Previous ಏಕೋರಾಮಾರಾಧ್ಯ ವಿಶ್ವಾರಾಧ್ಯ Next

ಪಂಚಾಚಾರ್ಯ: ಪಂಡಿತಾರಾಧ್ಯ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಡಿತಾರಾಧ್ಯ

ಶ್ರೀಶೈಲ ಮಠಕ್ಕೆ ಸಂಬಂಧಿಸಿದ ಪಂಡಿತಾರಾಧ್ಯ ಯಾರು ಎಂಬ ಬಗೆಗೆ ಒಂದಷ್ಟು ಗೊಂದಲವಿದೆ. ಏಕೆಂದರೆ, ಇಬ್ಬರು ಪಂಡಿತಾರಾಧ್ಯರಿದ್ದಾರೆ. ಒಬ್ಬರು ಶ್ರೀಪತಿ ಪಂಡಿತಾರಾಧ್ಯ; ಇನ್ನೊಬ್ಬರು ಮಲ್ಲಿಕಾರ್ಜುನ ಪಂಡಿತಾರಾಧ್ಯ, ಶ್ರೀಶೈಲಕ್ಕೆ ಹತ್ತಿರವಾಗಿರುವ ಪ್ರದೇಶದಿಂದ ಬಂದವರಾದ್ದರಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರೇ ಶ್ರೀಶೈಲ ಪೀಠದ ಪಂಡಿತಾರಾಧ್ಯರಾಗಿರುವ ಸಾಧ್ಯತೆ ಇದೆ.
ಶ್ರೀಪತಿಪಂಡಿತ ಹಿರಿಯನಾಗಿದ್ದು 'ಶ್ರೀಕರಭಾಷ್ಯ'ದ ಕರ್ತೃವಾಗಿದ್ದಾನೆ. ಅವನು ಪಂಡಿತತ್ರಯರಲ್ಲಿ (ಶ್ರೀಪತಿ ಪಂಡಿತ, ಮಂಚನ ಪಂಡಿತ ಮತ್ತು ಮಲ್ಲಿಕಾರ್ಜುನ ಪಂಡಿತ) ಒಬ್ಬನೆಂದು ಆಂಧ್ರದ ಆರಾಧ್ಯಬ್ರಾಹ್ಮಣರು ಪರಿಗಣಿಸಿದ್ದಾರೆ. ಹಾಗೆಯೇ ರೇವಣಸಿದ್ಧ, ಮರುಳ ಸಿದ್ಧ ಮತ್ತು ಏಕೋರಾಮಸಿದ್ಧರನ್ನು 'ಸಿದ್ಧತ್ರಯ'ರೆಂದೂ, ಉದ್ಭಟಾರಾಧ್ಯ, ವಿಶ್ವಾರಾಧ್ಯ ಮತ್ತು ವೇಮನಾರಾಧ್ಯರನ್ನು ಆರಾಧ್ಯತ್ರಯ'ರೆಂದೂ, ಮಾಯಿದೇವಾಚಾರ್ಯ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಶಿವಾಚಾರ್ಯರನ್ನು 'ಆಚಾರತ್ರಯ'ರೆಂದೂ ಪರಿಗಣಿಸಿದ್ದಾರೆ. ಆರಾಧ್ಯ ಸಮುದಾಯದವರು ಬಸವಣ್ಣನವರು ತಮ್ಮ ಗುರು ಎಂದು ಗೌರವಿಸುತ್ತಾರೆ. ಹಾಗಾಗಿ ಆಚಾರ್ಯರು ಆರಾಧ್ಯರಿಂದ ಬೇರ್ಪಡುತ್ತಾರೆ. ನಾಲ್ಕು ತ್ರಯಗಳಿಗೆ ಪಂಚಾಚಾರ್ಯರೊಂದಿಗೆ ಸಂಬಂಧವಿದ್ದುದೇನೂ ಕಂಡುಬಂದಿಲ್ಲ (ಬಿಜ್ಜರಗಿ, ೨೦೦೯, ಪು. ೩೪೬), ಆದರೆ ಅದರಲ್ಲಿ ಐದೂ ಹೆಸರುಗಳು ಕಾಣಿಸಿಕೊಳ್ಳುತ್ತವೆ. ಅದು ಹೇಗೆ ಸಾಧ್ಯ ಎಂಬುದನ್ನು ಶೋಧಿಸಿ ನೋಡಬೇಕಾಗುತ್ತದೆ.

ಪಂಡಿತಾರಾಧ್ಯನಂತೂ ಶಿವತತ್ವಸಾರ, ಬಸವಗೀತ, ಗಣಸಹಸ್ರನಾಮ, ಇಷ್ಟಲಿಂಗಶಾಸ್ತ್ರ ಇತ್ಯಾದಿ ಗ್ರಂಥಗಳನ್ನು ರಚಿಸಿದ್ದಾನೆ. ಅವನು ಬಸವಣ್ಣನವರ ಸಮಕಾಲೀನ; ಸ್ವಲ್ಪ ಕಿರಿಯನಿರಬಹುದು. ಪಂಡಿತಾರಾಧ್ಯನು ಮುಖತಃ ಕಾಣಬೇಕೆಂದು ಕೂಡಲಸಂಗಮವನ್ನು ತಲುಪುವಷ್ಟರಲ್ಲೇ ಬಸವಣ್ಣನವರು ಲಿಂಗೈಕ್ಯರಾಗಿದ್ದರು. ಈ ಪಂಡಿತಾರಾಧ್ಯನು ಯಾವುದೇ ಧರ್ಮವನ್ನು ಸ್ಥಾಪಿಸಿರುವ ಬಗೆಗೆ ಎಲ್ಲೂ ಹೇಳಿಲ್ಲ. ಅವನು ಭೀಮೇಶ್ವರ ಪಂಡಿತ ಮತ್ತು ದ್ರಾಕ್ಷಾರಾಮ ಕ್ಷೇತ್ರದ ಗೌರಾಂಬೆಯರ ಪುತ್ರ ಅವನ ಪೂರ್ಣ ಹೆಸರು ಮಲ್ಲಿಕಾರ್ಜುನ ಪಂಡಿತಾರಾಧ್ಯ ಅವನನ್ನೇ ಪಂಚಾಚಾರ್ಯರಲ್ಲಿ ಒಬ್ಬನಂತೆ ಕಾಣಿಸಲಾಗಿದೆ.

ಪಂಚಾಚಾರ್ಯರ ಕಲ್ಪನೆಯ ಪ್ರಕಾರ, ಪಂಡಿತಾರಾಧ್ಯನು ಆಂಧ್ರಪ್ರದೇಶದ ಶ್ರೀಗಿರಿಯ (ಶ್ರೀಶೈಲ) ಸುಧಾಕುಂಡದಲ್ಲಿ ಮಲ್ಲಿಕಾರ್ಜುನ ಲಿಂಗದಲ್ಲಿ ಉದ್ಭವಿಸಿದ್ದಾನೆ. ಅವನು ಕೃತಯುಗದಲ್ಲಿ ಚತುರಕ್ಷರನೆಂದೂ, ತ್ರೇತಾಯುಗದಲ್ಲಿ ಚತುರ್ವತ್ರನೆಂದೂ, ದ್ವಾಪರಯುಗದಲ್ಲಿ ಧೇನುಕರ್ಣನೆಂದೂ, ಕಲಿಯುಗದಲ್ಲಿ ಪಂಡಿತಾರಾಧ್ಯನೆಂದೂ ಕರೆಯಲ್ಪಟ್ಟಿದ್ದಾನೆ. ಅವನದು ವೃಷಭಗೋತ್ರ, ಅವನ ಕೈಗೋಲು ಆಲದ ಮರದ್ದು. ಅವನ ಬಾವುಟ ಶ್ವೇತ ವರ್ಣದ್ದು. ಅವರ ದಾಖಲೆಯ ಪ್ರಕಾರ ಶ್ರೀಶೈಲ ಪೀಠದಲ್ಲಿ ಇದುವವರೆಗೆ ೨೮ ಧರ್ಮಗುರುಗಳು ಆಗಿಹೋಗಿದ್ದಾರೆ. ಕರ್ನಾಟಕದಲ್ಲಿ ಪೀಠದ ೬೦ ಶಾಖೆಗಳಿವೆ. (ಬಿಜ್ಜರಗಿ, ೨೦೦೦, ಪು. ೨೬೫; ಕೌಂಟೆ, ೨೦೧೭; ಪು. ೫೯-೬೪).

ಪಂಡಿತಾರಾಧ್ಯನು ಪ್ರಸಿದ್ದ ಆಚಾರ್ಯನೆನಿಸಿದ್ದಾನೆ. ಸೋಮನಾಥನ “ಪಂಡಿತಾರಾಧ್ಯ ಚರಿತ್ರೆ' (೧೧೯೫), ಪರ್ವತೇಶನ 'ಚತುರಾಚಾರ್ಯ ಚರಿತ್ರೆ' ಮತ್ತು ಸಿದ್ಧನಂಜೇಶನ 'ಗುರುರಾಜ ಚರಿತ್ರೆ' - ಈ ಗ್ರಂಥಗಳಲ್ಲಿ ಪಂಡಿತಾರಾಧ್ಯನ ಬಗೆಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಏಕೋರಾಮಾರಾಧ್ಯ ವಿಶ್ವಾರಾಧ್ಯ Next