Previous ಇಳಿಹಾಳ ಹಗರಟಗೆ Next

ಎಡೆಯೂರು

ಎಡೆಯೂರು ಕ್ಷೇತ್ರ

ತುಮಕೂರು ಜಿಲ್ಲೆಯ ಎಡೆಯೂರು ತೋಂಟದ ಸಿದ್ದಲಿಂಗ ಯತಿಗಳ ಜ್ಞಾಪಕಾರ್ಥವಾಗಿ ಕಟ್ಟಿದ ಸುಕ್ಷೇತ್ರ. ಅಂದಿನ ಲಿಂಗಾಯತ ಕೇಂದ್ರ ಹಂಪೆಯಲ್ಲಿ ನೆಲೆನಿಂತ ಲಿಂಗಾಯತ ಧರ್ಮ ವೈಷ್ಣವರ ತುರುಕರ ದಾಳಿಯಿಂದ ಎಡೆಯೂರಿನ ಕಡೆಗೆ ನಡೆದು ಅದನ್ನು ಶರಣಕ್ಷೇತ್ರ ವನ್ನಾಗಿಸಿತು. ತೋಂಟದ ಸಿದ್ದಲಿಂಗರ ಶಿಷ್ಯ ಪರಂಪರೆ ಹಾಗೂ ಷಟ್‌ಸ್ಥಲಜ್ಞಾನಸಾರಾಮೃತದ ಎಂಟನೆಯ ವಚನ ಗುರುಪರಂಪರೆಯ ವಂಶಾವಳಿ ಇದೆ. ಏಳುನೂರೊಂದು ವಿರಕ್ತರಲ್ಲಿ ಸಿದ್ದಲಿಂಗಯತಿಗಳು ಅಗ್ರಗಣ್ಯರು ಎಂಬ ಅಭಿಪ್ರಾಯವಿದ್ದು ವಾಸ್ತವವಾಗಿ ವಿರಕ್ತರು ನೂರೊಂದು ಜನರಲ್ಲ, ನೂರೊಂದರು ಎಂದರೆ ಏಕೋತ್ತರ ಶತಸ್ಥಲಾಚರಣೆಯ ವಿರಕ್ತರು ಎಂಬುದೇ ಪರಮಸತ್ಯವಾಗಿದೆ.

ಷಟ್‌ಸ್ಥಲಜ್ಞಾನಸಾರಾಮೃತದಲ್ಲಿ ತೋಂಟದ ಸಿದ್ಧಲಿಂಗಯತಿಗಳ ಬಸವನಿಷ್ಠೆ ಅತ್ಯದ್ಭುತವಾದುದು. ಸಾರಾಮೃತದಲ್ಲಿ ರೇವಣಸಿದ್ದರು, ಮೋಳಿಗೆಯ ಮಾರಿತಂದೆಗಳು, ಸಿದ್ದರಾಮ ದೇವರು, ಮಹಾದೇವಿ ಯಕ್ಕಗಳು ಒಂದು ವಚನದಲ್ಲಿಯೂ, ನೀಲಲೋಚನೆಯರು ಎರಡು ವಚನಗಳಲ್ಲಿಯೂ ಚೆನ್ನಬಸವರು ಏಳು ವಚನ, ಅಲ್ಲಮಪ್ರಭು ದೇವರು ಎಂಟು ವಚನಗಳಲ್ಲಿ ಹೊಗಳಲ್ಪಟ್ಟಿದ್ದರೆ ಬಸವಣ್ಣನವರಿಗೆ ಅಗ್ರಸ್ಥಾನ ಮೀಸಲಾಗಿದೆ. ತೋಂಟದ ಸಿದ್ದಲಿಂಗಯತಿಗಳು ಬಸವಾದಿ ಪ್ರಮಥರ ಶರಣಸಂತಾನ ಪರಂಪರೆಯವರೆಂದು ಹೊಗಳಲ್ಪಟ್ಟಿದೆ. ಷಟ್‌ಸ್ಥಲ ಸಿದ್ಧಾಂತವನ್ನು ಹದಿನೈದನೆಯ ಶತಮಾನದಲ್ಲಿ ಪ್ರತಿಪಾದಿಸಿ ಖಿಲವಾಗುತ್ತಿದ್ದ [ಖಿಲ = ಜೀರ್ಣ, ಶಿಥಿಲ] ಲಿಂಗಾಯತ ಧರ್ಮವನ್ನು ಉದ್ಧರಿಸಿರುವರು. ಷಟ್‌ಸ್ಥಲ ಜ್ಞಾನಚಕ್ರವರ್ತಿಗಳೆನಿಸಿ ಶೂನ್ಯಸಿಂಹಾಸನವನ್ನೇರಿ ಆ ಪೀಠಕ್ಕೆ ಚಿನ್ನದ ಕಳೆಯನ್ನು ತಂದರು.

ಸಿದ್ಧಲಿಂಗಯತಿಗಳ ಷಟ್‌ಸ್ಥಲಜ್ಞಾನ ಸಾರಾಮೃತ ಅನುಪಮ ಕೊಡುಗೆ ಎನಿಸಿದೆ. ಸಿದ್ದಲಿಂಗೇಶ್ವರ ದೇವಾಲಯ ಪ್ರಾಕಾರದಲ್ಲಿರುವ ಕ್ರಿ.ಶ. ೧೫೦೦ರಲ್ಲಿ ಬರೆದ ಶಾಸನವೊಂದು ಆತನ ಮಹಿಮೆಯನ್ನು ಕೊಂಡಾಡಿದೆ. ಈತನ ಸ್ಮಾರಕಾರ್ಥವಾಗಿ ಎಡೆಯೂರಿನ ಭಕ್ತರು ಒಂದು ಕಲ್ಲು ಮಠವನ್ನು ಕಟ್ಟಿದಂತೆ ವಿಷಯವಿದೆ.

ಶಿವಗಂಗೆ, ಸಿದ್ಧಗಂಗೆ, ಸಿದ್ದರಬೆಟ್ಟ, ತುಮಕೂರು, ಗೂಳೂರು, ಗುಬ್ಬಿ, ನಾಗವಲ್ಲಿ, ಹೆಬ್ಬರು, ಹೇರೂರು, ಹುಲಿಯೂರು, ಗೋಡೆಕೆರೆ, ನಾಗಸಮುದ್ರ, ಕಗ್ಗೆರೆ, ಎಡೆಯೂರು ಮೊದಲಾದ ಪ್ರದೇಶಗಳು ಲಿಂಗಾಯತ ಧರ್ಮಪ್ರಸಾರದ ಪ್ರಮುಖ ಶಾಖೆಗಳಾಗಿದ್ದವು. ಶೂನ್ಯ ಸಂಪಾದನೆಯ ಕರ್ತೃಗಳಾದ ಹಲಗೆಯಾಚಾರ್ಯ, ಗುಮ್ಮಳಾಪುರದ ಸಿದ್ಧಲಿಂಗಯತಿ, ಗೂಳೂರು ಸಿದ್ಧ ವೀರಣ್ಣೂಡೆಯರು, ಪ್ರಸಿದ್ಧ ವಚನ ಸಂಕಲನಕಾರರಾದ ಚೆನ್ನಂಜೆ ದೇವ, ಸಿದ್ಧವೀರಣಾಚಾರ್ಯ, ಗುರುಶಾಂತದೇವ, ಜನಪ್ರಿಯ ವಚನಕಾರರಾದ ಸ್ವತಂತ್ರ ಸಿದ್ಧಲಿಂಗ ಘನಲಿಂಗಿದೇವ, ಖ್ಯಾತ ಪುರಾಣ ಕವಿಗಳಾದ ಗುಬ್ಬಿಯ ಮಲ್ಲಣಾರ್ಯ, ಮಲ್ಲಿಕಾರ್ಜುನ, ಚೇರಮಾಂಕ, ಪರ್ವತೇಶ ಹೀಗೆ ನೂರಾರು ಮಂದಿ ಕವಿಗಳ ಮೇಲೆ ತೋಂಟದ ಸಿದ್ದಲಿಂಗಯತಿಗಳು ಬೀರಿದ ಪ್ರಭಾವ ಅತ್ಯಮೋಘವಾದುದು.

ಇವರು ತಮ್ಮ ಕೊನೆಗಾಲವನ್ನು ಎಡೆಯೂರಿನಲ್ಲಿ ಕಳೆದು ಅಲ್ಲಿಯೆ ಸಮಾಧಿಸ್ಥರಾಗಿರುವುದುಂಟು. ಗುಡಿಯ ಆವರಣದಲ್ಲಿ ಕಲಾತ್ಮಕವಾದ ಮಳಿಗೆಗಳು ದೇವಸ್ಥಾನದ ಇಕ್ಕೆಲಗಳಲ್ಲಿ ಸ್ಥಾಪಿತ ಗೊಂಡರೆ ಎಡೆಯೂರು ತನ್ನ ಮಹತ್ವವನ್ನು ಇನ್ನೂ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ಶರಣಕ್ಷೇತ್ರ ಎಡೆಯೂರಿನ ಪಕ್ಕದಲ್ಲಿರುವ ಕಗ್ಗೆರೆ ಸಿದ್ದಲಿಂಗ ಶಿವಯೋಗಿಗಳು ತಪಸ್ಸು ಕೈಕೊಂಡ ಪುಣ್ಯದ ತಾಣ. ಸಿದ್ಧಲಿಂಗ ಶ್ರೀಗಳು ತಮ್ಮ ಬದುಕಿನ ಸಂಜೆಯಲ್ಲಿ ಕೆಲಕಾಲ ವಸತಿ ಮಾಡಿದ್ದ ಗವಿಯಮಠ ಮಾರ್ಕೋನಹಳ್ಳಿ ಜಲಾಶಯದಲ್ಲಿ ಮುಳುಗಿಹೋಗಿದೆ. ಅಣೆಕಟ್ಟು ನಿರ್ಮಿಸುವವರು ಈ ಐತಿಹಾಸಿಕ ಸ್ಮಾರಕಕ್ಕೆ ಮಹತ್ವ ಕೊಡದೆ ನೀರಿನಲ್ಲಿ ಮುಳುಗಿಸಿದ್ದು ತುಂಬ ನೋವಿನ ಸಂಗತಿ. ಈಗಲಾದರೂ ಎಚ್ಚೆತ್ತು ಜಲಾಶಯದ ನೀರು ಕೊರತೆಯಾದಾಗ ಮಠದ ಕಲ್ಲುಗಳನ್ನೂ, ಸ್ತಂಭ ಗಳನ್ನೂ ಜೋಪಾನವಾಗಿ ಸುರಕ್ಷಿತ ಸ್ಥಳದತ್ತ ಸ್ಥಳಾಂತರಿಸಬೇಕಿದೆ.

ಶಿವಯೋಗಿ ಸಿದ್ಧಲಿಂಗೇಶ್ವರರು ತಮ್ಮ ಶಿಷ್ಯನಾದ ಬೋಳ ಬಸವನಿಗೆ ತಮ್ಮ ನಿರಂಜನ ಪೀಠ ಕಟ್ಟಿದರು. ಅವರು ಶತಾಯುಷಿಗಳು, ಮರಣವನ್ನು ಗೆದ್ದ ಮಹಾಂತರು.

ಪರಮಪೂಜ್ಯ ತೋಂಟದ ಎಡೆಯೂರು ಸಿದ್ದಲಿಂಗೇಶ್ವರ ಶಿವಯೋಗಿಗಳ ಪೀಠ ಪರಂಪರೆಯು ಇಂದಿಗೂ ನಡೆದುಬರುತ್ತಿದೆ. ತುಮಕೂರು ಜಿಲ್ಲೆಯ ಎಡೆಯೂರಿನಂತೆ ಗದಗ-ಡಂಬಳದಲ್ಲಿಯೂ ಶಾಖಾ ಮಠಗಳಿವೆ. ಗೋಣಿಬೇಡ, ಉಳುವೆ, ಕಾರ್ಕಳ, ಗಾಳಿಪೂಜೆ, ಬೆಟ್ಟ ಕಾಶಿ, ಗಯೆ, ಪ್ರಯಾಗ, ಕೊಲ್ಲಿಪಾಕಿ, ಶ್ರೀಶೈಲ, ಕಗ್ಗೆರೆ, ಹೊಳಲು ಗುಂದ, ವ್ಯಾಘ್ರಪುರ, ಮೇದೂರು, ಹೆಬ್ಬರು, ಹೇರೂರು, ಚೆನ್ನಪಟ್ಟಣ, ಲಿಂಗಪುರ, ವೃಷಭಪುರ, ತುಮಕೂರು ಹೀಗೆ ಎಷ್ಟೋ ಪ್ರದೇಶಗಳಲ್ಲಿ ಶರಣರ ಕುರುಹುಗಳು ಮಠಗಳೂ ಗೋಚರಿಸುತ್ತವೆ. ಶಾಸನಗಳಂತೆ ಕವಿಗಳು ಕಾವ್ಯ ರಚಿಸಿ ಶರಣ ಕ್ಷೇತ್ರ ಎಡೆಯೂರಿನ ಮಹತ್ವವನ್ನು ಕಾಯ್ದುಕೊಂಡು ಬಂದಿರುವರು.

ಪರಿವಿಡಿ (index)
Previous ಇಳಿಹಾಳ ಹಗರಟಗೆ Next