ದೇವನೂರು ಸ್ಥಳ ಮಹತ್ವ
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಮೂಲತಃ ಶರಣಕ್ಷೇತ್ರ. ಶ್ರೀ ಗುರುಮಲ್ಲೇಶ್ವರರು ನೆಲೆನಿಂತ ಪುಣ್ಯ ಭೂಮಿ, ಶರಣರು ಹಾಕಿಕೊಟ್ಟ ಕಂಥೆಭಿಕ್ಷ ಕಾಯಕದ ಮೂಲಕ ದಾಸೋಹ ತತ್ವವನ್ನು ನೆಲೆಗೊಳಿಸಿದ, ಲಿಂಗಾಯತ ಧರ್ಮ ಸಂಸ್ಕೃತಿ ಸಾಹಿತ್ಯ ದರ್ಶನ, ಲಿಂಗಾಯತ ಮಠಗಳು ಹಾಗೂ ಅರಸುಮನೆತನಗಳ ನಡುವಿನ ಸಂಬಂಧ, ಇವನ್ನು ನೆನೆದರೆ ದೇವನೂರು ಶ್ರೀಮಠದ ಅದ್ವಿತೀಯ ಇತಿಹಾಸ ಬೆಳಕಿಗೆ ಬರುತ್ತದೆ.
ಬಸವಾದಿ ಪ್ರಮಥರ ನೇತೃತ್ವದಲ್ಲಿ ಸಾಮಾಜಿಕ ಧಾರ್ಮಿಕ ಹಾಗೂ ಸಾಹಿತ್ಯಕವಾದ ಕ್ರಾಂತಿಕಾರಕ ಬದಲಾವಣೆಗಳು ಈ ನಾಡನ್ನು ಸುವರ್ಣಯುಗವನ್ನಾಗಿಸಿತು. ಶಿವಾನುಭವ ಸಾರ್ವಭೌಮ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಅವರ ಸಮೂಹದಲ್ಲಿ ನೂರೊಂದು ಜನ ವಿರಕ್ತರು ಈ ಧರ್ಮದ ಪುನರುಜ್ಜಿವನ ಕಾರ್ಯ ಕೈಕೊಂಡರು. ಹತ್ತೊಂಬತ್ತನೆಯ ಶತಮಾನದ ವೇಳೆಗೆ ಅಸ್ತವ್ಯಸ್ತಗೊಂಡ ಲಿಂಗಾಯತಧರ್ಮವನ್ನು ಮೈಸೂರು ಭಾಗದಲ್ಲಿ ಸುತ್ತೂರು ಮಠದ ಜಗದ್ಗುರುಗಳವರು, ಮಲ್ಲನಮೂಲೆಯ ಶ್ರೀ ಕಂಬಳೀಶ್ವರರು, ಜ್ಯೋತಿರೂಪದಲ್ಲಿ ಬೆಳಗಿದಂತೆ ಬಸವಾದಿ ಪ್ರಮಥರ ಸತ್ ಸಂಪ್ರದಾಯದ ಶರಣ ಗುರುಮಲ್ಲೇಶ್ವರರು ಕಾಯಕ ಮತ್ತು ದಾಸೋಹತತ್ವಗಳ ಮೂಲಕ ನಿಜಾಚರಣೆಗೆ ತಂದರು. ಲಿಂಗಾಯತ ಧರ್ಮದ ಪ್ರಮುಖ ತತ್ವಗಳಾದ ಅಷ್ಟಾವರಣ ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮಹತ್ವ ಸತ್ಯಶುದ್ಧ ಕಾಯಕದಲ್ಲಿ ಲಿಂಗಾಯತಧರ್ಮ ಬೆಳಗುತ್ತ ಬಂದಿರುವರು.
ಶರಣಕ್ಷೇತ್ರ ದೇವನೂರು
ಸಾಂಸ್ಕೃತಿಕ ತವರೂರಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಶರಣಕ್ಷೇತ್ರ ದೇವನೂರು. ಮೈಸೂರು ನಗರದಿಂದ ದಕ್ಷಿಣಕ್ಕೆ ಸು. ೪೦ ಕಿ.ಮೀ. ನಂಜನಗೂಡು ಪಟ್ಟಣದಿಂದ ಪೂರ್ವ ದಿಕ್ಕಿಗೆ ಸುಮಾರು ೧೪ ಕಿ.ಮೀ. ದೂರದಲ್ಲಿದೆ. ವಿಜಯನಗರದ ಅರಸರ ಕಾಲಕ್ಕೆ ಉಮ್ಮತ್ತೂರು ಸಂಸ್ಥಾನಕ್ಕೆ ಸೇರಿದ ಒಂದು ಮಾಂಡಲಿಕ ಗ್ರಾಮವೆನಿಸಿತ್ತು. ಇದನ್ನು ಸಾಳುವ ವಂಶಸ್ಥ ಶ್ರೀ ನರಸಿಂಹ ಬಲ್ಲಾಳನು ಆಳುತ್ತಿದ್ದ. ನಂತರ ಕೆಲಕಾಲ ಪುರವರಾಧೀಶ್ವರ ಶ್ರೀ ಲಿಂಗರಾಜ ಅರಸು ಆಳಿದ ಇತಿಹಾಸವಿದೆ. ದೇವನೂರು ಗ್ರಾಮ ಹಿಂದೆ ಸೋಮಳ್ಳಿ, ಮಿಣ್ಣಂಬಳ್ಳಿ, ಒಳಕೋಟ್ಗೆ,, ಎತ್ನಟ್ಟಿ, ಹಳ್ಳದಕೇರಿ ಮೇಗಲಕೇರಿಗಳೆಂಬ ಸಣ್ಣಪುಟ್ಟ ಉಪವಿಭಾಗಗಳಿಂದ ಕೂಡಿತ್ತು. ಆದರೆ ಲಿಂಗರಾಜರ ಆಡಳಿತದ ನಂತರ ಅದರ ರಾಜಕೀಯ ಮತ್ತು ಆಡಳಿತಾತ್ಮಕ ಬದಲಾವಣೆಗಳಿಂದ 'ದೇವನೂರು' ಹೆಸರಿನ ಶರಣ ಕ್ಷೇತ್ರವಾಗಿ ರೂಪುಗೊಂಡಿತು. ಇದು ನಂಜನಗೂಡು ತಾಲ್ಲೂಕಿನ ಪ್ರಮುಖ ಸ್ಥಳವನ್ನಾಗಿಸಿದೆ.
ಮಹಾತ್ಮ ಗುರುಮಲ್ಲೇಶ್ವರರು ದೇವನೂರಿಗೆ ಬಂದಮೇಲೆ ಇಲ್ಲಿ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠ ಸ್ಥಾಪನೆ ಯಾಗಿದೆ. ಗುರುಮಲ್ಲೇಶ್ವರರು ಈ ಪರಿಸರದಲ್ಲಿ ಇಂದಿಗೂ ಪೂಜೆ ಗೊಳ್ಳುತ್ತಿದ್ದಾರೆ. ಕಂಥೆಭಿಕ್ಷ ಕಾಯಕವನ್ನು ಅನುಷ್ಠಾನಗೊಳಿಸಿ ನಿತ್ಯ ದಾಸೋಹವನ್ನು ಚಾಚೂ ತಪ್ಪದೆ ಮುನ್ನಡೆಸಿಕೊಂಡು ಬಂದುದು ಈ ಕ್ಷೇತ್ರದ ಮಹತ್ವವನ್ನು ಬಿಚ್ಚಳಿಸಿದೆ. ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹಮಠ ಕಟ್ಟಡ ಭವ್ಯವಾಗಿದ್ದು ದೇವನೂರಿನ ಗೌರವವನ್ನು ಹೆಚ್ಚಿಸಿದೆ.
ಗುರು ಬಸವಣ್ಣನವರ ವಚನದಂತೆ ದಾಸೋಹ ಚಕ್ರವರ್ತಿಗಳೆನಿಸಿದ ಗುರುಮಲ್ಲೇಶ್ವರರು ದಿ. ೨೫-೬-೧೮೯೯ರಲ್ಲಿ ಬಯಲಾಗಲು ಪೂಜ್ಯರ ಕರಕಮಲ ಸಂಜಾತರಾದ ಶ್ರೀ ಶಿವಪ್ಪ ಸ್ವಾಮಿಗಳವರು, ಶ್ರೀ ತೋಂಟದಾರ್ಯ ಸ್ವಾಮಿಗಳವರು, ಶ್ರೀ ಶಿವಬಸವ ಸ್ವಾಮಿಗಳ ವರು, ಶ್ರೀ ಬಸವಣ್ಣ ಸ್ವಾಮಿಗಳವರು ಹಾಗೂ ಶ್ರೀಮಠದ ಇಂದಿನ ಅಧ್ಯಕ್ಷರಾಗಿ ಬಸವಸೇವೆ ಕೈಕೊಳ್ಳುತ್ತಿರುವ ಶ್ರೀ ಮಹಾಂತ ಸ್ವಾಮಿ ಗಳವರು ಶ್ರೀ ಗುರುಮಲ್ಲೇಶ್ವರ ದಾಸೋಹಮಠದ ವಿಸ್ತರಣೆ ಹಾಗೂ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತ ಬಂದಿರುವರು. ಸದಾ ಕಾಯಕ ದಾಸೋಹ ತತ್ವಗಳನ್ನು ತಮ್ಮ ಉಸಿರನ್ನಾಗಿಸಿಕೊಂಡು ಸದ್ದುಗದ್ದಲವಿಲ್ಲದೆ ಶರಣಧರ್ಮವನ್ನು ಪ್ರಚಾರ ಮಾಡುತ್ತ ಬಂದಿರುವರು. ಇದು ವಂಶಪಾರಂಪರ್ಯದ ಆಡಳಿತಕ್ಕೆ ಒಳಪಡದೇ ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡು ಕರ್ನಾಟಕದ ಒಂದು ಪ್ರಮುಖ 'ದಾಸೋಹ' ಮಠವೆನಿಸಿದೆ. ಪ್ರತಿನಿತ್ಯ ನೂರಾರು ಭಕ್ತಾದಿಗಳು ಶರಣಕ್ಷೇತ್ರಕ್ಕೆ ಆಗಮಿಸಿ ದೇವದರ್ಶನ ಜೊತೆಗೆ ರುಚಿರುಚಿಯಾದ ಹುರಳಿಕಟ್ಟಿನ ಘಮಘಮಿಸುವ ಸಾರು, ಮೃಷ್ಟಾನ್ನವಾದ ರಾಗಿಮುದ್ದೆ ರುಚಿ ಸ್ವಾಮಿ ಭಕ್ತಿಯ ಕೃಪೆಯಾಗಿ ದೊರಕುವುದುಂಟು. ಇದನ್ನು ಪಡೆಯುವುದೇ ಭಕ್ತರ ಪರಮಭಾಗ್ಯ, ಮೂಲೆಯಲ್ಲಿ ಸೇರಿಸಿಟ್ಟ ಊಟದ ತಟ್ಟೆ ಲೋಟಗಳು, ನೂರು ವರ್ಷಗಳಿಂದ ಹಚ್ಚಿದ ಒಲೆ, ಬೆಂಕಿ ಆರಿಸದೆ ಇನ್ನೂವರೆಗೆ ಮುಂದುವರಿಸಿಕೊಂಡು ಬಂದುದು ಶ್ರೀಮಠದ ಆವರಣದಲ್ಲಿ ಕಾಳುಕಡಿಯ ನೂರಾರು ಚೀಲಗಳು, ಭಕ್ತರಿತ್ತ ಕಂಥೆಭಿಕ್ಷೆ ನಿತ್ಯದಾಸೋಹಕ್ಕೆ ನೀಡಿದ ಮೃಷ್ಟಾನ್ನ ಪ್ರಸಾದ ದೇವನೂರು ಎರಡನೆಯ ಕಾಶಿ ಎನಿಸದಿರದು. ಕ್ಷಣಕ್ಷಣಕ್ಕೂ ನಿತ್ಯದಾಸೋಹದ ಮಠವೆಂದರೆ ಇಂದಿನ ಕಲಿಯುಗದ ಎರಡನೆಯ ಅಚ್ಚರಿಯೆನಿಸಿದೆ.
ಮೈಸೂರು ಮಹಾರಾಜರು ಸಲ್ಲಿಸಿದ ಕೂಲಿ
ಘನ ವ್ಯಕ್ತಿತ್ವ ಪಡೆದ ಶ್ರೀ ಗುರುಮಲ್ಲೇಶ್ವರರು ದಕ್ಷಿಣ ಕರ್ನಾಟಕದಲ್ಲಿ ನಡೆಸಿದ ಮನಃ ಪರಿವರ್ತನೆ ತುಂಬ ಮುಖ್ಯವಾದುದು. ಒಂದುಬಾರಿ ಮೈಸೂರು ಮಹಾರಾಜರು ಶ್ರೀ ಗುರುಮಲ್ಲೇಶ್ವರರ ದಿವ್ಯದರ್ಶನಕ್ಕೆಂದು ಹೋಗಿ ಬಂಗಾರದ ತಟ್ಟೆಯಲ್ಲಿ ಮುತ್ತುರತ್ನಗಳ ರಾಶಿಯ ಕಾಣಿಕೆ ಅರ್ಪಿಸಿದಾಗ ಅದು ಕಾಯಕದಿಂದ ಬಂದುದಲ್ಲ ಎಂಬ ಕಾರಣಕ್ಕಾಗಿ ಅದನ್ನು ಸ್ವೀಕರಿಸದೇ ಹಿಂತಿರುಗಿಸಿ 'ನಿಮ್ಮ ಸ್ವಂತ ಕಾಯಕ ಶ್ರಮದಿಂದ ಬಂದ ಫಲವಾದರೆ ಮಾತ್ರ ಮಠದ ದಾಸೋಹಕ್ಕೆ ವಿನಿಯೋಗವಾಗುತ್ತದೆ' ಎಂದು ಬುದ್ದಿ ಮಾತು ಹೇಳಿ ಕಳಿಸಿದ್ದು ದೊಡ್ಡ ಪವಾಡವೇ ಸರಿ. ಮಹಾರಾಜರು ಗುರುವಾಣಿಯನ್ನು ಪರಿಪಾಲಿಸಿ ಮಾರುವೇಷ ತೊಟ್ಟು ಕಮ್ಮಾರನೊಬ್ಬನ ಕುಲುಮೆಯಲ್ಲಿ ಒಂದು ದಿನ ದುಡಿದು ಬಂದ ಕೂಲಿಯನ್ನು ತಂದು ಅರ್ಪಿಸಿದುದು ಶ್ರೀ ಗುರುಮಲ್ಲೇಶ್ವರರು ಶರಣರು ನಡೆದ ಮಾರ್ಗದಲ್ಲಿ ಕೈಕೊಂಡ ಕಾಯಕನಿಷ್ಠೆಯ ಜ್ವಲಂತ ನಿದರ್ಶನ.
ಹೀಗೆ ದೇವನೂರಿನ ಪರಮಪುಣ್ಯನಿಧಿ ಶ್ರೀ ಗುರುಮಲ್ಲೇಶ್ವರರು ನಾಡಿಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು. ಅವರು ಸಮಾಜಕ್ಕೆ ನೀಡಿದ ಕಾಯಕ-ದಾಸೋಹ ಶರಣಮಾರ್ಗದ ಸೋಪಾನ ಗಳೆನಿಸಿವೆ. ಕಂಥೆ ಭಿಕ್ಷದ ಕಾಯಕದ ಮೂಲಕ ದಾಸೋಹ ತಮ್ಮ ನೆಲೆಗೊಳಿಸಿ ಪರಮ ದಾಸೋಹಮೂರ್ತಿಗಳೆನಿಸಿದುದು ಶ್ರೀ ಗುರುಮಲ್ಲೇಶ್ವರರು ಸಮಾಜಕ್ಕೆ ಅರ್ಪಿಸಿದ ಪರಮಸಾಧನೆ. ಈ ಸಾಧನೆಯ ದಿವ್ಯಬೆಳಕು ಇಂದು ನಾಡಿಗೆ ಸನ್ಮಾರ್ಗದರ್ಶನ.