ಶುಭ ಮುಹೂರ್ತವೆಂದರೇನು? | ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು |
ಉತ್ತರಾಯಣ ಪುಣ್ಯಕಾಲ |
ನಮ್ಮ ವಿಜ್ಞಾನಾಧರಿತ ಧರ್ಮನಿರಪೇಕ್ಷ ಸರ್ಕಾರ ಸುಮಾರು ೧೯೭೦ಕ್ಕಿಂತ ಹಿಂದೆ ಸಾಧಾರಣವಾಗಿ ಪ್ರತಿ ವರ್ಷವೂ
ಜನವರಿ ೧೪ನ್ನು "ಉತ್ತರಾಯಣ ಪುಣ್ಯಕಾಲ" ಎಂದು ಘೋಷಿಸಿ ಸಾರ್ವತ್ರಿಕ ರಜೆ ಸಾರುತ್ತಿತ್ತು. ಈಚೆಗಿನ
ವರ್ಷಗಳಲ್ಲಿ ಅದರ ಹೆಸರನ್ನು "ಮಕರ ಸಂಕ್ರಾಂತಿ" ಎಂದು ಬದಲಾಯಿಸಿ ರಜೆ ಕೊಡುತ್ತಿರುವುದು ಕಂಡುಬರುತ್ತಿದೆ.
ಈಗ ನಮ್ಮಲ್ಲಿ ಸಹಜವಾಗಿ ಉದ್ಭವಿಸುವ ಪ್ರಶ್ನೆಗಳು ಮೂರು:
೧. ಉತ್ತರಾಯಣ ಮತ್ತು ದಕ್ಷಿಣಾಯನ ಎಂದರೇನು?
೨. ಪುಣ್ಯ ಎಂಬ ಮಾನವ ರಾಗ ಭಾವವನ್ನು ಇವುಗಳಿಗೆ ಆರೋಪಿಸುವುದು ಸರಿಯೇ?
೩. ವರ್ಷದಲ್ಲಿ ೧೨ ಸಂಕ್ರಾಂತಿಗಳಿವೆ. ಆ ಪೈಕಿ ಮಕರ ಸಂಕ್ರಾಂತಿಗೆ ಮಾತ್ರ ಪ್ರಾಮುಖ್ಯ ಲಭಿಸಿರುವುದೇಕೆ?
ಇವುಗಳಿಗೆ ಉತ್ತರ ಅರಸಲು ಸೂರ್ಯನ ವಾರ್ಷಿಕ ಚಲನೆಯನ್ನು ಚಿಕಿತ್ಸಕವಾಗಿ ಗಮನಿಸಬೇಕು. ಪ್ರತಿ ಮುಂಜಾನೆ
ಸೂರ್ಯೋದಯ ಪೂರ್ವದಲ್ಲೂ ಸಂಜೆ ಸೂರ್ಯಾಸ್ತಮಾನಾನಂತರದಲ್ಲೂ ಪ್ರಕಟವಾಗುವ ನಕ್ಷತ್ರ ದೃಶ್ಯಗಳನ್ನು ಎಚ್ಚರಿಕೆಯಿಂದ
ಚಿತ್ರಿಸಿಡಬೇಕು. ಹೀಗೆ ಹಲವಾರು ವರ್ಷಪರ್ಯಂತ ವೀಕ್ಷಣೆಗಳನ್ನು ದಾಖಲಿಸಿ (ವಾಸ್ತವವಾಗಿ ಶತಶತಮಾನಗಳ
ಕಾಲ ಖಗೋಳ ವಿಜ್ಞಾನ ನಡೆದುಬಂದ ಹಾದಿ ಇದು) ಸಮಗ್ರ ಚಿತ್ರವನ್ನು ಸರ್ವೇಕ್ಷಿಸಿದಾಗ ಅಲ್ಲೊಂದು ಪ್ರರೂಪವನ್ನು
(pattern) ಗುರುತಿಸುವುದು ಸಾಧ್ಯವಾಗುತ್ತದೆ. ಇಂದು ಗಣಕದಲ್ಲಿ ಈ ವೈಶಿಷ್ಟ್ಯವನ್ನು ಬಿಂಬಿಸುವ ತಂತ್ರಾಂಶ
= software, ಯಂತ್ರಾಂಶ = hardware,ಸುಲಭ ಲಭ್ಯವಿದೆ. ಯಾವುದೇ ದಿನ-ಕ್ಷಣ ಕುರಿತಂತೆ ಈ ತಂತ್ರಾಂಶವನ್ನು
ತೆರೆ ಮೇಲೆ ಬಿಂಬಿಸಿ ಅದೇ ಕ್ಷಣ ಆಕಾಶದಲ್ಲಿ ಕಾಣುವ ದೃಶ್ಯದೊಡನೆ ತುಲನಿಸಿ ನೋಡಬಹುದು.
ಸ್ಥಿರ ನಾಕ್ಷತ್ರಿಕ ಯವನಿಕೆಯ ಮೇಲೆ ಸೂರ್ಯ ಪಶ್ಚಿಮ-ಪೂರ್ವ ದಿಶೆಯಲ್ಲಿ (ನಮ್ಮ ಸುತ್ತ) ಸರಿಯುತ್ತಿದೆ.
ಸೌರಕಕ್ಷೆಯ ಹಿನ್ನೆಲೆಯಲ್ಲಿರುವ ನಕ್ಷತ್ರಗಳಿಗೆ ಸಹಜವಾಗಿ ಇತರ ಚಿತ್ರಗಳಿಗಿಂತ ಅಧಿಕ ಪ್ರಾಮುಖ್ಯ
ಲಭಿಸಿತು. ವರ್ಷದ ೧೨ ತಿಂಗಳುಗಳಿಗೆ ಹೊಂದುವಂತೆ ಇಲ್ಲಿ ೧೨ ವಿವಿಕ್ತ ಚಿತ್ರಗಳನ್ನು ಹೆಕ್ಕಿ ಹೆಸರಿಸಲಾಗಿದೆ
ಎಂದು ಗಮನಿಸಬೇಕು. ಆದ್ದರಿಂದ ಇಲ್ಲಿ ’ದೈವಿಕ’ ಅಥವಾ ’ಪಾರಲೌಕಿಕ’ ಹಸ್ತಕ್ಷೇಪ ಇಲ್ಲ! ಈ ಚಿತ್ರಗಳು
ಪಶ್ಚಿಮ-ಪೂರ್ವ ದಿಶೆಯಲ್ಲಿ ಅನುಕ್ರಮವಾಗಿ ಮೇಷ, ವೃಷಭ, ಮಿಥುನ, ಕರ್ಕಟ, ಸಿಂಹ, ಕನ್ಯಾ ತುಲಾ, ವೃಶ್ಚಿಕ,
ಧನು, ಮಕರ, ಕುಂಭ ಮತ್ತು ಮೀನ (Aries, Taurus, Gemini, Cancer, Leo, Virgo, Libra, Scorpius,
Sagittarius, Capricorn, Aquarius and Pisces) ಎಂಬ ಹೆಸರಿನ ದ್ವಾದಶ ರಾಶಿಗಳು (twelve zodiacal
constellations) ಗಣಿತರೀತ್ಯ ಈ ಒಂದೊಂದರ ವ್ಯಾಪ್ತಿಯನ್ನು ೩೦ ಡಿಗ್ರಿಗಳೆಂದು ನಿಗದಿಸಿ, (ಒಟ್ಟು
ವ್ಯಾಪ್ತಿ ೩೬೦ ಡಿಗ್ರಿಗಳು) ಗಡಿನಿರ್ಣಯಿಸಲಾಗಿದೆ. ಯಾವುದೇ ರಾಶಿಯನ್ನು ಸೂರ್ಯ ಪ್ರವೇಶಿಸುವ ಕ್ಷಣಕ್ಕೆ
ಸಂಕ್ರಾಂತಿ ಎಂದು ಹೆಸರು. ಹೀಗೆ ಮೇಷದಿಂದ ತೊಡಗಿ ಮೀನದವರೆಗಿನ ೧೨ ಸಂಕ್ರಾಂತಿಗಳು ಬಳಕೆಗೆ ಬಂದವು.
ಒಂದು ರಾಶಿಯಿಂದ ಮುಂದಿನ ರಾಶಿಗೆ ಸೂರ್ಯ ಸಂಚರಿಸುವ ಪ್ರಕ್ರಿಯೆಗೆ ಸಂಕ್ರಮಣವೆಂದು ಹೆಸರು. ನಿರಂತರವಾಗಿ
ಸಂಭವಿಸುತ್ತಿರುವ ನೈಸರ್ಗಿಕ ವಿದ್ಯಮಾನವಿದು.
ಸ್ಥಿರ ನಕ್ಷತ್ರಚಿತ್ರಗಳ ಪರದೆ ಮೇಲೆ ಸೂರ್ಯನ ಸರಿತವನ್ನು ನೇರ ವೀಕ್ಷಿಸುವುದು ಅಸಾಧ್ಯ ಚಂದ್ರನದು
ಹೀಗಲ್ಲ. ಅಮಾವಾಸ್ಯೆಯಿಂದ ಮರುದಿನದಿಂದ ಈ ಸರಳ ಪ್ರಯೋಗ ಮಾಡಿ ನೋಡಬಹುದು. ಶುಕ್ಲ ಬಿದಿಗೆ ಅಥವಾ ತದಿಗೆಯಂದು
ಕಿಶೋರಚಂದ್ರನ ಹೊಳೆವ ಕಮಾನು ಗೋಚರಿಸುತ್ತದೆ. ಇದು ಸೂರ್ಯಾಭಿಮುಖವಾಗಿರುವುದು. ಈ ಸರಿತದ ಪ್ರಕಟಿತ
ರೂಪವಾಗಿ ನಮ್ಮ ದಿನರಾತ್ರಿಗಳ ಅವಧಿಗಳಲ್ಲಿ ಗಮನಾರ್ಹ ವ್ಯತ್ಯಯಗಳು ಸಂಭವಿಸುತ್ತವೆ; ವರ್ತಮಾನ ದಿನಗಳಂದು
ಗರಿಷ್ಠ ಇರುಳು(ರಾತ್ರಿ) (ಮತ್ತು ಈ ಕಾರಣದಿಂದ ಕನಿಷ್ಠ ಹಗಲು) ಡಿಸೆಂಬರ್ ೨೧ರ ಸುಮಾರಿಗೂ, ಗರಿಷ್ಠ
ಹಗಲು (ಆದ್ದರಿಂದ ಕನಿಷ್ಠ ಇರುಳು) ಜೂನ್ ೨೨ರ ಸುಮಾರಿಗೂ ಕಂಡುಬರುತ್ತವೆ; ಡಿಸೆಂಬರ್ ೨೧ರ ಮುಂದಿನ
ದಿನಗಳಲ್ಲಿ ಇರುಳಿನ ಅವಧಿ ಕುಗ್ಗುತ್ತ ಹೋಗಿ ಸುಮಾರು ಮಾರ್ಚ್ ೨೨ರಂದು ಎರಡೂ ಸಮವಾಗುತ್ತವೆ. ಹೀಗೆಯೇ
ಮುಂದುವರಿಯುತ್ತ ಸುಮಾರು ಜೂನ್ ೨೨ರಂದು ಹಗಲಿನ ಅವಧಿ ಗರಿಷ್ಠವೂ ಇರುಳಿನದು ಕನಿಷ್ಠವೂ ಆಗುತ್ತವೆ;
ತರುವಾಯದ ದಿನಗಳಲ್ಲಿ ಹಗಲಿನ ಅವಧಿ ಕುಗ್ಗುತ್ತ ಹೋಗಿ ಸೆಪ್ಟೆಂಬರ್ ೨೩ರ ಸುಮಾರಿಗೆ ಉಭಯ ಅವಧಿಗಳೂ
ಸಮವಾಗುತ್ತವೆ; ಹೀಗೆಯೇ ರಾತ್ರಿಯ ಅವಧಿ ವರ್ಧಿಸುತ್ತ ಹೋಗಿ ಡಿಸೆಂಬರ್ ೨೧ರ ಸುಮಾರಿಗೆ ಗರಿಷ್ಠವಾಗುತ್ತದೆ.
ಅಲ್ಲಿಗೆ ಒಂದು ವರ್ಷ ಪೂರ್ಣಗೊಳ್ಳತ್ತದೆ.
ಇದೇ ಅವಧಿಯಲ್ಲಿ ನಮ್ಮ ನಮ್ಮ ನೆಲೆಗಳನ್ನು ಆಧರಿಸಿ ಹಾರಿಜದಲ್ಲಿ (horixon) ಸೂರ್ಯನ ಮೂಡು-ಕಂತು
ಬಿಂದುಗಳನ್ನು(sunrise points) ದೈನಂದಿನ ಪಥಗಳನ್ನೂ (diurnal paths) ಗುರುತಿಸಿದರೆ ಇನ್ನೊಂದು
ಪ್ರರೂಪ ಕಾಣುತ್ತದೆ; ಡಿಸೆಂಬರ್ ೨೧ರಂದು ಉಯಾಸ್ತಮಾನ ಬಿಂದುಗಳು ಅತಿ ದಕ್ಷಿಣಕ್ಕೂ ಜೂನ್ ೨೨ರಂದು
ಅತಿ ಉತ್ತರಕ್ಕೂ ಜಾರಿರುತ್ತವೆ; ಮಾರ್ಚ್ ೨೨ ಮತ್ತು ಸೆಪ್ಟೆಂಬರ ೨೩ರಂದು ಅವು ಖಚಿತವಾಗಿ ಪೂರ್ವ-ಪಶ್ಷಿಮ
ಬಿಂದುಗಳೊಡನೆ ಎರಕಗೊಂಡಿರುತ್ತವೆ. ಇವುಗಳಿಗೂ ಋತುವ್ಯತ್ಯಾಸಗಳಿಗೂ ನಿಕಟ ಸಂಬಂಧವಿದೆ. ಭೂಮಿಯ ಉತ್ತರಗೋಳಾರ್ಧ
ನಿವಾಸಿಗಳಾಗಿರುವ ನಮ್ಮ ಅನುಭವವಿದು; ಡಿಸೆಂಬರ್ ಕಡು ಚಳಿಗಾಲ, ಮಾರ್ಚ್ ಸೆಕೆಗಾಲದ ಆರಂಭ, ಜೂನ್
ಕಡು ಬೇಸಿಗೆ ಜೊತೆಗೇ ಮಳೆಗಾಲದ ಪ್ರಾರಂಭ, ಸೆಪ್ಟೆಂಬರ್ ಚಳಿಗಾಲದ ಆರಂಭ. ಇದು ತೀರ ಸ್ಥೂಲ ಚಿತ್ರ
ಮಾತ್ರ.
ಸೂರ್ಯನ ಈ ಗೋಚರ ಆಂದೋಲನ ಗಮನಿಸಿದ ಪ್ರಾಚೀನ ವೀಕ್ಷಕರು ಉತ್ತರಾಭಿಮುಖ ಸರಿತ ತೊಡಗುವ ದಿನವನ್ನು ಉತ್ತರಾಯಣಾರಂಭವೆಂದು
ಹೆಸರಿಸಿದರು. ಚಳಿಗಾಲದ ಮತ್ತು ಕತ್ತಲೆಯ ಕಠಿಣ ದಿನಗಳು ಹಿಂದೆ ಸರಿದು ಬೆಚ್ಚಗಿನ ಮತ್ತು ಹೆಚ್ಚು
ಬೆಳಕಿನ ದಿನಗಳ ಆಗಮನವನ್ನು ಈ ದಿನ ಪ್ರತೀಕಿಸುವುದರಿಂದ ಇದು ಪುಣ್ಯಕಾಲವು ಹೌದು. ಅಂದು ಸೂರ್ಯನ ಹಿನ್ನೆಲೆಯಲ್ಲಿ
ಮಕರ ರಾಶಿ ಇದ್ದುದರಿಂದ ಅದಕ್ಕೆ ’ಮಕರ ಸಂಕ್ರಾಂತಿ’ ಎಂಬ ಹೆಸರು ಕೂಡ ರೂಢಿಗೆ ಬಂತು. ಮುಂದಿನ ಪರ್ವಕಾಲ
ಮೇಷ ಸಂಕ್ರಾಂತಿ -ಅಂದು ಹಗಲಿರುಳುಗಳ ಅವಧಿಗಳು ಸಮ ಮತ್ತು ಬೇಸಗೆಯ ಹರಿಕಾರ ಆ ದಿನ. ಎಂದೇ ಹೊಸ ವರ್ಷದ
ಆರಂಭ ಇದೇ ಯುಗಾದಿ. ಮುಂದಿನವು ಕರ್ಕಟ ಸಂಕ್ರಾಂತಿ -ದಕ್ಷಿಣಾಯನಾರಂಬ; ಬಳಿಕ ತುಲಾ ಸಂಕ್ರಾಂತಿ -ಹಗಲಿರುಳುಗಳ
ಅವಧಿಗಳು ಪುನ: ಸಮವಾಗುವ ದಿನ. ಇದು ಚಳಿಗಾಲ ತೊಡಗುವ ದಿನವಾದ್ದರಿಂದ (ಉತ್ತರಗೋಳಾರ್ಧ ನಿವಾಸಿಗಳಾದ)
ನಮಗೆ ಪ್ರಿಯವಲ್ಲ!
ಈ ತೆರನಾಗಿ ಗಗನ ವಿದ್ಯಮಾನಗಳಿಗೂ ಸ್ಥಳೀಯ ವ್ಯತ್ಯಯಗಳಿಗೂ ನಿಕಟ ಸಂಬಂಧ ಏರ್ಪಟ್ಟು ಮಕರ ಮತ್ತು ಮೇಷ
ಸಂಕ್ರಾಂತಿಗಳಿಗೆ (ನಮ್ಮ ದೃಷ್ಟಿಯಿಂದ) ಅತಿಶಯ ಪ್ರಾಮುಖ್ಯ ಲಭಿಸಿದೆ. ಇವು ಎಂದು ಮತ್ತು ಎಷ್ಟು ಹೊತ್ತಿಗೆ
ಘಟಿಸುತ್ತವೆ ಎಂಬುದನ್ನು ಕುರಿತ ನಿಖರ ಗಣಿತ ಮಾಪನೆಗಳೂ ಬೆಳೆದವು. ಹಲವು ಶತಮಾನಗಳ ಹಿಂದೆ ಈ ದಿನಾಂಕಗಳು
ಸ್ಥೂಲವಾಗಿ ಜನವರಿ ೧೪ ಮತ್ತು ಏಪ್ರಿಲ್ ೧೪ ಆಗಿದ್ದವು. ಸಂಕ್ರಾಂತಿ ದಿನಗಳು ಬದಲಾಗುವುದಿಲ್ಲ ಎಂಬ
ವಾಸ್ತವ ಸಂಗತಿಯೂ ಕ್ರಮೇಣ ತಿಳಿಯಿತು. ಸಹಜವಾಗಿ ಉತ್ತರಾಯಣಾರಂಭ, ಮಕರ ಸಂಕ್ರಾಂತಿ ಮತ್ತು ಜನವರಿ
೧೪ ಅವಿನಾಸಂಬಂಧಿಗಳಾಗಿರುವ ಪರ್ಯಾಯ ಪದಗಳೆಂಬ ಭಾವನೆ ರೂಢಮೂಲವಾಯಿತು. ಇದೇ ಅಂತಸ್ತು ಯುಗಾದಿ, ಮೇಷ
ಸಂಕ್ರಾಂತಿ ಮತ್ತು ಏಪ್ರಿಲ್ ೧೪ಕ್ಕೂ ಪ್ರಾಪ್ತವಾಯಿತು. ಅಂದಿಗಿವು ಸರಿ. ಇಂದಿಗಾದರೋ?
ನಿತ್ಯ ಗತಿಶೀಲವಾಗಿರುವ ವಿಶ್ವದಲ್ಲಿ ಶಾಶ್ವತತೆ ಎಂಬ ಪರಿಕಲ್ಪನೆ ಪೂರ್ತಿ ಅಸಾಧು. ಇದೊಂದು ಅಮೂರ್ಥ
ಆದರ್ಶವಾದೀತೇ ವಿನಾ ಎಂದೂ ವಾಸ್ತವವಾಗದು. ಪ್ರಕೃತ ಇದರ ಅರ್ಥವಿಷ್ಟು: ಮೇಲೆ ವಿವರಿಸಿರುವ ಅವಿನಾಸಂಬಂಧೀ
ಪರ್ಯಾಯಪದಗಳ ನಡುವೆ ಆಳವಾದ ಕಂದರಗಳು ಬಿರುಕುಬಿಟ್ಟಿವೆ. ಇಂದು ಕೂಡ ಉತ್ತರಾಯಣಾರಂಭವಾಗುತ್ತದೆ. ಆದರೆ
ಅದು ಮಕರ ಸಂಕ್ರಾಂತಿ ಅಥವಾ ಜನವರಿ ೧೪ರಂದು ಅಲ್ಲ. ಯುಗಾದಿಯೂ ಆಗಮಿಸುತ್ತದೆ, ಇದಾದರೂ ಮೇಷ ಸಂಕ್ರಾಂತಿ
ಅಥವಾ ಏಪ್ರಿಲ್ ೧೪ರಂದು ಖಂಡಿತವಾಗಿಯೂ ಅಲ್ಲ! ಬದಲು, ಈ ದಿನಾಂಕಗಳೂ ಅನುಕ್ರಮವಾಗಿ ಡಿಸೆಂಬರ್ ೨೧
ಮತ್ತು ಮಾರ್ಚ್ ೨೩. ರಾಜನಿಂದ ಸಿಂಹಾಸನಕ್ಕೆ ಮಹತ್ವವೇ ಹೊರತು ಸಿಂಹಾಸನದಿಂದ ರಾಜನಿಗಲ್ಲ. ಇಲ್ಲಿ
ಸೂರ್ಯನೇ ರಾಜ. ಸಿಂಹಾಸನಗಳೂ (ರಾಶಿಗಳು) ಅವನ್ನು ಸೂರ್ಯ ಆರೋಹಿಸುವ ದಿನಾಂಕಗಳೂ (ಸಂಕ್ರಾಂತಿಗಳೂ)
ಹಾಗೆಯೇ ಇವೆ. ಆದರೆ ನಮ್ಮ ದೃಷ್ಟಿಯಿಂದ ಉತ್ತರಾಯಣಾರಂಭ, ಯುಗಾದಿ ಮುಂತಾದ ಪರ್ವ ಕ್ಷಣಗಳು ಸಾಕಷ್ಟು
ಮೊದಲೇ ಸಂಭವಿಸುತ್ತಿವೆ. ಪ್ರತ್ಯಕ್ಷ ವೀಕ್ಷಣೆಯಿಂದ ಇದರ ತಥ್ಯವನ್ನು ಅರಿಯಬಹುದು.
ಇದು ಹೀಗೇಕೆ ಎಂಬ ಸಹಜ ಪ್ರಶ್ನೆಗೆ ವೈಜ್ಞಾನಿಕ ವಿವರಣೆ ಬಯಸುವವರು ಯಾವುದೇ ಶಿಷ್ಟ ಖಗೋಳ ವಿಜ್ಞಾನ
ಗ್ರಂಥವನ್ನು ಸಾವಧಾನವಾಗಿ ಓದಬೇಕು, ಜೊತೆಗೆ ಗಗನ ವೀಕ್ಷಣೇ ಮಾಡುತ್ತ ವರ್ತಮಾನ ಕಾಲದಲ್ಲಿ ಬಾಳಬೇಕು.
ಹೀಗೆ ಮಾಡದ ಜನ, ಧರ್ಮ, ಸಮಾಜ, ಸರ್ಕಾರ ಯಾರೇ ಆಗಲಿ ಅವರು (ಅಥವಾ ಅದು) ಮೂಢನಂಬಿಕೆ, ಅಂಧ ಸಂಪ್ರದಯ
ಮತ್ತು ಅರ್ಥಹೀನ ವಿಧಿನಿಯಮಗಳ ದಾಸರಾಗಿ ನಶಿಸುವುದು ಐತಿಹಾಸಿಕ ಸತ್ಯ. ಬಸವಣ್ಣನವರ ಆಪ್ತವಾಕ್ಯ ಗಮನಿಸಿಬೇಕು
" ಕಲ್ಲ ನಾಗರ ಕಂಡರೆ ಹಾಲೆರೆ ಎಂಬರಯ್ಯ ದಿಟದ ನಾಗರ ಕಂಡರೆ ಕಲ್ಲು ಹೊಡೆ ಎಂಬರಯ್ಯ...",
ಗ್ರಂಥ ಋಣ: "ವೈಜ್ಞಾನಿಕ ಮನೋಧರ್ಮ ಎಂದರೇನು?", ಲೇ:ಜಿ.ಟಿ. ನಾರಾಯಣರಾವ್, ಪ್ರಕಾಶಕರು: ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು-೬, ೨೦೦೭.
*ಶುಭ ಮುಹೂರ್ತವೆಂದರೇನು? | ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು |