Previous ರೇಣುಕಾಚಾರ್ಯ / ರೇವಣಸಿದ್ದ ಏಕೋರಾಮಾರಾಧ್ಯ Next

ಪಂಚಾಚಾರ್ಯ: ಮರುಳಾರಾಧ್ಯ

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಮರುಳಾರಾಧ್ಯ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಉಜ್ಜಿನಿಯಲ್ಲಿರುವ ಪಂಚಾಚಾರ್ಯ ಪೀಠದ ಮರುಳಾರಾಧ್ಯ ಅಷ್ಟಾಗಿ ಯಾರಿಗೂ ಪರಿಚಯವಿದ್ದಂತೆ ಕಾಣುವುದಿಲ್ಲ. ಮರುಳಾರಾಧ್ಯನೂ ತನ್ನ ಸಲಹೆಗಾರನಾದ ರೇವಣಸಿದ್ದನಂತೆ ಆಗಮವೊಂದರಲ್ಲಿ ಹೇಳಿರುವ ಪ್ರಕಾರ, ವಾಟು ಕ್ಷೇತ್ರದ ಶಿಲಾಲಿಂಗದಿಂದ ಉದ್ಭವವಾದನೆಂದೇ ಹೇಳಲಾಗಿದೆ. ಅವನನ್ನು ಪುರಾಣದ ದಾರುಕ ಎನ್ನಲಾಗಿದೆ. ಉಜ್ಜಯಿನಿಪೀಠದ ಕೃತಯುಗದ ಮೊದಲ ಆಚಾರ್ಯ ದ್ವೈಯಾಕ್ಷರ, ತ್ರೇತಾಯುಗದಲ್ಲಿ ದ್ವೈವಕ್ತ, ದ್ವಾಪರಯುಗದಲ್ಲಿ ದಾರುಕ ಮತ್ತು ಕಲಿಯುಗದಲ್ಲಿ ಮರುಳಾರಾಧ್ಯ ಎಂಬ ಹೆಸರಿನಲ್ಲಿ ಮಠಮುಖ್ಯರಾಗಿದ್ದಾರೆ (ಕೌಂಟೆ, ೨೦೧೭, ಪು. ೫೯-೬೪).

ಮರುಳಾರಾಧ್ಯನ ಕೈಕೋಲು ಮುತ್ತುಗದ ಮರದಿಂದ ಮಾಡಲ್ಪಟ್ಟಿದ್ದು, ಅವನ ಗೋತ್ರ ನಂದಿಗೋತ್ರ ಮತ್ತು ಅವನ ಬಾವುಟದ ಬಣ್ಣ ಕೆಂಪು. ಪೀಠದ ಆರಂಭದಿಂದ ಇದುವರೆಗೆ ೧೧೦ ಜನ ಮಠಪತಿಗಳು ಆಗಿಹೋಗಿದ್ದಾರೆ ಎಂದು ಉಜ್ಜಿನಿ ಪೀಠ ಹೇಳುತ್ತದೆ. ಪೀಠಕ್ಕೆ ೧೧೨ ಶಾಖೆಗಳಿವೆ. (ಬಿಜ್ಜರಗಿ, ಪು. ೨೯೦)

ಮರುಳಾರಾಧ್ಯನ ಮೂಲಪೀಠವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇತ್ತೆಂದು ಪಂಚಾಚಾರ್ಯರು ಹೇಳುತ್ತಾರೆ. ಅದೇ ಉಜ್ಜಯಿನಿಯಲ್ಲಿ ಇನ್ನೊಂದು ಜ್ಯೋತಿರ್ಲಿಂಗವಿದೆ (ಮಹಾಕಾಳೇಶ್ವರ). ಸ್ಥಳೀಯ ರಾಜರು ಮರುಳಾರಾಧ್ಯನಿಗೆ ಹಿಂಸೆ ಕೊಟ್ಟಿದ್ದರಿಂದ ಅವನು ತನ್ನ ಪೀಠವನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಉಜ್ಜಿನಿ ಗ್ರಾಮಕ್ಕೆ ಬದಲಾಯಿಸಿದ ಎಂದು ಅವರು ಹೇಳುತ್ತಾರೆ.

ಏನಿದ್ದರೂ, ಅದು ನಿಜವಾದ ಸಂಗತಿಯಲ್ಲ. ಬಳ್ಳಾರಿ ಜಿಲ್ಲೆಯ ಉಜ್ಜಿನಿ ಗ್ರಾಮದ ಮೂಲಮಠವು ಸಿರಿಗೆರೆ ತರಳಬಾಳು ಪರಂಪರೆಯಲ್ಲಿ ಸ್ಥಾಪಿಸಲ್ಪಟ್ಟಿದ್ದು ನಂತರ ವೀರಶೈವ ಮಠವಾಗಿ ಪರಿವರ್ತಿತವಾಯಿತು ಎಂದು ತಿಳಿದುಬಂದಿದೆ. ಸಿರಿಗೆರೆ ಮತ್ತು ಉಜ್ಜಿನಿ ಮಠಗಳ ಮಧ್ಯೆ ಬಹಳ ಕಾಲದಿಂದ ಈ ಸಂಬಂಧ ವಿವಾದ ನಡೆದಿದೆ. ಮರುಳಸಿದ್ದನು ಅಷ್ಟಾವರಣವನ್ನು ಬೋಧಿಸಿದವನು ಮತ್ತು ರೇವಣಸಿದ್ಧನ ಶಿಷ್ಯ ಎನ್ನಲಾಗಿದೆ. 'ಮರುಳಾರಾಧ್ಯ ಸಾಂಗತ್ಯ' ಎಂಬ ಶೀರ್ಷಿಕೆಯಲ್ಲಿರುವ ಅವನ ಜೀವನ ಚರಿತ್ರೆ, ಅವನ ಬಗೆಗೆ ಹೆಚ್ಚೇನನ್ನೂ ತಿಳಿಸುವುದಿಲ್ಲ. ಅವನು ಪವಾಡಗಳನ್ನು ನಡೆಸುವ ಮಹಾಶಕ್ತಿಯನ್ನು ಪಡೆದಿದ್ದ ಓರ್ವಸಿದ್ದನೆಂದು ಹೇಳಲಾಗಿದೆ.

ಮರುಳನು ಮಾಯಾ ಎಂಬ ಹೆಸರಿನ ರಾಕ್ಷಸಿಯೊಬ್ಬಳನ್ನು ಕೊಂದನೆಂದು ಹೇಳಲಾಗಿದೆ. ಅವನನ್ನು ಕುರಿತಂತೆ ಚತುರಾಚಾರ್ಯ ಚರಿತ್ರೆಯೂ ಹೆಚ್ಚಾಗಿ ಏನನ್ನೂ ತಿಳಿಸುವುದಿಲ್ಲ. ರೇವಣಸಿದ್ಧನ ಶಿಷ್ಯನಾಗಿ ತನ್ನ ಗುರುವಿನಂತೆ ತಾನೂ ಸಹ ಪವಾಡ ನಡೆಸುವ ತಂತ್ರಶಕ್ತಿಯನ್ನು ಪಡೆದಿದ್ದ ಓರ್ವ ಪಾಶುಪತ ಸಿದ್ದ. ಹಾಗಾಗಿ ಪುರಾಣಗಳು ಮರುಳಸಿದ್ಧನಿಂದ ನಡೆದವೆನ್ನಲಾದ ಪವಾಡಗಳನ್ನೇ ಪ್ರಸ್ತಾಪಿಸುತ್ತವೆ.

ಅಷ್ಟಾವರಣ ದೀಕ್ಷಾಪ್ರದಾನ ಮತ್ತು ಮಠಗಳಿಗೆ ನೊಳಂಬರು ಮತ್ತು ಸಾದರ ಉಪವರ್ಗಗಳಿಗೆ ಸೇರಿದವರನ್ನು ಮಠಾಧೀಶರನ್ನಾಗಿ ಮಾಡುವ ಸಂಬಂಧದ ಒಂದು ವಿವಾದದಲ್ಲಿ ಅಷ್ಟಾವರಣ ದೀಕ್ಷೆಯನ್ನು ನೀಡುವುದಕ್ಕೆ ಮತ್ತು ಮಠದ ಉತ್ತರಾಧಿಕಾರಕ್ಕೆ ಸಿರಿಗೆರೆ ಮಠಕ್ಕೆ ಅಧಿಕಾರ ಅಥವಾ ಅರ್ಹತೆಯಿಲ್ಲ ಎಂದು ಉಜ್ಜಿನಿ ಪೀಠವು ವಾದಿಸುತ್ತದೆ. ಇದು ಶರಣಪರಂಪರೆಯ ವಿರಕ್ತಮಠ ಮತ್ತು ವೀರಶೈವ ಪರಂಪರೆಯ ಪಂಚಪೀಠಗಳ ಮಧ್ಯೆ ನಡೆದಿರುವ ನೇರವಾದ ಸಂಘರ್ಷ, ಉಜ್ಜಿನಿ ಪೀಠವು ಪಂಚಪೀಠಗಳಲ್ಲಿ ಒಂದು ಎನ್ನುವ ಎಲ್ಲ ವಾದಗಳನ್ನು ಸಿರಿಗೆರೆ ತರಳಬಾಳು ಮಠವು ನಿರಾಕರಿಸುತ್ತದೆ. (ಆರ್.ಸಿ, ಅರಟಾಳ ಜೀವನ ಚರಿತ್ರೆ, ಬಸವಾರಾಧ್ಯ) ಸುಮಾರು ನೂರು ವರ್ಷಗಳ ಹಿಂದಿನಿಂದ ಈ ಮಠ- ಪೀಠಗಳು ಪರಸ್ಪರ ಹೋರಾಡುತ್ತಲೇ ಇವೆ. ಡಾ. ಚಿದಾನಂದಮೂರ್ತಿ ಅವರ ಪ್ರಕಾರ, ಮರುಳಾರಾಧ್ಯನು ೧೨ನೆಯ ಶತಮಾನದ ಬಸವಣ್ಣನವರ ಸಮಕಾಲೀನನಾಗಿದ್ದ ಮರುಳಸಿದ್ದನೇ ಹೊರತು ಬೇರೆಯಲ್ಲ. ಈ ಮರುಳಸಿದ್ದ ಅಥವಾ ಮರುಳಾರಾಧ್ಯ ಯಾವುದೇ ಧರ್ಮಸ್ಥಾಪಕನೆಂದು ಎಲ್ಲೂ ಹೇಳಿಲ್ಲ. (ಚಿದಾನಂದಮೂರ್ತಿ, ೨೦೧೫; ಕಲಬುರ್ಗಿ, ಮಾರ್ಗ-೪).

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ರೇಣುಕಾಚಾರ್ಯ / ರೇವಣಸಿದ್ದ ಏಕೋರಾಮಾರಾಧ್ಯ Next