Previous ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ Next

ಇಲ್ಲದ ಬೆಕ್ಕನ್ನು ಕತ್ತಲೆಯಲ್ಲಿ ಹುಡುಕುವ ಪ್ರಯತ್ನ

*

–ಎಸ್‌. ವಿದ್ಯಾಶಂಕರ, –ಡಾ. ಎಂ. ಚಿದಾನಂದಮೂರ್ತಿ, ಬೆಂಗಳೂರು

ಕೃಪೆ: ಪ್ರಜಾವಾಣಿ » ಸಂಗತ, ಮಂಗಳವಾರ, ಮಾರ್ಚ ೨೫, ೨೦೧೪

ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಕಾಲಮಾನದಲ್ಲಿದ್ದವರು; ಒಬ್ಬ ಸನ್ಯಾಸಿ, ಇನ್ನೊಬ್ಬ ಸಂಸಾರಿ ...

ಯು.ಕೆ. ಮಹಾಬಲೇಶ್ವರಪ್ಪನವರು ದೇವರ ದಾಸಿಮಯ್ಯನವರನ್ನು ಕುರಿತು ವಾಚಕರವಾಣಿಗೆ ಬರೆದ ಪತ್ರ ಓದಿದೆ. ಸರಳರೇಖಾತ್ಮಕ ಸಂಗತಿಯನ್ನು ಗೋಜಲು ಮಾಡುವ ಪ್ರಯತ್ನ ಇದು. ಇತಿಹಾಸ ಹೇಳುವಂತೆ ದೇವರ ದಾಸಿಮಯ್ಯನು ಪೊಟ್ಟಲ­ಕೆರೆಯ (ಆಂಧ್ರದ ಪಟಾಣ್‌ಚೆರುವು) ಜಯಸಿಂಹನ (ಸು. 1015–44) ಪತ್ನಿ ಸುಗ್ಗಲದೇವಿಗೆ ವೀರಶೈವ ದೀಕ್ಷೆಯನ್ನು ಕೊಟ್ಟವನು; ಮತ ಪ್ರಚಾರಕ. ಸದ್ಯಕ್ಕೆ ಆದ್ಯ ವಚನಕಾರ ಜೇಡರದಾಸಿಮಯ್ಯನು ನೇಯ್ಗೆಯವನು; ಕಲಬುರ್ಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನವನು; ಇಲ್ಲಿ ರಾಮೇಶ್ವರ ದೇವಾಲ­ಯವಿದೆ; ಇವನ ವಚನಗಳ ಅಂಕಿತ ರಾಮನಾಥ. ಇವನಂತೆ ಇವನ ಪತ್ನಿ ದುಗ್ಗಳೆ ವಚನಕಾರ್ತಿ. ಇವನು ಆರನೇ ವಿಕ್ರಮಾದಿತ್ಯನ ಮೊಮ್ಮಗ ಎರಡನೇ ಜಗದೇಕಮಲ್ಲನ (1139–1149) ಕಾಲದಲ್ಲಿದ್ದವನು. ಬಸವಣ್ಣನವರ ಹಿರಿಯ ಸಮಕಾಲೀನ.

ಇವನ ವಚನಗಳಲ್ಲಿ ಆ ಕಾಲದ ಸಾಮಾಜಿಕ ಸಂಗತಿಗಳ ಪ್ರಸ್ತಾಪ ಹೇರಳವಾಗಿ ಬಂದಿದೆ. ಇವನು ಶ್ರೇಷ್ಠ ಚಿಂತಕ, ಅನುಭಾವಿ, ವಿಡಂಬನಕಾರ, ವಚನಗಳ ಕಾವ್ಯಮೌಲ್ಯ ವಿಶಿಷ್ಟವಾಗಿದೆ. ಶಿವನು ಇವನ ಮನಸ್ಸನ್ನು ಒರೆಹಚ್ಚಿ ನೋಡಿದ ಪ್ರಸಂಗ ಬಸವಣ್ಣನವರ ವಚನಗಳಲ್ಲಿ ಬಂದಿದೆ. ಅವರ ವಚನಗಳಲ್ಲಿ ಸುಮಾರು 14 ಕಡೆ ಜೇಡರ ದಾಸಿಮಯ್ಯನ ಉಲ್ಲೇಖ ಬಂದಿದೆ. ಇವನು ಶಿವನಿಂದ ತವನಿಧಿಯನ್ನು ಪಡೆದಿದ್ದನೆಂದೂ, ಇವನ ಅಹಮ್ಮನ್ನು ಇಲ್ಲವಾಗಿಸಲು ಶಂಕರದಾಸಿಮಯ್ಯನು ತವನಿಧಿಯನ್ನು ಮಾಯ ಮಾಡಿದ ಘಟನೆ ಹರಿಹರನ ಶಂಕರದಾಸಿ­ಮಯ್ಯನ ರಗಳೆಯಲ್ಲಿ ಬಂದಿದೆ.

ಜೇಡರ ದಾಸಿಮಯ್ಯನ ಒಂದು ವಚನದಲ್ಲಿ (ಸಂಕೀವ ಸಂ. 2, ವ. 29, 2001) ನೇಯ್ಗೆಯ ಸಾಧನಗಳ ವಿವರ ಬಂದಿದೆ. ಉದಾ.ಗೆ ಉಂಕೆ=ನೂಲಿನ ಹಾಸು; ಅಣಿ=ಅಣಿದಬ್ಬೆ, ನೇಯ್ಗೆಯ ಪರಿಕರ; ಲಾಳಿ=ನೇಯ್ಗೆಯಲ್ಲಿ ಬಳಸುವ ಒಂದು ಉಪಕರಣ. ಮಗ್ಗದಲ್ಲಿ ಹೊಕ್ಕಿನ ದಾರವನ್ನು ಸೇರಿಸುವ ಸಾಧನ; ಕಂಡಿಕೆ=ಲಾಳಿಯಲ್ಲಿ ಸೇರಿಸುವ ನೂಲಿನ ಉಂಡೆ; ಸೀರೆ=ವಸ್ತ್ರ. ಈ ವೃತ್ತಿ ಪಾರಿಭಾಷಿಕ ಪದಗಳಿಂದ ಇವನು ನೇಯ್ಗೆಯವನು/ಮಗ್ಗದವನು/ ದೇವಾಂಗ ಸಮುದಾಯಕ್ಕೆ ಸೇರಿದವನೆಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ದೇವಾಂಗ ಸಮುದಾಯಕ್ಕೆ ಸೇರದ ಕೇವಲ ಮತಪ್ರಚಾರಕ್ಕೆ, ಊರೂರು ಅಲೆಯುತ್ತಿದ್ದ ಸನ್ಯಾಸಿ ದೇವರ ದಾಸಿಮಯ್ಯನನ್ನು ಸಂಸಾರಸ್ಥ­ನಾಗಿದ್ದ ದೇವಾಂಗ (=ಮಗ್ಗ (ಅ) ನೇಯ್ಗೆ ಕಾಯಕದವನಾದ (ಉತ್ತರ ಕರ್ನಾಟಕದಲ್ಲಿ ಇವರನ್ನು ಸಾಲೇರು ಎಂದು ಕರೆಯುವರು).

ಬಸವಣ್ಣನವರ ಒಂದು ವಚನದಲ್ಲಿ (589) ‘ಹಾಸನಿಕ್ಕಿ ಸಾಲಿಗನಾದ’ ಅಂದರೆ, ವಸ್ತ್ರವನ್ನು ನೇಯುವ ಕಾಯಕದಿಂದ ಸಾಲಿಗ (ಸಾಲೇರು) ಜಾತಿಯನ್ನು ಹೊಂದಿದ ಎಂದು ಬಂದಿದೆ. ದೇವರ ದಾಸಿಮಯ್ಯ/ಜೇಡರ ದಾಸಿಮಯ್ಯ ಒಬ್ಬರೇ ಆದರೆ, ಇಬ್ಬರೂ ಬೇರೆ ಬೇರೆ ಕಾಲಮಾನದಲ್ಲಿದ್ದವರು; ವೃತ್ತಿಯಲ್ಲಿ ಬೇರೆ ಬೇರೆಯವರು; ಒಬ್ಬ ಸನ್ಯಾಸಿ, ಇನ್ನೊಬ್ಬ ಸಂಸಾರಿ ಎಂಬುದನ್ನು ಹೇಗೆ ಸಮರ್ಥಿಸುವುದು? ದೇವರ ದಾಸಿಮಯ್ಯನ ಪತ್ನಿ ದುಗ್ಗಳೆ ಎಂದು ಹೇಳುವುದಾದರೆ ಇದಕ್ಕಿಂತ ಅಪಚಾರ ಬೇರೊಂದಿದೆಯೆ? ಸಂಶೋಧಕನದು ಈಗಾಗಲೇ ತೋಡಿರುವ ಗುಂಡಿಯನ್ನು ಮುಚ್ಚುವುದು; ಗುಂಡಿ ತೋಡುವುದೇ ಕೆಲಸವಾದರೆ ಹೇಗೆ? ಮುಚ್ಚುತ್ತಾ ಹೋಗುವುದೇ ಕೆಲಸವಾದರೆ ಇದಕ್ಕೆ ಕೊನೆಯೆಲ್ಲಿ?

–ಎಸ್‌. ವಿದ್ಯಾಶಂಕರ, ಬೆಂಗಳೂರು

ದೇವರ ದಾಸಿಮಯ್ಯ ಒಬ್ಬ ಶ್ರೇಷ್ಠ ಶೈವ ಗುರು – ಆದರೆ ವಚನಕಾರನಲ್ಲ. ಜೇಡರ ದಾಸಿಮಯ್ಯ ಒಬ್ಬ ಶ್ರೇಷ್ಠ ಶಿವಶರಣ – ವಚನಕಾರ: ಇಷ್ಟು ಸ್ಪಷ್ಟಾತಿ ಸ್ಪಷ್ಟ.

ಹದಿಮೂರನೇ ಶತಮಾನದ ‘ತೆಲುಗು ಬಸವ ಪುರಾಣಮು’, ಅದರ ಅನುವಾದ ಕನ್ನಡ ಬಸವ ಪುರಾಣ ಇವೇ ಮೊದಲಾದ ಪ್ರಾಚೀನ ಆಕರಗಳಲ್ಲಿ ಬಂದಿರುವ ಮಾಹಿತಿ ಇದು. ಪೊಟ್ಟಲಕೆರೆಯ (ಈಗಿನ ಆಂಧ್ರದ ಸಂಗಾರೆಡ್ಡಿ ಜಿಲ್ಲೆಯ ಪಟಾಣ್‌ ಚೆರುವು) ಚಾಳುಕ್ಯ ಚಕ್ರವರ್ತಿ ಜಯಸಿಂಹನ ರಾಣಿ ಸುಗ್ಗಲೆಗೆ ಶೈವೋಪದೇಶವನ್ನು ನೀಡಿದವನು ‘ದೇವರ ದಾಸಿಮಯ್ಯ’. ಸುಗ್ಗಲೆಯ ಗಂಡ ಇಮ್ಮಡಿ ಜಯಸಿಂಹನ ಕಾಲ ಕ್ರಿ. ಶ. 1015–44. ದೇವರ ದಾಸಿಮಯ್ಯನ ಬರಹ ಯಾವುದೇ ದೊರಕಿಲ್ಲ – ಅವನು ಏನಾದರೂ ಬರೆದಿದ್ದನೇ ತಿಳಿಯದು. ಪೊಟ್ಟಲಕೆರೆಯಿಂದ ಆಳುತ್ತಿದ್ದು ಜಯಸಿಂಹನ ಶಾಸನಗಳನ್ನು ನಾನು ಓದಿದ್ದೇನೆ; ಅದು ದೊಡ್ಡ ಶೈವ ಕೇಂದ್ರವಾಗಿತ್ತು. ದೇವರ ದಾಸಿಮಯ್ಯನ ಕಾಲ ಕ್ರಿ.ಶ. 1040 ಎಂಬುದು ಖಚಿತ.

‘ಜೇಡರ’ ದಾಸಿಮಯ್ಯ ಸ್ಪಷ್ಟವಾಗಿ ಜೇಡ ಅಥವಾ ನೇಕಾರ ಜಾತಿಯವನು. ಅವನ ವಚನಗಳಲ್ಲಿ ನೇಕಾರಿಕೆಯ ಪರಿಭಾಷೆ ಬಂದಿವೆ. ಅವನು ಒಂದು ವಚನದಲ್ಲಿ ತನ್ನ ಪತ್ನಿ ದುಗ್ಗಳೆಯ ಹೆಸರನ್ನು ಸ್ಮರಿಸಿದ್ದಾನೆ (‘ಬಂದುದನು ಅರಿದು ಬಳಸುವಳು ....ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥಾ’ ವ. 829).

ಹರಿಹರನ ಶಂಕರ ದಾಸಿಮಯ್ಯನ ರಗಳೆಯಲ್ಲಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆಯರು ಸತಿ ಪತಿಯರೆಂದೇ ಉಲ್ಲೇಖಿತರಾಗಿದ್ದಾರೆ. ಅವರಿಬ್ಬರದೂ ಅತ್ಯಂತ ಸುಖಮಯ ಸಂಸಾರವಾಗಿತ್ತು. ದುಗ್ಗಳೆ ತನ್ನ ವಚನಗಳಲ್ಲಿ ಬಸವ, ಚನ್ನಬಸವ, ಅಲ್ಲಮರನ್ನು ಸ್ತೋತ್ರ ಮಾಡಿದ್ದಾಳೆ (‘ಭಕ್ತನಾದಡೆ ಬಸವಣ್ಣ ನಂತಾಗಬೇಕು. ಜಂಗಮನಾದರೆ ಪ್ರಭುದೇವರಂತಾ­ಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು’) ಎಂದರೆ ದುಗ್ಗಳೆ, ಜೇಡರ ದಾಸಿಮಯ್ಯರು ಬಸವಣ್ಣ, ಅಲ್ಲಮ ಇವರ ಸಮಕಾಲೀನರು: ಅವರ ಕಾಲ ಸ್ಪಷ್ಟವಾಗಿ ಕ್ರಿ.ಶ. 1160: ಬಸವಣ್ಣ ಆ ಕಾಲದಲ್ಲಿ ಆಳಿದ ಬಿಜ್ಜಳನ ಭಂಡಾರಿ.

ಚಿತ್ರ ಸ್ಪಷ್ಟಾತಿ ಸ್ಪಷ್ಟ: ದೇವರ ದಾಸಿಮಯ್ಯನ ಕಾಲ ಕ್ರಿ. ಶ. 1040; ಜೇಡರ ದಾಸಿಮಯ್ಯನ ಕಾಲ ಕ್ರಿ. ಶ. 1160. ಇವರಿಬ್ಬರೂ ಬೇರೆ ಬೇರೆ ಎಂಬುದನ್ನು (ದಿ.) ಎಚ್‌. ದೇವೀರಪ್ಪನವರು ಸ್ಪಷ್ಟಪಡಿಸಿದ್ದಾರೆ. ಹಸ್ತಪ್ರತಿಗಳಲ್ಲಿ ‘ಜೇಡರ ದಾಸಿಮಯ್ಯನ ವಚನಗಳು’ ಎಂದು ಮಾತ್ರ ಇದೆ. ಶ್ರೇಷ್ಠ ವಿದ್ವಾಂಸರಾದ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ, ಪ್ರೊ. ಜಿ. ಎಸ್‌. ಸಿದ್ಧಲಿಂಗಯ್ಯ, ಡಾ. ಎಂ. ಎಂ. ಕಲಬುರ್ಗಿ, ಡಾ. ಎಸ್‌. ಎಂ. ವೃಷಭೇಂದ್ರಸ್ವಾಮಿ, ಡಾ. ಎನ್. ವಿದ್ಯಾಶಂಕರ್‌ ಇವರ ಜೊತೆ ದೂರವಾಣಿಯಲ್ಲಿ ಮಾತನಾಡಿದಾಗ ಮೇಲಿನ ಅಭಿಪ್ರಾಯವನ್ನೇ ಅವರು ಬೆಂಬಲಿಸಿದ್ದಾರೆ.

ನಾನು ಹಿಂದೆ (1965–66) ದೇವರ ದಾಸಿಮಯ್ಯನೇ ವಚನಕಾರ ಎಂದು ಭಾವಿಸಿದ್ದೆ; ಅದಕ್ಕೆ ಕಾರಣ ಆತನ ಹೆಸರಿನಲ್ಲಿ ಫ.ಗು. ಹಳಿಕಟ್ಟಿಯವರು ‘ರಾಮನಾಥ’ ಅಂಕಿತದ ವಚನಗಳನ್ನು ಪ್ರಕಟಿಸಿದ್ದು. ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬುದು ಖಚಿತವಾದ ಮೇಲೆ ನನ್ನ ಹಿಂದಿನ ಅಭಿಪ್ರಾಯವನ್ನು ತೆರೆದ ಮನಸ್ಸಿನಿಂದ ಬದಲಾಯಿಸಿಕೊಂಡೆ.

ಯು. ಕೆ. ಮಹಾಬಲೇಶ್ವರಪ್ಪನವರು (ಪ್ರ. ವಾ. ಮಾ 19) ನಾನು ದೇವರ ದಾಸಿಮಯ್ಯನವರಿಗೆ ಅಪಚಾರ ಮಾಡಿದ್ದೇನೆ ಎಂದು ನಿರಾಧಾರ ಪೂರ್ವಕ ಟೀಕೆ ಮಾಡಿದ್ದಾರೆ. ಅವರು ತಮ್ಮ ಪತ್ರದಲ್ಲಿ ಯಾವುದೇ ‘ಮೂಲಭೂತ’ ಆಧಾರವನ್ನು ಕೊಟ್ಟಿಲ್ಲ. ದೇವರ ದಾಸಿಮಯ್ಯ ಒಬ್ಬ ಶ್ರೇಷ್ಠ ಶೈವ ಗುರು – ಆದರೆ ವಚನಕಾರನಲ್ಲ. ಜೇಡರ ದಾಸಿಮಯ್ಯ ಒಬ್ಬ ಶ್ರೇಷ್ಠ ಶಿವಶರಣ – ವಚನಕಾರ: ಇಷ್ಟು ಸ್ಪಷ್ಟಾತಿ ಸ್ಪಷ್ಟ. ಈ ಬಗ್ಗೆ ಅನುಮಾನವೇ ಇಲ್ಲ...

–ಡಾ. ಎಂ. ಚಿದಾನಂದಮೂರ್ತಿ, ಬೆಂಗಳೂರು

Previous ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ Next