Previous ಸ್ವರವಚನ ಪ್ರಾಕಾರ ಬಸವೋತ್ತರ ಕಾಲದ ವಚನ ಸಂಗೀತ Next

ಲಿಂಗಾಯತ: ಸಂಗೀತಜ್ಞ ವಚನಕಾರರ ಪರಂಪರೆ

*

ಸಂಗೀತಜ್ಞ ವಚನಕಾರರ ಪರಂಪರೆ.

ಸಕಲೇಶ ಮಾದರಸನು ವೀಣಾ ವಾದನದಲ್ಲಿ ಪಾರಂಗತನಾಗಿದ್ದ ಬಗೆಗೆ, ಅಲ್ಲಮಪ್ರಭುವು ಮದ್ದಳೆ ವಾದನದಲ್ಲಿ ನಿಷ್ಣಾತನೆನಿಸಿದ್ದ ಬಗೆಗೆ, ಬಾಹೂರು ಬ್ರಹ್ಮಯ್ಯನ ತಾಳದ ಬಗ್ಗೆ, ಬಸವಣ್ಣನವರು ನಾನಾ ಶಾಸ್ತ್ರೀಯ ರಾಗಗಳಲ್ಲಿ ಹಾಡುತ್ತಿದ್ದ ಬಗೆಗೆ, ಕಿನ್ನರಿ ಬೊಮ್ಮಯ್ಯ, ಕಂಕರಿ ಕಕ್ಕಯ್ಯ, ಬಹುರೂಪಿ ಚೌಡಯ್ಯ, ಕುಂಬಾರ ಗುಂಡಯ್ಯ, ರಾಗದ ಸಂಕಣ್ಣ ಇವರುಗಳು ತಮ್ಮ ತಮ್ಮ ಕಲೆಯಲ್ಲಿ ಪರಿಣತಿ ಗಳಿಸಿದ್ದ ಬಗೆಗೆ, ನೆರೆದ ಶಿವಗಣಗಳನ್ನು ರುದ್ರವೀಣೆಯಿಂದ ರಂಜಿಸುತ್ತಿದ್ದ ಗಂಗಾಂಬಿಕೆಯ ಬಗ್ಗೆ ನಾನಾ ಮೂಲಗಳಿಂದ ತಿಳಿದು ಬರುತ್ತದೆ. ಗಾಯನ-ವಾದನಗಳಂತಹ ಹಲವಾರು ಪ್ರಸಂಗಗಳು ಶರಣರ ಜೀವನ ಚರಿತ್ರೆಯಲ್ಲಿ ಒಳಗೊಂಡಿವೆ.

ಸಿದ್ಧಬುದ್ಧಯ್ಯ, ಸಕಲೇಶ ಮಾದರಸ, ಕಿನ್ನರಿ ಬೊಮ್ಮಯ್ಯ, ಭದ್ರಗಾಯಕ ಮುಂತಾದವರು ತಮ್ಮ ನಾದಸಿದ್ಧಿಯಿಂದಲೇ ಸಾಕ್ಷಾತ್ಕಾರ ಪಡೆದುಕೊಂಡರೆಂದು ಪ್ರತೀತಿ.

ಪಾಲ್ಕುರಿಕೆ ಸೋಮನಾಥನ ಕೃತಿಗಳಲ್ಲಿ ಕಾಣಿಸಿದ ಹಾಗೆ, ಅಲ್ಲಮಪ್ರಭು, ಬಸವಣ್ಣ, ಸಕಲೇಶ ಮಾದರಸ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಸಿದ್ಧರಾಮ, ಹಾವಿನಹಾಳ ಕಲ್ಲಯ್ಯ, ದಾಸಿಮಯ್ಯ, ಕಕ್ಕಯ್ಯ, ಗಜೇಶ ಮಸಣಯ್ಯ, ಚಿಕ್ಕಯ್ಯ, ಮಾದಿರಾಜಯ್ಯ ಮುಂತಾದವರು ಪುರಾತನರ ಗೀತೆಗಳನ್ನು ನಿಖರವಾಗಿ ಹಾಡಬಲ್ಲವರಾಗಿದ್ದರು ಎಂದು ತಿಳಿಯುತ್ತದೆ.

ಬಸವಣ್ಣನವರಿಗಿಂತಲೂ ಹಿಂದಿನ ಕಕ್ಕಯ್ಯ, ದಾಸಿಮಯ್ಯ, ಶಂಕರದಾಸಯ್ಯ, ಕೊಂಡಗುಳಿ ಕೇಶಿರಾಜಯ್ಯ ಮುಂತಾದವರು ಹಾಡುಗಳನ್ನು (ಗೀತ) ಬರೆದಿದ್ದರೆಂದೂ, ಇವುಗಳನ್ನು ಶಿವಾನುಭವ ಗೋಷ್ಠಿ, ಸತ್ಸಂಗಗಳಲ್ಲಿ ಪ್ರಸ್ತುತ ಪಡಿಸಲಾಗುತ್ತಿತ್ತೆಂದೂ ತಿಳಿದುಬರುತ್ತದೆ. ಇವುಗಳನ್ನು ವಚನಗೀತಗಳೆಂದು ಸಹ ಕರೆದಿರುವುದುಂಟು.

ಹರಿಹರನು ಬಸವಣ್ಣನವರು ಯಾವಾಗಲೂ ಹಾಡಿಕೊಳ್ಳುತ್ತಿದ್ದ ಕೆಳಗೆ ಕೊಡಲಾದ ಒಂದು ಗೀತ (ವಚನ) ವನ್ನು ಉಲ್ಲೇಖಿಸುತ್ತಾನೆ.

ಅಂಜದಿರಂದಿರ್ ದೇವ, ಪರೀಕ್ಷೆಗೆ ತೆರಹಿಲ್ಲಂ,
ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯ
ಓಡದಿರೋಡದಿರ್...

ಒಟ್ಟಿನಲ್ಲಿ ಹೇಳುವುದಾದರೆ, ಈ ಬಗೆಯ ಗೇಯ ರಚನೆಗಳನ್ನು ಬಸವಯುಗದ ವಚನಕಾರರು ಸ್ವರವಚನ ಎಂದೇ ಕರೆದಿದ್ದಾರೆ ಎಂದು ತಿಳಿಯಬಾರದು. ಇವುಗಳನ್ನು ಅವರೆಲ್ಲ ಗೀತ, ಪದ, ಹಾಡು, ಉಗಾಭೋಗ ಮುಂತಾದ ಹೆಸರುಗಳಿಂದ ಕರೆದಿದ್ದಾರೆ. ಈ ವಚನಗಳನ್ನು ಗಮನಿಸಿದಲ್ಲಿ, ಇವು ತಾಳಪ್ರಧಾನವಾಗಿರದೆ, ಉಗಾಭೋಗಗಳಂತೆ ರಾಗಪ್ರಧಾನ ರಚನೆಗಳು ಎಂಬುದು ತಿಳಿಯುತ್ತದೆ.

ಬಸವಯುಗದ ಪ್ರಮುಖ ಸ್ವರವಚನಕಾರರು


ಕೆಳಗಿನ ಪಟ್ಟಿಯಲ್ಲಿ ಇದುವರೆಗೆ ಕಂಡುಬಂದ ಸ್ವರವಚನಗಳ ಪ್ರಾಕಾರಕ್ಕೆ ಸೇರಿದ ರಚನೆಗಳನ್ನು ಮಾಡಿದ ಇತರೆ ಶರಣರನ್ನು ನಮೂದಿಸಲಾಗಿದೆ.
ಕಂಸದಲ್ಲಿ ಕೊಡಲಾದದ್ದು ಲಭ್ಯವಿರುವ ಅವರ ಸ್ವರವಚನಗಳ ಸಂಖ್ಯೆ.

ಬಸವೇಶ್ವರ (24 ವಚನಗಳು)
ಅಲ್ಲಮಪ್ರಭು (39 ವಚನಗಳು)
ಅಕ್ಕಮಹಾದೇವಿ (33 ವಚನಗಳು)
ಚೆನ್ನಬಸವಣ್ಣ (37 ವಚನಗಳು)
ಸಿದ್ಧರಾಮ (6 ವಚನಗಳು)
ಆದಯ್ಯ (21 ವಚನಗಳು)
ಸಕಲೇಶ ಮಾದರಸ (9 ವಚನಗಳು)
ಅಂಬಿಗರ ಚೌಡಯ್ಯ (4 ವಚನಗಳು)
ಅಮ್ಮುಗೆಯ ದೇವಯ್ಯ (4 ವಚನಗಳು)
ಅಮ್ಮುಗೆಯ ರಾಯಮ್ಮ (1 ವಚನ)
ಆಯ್ದಕ್ಕಿ ಮಾರಯ್ಯ - ಲಕ್ಕಮ್ಮ (2 ವಚನಗಳು)
ಉಳಿಯುಮೇಶ್ವರ ಚಿಕ್ಕಯ್ಯ (10 ವಚನಗಳು)
ಏಕಾಂತದ ರಾಮಯ್ಯ (1 ವಚನ)
ಏಲೇಶ್ವರದ ಕೇತಯ್ಯ (1 ವಚನ)
ಕಲಕೇತ ಬೊಮ್ಮಯ್ಯ (1 ವಚನ)
ಕಿನ್ನರಿ ಬೊಮ್ಮಯ್ಯ (ಸಕಲ ವಚನಗಳು)
ನೀಲಾಂಬಿಕೆ (13 ವಚನಗಳು)
ಢಕ್ಕೆಯ ಮಾರಯ್ಯ /ಢಕ್ಕೆಯ ಬೊಮ್ಮಣ್ಣ? (11 ವಚನಗಳು)
ಗಜೇಶ ಮಸಣಯ್ಯ (65 ವಚನಗಳು)
ಘಟ್ಟಿವಾಳಯ್ಯ (ಅನಿರ್ದಿಷ್ಟ)
ನಿಜಲಿಂಗ ಚಿಕ್ಕಯ್ಯ (ಅನಿರ್ದಿಷ್ಟ; 108 ರಾಗಗಳಲ್ಲಿ ವಚನ ಹಾಡುತ್ತಿದ್ದನೆಂದು ಪ್ರತೀತಿ)
ಬಹುರೂಪಿ ಚೌಡಯ್ಯ (5 ವಚನಗಳು)
ಹಾವಿನಹಾಳ ಕಲ್ಲಯ್ಯ (11 ವಚನಗಳು)
ನಿಜಗುಣ ಯೋಗಿ (8 ವಚನಗಳು; ಇವರನ್ನು 15 ನೇ ಶತಮಾನದ ನಿಜಗುಣ ಶಿವಯೋಗಿ ಎಂದು ತಪ್ಪು ಭಾವಿಸಬಾರದು)
ಸೊಡ್ಡಳ ಬಾಚರಸ (3 ವಚನಗಳು)

ನಮಗೆ ಸ್ವರಪ್ರಸ್ತಾರದ ಜೊತೆ ಇಂದು ಲಭ್ಯವಿರುವ ಸ್ವರವಚನಗಳ ಪೈಕಿ ಹೆಚ್ಚಿನಪಾಲು 12 ನೇ ಶತಮಾನದ ಬಸವಯುಗದ ಆನಂತರ ಕಂಡುಬಂದ ರಚನೆಗಳು. ಇವುಗಳನ್ನು ರಚಿಸಿದ ಶರಣರು ಹೆಚ್ಚಿನಂಶ ಸಂಗೀತವನ್ನು ಬಲ್ಲವರಾಗಿದ್ದರು. ಬಸವಯುಗದ ವಚನಕಾರರಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡದ, ದೇಸಿ ಸಂಗೀತದ ನೆಲೆಗಳಿಂದ ಬಂದಂತಹ ವಚನಕಾರರೇ ಹೆಚ್ಚು. ಅದಲ್ಲದೆ, ಬಸವಣ್ಣನವರ ಕಾಲದ ವಚನಕಾರರಿಗೆ ವಚನಗಳ ಗೇಯ ಗುಣಕ್ಕಿಂತ ಸಿದ್ಧಾಂತ ಮಂಡನೆಯೇ ಅತ್ಯಂತ ಪ್ರಧಾನ ಆದ್ಯತೆಯಾಗಿದ್ದರಿಂದ ಇವರ ವಚನಗಳಲ್ಲಿ ಸಂಗೀತದ ಅಂಶವು ಅಷ್ಟಾಗಿ ಕಾಣಸಿಗದು. ತಮಗೆ ಇದ್ದ ಕನಿಷ್ಠಮಟ್ಟದ ಸಂಗೀತ ಜ್ಞಾನವನ್ನು ಬಳಸಿಕೊಂಡು ಸಹ ಬಸವಯುಗದ ಹಲವಾರು ವಚನಕಾರರು ಸ್ವರವಚನಗಳಿಗೆ ಸ್ಫೂರ್ತಿ ನೀಡುವಂತಹ ಕೆಲವು ಗೇಯ ರಚನೆಗಳ ಮೂಲಮಾದರಿಗಳನ್ನು ರಚಿಸಿ, ಮುಂದಿನ ತಲೆಮಾರಿನ ವಾಗ್ಗೇಯಕಾರರಿಗೆ ಒಂದು ಮಾರ್ಗವನ್ನು ತೆರೆದು ಹೋದರೆನ್ನಬಹುದು.

ಆದಾಗ್ಯೂ, ಶರಣರ ವಚನಗಳನ್ನು ಹಾಡುವ ಪದ್ಧತಿಯೊಂದು ಏಕೆ ಹುಟ್ಟಿಬರಲಿಲ್ಲ? ಎಂಬುದಕ್ಕೆ ಕೆಳಕಂಡ ಕಾರಣಗಳನ್ನು ಕೊಡಬಹುದು.

1. ಕರ್ನಾಟಕ ಸಂಗೀತ ಎಂಬ ಪರಿಕಲ್ಪನೆಯು ವಿಜಯನಗರ ಸಾಮ್ರಾಜ್ಯ (ಅಥವಾ ಸರಿಯಾಗಿ ಹೇಳಬೇಕೆಂದರೆ ಕರ್ನಾಟಕ ಸಾಮ್ರಾಜ್ಯ) ದಲ್ಲಿ ಹುಟ್ಟಿ ಬೆಳೆದು, ಎಲ್ಲೆಡೆಯೂ ಪಸರಿಸಿದ ಒಂದು ಸಂಗೀತ ಪ್ರಾಕಾರ. ವಚನಕಾರರ ಕಾಲವಾದ 12 ನೇ ಶತಮಾನದಲ್ಲಿ ಇದಿನ್ನೂ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ವಿಜಯನಗರದ ರಾಜ್ಯವನ್ನು ಕರ್ನಾಟಕ ಸಾಮ್ರಾಜ್ಯವೆಂದು ಕರೆಯುತ್ತಿದ್ದ ಕಾರಣದಿಂದಲೇ, ಇಲ್ಲಿನ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಕರೆಯಲಾಗಿದೆ. ವಿಜಯನಗರದ ಕಾಲಮಾನಕ್ಕಿಂತ ಹಿಂದಿನ ಸಂಗೀತವು ದೇಸಿ ಪ್ರಕಾರಕ್ಕೆ ಸೇರಿದ್ದು, ಒಂದು ಬಗೆಯ ಮಾರ್ಗ-ದೇಸಿಯ ಸಮನ್ವಯ ಸ್ಥಿತಿಯಲ್ಲಿ ಪ್ರಯೋಗಗೊಳ್ಳುತ್ತಿತ್ತು.
ಆದ ಕಾರಣ, ಇಂದಿನ ಶುದ್ಧ ಮಾರ್ಗ (ಶಾಸ್ತ್ರೀಯ) ಚೌಕಟ್ಟಿನಲ್ಲಿ ಅವುಗಳನ್ನು ಪರಿಪೂರ್ಣವಾಗಿ ಕೂರಿಸಲು ಬರುವುದಿಲ್ಲ.

2. ವಚನಗಳೇಕೆ ಸಂಗೀತಮಯ ಎನಿಸುವುದಿಲ್ಲ? ಎಂಬುದಕ್ಕೆ ಅವುಗಳ ಹುಟ್ಟಿಗೆ ಕಾರಣೀಭೂತವಾದ ಅಂಶಗಳನ್ನು ಮತ್ತು ಅವುಗಳು ಪ್ರತಿಪಾದಿಸುವ ತಾತ್ವಿಕ ನೆಲೆಗಟ್ಟಿನ ಮೇಲೆ ನಾವು ಪರಿಶೀಲಿಸಬೇಕು.

3. ವಚನಕಾರರ ತಾತ್ವಿಕ ತಳಹದಿಯೂ ಸಹ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶರಣರಿಗೆಲ್ಲ ಇಷ್ಟಲಿಂಗ ಸಾಧನೆ ಎಂಬ ಅಧ್ಯಾತ್ಮ ದೀಕ್ಷೆಯನ್ನು ನೀಡಲಾಗಿತ್ತು, ಇದೊಂದು ಆಗಮಪ್ರೋಕ್ತವಾದ ಸಾಧನಾಮಾರ್ಗವಾಗಿದ್ದು, ಎಲ್ಲಾ ತಾಂತ್ರಿಕ ಸಾಧನೆಗಳಂತೆಯೇ ಇಷ್ಟಲಿಂಗಾನುಸಂಧಾನವು ಸಹ ಅದ್ವೈತ ಮೂಲವಾದುದು (ಇದು ಶಾಂಕರ ಅದ್ವೈತಕ್ಕಿಂತ ಕೊಂಚ ಭಿನ್ನವಾದುದು). ಈಶ್ವರನಲ್ಲಿ ಬರಿದೇ ಭಕ್ತಿಯನ್ನು ಮಾಡುವುದು ಇಲ್ಲಿ ಆದ್ಯತೆಯ ವಿಷಯವಲ್ಲ. ಸಾಧನೆಯ ಮೊದಲ ಹಂತದಲ್ಲಿ ಮಾತ್ರವೇ ಭಾವದ ಉತ್ಕಟತೆಗಾಗಿ, ಅವನನ್ನು ಹೊಂದುವ ಮುನ್ನ ಅಗತ್ಯವಾದ ಅನುಗ್ರಹಕ್ಕಾಗಿ ಭಕ್ತಿಯು ಅವಶ್ಯವಾಗಿದೆ. ಇಲ್ಲಿ ಪ್ರಭು ಮತ್ತು ಕಿಂಕರನೆಂಬ ಶಾಶ್ವತ ಗಡಿರೇಖೆಗಳಿಲ್ಲ. ಹಾಗಾಗಿ, ಸಾಧನೆಯ ಉದ್ದಕ್ಕೂ ಭಕ್ತಿ ಮತ್ತು ಸಮರ್ಪಣೆ ಮಾತ್ರವೇ ಬೇಕಾಗಿರುವುದಿಲ್ಲ. ಲಿಂಗಾಯತರಲ್ಲಿ ಸಾಕ್ಷಾತ್ಕಾರದ ಕೇಂದ್ರಮಾರ್ಗವು ಭಕ್ತಿಯಲ್ಲ. ಅಲ್ಲದೇ, ಲಿಂಗಾಯತರ ಆರಾಧ್ಯನಾದ ಶಿವನು, ಸ್ಮಶಾನವಾಸಿಯೂ, ಭೈರವರೂಪಿಯೂ ಆದಂತಹ, ಒರಟನೂ, ರೂಕ್ಷನೂ ಆದಂತಹ, ನಾಗರಿಕ ಸಂಸ್ಕೃತಿಯ ನಾಜೂಕುಗಳಿಗೆ ಹೊರತಾದಂತಹ, ಯೋಗಿ ವಿರಕ್ತ. ಇವನಿಗೆ ಲೋಕದ ನಂಟನ್ನು ಮತ್ತಷ್ಟು ಬಿಗಿಗೊಳಿಸುವ ಸಂಗೀತ, ನೃತ್ಯಗಳು, ಕಲಾಪ್ರಕಾರಗಳಲ್ಲಿ ಅಷ್ಟಾಗಿ ಆಸ್ಥೆಯಿಲ್ಲ. ಇಂತಹಾ ಪ್ರಾಪಂಚಿಕವೂ, ಮಿತಿಗೊಳಪಟ್ಟ ಆನಂದವನ್ನು ಹೊಂದಿರುವಂತವೂ ಆದ ಲಲಿತ ಕಲೆಗಳನ್ನು ಅವನು ಒಂದು ಸಾಧನಮಾರ್ಗವಾಗಿ/ಯೋಗದ ಒಂದು ಸಾಧನೆಯಾಗಿ ನೋಡಬಲ್ಲನೇ ಹೊರತು, ರಂಜನೆಯ, ಕ್ಷಣಿಕ ಜೀವನಾನಂದದ ಮೂಲವನ್ನಾಗಿ ಅಲ್ಲ. ಅವನು ನಾದವನ್ನು ಯೋಗ ಮಾಡಿಕೊಂಡವನು. ನಾಟ್ಯವನ್ನು ಲೀಲೆಯಾಗಿ ಆಡುವವನು. ಜನಪ್ರಿಯ ಸಿನಿಮಾ ಲಘು ಸಂಗೀತವನ್ನು ಕೇಳಿ ಆಸ್ವಾದಿಸುವುದೇ ಬೇರೆ, ನಾದೋಪಾಸನೆಯ ಧ್ರುಪದ್ ಕೇಳುವುದೇ ಬೇರೆ. ಶಿವನದ್ದು ಈ ಮಾರ್ಗ.

ಅವನು ಹುಡುಕುತ್ತಿರುವುದು ಜೀವನದ/ಜೀವದ ಆಚೆಗಿನ ಸಂಗತಿ..... ಶಾಶ್ವತ ಆನಂದದ ಸ್ಥಿತಿಯ ಧ್ಯಾನದಲ್ಲಿ ಅವನು ನಿರತನು. ಶಿವನು ನಮ್ಮ ಸಂಸ್ಕರಿತವಾದ, ನಾಗರಿಕ ಸ್ವರೂಪಕ್ಕಿಂತ ನಮ್ಮ ಪ್ರಾಕೃತ ಸ್ವಭಾವವನ್ನು ಪ್ರತಿನಿಧಿಸುವವನು. ಹಾಗಾಗಿ, ಪ್ರಾಕೃತರೆನಿಸಿದ ಎಲ್ಲಾ ಶ್ರಮಿಕ/ಕೆಳವರ್ಗದ, ವಿದ್ವಾಂಸರಲ್ಲದ, ಸುಶಿಕ್ಷಿತರಲ್ಲದ ವಚನಕಾರರಿಗೆ ಸರಳನೂ, ಸುಲಭನೂ ಆದಂತಹ ಮುಕ್ಕಣ್ಣನೇ ಸೂಕ್ತವಾಗಿ ಸಮೀಕೃತನಾಗಬಲ್ಲ ದೈವ. ಹಾಗಾಗಿ, ಇವನನ್ನು ಒಲಿಸಲಿಕ್ಕೆ ಸಾತತ್ಯ ಮನೋಬಲ ಹೊಂದಿದ, ಯೋಗದ ಹಠಮಾರ್ಗವೇ ಸೂಕ್ತ. ಇದು ನಮ್ಮ ಪ್ರಾಕೃತಿಕ ಸ್ವಭಾವವನ್ನು ಮೀರುವ ಕ್ರಿಯೆಯಾಗಿದ್ದು, ಇದರಲ್ಲಿ ರಮ್ಯಸಂಗೀತದ ನಾಜೂಕು ಸಂಗತಿಗಳನ್ನು ನಿರೀಕ್ಷಿಸಲು ಬಾರದು. ಆದರೆ ಶುದ್ಧ ನಾದದ ಸಾಧನೆಯನ್ನು ಮಾತ್ರ ಕೆಲವೆಡೆ ನೋಡಬಹುದು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಾಶ್ಮೀರ ಶೈವರಿಗೆ ಕಂಡ ಶಿವನು ಇವೆಲ್ಲಾ ಲಲಿತಕಲೆಗಳ ಪರಮದೈವ! ಅವನು ನಟರಾಜ, ಸಂಗೀತದ ಸ್ವರಾಧಿಪ, ರಸರೂಪಿ, ನಾದಲೋಲ..... ಕಾರಣ ಬಹಳ ಸರಳವಾದುದು. ಕಾಶ್ಮೀರ ಶೈವರೆಲ್ಲಾ ಬಹುತೇಕ ಸುಶಿಕ್ಷಿತರು, ಪಂಡಿತರು, ಸಂಗೀತ, ಸಾಹಿತ್ಯ, ನೃತ್ಯಾದಿ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರು. ಕಾಶ್ಮೀರ ಶೈವವು ವಿದ್ವಾಂಸರು ರೂಪಿಸಿದ ಪ್ರತ್ಯಭಿಜ್ಞಾ ದರ್ಶನದ ಮೇಲೆ ರೂಪುಗೊಂಡದ್ದು. ತತ್ವಜ್ಞಾನದ ದೃಷ್ಟಿಯಿಂದ ನೋಡುವುದಾದರೆ ತಮಿಳುನಾಡಿನ ಶೈವ ಅಯ್ಯರ್ ಗಳು ಕನ್ನಡನಾಡಿನ ಲಿಂಗಾಯತ ಅಯ್ಯನವರಿಗಿಂತ ಹೆಚ್ಚು ಭಿನ್ನವಲ್ಲವಾದರೂ, ಕನ್ನಡದ ಲಿಂಗಾಯತರು ಸಂಗೀತಾದಿ ಕಲೆಗಳಲ್ಲಿ ಅಂತಹಾ ಆಸಕ್ತಿ, ಕೃಷಿ ಇಲ್ಲದವರು. ಆದರೆ ತಮಿಳು ಅಯ್ಯರುಗಳೋ ಅದರಲ್ಲಿ ಸಿದ್ಧಹಸ್ತರು! ಕಾರಣವಿಷ್ಟೇ, ತಮಿಳು ಶೈವರ ಪರಂಪರೆಯು ಕಾಶ್ಮೀರದ ಪ್ರತ್ಯಭಿಜ್ಞಾ ದರ್ಶನದ ಮೇಲೆಯೇ ರೂಪುಗೊಂಡಿದೆ, ಮತ್ತು ಮೇಲ್ವರ್ಗದವರಿಂದ ಪೊರೆಯಲ್ಪಟ್ಟಿದೆ. ಪ್ರಮುಖ ವ್ಯತ್ಯಾಸವೆಂದರೆ, ಕಾಶ್ಮೀರ ಶೈವವು ಜನಸಾಮಾನ್ಯರ ಪಾತಳಿಯಿಂದ ರೂಪುಗೊಂಡ ಅಧ್ಯಾತ್ಮ ಪರಂಪರೆಯಲ್ಲ ಅದೊಂದು ವಿದ್ವಾಂಸ ಪ್ರಣೀತವಾದ ಸಂಸ್ಕೃತ ಸಂಪ್ರದಾಯ. ಲಿಂಗಾಯತವು ಇದಕ್ಕೆ ವ್ಯತಿರಿಕ್ತವಾದುದು. ಅದು ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ, ಆಡುಭಾಷೆಯಲ್ಲಿ ರಚಿಸಲಾಗುತ್ತದೆ, ಯಾವ ಛಂದಸ್ಸಿನ ಹಂಗೂ ಇಲ್ಲದೆ ಮುಕ್ತವಾಗಿ ಹರಿದು ಬರುತ್ತದೆ.

4. ವಿಚಿತ್ರವೆಂದರೆ, ಜನಸಾಮಾನ್ಯರಿಂದಲೇ ಸೃಷ್ಟಿಯಾದ ವಚನಗಳ ಬಂಧವು ಮಾತ್ರ ಎಲ್ಲ ಜನಸಾಮಾನ್ಯರ ಆಸ್ವಾದನೆಗಾಗಿ ಇಲ್ಲ! ಇದು ಸಾಮಾನ್ಯರಿಗೆ ಸುಲಭಕ್ಕೆ ಎಟುಕದ ಬೌದ್ಧಿಕ ಅನುಸಂಧಾನದಂತಿದೆ.

5. ಲಿಂಗಾಯತರಲ್ಲಿ ಶಾಸ್ತ್ರೀಯ ರಸಸಿದ್ಧಾಂತವು ಹೆಚ್ಚು ಮನ್ನಣೆಯನ್ನು ಪಡೆಯಲಿಲ್ಲ ಹಾಗೂ ಭಕ್ತಿಯ ಪರವಶತೆಯು, ಅವರಿಗೆ ಆದ್ಯತೆಯ ವಿಷಯವಾಗಿರಲಿಲ್ಲದ ಕಾರಣ ಸಂಗೀತದ ಲಾಸ್ಯವು ಅವರ ರಚನೆಗಳಲ್ಲಿ ಗೌಣವಾಗಿದೆ. ಲಾಲಿತ್ಯವುಳ್ಳ, ಮೋಹಕ ಗುಣದ ಸಾಹಿತ್ಯ ಹಾಗೂ ರಂಜನಿಯವೆನಿಸುವ ಸಂಗೀತವು ಭವಕ್ಕೆ ನಮ್ಮನ್ನು ಮತ್ತಷ್ಟು ಕಟ್ಟಿ ಹಾಕಬಹುದೆಂಬ ಭಯವೂ ಸಹಾ ವಚನಕಾರರಿಗೆ ಇದ್ದಂತೆ ತೋರುತ್ತದೆ. ಕಿನ್ನರಿ ಬೊಮ್ಮಯ್ಯನಂತಹ ವಾದ್ಯಗಾರ, ಪ್ರಭುದೇವರಂತಹ ಮೃದಂಗ ಪರಿಣಿತ ಅವರಲ್ಲಿ ಇದ್ದುದು ಹೌದು. ಇವರ ವಚನಗಳೂ ಸಹ ಗದ್ಯದ ಪ್ರಮೇಯ ಮಾದರಿಯನ್ನೇ ಹೆಚ್ಚಾಗಿ ಒಳಗೊಂಡಿವೆ.

6. ಬಹುಮುಖ್ಯವಾದ ಸಂಗತಿಯೆಂದರೆ, ವಚನಕಾರರ ರಚನೆಗಳು ಜನಸಾಮಾನ್ಯರ ಕೃತಿಗಳು. ಇವರಲ್ಲಿ ಹೆಚ್ಚಿನವರು ಹರಿದಾಸರಂತೆ ಪಾರಂಪರಿಕ ಸಂಗೀತ ಕಲಿತವರಲ್ಲ. ಇವರ ವಚನಗಳನ್ನು ನಿರೂಪಿಸಲಿಕ್ಕೆ ಆಯ್ಕೆ ಮಾಡಿಕೊಳ್ಳಲಾದ ವಸ್ತುವೂ ಸಹ, ಹರಿದಾಸರ ದ್ವೈತತತ್ವದಂತೆ ಸರಳವಾದುದಲ್ಲ.

ಹರಿದಾಸ ಪರಂಪರೆಯಲ್ಲಿ ವಿಷ್ಣುವೇ ಆರಾಧ್ಯದೈವ. ನಾರಾಯಣನ ಸ್ವರೂಪವನ್ನು ಗಮನಿಸಿದರೆ, ಅವನು ಸೌಂದರ್ಯದ ಪರಮಮೂರ್ತಿ, ಮಾಧುರ್ಯದ ಪರಿಪಾಲಕ, ಜೀವನಪ್ರೀತಿಯನ್ನು ಪ್ರೇರೇಪಿಸುವಂತಹ ವ್ಯಕ್ತಿತ್ವ ಅವನದ್ದು. ಹಾಗಂತ ಅವನು ಭೋಗಪ್ರತಿಪಾದಕನಲ್ಲ, ಸಾತ್ವಿಕ ಆನಂದವು ಹುಟ್ಟಬಹುದಾದ ಎಲ್ಲವೂ ಅವನ ಕೈಯಲ್ಲಿದೆ. ಸ್ವಾದಿಷ್ಟ ಭೋಜನ, ಸೊಗಸಾದ ಸಂಗೀತ, ರಸಮಯ ಕಾವ್ಯ, ಬೌದ್ಧಿಕ ಚರ್ಚೆಗಳು, ಸಹೃದಯರ ಸಹವಾಸಗಳು ತಂದುಕೊಡುವ ಅನಿರ್ವಚನೀಯ ಸುಖವೆಲ್ಲ ಅವನ ಅನುಗ್ರಹದಿಂದ ಲಭಿಸಬೇಕು. ಅವನು ನಮ್ಮ ಜೀವವನ್ನು ನಷ್ಟವಾಗದಂತೆ ಪೊರೆಯುವವ, ಹಾಗಾಗಿಯೇ, ನಾವೆಲ್ಲ ಜೀವನದ ಆನಂದವನ್ನು ತೊರೆಯದಂತೆ, ವಿರಕ್ತರಾಗದಂತೆ ಅವನು ಸಂಸ್ಕರಿತವೂ, ಸುಧಾರಿತವೂ, ದೈವಿಕ ಆನಂದದ ಮೂಲಗಳೂ ಆದ elite ಸಂಗತಿಗಳಲ್ಲಿ ನೆಲೆಸಿದ್ದಾನೆ. ಅವನ ಆರಾಧನಾ ಮಾರ್ಗವು ಸಹ ಇಂತಹುದೇ ಸಂಗತಿಗಳ ಮೇಲೆಯೇ ಆಧಾರಿತವಾಗಿದೆ. ಸಂಗೀತವೂ ಅದರಲ್ಲಿ ಒಂದು....ಹಾಗಾಗಿಯೇ ಹರಿದಾಸರ ಕೀರ್ತನೆಗಳಲ್ಲಿ ಲಾಲಿತ್ಯಮಯವಾದ, ಸಂಮೋಹಕ ಗುಣದ ಸಾಹಿತ್ಯ, ಮತ್ತು ಮಾಧುರ್ಯಮಯವೂ, ಬೋಧಪ್ರದವೂ ಆದ ಸಂಗೀತ ಎರಡೂ ಮೇಳೈಸಿವೆ. ಅವನು ಸರ್ವೋತ್ತಮ, ಅವನಿಗಿಂತ ಮಿಗಿಲಾದುದು ಎಂಬ ಕಲ್ಪನೆಯೇ ಹೊಲ್ಲ, ಅವನಿಗಿಂತ ಮೇಲೆ ಏನೂ ಇಲ್ಲ. ಇನ್ನು ಅವನಲ್ಲಿ ಒಂದಾಗಿ ಅವನೇ ನಾನಾಗುವ ಅವಕಾಶವಂತೂ ಇಲ್ಲವೇ ಇಲ್ಲ. ಅವನನ್ನು ಸ್ಮರಣೆ ಮಾಡುತ್ತಾ ಎಂದೆಂದೂ ಪರವಶರಾಗಿ, ಅವನ ಸನ್ನಿಧಿಯ ವೈಭವವನ್ನು ಸ್ತುತಿಸುವುದು ಒಂದೇ ದಾರಿ. ಆದ ಕಾರಣದಿಂದಾಗಿ, ಬಹುತೇಕ ಎಲ್ಲಾ ವೈಷ್ಣವ ದರ್ಶನಗಳಲ್ಲಿ ಗೀತ, ದೃಶ್ಯ, ಸ್ವಾದ ಮತ್ತು ಕಾವ್ಯಗಳು ಅತ್ಯಂತ ಪ್ರಧಾನ ಪಾತ್ರ ವಹಿಸುತ್ತವೆ.

7. ಬಹುತೇಕ ವಚನಕಾರರು ಪೌರಾಣಿಕ ಸಾಹಿತ್ಯಗಳಲ್ಲಿ ಕಂಡುಬರುವ ಪಾರ್ವತಿರಮಣ ಶಿವನನ್ನು ಅಂತಿಮವೆಂದು ಪರಿಗಣಿಸುವುದಿಲ್ಲ. ಅವನನ್ನೂ ದಾಟಿದ ಪರಮಸ್ಥಿತಿಯೊಂದು ಅವರ ಅಂತಿಮಗಮ್ಯವಾಗಿದೆ. ಅವರ ಆಧ್ಯಾತ್ಮಿಕ ಮಾರ್ಗವು ಕೈಲಾಸಪತಿಯೂ, ನಾಗಭೂಷಣನೂ ಆದ ಶಂಕರನ ಸುತ್ತಾ ನೆರೆದಿರುವುದಿಲ್ಲ. ಅವರು ಯಾವ ಭಿಡೆಯೂ ಇಲ್ಲದೆ ಗುಹೇಶ್ವರ ಸತ್ತ, ಗೌರಿದೇವಿ ಮುಂಡೆಯಾದಳು! ಎಂಬ ರೀತಿಯ, ಎದೆಗೆ ಗುಂಡು ಹೊಡೆವಂಥಾ ಸಾಲುಗಳನ್ನು ಬರೆಯುವವರು!

8. ಹರಿದಾಸರ ಭಕ್ತಿ ಚಳುವಳಿಯು ಕಾಣಿಸಿಕೊಂಡ ಕಾಲಘಟ್ಟವನ್ನು ಸಹ ನಾವಿಲ್ಲಿ ಗಮನಿಸಬೇಕು. 16 ನೆಯ ಶತಮಾನದ ಹೊತ್ತಿಗೆ, ಭಾರತದ ಬಹುಭಾಗದಲ್ಲಿ ಇಸ್ಲಾಮಿಕ್ ಪ್ರಭುತ್ವವಿದ್ದಿತು. ಇಸ್ಲಾಮಿನ ಹಾಗೂ ಕ್ರೈಸ್ತ ಧರ್ಮದ ಉಗ್ರ ಏಕದೇವೋಪಾಸನೆ ಮತ್ತು ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಅವುಗಳ ಅನುಷಂಗಿಕ ಗುಣಗಳ ಪ್ರಭಾವವು, ಆಧ್ಯಾತ್ಮಿಕವಾಗಿ ಉದಾರ ಮನೋಧರ್ಮವನ್ನು ಹೊಂದಿದ್ದ ಹಿಂದೂ ಧರ್ಮದ ಮೇಲೆಯೂ ಆಗಿದ್ದಿತು. ಈ ಬಾಹ್ಯ ಒತ್ತಡಗಳಿಗೆ ಉತ್ತರವಾಗಿ ಹುಟ್ಟಿಕೊಂಡದ್ದೇ ಭಕ್ತಿ ಚಳುವಳಿ. ಉತ್ತರಭಾರತದಲ್ಲಿ ತುಳಸಿದಾಸರು, ಸ್ವಾಮಿ ಹರಿದಾಸರು, ಚೈತನ್ಯ ಮಹಾಪ್ರಭು ಮತ್ತು ದಕ್ಷಿಣ ಭಾರತದ ಹರಿದಾಸರು, ಜನರನ್ನು ತಮ್ಮತ್ತ ಸೆಳೆಯುತ್ತ, ನೃತ್ಯ ಸಂಗೀತ ಸಾಹಿತ್ಯಗಳ ಪರವಶತೆಯನ್ನು ಭಕ್ತಿಯ ಆರಾಧನೆಯಲ್ಲಿ ಸಮೀಕರಿಸಿ, ಏಕದೈವನಾದ ಸರ್ವೋತ್ತಮ ವೈಷ್ಣವ ತತ್ವವನ್ನು ಪ್ರಸಾರ ಮಾಡಿದರು. ಊರೂರು ತಿರುಗಿದರು, ಕಂಡಲ್ಲಿ ಹಾಡಿದರು, ಕುಣಿದರು....ಒಂದು ಪರ್ಯಾಯವಾದ ಧಾರ್ಮಿಕ ಚಳುವಳಿಯನ್ನು ಬಹಳ ಪರೋಕ್ಷವಾಗಿ ಸೃಷ್ಟಿ ಮಾಡಿದರು. ಹೀಗೆ ಮಾಡಲಿಕ್ಕೆ ಅವರಿಗೆ ಐತಿಹಾಸಿಕ ಒತ್ತಡಗಳೂ ಸಹ ಇದ್ದಿರಬಹುದು. ಹೆಚ್ಜಿನ ಜನಾನುರಾಗ ಗಳಿಸುವುದು, ಜನರ ಬಾಯಿಯಲ್ಲಿ, ಬಾಳಿನಲ್ಲಿ ಅಳವಡಿಸಬಹುದಾದ ಸರಳ ದೈವಿಕತೆಯನ್ನು ಪ್ರತಿಪಾದಿಸುವುದು ಅವರಿಗೆ ಅನಿವಾರ್ಯವಿತ್ತೆಂದು ಕಾಣುತ್ತದೆ. ಹಾಗಾಗಿ ಸಹಾ ಹರಿದಾಸರ ಜೀವನಶೈಲಿಯು, ಊರೂರು ಅಲೆಯುತ್ತಾ ಮಧುಕರ ವೃತ್ತಿಯನ್ನು ಅವಲಂಬಿಸಿತ್ತು ಮತ್ತು ಅವರ ಆಧ್ಯಾತ್ಮಿಕ ಅಭಿವ್ಯಕ್ತಿಯು ವಿಷ್ಣುವಿನ ಕಾರಣದಿಂದ, ಚಿತ್ತಾಪಹಾರ ಗುಣವುಳ್ಳದ್ದಾಗಿ ಲಾಲಿತ್ಯಮಯವೂ, ಸಂಗೀತಮಯವೂ ಆಗಿತ್ತೆನ್ನಬಹುದು.

9. ಶರಣರೂ ಸಹ ಏಕದೈವವನ್ನೇ ನೆಚ್ಚಿದವರು ಆಗಿದ್ದರೂ ಕೂಡ, ಅವರಿಗೆ ಸಾಮಾನ್ಯ ಜನರನ್ನು ವ್ಯಾಪಕವಾಗಿ, ಸಂಗೀತ, ನಾಟಕ, ನೃತ್ಯಾದಿ ಮಾಧ್ಯಮಗಳ ಮೂಲಕ ತಲುಪಬೇಕಾದ ಧಾರ್ಮಿಕ/ಐತಿಹಾಸಿಕ ಜರೂರು ಇರಲಿಲ್ಲ.(ಆದರೆ ಸಾಮಾಜಿಕವಾಗಿ ಹಿಂದೂ ಧರ್ಮದ ಒಳಗೆಯೇ ಜಾತಿವ್ಯವಸ್ಥೆಯ ವಿರುದ್ಧ ಬಂಡೇಳಬೇಕಾದ ಒತ್ತಡವಿತ್ತೆನ್ನಬಹುದು) ಅವರ ತಾತ್ವಿಕ ದರ್ಶನದ ಸ್ವರೂಪಕ್ಕೆ ಹಾಗೂ ಅವರ ಸಾಮಾಜಿಕ ಹಿನ್ನೆಲೆಗೆ ಶಾಸ್ತ್ರಬದ್ಧ ಸಂಗೀತದ ಅಥವಾ ಛಂದೋಬದ್ಧ ಸಾಹಿತ್ಯದ ಅಗತ್ಯವೂ ಇರಲಿಲ್ಲ. ಅವರಿಗೆ ಬೇಕಾದ ದೇವನು ನೇರವಾದ ದೀಕ್ಷೆಯಲ್ಲಿ ಅವರಿಗೆ ಲಭ್ಯನಿದ್ದ.

10. ಎಲ್ಲದಕ್ಕಿಂತ ಹೆಚ್ಚಾಗಿ, ತಮ್ಮ ತತ್ವಗಳ ಪ್ರಸಾರವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಬೇಕಾದ ಅನಿವಾರ್ಯತೆಯೂ ಅವರಿಗೆ ಇರಲಿಲ್ಲ. ವಚನಗಳು ಬಹುತೇಕ ಬೌದ್ಧಿಕ ರಚನೆಗಳಾಗಿದ್ದು, ಅವರವರ ನಡುವಿನ ಚರ್ಚಾಕೂಟ/ಸತ್ಸಂಗ ಸಭೆಗಳಲ್ಲಿ. ಅನುಭಾವ ಮಂಟಪ ಎಂಬ, ಪ್ರಾಜ್ಞರೇ ತುಂಬಿದ್ದ ಆಧ್ಯಾತ್ಮಿಕ ಜೀವಿಗಳ ಸಮೂಹದಲ್ಲಿ ಅದರ ಪ್ರಸ್ತುತತೆಯಿತ್ತು. ಅಲ್ಲಿ ಅವರಿಗೆ ಸಂಗೀತವು ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವಾಗಿರಲಿಲ್ಲ. ಏಕೆಂದರೆ, ವಚನಗಳ ರಚನೆಯು ಒಂದು ಬಗೆಯ ಪ್ರಮೇಯ ಮಂಡನೆಯ (theorem presentation) ಸ್ವರೂಪದಲ್ಲಿರುವುದನ್ನು ನಾವು ಕಾಣಬಹುದು. ಇದು ಹೆಚ್ಚಾಗಿ ತಾತ್ವಿಕ ಸ್ತರದಲ್ಲಿ ಇರುವಂಥದ್ದು. ಇಂತಹ ಕಡೆ ಲಾಲಿತ್ಯವನ್ನು ನಿರೀಕ್ಷೆ ಮಾಡುವಂತೆಯೂ ಇರುವುದಿಲ್ಲ. ನಾವು ಲಿಂಗಾಯತ ಚಳುವಳಿಯನ್ನು ಗಮನಿಸಿದರೆ, ಅಲ್ಲಿ ಗಂಭೀರವಾದ ಯೋಗಸಾಧನೆ ಮತ್ತು ಅನುಭಾವದ ಅದ್ವೈತವನ್ನು ನಂಬಿದ್ದ ಶರಣರೇ ಅಧಿಕವಾಗಿದ್ದರು. ಇಲ್ಲಿ ಭಕ್ತಿಯನ್ನು ಸಾಧನೆಯ ಮೊದಲ ಮೆಟ್ಟಿಲೆಂದು ಮಾತ್ರ ಪರಿಗಣಿಸಲಾಗುತ್ತಿತ್ತೆ ವಿನಃ, ಅದುವೇ ಅಂತಿಮವೆಂದು ಅಲ್ಲ. ಹಾಗಾಗಿ, ದ್ವೈತಪ್ರಧಾನವಾದ ಭಕ್ತಿಗೆ ಅವರ ಆದ್ಯತೆಯು ಕಡಿಮೆಯಾಗಿರುವುದು ಸಹಜವೇ ಆಗಿದೆ. ಬಸವಣ್ಣ, ಮಹಾದೇವಿ ಮುಂತಾದವರಲ್ಲಿ ಮಾತ್ರ ಶೃಂಗಾರಭಕ್ತಿಯ ಉತ್ಕಟತೆಯನ್ನು ಕಾಣಬಹುದು. ಅದನ್ನು ಬಿಟ್ಟರೆ ಪರವಶತೆಯ ಭಕ್ತಿಯನ್ನು ಪ್ರತಿಪಾದಿಸುವ ಇತರೆ ಸಂಗೀತ ಬಲ್ಲ ವಚನಕಾರರಲ್ಲಿ ಮಾತ್ರ. ಕೆಲವು ಶರಣರ ಭಕ್ತಿಯು ವೀರಭಾವದ್ದೂ ಉಂಟು.

ಅದ್ವೈತ ಪ್ರತಿಪಾದಕರಾದ ಶಂಕರಾಚಾರ್ಯರ ಕೃತಿಗಳು ಸಹಾ ಅತ್ಯಂತ ಉತ್ಕೃಷ್ಟವಾಗಿದ್ದು, ರಸಿಕರ ಮನದಣಿಸುವಂತಿವೆ. ಅವರ ಘನಗಂಭೀರವಾದ, ಬ್ರಹ್ಮ ಚಿಂತನೆಯನ್ನು ಒಳಗೊಂಡ ಉಪನಿಷತ್ ಭಾಷ್ಯಗಳಲ್ಲಿ ಗೇಯತೆಯನ್ನು ಹುಡುಕಲಾಗುವುದೇ? ಬಹುಶಃ ಸಾಧ್ಯವಿಲ್ಲ. ಆದರೆ, ಅವರು ಭಕ್ತಿಯ ಪರವಶತೆಯಲ್ಲಿ ಹಾಡಿದ ಅಸಂಖ್ಯ ದೇವತಾಸ್ತೋತ್ರಗಳಲ್ಲಿ ಲಾಲಿತ್ಯವೂ, ಮಾಧುರ್ಯವೂ, ನಾದಗುಣವೂ ಚೆಲ್ಲುವರಿದಿದೆ.

ಸಾರಾಂಶವಿಷ್ಟೇ, ನಾವು ಆರಿಸಿಕೊಂಡ ಉಪಾಸನಾಮಾರ್ಗಕ್ಕೆ ಅನುಗುಣವಾದ ಮನೋಧರ್ಮವು ಇಲ್ಲಿ ತನಗೆ ಸೂಕ್ತವಾದ ಅಭಿವ್ಯಕ್ತಿಯನ್ನು ಆರಿಸಿಕೊಳ್ಳುತ್ತದೆ.

ಭಕ್ತಿಯ ಪರವಶತೆಯು ಕಾವ್ಯಕ್ಕೆ ಸಹಜವಾದ ಒಂದು ಓಘವನ್ನೂ, ಗೇಯತೆಯನ್ನೂ, ಅಂತರಿಕವಾದ ಛಂದಸ್ಸನ್ನು ಒದಗಿಸಿಕೊಡುತ್ತದೆ. ಹಾಗಾಗಿ ಇಂತಹಾ ವಿನಮ್ರವಾದ, ಭಕ್ತಿಯಲ್ಲಿ ಭಗವಂತನಿಗೆ ಸಮರ್ಪಿತವಾದ ಮನಸ್ಸುಗಳು ಮಾತ್ರವೇ ಸಂಗೀತದ ಲಯಾತ್ಮಕ ಗುಣವನ್ನು ಹೊಂದಿರುವ ಕಾವ್ಯವನ್ನು ರಚನೆ ಮಾಡಬಲ್ಲವು. ಸತ್ಯದ ನೇರವೂ, ಪ್ರಾಕೃತವೂ ಆದಂತಹ ಅಭಿವ್ಯಕ್ತಿಗಳಲ್ಲಿ ಸಂಸ್ಕರಿತವೂ, ಮಧುರವೂ ಆದ ರೂಪಗಳು ಇರುವುದಿಲ್ಲ. ಸಮುದ್ರವು ತನ್ನ ಸೌಂದರ್ಯಕ್ಕಿಂತಲೂ ಹೆಚ್ಚಾಗಿ ತನ್ನ ಗಾಂಭೀರ್ಯ ಮತ್ತು ಭೀಷಣವಾದ ಗಹನತೆಯಿಂದ ನಮ್ಮನ್ನು ಕಾಡುತ್ತದೆ! ವಿಶ್ಲೇಷಣಾತ್ಮಕವೂ, ವಿಡಂಬನಾತ್ಮಕವೂ, ವೈಚಾರಿಕವೂ ಆಗಿದ್ದು, ಎಲ್ಲದಕ್ಕಿಂತ ಹೆಚ್ಚಾಗಿ ನಿಗೂಢವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡ ಯೌಗಿಕ ಪ್ರತಿಭೆಗಳು ಸುಡುವ ಬೆಂಕಿಯಂತಹ ಸಾಲುಗಳನ್ನು ಎರೆಯಬಲ್ಲವೇ ಹೊರತು, ಛಂದಮೋಹಕ ಸಾಲುಗಳನ್ನು ಹೆಣೆಯಲಾರವು. ಹೀಗೆ ಮೂಡುವ ಕಾವ್ಯಗಳಲ್ಲಿ ಛಂದಸ್ಸು ಬಹಳ ಅವ್ಯಕ್ತ ರೂಪದಲ್ಲಿರುತ್ತದೆ. ಅದನ್ನು ಯಾವ ಶಾಸ್ತ್ರಗಳಿಂದಲೂ ನಿರ್ವಚನ ಮಾಡಲು ಬರುವುದಿಲ್ಲ. ಉದಾಹರಣೆಯಾಗಿ ಅಲ್ಲಮಪ್ರಭುಗಳ ವಚನಗಳನ್ನು ನೋಡಬಹುದು; ಇದರಲ್ಲಿ ನಮಗರಿಯದ ಒಂದು ಲಯಬಂಧವೂ ಇದೆ. ಸಾಲುಗಳಲ್ಲಿ ತೀಕ್ಷ್ಣವಾದ ಗೂಢತೆಯೂ, ಅವಾಕ್ಕಾಗಿಸುವ ಬೆರಗೂ ಇದೆ. ಸಂಗೀತಕ್ಕೆ ಇವುಗಳನ್ನು ಅಳವಡಿಸುವ ಸಾಹಸವನ್ನು ಇದುವರೆಗೂ ಯಾರೂ ಮಾಡಿದಂತೆ ಕಾಣದು. ಪ್ರಭುದೇವನೂ ಸಹ ಬಳ್ಳಿಗಾವೆಯ ವಿಶ್ವವಿದ್ಯಾಲಯದಲ್ಲಿ ನುರಿತ ಒಬ್ಬ ಸಂಗೀತ ವಿಶಾರದ ಎಂಬುದನ್ನು ಮರೆಯದಿರಿ. ಅವರ 39 ಗೀತಗಳನ್ನು ಸ್ವರವಚನ ಪ್ರಾಕಾರಕ್ಕೆ ಸೇರಿಸಲಾಗಿದೆ.

11. ಎಲ್ಲದರ ಕೊನೆಗೆ ರಾಜೇಂದ್ರಪ್ರಸಾದ್ ಎಂಬ ಯುವಕವಿಗಳು ವ್ಯಕ್ತಪಡಿಸಿದ ಅಭಿಪ್ರಾಯವು ಈ ಹಿನ್ನೆಲೆಯಲ್ಲಿ ಗಮನಿಸಬೇಕಾದ ಸಂಗತಿ

ಭಾರತೀಯ ಸಂಗೀತವು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಎಂಬ ಎರಡು ಪ್ರಧಾನಧಾರೆಯ ಸಂಗೀತವಾಗಿ ಕವಲೊಡೆಯುವ ಮುನ್ನ ಕಾಲದ ರಚನೆಗಳು ಇವು. ಸದ್ಯಕ್ಕೆ ಲಭ್ಯ ಮಾಹಿತಿಗಳ ಪ್ರಕಾರ ಬಸವಣ್ಣನ ಕಾಲ ಕ್ರಿ.ಶ. ೧೧೦೫ ರಿಂದ ಕ್ರಿ.ಶ. ೧೧೬೭. ಅಂದರೆ ಸಾರಂಗದೇವನು ಸಂಗೀತ ರತ್ನಾಕರ ರಚಿಸುವ ಸುಮಾರು ನೂರು ವರ್ಷಕಾಲದಷ್ಟು ಹಿಂದೆ. ಭಾರತೀಯ ಸಂಗೀತದ ಸ್ಪಷ್ಟ ರೂಪುರೇಷೆಗಳು ಸಂಗೀತ ರತ್ನಾಕರ ಕೃತಿಯಲ್ಲಿ ಸಿಗುತ್ತವೆ. ಇದು ಸಂಸ್ಕೃತದಲ್ಲಿ ಭಾಷೆಯಲ್ಲಿದ್ದರೂ ರಚಿತವಾಗಿದ್ದು ಮಾತ್ರ ಕನ್ನಡದ ದೇವಗಿರಿಯ ಸಿಂಘಣ ಆಸ್ಥಾನದಲ್ಲಿ, ಅಂದರೆ ಕ್ರಿ.ಶ. ೧೧೭೫ – ೧೨೪೭. ಆ ವೇಳೆಗೆ ಉತ್ತರದಲ್ಲಿ ಪರ್ಷಿಯನ್ ಸಂಗೀತವು ಭಾರತೀಯ ಸಂಗೀತದೊಡನೆ ಸೇರಿ ಹೊಸಬಗೆಯ ಕವಲು ಕೊನರಿತ್ತು. ಮತ್ತೊಂದು ಕವಲು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹರಿದಾಸರಿಂದ ಶುರುವಾಯಿತು. ಕ್ರಿ.ಶ. ೧೬೬೦ ರ ಸುಮಾರಿಗೆ ವೆಂಕಟಮಖಿಯು ಬರೆದ ‘ಚತುರ್ದಂಡಿ ಪ್ರಕಾಶಿಕಾ’ ಕೃತಿಯ ಮೂಲಕ ದಾಕ್ಷಿಣಾತ್ಯ (ಕರ್ನಾಟಕ) ಸಂಗೀತವು ಮೇಳಾಕರ್ತ ರಾಗ, ಲಕ್ಷಣಗಳ ವ್ಯವಸ್ಥೆಗಳೊಂದಿಗೆ ಸ್ಪಷ್ಟವಾದ ರೂಪು ಪಡೆಯಿತು. ಅಂದರೆ ವಚನಗಳು, ಕರ್ನಾಟಕ ಸಂಗೀತಕಿಂತಲೂ ಸುಮಾರು ೫೦೦ ವರ್ಷ ಪ್ರಾಚೀನವಾದುವು. ಆದರೆ ಹರಿದಾಸ ಕೀರ್ತನೆಗಳು ಸಂಗೀತದ ಪಾಠಗಳ ಮೂಲಕವೇ ಸೃಷ್ಟಿಯಾದುವು ಮತ್ತು ಪ್ರಸರವಾದುವು, ವಚನಗಳು ಕಲ್ಯಾಣದ ಕ್ರಾಂತಿಯ ನಂತರ ೬೦೦-೭೫೦ ವರ್ಷಗಳ ಕಾಲ ಲಿಂಗಾಯತ ಮಠಗಳಲ್ಲಿ ಪೂಜನೀಯ ವಸ್ತುಗಳಾಗಿ ತಾಳೆಗರಿ ಕಟ್ಟುಗಳಲ್ಲಿ ಉಳಿದುಬಿಟ್ಟವು. ಅವುಗಳ ಮೂಲ ಮಟ್ಟುಗಳು ಮತ್ತು ಪದ ಭಾಷಾ ಪ್ರಯೋಗಗಳು ಪ್ರತಿಯಾಗುವ ಸಾವಿರಾರು ಸಂದರ್ಭಗಳಲ್ಲಿ ಪ್ರಕ್ಷಿಪ್ತಗೊಂಡವು. ಹಾಡಿ ಹಾಡಿ ಹರಡಿಕೊಳ್ಳಬೇಕಿದ್ದ ವಚನಗಳು ಅಡಗಿಕೊಂಡವು. ಆ ಅವಧಿಯೊಳಗೆ ಸಂಗೀತ ಪರಂಪರೆಯೇ ಪರಿವರ್ತನೆಗೊಂಡು ಬಿಟ್ಟಿತು."

ಆಕರ : ಸಂಶೋಧನಾ ಪ್ರಬಂಧ: ವಚನಗಾಯನ ಪರಂಪರೆ; ಒಂದು ಸಂಗೀತಾತ್ಮಕ ಅಧ್ಯಯನ - ಡಾ. ಜಯದೇವಿ ಜಂಗಮಶೆಟ್ಟಿ (2013), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸ್ವರವಚನ ಪ್ರಾಕಾರ ಬಸವೋತ್ತರ ಕಾಲದ ವಚನ ಸಂಗೀತ Next