರಭದ್ರನ ಅವತಾರವೆಂದು ಜನ ನಂಬುತ್ತ ಬಂದಿರುವುದು ಗಮನಾರ್ಹ ಎಂದು ವಿದ್ವಾಂಸ ಡಾ. ಆರ್.ಸಿ. ಹಿರೇಮಠರು ನುಡಿದ ನುಡಿ ಸತ್ಯಕ್ಕೆ ಸಮೀಪವಾಗಿದೆ. ಮುದಿವೀರಭದ್ರ ಮಡಿವಾಳ ಮಾಚಿದೇವರೇ ಆಗಿದ್ದು ಇಂಥ ಶರಣರ ಸ್ಮಾರಕ, ಹಾಗೂ ಕಾಲಾಂತರದ ವೀರಭದ್ರ ದೇವಾಲಯದ ಪರಿಸರದಿಂದ ಗೊಡಚಿ ಶರಣಕ್ಷೇತ್ರವಾಗಿ ಮೆರೆದಿದೆ. ಪ್ರತಿ ವರುಷ ಜಾತ್ರೆ ನೆರವೇರುತ್ತದೆ. ಕಾಲಜ್ಞಾನದ ಪ್ರಕಾರ ಶರಣರು ಗೊಡಚಿಯಿಂದ ಮುಂದುವರೆಯುವಲ್ಲಿ ಅವರು ಸಂದರ್ಶಿಸಿದ ಶರಣಕ್ಷೇತ್ರಗಳ ಪಟ್ಟಿ ಮಾಡಿದರೆ,

೧. ಗೊಡಚಿ, ೨. ಸತ್ತಿಗೇರಿ, ೩. ಕಡಕೊಳದ, ೪. ಮೊದಲೂರು, ೫. ತಲವೂರು, ೬. ಮುರುಗೋಡ, ೭. ಮೂಗಬಸವ, ೮. ಕಾದರವಳ್ಳಿ, ೯. ಸಾಂಬ್ರಾಣಿ, ೧೦. ಮೇಲುಗೈಯಲ್ಲಾಪುರ, ೧೧. ಮಹಾಮನೆ, ೧೨. ಉಳವಿ.

ಗೊಡಚಿಯಲ್ಲಿ ಮಾಚಿದೇವನ ನಿರ್ಗಮನ, ಕೆಂಗೇರಿಯಲ್ಲಿ ಶರಣರು ಆಯುಧಗಳನ್ನು ತೊಳೆದರೆಂಬ ನಂಬಿಕೆ ಇದೆ. ಮೂಗಬಸವ ನಾಗಲಾಪುರ ಅಕ್ಕನಾಗಮ್ಮನ ವಿಗ್ರಹಗಳಿದ್ದು, ತೂರಮರಿ ಹುಣಸೀಕಟ್ಟೆ ಕಾದರೊಳ್ಳಿ ಶರಣರ ಕೇಂದ್ರಸ್ಥಳಗಳು, ಇಂದಿಗೂ ಯುದ್ಧದ ಕುರುಹುಗಳು ದೊರೆಯುತ್ತಿವೆ. ಸಮೀಪದ ಹುಣಸೀಕಟ್ಟೆಯ ರುದ್ರಮುನೀಶ್ವರನು ಮಾರ್ಗದರ್ಶಕನಾಗಿದ್ದನು. ತೂರಮರಿಯಲ್ಲಿ ಚನ್ನಬಸವೇಶ ಕೆಲಕಾಲ ವಿಶ್ರಾಂತಿ ಪಡೆದ ಸ್ಥಳದ ದಿನ್ನೆಯ ಮೇಲೆ ಚನ್ನಬಸವಣ್ಣನ ಗುಡಿ ಇದೆ. ನಂದಿ ಹಳ್ಳಿಯ ದೊಡ್ಡ ಬಸವಣ್ಣ ವಿಗ್ರಹ ಶರಣರ ಸ್ಮಾರಕವೆನಿಸಿದೆ. ರಣಗಟ್ಟಿ ಕೆರೆಬಯಲು ಯುದ್ಧ ಘೋಷಣೆಗೆ ದ್ಯೋತಕವೆನಿಸಿದೆ. ಕಕ್ಕೇರಿಯಲ್ಲಿ ಶರಣ ಡೋಹರಕಕ್ಕಯ್ಯನವರು ಲಿಂಗೈಕ್ಯ. ಧಾರವಾಡದ ಉಳವಿ ಚೆನ್ನಬಸವೇಶ್ವರ ದೇವಾಲಯ ವೀರಭದ್ರದೇವಾಲಯ, ಕೆಳಗಿರುವ ವೀರಗಲ್ಲು ಲಿಂಗೈಕ್ಯರಾದ ಕೆಲ ಶರಣರದ್ದು. ಜಗಳಬೆಟ್ಟ, ಕಿನ್ನರಿ ಬ್ರಹ್ಮಯ್ಯನ ಹೊಳೆ ಅರ್ಥಪೂರ್ಣವಾಗಿದ್ದು ಶರಣರ ಇತಿಹಾಸದ ಮೇಲೆ ಕ್ಷಕಿರಣ ಬೀರುತ್ತವೆ.

ನಿಶ್ಚಿತ ನೆಲೆ ಕಂಡುಕೊಂಡುದರಿಂದ ಶರಣರ ಸಮಯದಿಂದ ಮುರುಗೋಡ 'ಉಳವಿಯ ಕಡೆ ಬಾಗಿಲು' ಎಂದೇ ಪ್ರಸಿದ್ದವಾಗಿದೆ. ಸೊಗಲ ಕಣಿವೆಯಿಂದ ಬಂದ ಮಾರ್ಗ ಮುರುಗೋಡ ಪೂರ್ವದಿಕ್ಕಿನ ಅಗಸೆಬಾಗಿಲು ಎನಿಸಿದೆ. ಮುರುಗೋಡ ಸುಭದ್ರ ಗುಹೆ ಶರಣರಿಗೆ ರಕ್ಷಣೆ ನೀಡಿದೆ. ಮುರುಗೋಡದಲ್ಲಿ ಎರಡು ಕಾರಿಮನೆಯಲ್ಲಿ ಒಂದು ಉಳವಿಯ ಬಾಗಿಲುಗಳಿದ್ದು ಶರಣರು ಉಳವಿ ಮಾರ್ಗದ ನಿರ್ದೇಶನ ಮಾಡುವಂತಿವೆ.

ಧರ್ಮರಕ್ಷಣೆಯ ರಹಸ್ಯ ಸ್ಥಾನವೊಂದರ ಪ್ರಸ್ತಾಪ ಬಂದುದು ಮುರುಗೋಡದಲ್ಲಿ. ಆಗ ಉಳವಿಕ್ಷೇತ್ರವನ್ನೊಳಗೊಂಡ ಈ ಪ್ರದೇಶದ ಆಳ್ವಿಕೆ ನಡೆಸಿದವರು ಸಮರ್ಥ ಮಂಡಲೇಶ್ವರರೆನಿಸಿದ ಗೋವೆಯ ಕದಂಬ ದೊರೆಗಳು, ಕ್ರಿಶ ೧೧೫೬ರಲ್ಲಿ ಕಲಚೂರ್ಯ ಬಿಜ್ಜಳ ತನ್ನ ಸ್ವತಂತ್ರ ಶಾಸನಗಳನ್ನು ಬರೆಸತೊಡಗಿದ. ಗೋವೆಯ ಕದಂಬಮಂಡಲೇಶ್ವರರು ತಮ್ಮ ಸ್ವಾತಂತ್ರ್ಯವನ್ನು ಸಾರಿ ತಾವು ಕಲ್ಯಾಣ ಚಾಲುಕ್ಯರಿಗೆ ನಿಷ್ಠರಾಗಿದ್ದವರೇ ಹೊರತು ಬಿಜ್ಜಳನ ಆಧೀನರಲ್ಲ ಎಂದು ಶರಣರಿಗೆ ರಕ್ಷಣೆ ಇತ್ತಿರುವರು. ಗೋವೆಯ ಮಂಡಲೇಶ್ವರ ಜಯಸಿಂಹ ಚಾಲುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯನ ಮಗಳು ಮೈಳಲದೇವಿಯನ್ನು ಮದುವೆಯಾಗಿದ್ದು ಕಲ್ಯಾಣದ ದೊರೆಗಳಿಗೆ ಬದ್ಧರಾಗಿದ್ದು, ಶರಣರಗೆ ಸುರಕ್ಷಿತ ಸ್ಥಳ ಸೂಚಿಸಿರುವರು. ಕ್ರಿ.ಶ. ೧೧೫೬ರಿಂದ ಈಚೆಗೆ ಗೋವೆ ಕದಂಬರ ಯಾವ ಶಾಸನದಲ್ಲಿಯೂ ಅವರು ಬಿಜ್ಜಳನ ಸಾರ್ವ ಭೌಮತ್ವವನ್ನು ಒಪ್ಪಿಕೊಂಡ ಉಲ್ಲೇಖಗಳಿಲ್ಲ. ಇದು ಗೋವೆ ಕದಂಬರ ಸ್ವಾಯತ್ತತೆ ಯನ್ನು ವ್ಯಕ್ತಪಡಿಸುವ ಅಂಶವೆನಿಸಿದೆ.

ಪರಿವಿಡಿ (index)
Previous ತೊರಗಲ್ಲು ಮುರುಗೋಡ Next