Previous ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ Next

ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು

*
ಚೆನ್ನಮ್ಮನ ಕಿತ್ತೂರು, ತಾ|| ಬೈಲಹೊಂಗಲ, ಜಿ|| ಬೆಳಗಾವಿ, ಕರ್ನಾಟಕ
ಮೊಬೈಲ್: 9448691720, 9343440042

ಅರಮನೆ-ಗುರುಮನೆ ಪರಂಪರೆ

ಭಾರತದ ಇತಿಹಾಸದಲ್ಲಿ ಕಿತ್ತೂರು ಅಚ್ಚಳಿಯದ ಊರು. ವೀರರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಕ್ರಿ.ಶ. 1842ರಲ್ಲಿ ಸ್ವಾತಂತ್ರ್ಯ ಕಹಳೆಯನ್ನೂದಿದ ಪ್ರಪ್ರಥಮ ವೀರ ಮಹಿಳೆ. ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಎಂದೇ ಹೆಸರಾದ, ಭಾರತೀಯ ವೀರನಾರಿ. ಸ್ವಾಭಿಮಾನ, ಧೈರ್ಯ, ಸಾಹಸಗಳ ತ್ರಿವೇಣಿ ಸಂಗಮದಂತಿರುವ ಚನ್ನಮ್ಮಾಜಿ ಪ್ರಜೆಗಳನ್ನು ಧರ್ಮ, ನ್ಯಾಯ, ನೀತಿಯಿಂದ ಪರಿಪಾಲಿಸಿದವಳು. ಕಿತ್ತೂರು ಅರಸು ಮನೆತನಕ್ಕೆ ಸದಾ ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯಾಗಿ, ಸನ್ಮಾರ್ಗದರ್ಶಕರಾಗಿ ಆಶೀರ್ವದಿಸಿದವರು ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಠಾಧೀಶ್ವರರು. ಅವರು ಬಸವಾದಿ ಪ್ರಮಥರ ದಿವ್ಯ ಪರಂಪರೆಯ ಬಳಿವಿಡಿದು ಬಂದವರು.

ಕಿತ್ತೂರು ಸಂಸ್ಥಾನವು 1586ರಲ್ಲಿ ಚಿಕ್ಕಮಲ್ಲಶೆಟ್ಟಿ-ಹಿರೇಮಲ್ಲಶೆಟ್ಟಿ ದೇಸಾಯಿ ಅವರಿಂದ ಸಂಪಗಾವಿಯಲ್ಲಿ ಪ್ರಾರಂಭವಾಯಿತು. ಸಂಸ್ಥಾನದ ಐದನೆಯ ದೊರೆ ಅಲ್ಲಪ್ಪಗೌಡನು ಒಂದು ಕನಸು ಕಂಡ. ಆ ಕನಸಿನಲ್ಲಿ ದಟ್ಟ ಕಾಡಿನೊಳಗೆ ಲಿಂಗಪೂಜಾನಿರತ ತೇಜೊಮೂರುತಿಯಾದ ಶಿವಯೋಗಿಗಳೊಬ್ಬರು ಗೋಚರಿಸಿ ತಮ್ಮ ದರುಶನಕ್ಕೆ ಬರಲು ಅಪ್ಪಣೆ ಮಾಡಿದರು. ಅಲ್ಲಪ್ಪಗೌಡ ಕನಸಿನಲ್ಲಿ ಕಂಡ ಭೌಗೋಳಿಕ ಪರಿಸರವನ್ನು ಹುಡುಕುತ್ತ ಆಪ್ತಜನರೊಂದಿಗೆ ಕಿತ್ತೂರಿಗೆ ಬಂದನು. ಅಲ್ಲಿದ್ದ ಶಿವಯೋಗಿಗಳ ದರುಶನದಿಂದ ಪುನೀತನಾಗಿ ಅಪ್ಪಣೆ ಏನೆಂದು ಕೇಳಿದನು. ರಾಜಧಾನಿಯನ್ನು ಸಂಪಗಾವಿಯಿಂದ ಕಿತ್ತೂರಿಗೆ ವರ್ಗಾಯಿಸಿದರೆ ಸಂಸ್ಥಾನವು ಅತ್ಯಂತ ಕೀರ್ತಿಶಾಲಿಯಾಗಿ ಶ್ರೇಯೋಭಿವೃದ್ಧಿ ಹೊಂದುವುದೆಂದು ಆಶೀರ್ವದಿಸಿದರು. ಆ ಶಿವಯೋಗಿಗಳೇ ಕಲ್ಮಠದ ಪ್ರಥಮ ಗುರು ಕರ್ತೃ ಪೂಜ್ಯ ಆದಿಗುರುಸಿದ್ಧ ಮಹಾಸ್ವಾಮಿಗಳು.

ಅಲ್ಲಪ್ಪಗೌಡ ಕಿತ್ತೂರನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಲಾರಂಭಿಸಿದನು. ಪೂಜ್ಯ ಶ್ರೀ ಆದಿಗುರುಸಿದ್ಧ ಮಹಾಸ್ವಾಮಿಗಳವರನ್ನು ರಾಜಗುರುಗಳೆಂದು ಗೌರವಿಸಿ ಅವರ ನಿತ್ಯ ಶಿವಯೋಗ ಪೂಜಾನುಷ್ಠಾನಕ್ಕೆ ಅನುಕೂಲವಾಗುವಂತೆ ತುಂಬು ಹೃದಯದ ಭಕ್ತಿಯಿಂದ ಚೌಕಿಮಠವನ್ನು ಕ್ರಿ.ಶ. 1660ರಲ್ಲಿ ಕಟ್ಟಿಸಿ, ಸಂಸ್ಥಾನದಿಂದ ಅಪಾರ ದಾನ ದತ್ತಿಗಳನ್ನು ಗುರುಕಾಣಿಕೆಯಾಗಿ ಸಮರ್ಪಿಸಿ ಸಂತುಷ್ಟನಾದನು.

ಸಂಸ್ಥಾನದ ಪರಂಪರೆಯ ಸಮಸ್ತ ದೊರೆಗಳು ನಿತ್ಯ ರಾಜಗುರುಗಳ ದರ್ಶನ ಪಡೆದುಕೊಂಡು ಪಾದೋದಕ ಪ್ರಸಾದ ಸ್ವೀಕರಿಸಿ ನಾಡು ನುಡಿ ಸಂಸ್ಕೃತಿಯನ್ನು ಬೆಳೆಸಲು ಕೃತಸಂಕಲ್ಪರಾಗಿ ಗುರು ಮಾರ್ಗದರ್ಶನದಂತೆ ನಡೆಯುತ್ತಿದ್ದರು.

'ಗುರುವಿಗಿಂತ ಅಧಿಕ ಬಂಧುಗಳುಂಟೆ?' ಎಂದು ನಂಬಿದ ಅರಸರು ಅರಮನೆಯ ಸಮೀಪ ಭವ್ಯವಾದ ಕಲ್ಮಠವನ್ನು ನಿರ್ಮಿಸಿಕೊಟ್ಟರು. ಗುರುಪಾದ ಸ್ಪರ್ಶದಿಂದ ಮುಕ್ತಿವುಂಟೆಂದು ದೊರೆಗಳು ತಮ್ಮ ಸಮಾಧಿಗಳನ್ನು ಕಲ್ಮಠದ ಪವಿತ್ರ ಆವರಣದಲ್ಲಿ ನಿರ್ಮಿಸಿಕೊಂಡಿರುವುದು ಗುರು ಶಿಷ್ಯರ ಅಮರ ಸಂಬಂಧದ ಸಾಕ್ಷಿಯಾಗಿ ಬಾಂಧವ್ಯದ ಕುರುಹಾಗಿದೆ.

ಪತಿ ಸುತರನ್ನು ಅಗಲಿದ ಚನ್ನಮ್ಮಾ ಬದುಕಿನಲ್ಲಿ ಬೇಸತ್ತು ಆಡಳಿತದಲ್ಲಿ ಆಸಕ್ತಿ ಕಳೆದುಕೊಂಡು ಬಸವಳಿದಾಗ, ಅವಳಲ್ಲಿದ್ದ ಸುಪ್ತವಾದ ಪ್ರಜಾಪ್ರೇಮ, ನಾಡಹಿತ ರಕ್ಷಣೆಯ ಕರ್ತವ್ಯವನ್ನು ಜಾಗೃತಗೊಳಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಮತ್ತೆ ನವ ಚೈತನ್ಯ ಸ್ಪೂರ್ತಿ ತುಂಬಿದವರು ಅಂದಿನ ಕಲ್ಮಠಧೀಶರಾದ ಪೂಜ್ಯ ಶ್ರೀ ಮಡಿವಾಳ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು.

ಲೀಲಾ ಶಿವಯೋಗಿ ಶಾಪಾನುಗ್ರಹಸಮರ್ಥ ಗರಗದ ಪೂಜ್ಯ ಶ್ರೀ ಮಡಿವಾಳ ಶಿವಯೋಗಿಗಳು ಕಿತ್ತೂರಿನ ಕಲ್ಮಠದ ಪೂಜ್ಯ ಶ್ರೀ ಮುದಿಮಡಿವಾಳ ಮಹಾಸ್ವಾಮಿಗಳವರ ಕರಸಂಜಾತರಾಗಿ ಕಿತ್ತೂರಿನ ಶ್ರೀಮಠದಲ್ಲಿಯೇ ಬೆಳೆದು ನಾಡಿಗೆ ಬೆಳಕಾಗಿರುವುದು ಅವಿಸ್ಮರಣೀಯವಾಗಿದೆ.

ಕಿತ್ತೂರು ಸಂಸ್ಥಾನ ಪತನವಾದ ಬಳಿಕ ಕಲ್ಮಠದ ಪೀಠಾಧಿಪತಿಗಳು ಭಕ್ತರಿಗೆ ಧಾರ್ಮಿಕ ಮಾರ್ಗದರ್ಶನಮಾಡುತ್ತ ಮಠದ ಆಸ್ತಿ ಪಾಸ್ತಿಗಳನ್ನು ಅಭಿವೃದ್ಧಿಪಡಿಸುತ್ತ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತ ಬಂದರು. ಅದರ ಪರಿಣಾಮವಾಗಿ ಕಲ್ಮಠವು ಸುಪ್ರಸಿದ್ಧ ಧಾರ್ಮಿಕ - ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು, 'ದೇಶ ಸೇವೆಯೆ ಈಶ ಸೇವೆ'ಯೆಂದು ಅರಿತ ಶ್ರೀ ಮಠದ ಪೂಜ್ಯರು ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶಭಕ್ತರಿಗೆ ಆಶ್ರಯ ನೀಡಿ ಹೊರಾಟದ ವಿಜಯಕ್ಕೆ ಸ್ಫೂರ್ತಿಯಾಗಿ ತಮ್ಮ ತನು-ಮನ-ಧನವನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು.

ಕಲ್ಮಠದ ಹತ್ತನೆಯ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳವರ ತ್ಯಾಗ, ಯೋಗ, ಸಮಾಜಸೇವೆಗಳು ಸದಾ ಸ್ಮರಣೀಯವಾಗಿವೆ. 'ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ' ಎಂಬ ಶರಣರ ನುಡಿಯನ್ನು ನಡೆಯಲ್ಲಿ ತರಲು 1950ರಲ್ಲಿ 'ಕಿತ್ತೂರ ನಾಡ ವಿದ್ಯಾವರ್ಧಕ ಸಂಘ'ವನ್ನು ಸಂಸ್ಥಾಪಿಸಿ ಅದರ ಆಶ್ರಯದಲ್ಲಿ ಶಾಲೆ-ಕಾಲೇಜುಗಳನ್ನು ಆರಂಭಿಸುವುದರ ಮೂಲಕ ಸಮಾಜದಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಧೀಮಂತರು. ವಿದ್ಯಾದಾನದ ಜೊತೆಗೆ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ದಾಸೋಹ ಮೂರ್ತಿಗಳೆನಿಸಿದರು. ಮಹಿಳಾ ಮಂಡಳ, ಶಿಸುವಿಹಾರಗಳಂಥ ಅನೇಕ ಸಾಮಾಜಿಕ ಹಿತಚಿಂತನೆಯ ಸೇವಾ ಸಂಸ್ಥೆಗಳನ್ನು ಮುನ್ನಡೆಸಿ ಸಕಲ ಭಕ್ತಾನುರಾಗಿಗಳಾಗಿದ್ದರು. ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಅನೇಕ ರೆಂಬೆ ಕೊಂಬೆಗಳನ್ನು ಚಾಚಿಕೊಂಡು ಜ್ಞಾನದಾಹಿಗಳಿಗೆ ನೆರಳಾಗಿ ಫಲಪ್ರದಾನ ಮಾಡುತ್ತಿದೆ.

ಪ್ರಸ್ತುತ ರಾಜಗುರು ಸಂಸ್ಥಾನಕಲ್ಮಠದ ಹದಿಮೂರನೆಯ ಪೀಠಾಧೀಶ್ವರರಾಗಿರುವ ಪೂಜ್ಯ ಶ್ರೀ ಮಡಿವಾಳ ಸ್ವಾಮಿಗಳು ಸ್ನಾತಕೋತ್ತರ ಪದವೀಧರರು. ಶಿಸ್ತು-ಸೌಜನ್ಯ ಮೂರ್ತಿಗಳಾದ ಶ್ರೀಗಳು ಸ್ವತ: ಸಾಹಿತಿಗಳಾಗಿರುವರು. ಅವರು ರಚನೆ ಮಾಡಿರುವ 'ಅಕ್ಕಮಹಾದೇವಿಯ ವಚನ ಪದಪ್ರಯೋಗ ಕೋಶ'ವು ನಾಡಿನ ವಿದ್ವಾಂಸರ ಗಮನ ಸೆಳೆದಿದೆ. ಸಮಾಜ, ಧರ್ಮ, ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಕಲೆ ಮುಂತಾದ ವಿವಿಧ ರಂಗಗಳಲ್ಲಿ ಪ್ರಗತಿಪರ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ಶ್ರೀ ಮಠವನ್ನು ಮುನ್ನಡೆಸುವ ಸಂಕಲ್ಪ ಮಾಡಿರುವರು.

ಪರಂಪರಾವಲೋಕನ

ಗುರು ಪರಂಪರೆ

1) ಶ್ರೀ ಮ.ನಿ.ಪ್ರ. ಶ್ರೀ ಆದಿಗುರುಸಿದ್ಧ ಸ್ವಾಮಿಗಳು 1660-1696
2) ಶ್ರೀ ಮ.ನಿ.ಪ್ರ. ಶ್ರೀ ಶಿವಲಿಂಗ ಸ್ವಾಮಿಗಳು 1669-1723
3) ಶ್ರೀ ಮ.ನಿ.ಪ್ರ. ಶ್ರೀ ಗುರುಲಿಂಗ ಸ್ವಾಮಿಗಳು 1723-1752
4) ಶ್ರೀ ಮ.ನಿ.ಪ್ರ. ಶ್ರೀ ಮೊದಲನೆಯ ಮಡಿವಾಳ ಸ್ವಾಮಿಗಳು 1752-1801
5) ಶ್ರೀ ಮ.ನಿ.ಪ್ರ. ಶ್ರೀ ಪ್ರಭು ಸ್ವಾಮಿಗಳು 1801-1825
6) ಶ್ರೀ ಮ.ನಿ.ಪ್ರ. ಶ್ರೀ ಎರಡನೆಯ ಗುರುಸಿದ್ಧ ಸ್ವಾಮಿಗಳು 1825-1838
7) ಶ್ರೀ ಮ.ನಿ.ಪ್ರ. ಶ್ರೀ ಎರಡನೆಯ ಮಡಿವಾಳದೇವರು 1838-1852
8) ಶ್ರೀ ಮ.ನಿ.ಪ್ರ. ಶ್ರೀ ರಾಚೋಟಿ ಸ್ವಾಮಿಗಳು 1850-1890
9) ಶ್ರೀ ಮ.ನಿ.ಪ್ರ. ಶ್ರೀ ಗುರುಸಿದ್ಧ ಸ್ವಾಮಿಗಳು 1890-1934
10) ಶ್ರೀ ಮ.ನಿ.ಪ್ರ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು 1934-01974
11) ಶ್ರೀ ಮ.ನಿ.ಪ್ರ. ಶ್ರೀ ಚನ್ನಯ್ಯ ಸ್ವಾಮಿಗಳು 1934-1999
12) ಶ್ರೀ ಮ.ನಿ.ಪ್ರ. ಶ್ರೀ ಶಿವಬಸವ ಸ್ವಾಮಿಗಳು 1999-2005
13) ಶ್ರೀ ಮ.ನಿ.ಪ್ರ. ಶ್ರೀ ಮಡಿವಾಳ ಸ್ವಾಮಿಗಳು 2005 - ಇಂದಿನವರೆಗೆ


ರಾಜ ಪರಂಪರೆ

1) ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕ ಮಲ್ಲಶೆಟ್ಟಿ (ಸ್ಥಾಪಕರು) 1585-1591
2) ಹಿರೇನಾಗನಗೌಡ ಸರದೇಸಾಯಿ ಪಟ್ಟಣಶೆಟ್ಟಿ 1591-1634
3) ಬಾಲನಾಗನಗೌಡ ದೇಸಾಯಿ ಉರ್ಫ ಚಿಕ್ಕನಗೌಡ 1634-1656
4) ಚೆನ್ನಪ್ಪದೇಸಾಯಿ 1656-1660
5) ಅಲ್ಲಪ್ಪಗೌಡ ಸರದೇಸಾಯಿ 1660-1691
6) ಮುದಿಮಲ್ಲಪ್ಪ ಸರದೇಸಾಯಿ 1691-1696
7) ಚಿಕ್ಕಮಲ್ಲಪ್ಪ ದೇಸಾಯಿ 1696-1717
8) ಶಿವನಗೌಡ ಸರದೇಸಾಯಿ 1717-1734
9) ಮಾಳವ ರುದ್ರಗೌಡ ಉರ್ಫ ಫಕ್ಕಿರ ರುದ್ರಸರ್ಜ 1734-1749
10) ವೀರಪ್ಪಗೌಡ ಸರದೇಸಾಯಿ 1749-1782
11) ಮಲ್ಲಸರ್ಜ ದೇಸಾಯಿ 1782-1816
12) ಶಿವಲಿಂಗ ರುದ್ರಸರ್ಜ ಉರ್ಫ ಬಾಪುಸಾಹೇಬ 1816-1824
13) ರಾಣಿಚೆನ್ನಮ್ಮ 1824
14) ಶಿವಲಿಂಗಪ್ಪ ಉರ್ಫ ಸವಾಯಿಮಲ್ಲಸರ್ಜ (ಕೊನೆಯ)
ಪರಿವಿಡಿ (index)
*
Previous ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ Next