ಲಿಂಗಾಯತ ಧರ್ಮದಲ್ಲಿ ಏನುಂಟು ಏನಿಲ್ಲ | ಲಿಂಗಾಯತರು ಭಾರತೀಯರು ಆದರೆ ಹಿಂದುಗಳಲ್ಲ |
ಮಾಂಸಹಾರ ಏಕೆ ಬೇಡ? "ಅಂಗದಿಚ್ಛೆಗೆ ಮದ್ಯ ಮಾಂಸವ ತಿಂಬುವರು..." |
- ✍ ಸಚ್ಚಿದಾನಂದ ಚಟ್ನಳ್ಳಿ B.E (Mech)
ಅಂಗದಿಚ್ಛೆಗೆ ಮದ್ಯ ಮಾಂಸವ ತಿಂಬುವರು;
ಕಂಗಳಿಚ್ಛೆಗೆ ಪರವಧುವ ನೆರೆವರು;
ಲಿಂಗಲಾಂಛನ ಧಾರಿಯಾದಲ್ಲಿ ಫಲವೇನು
ಲಿಂಗ ಪಥವ ತಪ್ಪಿ ನಡೆವವರು?
ಜಂಗಮ ಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ!
ಸಸ್ಯಾಹಾರಿ ಪದ್ಧತಿ ಅತ್ಯಂತ ಶ್ರೇಷ್ಠವಾದುದು. ಪಾಶ್ಚಿಮಾತ್ಯ ರಾಷ್ಟ್ರಗಳವರು ಇದನ್ನರಿತು ಈಗೀಗ ಹೆಚ್ಚು ಜನ ಸಸ್ಯಾಹಾರಿಗಳಾಗುತ್ತಿದ್ದಾರೆ. ಭಾರತ ದೇಶವು ಮೂಲಭೂತವಾಗಿ, ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯುಳ್ಳ ದೇಶ. ಈ ದೇಶದಲ್ಲಿ ಹುಟ್ಟಿದಷ್ಟು ಅಹಿಂಸಾವಾದಿ ಪ್ರವಾದಿಗಳು ಬೇರೆ ಯಾವ ದೇಶದಲ್ಲೂ ಹುಟ್ಟಿಲ್ಲ. ಮಹಾವೀರ, ಬುದ್ಧ, ಗುರು ಬಸವಣ್ಣನವರು ಅಹಿಂಸೆಯನ್ನು ಪ್ರತಿಪಾದಿಸಿದವರು. `ಅಂಹಿಸೊ ಪರಮೋ ಧರ್ಮ' `ದಯವೇ ಧರ್ಮದ ಮೂಲ' `ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜನು' ಎಂದು ದಿನನಿತ್ಯವೂ ಕೇಳುವವರು ನಾವು. ಇಂಥ ಸಂದರ್ಭದಲ್ಲಿ ದಿನನಿತ್ಯವೂ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗಬೇಕಾಗಿತ್ತು ಆದರೆ ವಿಪರ್ಯಾಸವೇನೆಂದರೆ ಸಸ್ಯಾಹಾರಿಗಳ ಸಂಖ್ಯೆ ದಿನ ದಿನವೂ ಕಡಿಮೆಯಾಗುತ್ತಿದೆ. ಅದರಲ್ಲೂ ಅನೇಕರು ಲಿಂಗಾಯತ ತಾಯಿ ತಂದೆಯರಿಗೆ ಹುಟ್ಟಿದವರೂ ಮಾಂಸಹಾರಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಕೊಲ್ಲುವಂಥದು ಅದು ಧರ್ಮವೇ ಅಲ್ಲ. ಸರ್ವಜ್ಞ ಕವಿಯ ವಾಣಿ ನೋಡಿ
ಕೊಲುವ ಧರ್ಮವನೊಯ್ದು ಒಲೆಯೊಳಗಿಕ್ಕು
ಕೊಲಲಾಗದೆಂಬ ಜೈನನ| ಮತವೆನ್ನ
ತಲೆಯ ಮೇಲಿಕ್ಕೆಂದ ಸರ್ವಜ್ಞ||
ಗುರು ಬಸವಣ್ಣನವರು ಅನೇಕ ವಚನಗಳಲ್ಲಿ ಪ್ರಾಣಿಗಳನ್ನು ಕೊಂದು ತಿನ್ನಬಾರದು ಎಂದು ಹೇಳಿದ್ದಾರೆ. ಕೇವಲ ನಾಲಿಗೆಯ ರುಚಿಗಾಗಿ ಇಂದು ಅನೇಕ ಜನ ಮಾಂಸಹಾರಿಗಳಾಗುತ್ತಿದ್ದಾರೆ. ಅಂಗದಿಚ್ಛೆಗೆ ಮದ್ಯ ಮಾಂಸವ ತಿಂಬುವರು; ಕೇವಲ ಒಡಲ ಕಳವಳಕ್ಕಾಗಿ ಮಾಂಸಹಾರ ಮಾಡುತ್ತಾರೆ. ಅದರಲ್ಲೂ ಲಿಂಗ ಲಾಂಛನ ಧಾರಿಯಾಗಿ ಮಾಂಸಹಾರ ಮಾಡಿದರೆ ಕೊಂಡಮಾರಿಂಗೆ (ತಾನಾಗಿಯೇ ಮೈಮೇಲೆ ಎಳೆದುಕೊಳ್ಳುವ ವಿಪತ್ತು) ಹೋಗ ಬೇಕಾಗುತ್ತದೆ ಎನ್ನುತ್ತಾರೆ. ಈ ವಿಚಾರವನ್ನು ನೋಡಿದಾಗ ಗುರು ಬಸವಣ್ಣನವರು ಎಷ್ಟೊಂದು ವೈಜ್ಞಾನಿಕವಾಗಿ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ ಎನಿಸುತ್ತದೆ. ಏಕೆಂದರೆ ಮಾಂಸಹಾರ ಸೇವನೆ ಮಾಡುವುದರಿಂದ ಅನೇಕ ಕಾಯಿಲೆಗಳು, ವಿಪತ್ತುಗಳು ಬರುತ್ತವೆ.
ಮಾನವನು ನೈಸರ್ಗಿಕವಾಗಿ ಸಸ್ಯಾಹಾರಿಯಾಗಿದ್ದಾನೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು. ಸಾಮಾನ್ಯವಾಗಿ ಮಾಂಸಹಾರಿ ಪ್ರಾಣಿಗಳಿಗೆ ಗಟ್ಟಿಯಾದ ಚೂಪಾದ ಉಗುರುಗಳು ಮತ್ತು ಕೋರೆಹಲ್ಲುಗಳಿರುತ್ತವೆ. ಸಸ್ಯಾಹಾರಿ ಪ್ರಾಣಿಗಳಿಗೆ ಇಂಥ ಹಲ್ಲುಗಳು ಇರುವುದಿಲ್ಲ. ಮಾನವನಿಗೆ ಹಾಗೂ ಇತರ ಸಸ್ಯಾಹಾರಿ ಪ್ರಾಣಿಗಳಿಗೆ ದವಡೆಯಲ್ಲಿ ಇರುವಂಥ ಹಲ್ಲುಗಳು ಹುಲಿ, ಚಿರತೆ, ನಾಯಿ, ಬೆಕ್ಕುಗಳಿಗಿರುವುದಿಲ್ಲ. ಮಾಂಸಹಾರಿ ಪ್ರಾಣಿಗಳಿಗೆ ಒಂದೇ ಕರುಳು ಇದ್ದು ಅದು ಉದ್ದದಲ್ಲಿ ಚಿಕ್ಕಾದಾಗಿರುತ್ತದೆ. ಸಸ್ಯಾಹಾರಿ ಪ್ರಾಣಿಗಳಿಗೆ ಮಾನವನಿಗಿರುವಂತೆ ಸಣ್ಣ ಕರುಳು ಮತ್ತು ದೊಡ್ಡ ಕರುಳು ಎಂದು ಎರಡು ಕರುಳಿರುತ್ತವೆ. ಈ ಕರಳುಗಳು ತುಂಬಾ ಉದ್ದವಾಗಿರುತ್ತವೆ. ಮಾಂಸಹಾರಿ ಪ್ರಾಣಿಗಳು ಅಲ್ಪಾಯುಷಿಗಳಾಗಿರುತ್ತವೆ, ಸಸ್ಯಾಹಾರಿ ಪ್ರಾಣಿಗಳು ಮಾಂಸಹಾರಿ ಪ್ರಾಣಿಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ.
ಮನುಷ್ಯನು ವಿಕಾಸದ ಹಂತದಲ್ಲಿರುವಾಗ ಮೊದಲು ಬೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತಿದ್ದ. ಅವನ ಇಡೀ ದಿನ ಆಹಾರ ಹುಡುಕುವುದರಲ್ಲಿಯೇ ಕಳೆಯುತ್ತಿತ್ತು. ಸಸ್ಯಾಹಾರ ಪದ್ಧತಿ ಗೊತ್ತಾಗಿ ದವಸ ಧಾನ್ಯಗಳನ್ನು ಬೆಳೆಯಲು ಕಲಿತ ಮೇಲೆಯೆ ಅವನ ಬೌದ್ಧಿಕ ವಿಕಾಸವಾಗಿರುವುದನ್ನು ಕಾಣುತ್ತೇವೆ. ಹೀಗಾಗಿ ಸಸ್ಯಾಹಾರವು ಮನುಷ್ಯನ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಮಾಂಸಹಾರ ಸೇವನೆ ಮಾಡುವವರು ಪರೋಕ್ಷವಾಗಿಯಾಗಲೀ ಅಪರೋಕ್ಷವಾಗಿಯಾಗಲಿ ಪ್ರಾಣಿಗಳನ್ನು ಕೊಲ್ಲ ಬೇಕಾಗುತ್ತದೆ. ``ಜೀವ ನೀಡುವ ಶಕ್ತಿ ನಿನಗಿಲ್ಲದಿರುವಾಗ ಕೊಲ್ಲುವ ಹಕ್ಕು ನಿನಗಿಲ್ಲ" ಎನ್ನುತ್ತಾರೆ ಮಹಾತ್ಮ ಬುದ್ಧ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದರ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅಲ್ಲದೇ ಸಕಲ ಜೀವಿಗಳಲ್ಲಿಯೂ ದೇವರ ಅಂಶವಿರುವುದರಿಂದ ಪ್ರಾಣಿಗಳನ್ನು ಕೊಲೆ ಮಾಡುವುದರಿಂದ ಪಾಪಕರ್ಮಕ್ಕೆ ಹೋಗುತ್ತಾರೆ. ಗುರು ಬಸವಣ್ಣನವರು ಶುದ್ಧ ಸಸ್ಯಾಹಾರಿಯಾದ ಲಿಂಗಾಯತ ಧರ್ಮವನ್ನು ಕೊಟ್ಟರು. ಒಂದು ಧರ್ಮ ಎನಿಸಿಕೊಳ್ಳಬೇಕಾದರೆ ಅದಕ್ಕೆ ದಯೆಯು ಮೂಲ ತಳಹದಿಯಾಗಬೇಕು ಎನ್ನುತ್ತಾರೆ.
ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯ ನಂತಲ್ಲದೊಲ್ಲನಯ್ಯಾ
ದಯವಿಲ್ಲದುದು ಧರ್ಮವೇ ಅಲ್ಲ, ಧರ್ಮದ ಹೆಸರಿನಲ್ಲಿ ಪ್ರಾಣಿ ಬಲಿಕೊಡುವುದನ್ನು ಶರಣರು ಖಂಡಿಸುತ್ತಾರೆ. ಯಾವುದೇ ಜೀವಿಯ ಪ್ರಾಣ ತೆಗೆಯ ಬಾರದು ಎಂದು ಹೇಳಿದರೆ ಅನೇಕರು ಸಸ್ಯಗಳಿಗೂ ಜೀವವಿದೆ. ಸಸ್ಯಾಹಾರವನ್ನು ಮಾಡಬಾರದು ಎಂದು ವಾದ ಮಾಡುತ್ತಾರೆ. ಸಸ್ಯಗಳಲ್ಲಿ ಜೀವವಿದೆ ಆದರೆ ಆತ್ಮ ಇಲ್ಲ. ಸಸ್ಯಗಳಿಗೆ ಸುಖ-ದುಃಖ, ನೋವು-ನಲಿವುಗಳಿರುವುದಿಲ್ಲ ಅದಕ್ಕಾಗಿ ಸಸ್ಯಹಾರವು ಹಿಂಸೆಯಲ್ಲ. ಸಸ್ಯಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯಿಲ್ಲ. ಆದರೆ ಪ್ರಾಣಿಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯಿದೆ ಅವು ತಮ್ಮ ಸುಖ-ದುಃಖವನ್ನು ಪ್ರಕಟಿಸಬಲ್ಲವುಗಳಾಗಿವೆ. ಎಲ್ಲಿ ಆತ್ಮ ಇರುತ್ತದೆಯೋ ಅಂಥವನ್ನು ಕೊಂದಾಗ ಮಾತ್ರ ಅದು ಹಿಂಸೆಯಾಗುತ್ತದೆ. ಕೆಲವರು `ಮುಟ್ಟಿದರೆ ಮುನಿ' ಗಿಡವು ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂದು ವಾದ ಮಾಡುತ್ತಾರೆ. ಮುಟ್ಟಿದರೆ ಮುನಿ ಗಿಡವು ಮುಟ್ಟಿದಾಗ ತನ್ನ ಎಲೆಗಳನ್ನು ಮುಚ್ಚಿಕೊಂಡು ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದರೂ ಆ ಪ್ರತಿಕ್ರಿಯೆ ವೈಚಾರಿಕವಾಗಿ ಮತ್ತು ವೈ ಜ್ಞಾನಿಕವಾಗಿಲ್ಲ. ಕಸಕಡ್ಡಿ ಏನೇ ಅದರ ಮೇಲೆ ಬಿದ್ದರೂ ಅದು ಮುಚ್ಚಿಕೊಳ್ಳುತ್ತದೆ. ಹೀಗಾಗಿ ಆತ್ಮನ ವಿಕಾಸ, ಅರಿವು ಎನ್ನುವಂಥದ್ದು ಪ್ರಾಣಿಗಳಲ್ಲಿ ವಿಕಾಸಗೊಂಡಿದೆಯೇ ಹೊರತು ಸಸ್ಯಗಳಲ್ಲಿ ಇಲ್ಲ. ಒಂದು ಬೆಳೆಯುತ್ತಿರುವ ಸಸ್ಯವನ್ನು ಚಿವುಟಿ ಹಾಕಿದರೂ ಅದು ಮತ್ತೆ ಬೆಳೆಯುತ್ತದೆ. ಆದರೆ ಯಾವುದೇ ಪ್ರಾಣಿಯ ಒಂದು ಕಾಲನ್ನು ಕತ್ತರಿಸಿದರೂ ಅದು ಮತ್ತೆ ಬೆಳೆಯುವುದಿಲ್ಲ.
ಮತ್ತೆ ಕೆಲವರು ಹಾಲು ಮಾಂಸದಿಂದಲೇ ಬರುತ್ತದೆ ಅದು ಕೂಡ ಮಾಂಸಹಾರವೇ ಎಂದು ವಾದ ಮಾಡುತ್ತಾರೆ. ಹಾಲು ಮಾಂಸಹಾರವಲ್ಲ ಅದು ಶುದ್ಧ ಸಸ್ಯಾಹಾರ. ಹಾಲನ್ನು ಪ್ರಾಣಿ ಹಿಂಸೆ ಮಾಡಿ ತೆಗೆಯುವುದಿಲ್ಲ ಹಸುವಿನ ಅಥವಾ ಎಮ್ಮೆಯ ಕರುವಿಗೆ ಸಾಕಷ್ಟು ಹಾಲನ್ನು ಬಿಟ್ಟು ಬಿಟ್ಟೇ ಹಾಲನ್ನು ಕರೆಯುತ್ತಾರೆ. ಅಲ್ಲದೇ ಹಾಲು ಹಿಂಡಿಕೊಳ್ಳದೇ ಹೋದರೆ ಕರುವನ್ನು ಹೆತ್ತ ಪ್ರಾಣಿಗೆ ತೊಂದರೆಯಾಗುತ್ತದೆ.
ಮೊಟ್ಟೆಯೂ ಕೂಡ ಮಾಂಸಹಾರವೇ. ಈಗೀಗ ಹೈಬ್ರಿಡ್ ಕೋಳಿಗಳಿಂದ ಮೊಟ್ಟೆ ಉತ್ಪಾದನೆ ಮಾಡುತ್ತಿದ್ದಾರೆ. ಅಂಥ ಮೊಟ್ಟೆಗಳಿಂದ ಮರಿ ಹುಟ್ಟಲಾರವು ಅದಕ್ಕೆ ಮೊಟ್ಟೆಯು ಸಸ್ಯಾಹಾರ ಎಂದು ಕೆಲವರ ವಾದ. ಮೊಟ್ಟೆಯಲ್ಲಿ ಮಾಂಸದ ಅಂಶವಿರುತ್ತದೆ. ಕೋಳಿಗೆ ಚುಚ್ಚು ಮದ್ದು ಕೊಟ್ಟು, ಅಂಥ ಮೊಟ್ಟೆಯಿಂದ ಪುನರುತ್ಪತ್ತಿ ಆಗದಂತೆ ಮಾಡಿರುವುದರಿಂದ ಅದರಿಂದ ಮರಿಗಳು ಹುಟ್ಟಲಾರವು. ಆದರೆ ಮೊಟ್ಟೆ ಮೂಲಭೂತವಾಗಿ ಮಾಂಸಹಾರದಲ್ಲಿಯೇ ಬರುತ್ತದೆ. ಕೆಲವರು ಪ್ರಾಣಿಗಳನ್ನು ಅಮಾನುಷವಾಗಿ ಕೊಲ್ಲುವುದನ್ನು ನೋಡಿದಾಗ ಅವರಿಗೆ ಹೃದಯವೇ ಇಲ್ಲವೇನೋ ಎನಿಸುತ್ತದೆ.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕ್ಕೇಕೆ ಮರುಗನು?
ಜಾಲಗಾರನ ದುಃಖ ಜಗಕ್ಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವ ಹಿಂಸೆಯ ಮಾಡುವ ಮಾದಿಗರ ನೇನೆಂಬೆನಯ್ಯಾ
ತನ್ನ ಮನೆಯಲ್ಲಿ ಯಾರಾದರೂ ಸತ್ತರೆ ಗೋಳು ಹೊಯ್ದುಕೊಂಡು ಅಳುವ ವ್ಯಕ್ತಿ, ಪ್ರಾಣಿಗಳನ್ನು ಮೀನುಗಳನ್ನು ಕೊಲ್ಲುವಾಗ ಏಕೆ ಮರುಗುವುದಿಲ್ಲ? ಅಲ್ಲಿ ಅವರ ಹೃದಯ ಕಲ್ಲಾಗಿರುತ್ತದೆ. ಇಂಥ ಹೃದಯದಲ್ಲಿ ದೇವನಿರಲಾರ. ಸರ್ವಜ್ಞ ಕವಿಯೂ ಕೂಡ ಪ್ರಾಣಿ ಹಿಂಸೆ ಮಾಡುವವರು ನರಕಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾನೆ.
ಕೊಲ್ಲದಿಪ್ಪ ಧರ್ಮವೆಲ್ಲರಿಗೆ ಸನುಮತವು
ಅಲ್ಲದನು ಮೀರಿ ಮಾಡುವನು| ನರಕಕ್ಕೆ
ನಿಲ್ಲದೆ ಹೋಹ ಸರ್ವಜ್ಞ||
ಗುರು ಬಸವಣ್ಣನವರು, ನಮಗೆ ಸಪ್ತಸೂತ್ರದ ವಚನ ಕೊಟ್ಟಿದ್ದಾರೆ.
ಕಳಬೇಡ,ಕೊಲಬೇಡ, ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಇಂದಿನ ಕಾನೂನಿನ ಪ್ರಕಾರ ಕೊಲೆ ಮಾಡಿದವನಿಗೆ ಎಷ್ಟು ಶಿಕ್ಷೆ ದೊರಕುತ್ತದೆಯೋ ಕೊಲೆ ಮಾಡಲು ಪ್ರೇರಣೆ, ಪ್ರೋತ್ಸಾಹ ನೀಡಿದವರಿಗೂ ಅಷ್ಟೇ ಶಿಕ್ಷೆ ದೊರಕುತ್ತದೆ. ಅದೇ ರೀತಿ ಮಾಂಸಹಾರ ಸೇವನೆ ಮಾಡುವಂಥವರು ಯಾರೇ ಇರಲಿ ಅವರೂ ಅಪರೋಕ್ಷವಾಗಿ ಕೊಲೆ ಮಾಡಿದಂತೆಯೇ. ಅದಕ್ಕೆ ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ. ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಹಸುವಿಗೆ ಅತ್ಯಂತ ಗೌರವದ ಸ್ಥಾನವಿದೆ. `ಕಾಮಧೇನು' ಎಂದು ಭಾರತೀಯ ಹಸುವನ್ನು ಕರೆಯುತ್ತಾರೆ. ಕಾರಣ, ಅದರ ಮೂತ್ರ, ಸಗಣಿ ಎಲ್ಲವೂ ಅತ್ಯಂತ ಉಪಯುಕ್ತವಾದುದು. ಇಂದು ಮಾಂಸಹಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗೋ-ಸಂತತಿ ಅಳಿಯುತ್ತಿದೆ ಇದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಮಾಂಸಹಾರ ಮಾಡುವುದರಿಂದ ರಕ್ತದೊತ್ತಡ ಮತ್ತು ಹೃದಯಾಘಾತದಂಥ ಭಯಂಕರ ಕಾಯಿಲೆ ಬರುತ್ತವೆ. ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗುತ್ತದೆ. ಸಾಮನ್ಯವಾಗಿ ಸಸ್ಯಹಾರಿಗಳು ಸಾತ್ವಿಕರಾಗಿರುತ್ತಾರೆ, ಆದರೆ ಮಾಂಸಹಾರಿಗಳಲ್ಲಿ ಕ್ರೂರ ಪ್ರವೃತ್ತಿ ಬೆಳೆದಿರುತ್ತದೆ. 100 ಸಸ್ಯಾಹಾರಿಗಳು ಬದುಕಲಿಕ್ಕೆ, ದವಸ, ಧಾನ್ಯ ಬೆಳೆಯಲು ಒಂದು ಎಕರೆ ಜಾಗ ಸಾಕಾದರೆ, ಅದೇ 100 ಮಾಂಸಹಾರಿಗಳು ಬದುಕಲಿಕ್ಕೆ ಮೂರು ಎಕರೆ ಜಮೀನು ಬೇಕಾಗುತ್ತದೆ. ಕಾರಣ ಅವರು ತಿನ್ನುವ ಪ್ರಾಣಿಗಳನ್ನು ಕೂಡ ಸಾಕಬೇಕಾಗುತ್ತದೆಯಲ್ಲ ಅದಕ್ಕೆ. ``ನಿಸರ್ಗವು ಎಲ್ಲರ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಲೋಭವನ್ನಲ್ಲ" ಎಂದು ಗಾಂಧೀಜಿ ಹೇಳಿದ್ದಾರೆ.
ಲಿಂಗಾಯತರಾದವರು, ಮಾಂಸಹಾರಿಗಳ ಮನೆಯಲ್ಲಿ ಪ್ರಸಾದವನ್ನು ಕೂಡ ಮಾಡಬಾರದು ಎನ್ನುವ ನಿಯಮವಿದೆ. ಆದರೆ ಇಂದು ಅನೇಕ ಜನ ಲಿಂಗಾಯತರೇ ಮಾಂಸಹಾರ ಮಾಡುತ್ತಿರುವುದರಿಂದ ಇತರ ಧರ್ಮವಂತರೂ ಕೂಡ ತಲೆ ತಗ್ಗಿಸುವಂತಾಗಿದೆ. ನಾನು ಅನೇಕರಿಗೆ ಮಾಂಸಹಾರ ಒಳ್ಳೆಯದಲ್ಲ ಮಾಡಬೇಡಿರಿ ಎಂದು ಹೇಳಿದಾಗ. ``ಅನೇಕ ಜನ ಲಿಂಗಾಯತರೂ ನನಗೆ ಗೆಳೆಯರಿದ್ದಾರೆ ಅವರೆಲ್ಲರೂ ಮಾಂಸಹಾರ ಮಾಡುತ್ತಾರೆ" ಎಂದರು. ಇದು ಕೇಳಿ ನನಗಾದ ನೋವು ಅಷ್ಟಿಷ್ಟಟಲ್ಲ. ಅನೇಕರು ಮಾಂಸಹಾರ ಮಾಡಿದರೆ ಶಕ್ತಿ ಬರುತ್ತದೆ ಎನ್ನುತ್ತಾರೆ ಇದು ಸುಳ್ಳು. ಮಾಂಸಹಾರವನ್ನು ಕೇವಲ ನಾಲಿಗೆಯ ರುಚಿಗಾಗಿ ಮಾಡುತ್ತಾರೆ ಎಂದು ಕೇಳಿದ್ದೇನೆ.
ನಾಲಿಗೆಯ ಕಟ್ಟಿದವ ಕಾಲಂಗೆ ದೂರಹನು
ನಾಲಿಗೆಯ ರುಚಿಯ | ಮೇಲಾಡುತ್ತಿರಲವನ
ಕಾಲ ಹತ್ತಿರವು ಸರ್ವಜ್ಞ ||
ಎಂದು ಸರ್ವಜ್ಞ ಕವಿಯೂ ಹೇಳುತ್ತಾರೆ. ಸಸ್ಯಾಹಾರದಲ್ಲಿ ಇರುವಷ್ಟು ಶಕ್ತಿ ಮಾಂಸಹಾರದಲ್ಲಿಲ್ಲ. ಜಗತ್ತಿನ ಅತ್ಯಂತ ಶಕ್ತಿ ಶಾಲಿಯಾದ ಪ್ರಾಣಿ ಆನೆ, ಅದು ಸಸ್ಯಾಹಾರಿ. ಜಗತ್ತಿನ ಅತ್ಯಂತ ಚುರುಕಾದ ಪ್ರಾಣಿ ಜಿಂಕೆ ಅದು ಸಸ್ಯಾಹಾರಿ, ಓಟಕ್ಕೆ ಪ್ರಸಿದ್ಧವಾದ ಪ್ರಾಣಿ ಕುದುರೆ ಅದು ಸಸ್ಯಾಹಾರಿ ಮರುಭೂಮಿಯ ಹಡಗು (Ship of the Desert) ಎಂದೇ ಪ್ರಸಿದ್ಧವಾದ ಒಂಟೆ, ಅದೂ ಸಸ್ಯಾಹಾರಿಯೇ. ವಿದ್ಯುತ್ ಉಪಕರಗಳ ಸಾಮರ್ಥವನ್ನು ಮತ್ತು ಶಕ್ತಿಯನ್ನು, ಅಶ್ವಶಕ್ತಿ (Horse Power)ಯಲ್ಲಿ ಅಳತೆ ಮಾಡುತ್ತಾರೆ. ನೀರೆತ್ತುವ ಪಂಪಿಗೆ ಜೋಡಿಸಿರುವ ಮೋಟಾರನ್ನು 3 ಅಶ್ವಶಕ್ತಿ 6 ಅಶ್ವಶಕ್ತಿ ಎಂದು ಅಳತೆ ಮಾಡುತ್ತಾರೆಯೇ ಹೊರತು ಹುಲಿಶಕ್ತಿ, ಸಿಂಹ ಶಕ್ತಿ ಎಂದು ಅಳತೆ ಮಾಡುವುದಿಲ್ಲ. ಆದ್ದರಿಂದ ಬಂಧುಗಳೇ ಇನ್ನೂ ಯಾರಾದರೂ ಮಾಂಸಹಾರ ಮಾಡುತ್ತಿದ್ದರೆ ದಯವಿಟ್ಟು ಬಿಟ್ಟು ಬಿಡಿ.
ಇಲ್ಲಿಯವರೆಗೆ ಅನೇಕರು ಮಾಂಸಹಾರ ಮಾಡಿದ್ದೇನೆ. ಇದಕ್ಕೆ ಏನು ಪರಿಹಾರ, ಈಗಾಗಲೇ ನನಗೆ ಪಾಪ ಬಂದಿದೆ ಎಂದು ಯಾರಿಗಾದರೂ ಪಾಪ ಪ್ರ ಜ್ಞೆ ಕಾಡುತ್ತಿದ್ದರೆ, ಮುಂದೆ ಏನು ಮಾಡಬೇಕು ಎಂದು ಯೋಚನೆಯುಂಟಾಗುತ್ತಿದ್ದರೆ, ಅದಕ್ಕೊಂದು ಸುಲಭವಾದ ದಾರಿಯಿದೆ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಅದಕ್ಕೆ ಪಶ್ಚಾತಾಪವೊಂದೇ ಪರಿಹಾರ. ಇಂಥವರನ್ನು ಗುರು ಬಸವಣ್ಣನವರು ಅಭಯಹಸ್ತ ನೀಡಿ ಕರೆಯುತ್ತಿದ್ದಾರೆ.
ಎಲವೂ ಎಲವೋ ಪಾಪಕರ್ಮವ ಮಾಡಿದವನೆ
ಎಲವೋ ಎಲವೋ ಬ್ರಹ್ಮ ಹತ್ಯವ ಮಾಡಿದವನೆ
ಒಮ್ಮೆ ಶರಣೆನ್ನೆಲವೋ
ಸರ್ವಪ್ರಾಯಶ್ಚಿತಕ್ಕೆ ಹೊನ್ನ ಪರ್ವತಂಗಳಾದಡೆಯೂ ಸಾಲವು
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ.
ನಾವು ಮಾಡಿರುವ ಪಾಪಗಳಿಗಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ಹೋದರೆ, ಹೊನ್ನಿನ ಪರ್ವತಗಳಾದರೂ ಸಾಲವು ಎಷ್ಟೇ ದುಡ್ಡು ಖರ್ಚು ಮಾಡಿ, ಗುಡಿಗುಂಡಾರ ಸುತ್ತಿದರೂ ಪಾಪ ಹೋಗಲಾರದು. ಅದಕ್ಕಾಗಿ ದೇವರಿಗೆ ಗುರುವಿಗೆ ಶರಣೆಂದು ಪಶ್ಚಾತ್ತಾಪದ ಕಣ್ಣೀರಿನನಲ್ಲಿ ಮಿಂದು ಪಾವನರಾಗಬೇಕು.
ಲಿಂಗಾಯತ ಧರ್ಮದಲ್ಲಿ ಏನುಂಟು ಏನಿಲ್ಲ | ಲಿಂಗಾಯತರು ಭಾರತೀಯರು ಆದರೆ ಹಿಂದುಗಳಲ್ಲ |