Previous ನಾಗನೂರು ಸಿದ್ಧಗಂಗಾ Next

ಕಿತ್ತೂರು ಸಂಸ್ಥಾನ

ಕಿತ್ತೂರು ಸಂಸ್ಥಾನ ಕಲ್ಮಠ ಕ್ಷೇತ್ರ

ಶರಣರು ಪಾದವಿಟ್ಟ ಭೂಮಿ ಕಿತ್ತೂರು. ಇಲ್ಲಿಯ ರಣ ಗಟ್ಟಿಕೆರೆ ಬಯಲು ಶರಣರು ಬಿಜ್ಜಳನ ಸೈನಿಕರೊಡನೆ ಹೋರಾಟ ನಡೆಸಿದ ಪುಣ್ಯಭೂಮಿ. ದೇಶಭಕ್ತರ ಜಾಗೃತಸ್ಥಳ, ವೀರರಾಣಿ ಕಿತ್ತೂರು ಚೆನ್ನಮ್ಮ ಮೊಟ್ಟಮೊದಲು ಬ್ರಿಟಿಷರನ್ನು ಎದುರಿಸಿದ ಕನ್ನಡನಾಡಿನ ಮಹಿಳೆ, ಅವಳ ಹೋರಾಟಕ್ಕೆ ಕೀರ್ತಿವೆತ್ತ ಪ್ರದೇಶವಿದು. ಚೆನ್ನಮ್ಮ ರಾಣಿಯ ಸಮಾಧಿ ಕಾಲದಲ್ಲಿ ಕಲ್ಮಠದ ಗುರು ಗುರುಸಿದ್ದ ಸ್ವಾಮಿಗಳು, ಗುರುಮನೆ ಮತ್ತು ಅರಮನೆಗಳಿಗೆ ಎರಡು ಕಣ್ಣಾಗಿದ್ದವರು. ತರುವಾಯದ ಮಡಿವಾಳ ಶಿವಯೋಗಿಗಳು, ಚೆನ್ನಬಸವಸ್ವಾಮಿಗಳು ಕಿತ್ತೂರು ಸಂಸ್ಥಾನದ ಬಗ್ಗೆ ಶ್ರಮಿಸಿದವರು. ಸಂಸ್ಥಾನದ ಅವಶೇಷ ಸಂಗ್ರಹಿಸಿ ಚಿರವಾಗಿ ಉಳಿಸಿದ ಮಹನೀಯರು. ಹೀಗೆ ಕಲ್ಮಠ ರಾಜ ವೈಭವ ಕಾಣದೇ ಹೋದರೂ ಶರಣರಿಗೆ ನೆಲೆಯಾಗಿ ಭಕ್ತರಿಗೆ ತವರಾಗಿ ಅದರ ಸತ್ಸಂಪ್ರದಾಯಗಳನ್ನು ಮುಂದುವರೆಸಿಕೊಂಡುಬಂದಿದೆ. ಶ್ರಾವಣ ಸೋಮವಾರ ಗುರು ಸಿದ್ದೇಶ್ವರರ ಜಾತ್ರೆ ಜರುಗುತ್ತದೆ.

ಕಿತ್ತೂರಿನ ಕಲ್ಮೇಶ್ವರ ದೇವಸ್ಥಾನ ಕ್ರಿ.ಶ. ೧೨ನೆಯ ಶತಮಾನದ್ದು. ಇದನ್ನು ಹೊಂಡದ ಬಸವಣ್ಣನ ದೇವಸ್ಥಾನದ ಬಳಿ ನೋಡಬಹುದು. ಶರಣರು ಹೆಜ್ಜೆ ಇಟ್ಟಲ್ಲಿ ಬಸವಣ್ಣ, ವೀರಭದ್ರ ದೇವಸ್ಥಾನಗಳು ಎದ್ದು ತೋರುವದು ಶರಣರ ವೈಶಿಷ್ಟ್ಯವೆನ್ನಬೇಕಾಗಿದೆ.

ಕಿತ್ತೂರಿನ ನೆರೆಯಲ್ಲಿರುವ ನಿಚ್ಚಣಕಿ ದೇಗಲೊಳ್ಳಿ, ಅಂಬಡಗಟ್ಟಿ ಮುಂತಾದವು ಶರಣ ಪರಂಪರೆಯ ಪ್ರಮುಖ ಕೇಂದ್ರಗಳಾಗಿವೆ. ಕಲ್ಯಾಣ ಕ್ರಾಂತಿಯ ನಂತರ ಶರಣರ ಪ್ರಭಾವವು ಈ ನಾಡಿನಲ್ಲಿ ಪ್ರಸಾರವಾಗಿ ಗುಡಿ ಗುಂಡಾರಗಳ ಜೊತೆಗೆ ಬಸವಣ್ಣನ ಮಂದಿರಗಳು ಜಂಗಮರ ಮಠಮಾನ್ಯಗಳು ಸುಕ್ಷೇತ್ರಗಳಾಗಿ ಬೆಳೆದು ನಿಂತಿವೆ.

ಪರಿವಿಡಿ (index)
Previous ನಾಗನೂರು ಸಿದ್ಧಗಂಗಾ Next