Previous ಪಂಡಿತಾರಾಧ್ಯ ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ? Next

ಪಂಚಾಚಾರ್ಯ: ವಿಶ್ವಾರಾಧ್ಯ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ವಿಶ್ವಾರಾಧ್ಯ

ಕ್ರಿ.ಶ. ೧೬೯೮ರಲ್ಲಿ ಪರ್ವತೇಶನಿಂದ ರಚಿಸಲ್ಪಟ್ಟಿರುವ 'ಚತುರಾಚಾರ್ಯ ಚರಿತ್ರೆ'ಯು ಹೆಸರೇ ಹೇಳುವಂತೆ ವೀರಶೈವರಲ್ಲಿ ಇದ್ದವರು ನಾಲ್ಕು ಜನ ಆಚಾರ್ಯರು ಮಾತ್ರ ಎಂದು ತಿಳಿಸುತ್ತದೆ. ಕಾಶಿಯಲ್ಲಿರುವ ಐದನೆಯ ಪೀಠ ಯಾವಾಗ ಸ್ಥಾಪಿತವಾಯಿತೆಂಬುದಕ್ಕೆ ಖಚಿತ ಮಾಹಿತಿ ಇಲ್ಲ. ಕ್ರಿ.ಶ. ೧೮೪೦ರಷ್ಟು ಈಚೆಗೆ ಲಿಂಗಾಯತರು / ವೀರಶೈವರನ್ನು ಕುರಿತ ತಮ್ಮ ಪ್ರಸಿದ್ಧ ಪ್ರಬಂಧದಲ್ಲಿ ಪಿ.ಸಿ. ಬ್ರೌನ್ ಅವರೂ ಸಹ ನಾಲ್ಕು ಆಚಾರ್ಯರುಗಳನ್ನೇ ಉಲ್ಲೇಖಿಸುತ್ತಾನೆ.

“ರೇವಣನಿಂದ ಆರಂಭವಾಗಿ ಏಕೋರಾಮನಿಂದ ಕೊನೆಗೊಳ್ಳುವವರೆಗೆ ಬಹಳಷ್ಟು ಗ್ರಂಥಕರ್ತರು ನಾಲ್ಕು ಜನ ಆಚಾರ್ಯರುಗಳ ಹೊರತಾಗಿ ಕಾಶಿಪೀಠವನ್ನಾಗಲೀ, ವಿಶ್ವಾರಾಧ್ಯನ್ನಾಗಲೀ ಪ್ರಸ್ತಾಪಿಸಿಲ್ಲ. ಉದಾ: ಬೊಮ್ಮರಸನು ನಾಲ್ಕು ಆಚಾರ್ಯರುಗಳನ್ನು ಮಾತ್ರ ಪ್ರಸ್ತಾಪಿಸಿದ್ದಾನೆ. ಕೆಲವು ಗ್ರಂಥಗಳ ಶೀರ್ಷಿಕೆಗಳೇ ಚತುರಾಚಾರ್ಯ ಚರಿತ್ರೆ, ಚತುರಾಚಾರ್ಯ ಪುರಾಣ- ಹೀಗಿವೆ. ಅವುಗಳಲ್ಲಿ ವಿಶ್ವಾರಾಧ್ಯನಿಗೆ ಸ್ಥಾನವೇ ಇಲ್ಲ” ಎಂದು ಪ್ರೊ. ಎಂ.ಆರ್. ಸಾಖೆ ಅವರು ಹೇಳುತ್ತಾರೆ (೧೯೪೦; ಪು. ೪೧೪).

ಡಾ. ಕಲಬುರ್ಗಿ ಅವರು ಹೇಳುವಂತೆ “ಹತ್ತೊಂಬತ್ತನೆಯ ಶತಮಾನದಲ್ಲಿ ಸಂಸ್ಕೃತ ಕಲಿಕೆಯ ಅಗತ್ಯವನ್ನು ಮನಗಾಣಲಾಯಿತು. ೧೮೬೦ರಿಂದ ಲಿಂಗಾಯತ ದಾನಿಗಳು ಮತ್ತು ಮಠಗಳು ಅನೇಕ ಸಂಸ್ಕೃತ ಶಾಲೆಗಳನ್ನು ಸ್ಥಾಪಿಸಿದರು. ಸಂಸ್ಕೃತದಲ್ಲಿ ವೇದಾಧ್ಯಯನಕ್ಕೆ ಯುವ ಸ್ವಾಮಿಗಳನ್ನು ಕಾಶಿಗೆ (ವಾರಣಾಸಿ) ಕಳುಹಿಸುವ ಒಂದು ಹುಚ್ಚು ಹಿಡಿಯಿತು. ಆ ಸಂದರ್ಭದಲ್ಲಿ ಕಾಶಿಯಲ್ಲಿ ಒಂದು ವಿದ್ಯಾರ್ಥಿನಿಲಯದ ಅಗತ್ಯವುಂಟಾಯಿತು. ವಿಶ್ವಾರಾಧ್ಯ ಜಂಗಮವಾಡಿ ಮಠವೇ ವಿದ್ಯಾರ್ಥಿನಿಲಯವಾಯಿತು. (ವೀರಶೈವ ಇತಿಹಾಸ ಮತ್ತು ಭೂಗೋಳ-೨೦೦೫, ಪು. ೩೦-೩೧) - ಹೀಗೆ ಕಾಶಿಪೀಠ ಅಸ್ತಿತ್ವಕ್ಕೆ ಬಂದಿತು”.

ನಿಖರವಾದ ವರ್ಷ ತಿಳಿಯದಿದ್ದರೂ, ಕಾಶಿಪೀಠದ ಅಸ್ತಿತ್ವವು ಗಮನಕ್ಕೆ ಬಂದದ್ದು ೧೮೫೦ರ ಅಂತ್ಯಭಾಗದಿಂದಲೇ (ಸಾಖ್ರೆ, ಪು. ೪೧೪) ಶಂಕರಮಠಗಳು ೪+೧ ಹೀಗೆ ಐದು ಮಠಗಳಿರುವುದರಿಂದ, ಅವುಗಳಿಗೆ ಸಮಾನವಾಗಿರಬೇಕೆಂದು ವಿಚಾರಮಾಡಿದ ಕೆಲವು ವೀರಶೈವರು ಕಾಶಿಯಲ್ಲಿ ರಚಿಸಿದ ಪೀಠದಿಂದಾಗಿ ಪಂಚಪೀಠಗಳಾದವೆಂದು ಅಭಿಪ್ರಾಯಪಡಲಾಗಿದೆ. ಕಾಶಿಯು ಐತಿಹಾಸಿಕವಾಗಿ ಒಂದು ಪುಣ್ಯಸ್ಥಳವೆಂದು ಪರಿಗಣಿಸಲ್ಪಟ್ಟಿದ್ದು ಕರ್ನಾಟಕದಿಂದ ಅಲ್ಲಿಗೆ ಹೋಗುವ ಯಾತ್ರಿಕರ ಅನುಕೂಲಕ್ಕಾಗಿ ಕೆಳದಿ ಮತ್ತು ಕೊಡಗಿನ ರಾಜರುಗಳಂತಹ ಅನೇಕ ಲಿಂಗಾಯತ ವಂಶಗಳು ಅಲ್ಲಿ ಲಿಂಗಾಯತ ಮಠ ಸ್ಥಾಪನೆಗೆ ಬೆಂಬಲ ನೀಡಿರುವುದು ಸರ್ವವಿಧಿತ.

ಕೆಳದಿರಾಜ ದೊಡ್ಡಸಂಕಣ್ಣ ನಾಯಕನು ಕಾಶಿಗೆ ಹೋದಾಗ, ಅಲ್ಲಿ (೧೫೬೦-೭೦) ಒಂದು ದೊಡ್ಡ ಗೋಸಾಯಿ ಮಠದ ಮುಖ್ಯಸ್ಥನಾಗಿದ್ದ ಕನ್ನಡಿಗ ಮಲ್ಲಿಕಾರ್ಜುನ ಗೋಸಾಯಿಂರು ಭೇಟಿಯಾಯಿತು. ಆ ಮಠವು ಜೀರ್ಣಾವಸ್ಥೆಯಲ್ಲಿತ್ತು. ಆಗ ದೊಡ್ಡ ಸಂಕಣ್ಣನಾಯಕನು ಅಲ್ಲೊಂದು ಹೊಸಮಠವನ್ನು ನಿರ್ಮಿಸುವ ಅಪೇಕ್ಷೆ ವ್ಯಕ್ತಪಡಿಸಿದ. ೧೭ನೆಯ ಶತಮಾನದ ಆರಂಭದಲ್ಲಿ ಅವನ ಮಗ ಸಣ್ಣಸಂಕಣ್ಣನಾಯಕ ಮತ್ತು ಮೊಮ್ಮಗ ರಾಮರಾಜ ಅವರು ಅವನ ಅಪೇಕ್ಷೆಯನ್ನು ಈಡೇರಿಸಿದರು. (ಯೋಗೇಂದ್ರಗೌಡ, ೨೦೦೮, ಮಹಾಮನ ಮಠಗಳು, ಪು. ೨೧೮-೨೨೫; ಜೈನಕೇರಿ, ೨೦೧೮, ಕೆಳದಿ ಅರಸರ ಯಶೋಗಾಥೆ, ಪು. ೮೧), ಕೊಡಗಿನ ರಾಜ ಚಿಕ್ಕವೀರ ರಾಜೇಂದ್ರನು (೧೮೩೪ರವರೆಗೆ) ಲಂಡನ್ನಿನಲ್ಲಿ ನಿಧನ ಹೊಂದಿದ. ಅವನ ದೇಹದ ಕಳೇಬರವನ್ನು ಭಾರತಕ್ಕೆ ತಂದು ಕಾಶಿಯ ಜಂಗಮವಾಡಿ ಮಠದ ಆವರಣದಲ್ಲಿ (೧೮೬೯, ಫೆಬ್ರವರಿ) ಸಮಾಧಿ ಮಾಡಲಾಯಿತು. ನಂತರ ಅದೇ ಕೊಡಗಿನ ಮತ್ತೊಬ್ಬ ರಾಜ ಹಾಲೇರಿ ವಂಶದ ಲಿಂಗರಾಜೇಂದ್ರ ಒಡೆಯನೂ ಕಾಶಿಯಲ್ಲೇ ನಿಧನ ಹೊಂದಿದ. ಅವನ ದೇಹವನ್ನೂ ೧೮೭೩ರ ಫೆಬ್ರವರಿ ೫ರಂದು ಜಂಗಮವಾಡಿ ಮಠದ ಆವರಣದಲ್ಲೇ ಸಮಾಧಿ ಮಾಡಲಾಯಿತು. ಆ ಇಬ್ಬರ ಸಮಾಧಿಗಳನ್ನು ಆ ಮಠದ ಆವರಣದಲ್ಲಿ ಈಗಲೂ ನೋಡಬಹುದು. ಕಾಶಿ ಜಂಗಮವಾಡಿ ಮಠಕ್ಕೆ ಕೊಡಗಿನ ರಾಜರಿಂದ ಗಣನೀಯ ಪ್ರಮಾಣದ ಕಾಣಿಕೆ ಸಂದಿದೆ (ಡಾ. ಎಂ.ಜಿ. ನಾಗರಾಜ್, ಕೊಡಗಿನ ಹಾಲೇರಿ ರಾಜವಂಶ-೨೦೦೪, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಪು. ೧೩೨-೧೩೩)

ಮೇಲ್ಕಂಡ ಆಧಾರಗಳಿಂದ ಕಾಶಿಯ ವಿಶ್ವಾರಾಧ್ಯ ಪೀಠವು ಈಚಿನ ಸ್ಥಾಪನೆ ಎನ್ನುವುದು ಸ್ಪಷ್ಟವಾಗುತ್ತದೆ. ಪೀಠದ ಪ್ರಾಚೀನತೆ ಕೇವಲ ಕಲ್ಪಿತ ಎನ್ನುವುದೂ ತಿಳಿಯುತ್ತದೆ.

ವಾಸ್ತವವಾಗಿ, ಜಂಗಮವಾಡಿ ಮಠಕ್ಕೂ ಕಾಶಿ ವಿಶ್ವನಾಥ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಸ್ತುತ ಮಠದ ಮುಖ್ಯಸ್ಥರಾಗಿರುವ ಸ್ವಾಮೀಜಿ ಅವರು “ಸಿದ್ಧಾಂತ ಶಿಖಾಮಣಿ'ಯ ಪ್ರಚಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.

ಕಾಶಿವಿಶ್ವನಾಥ ದೇವಾಲಯದ ಪ್ರದೇಶವನ್ನು ಜಂಗಮವಾಡಿ ಎಂದೇ ಕರೆಯಲಾಗುತ್ತದೆ. ಬ್ರಾಹ್ಮಣರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಮೇಲೆ ಪ್ರಸ್ತಾಪಿಸಿದ ಗೋಸಾಯಿ ಮಠವಿತ್ತು. ಮಠದ ಮುಖ್ಯಸ್ಥರಾಗಿದ್ದ ಮಲ್ಲಿಕಾರ್ಜುನ ದೇಸಾಯಿ ಅವರು ೧೯ನೆಯ ಶತಮಾನದ ಆರಂಭದಲ್ಲಿ ನಿಧನ ಹೊಂದಿದ ನಂತರ, ಆ ಗೋಸಾಯಿ ಮಠವನ್ನು ಜಂಗಮವಾಡಿ ಮಠವನ್ನಾಗಿ ೧೮೦೦ರ ಸುಮಾರಿನಲ್ಲಿ ಪರಿವರ್ತಿಸಲಾಯಿತು. ಗೋಸಾಯಿ ಮಠಕ್ಕೆ ನೀಡಿದ್ದ ಭೂಮಿಯ ಒಪ್ಪಂದ ದಾಖಲೆ ಈಗ ಜಂಗಮವಾಡಿ ಮಠದ ವಶದಲ್ಲಿದ್ದು ವಾಸ್ತವ ಸಂಗತಿಗೆ ಸಾಕ್ಷಿಯಾಗಿದೆ. ಹೀಗೆ ಗೋಸಾಯಿ ಮಠವು ಜಂಗಮವಾಡಿ ಮಠದ ವಶವಾಯಿತು. (ಸಿದ್ದರಾಮ ಪೂಜಾರಿ, ೨೦೦೦; ಪು. ೩೧-೩೨)

ವಿಶ್ವಾರಾಧ್ಯನು ಕೃತಯುಗದಲ್ಲಿ ಪಂಚಾಕ್ಷರನೆಂದೂ, ತ್ರೇತಾಯುಗದಲ್ಲಿ ಪಂಚವಕ್ರನೆಂದೂ, ದ್ವಾಪರ ಯುಗದಲ್ಲಿ ವಿಶ್ವಕರ್ಣನೆಂದೂ, ಕಲಿಯುಗದಲ್ಲಿ ವಿಶ್ವಾರಾಧ್ಯನೆಂದೂ ಕರೆಯಲ್ಪಟ್ಟಿದ್ದಾನೆ ಎಂದು ಪಂಚಾಚಾರ್ಯರು ಹೇಳುತ್ತಾರೆ. ಅವನ ಗೋತ್ರ ಸ್ಕಂದಗೋತ್ರ, ಅವನ ಕೈಗೋಲು (ಊರುಗೋಲು) ಬಿಲ್ವದ ಮರದಿಂದ ಮಾಡಲ್ಪಡುತ್ತದೆ. ಪೀಠವು ಹೇಳುವಂತೆ ಇದುವರೆಗೆ ೮೨ ಜನ ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಕರ್ನಾಟಕದಲ್ಲಿ ಕಾಶಿಪೀಠದ ೪೨ ಶಾಖೆಗಳಿವೆ. (ಸಿದ್ದರಾಮ ಪೂಜಾರ, ೨೦೦೦, ಪು. ೩೨-೩೩) ಬಿಜ್ಜರಗಿ, ೨೦೦೦, ಪು. ೨೯೫), ಕಾಶಿ ಪೀಠಕ್ಕೆ ಸಂಬಂಧಿಸಿದ ಬಹುತೇಕ ಸಂಗತಿಗಳು ನಂತರದ ಲೇಖಕರ ಕಲ್ಪನೆಗಳಾಗಿವೆ.

ಮೇಲೆ ಹೇಳಿದ ಸತ್ಯಸಂಗತಿಗಳ ಬೆಳಕಿನಲ್ಲಿ, ಕಾಶಿ ಜಂಗಮವಾಡಿ ಮಠವು ಪ್ರಾಚೀನ ಎನ್ನುವುದು ಮತ್ತು ೮೦ ಜನ ಮಠಾಧೀಶರು ಆಗಿ ಹೋಗಿದ್ದಾರೆ ಎನ್ನುವುದು ವಸ್ತುಸ್ಥಿತಿಗೆ ಹೊಂದುವ ಮಾತಲ್ಲ. (ಸಿದ್ದರಾಮ ಪೂಜಾರಿ, ೨೦೦೦, ಪು. ೩೨-೩೩ ಮತ್ತು ೪೪-೪೭)

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಡಿತಾರಾಧ್ಯ ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ? Next