Previous ಜನಗಣತಿಗಳು ಸೃಷ್ಟಿಸಿದ ಆವಾಂತರ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ Next

ಮುಂಬೈ ಮತ್ತು ಮದ್ರಾಸ್ ಜನಗಣತಿಗಳಲ್ಲಿ ಲಿಂಗಾಯತರು

*

✍ ಎಸ್.ಎಂ. ಜಾಮದಾರ.
ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ,
ನಿವೃತ ಐ.ಎ.ಎಸ್‌ ಅಧಿಕಾರಿ.

1881ರ ವರೆಗೆ ಸ್ವತಂತ್ರ ಧರ್ಮವಾಗಿದ್ದ ಲಿಂಗಾಯತವನ್ನು 1881ರ ಜನಗಣತಿಯಲ್ಲಿ ಸತ್ತಾರೂಢ ಮೈಸೂರು ಸರ್ಕಾರವು ಉದ್ದೇಶಪೂರ್ವಕವಾಗಿ ವಿಸರ್ಜಿಸಿ ಅದರ ಉಪ ಪಂಗಡಗಳನ್ನು ಶೂದ್ರರ ಗುಂಪಿಗೆ ಸೇರಿಸಿತು. ಅದೇ ಸ್ಥಿತಿ ಜಾತಿ ಜನಗಣತಿಯು 1941ರಲ್ಲಿರದ್ದಾಗುವ ವರೆಗೂ ಮುಂದುವರೆಯಿತು. ನಂತರ ನಡೆದ ಅಧ್ಯಯನಗಳಿಗೆ ಮತ್ತು ಸರ್ಕಾರಿ ನಿರ್ಧಾರಗಳಿಗೆ 1931ರ ಜನಗಣತಿಯಲ್ಲಿನ ಅಂಕಿಸಂಖ್ಯೆಗಳೆ ಆಧಾರವಾಗಿವೆ.

ಮುಂಬೈ ಪ್ರಾಂತದ ಜನಗಣತಿಗಳು: ಮುಂಬೈ ಪ್ರಾಂತದ ಜನಗಣತಿಗಳು ಮೈಸೂರಿನ 1881ರ ಮಾದರಿಯನ್ನೆ ಬಳಿಸಿ ಲಿಂಗಾಯತರನ್ನು ಶೂದ್ರರೆಂದೇ ಪರಿಗಣಿಸಿದವು. ಹೀಗಾಗಿ, ಮೈಸೂರು ಮತ್ತು ಮುಂಬೈ ಎರಡೂ ರಾಜ್ಯಗಳಲ್ಲಿ ಲಿಂಗಾಯತರು ಶೂದ್ರರಾಗಿದ್ದರು. ಮುಂಬೈ ಪ್ರಾಂತದಲ್ಲಿ 43 ಲಿಂಗಾಯತ ಉಪಜಾತಿಗಳನ್ನು ಗುರುತಿಸಲಾಗಿದೆ. ಅಲ್ಲಿನ ಲಿಂಗಾಯತ ಉಪಜಾತಿಗಳ ಹೆಸರುಗಳೂ ಭಿನ್ನವಾಗಿವೆ. ಅವು ಸ್ಥಳೀಯ ಸಾಮಾಜಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ.

ಮುಂಬೈ ಪ್ರಾಂತಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಲಿಂಗಾಯತ ಉಪಜಾತಿಗಳ ಸಂಖ್ಯೆ ಜನಗಣತಿಯಿಂದ ಜನಗಣತಿಗೆ ಬದಲಾಗುತ್ತಿದೆ: 1871ರಲ್ಲಿ ಇಪ್ಪತ್ತೆರಡು ಉಪ ಜಾತಿಗಳಿದ್ದರೆ, 1881ರಲ್ಲಿ ಶೂದ್ರ ಗುಂಪಿನಲ್ಲಿ ತೋರಿಸಿದ ಲಿಂಗಾಯತ ಉಪ ಜಾತಿಗಳು ಕೇವಲ ಆರು. 1891ರಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಕೋಡ್ ನೀಡಿದಾಗ ಅವರ ಉಪಜಾತಿಗಳ ಸಂಖ್ಯೆ ಮೂವತ್ತೆಂಟಕ್ಕೆ ಏರಿತು, ಈಗ ಅವುಗಳ ಸಂಖ್ಯೆ ತೊಂಬತ್ತೊಂಬತ್ತು! ವರ್ಗೀಕರಣದಲ್ಲಿನ ಏರುಪೇರುಗಳಿಂದ ಲಿಂಗಾಯತ ಉಪಪಂಗಡಗಳ ಸಂಖ್ಯೆ ಹಾಗೂ ಅವರ ಒಟ್ಟು ಜನಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ.

ಮದ್ರಾಸ್ ಪ್ರಾಂತದ ಜನಗಣತಿಗಳು: ಮದ್ರಾಸ್ ರಾಜ್ಯದ ಜನಗಣತಿಗಳಲ್ಲಿ ಭಾರತದ ಹೊರಗಿನಿಂದ ಬಂದ ಮೊಹಮ್ಮದನ್, ಕ್ರಿಶ್ಚಿಯನ್, ಪಾರ್ಸಿ ಧರ್ಮೀಯರನ್ನು ಪ್ರತ್ಯೇಕವಾಗಿರಿಸಿ ಅವರವರ ಅಂಕಿಸಂಖ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಭಾರತದಲ್ಲಿ ಹುಟ್ಟಿದ ಎಲ್ಲ ಧರ್ಮಗಳನ್ನು ಒಂದೇ ವರ್ಗವೆಂದು ಹಿಂದೂದ ಅಡಿಯಲ್ಲಿ ಪರಿಗಣಿಸಿದ್ದರೂ ಅವುಗಳನ್ನು ನಾಲ್ಕು ಗುಂಪುಗಳಲ್ಲಿ ವಿಭಜಿಸಲಾಗಿದೆ. ಆ ನಾಲ್ಕು ಗುಂಪುಗಳೆಂದರೆ: (1) ‘ಶೈವರು’, (2) ‘ವೈಷ್ಣವರು’, (3) ‘ಲಿಂಗಾಯತರು’, ಮತ್ತು (4) ‘ಇತರರು’. ಪ್ರತಿಯೊಂದು ಜಾತಿ ಮತ್ತು ಉಪಜಾತಿಗಳನ್ನು ಈ ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ ಅವುಗಳ ಅಂಕಿಸಂಖ್ಯೆಗಳನ್ನು ನೀಡಲಾಗಿದೆ.

ಮದ್ರಾಸ್ ರಾಜ್ಯದ ಜನಗಣತಿಗಳಲ್ಲಿ ಹಿಂದೂ ಜಾತಿಗಳ ಜನಸಂಖ್ಯೆಯನ್ನು ‘ಶೈವ’ ಮತ್ತು ‘ವೈಷ್ಣವ’ ಎಂಬ ಎರಡೇ ಗುಂಪುಗಳಲ್ಲಿ ತೋರಿಸಲಾಗಿದೆ. ‘ಲಿಂಗಾಯತ’ ಎಂಬ ಮೂರನೆಯ ಗುಂಪಿನಲ್ಲಿ ಅವರ ಉಪಜಾತಿಗಳ ಜನಸಂಖ್ಯೆಯ ಮಾಹಿತಿ ಇದೆ. ಲಿಂಗಾಯತರನ್ನು ಹಿಂದೂ ಶೈವರೊಂದಿಗೆ ಸೇರಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅದಕ್ಕೆ ಕಾರಣವೆಂದರೆ ಲಿಂಗಾಯತರ ಇತಿಹಾಸ, ದರ್ಶನ, ಸಂಪ್ರದಾಯಗಳು ಹಿಂದೂ ಶೈವಕ್ಕಿಂತ ಭಿನ್ನವಾಗಿವೆ ಮತ್ತು ವಿರುದ್ಧವಾಗಿವೆ. ಮದ್ರಾಸಿನ ಜನಗಣತಿಯ ‘ಇತರ’ ಎಂಬ ನಾಲ್ಕನೆಯ ಗುಂಪಿನಲ್ಲಿ ಜೈನ, ಬೌದ್ಧ ಮತ್ತು ಸಿಖ್‌ರ ಜನಸಂಖ್ಯೆಯನ್ನು ನೀಡಲಾಗಿದೆ. ಆ ಮೂರೂ ಧರ್ಮದ ಉಪಜಾತಿಗಳನ್ನು ಪರಿಗಣಿಸಿದ ಬಗ್ಗೆ ಮಾಹಿತಿಯಿಲ್ಲ.

ಮುಸ್ಲಿಮ್, ಪಾರ್ಸಿ, ಮತ್ತು ಕ್ರೈಸ್ತರನ್ನು ಪ್ರತ್ಯೇಕವಾಗಿರಿಸಿ ಜೈನ, ಬೌದ್ಧ, ಸಿಖ್, ಮತ್ತು ಲಿಂಗಾಯತವನ್ನು ‘ಹಿಂದೂ’ ಎಂದು ಕರೆದಿದ್ದರೂ ಈ ನಾಲ್ಕೂ ಧರ್ಮಗಳು ಭಾರತದಲ್ಲಿ ಹುಟ್ಟಿದ ಪ್ರತ್ಯೇಕ ಧರ್ಮಗಳಾಗಿವೆ. ಇಲ್ಲಿ ಸಂದರ್ಭಾನುಸಾರವಾಗಿ ಈ ನಾಲ್ಕನ್ನೂ ‘ಭಾರತದಲ್ಲಿ ಹುಟ್ಟಿದ ಹಿಂದೂಯೇತರ ಧರ್ಮಗಳು’ ಎಂದು ಅರ್ಥೈಸಿದರೆ ತಪ್ಪಲ್ಲ. ಅವೆಲ್ಲ ಹಿಂದೂ ಮೂಲದಿಂದಲೇ ಬೇರ್ಪಟ್ಟವುಗಳಾಗಿವೆ ಎಂಬುದೂ ಸತ್ಯ.

ಈ ಸಂದರ್ಭದಲ್ಲಿ ಜಾಗತಿಕ ಮಟ್ಟದ ಒಂದು ವಿಶೇಷ ಸಂಗತಿಯನ್ನು ಹೇಳಲೇ ಬೇಕಾಗಿದೆ: ಯಹೂದಿ, ಕ್ರೈಸ್ತ ಮತ್ತು ಮೊಹಮ್ಮದನ್ ಧರ್ಮಗಳಿಗೆ ‘ಓಲ್ಡ್ ‌ಟೆಸ್ತಾಮೆಂಟ’ (ಹಳೆಯ ಬೈಬಲ್) ಮೂಲ ಗ್ರಂಥವಾಗಿದೆ. ಈ ಮೂರೂ ಧರ್ಮಗಳು ಒಲ್ಟ್ ಟೆಸ್ತ್ಯಾಮೆಂಟಿನ ಕತೆಗಳನ್ನು, ಇತಿಹಾಸವನ್ನು ಮತ್ತು ಪ್ರವಾದಿಗಳನ್ನು ಒಪ್ಪುತ್ತವೆ. ಅವು ಒಂದೇ ಮೂಲದಿಂದ ಹುಟ್ಟಿ ಬೇರೆ ಬೇರೆ ಧರ್ಮಗಳಾದವು. ಆದರೆ ಹಿಂದೂ ಮೂಲಭೂತವಾದಿಗಳು ಮಾತ್ರ ಜೈನ, ಬೌದ್ಧ, ಸಿಖ್ ಮತ್ತು ಲಿಂಗಾಯತ ಧರ್ಮಗಳನ್ನು ಪ್ರತ್ಯೇಕ ಧರ್ಮಗಳೆಂದು ಒಪ್ಪುವುದಿಲ್ಲ. 1955, 1956, ಮತ್ತು ನಂತರ ರಚಿಸಿದ ಹಿಂದೂ ಕಾನೂನುಗಳೂ ಅದೇ ಜಾಡನ್ನು ಹಿಡಿದಿವೆ. ’ಹಿಂದೂ’ ಶಬ್ದದ ವ್ಯಾಖ್ಯಾನವೇ ಅದಕ್ಕೊಂದು ಸಾಕ್ಷಿಯಾಗಿದೆ. ಅದರ ಹಿನ್ನೆಲೆಯ ವಿಶ್ಲೇಷಣೆಯನ್ನು ಪ್ರತ್ಯೇಕವಾಗಿ ಮಾಡಲಾಗುವುದು.

ಮೂಲಭೂತವಾದಿಗಳ ವಾದವನ್ನು ಒಪ್ಪಿದರೆ ಬೌದ್ಧ ಧರ್ಮವೇ ದೇಶದ ಧರ್ಮವಾಗಿರುವ ಥೈಲ್ಯಾಂಡ, ಕಂಪೂಶಿಯ, ಲಾಓಸ, ವಿಯೆಟ್ನಾಮ್, ಕೋರಿಯ, ಮ್ಯಾನ್ಮಾರ, ಶ್ರೀಲಂಕಾಗಳನ್ನು ಹಿಂದೂ ರಾಷ್ಟ್ರಗಳೆಂದು ಕರೆಯಬೇಕೆ? ಅಥವಾ ಚೀನಾ ಮತ್ತು ಜಪಾನಗಳಲ್ಲಿ ಬೌದ್ಧರೇ ಹೆಚ್ಚಾಗಿದ್ದಾರೆ ಆದ್ದರಿಂದ ಅವು ಹಿಂದೂ ರಾಷ್ಟ್ರಗಳೇ?

ಮದ್ರಾಸ್ ಪ್ರಾಂತದಲ್ಲಿ ಲಿಂಗಾಯತರನ್ನು ಹಿಂದೂಗಳಿಂದ ಬೇರ್ಪಡಿಸಿ ಪ್ರತ್ಯೇಕ ಧರ್ಮವೆಂದು ಜೈನ, ಬೌದ್ಧರೊಡನೆ ಇರಿಸಲು ಕಾರಣವೆಂದರೆ ಲಿಂಗಾಯತರ ವಿಶಿಷ್ಟವಾದ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಸಂಪ್ರದಾಯ ಮತ್ತು ಆಚರಣೆಗಳು ಹಿಂದೂಗಳಿಗಿಂತ ತೀರ ಭಿನ್ನವಾಗಿವೆ ಎಂಬುದನ್ನು ಬ್ರಿಟಿಶ ಅಧಿಕಾರಿಗಳು ತಿಳಿದಿದ್ದರು. 1837ರಿಂದ ಸ್ವಿಸ್ ದೇಶದ ಪ್ರೊಟೆಸ್ಟಂಟ ಮಿಶನ್ನಿನ ಫಾದ್ರಿಗಳು ಮದ್ರಾಸ್ ಪ್ರಾಂತಕ್ಕೆ ಸೇರಿದ ಇಂದಿನ ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಮತ್ತು ಕೊಳ್ಳೆಗಾಲ ಭಾಗಗಳಲ್ಲಿ ಬೀಡುಬಿಟ್ಟಿದ್ದರು.

ಅದೇ ಮಿಶನ್ನಿನ ಶಾಖೆಗಳು ಇಂದಿನ ಧಾರವಾಡ, ಹಾವೇರಿ, ಮತ್ತು ಗದಗ ಜಿಲ್ಲೆಗಳಲ್ಲೂ ಇದ್ದವು. ಈಗಲೂ ಇವೆ. ಅವರಲ್ಲಿ ವೂರ್ತ, ವಿಲ್ಸನ್, ಕಿಟ್ಟಲ್, ಮೋಗ್ಲಿಂಗ ಇತ್ಯಾದಿ ಫಾದ್ರಿಗಳು ಲಿಂಗಾಯತರ ಪ್ರಗತಿಪರ ನಂಬಿಕೆಗಳು, ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ವ್ಯಾಪಕವಾಗಿ ಬರೆದು ಪ್ರಕಟಿಸಿದ್ದರು ಮತ್ತು ಅವುಗಳ ಬಗ್ಗೆ ತುಂಬ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು.

ಮೈಸೂರು ರಾಜ್ಯವು ಮದ್ರಾಸ್ ಪ್ರಾಂತದ ಅಡಿಯಲ್ಲಿದ್ದಾಗ 1871ರಲ್ಲಿ ಬ್ರಿಟಿಶರು ನಡೆಸಿದ್ದ ಮೈಸೂರಿನ ಜನಗಣತಿಯಲ್ಲಿ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿದ್ದೂ ಕೂಡ ಬ್ರಿಟಿಶ ಅಧಿಕಾರಿಗಳ ನಿಷ್ಪಕ್ಷಪಾತಕ್ಕೆ ಸಾಕ್ಷಿಯಾಗಿದೆ. ಅದಕ್ಕೂ ಆ ಅಧಿಕಾರಿಗಳು ಹೊಂದಿದ್ದ ಲಿಂಗಾಯತರ ಬಗೆಗಿನ ಅರಿವೇ ಕಾರಣವಾಗಿತ್ತು.

ಫಿಲಿಪ್ಸ ಚಾರ್ಲಸ್ ಬ್ರೌನ ಎಂಬ ಅಧಿಕಾರಿ 1830 ಮತ್ತು 1840ರ ದಶಕಗಳಲ್ಲಿ ಲಿಂಗಾಯತರ ಸಂಪ್ರದಾಯಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ಅವರ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದನು. ಇದೇ ಅಧಿಕಾರಿಯು ಬರೆದ ತೆಲುಗು ಶಬ್ದಕೋಶವು ಈಗ ಬಳಕೆಯಲ್ಲಿದೆ. ಪ್ರಥಮ ಕನ್ನಡ ಶಬ್ದಕೋಶವನ್ನು ಬರೆದ ಕಿಟೆಲ್ ಕೂಡ ಅದೇ ಮಿಶನ್ನಿನ ಫಾದ್ರಿಗಳಲ್ಲಿ ಒಬ್ಬ!

ಮದ್ರಾಸ್ ರಾಜ್ಯದ 1871, 1881, 1891 ಮತ್ತು ನಂತರದ ಜನಗಣತಿಗಳು ಲಿಂಗಾಯತರನ್ನು ಉನ್ನತ ದರ್ಜೆಯಲ್ಲಿ ತೋರಿಸಿ ಹಿಂದೂದಿಂದ ಬೇರ‍್ಪಡಿಸಿವೆ. ಅಲ್ಲಿ ಲಿಂಗಾಯತರು ಶೂದ್ರರಲ್ಲ. ಡಿ.ಎಫ್.ಮುಲ್ಲಾ ಅವರ ‘ಪ್ರಿನ್ಸಿಪಲ್ಸ ಆಫ ಹಿಂದೂ ಲಾ’ ಎಂಬ ಕಾನೂನು ಗ್ರಂಥದಲ್ಲಿ, ಅಂದಿನ ಮದ್ರಾಸಿನ ನ್ಯಾಯ ತೀರ್ಪುಗಳಲ್ಲಿ ಹಾಗೂ ಮದ್ರಾಸ್ ಪ್ರಾಂತದ ಎಲ್ಲ ವ್ಯವಹಾರಗಳಲ್ಲಿ ಅದನ್ನು ಕಾಣಬಹುದು.

ಮದ್ರಾಸ ರಾಜ್ಯದಲ್ಲಿ ಇಂದಿನ ಬಹುತೇಕ ಆಂಧ್ರ ಮತ್ತು ಕೇರಳದ ಕೆಲವು ಭಾಗಗಳೂ ಸೇರಿದ್ದವು. ಮದ್ರಾಸ್ ಜನಗಣತಿ ಪದ್ಧತಿ ಆಂಧ್ರ ಮತ್ತು ಕೇರಳ ರಾಜ್ಯಗಳಲ್ಲಿಯೂ ಬಳಕೆಯಾಗಿದ್ದಿತು.

ವಿಪರ್ಯಾಸವೆಂದರೆ, ಮೈಸೂರು ಮತ್ತು ಮಹಾರಾಷ್ಟ್ರದಲ್ಲಿ ಲಿಂಗಾಯತರು ಶೂದ್ರರಾಗಿದ್ದರೆ ಆಂಧ್ರ, ಮದ್ರಾಸ್, ಮತ್ತು ಕೇರಳ ರಾಜ್ಯಗಳಲ್ಲಿ ಅವರು ಶೂದ್ರರಾಗಿರಲಿಲ್ಲ. ರಾಜ್ಯಗಳ ಮರುವಿಂಗಡಣೆಯಿಂದ ಮದ್ರಾಸಿನ ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳೂ ಮತ್ತು ಕೊಳ್ಳೆಗಾಲ ತಾಲೂಕುಗಳು ಮೈಸೂರು ರಾಜ್ಯವನ್ನು ಸೇರಿದಾಗ ಈ ಜಿಲ್ಲೆಗಳ ಲಿಂಗಾಯತರು ಶೂದ್ರರಾಗಿದ್ದಿಲ್ಲ, ಆಮೇಲೆ ಅವರನ್ನೂ ಶೂದ್ರರೆಂದು ಪರಿಗಣಿಸಲಾಯಿತು!

ಈ ವ್ಯತ್ಯಾಸಗಳು ಜನಗಣತಿಯನ್ನು ನಡೆಸುವ ಪದ್ಧತಿಯಲ್ಲಿನ ಲೋಪದೋಷಗಳನ್ನು ಬಿಂಬಿಸುತ್ತವೆ. ಜನಗಣತಿಗೆ ಉಪಯೋಗಿಸುವ ಪ್ರಶ್ನಾವಳಿಯಲ್ಲಿ ಕೇಳುವ ಪ್ರಶ್ನೆಗಳನ್ನು, ಪ್ರಶ್ನೆ ಕೇಳುವ ರೀತಿಯನ್ನು, ಪ್ರಶ್ನೆಗಳ ಅನುಕ್ರಮಣಿಕೆಯನ್ನು, ಅವುಗಳ ವರ್ಗೀಕರಣವನ್ನು ಹಾಗೂ ಉತ್ತರಗಳನ್ನು ದಾಖಲಿಸುವ ರೀತಿಯನ್ನು ಸೂಕ್ಷ್ಮವಾಗಿ ಬದಲಿಸಿ ನಾವು ಇಚ್ಛಿಸಿದಂತೆ ಬದಲಾವಣೆ ಮಾಡಬಹುದಾಗಿದೆ. ಈ ಬಿಂದುಗಳಲ್ಲಿ ಏರುಪೇರು ಮಾಡಿ ಸರ್ಕಾರಗಳು ರಾಜಕೀಯ ಉದ್ದೇಶಕ್ಕೆ ಜನಗಣತಿಯನ್ನು ಬಳಿಸಿವೆ.

ಮೀಸಲಾತಿ ರಾಜಕೀಯದಲ್ಲಿ ಜನಗಣತಿಗಳು ಬಹಳ ಮಹತ್ವ ಪಡೆದಿವೆ. ಮಂಡಲ ಆಯೋಗವು 1931ರ ಜಾತಿ ಜನಗಣತಿಯನ್ನೇ ಆಧಾರವಾಗಿ ಬಳಿಸಿಕೊಂಡಿದೆ. ಚುಣಾವಣಾ ರಾಜಕೀಯದಲ್ಲಿ ಜಾತಿಗಳ ಜನಗಣತಿಯ ಅಂಕಿಸಂಖ್ಯೆಗಳೇ ಪ್ರಾಮುಖ್ಯ.

ಅಧಿಕಾರಸ್ತ ರಾಜಕೀಯ ಪಕ್ಷಗಳು ಜನಗಣತಿಗಳ ದೋಷಪೂರಿತ ಅಂಕಿಸಂಖ್ಯೆಗನ್ನು ಬಳಸಿ ಧಾರ್ಮಿಕ ಸಮುದಾಯಗಳನ್ನು ಭೌತಿಕ ಸಂಪನ್ಮೂಲಗಳ ಹಂಚಿಕೆಯ ಮೂಲಕ ಓಲೈಸುತ್ತವೆ. ಕರ್ನಾಟಕದ ಐದು ಹಿಂದುಳಿದ ವರ್ಗಗಳ ಆಯೋಗಗಳು 1919ರಿಂದ 2015ರ ವರೆಗೆ ತಯಾರಿಸಿದ ಜನಸಂಖ್ಯೆಯ ಅಂದಾಜುಗಳೇ ಇದಕ್ಕೊಂದು ಸಾಕ್ಷಿ.

ಜಾತಿ ಜನಗಣತಿ ರದ್ದಾಗಿದ್ದರೂ ಜಾತಿಗಳ ವರ್ಗೀಕರಣ ನಿಂತಿಲ್ಲ. ವರ್ಣದ ಸ್ಥಳದಲ್ಲಿ ವರ್ಗ ಬಂದಿದೆ. ’ಹಿಂದುಳಿದ’ ಮತ್ತು ‘ಮುಂದುವರೆದ’ ವರ್ಗಗಳು ಹುಟ್ಟಿಕೊಂಡಿದೆ. ಎಡಪಂಥೀಯ ಸಿದ್ಧಾಂತದ ಬಂಡಾಯ ಸಾಹಿತ್ಯದ ವಿಚಾರಧಾರೆಯೂ ‘ಅಭಿವೃದ್ಧಿ ರಾಜಕರಣ’ದಲ್ಲಿ ಬಳಕೆಯಾಗಿದೆ. ‘ಹಿಂದುಳಿದ ವರ್ಗ’ಗಳನ್ನು ಗುರುತಿಸುವಲ್ಲಿ ಜಾತಿಯೇ ಪ್ರಮುಖ ಅಂಶ. ಆದ್ದರಿಂದಲೇ 2014ರಲ್ಲಿ ನಮ್ಮ ಸಂಸತ್ತಿನಲ್ಲಿ ಮತ್ತೊಮ್ಮೆ ಜಾತಿ ಜನಗಣತಿಯನ್ನು ನಡೆಸುವ ವಿಚಾರ ಪ್ರಸ್ತಾಪವಾಗಿತ್ತು.

*
ಪರಿವಿಡಿ (index)
Previous ಜನಗಣತಿಗಳು ಸೃಷ್ಟಿಸಿದ ಆವಾಂತರ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ Next