ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ | ಲಿಂಗಾಯತ ಪ್ರಗತಿಪರ ಧರ್ಮ |
ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು |
✍ ಡಾ. ಎಂ. ಎಂ. ಕಲಬುರ್ಗಿ.
೧. ಲಿಂಗಾಯತ ಸಮಾಜದ ಶುದ್ದೀಕರಣ
ಶರಣರ ಮನೆ ಮಠಗಳಲ್ಲಿ ಸೇರಿಕೊಂಡಿರುವ ಶಿಷ್ಯ ಪ್ರಶಿಷ್ಯ ದೇವರ ವಿಗ್ರಹ, ಫೋಟೋಗಳನ್ನು ಹೊರಹಾಕಬೇಕು. ಈ ದೇವರ ಸುತ್ತ ಬೆಳೆಸಿಕೊಂಡಿರುವ ಮೂಢ ನಂಬಿಕೆ, ರುದ್ರಾಭಿಷೇಕ, ವರದ ಶಂಕರ ವ್ರತ ಇತ್ಯಾದಿ ಅರ್ಥಹೀನ ಆಚರಣೆಗಳನ್ನು ತ್ಯಜಿಸಬೇಕು.
ಮನೆಯ ದೇವರು, ಮನೆಯ ಗುರುಗಳು ಎಂಬ ಪರಂಪರಾಗತ ಭ್ರಾಂತಿಯಿಂದ ಮುಕ್ತರಾಗಬೇಕು. ಅರ್ಚಕ, ಪುರೋಹಿತ, ಜ್ಯೋತಿಷಿಗಳನ್ನು ದೂರವಿಡಬೇಕು. ಆತ್ಮಸಾಕ್ಷಿಯಾಗಿರುವ ಇಷ್ಟಲಿಂಗ ಧರ್ಮವನ್ನು ಮಾತ್ರ ಆಚರಿಸಬೇಕು. ಮನೆಯಲ್ಲಿ ದೈವೀ-ಹಾರ್ದಿಕ ವಾತಾವರಣ ಅಸ್ತಿತ್ವಕ್ಕೆ ತರಬೇಕು. ಒಟ್ಟಾರೆ ಮನ-ಮನೆ- ಮಠ-ಸಮಾಜಗಳನ್ನು ಶುದ್ದೀಕರಿಸುವ ದಿಸೆಯಲ್ಲಿ ತೊಡಗಬೇಕು. ಗುರುಸೇವೆ (ಜ್ಞಾನಗಳಿಕೆ), ಲಿಂಗಪೂಜೆ(ಜ್ಞಾನವನ್ನು ಕ್ರಿಯೆಯಾಗಿ ರೂಢಿಸುವದು), ಜಂಗಮ ದಾಸೋಹ (ಸಮಾಜ ಸೇವೆ)ಗಳು ಪ್ರತಿಯೊಬ್ಬನ ಧೈಯಾದರ್ಶವಾಗಿರಬೇಕು.
೨. ಲಿಂಗಾಯತ ಸಮಾಜದ ನವೀಕರಣ :
ನವೀಕರಣ ಎಂಬುದು ಅರಿವು-ಆಚರಣೆಗಳನ್ನು ನವೀಕರಿಸುವುದಾಗಿದೆ. ಉದಾ: ಜನನ, ಮದುವೆ, ಮರಣ ಇತ್ಯಾದಿ ಸಂದರ್ಭಗಳ ಆಚರಣೆಗಳನ್ನು ವೈದಿಕ ಇತ್ಯಾದಿ ರೀತಿಯಲ್ಲಿ ಆಚರಿಸದೇ ಶರಣಧರ್ಮದ ಆದರ್ಶದಲ್ಲಿ ಆಚರಿಸಬೇಕು. ಇದಕ್ಕೆ ಅವಶ್ಯಕವೆನಿಸುವ ಒಂದು ಸರಳ ಪಠ್ಯ ಪುಸ್ತಕ ಸಿದ್ಧಪಡಿಸಬೇಕು. ಆಧುನಿಕ ಬದುಕಿಗೆ ಅವಶ್ಯವಾಗಿರುವ ಹೊಸ ಆಚರಣೆಗಳನ್ನು ಬಳಸಿಕೊಳ್ಳಬೇಕು.
೩. ಲಿಂಗಾಯತ ಸಮಾಜದ ಏಕೀಕರಣ :
ಶರಣ ಸಮಾಜವು ಕಾಯಕ ಸಿದ್ಧಾಂತದ ಮೇಲೆ ನಿಂತಿದೆ. ಇಲ್ಲಿ ಎಲ್ಲ ಕಾಯಕಗಳು ಸಮಾನ. ಆದರೆ ೧೨ನೆಯ ಶತಮಾನದ ಬಳಿಕ ಇವುಗಳಲ್ಲಿ ತಾರತಮ್ಯ ಬೆಳೆದು ಕಾಯಕಗಳು ಜಾತಿಗಳಾಗಿ ಮಾರ್ಪಟ್ಟವು. ವೈದಿಕದ ವರ್ಣ ಭೇದವನ್ನು ಅನುಕರಿಸಿ ಇವು ಇನ್ನೂ ಗಟ್ಟಿಗೊಂಡವು. ಈಗ ಇಂಗ್ಲಿಷರ ಸಾಮಾಜಿಕ ನೀತಿಯಿಂದಾಗಿ ಸಹಭೋಜನ ಸಾಧ್ಯವಾಗಿದೆ. ಇದರ ಮುಂದುವರಿಕೆಯೆಂಬಂತೆ
೧. ಲಿಂಗಾಯತರು ಸ್ವಪಂಗಡಗಳಲ್ಲಿ ಮದುವೆ ಜರುಗಿಸುವುದನ್ನು ಕೈಬಿಟ್ಟು ಅನ್ಯ ಶರಣ ತತ್ವಾನುಯಾಯಿಗಳಾಗಿರುವ ಪಂಗಡಗಳ ಮಕ್ಕಳೊಂದಿಗೆ ಮದುವೆ ಏರ್ಪಡಿಸುವುದನ್ನು ಕಡ್ಡಾಯಗೊಳಿಸಬೇಕು.
೨. ಲಿಂಗಾಯತ ಮಠಗಳಲ್ಲಿ ಪೀಠಾಧಿಪತಿಯನ್ನು ನೇಮಿಸುವ ಸಂದರ್ಭದಲ್ಲಿ ಇಂದಿನ ಪೀಠಾಧಿಪತಿಯ ಒಳ ಜಾತಿಗಿಂತ ಭಿನ್ನ ಜಾತಿಯ ಪೀಠಾಧಿಪತಿಯನ್ನು ನೇಮಿಸುವುದು ಕಡ್ಡಾಯವಾಗಬೇಕು. ಸಾಧ್ಯವಾದರೆ ಮಹಿಳೆಯೂ ಪೀಠಾಧಿಕಾರಿಯಾಗಬೇಕು.
೩. ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಶರಣ ತತ್ವಾಭಿಮಾನಿಗಳನ್ನು ಜಾತಿ-ವಿಜಾತಿ ನೋಡದೆ ಅವಕಾಶ ಕಲ್ಪಿಸಿಕೊಡುವುದು ಕಡ್ಡಾಯವಾಗಬೇಕು. ಪ್ರತಿಯೊಬ್ಬ ಸದಸ್ಯನ ಅಧಿಕಾರಾವಧಿ ಕಾಲಮಿತಿಗೆ ಒಳಪಡಬೇಕು.
೪. ಲಿಂಗಾಯತ ಸಮಾಜದ ಜಾಗತೀಕರಣ :
ಈಗ ನಾವು ಏಕದೇಶ ಸಂಪರ್ಕ ಸಂದರ್ಭದಲ್ಲಿಲ್ಲ. ಬಹುದೇಶ ಸಂಪರ್ಕ ಸಂದರ್ಭದಲ್ಲಿದ್ದೇವೆ. ನಮ್ಮ ಸಂಸ್ಕೃತಿಗೆ ಧಕ್ಕೆ ಬರದಂತೆ ಅನ್ಯ ಸಂಸ್ಕೃತಿಯ ಆದಾನ ಮಾಡಿಕೊಳ್ಳುವುದು ಅನಿವಾರ‍್ಯವಾಗಿದ್ದು, ನಮ್ಮ ಸಂಸ್ಕೃತಿಯ ಪ್ರದಾನವೂ ಅಗತ್ಯವಾಗಿದೆ. ಇದಕ್ಕೆ ಅನುಗುಣವಾಗಿ ಶರಣ ಸಿದ್ಧಾಂತದ ಪ್ರಸಾರ-ಪ್ರಸಿದ್ಧಿ ಕಡೆಗೆ ನಾವು ಗಮನ ಕೊಡಬೇಕಾಗಿದೆ. ಆದುದರಿಂದ ದೇಶ-ವಿದೇಶಗಳಲ್ಲಿ ಶರಣ ಸಿದ್ಧಾಂತದ ಬೋಧನ ಕಲಾ ಕೇಂದ್ರಗಳನ್ನು ಸ್ಥಾಪಿಸುವುದು. ಪತ್ರಿಕೆ, ದೂರದರ್ಶನ, ಆಕಾಶವಾಣಿ ಇತ್ಯಾದಿಗಳನ್ನು ಬಳಸಿಕೊಂಡು ಸಭೆ ಸಂಘಟನೆ ರೂಪಿಸಿಕೊಂಡು ಅನುವಾದ ಇತ್ಯಾದಿ ಕಾವ್ಯಗಳನ್ನು ಪೂರೈಸಿ, ಶರಣ ಸಂಸ್ಕೃತಿಯನ್ನು ಜಾಗತೀಕರಣಗೊಳಿಸಬೇಕಾಗಿದೆ.
ಇದಕ್ಕೆ ಬೌದ್ಧಿಕ ಸಂಪನ್ಮೂಲದಂತೆ ಮಾನವ ಸಂಪನ್ಮೂಲವನ್ನು ನಾವು ಸೃಷ್ಟಿಸಬೇಕಾಗಿದೆ. ಇದರ ಅಂಗವಾಗಿ ನಮ್ಮ ಮಠಾಧೀಶರು ವರ್ಷದಲ್ಲಿ ಮೂರು ತಿಂಗಳು ಪರ್ಯಂತ ಪರದೇಶಗಳಲ್ಲಿ ಕ್ರೈಸ್ತ ಪಾದ್ರಿಗಳಂತೆ ದುಡಿಯಬೇಕು. ವಿದ್ವಾಂಸರು ಈ ಕಾರ್ಯಕ್ಕೆ ಕೈ ಜೋಡಿಸುವ ರೀತಿಯಲ್ಲಿ ಕಾಲೇಜು-ವಿಶ್ವವಿದ್ಯಾಲಯ ಮಟ್ಟದಲ್ಲಿ ಬೌದ್ಧಿಕವಾಗಿ ದುಡಿಯಬೇಕು.
೫. ಲಿಂಗಾಯತ ಸಮಾಜದ ಸಬಲೀಕರಣ :
ಜ್ಞಾನ ಮತ್ತು ಕ್ರಿಯೆ-ಇವು ವ್ಯಕ್ತಿ ಮತ್ತು ಸಮಾಜಗಳ ಪ್ರಗತಿಯ ಮುಖ್ಯ ಸಾಧನಗಳು. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸುವುದರಿಂದ ಯಾವುದೇ ಸಮಾಜದ ಸಬಲೀಕರಣ ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬನು ಒಂದು 'ಕಾಯಕ' ಹೊಂದಬೇಕು. ಮತ್ತೆ ಆ ’ಕಾಯಕ'ದ ಸರಿಯಾದ ಜ್ಞಾನ ಮತ್ತು ಈ ಜ್ಞಾನವನ್ನು ಕ್ರಿಯೆಯಾಗಿ ಪಲ್ಲಟಿಸುವ ಕೌಶಲ್ಯ, ನಿರಂತರ ಶ್ರಮ ಇತ್ಯಾದಿಗಳಲ್ಲಿ ಮುನ್ನಡೆದು, ವ್ಯಕ್ತಿ-ಸಮಾಜಗಳು ಆರ್ಥಿಕ, ಶೈಕ್ಷಣಿಕ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಸಬಲೀಕರಣಗೊಳ್ಳಬೇಕಾಗಿದೆ.
ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು
ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ | ಲಿಂಗಾಯತ ಪ್ರಗತಿಪರ ಧರ್ಮ |