ಕೊಲೆಗಡುಕತನವಿಲ್ಲದ ಪ್ರೀತಿಸುವ ಆದರ್ಶಗಳೆ ಶೋಭೆ
|
|
*
- ✍ ಡಾ ರಾ ಮ ಹೊಸಮನಿ
ಕೊಲೆಗಡುಕತನವಿಲ್ಲದ ಪ್ರೀತಿಸುವ ಆದರ್ಶಗಳೆ ಶೋಭೆ.
ಕೊಲೆಗಡುಕತನಕ್ಕೆ ಯಾವುದೇ ಕಾರಣಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾನ್ಯತೆ ಇಲ್ಲ. ಬದಲಾವಣೆಗಾಗಿ ಪ್ರಜಾಪ್ರಭುತ್ವದ ಪರ್ಯಾಯ ಮಾರ್ಗಗಳು ಇರುವಾಗ ಕೊಲೆಗಡುಕತನ ಎಂದೂ ಆದರ್ಶ ಆಗಬಾರದು.
ಕನಸಿನಲ್ಲಿ, ಮನಸ್ಸಿನಲ್ಲಿ, ಧರ್ಮದಲ್ಲಿ, ವ್ಯಕ್ತಿಯಲ್ಲಿ, ಕುಟುಂಬದಲ್ಲಿ , ಸಮಾಜದಲ್ಲಿ , ದೇಶದಲ್ಲಿ ಮತ್ತು ಜಾಗತಿಕವಾಗಿ ಕೊಲೆಗಡುಕತನ ತೋಲಗಬೇಕು. ಸಂಕಷ್ಟಗಳಿಗೆ ಈ ಕೊಲೆಗಡುಕತನವೇ ಬಹುತೇಕ ಮುಖ್ಯ ಕಾರಣ.
ಕಾನೂನು ಬಾಹಿರ ಅನಾಗರಿಕ ಕೊಲೆಗಡುಕತನ ಸಹಿಸುವುದು ಅಸಂಮಜಸ. ಯುವ ಪೀಳಿಗೆಗೆ ಕೊಲೆಗಡುಕತನ ಅನಿವಾರ್ಯ ಮತ್ತು ಶ್ರೇಷ್ಠವೆಂಬ ತಪ್ಪು ಕಲ್ಪನೆ ಕೊಡುವದನ್ನು ಯಾರು ಯಾವ ಕಾರಣಕ್ಕೂ ಮಾಡವುದು ಸಾಧುವಲ್ಲ.
ಕೊಲೆಗಡುಕತನವಿಲ್ಲದ ವ್ಯವಸ್ಥೆ ಸೃಷ್ಟಿಸಲು ದಯವಿಟ್ಟು ಜವಾಬ್ದಾರಿಯುತ ನಿಲುವಿರಲಿ.
ಕೊಲೆಗಡುಕತನಕ್ಕೆ ಧಾರ್ಮಿಕ ಸಂಹಾರವೆಂಬ ಶಬ್ದಗಳ ಲೇಪನ ಅಥವಾ ಸಮರ್ಥನೆ ಅಸಭ್ಯ , ಅಮಾನವೀಯ, ಅನಾಗರಿಕ ಮತ್ತು ದುರದೃಷ್ಟಕರ.
ನಮ್ಮ ದೇಶದ ಪುರಾಣ ಕಥೆಗಳು , ಧರ್ಮ ಗ್ರಂಥಗಳು, ವರ್ಣ ವ್ಯವಸ್ಥೆ , ಇತ್ಯಾದಿ ಕೊಲೆಗಡುಕತನಕ್ಕೆ ಪ್ರಚೋದಿಸಿ ಸಮರ್ಥಿಸುವುದು ದುರದೃಷ್ಟಕರ. ಇದು ಹಿಂದೆಯಲ್ಲದೆ ಇಂದಿಗೂ ಹಲವಾರು ಕೊಲೆಗಳಿಗೆ ಈ ಧಾರ್ಮಿಕ ಕೊಲೆಗಡುಕತನ ಪ್ರೇರಿತ ಮನಸ್ಥಿತಿ ಕಾರಣ. ಭಾರತ ಶ್ರೇಷ್ಠ ರಾಷ್ಟ್ರ ಆಗದೆ ಇರುವುದಕ್ಕೆ ಕೊಲೆಗಡುಕತನ ಕೂಡ ಒಂದು ಮಹತ್ವದ ಕಾರಣ.
ಹಲವಾರು ಸಂಘಟನೆಗಳು ಈ ದಾರಿತಪ್ಪಿದ ಕೊಲೆಗಡುಕತನ ಮನಸ್ಥಿತಿಯನ್ನು ಹೊಂದಿ ಯುವಜನರ ವಿಕಾಸಕ್ಕೆ ದಾರಿ ದೀಪವಾಗುವ ಬದಲು ದ್ವೇಷ ಹಿಂಸೆ ಅಪರಾಧಗಳ ದಾರಿಗೆ ನೂಕುತ್ತಿರುವುದನ್ನು ನಮ್ಮ ನಿಲುವಿನಿಂದ ಬದಲಿಸಲು ಪ್ರಯತ್ನಿಸುವುದು ಎಲ್ಲರ ಆದ್ಯ ಕರ್ತವ್ಯ.
ಬಸವಾದಿಶರಣರ ವಚನಾಧರಿತ ಲಿಂಗಾಯತ ಧರ್ಮ ವರ್ತನೆಯನ್ನು ಪರಿವರ್ತನೆ ಮಾಡಿದ ಜಗತ್ತಿನ ಏಕೈಕ ಧರ್ಮ.
ವಚನ ಅಧ್ಯಯನವಷ್ಟೇ ಅಲ್ಲದೆ ಸರಿಯಾದ ಉದ್ದೇಶದ ಅರ್ಥ ಅವಶ್ಯಕ. ಇದರ ಅರಿವು ಮೂಡಿಸುವ ನಡೆನುಡಿಒಂದಾದ ಹೃದಯ ಪೂರ್ವಕ ಅತ್ಮವಂಚನೆಯಿಲ್ಲದ ಪ್ರಯತ್ನ ಬೇಕು.
ಹನ್ನೆರಡನೆಯ ಶತಮಾನದಲ್ಲಿ ಹಲವಾರು ಕೋಟಿ ವಚನಗಳನ್ನು ರಚಿಸಿದುದರಲ್ಲಿ ಇಂದು ಲಭ್ಯವಿರುವುದು ಮೂವತ್ತು ಸಾವಿರದಷ್ಟು ಮಾತ್ರ. ಇದು ಈ ಕೊಲೆಗಡುಕತನ ಧಾರ್ಮಿಕ ಮನಸ್ಥಿತಿಯ ಕಾರಣದಿಂದ ಸಹಸ್ರಾರು ಶರಣರ ಕಗ್ಗೊಲೆಯಲ್ಲದೆ ವಚನಗಳನ್ನು ಸುಟ್ಟು ಹೊಸ ಸಮಾಜದ ಹುಟ್ಟನ್ನು ಹೊಸಕಿ ಹಾಕುವ ಐತಿಹಾಸಿಕ ಕರಾಳ ಪ್ರಯತ್ನ ಮಾಡಿದ್ದು ನಾಚಿಕೆಯಿಂದ ತಲೆ ತಗ್ಗಿಸುವಂತಹದ್ದು. ಇರುವ ಈ ಎಲ್ಲ ವಚನಗಳಲ್ಲಿ ಕೆಳಗಿನ ಒಂದೇ ವಚನ ಸಾಕು ಭಾರತ ದೇಶವನ್ನು ಆದರ್ಶ ರಾಷ್ಟ್ರವಾಗಿ ಮಾರ್ಪಡಲು:
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಉಳಿದೆಲ್ಲ ವಚನಗಳನ್ನು ಪಾಲಿಸಿದರೆ ಸ್ವರ್ಗವೆ ಎಲ್ಲರ ಬಾಳಾಗುವುದು. ಜಗತ್ತಿನಲ್ಲಿ ಭಾರತ ಆದರ್ಶಗಳಿಗಾಗಿ ಶೋಭಿಸುವದರಲ್ಲಿ ನಿಸಂದೇಹ.
ಎಲ್ಲರನ್ನೂ ಪ್ರೀತಿಸುವ ಧರ್ಮ ನಮ್ಮದು. ದಯವೇ ಧರ್ಮದ ಮೂಲ. ದಯೆ ಪ್ರೀತಿ ಸಮಾನತೆ ವೈಚಾರಿಕತೆ ಇಲ್ಲದ ಧರ್ಮ ನಮ್ಮದಲ್ಲ ಮತ್ತು ಇವು ಇಲ್ಲದ್ದು ಈ ಜಗತ್ತಿನ ಸುಖಕರ ಸಹಬಾಳ್ವೆಗೆ ಕಂಟಕ.
ಈ ಧರ್ಮದ ವಾರಸುದಾರರಾದ ಕರ್ನಾಟಕದ ಮತ್ತು ಭಾರತದ ಎಲ್ಲಾ ಜನರು ಕಂಕಣ ಬದ್ಧರಾಗಿ ಮುನ್ನಡೆಯಬೇಕು.
ಎಲ್ಲರನ್ನೂ ಸಮಾನತೆಯ ದೃಷ್ಟಿಯಿಂದ ಪ್ರೀತಿಸುವವರು, ಎಲ್ಲಾ ವರ್ಗದ ಜನರ ಏಳ್ಗೆಗಾಗಿ ಶ್ರಮಿಸುವ ಆಧುನಿಕ ವೈಚಾರಿಕ ಮೌಢ್ಯರಹಿತ ಮನಸ್ಥಿತಿ ಹೊಂದಿದವರನ್ನು ಸಮಾಜದ ಯುವಜನತೆಯ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವ ಪ್ರಯತ್ನ ಭವಿಷ್ಯದ ದೃಷ್ಟಿಯಿಂದ ಎಲ್ಲರಿಗೂ ಹಿತಕರ. ಹಿತಕರವಾದುದನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು.
*