ಲಿಂಗಾಯತ ಅಂತ್ಯ ಸಂಸ್ಕಾರ | ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) |
ಲಿಂಗಾಯತ ಧರ್ಮ:ಸಮಾನತೆ, ಭ್ರಾತೃತ್ವ ನೈತಿಕತೆ, ಪ್ರಗತಿ, ಸಮೃದ್ಧಿ ಮತ್ತು ಜ್ಞಾನದ ಸಂಕೇತ!
ಶರಣು ಬನ್ನಿ (ನಿಮಗೆ ಸ್ವಾಗತ ) ಲಿಂಗಾಯತವು ವಿಶ್ವಗುರು ಬಸವಣ್ಣ ನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ !
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ !
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ !
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಲ ಸಂಗಮದೇವಯ್ಯ,
ನಿವೇನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ ! - ಗುರು ಬಸವಣ್ಣ
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ. - ಗುರು ಬಸವಣ್ಣ
ಭಾರತವು ಹಲವು ಧರ್ಮಗಳ ಜನ್ಮ ಸ್ಥಳವಾಗಿದೆ ಅಲ್ಲದೆ, ಹೊರ ದೇಶದ ಹಲವು ಧರ್ಮಗಳಿಗೆ ಆಶ್ರಯದಾತವಾಗಿದೆ. ಭಾರತದಲ್ಲಿ ಜನಿಸಿದ ಹಲವು ಧರ್ಮಗಳ ಪೈಕಿ, (ಲಿಂಗವಂತ) ಲಿಂಗಾಯತ ಧರ್ಮವು ೧೨ನೆ ಶತಮಾನದಲ್ಲಿ ಗುರು ಬಸವಣ್ಣನವರಿಂದ ಪ್ರಾರಂಭವಾದ, ಸಮಾನತೆ ಸಾರಿದ, ಬಹು ಪ್ರಗತಿಶೀಲ, ಸ್ವತಂತ್ರ ಸ್ವಾವಲಂಬಿ ಮತ್ತು ಪರಿಪೂರ್ಣ ಧರ್ಮವಾಗಿದೆ.
ಲಿಂಗಾಯತ ಧರ್ಮವು ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆ. ವಿರುದ್ಧ ಹೋರಾಡಿ ಕಲ್ಯಾಣ ರಾಜ್ಯ ಸ್ಥಾಪಿಸಲು ಬದ್ಧವಾಗಿದೆ. ಲಿಂಗಾಯತ ಧರ್ಮವು ಸಮಾನತೆ ಸಾರುತ್ತ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು, ತತ್ವಗಳನ್ನು ಎತ್ತಿಹಿಡಿಯುವ, ಮೂಲಕ ತುಳಿತಕ್ಕೋಳಗಾದ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಅವಕಾಶ ನೀಡುವ ಮೂಲಕ ಕ್ರಾಂತಿಕಾರಕ ಧರ್ಮವಾಗಿದೆ.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲ ವಿಸ್ತಾರದ ರೂಹು ನೀನೇ ದೇವಾ
'ವಿಶ್ವತೋಚಕ್ಷು' ನೀನೇ ದೇವಾ
'ವಿಶ್ವತೋಮುಖ'ನೀನೇ ದೇವಾ
'ವಿಶ್ವತೋಬಾಹು' ನೀನೇ ದೇವಾ
'ವಿಶ್ವತ:ಪಾದ' ನೀನೇ ದೇವಾ, ಕೂಡಲಸಂಗಮದೇವ
ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು (ಬ್ರಾಹ್ಮಣ ನಿಂದ ಭಂಗಿಯವರೆಗೆ) ಆಕರ್ಷಸಿ ಎಲ್ಲರನ್ನು ಇಷ್ಟಲಿಂಗ ದೀಕ್ಷೆ ಮೂಲಕ ತನ್ನತ್ತ ಸೆಳೆದುಕೊಂಡಿತು. ಇದನ್ನು ನಾವು ಹಲವು ಶರಣರ ವಚನಗಳಲ್ಲಿ ಕಾಣಬಹುದು.
ಲಿಂಗಾಯತವು ಈ ಕೆಳಗೆ ಕೊಟ್ಟಿರುವ ತನ್ನ ಸ್ವಂತ ವಿಶೇಷ ಗುಣಲಕ್ಷಣಗಳಿಂದ ಒಂದು ಬಹು ಪ್ರಗತಿಶೀಲ ಮತ್ತು ಅವೈದಿಕ, ಅಹಿಂದೂ ಧರ್ಮವಾಗಿದೆ.
ಧರ್ಮ ಸ್ಥಾಪಕರು: | ವಿಶ್ವಗುರು ಬಸವಣ್ಣನವರು (೧೧೩೪-೧೧೯೬) |
ಧರ್ಮ ಸಾಹಿತ್ಯ (ಧರ್ಮಗ್ರಂಥ): | ವಚನ ಸಾಹಿತ್ಯ |
ಧರ್ಮ ಭಾಷೆ: | ಕನ್ನಡ |
ಧರ್ಮದ ದೇವರ ಹೆಸರು: | "ಲಿಂಗದೇವ" |
ಧರ್ಮ ಲಾಂಛನ: | ವಿಶ್ವದಾಕಾರದಲ್ಲಿರುವ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ |
ಧರ್ಮ ಸಂಸ್ಕಾರ: | ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ |
ಸಿದ್ಧಾಂತ: | ಶೂನ್ಯ ಸಿದ್ಧಾಂತ |
ಸಾಧನೆ: | ತ್ರಾಟಕ ಯೋಗ (ಲಿಂಗಾಂಗಯೋಗ) |
ದರ್ಶನ: | ಷಟಸ್ಥಲ ದರ್ಶನ |
ಸಮಾಜ ಶಾಸ್ತ್ರ: | ಶಿವಾಚಾರ-(ಸಾಮಾಜಿಕ ಸಮಾನತೆ) |
ನೀತಿ ಶಾಸ್ತ್ರ: | ಗಣಾಚಾರ / ಭೃತ್ಯಾಚಾರ |
ಅರ್ಥ ಶಾಸ್ತ್ರ: | ಸದಾಚಾರ (ಕಾಯಕ- ದಾಸೋಹ-ಪ್ರಸಾದ) |
ಸಂಸ್ಕೃತಿ: | ಅವೈದಿಕ ಶರಣ ಸಂಸ್ಕೃತಿ |
ಪರಂಪರೆ: | ಧರ್ಮಪಿತ ಬಸವಣ್ಣನವರೇ ಆದಿ ಪ್ರಮಥರಾಗಿ ಸಾಗಿ ಬಂದ ಶರಣ ಪರಂಪರೆ. |
ಧರ್ಮ ಧ್ವಜ: | ಷಟ್ ಕೋನ- ಇಷ್ಟಲಿಂಗ ಸಹಿತ ಕಾವಿ ಬಣ್ಣದ ಬಸವ ಧ್ವಜ |
ಧರ್ಮ ಕ್ಷೇತ್ರ: | ಬಸವವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮ, ಶರಣ ಭೂಮಿ ಬಸವ ಕಲ್ಯಾಣ |
ಧರ್ಮದ ಧ್ಯೇಯ: | ಜಾತಿ, ವರ್ಣ, ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ |
ಲಿಂಗಾಯತ ಅಂತ್ಯ ಸಂಸ್ಕಾರ | ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) |