Previous ಬಸವ ಪಂಚಮಿ ನಿಮಿತ್ತ ಲೇಖನ ಹುರುಳಿಲ್ಲದ ವಿಷಯ Next

ವೀರಶೈವ ಮತ್ತು ಲಿಂಗಾಯತ

*

- ಆರ್. ಪಿ. ಅಪರಾಜ, ಆಂಜನೇಯ ನಗರ, ಬೆಳಗಾವಿ

ವೀರಶೈವವೇ ಬೇರೆ ಲಿಂಗಾಯತವೇ ಬೇರೆ

ಡಾ. ಚಿದಾನಂದಮೂರ್ತಿಯವರು ಇತ್ತೀಚೆಗೆ ಬಸವಣ್ಣ ಒಬ್ಬ ಅನ್ವಯಿಕ ವಿಜ್ಞಾನಿ, ಧರ್ಮ ಸಂಸ್ಥಾಪಕನಲ್ಲ ಮತ್ತು ಲಿಂಗಾಯತ ವೀರಶೈವ ಒಂದೇ ಎಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ಅವರ ವಾದವನ್ನು ಸಾಧಾರಪೂರ್ವಕ ನಿರಾಕರಿಸುವ ಒಂದು ಪ್ರಯತ್ನವನ್ನು ಈ ಲೇಖನದಲ್ಲಿ ಚಿಂತನಶೀಲರಾದ ಆರ್. ಪಿ. ಅಪರಾಜ ಅವರು ಮಾಡಿದ್ದಾರೆ.

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬುದು ಡಾ. ಚಿದಾನಂದಮೂರ್ತಿಯವರಿಗೆ ಗೊಸ್ಪೆಲ್ ಟ್ರುಥ್ ಆಗಿದೆ. ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂಬ ಭ್ರಮೆಯನ್ನು ಕೆಲವು ವಿದ್ವಾಂಸರು ಮೂಡಿಸಿರುವುದು ವಿಶೇಷವಾಗಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಮಾಡಬಹುದಾದ ಅನಾಹುತವನ್ನು ಮಾಡಿಬಿಟ್ಟಿದೆ. ಮತ್ತು ಆ ಭೇದ ಪರಿಕಲ್ಪನೆ ದ್ವೇಷದ ಬೆಂಕಿಯನ್ನು ಕೆಲವೆಡೆ ಹಚ್ಚಿದ ಎಂಬ ಡಾ. ಮೂರ್ತಿಯವರ ಕಟುವಾದ ಹೇಳಿಕೆ (ವಿ.ಕ. ೩೦.೭.೨೦೧೧) ಹೊಸದೇನಲ್ಲ. ವೀರಶೈವ ಎಂದರೂ ಒಂದೇ ಲಿಂಗಾಯತ ಎಂದರೂ ಒಂದೇ-ಮಹಮ್ಮದೀಯ-ಮುಸ್ಲಿಂ ಇದ್ದಂತೆ ಎಂಬ ತಮ್ಮ ಅಭಿಪ್ರಾಯವನ್ನು ಲಿಂಗಾಯತರ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವ ಅವರ ಪ್ರಯತ್ನವಿದು.

ಈ ಹಿಂದೆ ಶ್ರೀ ಸಿದ್ದಗಂಗಾಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳ ಶತಮಾನೋತ್ಸವ ಸಂದರ್ಭದಲ್ಲಿ (ಏ.೨೦೦೯) ವೀರಶೈವ ಲಿಂಗಾಯತ ಭಿನ್ನ ಭಿನ್ನ ಪದಗಳಾದರೂ ಅದರ ಪರಿಕಲ್ಪನೆ ಒಂದೇ ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ, ಅಪ್ರಬುದ್ಧರಾದ ಕೆಲವು ಗಣ್ಯರು ಉತ್ತರ ಕರ್ನಾಟಕದಲ್ಲಿ ವೀರಶೈವ-ಲಿಂಗಾಯತ ಬೇರೆ ಬೇರೆ ಎಂಬ ಭೇದದ ಬೆಂಕಿ ಹಚ್ಚುತ್ತಿರುವುದು ಧಗ ಧಗ ಉರಿಯುತ್ತ ಹಬ್ಬುತ್ತಿದೆ. ಆ ಬೆಂಕಿಗೆ ಗಣ್ಯರ ದೇಹಗಳೆಲ್ಲ, ಅವರ ಕೀರ್ತಿ ಪ್ರತಿಷ್ಠೆಗಳು ಸಿಕ್ಕು ಮುಂದೆ ಬೂದಿಯಾದರೂ ಆಶ್ಚರ್ಯವಿಲ್ಲ ಎಂದು ಹತಾಶೆಯ ನುಡಿಗಳನ್ನಾಡಿ ತಮ್ಮ ಅಸಹನೆಯನ್ನು ತೋಡಿಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ (೧೯೯೫) ಸಂದರ್ಭದಲ್ಲಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಕೊಂಡಗುಳಿ ಕೇಶಿರಾಜ ವೀರಶೈವ-ಲಿಂಗಾಯತ ಮೊದಲ ಕವಿ; ಆತ ತನ್ನ ಕಾವ್ಯಗಳಲ್ಲಿ 'ಲಿಂಗಾಯತ' 'ವೀರಶೈವ' ಎಂಬ ಎರಡೂ ಪದಗಳನ್ನು ಬಳಸಿದ್ದಾನೆ ಎಂಬುದಾಗಿ ಮತ್ತು ವೀರಶೈವರು (ಲಿಂಗಾಯತರು) ಹಿಂದೂಗಳೇ ಎಂಬ ಪ್ರಮೇಯಗಳನ್ನು ಡಾ. ಮೂರ್ತಿಯವರು ಮಂಡಿಸಿದ್ದರು. ಅದೇ ಸಮ್ಮೇಳನದಲ್ಲಿ 'ಶರಣ ಸಾಹಿತ್ಯದಲ್ಲಿ ಪ್ರತಿಭಟನೆ' ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯರು (ಸಾಣೇಹಳ್ಳಿ) ಡಾ. ಮೂರ್ತಿಯವರ ವೀರಶೈವ-ಲಿಂಗಾಯತ ಕುರಿತು ಮಂಡಿಸಿದ ಪ್ರಮೇಯಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತ ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದ್ದು ಅದು ಹಿಂದೂ ಧರ್ಮದ ಪ್ರಭೇದವಲ್ಲ; ವೀರಶೈವ-ಲಿಂಗಾಯತ ಪದಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದೇ ಇದ್ದರೂ, ತಾತ್ವಿಕ ಹಿನ್ನೆಲೆಯಲ್ಲಿ 'ಲಿಂಗಾಯತ' ಪದ ಬಳಸುವುದು ಅರ್ಥಪೂರ್ಣವಾದುದು ಎಂದು ಸ್ಪಷ್ಟಿಕರಣ ನೀಡಿದರು.

ಪ್ರಸಕ್ತ ತಮ್ಮ ಅಂಕಣದಲ್ಲಿ (ವಿ.ಕ. ೩೦.೭.೨೦೧೧) ಬಸವಣ್ಣನವರು, ಸಿದ್ಧರಾಮ ಮತ್ತು ಅಲ್ಲಮರು ತಮ್ಮ ವಚನಗಳಲ್ಲಿ ವೀರಶೈವ ಪದಬಳಕೆ ಮಾಡಿದ ಕುರಿತು ಡಾ. ಮೂರ್ತಿಯವರು ಪ್ರಸ್ತಾಪಿಸಿದ್ದಾರೆ. ಹಾಗೆನೆ, ಗದಗದ ತೋಂಟದಾರಮಠದ ಎಡೆಯೂರು ಸಿದ್ಧಲಿಂಗೇಶ್ವರರು ಕೂಡ ವೀರಶೈವ ಪದ ಪ್ರಯೋಗ ಮಾಡಿದ ಕುರಿತು ಉಲ್ಲೇಖಿಸಿದ್ದಾರೆ. ಇದೇ ವಿಷಯ ಕುರಿತು, ಈ ಹಿಂದೆ ಒಂದು ಪತ್ರಿಕಾ ಹೇಳಿಕೆಯನ್ನು ಕೂಡ ನೀಡಿ, ಗದಗ ಹಾಗು ಚಿತ್ರದುರ್ಗದ ಮಠಗಳ ಯತಿಗಳು ೧೬ ಹಾಗು ೧೭ನೇ ಶತಮಾನದಲ್ಲಿ ತಪ್ಪಿಯೂ ಕೂಡ ತಮ್ಮನ್ನು ಲಿಂಗಾಯತರೆಂದು ಕರೆದುಕೊಂಡಿಲ್ಲ. ಆದ್ದರಿಂದ ಅವು ಲಿಂಗಾಯತ ಮಠಗಳಾಗಿರದೆ, ವೀರಶೈವ ಮಠಗಳೆಂದು ಸ್ವಯಂನಿರ್ಧಾರ ಕೈಕೊಂಡ ಡಾ. ಮೂರ್ತಿಯವರು ಪರೋಕ್ಷವಾಗಿ ಲಿಂಗಾಯತ ವೀರಶೈವ ಪರ್ಯಾಯ ಪದಗಳಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ರೀತಿ ಪತ್ರಿಕಾ ಹೇಳಿಕೆ ನೀಡುವಾಗ, ಪ್ರಾಯಶಃ ಬಸವಣ್ಣನವರು ಬಸವ ಧರ್ಮದ ಸಂಸ್ಥಾಪಕರು, ವಚನ ಸಾಹಿತ್ಯ ಧರ್ಮಗ್ರಂಥ ಮತ್ತು ಬಸವ ಧರ್ಮವೇ ಲಿಂಗಾಯತ ಎಂದು ತೋಂಟದ ಸಿದ್ಧಲಿಂಗ ಸ್ವಾಮಿಗಳು, ಜಮಖಂಡಿಯ ಬಸವತತ್ವ ಪ್ರಚಾರ ಸಂಸ್ಥೆಯ ಶರಣ ಸಮ್ಮೇಳನದ ಸಂದರ್ಭದಲ್ಲಿ (ಫೆ. ೧೯೮೯) ನೀಡಿದ ಸ್ಪಷ್ಟಿಕರಣ ಡಾ. ಮೂರ್ತಿಯವರ ಗಮನಕ್ಕೆ ಬಂದಂತಿಲ್ಲ ಅಂತ ತೋರುತ್ತದೆ.

ಬಸವಾದಿ ಶಿವಶರಣರ ವಚನಗಳಲ್ಲಿ ಡಾ. ಮೂರ್ತಿಯವರು ಪ್ರತಿಪಾದಿಸುವಂತೆ ವೀರಶೈವ ಮತ್ತು ಲಿಂಗಾಯತ ಎರಡೂ ಪದಗಳ ಬಳಕೆಯಾಗಿದೆ. ಆದರೆ,
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಈ ವರೆಗೆ ಸಂಕಲಿತವಾದ ಸಾವಿರ ಸಾವಿರ ವಚನಗಳೆಲ್ಲ ನಿಜವಚನಗಳೆ ಹೇಗೆ ಎಂಬುದು. ಗಟ್ಟಿಯಾದ ಆಕರಗಳನ್ನು ಆಧರಿಸಿ ಷಟ್‌ಸ್ಥಲ ಕ್ರಮಾಂಕದಲ್ಲಿ ಸಂಗ್ರಹಿಸಿದ ವಚನಗಳು ಮಾತ್ರ ನಂಬಿಕೆಗೆ ಪಾತ್ರವಾದ ನಿಜವಚನಗಳು ಎಂಬುದು ವಿದ್ವಾಂಸರ ಅಭಿಪ್ರಾಯ. ಹೀಗೆ ಸ್ಥಲಕಟ್ಟಿಗನುಸಾರವಾಗಿ ಸಂಗ್ರಹಿಸಲ್ಪಟ್ಟವು ಬಸವಣ್ಣನವರ, ಚನ್ನಬಸವಣ್ಣನವರ ಸಿದ್ಧರಾಮ ಮತ್ತು ಅಲ್ಲಮರ ವಚನಗಳು ಮಾತ್ರ. ಇನ್ನುಳಿದ ನೂರಾರು ಜನ ಶರಣ-ಶರಣೆಯರ ವಚನಗಳನ್ನು ಈ ರೀತಿಯಾಗಿ ಸ್ಥಲಕಟ್ಟಿಗನುಸಾರವಾಗಿ ವಿಭಜಿಸುವ ಕಾರ್ಯ ಈವರೆಗೆ ನಡೆದಿಲ್ಲ.

ಈ ರೀತಿಯಾಗಿ ನಿಜವಚನಗಳೆಂದು ಗ್ರಹಿಸಲಾದ ಷಟ್‌ಸ್ಥಲ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ ಮುಂತಾದ ಪ್ರಥಮ ಸಾಲಿನ ವಚನಕಾರರು ಲಿಂಗವಂತ ಪದಪ್ರಯೋಗ ಮಾಡಿದ್ದು ಮಾತ್ರ ಕಂಡುಬರುತ್ತದೆ. ಬಸವಣ್ಣನವರು ತಮ್ಮ ಮೂರು ವಚನಗಳಲ್ಲಿ (ವ. ೧೫೧, ೬೫೩, ೬೮೫ ಸ.ವ.ಸಂ. ೧೯೯೩) ಲಿಂಗವಂತ ಪದ ಬಳಕೆ ಮಾಡಿದ್ದಾರೆ. ಅದರಂತೆ ಚೆನ್ನಬಸವಣ್ಣನವರ ಐದು ವಚನಗಳಲ್ಲಿ (ವ.ಸಂ. ೨೫೦, ೨೫೩ ೪೦೬, ೫೮೦, ೫೯೬) ಅಲ್ಲಮರ ಐಕ್ಯಸ್ಥಲದ ಒಂದು ವಚನದಲ್ಲಿ (ವ.ಸಂ. ೬೦೮) ಲಿಂಗವಂತ ಪದಬಳಕೆಯಾಗಿದೆ. ಸಿದ್ಧರಾಮನ ಎರಡು ವಚನಗಳಲ್ಲಿ (ವ.ಸಂ. ೧೫೭೪, ೧೫೭೫) ಲಿಂಗವಂತ ಹಾಗು ನಾಲ್ಕು ವಚನಗಳಲ್ಲಿ (ವ.ಸಂ. ೧೧೬೭ ೧೩೫೪, ೧೩೮೩ ೧೪೯೮) ವೀರಶೈವ ಪದಬಳಕೆ ಆಗಿದೆ; ಆದರೆ, ಅಲ್ಲಮರ ಈ ಎಲ್ಲ ಆರು ವಚನಗಳು ಪಿ.ಎಂ. ಗಿರಿರಾಜು ಅವರ (ಸೊಲ್ಲಾಪುರ) ಸಂಪಾದನೆಯಲ್ಲಿ ಖೋಟಾ ವಚನಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ. ಹಾಗು ಲಿಂಗವಂತ ಪದಪ್ರಯೋಗವಾದ ಸಿದ್ಧರಾಮೇಶ್ವರ ಒಂದು ವಚನ (ಸಂ. ೨೧) ಶ್ರೀ ಗಿರಿರಾಜು ಅವರ ನಿಜವಚನಗಳ ಪಟ್ಟಿಯಲ್ಲಿದೆ. ಚೆನ್ನಬಸವಣ್ಣನವರ ಒಂದು ವಚನದಲ್ಲಿ (ವ.ಸಂ. ೨೩೯) ವೀರಶೈವ ಪದ ಕಂಡು ಬರುತ್ತಿದ್ದರೂ ಕೂಡ ಅದು ಪ್ರಕ್ಷಿಪ್ತ ವಚನವಾಗಿರಬಹುದೆಂಬ ಶಂಕೆ ವಿದ್ವಾಂಸರದಾಗಿದೆ. ಒಟ್ಟಿನಲ್ಲಿ ಸ್ಥಲಕಟ್ಟಿನ ನಿಜವಚನಗಳಲ್ಲಿ ಲಿಂಗವಂತ ಶಬ್ದ ಪ್ರಯೋಗವಾದದ್ದು ಸಾಮಾನ್ಯವಾಗಿದೆ. ಲಿಂಗವಂತದ ತದ್ಭವ ರೂಪವೇ ಸಂಪ್ರದಾಯವಾಗಿ ಬಳಕೆಯಲ್ಲಿ ಬಂದ 'ಲಿಂಗಾಯತ' (ಎಂ. ಆರ್. ಸಾಖರೆ).

ವಚನಗಳಲ್ಲಿ ವೀರಶೈವ ಲಿಂಗಾಯತ ಪದಪ್ರಯೋಗ ಕುರಿತಂತೆ ಇನ್ನೊಂದು ಸೂಕ್ಷ್ಮವಾದ ಸಂಗತಿ ಗಮನಕ್ಕೆ ಬರುತ್ತದೆ. ಶ್ರೀ ಶಿವಯೋಗಿ ಶಿವಾಚಾರ್ಯ ರಚಿತ (ಕಾಲನಿರ್ಣಯವಾಗಿಲ್ಲ) ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ (ಮಹಾಪಾಶುಪತ) ಶೈವದ ಒಂದು ಪ್ರಭೇದವೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಶೈವರು, ವೀರಶೈವರಾಗಿ ನಂತರ ಬಸವಣ್ಣನವರ ಪ್ರಭಾವಲಯದಲ್ಲಿ ಬಂದು ಲಿಂಗಾಯತ ರಾದರು ಎಂಬುದು ಸತ್ಯ ಸಂಗತಿಯಾಗಿದೆ. ಬಸವಣ್ಣನವರ “ಅಂಗಲಿಂಗ ಸಂಗ ಸುಖಸಾರಾಯದನುಭಾವ ಲಿಂಗವಂತರಿಗಲ್ಲದೆ ಸಾಧ್ಯವಾಗದು ನೋಡಾ, ಏಕಲಿಂಗ ಪರಿಗ್ರಾಹಕನಾದ ಬಳಿಕ, ಆ ಲಿಂಗನಿಷ್ಠೆ ಗಟ್ಟಿಗೊಂಡು ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದ ಭೋಗಿ ಯಾಗಿ ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ (ವ.ಸಂ. ೯೬೬) ಎಂಬ ವಚನದಲ್ಲಿ ವೀರಶೈವ ಲಿಂಗವಂತನಾಗುವ ಪ್ರಕ್ರಿಯೆ ಕುರಿತ ವಿವರಣೆ ಇದೆ. ಅಷ್ಟೇ ಅಲ್ಲ ಪ್ರಸಕ್ತ ವಚನದಲ್ಲಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಿಕರಿಸಲಾಗಿದೆ.

ವಚನಗಳಲ್ಲಿ ಲಿಂಗವಂತ, ಲಿಂಗವಂತ ಪದವಾಗಿಯೇ ಬಳಕೆಯಾಗಿದೆ. ಆದರೆ ವೀರಶೈವ ಹಾಗಿಲ್ಲ; ಕೆಲವೊಂದು ವಚನಗಳಲ್ಲಿ ವೀರಶೈವ ಗುಣವಾಚಕವಾಗಿ, ನಿಜವೀರಶೈವ ಪರಮ ವೀರಶೈವ, ವೀರಶೈವ ಸಂಪನ್ನ ಮುಂತಾಗಿ ಬಳಸಲ್ಪಟ್ಟಿದೆ. ಇದು ಬಹುಶಃ ವೀರಶೈವ, ಲಿಂಗವಂತನಾಗುವ ಪ್ರಕ್ರಿಯೆಯ ಆತನ ವಿವಿಧ ಹಂತಗಳನ್ನು ಸೂಚಿಸುವಂತಿದೆ.

ಶೈವನಾಗಿದ್ದ ಪುಲಿಗೆರೆಯ ಶರಣ ಆದಯ್ಯ ತನ್ನ ವಚನಗಳಲ್ಲಿ ಸ್ವಾಭಾವಿಕವಾಗಿ ವೀರಶೈವ ಪದವನ್ನೇ ಬಳಸಿದ್ದಾನೆ. ಶೈವ ಹಿನ್ನೆಲೆಯ ಚಂದಿಮರಸ, ಮೋಳಿಗೆಯ ಮಾರಯ್ಯ ಕೂಡ ವೀರಶೈವ ಪದಪ್ರಯೋಗ ಮಾಡಿದ್ದಾರೆ. ಕೊಂಡಗುಳಿ ಕೇಶಿರಾಜ ಶೈವನೆ ಹೊರತು ಲಿಂಗಾಯತ ನಾಗಿರಲಿಲ್ಲ. ಆತ ಪೂಜಿಸುತ್ತಿದ್ದುದು ಸ್ಥಾವರಲಿಂಗದ ಚಿಕ್ಕ ಪ್ರತಿಮೆಯೆ ಹೊರತು ಇಷ್ಟಲಿಂಗವನ್ನಲ್ಲ. ಆದ್ದರಿಂದ ಕೇಶಿರಾಜ ಕೂಡ ವೀರಶೈವ ಪದಬಳಕೆ ಮಾಡಿದ್ದು ಆಶ್ಚರ್ಯವಲ್ಲ. ಸ್ಥಾವರಾರಾಧಕನಾಗಿದ್ದ ಶಿವಯೋಗಿ ಸಿದ್ಧರಾಮ ಕೂಡ ಶೈವ ಸಂಪ್ರದಾಯದವನೇ ಆಗಿದ್ದ. 'ಸಿದ್ಧರಾಮನಾಥಂ ಶೈವ ಸಾಮ್ರಾಜ್ಯಸುಖ'ದಲ್ಲಿ ಇದ್ದನೆಂದು ಉಲ್ಲೇಖ ರಾಘವಾಂಕನ ಕಾವ್ಯದಲ್ಲಿರುವುದನ್ನು ಗಮನಿಸಬಹುದು. ಆತ ಚೆನ್ನ ಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ಲಿಂಗಾಯತನಾದ ನೆಂದು ಸ್ಪಷ್ಟವಾಗಿದೆ. ಹಾಗಾಗಿ ಸಿದ್ಧರಾಮನ ವಚನಗಳಲ್ಲಿ ವೀರಶೈವ-ಲಿಂಗಾಯತ ಎರಡೂ ಪದಗಳು ಬಳಕೆಯಾಗಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಪೂರ್ವದಲ್ಲಿ ಧರ್ಮವಂಚಿತ ನಾಗಿದ್ದ, ಶೈವ-ವೀರಶೈವಗಳ ಸೋಂಕಿಲ್ಲದ ಶೂದ್ರ ಸಮುದಾಯದ ಉರಿಲಿಂಗಪೆದ್ದಿಯ ವಚನಗಳಲ್ಲಿ ೭೬ ಸಲ ಲಿಂಗವಂತ ಪದ ಬಳಕೆಯಾದದ್ದನ್ನು ಕಾಣುತ್ತೇವೆ. ವೀರಶೈವ ಪದ ತಪ್ಪಿಯೂ ಕೂಡ ಬಳಕೆಯಾಗಿಲ್ಲ. ಆತ ಬಸವಣ್ಣನವರ ಪ್ರಭಾವಲಯದಲ್ಲಿ ಬಂದ ನಂತರ ನೂತನ ಬಸವಧರ್ಮ ಸ್ವೀಕರಿಸಿ ಲಿಂಗಾಯತನಾದ.

ಬಸವಣ್ಣನವರನ್ನು ತೀರ ಹತ್ತಿರದಿಂದ ಬಲ್ಲ ೧೩ನೇ ಶತಮಾನದ ಹರಿಹರ, ರಾಘವಾಂಕರು ವೀರಶೈವ ಪದಬಳಕೆ ಮಾಡಿಲ್ಲ. ಕೆರೆಯ ಪದ್ಮರಸ ಬಳಸಿದ್ದು ಲಿಂಗಾಯತ ಪದ. ಕ್ರಿ.ಶ. ೧೮೭೫ರಲ್ಲಿ ರೆ. ಎಫ್. ಕಿಟೆಲ್ ಅವರು ಕನ್ನಡ ಸಾಹಿತ್ಯವನ್ನು ಜೈನ ಸಾಹಿತ್ಯ ಶೈವ ವೈಷ್ಣವ ಸಾಹಿತ್ಯ ಹಾಗು ಲಿಂಗಾಯತ ಸಾಹಿತ್ಯಗಳೆಂದು ವಿಭಜಿಸಿದರೆ ಹೊರತು ಲಿಂಗಾಯತ ಸಾಹಿತ್ಯಕ್ಕೆ ವೀರಶೈವ ಸಾಹಿತ್ಯವೆಂದು ಕರೆಯಲಿಲ್ಲ. ಕ್ರಿ.ಶ. ೧೯೦೧ರಲ್ಲಿ ಮುಂಬಯಿ ಕರ್ನಾಟಕದ ಜನಗಣತಿ ಕೈಕೊಂಡ ಎಂಥೊವೆನ್ ಎಂಬ ಅಧಿಕಾರಿ 'An essay on the rituals and organization of Lingayats'o ಗ್ರಂಥದ ೨೪ ಶೀರ್ಷಿಕೆಗಳಲ್ಲಿ ಲಿಂಗಾಯತ ಪದವನ್ನೇ ಬಳಸಿದ್ದಾನೆ. ಕ್ರಿ.ಶ. ೧೮೬೮ರಲ್ಲಿ ಬೆಳಗಾವಿಯಲ್ಲಿ ಪ್ರಾರಂಭಿಸಿದ ಲಿಂಗಾಯತ ಉಚಿತ ಪ್ರಸಾದ ನಿಲಯ, ಸರ್ಕಾರದ ಪ್ರಕಟಣೆಯಲ್ಲೂ ಕೂಡ ಲಿಂಗಾಯತ ವೆಂದೇ ನಮೂದ ಆಗಿದೆ. ಹೀಗೆ. ೨೦ನೇ ಶತಮಾನದ ಪ್ರಾರಂಭಿಕ ಹಂತದವರೆಗೆ ಪ್ರಚಲಿತದಲ್ಲಿದ್ದ ಕೇವಲ ಲಿಂಗಾಯತ ಪದ, ಬಹುಶಃ ಕ್ರಿ.ಶ. ೧೯೦೪ರಲ್ಲಿ ಅ.ಭಾ. ವೀರಶೈವ ಮಹಾಸಭೆಯ ಸಂಸ್ಥಾಪನೆಯೊಂದಿಗೆ ಉಭಯ ಪದಗಳು ಬಳಕೆಯಲ್ಲಿ
ಬಂದಂತಿವೆ.

ಶ್ರೀನಿವಾಸಮೂರ್ತಿ, ಟಿ.ಎಸ್. ವೆಂಕಣ್ಣಯ್ಯ, ಅನಕೃ, ರಂಗನಾಥ ದಿವಾಕರ ಮುಂತಾದ ಬ್ರಾಹ್ಮಣ ಪಂಡಿತರು ಕುವೆಂಪು, ಪಿ.ಬಿ. ದೇಸಾಯಿ, ಡಾ. ಹಿರೇಮಲ್ಲೂರ ಈಶ್ವರನ್ ಮುಂತಾದ ವಿದ್ವಾಂಸರು ಪ್ರಸಕ್ತ ಕಾಲದ ಬಹುತೇಕ ಹಿರಿಯ ಸಾಹಿತಿಗಳು ಲಿಂಗಾಯತ ಎಂಬುದು ನೂತನ ಧರ್ಮ; ಅದು ಬಸವಣ್ಣನವರಿಂದ ಸ್ಥಾಪಿತವಾಗಿದೆಯೆಂಬ ನಿಲುವು ಹೊಂದಿದಂಥವರಾಗಿದ್ದಾರೆ.

ಡಾ. ಮೂರ್ತಿಯವರು ಸೋದೆಯ ಅರಸು ಮಧುಲಿಂಗ ನಾಯಕ ತನ್ನ ಮಗಳು ಮಲ್ಲಮ್ಮನ ವಿವಾಹ ಸಂದರ್ಭದಲ್ಲಿ ಲಿಂಗಾಯತ ಧರ್ಮಕ್ಕನುಗುಣವಾಗಿ ಪಂಚಪೀಠಗಳ ಗುರುಗಳನ್ನು ಬರಮಾಡಿಕೊಂಡದ್ದು ವೀರಶೈವ ಲಿಂಗಾಯತರಿಗೆ ವಿರಕ್ತ ಗುರುಗಳಷ್ಟೇ ಪಂಚಪೀಠದ ಗುರುಗಳು ಕೂಡ ಪೂಜ್ಯರು ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ವಿಷಯ 'ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ' ಕೃತಿಯಲ್ಲಿ ಉಲ್ಲೇಖವಾದ ಕುರಿತು ತಿಳಿಸಿದ್ದಾರೆ. ಇರಲಿ; ಪೂಜ್ಯರೆಲ್ಲ ಎಲ್ಲರಿಗೂ ಪೂಜ್ಯರೆ. ಆದರೆ, 'ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ ಕೃತಿಯುದ್ದಕ್ಕೂ ಲಿಂಗಾಯತ ಪದಬಳಕೆಯಾಗಿದ್ದು ವೀರಶೈವ ಪದ ಕಾಣದಿರುವುದು ಡಾ. ಮೂರ್ತಿಯವರ ಗಮನಕ್ಕೆ ಹೇಗೆ ಬರಲಿಲ್ಲ.

ಒಟ್ಟಿನಲ್ಲಿ ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ ಅವೆರಡೂ ಒಂದಕ್ಕೊಂದು ಹೊಂದಿಕೆಯಾಗದ ಅಥವಾ ಒಂದರ ಸ್ಥಾನದಲ್ಲಿ ಮತ್ತೊಂದನ್ನು ಕಲ್ಪಿಸಲಾಗದಂಥ ಭಿನ್ನ ಭಿನ್ನವಾದ ಮತಪಂಥಗಳು ಮತ್ತು ಬೇರೆ ಬೇರೆ ಪದಗಳು ಲಿಂಗವಂತ ಅಥವಾ ಲಿಂಗಾಯತ ಶಬೋಚ್ಛಾರ ಮಾತ್ರ ಲಿಂಗಾಯತ ಧರ್ಮದ ಮೌಲಿಕವಾದ, ತ್ರಿಕಾಲಾಬಾಧಿತವಾದ ಪ್ರಸಕ್ತ ಸಂಕ್ರಮಣ ಕಾಲದಲ್ಲಿ ಸಮಸ್ತ ಸಮಾಜಕ್ಕೆ ದಾರಿದೀಪವಾಗಬಲ್ಲ ತತ್ವಸಿದ್ಧಾಂತಗಳು, ಮೌಲ್ಯಗಳು ಮನಃಪಟಲದ ಮೇಲೆ ಮಿಂಚಿ ಧರ್ಮದ ಕುರಿತು ಪ್ರೀತಿ ಅಭಿಮಾನ ಉಕ್ಕುವಂತೆ ಮಾಡುತ್ತವೆ; ವೀರಶೈವ ಪದಬಳಕೆಯಿಂದ ಇಂಥ ಅನುಭವ ಸಾಧ್ಯವಿಲ್ಲ. ಡಾ. ಮೂರ್ತಿಯವರು ಗಮನಿಸಿದಂತೆ ವಿದ್ವಾಂಸರು ವಿಶೇಷವಾಗಿ ಉತ್ತರ ಕರ್ನಾಟಕ ಮಧ್ಯಕರ್ನಾಟಕಗಳಲ್ಲಿ ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂಬ ಗಟ್ಟಿಯಾದ ನಿಲುವು ತಾಳಿದ್ದಕ್ಕೆ ಇವೆ ಮುಂತಾದವು ಪ್ರಮುಖ ಕಾರಣಗಳಾಗಿವೆ ಹೊರತು ಅದು ಅವರ ಭ್ರಮೆಯಲ್ಲ.

ಗ್ರಂಥ ಋಣ: ಲಿಂಗಾಯತ ಮಾಸಪತ್ರಿಕೆ, ಅಕ್ಟೋಬರ ೨೦೧೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

*
Previous ಬಸವ ಪಂಚಮಿ ನಿಮಿತ್ತ ಲೇಖನ ಹುರುಳಿಲ್ಲದ ವಿಷಯ Next