Previous ಶರಣ ಕ್ಷೇತ್ರಗಳ - ಆಕರಗಳು ಅಬ್ಬಲೂರು Next

ಶರಣಸಂಸ್ಕೃತಿ : ಕೆಲ ಕುರುಹುಗಳು

ಶರಣಸಂಸ್ಕೃತಿ : ಕೆಲ ಕುರುಹುಗಳು

೧೨ನೆಯ ಶತಮಾನದಿಂದ ಶರಣರಿಗೆ, ಶರಣಕ್ಷೇತ್ರಗಳ ಚರಿತ್ರೆಗೆ ಹೆಚ್ಚಿನ ಮಹತ್ವವಿತ್ತು ಮುಂದುವರೆಸಿಕೊಂಡು ಬಂದಿರುವರು. ೨೧ನೆಯ ಶತಮಾನದ ವೇಳೆಗೆ ಶರಣಸಾಹಿತ್ಯದ ಉಳಿವಿಗೆ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಕೈಕೊಂಡಿರುವುದು. ಈ ನಿಟ್ಟಿನಲ್ಲಿ ಅಖಿಲಭಾರತ ಶರಣಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ವೇದಿಕೆ, ಪ್ರತಿ ಲಿಂಗಾಯತ ಮಠಗಳಲ್ಲಿ ಮೇಲಿಂದ ಮೇಲೆ ಜರುಗುತ್ತಿ ರುವ ಶಿವಾನುಭವ, ವಚನಚಿಂತನ, ವಿಚಾರಸಂಕಿರಣ ಕಾರ್ಯಕ್ರಮ ಗಳು, ಶರಣಸಾಹಿತ್ಯ ಶಿಬಿರಗಳಲ್ಲಿ ಚರ್ಚೆ ಶರಣರ ತತ್ವಗಳ, ಶರಣಕ್ಷೇತ್ರಗಳ ಮರುಚಿಂತನೆಗೆ ಅವಕಾಶ ಮಾಡಿಕೊಟ್ಟಿವೆ.

ಶರಣರು ಹುಟ್ಟಿ ಬೆಳೆದ ಊರು ಅವರು ಅವಲಂಬಿಸಿದ ವೃತ್ತಿಯನ್ನಾಧರಿಸಿ ಕೃತಿ ರಚಿಸುವ ಪರಂಪರೆ ಮುಂದುವರೆಯಿತು. ಅನುಭವಮಂಟಪದಲ್ಲಿ ಓಲೆ ಭಂಡಾರವಿದ್ದು ಭಂಡಾರಿ ಶಾಂತರಸ ನೆಂಬ ಶರಣ ಅದರ ವ್ಯವಸ್ಥಾಪಕನೆನಿಸಿದ್ದ. ಕಲ್ಯಾಣಕ್ರಾಂತಿಯ ತರುವಾಯ ಶರಣರು ಕರ್ನಾಟಕದ ಎಲ್ಲೆಡೆ ಚಲ್ಲುವರಿದರಷ್ಟೇ. ಅಂದಿನಿಂದ ಶರಣರು ನೆಲೆನಿಂತ ಕ್ಷೇತ್ರಗಳೆಲ್ಲ ಶರಣಕ್ಷೇತ್ರಗಳೆನಿಸ ತೊಡಗಿದವು. ಹಂಪೆ ಉಳಿವೆ ಆಂಧ್ರಪ್ರದೇಶ ಹಳೇಬೀಡು ಗುಜರಾತಗಳಲ್ಲಿ ವಚನಸಾಹಿತ್ಯ ಪ್ರಚಾರ ಪಡೆಯಿತು. ಕಲ್ಯಾಣದಿಂದ ಹೊರಟ ಶರಣರ ಸಮೂಹವನ್ನು ಕುರಿತು ಕಾಲಜ್ಞಾನ ವಚನ ವಚನಕಟ್ಟುಗಳನ್ನು 'ಮುಚ್ಚಿ ಇಡಿರಿ' ಎಂಬ ಪದೇ ಪದೇ ಮಾತು ಬರುತ್ತಿದ್ದು ಇದು ಕಲ್ಯಾಣಕ್ರಾಂತಿಯ ಫಲವಾಗಿ ಅದಕ್ಕೆ ಬಹಿಷ್ಕಾರ ಒದಗಿದಂತೆ ಕಂಡುಬರುತ್ತದೆ. ಶರಣರು ಶರಣ ಕ್ಷೇತ್ರ ಹಂಪೆಯಲ್ಲಿ ವಚನಕಟ್ಟುಗಳನ್ನು ಅಡಗಿಸಿಟ್ಟಂತೆ ಕಂಡುಬರುತ್ತದೆ. ಕಾಲಜ್ಞಾನ ವಚನಪ್ರಕಾರ ಹಂಪೆಯ ಕ್ಷೇತ್ರದಲ್ಲಿ ಮುಚ್ಚಿಟ್ಟ ವಾಲಿಭಂಡಾರವು ರಾಮಾಯಣ ಕಾಲದ ವಾಲಿಯ ದ್ರವ್ಯ ಭಂಡಾರವಲ್ಲ, ವಚನಗಳ ತಾಳೆ ಓಲೆಯ ಭಂಡಾರವೇ ಅದಾಗಿರಬೇಕು. ಹಂಪೆ ಆಕಾಲದಲ್ಲಿ ಕುರುಗೋಡ ಸಿಂದರ ವಶದಲ್ಲಿದ್ದಿತು. ಪರಮಶಿವಭಕ್ತ ಶರಣರಾಸಕ್ತ ರಾದ ಸಿಂದರಲ್ಲಿ ರಕ್ಷಣೆ ಬೇಡಿ ಶರಣರು ಅಲ್ಲಿಗೆ ಹೋದಂತಿದೆ.

ಶರಣರ ಇನ್ನೊಂದು ತಂಡ ಬಿಜ್ಜಳನ ವಿರೋಧಿಗಳಾದ ಗೋವೆ ಕದಂಬರ ಆಧಿಪತ್ಯಕ್ಕೆ ಒಳಪಟ್ಟು ಉಳಿವೆಗೆ ಹೋಯಿತು. ಆಂಧ್ರಪ್ರದೇಶ ಬಿಜ್ಜಳನ ಆಳ್ವಿಕೆಯ ಹೊರಗಿದ್ದುದರಿಂದ ಶರಣರ ತಂಡ ಅಲ್ಲಿಗೂ ಪ್ರಯಾಣ ಬೆಳೆಸಿತು. ಆಂಧ್ರದ ಕಡೆಯ ಆರಾಧ್ಯ ಲಿಂಗಾಯತರು ಕರ್ನಾಟಕದ ಗುಮ್ಮಳಾಪುರ ಕ್ಷೇತ್ರ, ಗುಬ್ಬಿ ಕ್ಷೇತ್ರಗಳನ್ನು ತಮ್ಮ ನೆಲೆಮಾಡಿಕೊಂಡು ಬೆಳೆಸಿದರು. ಶರಣರು ಕನ್ನಡ ನಾಡಿನ ಸುತ್ತಮುತ್ತ ಚದುರಿದರಿಂದ ಹಂಪೆ ಉಳುವೆಯಂತಹ ಪ್ರದೇಶಗಳು ಶರಣ ಕ್ಷೇತ್ರಗಳೆನಿಸಿದವು.

ಬಸವಪೂರ್ವಕಾಲದಲ್ಲಿ ಬಾಳಿ ಬದುಕಿ ಬಂದ ಕಾಳಾಮುಖ ಯತಿಗಳು ಬಹು ದೊಡ್ಡ ವಿದ್ವಾಂಸರೆನಿಸಿದ್ದರು. ಅವರ ಮಠ, ದೇವಸ್ಥಾನಗಳು ವಿದ್ಯಾಕೇಂದ್ರಗಳೆನಿಸಿದ್ದು ಅಲ್ಲಿ ದೊಡ್ಡ ಗ್ರಂಥ ಭಂಡಾರಗಳಿರುತ್ತಿದ್ದವು. ಬಳ್ಳಿಗಾವೆಯ ಕೇದಾರೇಶ್ವರ ಮಠವನ್ನು ಕುರಿತು 'ಋಗ್ಯಜುಸ್ಸಾಮರ್ಥಚತುರ್ವೇದ ಸ್ವಾಧ್ಯಾಯ ಸ್ಥಾನಮುಂ ಕೌಮಾರ ಪಾಣಿನೀಯ ಶಾಕಾಟಾಯನ ಶಬ್ದಾನುಶಾಸ ನಾದಿ ವ್ಯಾಕರಣ ವ್ಯಾಖ್ಯಾನ ಸ್ಥಾನಮುಂ ಅಷ್ಟಾದಶ ಪುರಾಣ ಧರ್ಮಶಾಸ್ತ್ರ ಸರಳ ಕಾವ್ಯ ನಾಟಕಾದಿ ವಿವಿಧ ವಿದ್ಯಾ ಸ್ನಾನಮುಂ' ಎಂಬ ಹೇಳಿಕೆ ಅಂದಿನ ಕಾಳಾ ಮುಖ ಮಠಗಳ ವಿದ್ವತ್ತಿನ ಸ್ವರೂಪವನ್ನು ಪರಿಚಯಿಸುವಂತಿದೆ.

ಲಿಂಗಾಯತ ಮಠಾಧೀಶರಿಗೆ ದೀಕ್ಷಾ ಪ್ರಸಂಗದಲ್ಲಿ ಕೆಲವು ಧಾರ್ಮಿಕ ಗ್ರಂಥಗಳನ್ನು ಕೊಡುವುದನ್ನು ಆಚರಣೆಯಲ್ಲಿ ತಂದಿದ್ದರು. ಪ್ರಭು ಚೆನ್ನಬಸವರಾಜೇಂದ್ರರು ಶಿವಮೂರ್ತಿಯಾದ ಸೊನ್ನಲಿಗೆಯ ಸಿದ್ದರಾಮೇಶಂಗೆ ನಿರೂಪಿಸಿದ ಗೊಹೇಶ್ವರನ ವಚನ, ಕರಣಹಸಿಗೆ, ಮಿಶ್ರಾರ್ಪಣ, ಸಿದ್ಧರಾಮೇಶ್ವರ ಮಂತ್ರಗೋಪ್ಯ, ಅಕ್ಕಗಳ ಸೃಷ್ಟಿಯ ವಚನ, ಪ್ರಭುದೇವರ ಸೃಷ್ಟಿಯ ವಚನ, ಹಿರಿಯ ಮಂತ್ರಗೋಪ್ಯ ಶೂನ್ಯಸಂಪಾದನೆ, ಸಂಗ್ರಹಿತ ಪುಸ್ತಕಗಳನ್ನು ಸಭಾಮಧ್ಯದಲ್ಲಿ ಆ ಶಿವಾನುಭವ ಚರಂತಿಗೆ ತೆಗೆದುಕೊಂಡ ಗುರುವರನ ಕಡೆಯಿಂದ ಆ ಶಾಸ್ತ್ರವಂ ಶಿಷ್ಯತ್ತಮನು ಶಿವಮಂತ್ರ ಗುರುಪ್ರಸಾದ ಮುಖವಾದ ಅಂಗಲಿಂಗಸಾಮರಸ್ಯ ಮುಂತಾಗಿ ೩೬ ತತ್ವಂಗಳಂ ತಿಳಿದಾತನು ಶಾಸ್ತ್ರವಂ ಗುರುಗಳಿಂ ಶ್ರವಣಗೊಂಡಾತನಾದ ವಿರಕ್ತನೆ ಶಾಸ್ತ್ರದ ಕಟ್ಟು ಹಿಡಿಯಬೇಕು. ಈತನಿಗೆ ಶಿವಾನುಭವ ಶಾಸ್ತ್ರವೇ ಆಗಲಿ ಪುರಾಣ ಪುಸ್ತಕವೇ ಆಗಲಿ ಇವುಗಳನ್ನು ಚರಮೂರ್ತಿಗಳು ಸಭೆಯಲ್ಲಿ ಕೊಟ್ಟು ತಮ್ಮಾಸನದಲ್ಲಿ ಕುಳ್ಳಿರಿಸಿಕೊಳ್ಳಲು ಆ ಗಣಧರನೆ ಚರಮೂರ್ತಿ ಎನಿಸುವನು' ಎಂಬ ನಿರಂಜನ ವಂಶ ರತ್ನಾಕರ ಗ್ರಂಥದ ಹೇಳಿಕೆಯಲ್ಲಿ ಗ್ರಂಥಗಳು ಪಟ್ಟಾಧಿಕಾರ ಸಂದರ್ಭದಲ್ಲಿ ಕಡ್ಡಾಯವೆನಿಸಿದ್ದು ತಿಳಿದುಬರುತ್ತದೆ.

ಲಿಂಗಾಯತ ಸಂಪ್ರದಾಯದ ಕೆಳದಿ ಅರಸು ಮನೆತನದ ಪ್ರತಿಷ್ಠಿತ ದೊರೆ ಬಸವರಾಜ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮ ಮೂರ್ತಿಗಳಿಗೆ ನಾನಾವಿಧ ಭಕ್ಷ್ಯ ಭೋಜ್ಯ ರಸಾಯನ ಫಲಂಗಳ ಮುಂತಾದ ಇಚ್ಛಾ ಪದಾರ್ಥಂಗಳಂ ನೀಡಿ ಸಂತುಷ್ಟಿಪಡಿಸಿ ನಾನಾವಿಧ ವಿಚಿತ್ರ ಕರವಸ್ತ್ರ ಕಂಬಳಿ ಕಂಥೆ ಶಿವದಾರ ವಿಭೂತಿಯಾಧಾರ ಭಸ್ಮ ರುದ್ರಾಕ್ಷಿ, ಆಗಮ ಶಿವಶಾಸ್ತ್ರ ಲಿಖಿತ ಪುಸ್ತಕ ಛತ್ರ ಪಾದುಕೆ ಹಸ್ತಾಧಾರ ದಂಡ ಮುಂತಾದ ಪದಾರ್ಥಗಳನ್ನು ಕೊಡಿಸಿ ಶಾಶ್ವತ ಧರ್ಮಕೀರ್ತಿಗಳಂ ಸಂಪಾದಿಸಿ ರಾಜ್ಯಂಗೆಯ್ಯುತಿರ್ದು ಬಸವ ನರೇಂದ್ರ ಎಂಬಲ್ಲಿಯ 'ಆಗಮ ಶಿವಶಾಸ್ತ್ರ ಲಿಖಿತ ಪುಸ್ತಕ'ಗಳ ದಾನ ಗಮನ ಸೆಳೆಯುವಂತಹದು. ಇವೆಲ್ಲವನ್ನಿತ್ತು 'ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮ ಮೂರ್ತಿಗಳ' ಕರುಣಾಪ್ರಸಾದ ಪಡೆದುದು ಮಹತ್ವದ ಸಂಗತಿ.

ಕಿತ್ತೂರು ದೊರೆ ಮಲ್ಲಸರ್ಜ ಶ್ರೇಷ್ಠ ಶಿವಭಕ್ತ, ಗುರು ಲಿಂಗ ಜಂಗಮ ಪ್ರೇಮಿ. ತನ್ನ ಆಸ್ಥಾನದಲ್ಲಿ ವೀರಸಂಗತಾತ ಹೆಸರಿನ ಸಚಿವನ ನೇತೃತ್ವದಲ್ಲಿ ಬಸವಪುರಾಣ ಪ್ರವಚನ ವ್ಯವಸ್ಥೆ ಗೊಳಿಸಿದ್ದನು. ಧಾರವಾಡದ ಟೀಕಿನ ವೃಷಲಿಂಗಾಚಾರ್ಯರಿಂದ ಶಾಲಿವಾಹನ ಶಕ ೧೭೨೫ನೆಯ ರುಧಿರೋದ್ದಾರಿ ಸಂವತ್ಸರದ ಮಾರ್ಗಶಿರ ಬಹುಳ ಚತುರ್ದಶಿ ಸೋಮವಾರ ಕಿತ್ತೂರು ಅರಮನೆ ಯಲ್ಲಿ ಭೀಮ ಕವಿಯ ಬಸವಪುರಾಣದ ಪ್ರವಚನ ಪ್ರಾರಂಭ, ನಾಲ್ಕುವರೆ ತಿಂಗಳು ಬಡವರಿಗೆ ಪ್ರಸಾದ ವಿತರಣೆ, ಜಂಗಮರಿಗೆ ಸತ್ಕಾರ ರುಧಿರೋದ್ಗಾರಿ ಸಂವತ್ಸರದ ಚೈತ್ರಮಾಸ ಶುಕ್ಲ ದಶಮಿ ಗುರುವಾರದಂದು ಹೊಟ್ಟೆ ಮಠದ ಕೊಟ್ಟೂರಾಚಾರ್ಯರನ್ನು ಬರ ಮಾಡಿಕೊಂಡು ಪಾದಪೂಜೆ ಮಾಡಿ ಆರೇಳು ಸಾವಿರ ಮಾಹೇಶ್ವರ ರನ್ನು ಪ್ರಸಾದ ಕಾಣಿಕೆಗಳಿಂದ, ಮಹಿಳೆಯರನ್ನು ಸೀರೆ ಕುಪ್ಪಸಗಳಿಂದ, ಮಕ್ಕಳನ್ನು ಚಿತ್ರ ವಿಚಿತ್ರ ಬಟ್ಟೆಗಳಿಂದ ತಣಿಸಿ 'ಬಸವೇಶೋಪಮ'ನಾಗಿ ಮಲ್ಲಸರ್ಜ ಶೋಭಿಸಿದ್ದನು. ಚೈತ್ರಮಾಸ ಶುಕ್ಲಪಕ್ಷ ಚತುರ್ದಶಿ ಗುರುವಾರದಂದು ಬಸವಪುರಾಣದ ಪ್ರವಚನ ಸಮಾರಂಭ ಟೀಕಿನ ವೃಷಲಿಂಗಾಚಾರ್ಯರಿಂದ ವಾಚಿಸಲ್ಪಟ್ಟು ಮಡಿವಾಳಶಾಸ್ತ್ರಿಗಳಿಂದ ವ್ಯಾಖ್ಯಾನಿಸಲ್ಪಟ್ಟು ಅತ್ಯಂತ ಭಕ್ತಿಪೂರ್ಣವಾಗಿ ಮಂಗಲಗೊಂಡಿತು. ತರುವಾಯ ದೊರೆ ದುರುದುಂಡೇಶ್ವರ ಕ್ಷೇತ್ರ, ಗುರುಸಿದ್ದೇಶ್ವರ ಕ್ಷೇತ್ರ, ಹೊಂಡದ ಬಸವೇಶ್ವರ ಕ್ಷೇತ್ರ, ನಂದಿಹಳ್ಳಿಯ ನಂದೀಶ ಕ್ಷೇತ್ರ, ಬೆಳವಾಡಿ ವೀರೇಶ ಕ್ಷೇತ್ರ, ಕಾದರವಳ್ಳಿಯ ಶಿವಕ್ಷೇತ್ರ, ತೇರ ದಾಳ, ಇಂಗಳೇಶ್ವರ, ಸಂಗಮ, ಬಾಗೇವಾಡಿ ಎಡೂರು ವೀರಭದ್ರ ಕ್ಷೇತ್ರ ಗೋಕರ್ಣ ಹಂಪೆಯ ವಿರೂಪಾಕ್ಷ ಕ್ಷೇತ್ರ ನಂಜನಗೂಡಿನ ನಂಜುಂಡೇಶ್ವರ ಕ್ಷೇತ್ರ, ಶ್ರೀಶೈಲ ಕ್ಷೇತ್ರಗಳಲ್ಲಿ ಮಲ್ಲಸಜ ಗಣಾರಾಧನೆ ಏರ್ಪಡಿಸಿ ಜಂಗಮತೃಪ್ತಿ ವ್ಯಕ್ತಪಡಿಸಿದುದು ಗಮನಿಸ ಬೇಕಾದ ಸಂಗತಿ.

ಹೀಗೆ ಶರಣ ಸಂಸ್ಕೃತಿಯ ಕುರುಹುಗಳು ಶರಣಸಾಹಿತ್ಯ ಕೃತಿಗಳ ಅಂತರಂಗದಲ್ಲಿ ಒಂದೊಂದಾಗಿ ದೊರೆಯುತ್ತವೆ.

ಪರಿವಿಡಿ (index)
Previous ಶರಣ ಕ್ಷೇತ್ರಗಳ - ಆಕರಗಳು ಅಬ್ಬಲೂರು Next