ರಸ ಪ್ರಶ್ನೆ ಹಾಗೂ ಉತ್ತರಗಳು - 6 :👈 👉:ಲಿಂಗಾಯತ ಧರ್ಮದ ಸಂಸ್ಕಾರಗಳು

ವಚನ ಸಾಹಿತ್ಯ (ಲಿಂಗಾಯತ ಸಾಹಿತ್ಯ)

ಜೀವನ ನಶ್ವರ, ಜಗತ್ತು ಮಿಥ್ಯ ಎಂದೆಲ್ಲ ಜೀವನದ ಅಪಮೌಲ್ಯಮಾಡಿದ ವೇದ ಶಾಸ್ತ್ರಗಳನ್ನು ಖಂಡಿಸಿ ಅರ್ಥವಾಗದ ಸಂಸ್ಕೃತ ಭಾಷೆಯನ್ನು ಧಿಕ್ಕರಿಸಿ ಆಡುಭಾಷೆ ಕನ್ನಡದಲ್ಲಿ ಜಗನ್ನಿಯಾಮಕ ತತ್ವಗಳನ್ನು ತಿಳಿಯಪಡಿಸಿದ ಕ್ರಾಂತಿಕಾರಿ ಸಾಹಿತ್ಯವೇ ವಚನ ಸಾಹಿತ್ಯ (ಲಿಂಗಾಯತ ಸಾಹಿತ್ಯ). ವಚನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಉನ್ನತರನ್ನು ಒಳಗೊಂಡು ಪ್ರತಿಯೊಬ್ಬರ ಜೀವನಾನುಭದಿಂದ ರೂಪಿತವಾದ ಅನುಭವಜನ್ಯ ಪ್ರಮಾಣ(ಶಪಥ)ಗಳು. ಆದುದರಿಂದ ಅವು ಜೀವನಕ್ಕೆ ತೀರಾ ಹತ್ತಿರವಾಗಿವೆ. ಯಾರೋ ಒಬ್ಬ ಕುಳಿತಲ್ಲೇ ತನ್ನ ವಿಚಾರ ಲಹರಿಯನ್ನು ಹರಿಯಬಿಟ್ಟು ಕಾಲ್ಪನಿಕ ಅಂಶಗಳನ್ನು ದಾಖಲಿಸಿದ ಸಾಹಿತ್ಯ ಖಂಡಿತ ಅಲ್ಲ. ಅತೀ ಸರಳ ಸುಂದರ ಆಡು ಭಾಷೆಯ ನಿರೂಫಣೆಯಲ್ಲಿ ಬಸವಾದಿ ಶರಣರು ದಿವ್ಯ ಜ್ಞಾನದ ಪರಿಚಯವನ್ನು, ಪ್ರೇರಕ ಶಕ್ತಿಯ ರೂಪದಲ್ಲಿ ವಚನಸಾಹಿತ್ಯದ ಮೂಲಕ ಮನುಕುಲಕ್ಕೆ ನೀಡಿದ್ದಾರೆ.

ವಚನಧರ್ಮ ಅತ್ಯುನ್ನತ ಸಾಧನೆ ಮೆರೆದಿದೆ. ಅದನ್ನು ಆದರ್ಶವನ್ನಾಗಿಸಿಕೊಂಡು ಮುನ್ನಡೆದಲ್ಲಿ ಯಶ ಖಂಡಿತ.

ವಚನ ಮುದ್ರಣದ ಇತಿಹಾಸ: ಬಳ್ಳಾರಿಯಿಂದ ವಿಶ್ವವ್ಯಾಪಿ ಯಾನ

ಈ ವರ್ಷ ೨೦೨೬ಕ್ಕೆ ಸರಿಯಾಗಿ ಬಸವಣ್ಣನವರ ವಚನಗಳು ಪ್ರಕಟವಾಗಿ 140 ಸಂವತ್ಸರಗಳು ಸಂದವು. 1886 ರಲ್ಲಿ 'ಬಸವಣ್ಣನವರ ವಚನಗಳು'-ಮೊದಲ ಬಾರಿಗೆ ಪ್ರಕಟ ಗೊಂಡದ್ದು ನಮ್ಮ ಬಳ್ಳಾರಿಯಲ್ಲಿ. ಮರಿಶಂಕರ ದ್ಯಾವರ ಪ್ರಯತ್ನ, ಸಂಪಾದನೆ,ಪರಿಶ್ರಮದಿಂದ ಪರಿಶೋಧನೆ, ಪರಿಷ್ಕಾರದಿಂದ ಪ್ರಕಟವಾಯಿತು. ಬಳ್ಳಾರಿಯ ಪುಸ್ತಕ ವ್ಯಾಪಾರಿಗಳಾದ ಕೊನೇರು ಶೆಟ್ರು ರತ್ನಾಕರ ಮುದ್ರಾಕ್ಷರ ಶಾಲೆಯಲ್ಲಿ ಇದು ಮುದ್ರಣವಾಯಿತು. ಈ ಪ್ರಕಟಣೆಯು 1889 ರಲ್ಲಿ, 1895 ರಲ್ಲಿ ಮತ್ತು 1910 ರಲ್ಲಿ ಒಟ್ಟು ನಾಲ್ಕು ಬಾರಿ ಬಳ್ಳಾರಿಯಲ್ಲಿಯೇ ಪ್ರಕಟವಾಯಿತು.

ಬಳ್ಳಾರಿಯ ಈ ಅವೃತ್ತಿಯನ್ನೇ, ಅಥಣಿಯ ಶ್ರೀ. ಮುರುಘೇ0ದ್ರ ಮಹಾಸ್ವಾಮಿಗಳ, ಧಾರವಾಡದ ಶ್ರೀ ಮೃತ್ಯು0ಜಯ ಮಹಾಸ್ವಾಮಿಗಳ,ಹರ್ಡೇಕರ ಮಂಜಪ್ಪನವರ, ಫ. ಗು. ಹಳಕಟ್ಟಿಯವರ (ಮತ್ತು ಅನೇಕರ )ಮೇಲೆ ಆದ ಪರಿಣಾಮ, ಪ್ರಭಾವಗಳು ಬಸವಣ್ಣನವರ ಕುರಿತ ಯುಗಪ್ರವರ್ತನೆಯ ಯೋಜನೆಗಳನ್ನು ರೂಪಿಸಲು ಕಾರಣವಾಯಿತು.

  • ಈ ಪ್ರಕಟಣೆಯ ನಂತರವೇ 1926 ರಲ್ಲಿ ಫ. ಗು. ಹಳಕಟ್ಟಿಯವರು ಪ್ರಕಟಿಸಿದರು, ನಂತರ 1930 ರಲ್ಲಿ, 1934 ರಲ್ಲಿ, 1940 ರಲ್ಲಿ ಪುನರ್ಮುದ್ರಣವಾಯಿತು. (ಈ ಪ್ರಕಟಣೆಯ ಎರಡನೆಯ ಅವೃತ್ತಿಗೆ ಧನಸಹಾಯ ಮಾಡಿದವರು, ಬಳ್ಳಾರಿಯ ಮಸಗಿ ಶಾಂತವೀರಪ್ಪನವರು.
  • ನಂತರದ ಪ್ರಯತ್ನವಾಗಿ, ಶಿ ಶಿ. ಬಸವನಾಳ ಅವರು 1951 ರಲ್ಲಿ ಜನಪ್ರಿಯ ಅವೃತ್ತಿಯಾಗಿ, 1962 ರಲ್ಲಿ ವಿದ್ವತ್ ಪ್ರತಿಯಾಗಿ ಪ್ರಕಟಿಸಿದರು.
  • 1968 ರಲ್ಲಿ ಆರ್. ಸಿ. ಹಿರೇಮಠ ಅವರು ಗ್ರಂಥಸಂಪಾದನ ಶಾಸ್ತ್ರನ್ವಯ ಸಂಪಾದಿಸಿದರು.
  • 1990 ರಲ್ಲಿ ಎಲ್ ಬಸವರಾಜು ಅವರು ಸಂಪಾದಿಸಿದರು.
  • 1993 ರಲ್ಲಿ ಎಂ. ಎಂ. ಕಲಬುರ್ಗಿಯವರು ಸಂಪಾದಿಸಿದರು.

ಮೊದಲ ಬಾರಿಗೆ ಬಳ್ಳಾರಿಯಿಂದ ಆರಂಭವಾದ "ಬಸವಣ್ಣನವರ ವಚನಗಳ ಪ್ರಕಟಣೆಯ ಸಾರ್ಥಕಯಾನ" ಇಂದು ದೇಶ, ವಿದೇಶಗಳಲ್ಲಿ ವಿಸ್ತಾರ ಪಡೆದಿದೆ.

ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೆರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ. -- ಬಸವಣ್ಣ ಸವಸ 1/291

ಬರಿಯ ಉಪದೇಶಕ್ಕೆ ಯಾವುದೇ ಬೆಲೆ ನೆಲೆ ಇಲ್ಲ, ಆಚರಣೆ ಇಲ್ಲದ ಯಾರೂ ಮಾನ್ಯರಲ್ಲ. ವಚನಸಾಹಿತ್ಯವು ಆಚಾರಕ್ಕೆ ಮಾನ್ಯಮಾಡಿದೆ. ಶರಣ ಸಂಕುಲವು ತಾವಾಡಿದ ಮಾತುಗಳನ್ನೆಲ್ಲ ಮೊದಲು ಜೀವನದಲ್ಲಿ ಆಚರಿಸಿದ ನಂತರವೇ ಸಾಹಿತ್ಯದ ರೂಪದಲ್ಲಿ ದಾಖಲಿಸಿರುವುದಕ್ಕೆ ಸ್ವತಃ ವಚನ ಸಾಹಿತ್ಯವೇ ಸಾಕ್ಷಿಯಾಗಿದೆ.

ಗುರುವಾದಡೂ ಆಚಾರಭೃಷ್ಟನಾದಡೆ ಅನುಸರಿಸಲಾಗದು.
ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.
ಜಂಗಮವಾದಡೂ ಆಚಾರ ಅನುಸರಣೆಯಾಗದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. -- ಅಕ್ಕಮ್ಮ ಸವಸ5/481/47

ಮಾನವೀಯತೆಯನ್ನು ಮರೆತು ಮನಷ್ಯರಲ್ಲಿ ನಿರ್ಮಿಸಲಾಗಿದ್ದ ಭೇಧ ಭಾವಗಳ ಸಂಕೊಲೆಗಳನ್ನು ನಿದಾಕ್ಷಿಣ್ಯವಾಗಿ ಕಿತ್ತೊಗೆದು ಸರ್ವ ಸಮಾನತೆಯನ್ನು ಸಾರಿದರು, ತನ್ನ ಹೆತ್ತ ತಾಯಿ, ಒಡಹುಟ್ಟಿದ ಸಹೋದರಿ, ಸಹಜೀವಿ ಸ್ತ್ರೀಯು (ಶರಣೆರು) ಯಾವುದೇ ಸಂಸ್ಕಾರ. ಅಧಿಕಾರ, ಆಸ್ತಿಗಳೀಂದ ವಂಚಿತವಾಗಿ ಭೋಗದ ವಸ್ತುವಾಗಿ, ಪುರುಷರ ಸೇವೆಯ ಸರಕಾಗಿರುವಂತಹ ಪರಿಸ್ಥಿಯನ್ನು ಅಲ್ಲಗಳೆದು. ಅವಳಲ್ಲಿರುವ ಆತ್ಮವೂ ಗಂಡಿಗಿಂತ ಯಾವುದೇ ರೀತಿಯಲ್ಲಿ ಕೀಳಲ್ಲ.ಎಂದು ಸಾರುತ್ತಿದೆ ಈ ಕೆಳಕಂಡ ವಚನ.

ಮೊಲೆ ಮುಡಿಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ!! -- ಜೇಡರ ದಾಸಿಮಯ್ಯ ಸವಸ7/845/136

ಪ್ರಯತ್ನವಾದಿಯಾಗಿ ಸಾಧಿಸಬಹುದು. ಜ್ಞಾನವೇ ಕ್ರಿಯೆ ಕ್ರಿಯೇಯೆ ಜ್ಞಾನ, ಚಟುವಟಿಕೆಯೇ ಜೀವಂತಿಕೆ. ಆಲಸ್ಯವನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ .ವಚನಸಾಹಿತ್ಯ

ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ?
ಇದು ಕಾರಣ
ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೋ. -- ಅಲ್ಲಮಪ್ರಭುದೇವರ ವಚನ ಸವಸ2/1149

ಪರಮಾತ್ಮನೊಂದಿಗೆ ಬಹಿರಂಗವಾಗಿ ಸವಾಲು ಹಾಕಿ ಅಪ್ರತಿಮ ವಿಜಯ ಸಾಧಿಸಿದ ಮೈನವಿರೇಳಿಸುವ ಧೀರರ ನಿರ್ಮಾತೃ ವಚನ ಸಾಹಿತ್ಯ ಐತಿಹಾಸಿಕ ದಾಖಲೆ ಅದು ಸೃಷ್ಟಿಕರ್ತಪರಮಾತ್ಮನನ್ನೆ ಪ್ರಶ್ನಿಸಿ ಗೆಲ್ಲುವ ಸಾಮರ್ಥ್ಯವನ್ನು ಕರುಣಿಸಿದೆ. ಲೌಕಿಕದ ಬದುಕು ನಶ್ವರವಲ್ಲ

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ. -- ಬಸವಣ್ಣ ಸವಸ1/678

ಸುಧಾರಣೆಯನ್ನುವುದು ಮೊಟ್ಟಮೊದಲು ತನ್ನಿಂದಲೇ ಪ್ರಾರಂಭವಾಗಬೇಕೆನ್ನುವುದು ವಚನಸಾಹಿತ್ಯದಲ್ಲಿ ಪ್ರತಪಾದಿತವಾದ ಸ್ಪಷ್ಟ ನಿಲುವು. ಸಾಕ್ಷಾತ್ಕಾರಕ್ಕಾಗಿ ತನ್ನ ತನುವನ್ನೇ ಸಾಧನವನ್ನಾಗಿ ಮಾಡಿಕೊಂಡು ಲಿಂಗೈಕ್ಯವನ್ನು ಸಾಧಿಸುವ ಮಾರ್ಗದರ್ಶನ ಅಲ್ಲಮ ಪ್ರಭುಗಳು ಈ ಕೆಳಕಂಡಂತೆ ನೀಡುತ್ತಾರೆ.

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡ ಮಂಡಲವೆಂಬ ಭಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಗಳೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರ -- ಅಲ್ಲಮಪ್ರಭುದೇವರ ವಚನ ಸವಸ2/1229

ಆದರ್ಶಗಳೋಂದಿಗೆ ಬದುಕುವವರಿಗೆ ನಿಂದನೆಗಳು ಟೀಕೆ-ಟಿಪ್ಪಣಿಗಳು ಬರುವುದು ಸಹಜ ಅವುಗಳನ್ನು ಮೆಟ್ಟಿನಿಲ್ಲುವ ಎದೆಗಾರಿಕೆ ಬೆಳೆಸಿಕೊಳ್ಳುವಂತೆ ಗುರು ಬಸವಣ್ಣನವರು ತಾಕೀತು ಮಾಡುತ್ತಾರೆ. ಸ್ಪಷ್ಟ ನಿಲವು ಹೊಂದಿರುವವರು ಕುಹುಕಿಗಳ ವಿತಂಡವಾದಗಳಿಗೆ ಕಿವಿಗೊಡಬೇಕಾಗಿಲ್ಲ.

ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ: ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. -- ಬಸವಣ್ಣ ಸವಸ1/754

ವಚನ ಸಾಹಿತ್ಯ ಜೀವನವನ್ನು ಸರ್ವಾಂಗ ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿ. ಬದುಕಿನಲ್ಲಿ ವೈಯಕ್ತಿಕ ವಿಕಾಸ, ವೈಜ್ಞಾನಿಕ ಮನೋಭಾವ ಅಳವಡಿಕೆ, ವಿಶಾಲ ಮನೋಭಾವ, ಸಾಮಾಜಿಕ ಹೊಣೆಗಾರಕೆ, ಆರ್ಥಿಕ ಚಿಂತನೆ ಹಾಗು ಸುಧಾರಣೆ, ನೈತಿಕ ಪ್ರಗತಿ, ಒಳಗೊಂಡಂತೆ ಪ್ರತಿಯೊಂದು ರಂಗದಲ್ಲಿ ಮಾರ್ಗದರ್ಶನ ನೀಡಬಲ್ಲ ನಿರಂತರ ಸ್ಪೂರ್ತಿಯ ಚಿಲುಮೆ. ಊಹೆ ಕಲ್ಪನೆಗಳನ್ನು ದೂರವಿರಿಸಿ ಜೀವಂತ ವಿಚಾರಗಳ ಪ್ರತಿಪಾದಕ. ಮಾವೀಯತೆಯ ಗೌರವಿಸುವ ನಿರ್ದೇಶಕ.

ಗ್ರಂಥ ಋಣ:
೧) ಸಮಗ್ರ ವಚನ ಸಾಹಿತ್ಯ ಸಂಪುಟ, ಪ್ರಕಾಶಕರು: ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಪರಿವಿಡಿ (index)
ರಸ ಪ್ರಶ್ನೆ ಹಾಗೂ ಉತ್ತರಗಳು - 6 :👈 👉:ಲಿಂಗಾಯತ ಧರ್ಮದ ಸಂಸ್ಕಾರಗಳು