![]() | ಕೂಡಲ ಸಂಗಮ | ಬಸವನ ಬಾಗೆವಾಡಿ | ![]() |
ಕದಳಿ ವನ ಶ್ರೀ ಶೈಲ |
ಆಂಧ್ರ ಪ್ರದೇಶದ ಶ್ರೀ ಶೈಲದ ಕದಳಿ ವನದಲ್ಲಿ ಅಕ್ಕ ಮಹಾದೇವಿ ಕೆಲವು ತಿಂಗಳುಗಳ ಕಾಲ ತಪಸ್ಸು ಮಾಡಿ ನಂತರ ಇಲ್ಲಿಂದ ಸುಮಾರು ೧೦ ಕಿ.ಮೀ ಗಳಷ್ಟು ದೂರದಲ್ಲಿರುವ ಕದಳಿ ವನದಲ್ಲಿ (ಚೆನ್ನಮಲ್ಲಿಕಾರ್ಜುನ)ದೇವ ನೊಂದಿಗೆ ಲೀನವಾದಳು ಎಂಬುದು ಇತಿಹಾಸ.
ಅಕ್ಕ ಮಹಾದೇವಿ ಗುಹೆ: ಹನ್ನರಡೆನೆಯ ಶತಮಾನದ ಅನುಭಾವಿ ವಚನಕಾರ್ತಿ ಅಕ್ಕ ಮಹಾದೇವಿ (ಚೆನ್ನಮಲ್ಲಿಕಾರ್ಜುನ) ದೇವನನ್ನು ಒಲಿಸಿಕೊಂಡ ಸ್ಥಳ. ಇದಕ್ಕೆ ಅಕ್ಕ ಮಹಾದೇವಿ ಗುಹೆಯೆಂದೇ ಹೆಸರು, ಇದು ನಿಸರ್ಗ ನಿರ್ಮಿತ ಗುಹೆ, ನಾಗಾರ್ಜುನ ಅಣೆಕಟ್ಟು ಪ್ರದೇಶದ ಹಿನ್ನೀರಿನ ಮೂಲಕ ಮೋಟಾರ್ ಬೋಟ್ ಮೂಲಕ ಹೋಗಿ ಈ ಗುಹೆಯನ್ನು ಸಂದರ್ಶಿಸಬಹುದು. ಗುಹೆಯ ಒಳಗೆ ವಿದ್ಯುದ್ದೀಪದ ಸಂಪರ್ಕ ಇಲ್ಲ..ಮೇಣದ ಬತ್ತಿಯೊಂದೇ ಬೆಳಕಿನ ಮೂಲ..ಒಳಗೆ ಹೋಗುತ್ತಾ ಗುಹೆ ಕಿರಿದಾಗುತ್ತ ಹೋಗುತ್ತದೆ
ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯವರು ಇಲ್ಲಿ ಒಳ್ಳೆಯ ಏರ್ಪಾಡುಗಳನ್ನು ಮಾಡಿದ್ದಾರೆ.. ರೋಪ್ ವೇ ಮೂಲಕ ಕೆಳಗಿಳಿದು ನಂತರ ದೋಣಿಯ ಮೂಲಕ ಗುಹೆಯನ್ನು ತಲುಪುವ ವ್ಯವಸ್ಥೆ ಇದೆ. ಒಮ್ಮೆ ರೋಪ್ ವೇ ಮೂಲಕ ಕೆಳಗಿಳಿದು ಹೋದರೆ ಕೆಲವು ಖಾಸಗಿ ದೋಣಿಗಳೂ ಸಿಗುವುದರಿಂದ ಹೆಚ್ಚಿನ ಯೋಚನೆಗಳಿಲ್ಲ... ಜೀವನದಲ್ಲಿ ಒಮ್ಮೆಯಾದರು ಸಂದರ್ಶಿಸಬೇಕಾದ ಸ್ಥಳ ಅಕ್ಕ ಮಹಾದೇವಿ ಗುಹೆ.. ಯಾವ ರೀತಿಯ ಸೌಕರ್ಯಗಳು ಇಲ್ಲದ ಹನ್ನೆರಡನೆಯ ಶತಮಾನದಲ್ಲಿ ಏಕಾಂಗಿಯಾಗಿ ಬಸವ ಕಲ್ಯಾಣದಿಂದ ಕದಳಿವನದ ತನಕ ನಡೆದೇ ಹೋದ ಅಕ್ಕನ ಭಾವವೇ ಮನಸ್ಸೆಲ್ಲಾ ತುಂಬಿ ಹೋಗಿವಂತಹ ಜಾಗ ಅಕ್ಕ ಮಹಾದೇವಿಯ ಕದಳಿವನ.
ಶ್ರೀ ಶೈಲವು ಹೈದ್ರಾಬಾದನಿಂದ ಸುಮಾರು ೨೧೫ ಕಿ.ಮೀ. ದೂರದಲ್ಲಿದೆ.
ಶರಣಕ್ಷೇತ್ರ ಶ್ರೀಶೈಲ ಅತ್ಯಂತ ಪ್ರಾಚೀನಕಾಲದಿಂದ ಮೆರೆದ ಕ್ಷೇತ್ರ. ನೋಡುಗರ ಕಣ್ಣಿಗೆ ಪ್ರಕೃತಿ ಮಧ್ಯದ ಅತ್ಯಂತ ಚಿತ್ತಾಕರ್ಷಕ ಪೂಜನೀಯ ಪ್ರದೇಶ. ದಕ್ಷಿಣಭಾರತದ ಈ ಪವಿತ್ರ ಪ್ರದೇಶ, ಆಂಧ್ರಪ್ರದೇಶದ ಸೀಮೆಯಲ್ಲಿರುವ ಶ್ರೀಶೈಲ ಕರ್ನೂಲು ಜಿಲ್ಲೆ ನಂದಿಕೊಟ್ಟ ತಾಲ್ಲೂಕಿನ ಕರ್ನೂಲು ಪಟ್ಟಣಕ್ಕೆ ಪೂರ್ವದಿಕ್ಕಿನ ೭೨ ಮೈಲು ದೂರದ ಬೆಟ್ಟವೇ ಸುಪ್ರಸಿದ್ಧವಾದ ಶ್ರೀಶೈಲ ಬೆಟ್ಟ. ಕನ್ನಡ ಶಾಸನ, ಕಾವ್ಯಗಳಲ್ಲಿ ಶ್ರೀಶೈಲದ ತುಂಬ ವರ್ಣನೆ ಮಡುಗಟ್ಟಿ ನಿಂತಿದೆ. ೧೨ನೆಯ ಶತಮಾನದ ಶರಣರಗೆ ತವರುಮನೆ ಎನಿಸಿದೆ. ಇಂದಿಗೂ ಭಕ್ತಾದಿಗಳು ಚೆನ್ನಮಲ್ಲಯ್ಯ ಭ್ರಮರಾಂಬೆಯರು ನೆಲಸಿದ ಈ ಪುಣ್ಯಭೂಮಿಗೆ ಹಂಬಲಿಸಿ ದರ್ಶನಕ್ಕೆ ಆಗಮಿಸುತ್ತಿರುವುದು ಸರ್ವೆಸಾಮಾನ್ಯವೆನಿಸಿದೆ.
ಪೂರ್ವಘಟ್ಟಗಳ ಚುಂಗಿನಲ್ಲಿ ಬರುವ ಶ್ರೀಶೈಲ ಹೆಸರೇ ಸೂಚಿಸು ವುದು ಉನ್ನತ ಶಿಖರ. ಚನ್ನಮಲ್ಲಯ್ಯ ಭ್ರಮರಾಂಬೆಯರು ನೆಲೆನಿಂತ ನಿತ್ಯನೂತನ ಪ್ರಕೃತಿ ಸೌಂದರ್ಯ, ಶಿಖರದ ಅಡಿಯನ್ನು ತನ್ನ ಸಲಿಲ ಅಮೃತೋಪಮ ಜಲದಿಂದ ಮಡಿ ಮಾಡಿವೆ. ಚೈತನ್ಯಪೂರ್ಣವೆನಿ ಸುವ ಪ್ರಕೃತಿ ಸೌಂದರ್ಯ ವೈವಿಧ್ಯಮಯ ಗುಲ್ಮಲತೆ ಕದಳಿವನ ಗುಹೆ ದಟ್ಟಡವಿಯಲ್ಲಿ ನಿರ್ಭಯವಾಗಿ ವಿಹರಿಸುವ ಮೃಗಗಳ ಸಮೂಹ, ಚನ್ನಮಲ್ಲಯ್ಯ, ಭ್ರಮರಾಂಬೆಯರ ದರ್ಶನ ಹಾರೈಸಿ ಬರುತ್ತಿರುವ ಭಕ್ತ ಸಮೂಹ, 'ಉಘೇ ಉಘೇ ಮಹಾಂತ ಮಲ್ಲಯ್ಯ' ಎಂಬ ಭಕ್ತಿಪೂರ್ಣ ಉದ್ಘೋಷ, ಶ್ರೀಶೈಲ ಬೆಟ್ಟ ಮಾರ್ದನಿ ಗೊಳ್ಳುವಂತಿದೆ. ಇವೆಲ್ಲ ಶ್ರೀಶೈಲ ಕ್ಷೇತ್ರದ ಮಹತ್ವವನ್ನು ಅಧಿಕಗೊಳಿಸಿವೆ. ಸ್ವಾಮಿ ಸನ್ನಿಧಿಗೆ ಎರಡು ಮೈಲು ದೂರದಲ್ಲಿ ಪಾತಾಳ ಗಂಗೆ ಕೃಷ್ಣ ಹರಿಯುತ್ತಿರುವಳು.
ಮಲ್ಲಿಕಾರ್ಜುನ ಭ್ರಮರಾಂಬೆಯರು ಶ್ರೀಶೈಲ ಕ್ಷೇತ್ರದ ಅಧಿಪತಿಗಳು, ಶಿವಯೋಗಿ ಸಿದ್ಧರಾಮನ ಪಾಲಿಗೆ 'ಶ್ರೀಶೈಲ ಮಹಿಮೆ ಕರ್ಣಾಭರಣ' ಶಿಖರದ ತುಂಬ ೭೨ ಮೈಲುಗಳುದ್ದ ಪಸರಿಸಿದ ಅಸಂಖ್ಯ ತೀರ್ಥಗಳು, ಕಂಗೊಳಿಸುವ ಬಿಲ್ವವನ, ಉನ್ನತ ಶೈಲಗಳು ಪ್ರಕೃತಿದೇವಿ ಶಿವಪೂಜೆಯಲ್ಲಿ ತನ್ಮಯಳಾದಂತೆ ಮೈಮರೆಸುವ ಪವಿತ್ರ ತಾಣ, ೧೨ನೆಯ ಶತಮಾನದ ಶರಣರು, ಕೆಲಕಾಲ ಬೌದ್ಧ ನೆಲೆ, ಕೆಲಕಾಲ ಜೈನ ನೆಲೆಯಾಗಿ ಕೆಲಕಾಲ ಶೈವ ನೆಲೆಯಾಗಿ ವಿಭಿನ್ನ ಧರ್ಮಗಳು ಸರ್ವರಿಗೂ ಭಕ್ತಿಶ್ರದ್ಧೆಯ ಕೇಂದ್ರವೆನಿಸಿವೆ. ಸ್ವಾದಿಯ ದೊರೆ ಸದಾಶಿವರಾಯ ತನ್ನ ಉಳವಿ ಮಹಾತ್ಮ ಕೃತಿಯಲ್ಲಿ
ಕಾಶಿಗಿಂದಧಿಕಮೆನಿಸುವ ಫಲಂಗಳಿಂ
ಲೇಸಿನಿಂ ಕೇತಾರಕಿಂದಧಿಕಮೆನಿಸು
ವಾಸುರಾತಪ ವಿರಹಿತತ್ವದಿಂ ಶ್ರೀಶೈಲವಧಿಕಮೆನಿಸಿ ಮೆರೆಗುಂ ||
ಎಂದು ಹಾಡಿರುವರು. ಲಕ್ಕಣ್ಣದಂಡೇಶ ತನ್ನ ಶಿವತತ್ವ ಚಿಂತಾಮಣಿ ವಿಶ್ವಕೋಶದಲ್ಲಿ ಕನ್ನಡನಾಡಿನ ಆರು ಲಿಂಗಾಯತ ಕೇಂದ್ರಗಳಲ್ಲಿ ಶ್ರೀಶೈಲವು ಒಂದೆಂದು ಸಾರಿರುವನು. ದಕ್ಷಿಣ ಭಾರತದ ಸುಪ್ರಸಿದ್ಧ ಕ್ಷೇತ್ರಗಳೆನಿಸಿದ ಹಂಪೆ ಶ್ರೀಶೈಲಗಳು ಉತ್ತರ ಭಾರತದ ಕಾಶಿ ಕೇದಾರ ಕ್ಷೇತ್ರಗಳಿಗೆ ಸಮಾನ ಪ್ರದೇಶಗಳೆನಿಸಿವೆ. ತುಂಬ ಪ್ರಾಚೀನ ಕಾಲದಿಂದಲೇ 'ಶ್ರೀಶೈಲೇ ಶಿಖರಂ ದೃಷ್ಟಾ ಪುನರ್ಜನ್ಮಂ ನ ವಿದ್ಯತೇ' ಎಂಬುದು ನಂಬಿಕೊಂಡು ಬಂದ ಭಕ್ತಿನುಡಿ, ಹೀಗೆ ಪ್ರಾರಂಭವಾದ ನಂದಿಮಂಡಲದಲ್ಲಿ ನಂದಿ ಪ್ರಧಾನ ಕ್ಷೇತ್ರವೆನಿಸಿದೆ.
ಇತಿಹಾಸಪ್ರಸಿದ್ದ ಭವ್ಯ ಶ್ರೀಶೈಲ ಪ್ರವೇಶಿಸಲು ನಾಲ್ಕು ದ್ವಾರ ಗಳಿದ್ದು ಪ್ರಥಮ ದ್ವಾರ ತ್ರಿಪುರಾಂತಕ, ದಕ್ಷಿಣ ದ್ವಾರ ಸಿದ್ಧವಟ, ಪಶ್ಚಿಮ ದ್ವಾರ ಆಲಂಪೂರ, ಉತ್ತರ ದ್ವಾರವು ಉಮಾಮಹೇಶ್ವರ. ಶ್ರೀಶೈಲದ ಪೂರ್ವ ದ್ವಾರಕ್ಕೆ ತ್ರಿಪುರಾಂತಕೇಶ್ವರ ಮತ್ತು ತ್ರಿಪುರಾದೇವಿ ಪ್ರಧಾನ ದೇವತೆಗಳಾಗಿರುವರು. ಮೇಲಿನ ಒಂದೊಂದು ಕ್ಷೇತ್ರಗಳು ಅಸಂಖ್ಯ ತೀರ್ಥಕ್ಷೇತ್ರಗಳನ್ನು ಹೊಂದಿದ್ದು, ದಕ್ಷಿಣದ್ವಾರ ಸಿದ್ಧವಟದ ಪ್ರಧಾನ ದೇವತೆ ಸಿದ್ದೇಶ್ವರ, ಈತ ಕಾಮಿತಾರ್ಥ ಪ್ರದಾಯಕ. ಈ ಕ್ಷೇತ್ರವೂ ಅನೇಕ ಪುಣ್ಯತೀರ್ಥ ದೇವಾಲಯಗಳನ್ನು ಹೊಂದಿದೆ. ಪಶ್ಚಿಮ ದ್ವಾರ ಆಲಂಪೂರು ಬ್ರಹ್ಮಶ್ವರ ಯೋಗಾಂಬ ಶಕ್ತಿ ಎಂಬ ದೇವತೆಯರು. ಬ್ರಹ್ಮಹತ್ಯಾದಿ ದೋಷ ಪರಿಹಾರಾತ್ಮಕ ಬ್ರಹ್ಮಜ್ಞಾನ ಉಂಟುಮಾಡಿಸುವ ಕ್ಷೇತ್ರವಿದು. ಉತ್ತರದ್ವಾರದ ಉಮಾಮಹೇಶ್ವರ ಮುಖ್ಯ ದೇವತೆಗಳು, ಶ್ರೀಶೈಲದ ಎಂಟು ಶಿಖರಗಳು ತಲಾ ಮೂರರಂತೆ ತೀರ್ಥಗಳನ್ನು ಹೊಂದಿರುವದನ್ನು ಗಮನಿಸಬಹುದು.
೧. ತ್ರಿಪುರಾಂತಕ ವೈಡೂರ್ಯ ಶಿಖರದಲ್ಲಿ ಸಾನಂದಿತೀರ್ಥ, ನಂದಿತೀರ್ಥ, ಶುಕ್ಲತೀರ್ಥ.
೨. ಆಲಂಪೂರಿನ ಬ್ರಹ್ಮಶ್ವರ ಶಿಖರದಲ್ಲಿ ಗೋಮತಿತೀರ್ಥ, ಕೀರ್ತಿತೀರ್ಥ, ಕಳಾತೀರ್ಥ.
೩. ಉಮಾಮಹೇಶ್ವರದ ಮಾಣಿಕ್ಯ ಶಿಖರದಲ್ಲಿ ತಾಮ್ರತೀರ್ಥ, ಜಾಹ್ನವಿತೀರ್ಥ, ವಿಚಿತ್ರ ತೀರ್ಥ.
೪. ಪುಷ್ಪಗಿರಿಯ ಪ್ರವಾಳ ಶಿಖರದಲ್ಲಿ ಅಬ್ಬರತಿತೀರ್ಥ, ಚಾರುಘೋಷಿಣಿತೀರ್ಥ, ಅರುಣಿತೀರ್ಥ.
೫. ಸೋಮೇಶ್ವರದ ರೌಪ್ಯ ಶಿಖರದಲ್ಲಿ ಜ್ಯೋತಿ ತೀರ್ಥ, ಜಯ ತೀರ್ಥ, ವಿಜಯತೀರ್ಥ.
೬. ಹೇಮಶಿಖರದಲ್ಲಿ ವಕ್ರತೀರ್ಥ, ಪೃಥುತೀರ್ಥ, ಅರ‍್ಚಿಷ್ಮತಿ ತೀರ್ಥ.
೭. ಅಹೋಬಲದ ಮರಕತಶಿಖರದಲ್ಲಿ ಜ್ಯೋತಿತೀರ್ಥ, ಅರ‍್ಚಿತೀರ್ಥ, ಬ್ರಹ್ಮತೀರ್ಥ.
೮. ಪ್ರಥಮನಂದಿ ವಜ್ರಶಿಖರದಲ್ಲಿ ಉತ್ಸವತೀರ್ಥ, ಕ್ಷೇಮತೀರ್ಥ, ಶುಕ್ಲ ತೀರ್ಥ.
ಹೀಗೆ ಎಂಟು ಪವಿತ್ರ ತೀರ್ಥಗಳಿದ್ದು ಈ ತೀರ್ಥಗಳಲ್ಲಿ ಸೋಮವಾರ, ಪುಣ್ಯದಿನಗಳಂದು ಭಕ್ತಿಶ್ರದ್ಧೆಯಿಂದ ಸ್ನಾನಪೂಜಾದಿಗಳಿಂದ ಮಹಾಪುಣ್ಯ ಲಭಿಸುವುದೆಂಬ ಹಿತನುಡಿ.
ಸೃಷ್ಟಿಕರ್ತನಾದ ಬ್ರಹ್ಮನು ಪ್ರಜಾಸೃಷ್ಟಿಯ ನೈಪುಣ್ಯಕ್ಕಾಗಿ ಈಶ್ವರನನ್ನು ಪೂಜಿಸಲು ವರವನ್ನು ಕೊಟ್ಟ ಸ್ಥಳ ಇದೆಂದು ಹೇಳುತ್ತಾರೆ. ಈ ಕ್ಷೇತ್ರ ಪ್ರಥಮನಂದಿ, ಪಕ್ಕದಲ್ಲಿಯೆ ಹರಿಯುವ ಕುಮುದ್ವತಿ ನದಿಯ ಸಲಿಲಧಾರೆ. ಲಿಂಗಾಯತ ಶರಣರಾದ ಅಲ್ಲಮಪ್ರಭು, ಮಹಾದೇವಿಯಕ್ಕ, ಸಿದ್ಧರಾಮೇಶ್ವರ ಅವನ ಪ್ರಥಮ ಗಣಂಗಳು. ಇಲ್ಲಿಂದ ಶ್ರೀಗಿರಿಯ ಬೆಟ್ಟವೇರಿದ್ದು ಇಲ್ಲಿಯ ಶಾಸನಗಳಿಂದ ವಿದಿತವಾಗುವ ಅಂಶ.
ಕಾಲಾಂತರದಲ್ಲಿ ಹೇಮರೆಡ್ಡಿ ವಂಶಸ್ಥರ ಆಳ್ವಿಕೆ ಮುಂದುವರೆದಿದೆ. ೧೯೩೯ರ ತರುವಾಯ ತಡಸೂರು ಮಠದ ಸಿದ್ಧಪ್ಪದೇವರ ಮಕ್ಕಳು ಎಸ್.ಎಂ. ಬಸವರಾಜ ಶಾಸ್ತ್ರಿಗಳನ್ನು ಕರೆಸಿ ಶ್ರೀಶೈಲ ಕ್ಷೇತ್ರವನ್ನು ಜೀರ್ಣೋದ್ದಾರಕ್ಕೆ ನೇಮಿಸಿ ಶ್ರೀ ಗಿರಿಯ ಯಾತ್ರಿಕರಿಗೆ ಅನ್ನಛತ್ರ ಏರ್ಪಡಿಸುತ್ತ ೧೯೪೦ರಲ್ಲಿ ಪ್ರಥಮ ನಂದೀಶ್ವರನಿಗೆ ಕಾರ್ತಿಕಮಾಸಾದ್ಯಂತ ಭಕ್ತಿಸೇವೆ, ಅಮಾವಾಸ್ಯೆ ದಿನ ರಥೋತ್ಸವ ನಡೆಯುವಂತೆ ಮಾಡಿದರು.
ಸಾಂಸ್ಕೃತಿಕ ಶ್ರೀಶೈಲ
ಅನಾದಿಕಾಲದಿಂದ ಸುಪ್ರಸಿದ್ಧ ಕ್ಷೇತ್ರ ಶ್ರೀಶೈಲ. ಕಾಲಕ್ರಮದಲ್ಲಿ ಈ ಪ್ರದೇಶವನ್ನು ಆಳ್ವಿಕೆ ಕೈಗೊಳ್ಳುತ್ತ ಬಂದ ಓರುಗಂಟಿ ಪ್ರತಾಪ ರುದ್ರ ಕ್ರಿ.ಶ. ೧೧೦೦ರಲ್ಲಿ ಹಾಗೂ ವಿಜಯನಗರದ ಕೃಷ್ಣದೇವರಾಯ ಕ್ರಿ.ಶ. ೧೬೦೦ರಲ್ಲಿ ಇಲ್ಲಿ ಅನೇಕ ಸೌಕರ್ಯಗಳನ್ನು ಒದಗಿಸಿ ಕೊಟ್ಟಿರುವರು. ಶ್ರೀಶೈಲಕ್ಕೆ ಯಾತ್ರೆಗಾಗಿ ಬರುವವರಿಗೆ ಮೂರು ಮಾರ್ಗಗಳ ಅನುಕೂಲತೆ ಹಾಗೂ ಜಲವಸತಿ ವ್ಯವಸ್ಥೆ ಇಲ್ಲಿ ಮುಖ್ಯವಾದುದು.
ಶ್ರೀಶೈಲ ಕ್ಷೇತ್ರ ಸಂದರ್ಶನಕ್ಕೆ ಬರುವವರು ಪೂರ್ವದಲ್ಲಿ ವಿನುಕೊಂಡ ತ್ರಿಪುರಾಂತಕವು ಮಾರ್ಕಾಪುರದ ಗುಂಡ ಪೆದ್ದ ದೋರಣಾಲ ಚಿಂತಲ ಚಿನಾರುದಿ ಪೆದ್ದರುಟ ಶಿಖರದ ಮೇಲಿಂದ ಬರುವ ಮಾರ್ಗ ಒಂದು. ಪಶ್ಚಿಮದಲ್ಲಿ ನಂದ್ಯಾಲದಿಂದ ಆ ಕಡೆ ಕರ್ನೂಲಿನಿಂದ ಆತ್ಮಕೂರು, ನಾಗಲೂಟೆ, ಪೆದ್ದಚಗುವಿನ ಮೇಲೆ ಹಾಯ್ದು ಹೋಗುವ ದಾರಿ ಎರಡು. ಉತ್ತರದಲ್ಲಿ (ನೈಜಾಮ್ ನಗರ) ಕರ್ನೂಲು, ಅಮದಾಬಾಡು, ತೆಲ್ಕಪಲ್ಲಿ ಶ್ರೀಶೈಲದ ಉತ್ತರ ದ್ವಾರದಲ್ಲಿ ಉಮಾಮಹೇಶ್ವರ ವಟರ‍್ಲಪಲ್ಲೆ ಕೃಷ್ಣಾ ನದಿಯ ಮೇಲೆ ಹಾಯ್ದು ಬರುವ ಮಾರ್ಗ ಮೂರು. ಈ ಮೂರು ಮಾರ್ಗ ಗಳುದ್ದಕ್ಕೂ ಪ್ರವಾಸಿಗರಿಗೆ ಅನ್ನಛತ್ರ, ಅರವಂಟಿಕೆ ಮೊದಲಾದ ವಸತಿ ಕಲ್ಪಿಸಿರುವರು.
ಪಶ್ಚಿಮಮಾರ್ಗದಲ್ಲಿ ಪೆದ್ದಚರುವಿಗೆ ಆರು ಮೈಲು ದೂರದಲ್ಲಿ ದೇವಸ್ಥಾನಕ್ಕೆ ೪ ಮೈಲಿನಲ್ಲಿ 'ಭೀಮಕೊಳ'ವೆಂಬ ಕೊಳವಿದ್ದು ಇದು ಅತ್ಯಂತ ಆಳವಾಗಿದೆ. ಈ ಕೊಳದ ಹತ್ತಿರವೇ ಗಿರಿಯನ್ನು ಏರಲು ಒಂದು ಒಳಮಾರ್ಗವಿರುವುದು. ಪೂರ್ವದ ಮಹಾಭಾರತ ಕಾಲದಲ್ಲಿ ಭೀಮನು ತನ್ನ ಗದೆಯಿಂದ ಬೆಟ್ಟವನ್ನು ಹೊಡೆಯಲು ಆಗ ಬೆಟ್ಟ ಮೂರು ಹೋಳಾಗಿ ಅಲ್ಲಿ ಕೊಳವಾಗಿರುವುದನ್ನು ಕಾಣಬಹುದು.
ಶಿವರಾತ್ರಿಯ ಕಾಲದಲ್ಲಿ ಈ ಕೊಳದಲ್ಲಿ ಮಾತ್ರ ನೀರು ಇರುವುದು. ಹೀಗಾಗಿ ಈ ನೀರು ಕಲುಷಿತಗೊಳ್ಳದಂತೆ ಕಾವಲನ್ನು ಇಟ್ಟಿರುವರು. ಆದಿನ ರಾತ್ರಿಯಲ್ಲಿ ಜಲದ ಪ್ರಮಾಣ ಕಡಿಮೆಯಾದರೂ ಬಂದ ಪ್ರವಾಸಿಗರಿಗೆ ಎಂದೂ ನೀರಿನ ಕೊರತೆ ಉಂಟಾಗದಿದ್ದುದು ಶ್ರೀಶೈಲ ಕ್ಷೇತ್ರ ಮಹಿಮೆ.
ಶ್ರೀಶೈಲದ ಒಳಭಾಗದಲ್ಲಿ ಇನ್ನು ಅನೇಕ ತೀರ್ಥಕ್ಷೇತ್ರಗಳಿದ್ದು, ಅವು :
೧. ಗಡ್ಡಿಗ ಬಾವಿ, ೨. ಮಲ್ಲಿಕಾಗುಂಡ, ೩. ಕುಂಡೀತೀರ್ಥ, ೪. ಘಂಟಿಕಾಕುಂಡತೀರ್ಥ, ೫. ಸಾರಂಗತೀರ್ಥ, ೬. ಸೂರ್ಯತೀರ್ಥ, ೭. ಚಂದ್ರತೀರ್ಥ, ೮. ಲಾವಕತೀರ್ಥ, ೯, ವರಾಹತೀರ್ಥ, ೧೦. ಭಾವಕತೀರ್ಥ, ೧೧. ಬ್ರಹ್ಮತೀರ್ಥ, ೧೨. ಶಂಖತೀರ್ಥ, ೧೩ ಚಕ್ರತೀರ್ಥ, ೧೪. ಶಿವತೀರ್ಥ, ೧೫. ಕರಾರೀಶ್ವರತೀರ್ಥ, ೧೬. ಹಟಕೇಶ್ವರತೀರ್ಥ, ೧೭. ಪಂಚವಲ್ಲಭತೀರ್ಥ, ೧೮. ಪಂಚ ಧಾರತೀರ್ಥ, ೧೯. ಭೋಗವತಿ ತೀರ್ಥ, ೨೦. ಸರಸ್ವತಿತೀರ್ಥ, ೨೧. ಕೋಟಿಲಿಂಗ ತೀರ್ಥ, ೨೨. ಪಾತಾಳಗಂಗತೀರ್ಥ, ೨೩. ಕುಬೇರತೀರ್ಥ, ೨೪. ಶಿಖರೇಶ್ವರತೀರ್ಥ.
ಹೀಗೆ ೨೪ ತೀರ್ಥಗಳು ಪವಿತ್ರವಾಗಿದ್ದು, ಮಿಂದು ಮಡಿಯಾಗಿ ಪೂಜಿಸಿದರೆ ಸಮಸ್ತ ದೇವತಾರಾಧನೆಯ ಫಲ, ಪಾತಾಳಗಂಗೆಯಲ್ಲಿ ಪಿತೃಶ್ರಾದ್ಧಾದಿ ಮಾಡಿದರೆ ಪಿತೃಗಳಿಗೆ ಸದ್ಗತಿ, ಇಲ್ಲಿಯ ದಾನ ತೃಣ ಪಾಯವಾದರೂ ಮಹಾಮೇರು ಪರ್ವತಕ್ಕೆ ಸಮಾನವೆನಿಸುವದು.
ಸಮಗ್ರ ಶ್ರೀಶೈಲ ದಿವ್ಯ ಕ್ಷೇತ್ರದ ದರ್ಶನ ಕೈಕೊಂಡರೆ ಇಲ್ಲಿ ಕಂಡುಬರುವ ಕ್ಷೇತ್ರಗಳು ಹಾಗೂ ಅವುಗಳ ಅಂತರವನ್ನು ಗಮನಿಸ ಬಹುದಾಗಿದೆ.
ಪೂರ್ವದಿಕ್ಕಿನಲ್ಲಿ : ಪಾತಾಳಗಂಗೆ, ನೃಸಿ೦ಹ ಬಿಲ, ಲಿಂಗಾಲಘಟ್ಟ.
ಆಗ್ನೆಯ ದಿಕ್ಕಿನಲ್ಲಿ : ಹಟಕೇಶ್ವರ, ಫಾಲಧಾರ ಪಂಚಧಾರ, ಬಿಲ್ವವನ, ಬಿಲ್ವ ಕಾಮಾಕ್ಷಿ ಅಲ್ಲ, ಕಾಮಾಕ್ಷಿ ಕಂಚಮ್ಮ, ಶಿಖರೇಶ್ವರ.
ಉತ್ತರ ದಿಕ್ಕಿನಲ್ಲಿ : ಕನ್ಯಾಸಿದ್ದೇಶ್ವರ ಅಲ್ಲದೆ, ಮಲಕದೇವಮ್ಮ, ಚಂದ್ರಗುಂಡ, ಸಿದ್ದರಾಮನ ಕೊಳ ಮತ್ತು, ಖರ‍್ಮಾಲಸಂ, ಕುಕ್ಕಲು ಕೂನಲ ಜಗಲಿ.
ಪಶ್ಚಿಮದಿಕ್ಕಿನಲ್ಲಿ : ಗೋಗರ್ಭ, ಅಕ್ಕಮಹಾದೇವಿಯಬಿಲ, ಕದಳಿವನ, ಕಿನ್ನರಗುಂಡುಗಳು.
ಇಷ್ಟು ಕ್ಷೇತ್ರಗಳಲ್ಲದೆ ಶ್ರೀಶೈಲದಲ್ಲಿ ಇಂದಿಗೂ ವಿರಾಜಿಸುತಿರುವ ಪಂಚಮಠಗಳು ಕರ್ತವ್ಯಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಶ್ರೀಶೈಲಕ್ಷೇತ್ರದ ಉತ್ತರ ದಿಕ್ಕಿನಲ್ಲಿ.
![]() | ಕೂಡಲ ಸಂಗಮ | ಬಸವನ ಬಾಗೆವಾಡಿ | ![]() |