Previous ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ? ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ? Next

ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ?

ಪಂಚಪೀಠಗಳು ತಮ್ಮ ಪವಿತ್ರಗ್ರಂಥ ಸಿದ್ಧಾಂತ ಶಿಖಾಮಣಿಯ ಬೆಂಬಲದೊಂದಿಗೆ, ವೀರಶೈವ ಧರ್ಮವನ್ನು ಶಿವನೇ ಸ್ಥಾಪಿಸಿದ ಎಂದು ಘೋಷಿಸುತ್ತವೆ. ಆದ್ದರಿಂದ ವೀರಶೈವವು ಒಂದು ಅಪೌರುಷೇಯ (ಮಾನವನಿಂದ ಸ್ಥಾಪನೆಯಾದುದಲ್ಲ) ಧರ್ಮ, ಮಾನವಸ್ಥಾಪಿತ ಧರ್ಮ 'ಪೌರುಷೇಯ ಧರ್ಮ' ಎನಿಸಿಕೊಳ್ಳುತ್ತದೆ. ತರ್ಕದ ಪ್ರಕಾರ, ಪೌರುಷೇಯ ಧರ್ಮ ಒಂದು ಕೀಳು ಮತ್ತು ಕನಿಷ್ಠ ಧರ್ಮವಾಗುತ್ತದೆ.

ವೀರಶೈವದ ದೃಷ್ಟಿಯಲ್ಲಿ ಬೌದ್ಧ, ಜೈನ, ಸಿಖ್, ಲಿಂಗಾಯತ, ಕ್ರೈಸ್ತ ಮತ್ತು ಇಸ್ಲಾಂ ಮತ್ತಿತರ ಧರ್ಮಗಳೆಲ್ಲ ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ಏಕೆಂದರೆ ಅವೆಲ್ಲ ಬುದ್ಧ, ಮಹಾವೀರ, ನಾನಕ, ಬಸವಣ್ಣ, ಏಸುಕ್ರಿಸ್ತ ಮತ್ತು ಪೈಗಂಬರರಂತಹ ಮಾನವರು ಸ್ಥಾಪಿಸಿದ ಧರ್ಮಗಳು. ಆದರೆ ವೀರಶೈವ ಧರ್ಮವು ದೊಡ್ಡದು. ಏಕೆಂದರೆ ಸ್ವತಃ ದೇವರೇ ಅದರ ಸೃಷ್ಟಿಕರ್ತ!

ಆದರೆ ಸಾಮಾಜಿಕ ಜನಾಂಗೀಯ ಅಧ್ಯಯನ ತಜ್ಞರು ಮತ್ತು ತತ್ತ್ವಜ್ಞಾನಿಗಳು ಧರ್ಮವು ಪೂರ್ಣವಾಗಿ ಮಾನವಸಂಸ್ಥೆ ಎಂದು ದೃಢಪಡಿಸಿದ್ದಾರೆ. ಮಾನವ ಜೀವಿಗಳು ಪ್ರಕೃತಿಯ ಶಕ್ತಿಗಳನ್ನು ಎಂದರೆ ಮಳೆ, ಗುಡುಗು-ಸಿಡಿಲುಗಳು, ಕ್ಷಾಮ-ಡಾಮರುಗಳು, ಸಾಂಕ್ರಾಮಿಕ ರೋಗಗಳು ಮತ್ತು ಜನನ-ಮರಣಗಳ ಕ್ರಿಯಾಸರಣಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದಾಗ, ಅಂತಹ ಎಲ್ಲ ಘಟನೆಗಳನ್ನೂ ದೇವರು ಎನ್ನುವ ಅತಿಮಾನುಷ ಶಕ್ತಿ ಎಂದು ಬಿಡುತ್ತಾರೆ. ಕಾಲಾಂತರದಲ್ಲಿ ಅಂತಹ ಅಂತರಸಂಬಂಧಿ ನಂಬಿಕೆಗಳು, ಪದ್ಧತಿಗಳು ಮತ್ತು ನಾನಾ ಆಚರಣೆಗಳೇ 'ಧರ್ಮ' ಎಂದು ಕರೆಸಿಕೊಂಡವು (ಬಂಟನ್ ಮೈಕೇಲ್ ೧೯೬೬, ಆಂತೋಪಾಲಜಿಕಲ್ ಅಪ್ರೋಚಸ್ ಟು ದಿ ಸ್ಟಡಿ ಆಫ್ ರಿಲಿಜನ್, ಟಿವಿಸ್ಟಾಕ್, ಲಂಡನ್) ಹೀಗೆ ಯಾವುದನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲವೋ ಮತ್ತು ನಿಯಂತ್ರಿಸಲು ಸಾಧ್ಯವಿಲ್ಲವೋ ಅದರ ಬೌದ್ದಿಕೀಕರಣದ ರೂಪಗಳೇ ಎಲ್ಲ ಧರ್ಮಗಳೂ ಆಗಿವೆ. ಆದರೆ, ವಾಸ್ತವವಾಗಿ ಎಲ್ಲ ಧರ್ಮಗಳೂ ಆಯಾ ಕಾಲದ ಪ್ರಭಾವಿ ಮಹಾಪುರುಷರಿಂದ ಸ್ಥಾಪಿಸಲ್ಪಟ್ಟಿವೆ ಎಂಬುದಂತೂ ಸತ್ಯ ಸಂಗತಿಯಾಗಿದೆ.

ದೇವರಿಂದಲೇ ಸ್ಥಾಪಿತವಾದ ಯಾವುದೇ ಧರ್ಮ ಜಗತ್ತಿನಲ್ಲಿಲ್ಲ. ಜಗತ್ತಿನ ಎಲ್ಲ ಪ್ರಮುಖ ಧರ್ಮಗಳೂ ಚರಿತ್ರೆಯ ಮಹಾಪುರುಷರಿಂದಲೇ ಸ್ಥಾಪಿಸಲ್ಪಟ್ಟಿವೆ. ಅಬ್ರಹಾಮನು ಕ್ರಿ.ಪೂ. ೧೫೦೦ರಲ್ಲಿ ಜೂಯಿಷ್ ಧರ್ಮವನ್ನು ಸ್ಥಾಪಿಸಿದ. ಅವನ ದೇವರು ಜೆವೋವಾ, ಕ್ರಿ.ಪೂ. ೬೦೦ರಲ್ಲಿ ಪಾರ್ಸಿಧರ್ಮವನ್ನು ಸ್ಥಾಪಿಸಿದವನು ಝರಾಷ್ಟ್ರ, ಅವನ ದೇವರು ಅಹುರ್‌ಮಝು. ಕ್ರಿ.ಪೂ. ೫೬೫ರಲ್ಲಿ ಬೌದ್ಧ ಧರ್ಮವನ್ನು ಸ್ಥಾಪಿಸಿದ ಗೌತಮ ಬುದ್ಧನಿಗೆ ದೇವರಿರಲಿಲ್ಲ. ಜೈನಧರ್ಮವನ್ನು ಪುನರುತ್ಥಾನಗೊಳಿಸಿದ (ಕ್ರಿ.ಪೂ. ೫೮೦) ಮಹಾವೀರನಿಗೂ ದೇವರಿರಲಿಲ್ಲ. ಕ್ರಿ.ಶ. ೧ರಲ್ಲಿ ಕ್ರೈಸ್ತಧರ್ಮವನ್ನು ಸ್ಥಾಪಿಸಿದ ಏಸುಕ್ರಿಸ್ತನ ದೇವರು ಯವೋವಾ (ಪವಿತ್ರ ಬೈಬಲ್), ಪ್ರವಾದಿ ಮಹಮ್ಮದ್ ಪೈಗಂಬರ್ ಕ್ರಿಶ. ೬೨೨ರಲ್ಲಿ ಇಸ್ಲಾಂ ಧರ್ಮದ ಸ್ಥಾಪಕನಾದ. ಅಲ್ಲಾ ಅವನ ದೇವರು (ಪವಿತ್ರ ಖುರಾನ್), ಸಿಖ್‌ಧರ್ಮದ ಸ್ಥಾಪಕ ಗುರುನಾನಕ್, ಹರ ಅವನ ದೇವರು (ಮೆಕ್ಲಿಯಡ್ ೧೯೯೯), ಬಸವಣ್ಣ ೧೨ನೆಯ ಶತಮಾನದಲ್ಲಿ ಲಿಂಗಾಯತಧರ್ಮ ಸ್ಥಾಪಿಸಿದ. ಅವನ ದೈವ ಕೂಡಲಸಂಗಮದೇವ.

ಹಿಂದೂ ಧರ್ಮಕ್ಕೆ ಯಾವ ಸ್ಥಾಪಕರೂ ಇಲ್ಲ. ಅದು ಯಾವಾಗ ಸ್ಥಾಪಿತವಾಯಿತೆಂಬುದೂ ತಿಳಿದಿಲ್ಲ. ಅದಕ್ಕೆ ನಿರ್ದಿಷ್ಟವಾದ ತತ್ವ ಸಿದ್ದಾಂತಗಳಿಲ್ಲ; ಪವಿತ್ರ ಗ್ರಂಥವೆನ್ನುವುದಿಲ್ಲ. ಏಕದೇವರಿಲ್ಲ. ಆದರೆ ಕೋಟಿ ದೇವರುಗಳಿದ್ದಾರೆ. ಹಾಗಾದರೆ ಅದು ಧರ್ಮವೆ? ನಮ್ಮ ಮುಂದಿರುವ ಪ್ರಶ್ನೆಗಳಲ್ಲಿ ಅದೂ ಒಂದು.

ಪ್ರವಾದಿ ಮಹಮ್ಮದನು ತಾನು ದೇವರ ದೂತ ಎಂದು ಹೇಳಿಕೊಂಡಿದ್ದರೂ, ತಾನೇ ದೇವರು ಎಂದು ಎಲ್ಲೂ ಹೇಳಿಲ್ಲ. ವಾಸ್ತವವಾಗಿ ಮೂರ್ತಿ ಅಥವಾ ಚಿತ್ರದ ರೂಪದಲ್ಲಿ ತನ್ನನ್ನು ಪೂಜಿಸುವುದನ್ನು ಅವನು ನಿಷೇಧಿಸುತ್ತಾನೆ. ಏಸುಕ್ರಿಸ್ತನೂ ತಾನು ದೇವರಮಗನೆಂದು ಹೇಳಿಕೊಂಡಿದ್ದಾನೆ. (ವಾಸ್ತವವಾಗಿ ಎಲ್ಲರೂ ದೇವರ ಮಕ್ಕಳೇ!)

ಅದೇ ರೀತಿ, ವೇದಗಳನ್ನು ಬರೆದದ್ದು ದೇವರಲ್ಲ; ವಿಶ್ವಾಮಿತ್ರ, ಗೌತಮ, ಕಶ್ಯಪ, ಅತ್ರಿ, ಜಮದಗ್ನಿ ಮತ್ತು ವಸಿಷ್ಠರಂತಹ ಮಹಾಋಷಿಗಳು. ಆ ಋಷಿಗಳಿಗೆ ದೇವರೇ ವೇದಗಳನ್ನು ತಿಳಿಸಿದನೆಂದು ಬ್ರಾಹ್ಮಣ ವಿದ್ವಾಂಸರು ನಂಬಿದ್ದಾರೆ. ಪ್ರಾಯಶಃ ಅವರು ಅದನ್ನು ಕೇಳಿಸಿಕೊಂಡಿರಬೇಕು. ಏಕೆಂದರೆ ಅವಕ್ಕೆ 'ಶ್ರುತಿ' ಎಂದರೆ 'ಕೇಳಿದ್ದು' ಎನ್ನಲಾಗಿದೆ. ಬಹಳ ಕಾಲದಿಂದ ಅವು ಮೌಖಿಕ ಪರಂಪರೆಯಲ್ಲಿ ತಂದೆಯಿಂದ ಮಕ್ಕಳಿಗೆ, ಮಕ್ಕಳಿಂದ ಮೊಮ್ಮಕ್ಕಳಿಗೆ ಹರಿದು ಬಂದಿವೆ. ಏಕೆಂದರೆ ಬಹಳ ಕಾಲ ಅವು ಲಿಖಿತರೂಪ ತಾಳಿರಲಿಲ್ಲ.

ಈ ಹಿನ್ನೆಲೆಯಲ್ಲಿ ವೀರಶೈವವು ದೇವರಿಂದಲೇ ಸ್ಥಾಪಿತವಾಯಿತು ಎಂದು ವಾದಿಸುವುದು ವಿಚಿತ್ರವಲ್ಲದೆ ಬೇರೆಯಲ್ಲ. ವೀರಶೈವವು ದಿವ್ಯಮೂಲ ಎನ್ನುವುದು ಮುಗಿದ ಕತೆ.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ? ಪಂಚಪೀಠಗಳು ಸ್ಥಾಪನೆಯಾದದ್ದು ಯಾವಾಗ? Next