ಶರಣ ಕ್ಷೇತ್ರಗಳ ಚಾರಿತ್ರಿಕ ವಿವರಣೆ - ಆಕರಗಳು
ಒಂದು ರಾಷ್ಟ್ರದ ಜನಾಂಗವು ತನ್ನ ಇತಿಹಾಸ ಮರೆತರೆ ಅದಕ್ಕೆ ಮುಂದೆ ಉತ್ತಮ ಭವಿಷ್ಯವಿಲ್ಲ ಎಂಬುದು ಡಾ. ರಾಮ ಮನೋಹರ ಲೋಹಿಯಾ ಅವರ ಅಭಿಪ್ರಾಯ. ಶರಣ ಕ್ಷೇತ್ರಗಳ ಚಾರಿತ್ರಿಕ ಕುರುಹು ಶರಣರ ಬಗೆಗಿರುವ ಭಕ್ತಿ ಭಾವುಕತೆಗಳಿಗಿಂತ ಐತಿಹಾಸಿಕ ಅಂಶಗಳಿಗೆ ಹೆಚ್ಚಿನ ಒತ್ತು ಸ್ಥಳದ ಚಾರಿತ್ರಿಕ ವಿವರಗಳ ಸತ್ಯಾಸತ್ಯತೆ ಯನ್ನು ದಾಖಲಿಸುವ ಕೃತಿ ಅದಾಗಬೇಕು. ಕ್ಷೇತ್ರದರ್ಶನದಿಂದ ಕೈಲಾಸದಲ್ಲಿ ಗಣಪದವಿ ದೊರಕುವುದೆಂಬ ನಂಬಿಕೆಯನ್ನು ಖಡಾ ಖಂಡಿತವಾಗಿ ಬಹಿಷ್ಕರಿಸಿದವರೇ ಶರಣರು. ತೀರ್ಥಕ್ಷೇತ್ರಗಳಿಗೆ ಹೋಗಿ ಸ್ಥಾವರದೇವರ ದರ್ಶನ ಪಡೆದು ಕರ್ಪೂರ, ಕಾಯಿ ಪ್ರಸಾದ ಸ್ವೀಕರಿಸಿ ಪುಣ್ಯಭಾಜನರಾಗುವ ಪರಿ ಲಿಂಗಾಯತರಿಗೆ ಸಲ್ಲದೆಂಬುದು ಶರಣರ ಅಭಿಪ್ರಾಯ. ನಾವಿಂದು ಅವರು ನುಡಿದಂತೆ ನಡೆದ ಲಿಂಗಾಯತ ಮಹಾಪುರುಷರ ಶುದ್ಧ ಚರಿತ್ರೆಯ ಸಂಗತಿಗಳನ್ನು ಲಿಂಗಾಯತ ತಪ್ಪು . ಆಚಾರಗಳಿಗೆ ಸಂಬಂಧಿಸಿದ ಅಂಶಗಳನ್ನು ಮುಂದಿನ ಜನಾಂಗಕ್ಕೆ ತೋರಬೇಕಿದೆ.
ಅಡಿಗಡಿಗೆ ಜ್ಞಾನನಿಧಿ ಅಡಿಗಡಿಗೆ ದಿವ್ಯಕ್ಷೇತ್ರ
ಅಡಿಗಡಿಗೆ ನಿಧಿಯು ನಿಧಾನ ನೋಡಯ್ಯ
ಆತನ ಇರವೇ ವಾರಣಾಸಿ ಅವಿಮುಕ್ತಕ್ಷೇತ್ರ
ಕೂಡಲ ಸಂಗನ ಶರಣ ಸ್ವತಂತ್ರನಾಗಿ
ಗುರು ಬಸವಣ್ಣನ ವಚನದಂತೆ ಕ್ಷೇತ್ರಗಳ ಶೋಧನೆ ಮಾಡಬೇಕಿದೆ. ಶರಣ ಸಾಹಿತ್ಯದಲ್ಲಿ ಉಲ್ಲೇಖಿತಗೊಂಡ ಕ್ಷೇತ್ರಗಳನ್ನು ಆಯ್ದು ವಿಷಯಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಕ್ಷೇತ್ರ ಪರಿಚಯವನ್ನು ಕೈಕೊಳ್ಳುವುದೇ ಶರಣಕ್ಷೇತ್ರಗಳ ಮಹತ್ವ ಪೂರ್ಣ ಚಿಂತನೆ ಎನಿಸಿದ.
೧. ಶರಣರು ಬದುಕಿದ ನಿರ್ಮಲ ಬದುಕು ಸೂರ್ಯನಷ್ಟೇ ಸತ್ಯವಿದ್ದರೂ ಬರವಣಿಗೆ ರೂಪದ ಅವರ ಶುದ್ಧ ಚರಿತ್ರೆಯ ಕೊರತೆಯಿಂದ ಅವರ ಅಸ್ತಿತ್ವವನ್ನೇ ಪ್ರಶ್ನಿಸುವ ಸಂದರ್ಭ ಬಂದಿತ್ತು. ಪ್ರತಿಯೊಬ್ಬ ಶರಣನ ಜನ್ಮಗ್ರಾಮ, ಜನನಮಿತಿ, ತಂದೆ ತಾಯಿ, ದೀಕ್ಷಾಗುರು, ಜೀವಿತದ ಅವಧಿ, ಐಕ್ಯಸ್ಥಳ ಮೊದಲಾದವು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಈ ಪ್ರಶ್ನೆಗಳನ್ನು ಬಿಡಿಸಿ ಶರಣರ ಶರಣಕ್ಷೇತ್ರಗಳ ಚರಿತ್ರೆ ರೂಪಿಸುವ ಹೊಣೆ ಸಂಶೋಧಕರ ಹೆಗಲ ಮೇಲೆ ನಿಂತಿದೆ.
ಶರಣಕ್ಷೇತ್ರದ ಶರಣರ ಚರಿತ್ರೆಯನ್ನು ಲಿಂಗಾಯತದ ಇತಿಹಾಸ ವನ್ನು ಅರಿಯುವಲ್ಲಿ ಶಾಸನಗಳು ವಿಶ್ವಸನೀಯ ಆಧಾರಗಳನ್ನೊದಗಿಸುತ್ತವೆ. ಶಾಸನಗಳಲ್ಲಿಯಾದರೂ ಅವರು ಆನುಸಂಗಿಕವಾಗಿ ಕಂಡು ಬರುವುದಕ್ಕೆ ಶರಣರ ಮನೋಧರ್ಮ ಕಾರಣವೆನ್ನಬೇಕು. ಪುರಾಣಸಂಗತಿಗಳಿಂದ ಭಿನ್ನವಾದ ರೀತಿಯಲ್ಲಿ ಶುದ್ಧ ಇತಿಹಾಸ ಇಲ್ಲಿ ದೊರಕುವುದೆಂಬುದಕ್ಕೆ ಅರ್ಜುನವಾಡ, ಅಬ್ಬಲೂರು ಶಾಸನಗಳು ಉತ್ತಮ ಉದಾಹರಣೆಗಳೆನಿಸಿವೆ.
೨. ಶರಣಕ್ಷೇತ್ರದ ಪ್ರಮುಖ ಆಕರಗಳಲ್ಲಿ ಶಾಸನಗಳು, ಹಸ್ತ ಪ್ರತಿಗಳು, ಲಿಂಗಾಯತ ಕವಿಸಾಹಿತ್ಯದ ಬಹುಪಾಲು ಶರಣರ ಚರಿತ್ರೆಗೆ ಮೀಸಲಾಗಿವೆ. ಕ್ಷೇತ್ರಗಳಲ್ಲಿನ ಪ್ರಾಚ್ಯ ದಾಖಲೆಗಳು ಮೂರ್ತಿಶಿಲ್ಪ, ವಾಸ್ತುಶಿಲ್ಪಗಳು ಕಳೆದುಹೋದ ಚರಿತ್ರೆಯನ್ನು ಮರಳಿ ರೂಪಿಸಿ ಕೊಡುವಲ್ಲಿ ಪ್ರಮುಖ ಆಧಾರವೆನಿಸುತ್ತವೆ. ಏಕಾಂತ ರಾಮಯ್ಯನ ಅಬ್ಬಲೂರು ಶಾಸನ, ಶಿವದೇವನ ಚೌಡದಾನಪುರದ ಶಾಸನ ಲಿಂಗಾಯತ ಪುರಾಣಗಳ ಚೌಕಟ್ಟನ್ನು ಅನುಸರಿಸಿದಂತೆ ಶೋಭಿಸಿವೆ. ಮರಡೀಪುರ ಶಾಸನದ ಕಲಿದೇವರ ಪ್ರಶಸ್ತಿಗದ್ಯ, ತಾಳಿಕೋಟೆ ಶಾಸನದ 'ಪುರಾತನ ನೂತನರೆ'ನಿಸಿದ ಅಸಂಖ್ಯಾತ ಗಣಂಗಳ, ಪ್ರಶಸ್ತಿ ಗದ್ಯಗಳು ಬಣ್ಣ ತುಂಬಿ ನಿಂತಿವೆ. ಪ್ರಸಾದಿದೇವ, ಗೋಸಲಾರ್ಯ, ತೋಂಟದಾರ್ಯರ ಮಂಗಲವರ್ಣನೆ, ಅಬ್ಬಲೂರು ಕುಡುತಿನಿ ಇಂಗಳಗಿ, ತಾಳೀಕೋಟೆ ಶಾಸನಗಳಲ್ಲಿಯ ಭಾವಭಾಷೆಗಳು ಸಂದರ್ಭಕ್ಕೆ ತಕ್ಕಂತೆ ವೀರೋಚಿತವಾಗಿವೆ. ಶಿವಯೋಗಿ ಸಿದ್ದರಾಮನ ಬಹುತೇಕ ಶಾಸನಗಳಲ್ಲಿ ಕಂಡುಬರುವ ಒಂದು ಗದ್ಯಖಂಡ ಸಂಸ್ಕೃತಕ್ಕೆ ಅನುವಾದಗೊಂಡಿದೆ. ಚೌಡದಾನಪುರ ಮತ್ತು ಮಾವನೂರು ಶಾಸನಗಳ ಮೇಲೆ ವಚನಸಾಹಿತ್ಯದ ಪ್ರಭಾವ ಎದ್ದು ತೋರುತ್ತದೆ. ಚಿತ್ರದುರ್ಗದ ಶಾಸನವಂತೂ ತೋಂಟದ ಸಿದ್ದಲಿಂಗ ಶಿವಯೋಗಿಗಳ ಒಂದು ಇಡಿಯಾದ ವಚನವನ್ನೇ ಬಳಸಿಕೊಂಡು ಪ್ರಕಟಗೊಂಡಿದೆ.
೩. ಶರಣರ ವಿಗ್ರಹಗಳ ಹಾಗೂ ಅವರ ವರ್ಣಚಿತ್ರಗಳ ಸಂಗ್ರಹ. ಶರಣಕ್ಷೇತ್ರಗಳೆನಿಸಿದ ನಂಜನಗೂಡು, ದೇವನೂರು, ಚಾಮರಾಜ ನಗರ, ಬಳ್ಳಾರಿಗಳಲ್ಲಿ ಅರುವತ್ತುಮೂವರು ಪುರಾತನರ ವಿಗ್ರಹ ಗಳಿವೆ. ಧಾರವಾಡದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿ ಅರುವತ್ತು ಮೂವರು ಪುರಾತನರ ನಾಮ್ ಲಿಖಿತಗೊಂಡಿವೆ. ಧಾರವಾಡದ ಶ್ರೀ ಮುರುಘಾ ಮಠದಲ್ಲಿ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಗೆ ಕಟ್ಟಿದ ಹಾಸ್ಟೆಲ್ಲಿನ ಮೇಲಿನ ಕೋಣೆಗಳು ಅರುವತ್ತುಮೂರು ಕೆಳಗಿನ ಕೋಣೆಗಳು ಅರುವತ್ತು ಮೂರು. ಹೀಗೆ ತಮಿಳುನಾಡಿನ ಅರುವತ್ತುಮೂವರು ಶರಣರು ಕನ್ನಡನಾಡಿನಲ್ಲಿ, ಲಿಂಗಾಯತ ವಚನಸಾಹಿತ್ಯ, ಕನ್ನಡ ಕಾವ್ಯ, ವಿಗ್ರಹ ರೂಪ, ಕೋಣೆಗಳ ರೂಪದಲ್ಲಿ ಹಾಸು ಹೊಕ್ಕಾಗಿರುವರು.
ಅಬ್ಬಲೂರಿನಲ್ಲಿ ಜೇಡರ ದಾಸಿಮಯ್ಯ ದೇವರಿಗೆ ವಸ್ತ್ರ ಕೊಡುವ ಠಾವು, ಸಿರಿಯಾಳ ಚಂಗಳೆ, ಕುಂಬಾರ ಗುಂಡರ ವಿಗ್ರಹ, ಏಕಾಂತ ರಾಮಯ್ಯನ ಶಿರಸ್ಸು ಪವಾಡದ ವಿವಿಧ ದೃಶ್ಯಗಳನ್ನು ವ್ಯಕ್ತಪಡಿಸುವ ಚಿತ್ರಗಳಿವೆ. ಹಾಗೆಯೇ ಶರಣಕ್ಷೇತ್ರ ಅಂತರವಳ್ಳಿಯಲ್ಲಿ ಮೂರು ಜಾವಿದೇವನ ವಿಗ್ರಹ, ಕೊಲ್ಲಿಪಾಕಿಯಲ್ಲಿ ದೇವರ ದಾಸಿಮಯ್ಯನ ವಿಗ್ರಹ, ಗೊಡಚಿ ಅಮ್ಮಿನ ಬಾವಿ ಮತ್ತು ಕಲ್ಯಾಣದಲ್ಲಿ ಮಡಿವಾಳ ಮಾಚಿದೇವನ ವಿಗ್ರಹ, ಬನವಾಸಿಯಲ್ಲಿ ಲದ್ದೆಯ ಸೋಮ, ಮೋಳಿಗೆ ಮಾರಯ್ಯ, ನುಲಿಯ ಚಂದಯ್ಯ, ಆಯ್ದಕ್ಕಿ ಮಾರಯ್ಯ, ಹಡಪದ ಅಪ್ಪಣ್ಣ, ಹೋಳಿನ ಹಂಪಣ್ಣ, ಅಗ್ಗವಣಿ ಹೊನ್ನಯ್ಯ, ಗುಂಡಬ್ರಹ್ಮಯ್ಯರ ವಿಗ್ರಹಗಳು ಕನ್ನಡನಾಡಿನ ವಿವಿಧೆಡೆಗಳಲ್ಲಿ ಸಿಗುತ್ತವೆ. ಹಾವೇರಿ, ನೀತಿಗೆರೆ, ಚಿತ್ರದುರ್ಗ, ವರದಮೂಲ, ಕುಸ್ಕೂರು, ಗುಂಡೇನಹಳ್ಳಿ ಮತ್ತು ಬಳ್ಳಾರಿ, ಬನವಾಸಿಯಲ್ಲಿ ಗುಂಡ ಬ್ರಹ್ಮಯ್ಯರ ವಿಗ್ರಹಗಳು ದೊರಕಿವೆ. ರೇವಣಸಿದ್ದರು, ರುದ್ರಮುನಿಗಳ ವಿಗ್ರಹಗಳೂ ಕೆಲವೆಡೆಗಳ ದೊರಕಿವೆ. ಶರಣ ಕ್ಷೇತ್ರಗಳಲ್ಲಿರುವ ಇಂಥ ಮಹತ್ವದ ವಿಗ್ರಹಗಳು ಅಳಿದು ಹೋಗುವ ಮುನ್ನ, ತ್ರುಟಿತ ಗೊಳ್ಳುವ ಮುನ್ನ ಇವನ್ನು ಸಂರಕ್ಷಿಸುವ, ಅದು ಸಾಧ್ಯವಾಗದೇ ಹೋದರೆ ಅವುಗಳ ಮೈಕ್ರೋ ಫಿಲ್ಸ್, ಕ್ಯಾಸೆಟ್, ಫೋಟೋ ಮುಂತಾದ ಉನ್ನತಮಟ್ಟದ ಮಾಧ್ಯಮಗಳ ಮೂಲಕ ಸಂಗ್ರಹಿಸುವ ಆವಶ್ಯಕತೆ ಇಂದು ನಮ್ಮ ಮುಂದಿದೆ.
೪. ಹಸ್ತಪ್ರತಿ ಪ್ರಶಸ್ತಿಗಳ ತಲಸ್ಪರ್ಶಿ ಅಧ್ಯಯನ ಶರಣಕ್ಷೇತ್ರಗಳ ಬಗೆಗೆ ಮೌಲ್ಯಯುತವಾದ ಇತಿಹಾಸ ದೊರಕಿಸಿಕೊಡುತ್ತವೆ. 'ಭೂಕೈಲಾಸ ಉಳುವೆ ಮಹಾಮನೆ ಸೂತ್ರಾನುವರ್ತಿಗಳಾದ ಬಾಳಪ್ಪ ಸ್ವಾಮಿಗಳ ಕರಸಂಜಾತರಾದ ಪುಟ್ಟನಂಜಮ್ಮ' ಎಂಬ ದಾಖಲೆ ಪ್ರಾಚೀನ ಕಾಲದಲ್ಲಿ ಮೆರೆದ ಉಳವಿ ಕ್ಷೇತ್ರ ಶರಣರ ತರುವಾಯ ಶರಣಕ್ಷೇತ್ರವೆನಿಸಿದ್ದು ಮಹಾಮನೆ ತರುವಾಯವೂ ಕಾರ್ಯಪ್ರವೃತ್ತ ವಾದುದು, ಮಹಾಮನೆಯ ಸೂತ್ರಾನುವರ್ತಿಗಳು ಶರಣಕ್ಷೇತ್ರಗಳ ಮೇಲ್ವಿಚಾರಣೆ ಕೈಕೊಂಡಿದ್ದು ಗೋವೆ ಪ್ರದೇಶದ ಅನೇಕ ರಾಣೆಯರಿದ್ದುದು ತಿಳಿದುಬರುವ ಅಂಶ. ಹಾಗೆಯೇ 'ಸ್ವಸ್ತಿ ವಿಜಯಾಭ್ಯುದಯ ಶಾಲಿವಾಹನ ಶಕವರುಷ ೧೫೦೨ನೆಯ ವಿಕ್ರಮಸಂವತ್ಸರದ ಕಾರ್ತಿಕ ಬಹುಳ ೨ ಮಂಗಳವಾರ ಸರ್ವಾಚಾರ ಸಂಪನ್ನ ಏಕಲಿಂಗ ನಿಷ್ಠಾಪರ ಲಿಂಗಾಯತ ಸಂಪನ್ನ ಗುಮ್ಮಳಾಪುರದ ಸಿಂಹಾಸನಕ್ಕೆ ಕರ್ತೃಗಳಾದ ವಿರಕ್ತಸಿದ್ದಲಿಂಗ ದೇವರಿಗೆ ಹದಿನಾಡ ಯಳವಂದೂರು ಅರಸು ಚೆನ್ನೊಡೆಯರು ಶೂನ್ಯ ಸಂಪಾದನೆಯ ವಚನಸಂಗ್ರಹವನ್ನು ಬರೆಸಿ ಶಿವಾರ್ಪಿತವಾಗಿ ಅರ್ಪಿಸಿದ್ದು, ಶರಣ ಕ್ಷೇತ್ರ ಗುಮ್ಮಳಾಪುರದ ಪ್ರಾಚೀನ ಮಹತ್ವಕ್ಕೆ ಸಾಕ್ಷಿಯೆನಿಸಿದೆ. ಹೋಳಿನ ಹಿರಿಯ ಹಂಪಯ್ಯ ಚಿಕ್ಕ ಹಂಪಯ್ಯರು ಸುಪ್ರಸಿದ್ಧ ದಾಸೋಹಿಗಳು. 'ವೃಷಭೇಂದ್ರ ವಿಜಯ' ಹೆಸರಿನ ಯಕ್ಷಗಾನಗಳಲ್ಲಿ ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ವರ್ಣ ಚಿತ್ರಗಳಿವೆ. ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿಯಲ್ಲಿ ತೋಂಟದ ಸಿದ್ಧಲಿಂಗಯತಿಗಳ ವರ್ಣಚಿತ್ರ ಅಪೂರ್ವವೂ ಅಮೂಲ್ಯವೂ ಮಹತ್ವಯುತವಾದ ನಕ್ಷೆ ಎನಿಸಿದೆ.
೫. ಪರಿಸರದ ಪ್ರಾಚ್ಯ ದಾಖಲೆಗಳು ಮರೆತುಹೋದ ಶರಣಕ್ಷೇತ್ರ ಗಳನ್ನು ಪರಿಚಯಿಸಿಕೊಡುತ್ತವೆ. ಯಾದವರ ಮಹಾ ಪ್ರಧಾನ ಚವುಡಿ ಸೆಟ್ಟಿ ಮತ್ತು ನಾಗರಸರು ಕೂಡಿ ಕವಿಳಾಸಪುರದ ಮಲ್ಲಿಕಾರ್ಜುನ, ಸಂಗಮೇಶ್ವರದೇವರಿಗೆ ಹುಲಿಗೆರೆಯ ಸೋಮೇ ಶ್ವರನ ಸನ್ನಿಧಿಯಲ್ಲಿ ಯತಿರಾಯ ಹಾಲಬಸವಿದೇವನಿಗೆ ದತ್ತಿ ನೀಡಿದ್ದು ಬಸವಣ್ಣನವರ ವಂಶಾವಳಿಯ ಬಗ್ಗೆ ಅರ್ಜುನವಾಡದ ಶಾಸನದ 'ಸಂಗನಬಸವನ ಅಗ್ರಜ' ಎಂಬ ತ್ರುಟಿತಪದ್ಯ ವಿದ್ವಾಂಸರಲ್ಲಿ ಮತಭೇದ ಹುಟ್ಟಿಸಿದ್ದರೂ, ಕವಿಳಾಸಪುರ ಇಂದು ನಾಶವಾಗಿದ್ದರೂ ಶಾಸನದ ಆಧಾರದ ಮೇಲೆ ಶರಣಕ್ಷೇತ್ರವೆನಿಸಿದೆ.
ಲಿಂಗಾಯತ ಕವಿಸಾಹಿತ್ಯದ ಬಹುಪಾಲು ಶರಣರ ಚರಿತೆಗೆ ಮೀಸಲೆನಿಸಿದೆ. ಲಕ್ಕಣ್ಣದಂಡೇಶನ ಶಿವತತ್ತ್ವ ಚಿಂತಾಮಣಿ, ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಭೈರವೇಶ್ವರನ ಭೈರವೇಶ್ವರಕಾವ್ಯ ಕಥಾಮಣಿ ಸೂತ್ರ ರತ್ನಾಕರ, ಗುರುರಾಜಚಾರಿತ್ರ, ಪುರಾತನತ್ರಿವಿಧಿ ಗಣಸಹಸ್ರನಾಮಾವಳಿ, ಇತ್ತೀಚಿನ ಸ್ವಾದಿ ಸದಾಶಿವ ರಾಯನ ಕಾವ್ಯಗಳು, ಸಿದ್ಧರಾಮಪುರಾಣ, ರಂಜನವಂಶರತ್ನಾಕರ, ಪದ್ಮರಾಜಪುರಾಣ, ಮುಂತಾದವು ಮುಖ್ಯವಾದವು.
೬. ಲಕ್ಕಣ್ಣ ದಂಡೇಶನ ಗರುಡದೃಷ್ಟಿಗೆ ಸಿಕ್ಕಿದ ಶರಣಕ್ಷೇತ್ರಗಳಲ್ಲಿ ಕಡವೂರು, ತಿರುವಾಯೂರು, ತಿರುಚಿಟ್ಟಪಳ್ಳಿಯ ಶರಣರಾದ ಓಲೆಯ ರಾಮಯ್ಯ, ಓಲೆಯ ಶಾಂತಯ್ಯ, ಓಲೆಯ ರಾಮಣಯ್ಯ, ಓಲೆಯ ತಮ್ಮಣ್ಣ, ಓಲೆಯ ತಿಪ್ಪಣ್ಣ, ನೂತನ ಗಣಂಗಳ ಮಾಲಿಕೆ, ಯಲ್ಲಿ ಹಕ್ಕಲಕಾಯಕದ ಗೌರಮ್ಮ, ಹರದ ಓಬಳಕ್ಕ, ನಾಗಾಯಮ್ಮ, ಮುತ್ತಿಲಕಾಯಕ ಎರಮ, ಗಂದಿಗದ ಕಾಯಕದ ಲಕ್ಕಮ್ಮ ದೇವಾಯಮ್ಮ, ಮೇಳಾದೇವಿ, ಬಸವಾತಾಯಿ, ವರದಾನಿಯಮ್ಮ, ಅಮ್ಮಾಯಿ, ವೀರಮ್ಮ, ಆವೂರಿನ ಸಪ್ಪೆಯಮ್ಮ, ಮಲ್ಲಿಯಕ್ಕ ಮಲ್ಲದೇವ ರಾಣೆಯರು, ಅವಾರಿ ದಾಸೋಹಿ ಹರಿಯಪ್ಪ ರಾಣಿಯರು, ವೀರಪ್ಪರಾಣೆಯರು, ಸೋಮವಾರಮ್ಮ, ಮಾಚಾಯಿತಾಯಿ, ಅಮರಾಯಿ ಮದಾಯಿ, ಹಾಲಮ್ಮ ಜನಾಯಿತಾಯಿ ರಾಜಾಯಮ್ಮ, ಲಿಂಗಮ್ಮ ಮೊದಲಾದ ಅನುಭಾವಿಗಳ ಉಲ್ಲೇಖಗಳಿವೆ. ಹಲಗೆ ಯಾರ್ಯರು ಕೆಂಚವೀರಾಖ್ಯನಿಗೆ ಅನೇಕ ಮಹನೀಯರ ಮಧ್ಯದಲ್ಲಿ ಜ್ಯೋತಿಯಮ್ಮನ ಆಲಯದಲ್ಲಿ ವೀರಶೈವಾಮೃತ ಮಹಾಪುರಾಣ ವನ್ನು ಪ್ರತಿಮಾಡಿಸಿದಂತೆ, ಅಂದಿನ ಪುರಾಣಶ್ರವಣದಲ್ಲಿ ಸಮಾಧಿ ಸಿದ್ದಮ್ಮ, ಸಪ್ಪೆಮ್ಮರು ಭಾಗವಹಿಸಿದ ಉಲ್ಲೇಖಗಳು ಇವೆ.
೭. ಶರಣಕ್ಷೇತ್ರಗಳ ಬಗೆಗೆ ಖಚಿತವಾಗಿ ಹೇಳುವದು ದುಸ್ತರವೇ ಆಗಿದೆ. ಆದರೂ ಪವಾಡ, ಸ್ಥಳೀಯ ಕ್ಷೇತ್ರ ಕಥೆಗಳನ್ನಾಧರಿಸಿ ಶರಣರ ಸಂಗತಿಗಳನ್ನು ನಿರೂಪಿಸಬೇಕಾಗುತ್ತದೆ. ಪುರಾಣಕಾಲದ ಅದ್ಭುತ, ವಿಸ್ಮಯಕಾರಿ ಘಟನೆಗಳು, ಪವಾಡಗಳು, ವಾಸ್ತವದೃಷ್ಟಿಗೆ ಸಮ್ಮತ ವಾಗದ ಸಂಗತಿಗಳು. ಇವೆಲ್ಲ ನಮ್ಮ ವೈಚಾರಿಕ, ಖಚಿತ ಧೋರಣೆ ಗಳಿಗೆ ಆತಂಕ ಒಡ್ಡುವುದುಂಟು. ಜನಪದರಿಗೆ ಅನಾದಿ ಕಾಲದ ಸ್ಥಳೀಯ ಐತಿಹ್ಯ ಪವಾಡಗಳ ವೈಭವೀಕರಣದಲ್ಲಿ ನೆಲೆನೆಟ್ಟ ನಂಬಿಕೆ. ಅದು ಅಷ್ಟೇ ಪ್ರಶ್ನಾತೀತವೆನಿಸುವ ಶ್ರದ್ಧೆ, ಜನಪದರ ಚಾರಿತ್ರಿಕ ಅವಜ್ಞೆಯನ್ನು ಅಲ್ಲಗಳೆಯುವಂತಿಲ್ಲ. ಇಂದು ಕನ್ನಡನಾಡಿನ ಎಲ್ಲ ಕ್ಷೇತ್ರಗಳ, ಕ್ಷೇತ್ರಪುರುಷರ ಸುತ್ತಲೂ ಅಗಣಿತ ಪವಾಡಗಳು ಹೆಣೆಯಲ್ಪಟ್ಟಿವೆ. ಈ ದುರ್ಧರಜಾಲದಿಂದ ಶರಣರನ್ನು ಬಿಡಿಸಿಕೊಂಡು ವಾಸ್ತವಿಕ ನೆಲೆಯಲ್ಲಿ ರೂಪಿಸುವುದು ಈಗ ತುರ್ತು ಜರುಗಬೇಕಾದ ಕಾರ್ಯ.
೮. ಶರಣರ ಕಾರ್ಯಕ್ಷೇತ್ರಗಳನ್ನರಿಯುವಲ್ಲಿ ಸತ್ಯಾಂಶವನ್ನು ಒರೆಗಲ್ಲಿಗೆ ಹಚ್ಚಿ ವಿಷಯ ಸಂಗ್ರಹಿಸುವುದು. ಶರಣಕ್ಷೇತ್ರ ಉಳವಿ ಚೆನ್ನಬಸವಣ್ಣ, ಇತರ ಶರಣರು ನೆಲೆನಿಂತ ಪುಣ್ಯಭೂಮಿ, ಉಳವಿಯ ಪರಿಸರದಲ್ಲಿ ಸುಮಾರು ಏಳುನೂರ ಎಪ್ಪತ್ತು ಗವಿಗಳಿವೆ. ಅವೆಲ್ಲವುಗಳನ್ನು ಸಂದರ್ಶಿಸುವುದು ಕಷ್ಟದ ಕಾರ್ಯ, ಕೆಲವು ಗವಿಗಳು ಚಾರಿತ್ರಿಕ ಮಹತಿ ಪಡೆದಿದ್ದು ಇವುಗಳಿಗೆ ಸಾಗುವ ಹಾದಿ ದುರ್ಗಮವಾಗಿದೆ. ಗವಿಗಳು ಇರುವ ಸ್ಥಳ ಎತ್ತರದ ಬೆಟ್ಟ, ಆಳವಾದ ಕಣಿವೆಗಳಿಂದ ಕೂಡಿದ ಭಯಾನಕ ಪರಿಸರ. ಭೂ ವೈಜ್ಞಾನಿಕ ವಿಸ್ಮಯಗಳೆಂಬಂತೆ ರೂಪಿತಗೊಂಡ ಇಂಥ ಕ್ಷೇತ್ರಗಳು ಜನಪದರ ಭಕ್ತಿ ಶ್ರದ್ಧೆಗೆ ಪಾತ್ರವಾಗಿದ್ದು ಪ್ರಿಯವಾದ ರೀತಿಯಲ್ಲಿ ಬಳಸಿಕೊಂಡು ಹೋದರೆ ಚೆನ್ನ, ಇಂಥ ಗವಿಗಳ ಪುನರ್‌ಸೃಷ್ಟಿ ಎಂದಿಗೂ ಸಾಧ್ಯವಿಲ್ಲ. ಉಳವಿಯ ರಾಕ್ಷಿಘಟ್ಟ, ಆಕಳಮಲಿ, ಗುಹೆಗಳು, ಶ್ರೀಶೈಲ ಪರಿಸರದ ಅಕ್ಕನ ಗುಹೆ, ಕದಳಿವನ, ಶರಣರಿಗೆ ಆಸ್ಪದವಿತ್ತ ಮುರುಗೋಡಿನ ಬಳಿ ಇರುವ ಗುಹೆ ಮುಂತಾದವು ಭೂವೈಜ್ಞಾನಿಕ ಸಾದೃಶ್ಯಗಳಾಗಿದ್ದು ಇಂಥ ನೈಸರ್ಗಿಕ ವೈಚಿತ್ರಗಳನ್ನು ಅವುಗಳ ರೂಪ ರಚನೆ ಸಾದೃಶ್ಯ ಕೆಡದಂತೆ ಸಂರಕ್ಷಿಸಬೇಕಾದುದು ನಮ್ಮ ಆದ್ಯ ಕರ್ತವ್ಯ.
೯. ಕ್ಷೇತ್ರಗಳ ಬಗೆಗಿರುವ ದೊಡ್ಡ ಕೊರತೆ ಎಂದರೆ ವಿಸ್ತತ ಮಾಹಿತಿ, ಮೊದಲಿಗೆ ಮಾಹಿತಿ ಸಂಗ್ರಹಣೆಯ ಕಾರ್ಯ ಪ್ರಾರಂಭ ವಾಗಬೇಕು. ವೇಳಾಪಟ್ಟಿ, ಸಚಿತ್ರ ಲೇಖನ ಮಾರ್ಗಸೂಚಿ ನಕ್ಷೆ, ಕಿರುಹೊತ್ತಿಗೆ, ಪೋಸ್ಟರ್‌ಗಳು, ನಕ್ಷೆಗಳು, ಫೋಟೋ, ಆಲ್ಬಮ್ ಗಳನ್ನು ಆಕರ್ಷಕ ರೀತಿಯಲ್ಲಿ ತರುವುದು ಅವಶ್ಯಕತೆ ಇದೆ. ಶರಣ ಕ್ಷೇತ್ರಗಳ ಬಗೆಗೆ ಮಾಹಿತಿ ಸಂಗ್ರಹಣೆ, ವಿಡಿಯೋ ಚಿತ್ರೀಕರಣ, ಛಾಯಾಚಿತ್ರಗಳು, ಡಾಕ್ಯುಮೆಂಟರಿ ಮೊದಲು ಸಂಗ್ರಹವಾಗಬೇಕಿವೆ. ಇವು ನಮ್ಮ ಸಾಂಸ್ಕೃತಿಕ ಪಳೆಯುಳಿಕೆಗಳು. 'ಶರಣಕ್ಷೇತ್ರಗಳ ರಕ್ಷಣೆ ನಮ್ಮ ಪುರಾತನ ಸಂಸ್ಕೃತಿಯ ಸಂರಕ್ಷಣೆ' ಎಂಬ ಅರಿವು ಕನ್ನಡಿಗರಿಗೆ ಈಗಲಾದರೂ ಬಂದರೆ ಶರಣಕ್ಷೇತ್ರಗಳು ನಾಲ್ಕು ದಿನ ನಮಗೆ ಶಾಂತಿಯ ತಾಣಗಳೆನಿಸುವಲ್ಲಿ ಸಂಶಯವಿಲ್ಲ.
೧೦. ಶರಣಕ್ಷೇತ್ರಗಳು ಲಿಂಗಾಯತರ ಭಕ್ತಿಶ್ರದ್ಧೆಯ ಕೇಂದ್ರ ಸ್ಥಾನಗಳು. ಇವುಗಳ ಸಂದರ್ಶನದಿಂದ ಜನಪದ ಮನ ಉತ್ಸಾಹ ದಿಂದ ತುಂಬಿ ತುಳುಕುವಂತಾಗಬೇಕು. ಬದುಕಿನ ದಿನನಿತ್ಯದ ಜಂಜಡ ದಿಂದ ಮುಕ್ತರಾಗಿ ಭಕ್ತಿ ಶ್ರದ್ಧೆಯ ತಾಣದಲ್ಲಿ ಕಾಲ ಕಳೆವ, ಸ್ವಚ್ಛ ಶುದ್ಧ ಪರಿಸರ, ಸುಂದರ ಪ್ರಕೃತಿ, ವಿನ್ಯಾಸಪೂರ್ಣ ಕ್ಷೇತ್ರ ನಿರ್ಮಾಣ, ಸರಳ ಪೂಜಾವಿಧಿ, ಅಂಧಶ್ರದ್ಧೆ ಹೋಗಲಾಡಿಸುವ ತಾಣವಾಗಬೇಕು.
ಕ್ಷೇತ್ರದರ್ಶನ, ಕ್ಷೇತ್ರಾಧ್ಯಯನ, ಕ್ಷೇತ್ರರಕ್ಷಣೆ ಜೀರ್ಣೋದ್ಧಾರ ಗಳಿ೦ದ ಒಂದೊಂದು ಸಾಂಸ್ಕೃತಿಕ ಕೇಂದ್ರಗಳೆನಿಸಬೇಕು. ಶರಣತತ್ತ್ವಗಳ ಅನುಷ್ಠಾನ, ಶರಣತತ್ವ ಬೋಧನೆ, ಸಂಶೋಧನೆ ಪ್ರಸಾರಕ್ಕೆ ಮೀಸಲಾಗಿರುವ ಶರಣ ಕ್ಷೇತ್ರಗಳು ಉತ್ತಮ ಮಟ್ಟದ ಸಂಸ್ಕೃತಿಯ ಘಟಕಗಳೆನಿಸುತ್ತವೆ. ಇವನ್ನು ನಾವು ರಾಷ್ಟ್ರೀಯ ಸ್ಮಾರಕಗಳೆಂದು ಕರೆಯಬೇಕು. ರಾಷ್ಟ್ರೀಯ ಸ್ಮಾರಕಗಳ ಅವಶೇಷಗಳು ಪತ್ತೆಯಾದರೂ ಕೂಡಲೇ ಸ್ಥಳೀಯ ಜಿಲ್ಲಾಧಿಕಾರಿಗಳು ಅಥವಾ ಪುರಾತತ್ವ ಇಲಾಖೆಯವರಿಗೆ ತಿಳಿಸಬೇಕು. ಮೂರ್ತಿಯೋ ಶರಣರ ವಿಗ್ರಹಗಳೋ ಯಾವುದೋ ಪ್ರಾಚೀನ ಅವಶೇಷವೊ ಸಿಕ್ಕರೆ ಅವನ್ನು ಕೊಳಕ್ಕೆ ಅಥವಾ ಒಂದು ಪಕ್ಕಕ್ಕೆ ಎಸೆದು ಹಾಳು ಮಾಡಬೇಡಿ.
ಶರಣಕ್ಷೇತ್ರಗಳಿಗೆ ಹೊಂದಿಕೊಂಡ ಜಾಗೆಯಲ್ಲಿ ಉಳುಮೆ ಮಾಡಬೇಡಿ. ಅಕಸ್ಮಾತ್ ಖಾಸಗಿಯವರ ಜಮೀನಿನಲ್ಲಿ ದೊರೆಯುವ ಶರಣಕ್ಷೇತ್ರದ ಅವಶೇಷಗಳು ಸರಕಾರದ ಆಸ್ತಿ ಎಂದರಿತು ಅವನ್ನು ಸರಕಾರದವರಿಗೆ ಒಪ್ಪಿಸಬೇಕು. ಭೂಮಿಯನ್ನು ಅಗೆಯುವ ಸಂದರ್ಭದಲ್ಲಿ ಪ್ರಾಚೀನ ವಸ್ತುಗಳು, ಶಿಲಾಶಾಸನಗಳು, ಮೂರ್ತಿಗಳು ದೊರೆತೆ ದೊರೆಯುತ್ತವೆ. ಪುರಾತನ ಸ್ಮಾರಕ ಮತ್ತು ರಾಷ್ಟ್ರೀಯ ಸ್ಮಾರಕಗಳು, ಪುರಾತನ ಸ್ಥಳಗಳು ಹಾಗೂ ದೊರೆತ ಅವಶೇಷಗಳು ಕಾಯ್ದೆ ೧೯೫೮ರ ಅನ್ವಯ, ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಐದು ಸಾವಿರ ರೂ. ವರೆಗೆ ದಂಡ ಮತ್ತು ಆರು ತಿಂಗಳಿಂದ ಐದು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹು ದಾಗಿದೆ. ಪುರಾತತ್ವವಸ್ತುಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ಸಿದ್ಧವಿದೆ. ರಾಷ್ಟ್ರೀಯ ಸ್ಮಾರಕಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಬೇಕಾಬಿಟ್ಟಿ ಪುರಾತನ ಅವಶೇಷಗಳಿಗೆ ಹಾನಿಯುಂಟುಮಾಡಬಾರದು. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತಾಗಬೇಕು. ಹೀಗಿದ್ದರೆ ಮಾತ್ರ ರಾಷ್ಟ್ರೀಯ ಸ್ಮಾರಕಗಳೆನಿಸಿದ ಶರಣಕ್ಷೇತ್ರಗಳು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ಕೇಂದ್ರಗಳೆನಿಸಬಹುದು.
ಪ್ರಾಚೀನ ಶರಣ ಸಂಸ್ಕೃತಿಗಳು ಬೆಲೆ ಕಟ್ಟಲಾರ ದಂಥ ಉತ್ಕೃಷ್ಟ, ಶಿಲ್ಪಕಲೆಗಳು, ಹೃನ್ಮನ ಸೆಳೆಯುವ ಅದ್ಭುತ ಐತಿಹಾಸಿಕ ಅವಶೇಷ ಗಳು. ನೋಡಿದವರಿಗೆ ಮುದ ಮನಶ್ಯಾಂತಿ ನೀಡುವ ಪ್ರಾಕೃತಿಕ ತಾಣಗಳು. ಇತಿಹಾಸವನ್ನು ನಮ್ಮ ಕಣ್ಣುಗಳ ಮುಂದೆ ತಂದು ನಿಲ್ಲಿಸುವ ಶಕ್ತಿ ಇಂದಿಗೂ ಅವುಗಳಲ್ಲಿ ಅಡಗಿದೆ. ಅಂಥ ಮಹತ್ವದ ಶರಣ ತಾಣಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ರಾಷ್ಟ್ರೀಯ ಅವಶೇಷ ಗಳೆಂದು ಘೋಷಿಸಿರುವರು. ಪ್ರಾಚೀನ ಸಂಸ್ಕೃತಿಯ ಸ್ಥಳ ಹಾಗೂ ನೈಸರ್ಗಿಕ ತಾಣಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸು ವುದು ನಮ್ಮ ಮುಖ್ಯ ಕರ್ತವ್ಯ.
ಕೆಲವೆಡೆ ಸುಂದರವಾದ ಉದ್ಯಾನವನಗಳಿವೆ. ಇಂಥವುಗಳಲ್ಲಿ ಮಾನಸ ಪಕ್ಷಿಧಾಮ, ಸುಂದರ ಉದ್ಯಾನವನಗಳನ್ನು ಕೇಂದ್ರಗಳಾಗಿ ರಚಿಸಬೇಕಿದೆ. ನಮ್ಮ ಪುರಾತನ ನಾಗರಿಕತೆ ವೈವಿಧ್ಯಮಯ ಸಂಸ್ಕೃತಿಯ ಕುರುಹುಗಳೇ ನಮ್ಮ ರಾಷ್ಟ್ರೀಯ ಪರಂಪರೆಯಲ್ಲಿರುವ ತಾಣಗಳು, ಪ್ರಾಚೀನ ಕಲೆ ಸಾಹಿತ್ಯ ಸಂಸ್ಕೃತಿಯ ಬಿಂಬಗಳನ್ನು ಇಂದಿಗೂ ಪ್ರತಿನಿಧಿಸುತ್ತವೆ. ಅವು ಕೇವಲ ನಮ್ಮ ನಿಮ್ಮೆಲ್ಲರ ಆಸ್ತಿಯಲ್ಲ, ಅವು ವಿಶ್ವಮಾನವರ ಜನಾಂಗದ ಆಸ್ತಿ. ನಾವು ನೀವೆಲ್ಲರೂ ಅವುಗಳನ್ನು ಸಂರಕ್ಷಿಸುವುದಲ್ಲದೆ ಮುಂದಿನ ಪೀಳಿಗೆಗೂ ಅಳಿಯದಂತೆ ನಾವು ಉಳಿಸಬೇಕಿದೆ. ಅದರಿಂದ ಅವುಗಳ ವಿಶೇಷ ಸಂರಕ್ಷಣೆ ಅವಶ್ಯ.