Previous ಲಿಂಗಾಯತ: ವಲಸೆ ಧರ್ಮವಲ್ಲ ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ Next

ವೀರಶೈವ : ಧರ್ಮವಲ್ಲ (ಮತವಲ್ಲ ), ವ್ರತ

*

✍ ಡಾ. ಎಂ. ಎಂ. ಕಲಬುರ್ಗಿ.

ವೀರಶೈವ : ಮತವಲ್ಲ, ವ್ರತ

ಡಾ. ಎಂ. ಚಿದಾನಂದಮೂರ್ತಿಯವರು 'ವೀರಶೈವ' ಶಬ್ದವು ೧೨ನೆಯ ಶತಮಾನಕ್ಕಿಂತ ಪೂರ್ವದ್ದೆಂದೂ, ಲಿಂಗಾಯತದ ಪರ್ಯಾಯಪದವೆಂದೂ ಭಾಷಣ, ಪತ್ರಿಕೆ, ಪುಸ್ತಕಗಳಲ್ಲಿ ಕಳೆದ ೨೦ ವರ್ಷಗಳಿಂದ ಬರೆದುದನ್ನೇ ಬರೆಯುತ್ತ (ವಿಜಯ ಕರ್ನಾಟಕ, ಸೆಪ್ಟೆಂಬರ್ ೩೦) ಬಂದಿದ್ದಾರೆ. ಅವರ ಈ ವಾದವು ಅಸತ್ಯದ ಪಕ್ಷವಹಿಸಿಕೊಂಡ ವಕೀಲನೊಬ್ಬ ತನ್ನ ವಾದವೇ ಸತ್ಯವೆಂದು ಸಮರ್ಥಿಸಿಕೊಳ್ಳುವಂತಿದೆ.

ಸಂಶೋಧನೆಯಲ್ಲಿ ಅನುಸರಿಸುವ ವೈಯಕ್ತಿಕ ನಿಲವಿನ ವ್ಯಾಖ್ಯಾನ (Interpretation) ಸತ್ಯವಿರಬಹುದು, ಅಸತ್ಯವಿರಬಹುದು. ಆಕರ ಆಧಾರಿತ ವಿಶ್ಲೇಷಣೆ (Analysis)ಸತ್ಯವಿರುತ್ತದೆ. ಹೀಗಾಗಿ ವೀರಶೈವ ಶಬ್ದದ ಪ್ರಾಚೀನತೆಯ ಬಗ್ಗೆ ವ್ಯಾಖ್ಯಾನದ ಬದಲು, ವಿಶ್ಲೇಷಣೆಯ ಮಾರ್ಗ ಅನುಸರಿಸುವುದೇ ಸರಿಯಾದ ಕ್ರಮವಾಗಿದೆ. ಇದೆಲ್ಲವನ್ನು ಬಿಟ್ಟು, ವೀರಶೈವವು ಮೊದಲಿನಿಂದಲೂ ತಾತ್ವಿಕವಾಗಿ ಇತ್ತು, ಅದನ್ನು ಆನ್ವಯಿಕಗೊಳಿಸಿದವನು ಬಸವಣ್ಣನೆಂದು ಚಿದಾನಂದಮೂರ್ತಿ ವ್ಯಾಖ್ಯಾನಿಸುವುದು ಅವೈಜ್ಞಾನಿಕವೆನಿಸುತ್ತದೆ. ಏಕೆಂದರೆ, ಅವರು ಹೇಳುವಂತೆ ತತ್ತ್ವ ಮೊದಲು, ಅದರ ಅನ್ವಯ ಆಮೇಲೆ ಘಟಿಸುವುದಿಲ್ಲ. ಅನ್ವಯ ಮೊದಲು ಜರುಗಿ, ಆಮೇಲೆ ಅದನ್ನು ಅವಲಂಬಿಸಿ ತತ್ವ ಹುಟ್ಟಿಕೊಳ್ಳುತ್ತದೆ. ಆದುದರಿಂದ ಇವರದು ವ್ಯಾಕರಣ ಮೊದಲು, ಭಾಷೆ ಆಮೇಲೆ ಎಂಬಂಥ ಅತಾರ್ಕಿಕ ವಾದವೆನಿಸುತ್ತದೆ. ಲಿಂಗಾಯತ, ವೀರಶೈವ ಭಿನ್ನವೆಂಬ ವಾದದಿಂದಾಗಿ ಸಮಾಜದಲ್ಲಿ ಅನಾಹುತವಾಗಿದೆಯೆಂದು ಚಿದಾನಂದಮೂರ್ತಿ ಹೇಳುತ್ತಾರೆ. ನಿಜಸಂಗತಿಯೆಂದರೆ ಎರಡೂ ಅಭಿನ್ನವೆಂಬ ಭ್ರಮೆಯಿಂದಾಗಿ ಶತಶತಮಾನಗಳಿಂದ ಇನ್ನೂ ದೊಡ್ಡ ಅನಾಹುತ (ಶೋಷಣೆ)ವಾಗಿದೆಯೆಂದೇ ಹೇಳಬೇಕು.

೧೨ನೆಯ ಶತಮಾನದ ಕೊಂಡಗುಳಿ ಕೇಶಿರಾಜನ ಕೃತಿ, ಶರಣರ ವಚನಗಳಲ್ಲಿ ಕಂಡುಬರುವ ವೀರಶೈವ ಶಬ್ದವು ಮುಂದಿನವರು ಸೇರಿಸಿದ ಪ್ರಕ್ಷಿಪ್ತವೆಂದು ನಾನು ಅನೇಕ ಸಲ ಆಧಾರಸಹಿತ ಬರೆದಿದ್ದು, ಇಲ್ಲಿ ಮತ್ತೆ ಅದನ್ನು ಪ್ರಸ್ತಾಪಿಸುವುದಿಲ್ಲ. ೧೩ನೆಯ ಶತಮಾನದ ಮುಖ್ಯಕವಿಗಳಾದ ಹರಿಹರಾದಿಗಳು ಲಿಂಗವಂತ, ಲಿಂಗವಂತೆ ಪದ ಬಳಸಿರುವರೇ ಹೊರತು, ವೀರಶೈವ ಪದ ಬಳಸಿಲ್ಲ. ಇದೇ ಕಾಲದ ಕೆರೆಯ ಪದ್ಮರಸ ವೀರಶೈವ ಪದ ಬಳಸದೆ, ಲಿಂಗಾಯತ ಪದ ಬಳಸಿದ್ದಾನೆ. ಇವರ ತರುವಾಯದ ಪಾಲ್ಕುರಿಕೆ ಸೋಮೇಶ್ವರನ ತೆಲುಗು ಬಸವಪುರಾಣದಲ್ಲಿಯೂ ವೀರಶೈವ ಪದ ತಪ್ಪಿಯೂ ಕಂಡುಬರುವುದಿಲ್ಲ. ಅಲ್ಲಿ ಲಿಂಗವಂತ, ಮಾಹೇಶ್ವರ, ವೀರಮಾಹೇಶ್ವರ ಪದಗಳಿವೆ. ಆದರೆ ಇದನ್ನು ಕನ್ನಡಿಸಿದ ೧೪ನೆಯ ಶತಮಾನದ ಭೀಮಕವಿ ಕೆಲವೊಮ್ಮೆ ಇಲ್ಲಿಯ ವೀರಮಾಹೇಶ್ವರ ಶಬ್ದಕ್ಕೆ ಬದಲು ವೀರಶೈವ ಶಬ್ದ ಬಳಸಿದ್ದಾನೆ. ಇದರಿಂದ ವೀರಮಾಹೇಶ್ವರಕ್ಕೆ ಪರ್ಯಾಯವಾಗಿ ವೀರಶೈವ ಪದವು ಪಾಲ್ಕುರಿಕೆ ಸೋಮ ಮತ್ತು ಭೀಮಕವಿಯ ಮಧ್ಯೆ ಅಂದರೆ, ೧೩ ಮತ್ತು ೧೪ನೆಯ ಶತಮಾನಗಳ ಮಧ್ಯೆ ಹುಟ್ಟಿದೆಯೆಂದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ೧೩ನೆಯ ಶತಮಾನದ ಎಡಬಲದಲ್ಲಿ ವೀರಮಾಹೇಶ್ವರಾಚಾರ ಸಾರೋದ್ಧಾರ, ವೀರಮಾಹೇಶ್ವರಾಚಾರಸಂಗ್ರಹ ಇತ್ಯಾದಿ 'ವೀರಮಾಹೇಶ್ವರ ಪದವನ್ನೊಳಗೊಂಡ ಶೀರ್ಷಿಕೆಯ ಕೃತಿ ಹುಟ್ಟಿವೆಯೇ ಹೊರತು, 'ವೀರಶೈವ' ಪದವನ್ನೊಳಗೊಂಡ ಶೀರ್ಷಿಕೆಯ ಒಂದೂ ಕೃತಿ ಹುಟ್ಟಿಲ್ಲ. ಇಲ್ಲಿಂದ ಮುಂದೆ ವೀರಶೈವ ಶಬ್ದದ ಬಳಕೆ ಕ್ರಮೇಣ ವರ್ಧಿಸುತ್ತ ಬಂದಿದೆ. ಈವರೆಗಿನ ವಿವರಣೆಯಿಂದ ೧೨ನೆಯ ಶತಮಾನದ ಬಳಿಕ ವೀರಮಾಹೇಶ್ವರಕ್ಕೆ ಬದಲು ವೀರಶೈವ ಎಂಬುದು ಹುಟ್ಟಿ, ಪ್ರಚಾರಕ್ಕೆ ಬಂದಿದೆಯೆಂದು ಖಚಿತವಾಗಿ ತಿಳಿದುಬರುತ್ತದೆ.

ಹೀಗೆ ಒಂದೇ ಅರ್ಥದ ವೀರ+ಮಾಹೇಶ್ವರ, ವೀರ+ಶೈವವೆಂಬಿವು ಮತದ ಹೆಸರಲ್ಲ, ಮಾಹೇಶ್ವರರಲ್ಲಿ ಕೆಲವರು ಆಚರಿಸುತ್ತಿದ್ದ ವ್ರತದ ಹೆಸರುಗಳಾಗಿವೆ. ಇಲ್ಲಿಯ ಹೆಸರೇ ತಿಳಿಸುವಂತೆ ಇದು ವೀರ(ಉಗ್ರಸ್ವರೂಪದ ಆಚರಣೆಯಾಗಿದೆ. ಮೇಲೆ ಹೇಳಿದ ವೀರಮಾಹೇಶ್ವರಾಚಾರಸಾರೋದ್ದಾರ, ವೀರಮಾಹೇಶ್ವರಾಚಾರ ಸಂಗ್ರಹ ಶೀರ್ಷಿಕೆಗಳಲ್ಲಿಯ ಆಚಾರ' ಎಂಬುದು ವ್ರತವನ್ನೇ ಸೂಚಿಸುತ್ತದೆ. ಇದರ ಸಮರ್ಥನೆಗಾಗಿ ಕೆಲವು ಆಕರಗಳನ್ನು ಇಲ್ಲಿ ಗಮನಿಸಬಹುದು. “ವೀರಮಾಹೇಶ್ವರಾ ಸರ್ವೆ ವೀರವ್ರತಪರಾಯಣಾ' ಎಂಬ ವೀರಾಗಮದ (ಕಾಲ?)ವಾಕ್ಯ, `ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ, ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ, ಇದೇತರ ವೀರಶೈವ ವ್ರತ?' ಎಂಬ ಅಮುಗಿ ರಾಯಮ್ಮನ(ಕಾಲ?) ವಚನವಾಕ್ಯಗಳು ವೀರಮಾಹೇಶ್ವರ ಅಥವಾ ವೀರಶೈವಗಳು ವ್ರತವೆಂದೇ ಖಚಿತಪಡಿಸುತ್ತವೆ. ೧೫ನೆಯ ಶತಮಾನದ ಲಕ್ಕಣದಂಡೇಶನ ಶಿವತತ್ತ್ವ ಚಿಂತಾಮಣಿಯ 'ವೀರಮಾಹೇಶ್ವರ ವ್ರತದೀಕ್ಷೆ'(೩೮-೧೮೬), 'ವೀರಶೈವವ್ರತಾಚಾರ' (೩೮-೨೦೪) ಎಂಬ ಮಾತುಗಳು ಇವುಗಳನ್ನು ವ್ರತಗಳೆಂದೇ ಕರೆದಿವೆ. ಮೇಲಿನ ವೀರಾಗಮದ ಹೇಳಿಕೆಯಲ್ಲಿ ಕಂಡುಬರುವ 'ವೀರವ್ರತ ಆಚರಿಸುವವರನ್ನು “ವೀರವ್ರತಿ'ಯೆಂದು ಕರೆಯುತ್ತಿದ್ದರು. ಚೌಡದಾನಪುರ ಶಿವದೇವ, ಕಾರಡಿಗೆ ಲಕ್ಷ್ಮಿದೇವರನ್ನು ಶಾಸನಗಳು 'ವೀರವ್ರತಿ'ಯೆಂದೇ ಸೂಚಿಸಿವೆ. ಇವರು ವೀರಭದ್ರನ ಸನ್ನಿಧಿಯಲ್ಲಿ ಈ ವ್ರತ ಧರಿಸುತ್ತಿದ್ದರೆಂದು ತೋರುತ್ತದೆ. 'ವೀರಮಾಹೇಶ್ವರಾಚಾರ ವೀರಭದ್ರಾಯತೇ ನಮಃ' ಎಂಬ ವೀರಾಗಮದ ವಾಕ್ಯ ಇದನ್ನು ಬೆಂಬಲಿಸುತ್ತದೆ. ಚೌಡದಾನಪುರ ಕಾರಡಿಗೆಗಳಲ್ಲಿ ಸುಪ್ರಸಿದ್ಧ ವೀರಭದ್ರ ದೇವಾಲಯಗಳಿವೆ. ಪರಸಮಯ ವಿಧ್ವಂಸಕ ವೀರಗೊಗ್ಗಿದೇವನನ್ನು 'ವೀರವತಿ' ಎಂದು ಕರೆದಿರುವ ಅಣ್ಣಿಗೆರೆ ಶಾಸನ(೧೧೮೪) ವೀರಭದ್ರ ದೇವಾಲಯದಲ್ಲಿರುವುದನ್ನು ಇಲ್ಲಿ ಗಮನಿಸಬೇಕು. ಕರ್ನಾಟಕದಲ್ಲಿ ಬಾಳೆಹಳ್ಳಿ ಪೀಠದ ಗೋತ್ರಪುರುಷನಾದ ವೀರಭದ್ರನ ಸ್ಥಾಪನೆ-ಆರಾಧನೆ ೧೩ನೆಯ ಶತಮಾನದಿಂದೀಚೆಗೆ ಕಂಡುಬರುವುದರಿಂದ, ಈ ದೇವರ ಸನ್ನಿಧಿಯಲ್ಲಿ ಹಿಡಿಯುತ್ತಿದ್ದ ವೀರಮಾಹೇಶ್ವರ ಅಥವಾ ವೀರಶೈವ ವ್ರತ ಇದೇ ಸುಮಾರಿಗೆ ಆಂಧ್ರದಿಂದ ವೀರಭದ್ರ ಸಹಿತ ಕರ್ನಾಟಕಕ್ಕೆ ಕಾಲಿಟ್ಟಿರಬಹುದು.

ಈ ವ್ರತಿಗಳ ಲಕ್ಷಣವನ್ನು ವೀರಮಾಹೇಶ್ವರಾಚಾರಸಂಗ್ರಹ(೧೩ನೆಯ ಶತಮಾನ) ಹೀಗೆ ತಿಳಿಸುತ್ತದೆ: 'ಶಿವನನ್ನು ನಿಂದಿಸಿದವನ ಬಾಯಿಯನ್ನು ಹರಿಯಬೇಕು. ಇದು ಸಾಧ್ಯವಾಗದಿದ್ದರೆ ಬೇರೊಂದು ಸ್ಥಳಕ್ಕೆ ಹೋಗಬೇಕು. ಶಿವಾಲಯ, ಶಿವೋದ್ಯಾನ, ಶಿವಗ್ರಾಮಗಳ ರಕ್ಷಣೆಯಲ್ಲಿ ತೊಡಗಬೇಕು. ಶಿವಸ್ಥಾನದ ಒಡವೆಗಳನ್ನು ಅಪಹರಿಸುವ ನರಾಧಮನನ್ನು ಸಂಹರಿಸಬೇಕು. ಹೀಗೆ ಮಾಡಿದವನಿಗೆ ಉತ್ಕೃಷ್ಟವಾದ ಶಿವಲೋಕ ಪ್ರಾಪ್ತಿಯಾಗುತ್ತದೆ. ಶಿವಲಿಂಗ ಮುದ್ರೆಯ ಹೋರಿಯನ್ನು ಕೊಲ್ಲುವ ದುರಾತ್ಮನನ್ನು 'ವೀರಮಾಹೇಶ್ವರವ್ರತಿ'ಯು ಕೊಲ್ಲಬೇಕು.” ಈ ಹೇಳಿಕೆಯಲ್ಲಿಯ ವೀರಮಾಹೇಶ್ವರವತಿ' ಎಂಬ ಶಬ್ದವನ್ನು ಗಮನಿಸಬೇಕು.

ಈ ಉಗ್ರವ್ರತಧಾರಿಗಳು ಪರಧರ್ಮಿಯರನ್ನು, ಪರಧರ್ಮದ ದೇವಾಲಯಗಳನ್ನು ಧ್ವಂಸಗೊಳಿಸುತ್ತಿದ್ದುದಲ್ಲದೆ, ವೀರಭಕ್ತಿ ಪ್ರಕಟಣೆಗಾಗಿ ತಮ್ಮ ರುಂಡವನ್ನು ಏಕಾಂಗಿಯಾಗಿ ಇಲ್ಲವೆ ಸಾಮೂಹಿಕವಾಗಿ ದೇವರಿಗೆ, ಅದರಲ್ಲಿಯೂ ವೀರಭದ್ರದೇವರಿಗೆ ಅರ್ಪಿಸುತ್ತಿದ್ದರು. ಕನ್ನಕಿಗೆರೆಯ ವೀರೇಶ್ವರನ ಮುಂದೆ ಚೆನ್ನಬಸವಣ್ಣ ಮತ್ತು ಜುಂಜುವೀರಭದ್ರ ಹೆಸರಿನ ಭಕ್ತರು ಎದುರು ಬದುರು ನಿಂತು, ಪರಸ್ಪರ ರುಂಡ ಕತ್ತರಿಸಿದುದನ್ನು ಶಿವತತ್ತ್ವ ಚಿಂತಾಮಣಿ(೩೮-೧೯೧) ಹೇಳುತ್ತದೆ. ಹೀಗೆ ರುಂಡ ಕತ್ತರಿಸಿಕೊಳ್ಳಲು ಗಂಡಗತ್ತರಿ ಬಳಸುತ್ತಿದ್ದರು. ದಾವಣಗೆರೆಯ ಸಮೀಪದ ಆವರಗೆರೆ ಗ್ರಾಮದ ವೀರಭದ್ರ ದೇವಾಲಯದ ಮುಂದೆ ಕತ್ತರಿಸಿದ ರುಂಡಗಳ ಎರಡು ಶಿಲ್ಪ ಮತ್ತು ಗಂಡಗತ್ತರಿಯನ್ನು ಅಳವಡಿಸುವ ಎರಡು ಕಲ್ಲಿನ ಕಂಬಗಳಿದ್ದು, ಇವುಗಳನ್ನು ಸ್ಥಳೀಯರು ಗಂಡಗತ್ತರಿ ಕಂಬವೆಂದೇ ಕರೆಯುತ್ತಾರೆ. ಇಂಥ ಕಂಬಗಳ ವರ್ಣನೆಯೊಂದಿಗೆ ವೀರಭದ್ರನ ಮುಂದೆ ಗಂಡಗತ್ತರಿಗೆ ತಲೆಗೊಟ್ಟ ಆನೆಗೊಂದಿ ವೀರಣಯ್ಯನೆಂಬವನ ಉಲ್ಲೇಖ ಶಿವತತ್ತ್ವ ಚಿಂತಾಮಣಿ(೩೮-೨೦೩)ಯಲ್ಲಿದೆ. ಹರಿಹರನ ಕೊವೂರು ಬ್ರಹ್ಮಯ್ಯನ ರಗಳೆಯಲ್ಲಿ ೩೦೦ಜನ ವೀರಮಾಹೇಶ್ವರರು ಏಕಕಾಲಕ್ಕೆ ರುಂಡ ಅರ್ಪಿಸಿದ ವಿವರಗಳಿವೆ. ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ವೀರಶಿರೋಮಂಟಪದ ಕಂಬಗಳ ಮೇಲೆ ಆತ್ಮಾಹುತಿ ಮಾಡಿಕೊಳ್ಳುತ್ತಿರುವವರ ಶಿಲ್ಪಗಳಿವೆ. ಇದೇ ದೇವಾಲಯದ ಆವರಣ ಗೋಡೆಯ ಮೇಲೆ ಶಿವಲಿಂಗ ಸನ್ನಿಧಿಯಲ್ಲಿ ನಾಲ್ಕು ಸಾಲುಗಳಾಗಿ ಹೊಂದಿಸಿದ ಅನೇಕ ರುಂಡಗಳ ಶಿಲ್ಪವಿದೆ. 'ಜೈನಮೃಗ ಬೇಟೆಕಾರ “ವೀರವ್ರತಿ'ಯೆಂದು ಕರೆದುಕೊಂಡ ವೀರಗೊಗ್ಗದೇವನ ಶಿಲಾಶಾಸನ ಅಣ್ಣಿಗೆರೆಯ ವೀರಭದ್ರ ದೇವಾಲಯದ ಆವರಣದಲ್ಲಿದ್ದು, ಇತ್ತೀಚೆಗೆ ಅಲ್ಲಿ ಲಭ್ಯವಾದ ೫೦೦ರಷ್ಟು ರುಂಡಗಳು ಹೀಗೆ ಆತ್ಮಬಲಿಯಾದವರಿಗೆ ಸಂಬಂಧಿಸಿರಬೇಕು. ಈ ರೀತಿ ಆತ್ಮಾರ್ಪಣೆ ಮಾಡಿಕೊಳ್ಳಲು ಬರುವವರ ಬೀಜಚ್ಛೇದ, ಕುಕ್ಷಿಚ್ಛೇದ, ಶಿರಚ್ಛೇದ ಕಾರ್ಯನಿರ್ವಹಿಸುವ 'ವೀರಭದ್ರ' ನಾಮಧೇಯರು ಮತ್ತು ಇವರಿಗೆ ನೆರವಾಗುವ ೨೦ಜನ 'ವೀರಮುಷ್ಠಿ'ಗಳು ಪ್ರಸಿದ್ಧ ಗೋಳಕಿಮಠದಲ್ಲಿದ್ದರೆಂದು ಆಂಧ್ರಪ್ರದೇಶದ ಮಲಕಾಪುರಂ ಶಾಸನ (೧೨೬೧)ತಿಳಿಸುತ್ತದೆ. ಇಂಥ ಉಗ್ರ ವೀರಮಾಹೇಶ್ವರ (ವೀರಶೈವ) ರಿಗೆ 'ಅಸಂಖ್ಯಾತ'ರೆಂದು ಕರೆಯುತ್ತಿದ್ದರೆಂದು ಅಣ್ಣಿಗೆರೆ, ತಾಳಿಕೋಟಿ, ಕುಡುತಿನಿ, ಇಂಗಳಗಿ, ಶ್ರೀಶೈಲ ಮೊದಲಾದ ಶಾಸನಗಳು ಸೂಚಿಸುತ್ತವೆ. ಇಂದಿನ ಪುರವಂತರು(ವೀರಗಾಸೆ) ಈ ಪರಂಪರೆಯ ಅವಶೇಷವೆಂದು ಕಾಣುತ್ತದೆ.

ಒಟ್ಟಾರೆ, ವೀರಭದ್ರನ ಮುಂದೆ ಹೀಗೆ ವೀರವ್ರತ ಹಿಡಿಯುತ್ತಿದ್ದ ಮಾಹೇಶ್ವರರು ವೀರಮಾಹೇಶ್ವರ ಎನಿಸುತ್ತಿದ್ದರು. ಮೇಲೆ ಹೇಳಿದಂತೆ ಈ 'ವೀರಮಾಹೇಶ್ವರವ್ರತ'ಕ್ಕೆ ಪರ್ಯಾಯವಾಗಿ ವೀರಶೈವವ್ರತ' ಎಂಬ ಹೆಸರು ಆಮೇಲೆ ಬಳಕೆಗೆ ಬಂದಿತು. ವಿಷಾದದ ಸಂಗತಿಯೆಂದರೆ, ಈ 'ವೀರಶೈವವ್ರತ'ವು 'ವೀರಶೈವ ಮತ'ವೆಂದು ತಪ್ಪು ಪ್ರಚಾರ ಪಡೆದು, ಲಿಂಗಾಯತಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತ ಬಂದಿತು. 'ದಯವೇ ಧರ್ಮದ ಮೂಲ'ವೆಂಬ ಅಹಿಂಸಾ ನಿಲವಿನ ಲಿಂಗಾಯತಕ್ಕೆ ಹಿಂಸಾ ನಿಲವಿನ ಈ ವೀರಶೈವ ತಗಲಿಕೊಂಡಿತು. ಇದಕ್ಕೆ ಮೊದಲು ಮೋಸ ಹೋದವರು ಗುರುಸ್ಥಾನದಲ್ಲಿರುವ ಕರ್ನಾಟಕದ ಶರಣ ಜಂಗಮರು. ಇವರನ್ನು ಬಳ್ಳಿಗುರುಡರಂತೆ ಹಿಂಬಾಲಿಸಿದವರು ಶಿಷ್ಯಸ್ಥಾನದಲ್ಲಿರುವ ಶರಣಭಕ್ತರು.

ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು

*
ಪರಿವಿಡಿ (index)
Previous ಲಿಂಗಾಯತ: ವಲಸೆ ಧರ್ಮವಲ್ಲ ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ Next