'ಲಿಂಗಾಯತ ಧರ್ಮದ ಲಡಾಯಿ' ..ಅಂದಿನಿಂದ ಇಂದಿನವರೆಗೂ.....
|
|
*
✍ ಅಳಗುಂಡಿ ಅಂದಾನಯ್ಯ .
ವಚನ ಸಾಹಿತ್ಯದ ಶರಣ/ಲಿಂಗಾಯತ ಪರಂಪರೆಯ ಮೂಲಧಾರೆಯ ಶರಣ ಮಾರ್ಗವು ; ಹನ್ನೆರಡನೆಯ ಶತಮಾನದಲ್ಲಿ ಬಸವಾದಿಶರಣರು ನಿರ್ದಿಷ್ಟವಾಗಿ ನಿರ್ಮಿಸುವ ಮೊದಲೇ ಅದು ಅಲ್ಲಲ್ಲಿ ತನ್ನ ನಿಜದ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡಿತ್ತೆಂಬುದನ್ನು ಅಧ್ಯಯನಗಳು ಸೂಚಿಸುತ್ತವೆ.
ಆಗೆಲ್ಲಾ ಅದೊಂದು ಕಾಲುಹಾದಿಯ ಹಾಗೆ ತನ್ನ ನೆಲೆಯ ಚಹರೆಯನ್ನು ಕಂಡುಕೊಂಡಿತ್ತೆನ್ನಲು; ಹಿರಿಯ ವಚನ ಕಾರರಾದ ಶರಣ ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ,ಕೆಂಭಾವಿ ಭೋಗಣ್ಣ,ಚಂದಿಮರಸ, ಹೀಗೆ ಅನೇಕ ಶಿವಶರಣರು ಈ ಹಾದಿಯ ಜಾಡನ್ನು ಹಿಡಿದು ಆಗಲೇ ಸಾಗಿದ್ದರೆಂಬುದು ಸಾಕ್ಷಿಯಾಗುತ್ತದೆ.
ನಂತರ ಹನ್ನೆರಡನೆಯ ಶತಮಾನದಲ್ಲಿ; ಅಪ್ಪ ಬಸವಣ್ಣನವರು ಈ ವಚನ ಚಳವಳಿಯ ಕೇಂದ್ರಸ್ಥಾನದಲ್ಲಿದ್ದು ಅವರ ಧೀಮಂತ ಕರ್ತೃತ್ವ ಶಕ್ತಿ ಸಾಮರ್ಥ್ಯದ ಸಂಘಟನಾತ್ಮಕ ಮುಂದಾಳತ್ವದಲ್ಲಿ ಕಲ್ಯಾಣದಲ್ಲಿ ಸೇರಿದ ಬಸವಾದಿಶರಣರು ಶರಣ ಮಾರ್ಗವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದರು. ಅಷ್ಟೇ ಅಲ್ಲ, ಈ ಪೂರ್ವದಲ್ಲೇ ವಚನ ರಚನೆಯನ್ನು ಆಗಲೇ ಪ್ರಾರಂಭಿಸಿದ್ದ ಎಲ್ಲ ಹಿರಿಯ ವಚನಕಾರರನ್ನು ಬಸವಾದಿಶರಣರು ಸ್ಮರಿಸಿ, ಗೌರವಿಸಿ ತಮ್ಮ ತಮ್ಮ ವಚನಗಳಲ್ಲಿ ಹಾಡಿ ಹೊಗಳಿದ್ದಾರೆ.
ಹೀಗೆಯೇ ಈ ಶರಣಮಾರ್ಗವನ್ನು ನಿಖರವಾಗಿ ದಟ್ಟೈಸಿ ಗಟ್ಟಿಗೊಳಿಸಿದ ಬಸವಾದಿಶರಣರು ಅದನ್ನು ತಮ್ಮ ವಚನ ಚಳವಳಿಯ ಪ್ರಮುಖ ರಾಜಮಾರ್ಗ ದಂತೆ ರೂಪಿಸಿ, ಕಂಗೊಳಿಸುವ ಹಾಗೆ ಬೆಳೆಸಿದರು. ನೆಲದ ಭಾಷೆಯಾದ ಕನ್ನಡದಲ್ಲಿಯೇ ತಮ್ಮ ವಚನ ಸಾಹಿತ್ಯದ ಸಿರಿ ಬೆಳೆಯನ್ನು ಯಥೇಚ್ಛವಾಗಿ ಬೆಳೆದು, ಅದನ್ನು ವ್ಯಕ್ತಿ ಕಲ್ಯಾಣ ಹಾಗೂ ಲೋಕಕಲ್ಯಾಣಕ್ಕಾಗಿ ವಿಫುಲವಾಗಿ ಬೆಳೆದು ಅದನ್ನು ನಮಗೆ ಪಾರಂಪರಿಕ ಉಂಬಳಿಯಾಗಿ "ಬೆಳಕಿನ ಬಳುವಳಿ" ಯನ್ನಾಗಿ ಕೊಟ್ಟದ್ದಲ್ಲದೇ,ಆ ಜ್ಞಾನ ಸಂಪತ್ತನ್ನು ತಮ್ಮ ಜೀವ ಹತಿಮಾಡಿಕೊಂಡು ಅದನ್ನು ನಮಗೇ ಬಿಟ್ಟು ಹೋಗಿದ್ದೀಗ ಇತಿಹಾಸದ ಪುಟ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟಷ್ಟು ಸ್ಫುಟವಾಗಿದೆ.
ಪಟ್ಟಭದ್ರ ಪುರೋಹಿತ ಶಾಹಿಯ ಹಿತಾಸಕ್ತಿಗಳು ಆ ಕಾಲ ಘಟ್ಟದ ರಾಜಕೀಯ ಸಾಮಾಜಿಕ ವ್ಯವಸ್ಥೆಯ ದುರ್ಲಾಭ ಪಡೆದು, ಆ ಅವ್ಯವಸ್ಥೆಯನ್ನೇ ಅಸ್ತ್ರವಾಗಿ ಉಪಯೋಗಿಸಿಕೊಂಡು, ಶರಣರು ಪ್ರಾರಂಭಿಸಿದ್ದ ವಚನ ಚಳವಳಿಯನ್ನು ಹಾಳುಗೆಡವಿದರು.ಅಷ್ಟೇ ಅಲ್ಲದೇ ವಚನಗಳನ್ನು ಸುಟ್ಟರು,ವಚನ ಕಟ್ಟುಗಳನ್ನು ಕೊಡದ ಶರಣರನ್ನು ಅಟ್ಟಾಡಿಸಿ ಕೊಂದರು!
ಹೀಗೆ,ಅರಿವಿನ ಬೆಳಕಿನಲ್ಲಿ ಬಸವಾದಿಶರಣರು ಕಟ್ಟಿದ ನಡೆನುಡಿಯ ನಿಜ ಸಿದ್ಧಾಂತದ ಜೀವಂತ ನಗರವಾದ ಕಲ್ಯಾಣ ಪಟ್ಟಣವು ಕೆಟ್ಟಿತು.ಅಥವಾ ಕೆಡಿಸಲ್ಪಟ್ಟತು.
ಆ ರಣಕೋಲಾಹಲವೇ ಕಾರಣವಾಗಿ, ನೂರಾರು ವರ್ಷದವರೆಗೆ ಯಾರೂ ತುಟಿ ಪಿಟಕ್ ಎನ್ನಲಾರದಂಥ ಭೀಕರವಾದ ರಣಮೌನವನ್ನೇ ಅದು ಸೃಷ್ಟಿಸಿಬಿಟ್ಟಿತು!
ಮುಂದೆ, ವಿಜಯನಗರದ ಉದಯದೊಂದಿಗೇ ಶಿವಶರಣರ ಪುನರುತ್ಥಾನದ ಉದಯರಾಗವನ್ನು ಹರಿಹರ,ರಾಘವಾಂಕರಾದಿಯಾಗಿ ಅನೇಕ ಶಿವಕವಿ ಗಳು ತಮ್ಮ ರಗಳೆ,ಪುರಾಣ, ಕಾವ್ಯಗಳಲ್ಲಿ ಅತ್ಯಂತ ಅಭಿಮಾನದಿಂದ ಹಾಡತೊಡಗಿದ್ದೂ ಐತಿಹಾಸಿಕ ಸಂಗತಿಯಾಗಿದೆ.
ಹಾಗೆಯೇ, ನಂತರದಲ್ಲಿ ಬಂದ ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮ್ಮ ಶಿಷ್ಯರೊಡಗೂಡಿ ಶರಣರ ಮಣಿಹವನ್ನು ಕೈಗೆತ್ತಿಕೊಂಡು ಅದರ ಪುನರುಜ್ಜೀವನ ಗೊಳಿಸಿದ್ದೂ ಚರಿತ್ರಾರ್ಹ ಸಂಗತಿಯಾಗಿದೆ.
ಈ ಎಲ್ಲಾ ಕಾರ್ಯಚಟುವಟಿಕೆಗಳ ಕಾಲಪ್ರವಾಹದಲ್ಲಿ ಬಂದು ನುಸುಳಿದ ಲಿಂಗಿಬ್ರಾಹ್ಮಣ ಆರಾಧ್ಯರು ಹಾಗೂ ವೀರಶೈವರು ವಚನಗಳನ್ನು ತಮ್ಮ ಸಿದ್ದಾಂತಕ್ಕೆ ಮತ್ತು ಅನುಕೂಲಕ್ಕೆ ತಕ್ಕಂತೆ, ಪ್ರಕ್ಷೇಪಕಗೊಳಿಸಿದ್ದೂ ಕರಾಳ ಇತಿಹಾಸವೇ ಆಗಿದೆ!
ಆಧುನಿಕ ಕಾಲದ ಈ ಘಟ್ಟದಲ್ಲಿ ಶರಣರಾದ ಫ ಗು ಹಳಕಟ್ಟಿ ಯವರಿಂದ ಹಾಗೂ ಶೂನ್ಯಸಂಪಾದನೆ ಕಾರರಿಂದ ಮತ್ತೆ ವಚನಗಳನ್ನು ವ್ಯವಸ್ಥಿತವಾಗಿ ಸಂಕಲಿಸಿ ಕೊಡುವ ಮೂಲಕ ಶರಣಮಾರ್ಗವನ್ನು ದೃಢಗೊಳಿಸಿದ್ದೂ ವಾಸ್ತವಿಕ ಸತ್ಯವಾಗಿದೆ.
ಹೀಗೆ, ಶರಣರ, ವಚನಕಾರರ, ಕವಿಗಳ,ಶಿವಯೋಗಿ ಗಳ ಹಾಗೂ ಸಂಶೋಧಕರಾದಿಯಾಗಿ ಅನೇಕ ಆಸಕ್ತರ ಸಂಯುಕ್ತ ಪರಿಶ್ರಮದಿಂದ; ಕಾಲವನ್ನು ಗೆದ್ದು ರೂಪ ರೂಪಾಂತರ ಹೊಂದಿ, ಇಂದಿನ ಲಿಂಗಾಯತ ಧರ್ಮದ ಸಾಂವಿಧಾನಿಕ ಹೋರಾಟದ ಭರಾಟೆಯ ಕಾವಿನಲ್ಲಿ ಮತ್ತೆ ಜಗದ ಜನಮನವನ್ನು, ಶರಣರ ವಚನಗಳು ತೊಳಗಿ ಬೆಳಗುತ್ತಿರುವುದಂತೂ ವಾಸ್ತವಿಕ ಸತ್ಯವಾಗಿದೆ.
ಇಂಥ ವೀರೋಚಿತ ಶರಣಮಾರ್ಗವನ್ನು ಕಾಲ ಕಾಲಕ್ಕೆ ಕಾಲನನ್ನೇ ಸೋಲಿಸಿ ಉಳಿಸಿಕೊಟ್ಟ ನಮ್ಮ ಶರಣ ಪರಂಪರೆಯ ಹಿರಿಯರು ಪ್ರಾತಃ ಸ್ಮರಣೀಯರು.
ಇಂತಹ ಗುಣ ಮೌಲ್ಯದ ಸಾಂಸ್ಕೃತಿಕ ಸಂಪತ್ತಿನ ನಿಜ ವಾರಸುದಾರರಾದ ಲಿಂಗಾಯತರೀಗ ವಚನಗಳ ನಿಜ ಓದಿನ ಮೂಲಕ ತಮ್ಮಲ್ಲಿ ಪಾಚಿಗಟ್ಟಿದ ಶತ ಶತಮಾನ ದ ಬರೀ ಬೋಳೆತನದ ಮಂಪರಿನಿಂದ ಖುದ್ದಾಗಿ ಹೊರಬಂದು,ವಚನಗಳ ಅಧ್ಯಯನದ ಮೂಲಕ, ಶರಣರ ನಿಜ ಆಶಯಗಳನ್ನು ಸರಿಯಾಗಿ ಗ್ರಹಿಸಿಕೊಂಡು ತಮ್ಮ ಎದೆ,ಮನ,ಬುದ್ದಿ, ಭಾವದಲ್ಲಿ ಮುದ್ದಾಮ್ ಬಿತ್ತಿ ಬೆಳೆಯಬೇಕಾದ ತುರ್ತು ಕರ್ತವ್ಯ ಹಾಗೂ ಅತ್ಯಗತ್ಯವಾಗಿದೆ
ಈಗಾಗಲೇ ಅನೇಕರು ಆ ನಿಟ್ಟಿನಲ್ಲಿ ತೊಡಗಿದ ಕಾರಣದಿಂದಲೇ ಈಗಿನ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟವು ಹೆಚ್ಚು ಸ್ಪಷ್ಟವಾಗಿ, ದಷ್ಟ ಪುಷ್ಟವಾಗಿ ಒಂದು ದಡ ಕಾಣಲು ಸಾಧ್ಯವಾಯಿತೆಂದೇ ಹೇಳಬಹುದಾಗಿದೆ.
ಆದ್ದರಿಂದ ಪ್ರಕೃತಿ ಸಹಜ ಲಯಗಳನ್ನು ಹಿಡಿದು ಇಟ್ಟುಕೊಂಡ ಅಪಾರ ಅರಿವಿನ ಆಗರವಾದ ವಚನ ಸಾಹಿತ್ಯವನ್ನು ಶ್ರದ್ಧೆಯಿಂದ ಓದಿ, ಅದನ್ನು ಸರಿಯಾಗಿ ಅರ್ಥಮಾಡಿಕೊಂಡು, ಇಂದು ನಮಗೆ ನಾವೇ ಗುರುವಾಗಿ, ಬೆಳಕಾಗಿ ಬೆಳಗಬೇಕಿದೆ.
ಇದಕ್ಕೆ ಯಾವ ಮಠ,ಸ್ವಾಮಿಗಳ ಕೃಪೆಗಾಗಿ ಕಾಯದೇ ವಚನಗಳನ್ನೇ ನಮ್ಮ ಎದೆಯೊಳಗೆ "ಸಹಜ ಕೃಷಿ" ಯ ಮಾದರಿಯಲ್ಲಿ ಕಾರ್ಯಗತಗೊಳಿಸಿಕೊಂಡು ಆಚರಿಸಿ ಬೆಳಗಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ಯುವ ಜನಾಂಗದ ಕಣ್ಣುತೆರೆಸುವ ನಿಜ ಕಾರ್ಯವನ್ನು ಸಮಾಜದ ಹಿರಿಯರು ತುರ್ತಾಗಿ ಆಗು ಮಾಡಬೇಕಾದ್ದು ಅವಶ್ಯವಿದೆ.
ಅಷ್ಟೇ ಅಲ್ಲ,ವಿಶೇಷವಾಗಿ ಲಿಂಗಾಯತ ಯುವಜನ ರೂ ತಮ್ಮ ಪರಂಪರೆಯ ನಿಜದ ನೆಲೆಯನ್ನು ಈಗಲೇ ತಪ್ಪಿರುವ ದಾರಿ ತೊರೆದು ಸರಿಯಾಗಿ ನಿಜ ಅರಿತು ಸರಿದಾರಿ ಹಿಡಿಯಬೇಕಾದ್ದೂ ಜರೂರಿದೆ ಹಾಗೂ ಆ ವಾತಾವರಣವನ್ನು ಯುವಕರಿಗೆ ಒದಗಿಸಬೇಕಾದ್ದೂ ಸಮಾಜದ ಬಹು ಮುಖ್ಯ ಹೊಣೆಯಾಗಿದೆ.
*