Previous ಹಿಂದು ಧರ್ಮ ಎಂದರೇನು ? ಲಿಂಗಾಯತ ಧರ್ಮದ ಲಕ್ಷಣಗಳು Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

3. ಹಿಂದೂ ಮತ್ತು ಲಿಂಗಾಯತ ವ್ಯತ್ಯಾಸ

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಹಿಂದೂ ಮತ್ತು ಲಿಂಗಾಯತ ವ್ಯತ್ಯಾಸಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

1. ಹಿಂದು ಧರ್ಮಕ್ಕೆ ಸ್ಥಾಪಕ ಗುರುವಿಲ್ಲ

ಬೌದ್ಧ ಧರ್ಮಕ್ಕೆ ಬುದ್ದ ಜೈನ್ ಧರ್ಮಕ್ಕೆ (ಕಡೆಯ ತೀರ್ಥಂಕರರಾದ) ಮಹಾವೀರ, ಸಿಖ್‌ ಧರ್ಮಕ್ಕೆ ಗುರುನಾನಕ್, ಕ್ರೈಸ್ತ ಧರ್ಮಕ್ಕೆ ಏಸು ಕ್ರಿಸ್ತ ಇಸ್ಲಾಂ ಧರ್ಮಕ್ಕೆ (ಕಡೆಯ ಪ್ರವಾದಿ) ಮೊಹಮ್ಮದ್ ಪೈಗಂಬರರು ಸ್ಥಾಪಕ ಗುರು ಎಂದು ಖ್ಯಾತವಾದಂತೆ ಹಿಂದು ಧರ್ಮಕ್ಕೆ ಒಬ್ಬ ಸ್ಥಾಪಕ ಗುರುವಿಲ್ಲ. ಲಿಂಗಾಯತ ಧರ್ಮದ ಸ್ಥಾಪಕ ಗುರು 12ನೆಯ ಶತಮಾನದಲ್ಲಿ ಆಗಿ ಹೋದ ವಿಶ್ವಗುರು ಬಸವಣ್ಣನವರು (1134-1196). ಇದನ್ನು ಬಸವಣ್ಣನವರ ಸಮಕಾಲೀನರಾದಿಯಾಗಿ ನಂತರದ ಶರಣ ಪರಂಪರೆಯ ಎಲ್ಲರೂ ಒಪ್ಪಿದ್ದಾರೆ.

ಆದಿಯಲ್ಲಿ ನೀನೇ ಗುರುವಾದ ಕಾರಣ, ನಿನ್ನಿಂದ ಹುಟ್ಟಿತ್ತು ಲಿಂಗ,
ಆದಿಯಲ್ಲಿ ನೀನೇ ಲಿಂಗವಾದ ಕಾರಣ, ನಿನ್ನಿಂದ ಹುಟ್ಟಿತ್ತು ಜಂಗಮ.
ಆದಿಯಲ್ಲಿ ನೀನೇ ಜಂಗಮವಾದ ಕಾರಣ, ನಿನ್ನಿಂದ ಹುಟ್ಟಿತ್ತು ಪ್ರಸಾದ.
ಆದಿಯಲ್ಲಿ ನೀನೇ ಪ್ರಸಾದಿಯಾದ ಕಾರಣ, ನಿನ್ನಿಂದ ಹುಟ್ಟಿತ್ತು ಪಾದೋದಕ.
ಇಂತೀ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ ನೀನೆಯಾದ ಕಾರಣ,
ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ.
ಅದು ಕಾರಣ, ನೀನೆ ಸರ್ವಾಚಾರ ಸಂಪನ್ನನಾಗಿ

ಪೂರ್ವಾಚಾರಿ ನೀನೆಯಾದ ಕಾರಣ. - ಪ್ರಭುದೇವರು

2. ನಾಸ್ತಿಕರು, ನಿರೀಶ್ವರವಾದಿಗಳು, ಸೇಶ್ವರವಾದಿಗಳು

ಹಿಂದು ಧರ್ಮದಲ್ಲಿ ಸಾಂಖ್ಯ (ಮತ್ತು ಅದರ ಆಚಾರ ವಿಭಾಗವಾದ ಯೋಗದವ)ರು, ವೈಶೇಷಿಕರು, ಪೂರ್ವ ಮೀಮಾಂಸಕರು ನಿರೀಶ್ವರವಾದಿಗಳು, ಅಂದರೆ ಒಬ್ಬ ಸೃಷ್ಟಿ ಕರ್ತನನ್ನು ಒಪ್ಪದವರು; ಚಾರ್ವಾಕರು ನಾಸ್ತಿಕರು. ಲಿಂಗಾಯತ ಧರ್ಮವು ಸೇಶ್ವರವಾದಿ ಧರ್ಮ (Theistic Religion). ಸೃಷ್ಟಿಕರ್ತ ಲಿಂಗದೇವನು ಈ ಧರ್ಮದ ಜೀವಾಳ, ಹಾಸು ಹೊಕ್ಕು, ಲಿಂಗಾಂಗ ಸಾಮರಸ್ಯವೇ ಇದರ ಗುರಿ, ಲಿಂಗವೆಂದರೆ ಬ್ರಹ್ಮಾಂಡಗತ ಚೈತನ್ಯ ಪರಮಾತ್ಮ ಅಂಗವೆಂದರೆ ಪಿಂಡಾಂಡಗತ ಚೈತನ್ಯವಾದ ಜೀವಾತ್ಮ. ಇವೆರಡರ ಸಮ್ಮಿಲನವೇ ಲಿಂಗಾಂಗ ಸಾಮರಸ್ಯ, ದೇವನು ಇದ್ದಾನೆ ಎಂಬುದು ಪರಮ ಸತ್ಯ; ದೇವನು ಒಬ್ಬನೇ ಎನ್ನುವುದು ಸ್ಪಷ್ಟ ನಿಲುವು.

1. ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ
ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ
ನಿತ್ಯ ನಿರ್ಮಳ ಲಿಂಗ ಆಯೋನಿಸಂಭವನಯ್ಯ
ನಮ್ಮ ಕೂಡಲಸಂಗಮದೇವರು.

2. ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡ
ದೇವನೊಬ್ಬನೆ ಕಾಣಿರೂ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವರಲ್ಲದೆ ಇಲ್ಲ ಎಂದಿತ್ತು ವೇದ.

3. ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ,
ನಿನ್ನನರಿಯದ ಮುಕ್ತಿಯೇ ನರಕ ಕಂಡಯ್ಯಾ,
ನೀನೊಲ್ಲದ ಸುಖವೆ ದುಃಖ ಕಂಡಯ್ಯಾ,
ನೀನೊಲಿದ ದುಃಖವ ಪರಮ ಸುಖ ಕಂಡಯ್ಯಾ,
ಚನ್ನಮಲ್ಲಿಕಾರ್ಜುನಾ,
ನೀ ಕಟ್ಟಿ ಕೆಡಹಿದ ಬಂಧನವೆ ನಿರ್ಬಂಧವೆಂದಿಪ್ಪೆನು!

4. ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ?
ದೀಪಕ್ಕೆ ದೀವಿಗೆ ಭೇದವುಂಟೆ ಅಯ್ಯಾ?
ಅಂಗಕ್ಕೆ ಆತ್ಮಂಗೆ ಭಿನ್ನವುಂಟೆ ಅಯ್ಯಾ?
ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋರಿದನಾಗಿ,
ಸಾವಯವಕ್ಕೂ ನಿರವಯವಕ್ಕೂ ಭಿನ್ನವಿಲ್ಲವಯ್ಯಾ,
ಚನ್ನಮಲ್ಲಿಕಾರ್ಜುನಾ,
ಬೆರೆಸಿ ಮತಿಗೆಟ್ಟವಳ ಏತಕ್ಕೆ ನುಡಿಸುವಿರಯ್ಯಾ ?

3. ಹಿಂದು ಧರ್ಮಕ್ಕೆ ವೇದಾಗಮಗಳೇ ಪರಮ ಪ್ರಮಾಣ

ಹಿಂದು ಧರ್ಮಕ್ಕೆ ವೇದಾಗಮ, ಸ್ಮೃತಿ -ಶೃತಿ, ಬ್ರಹ್ಮಸೂತ್ರ - ಭಗವದ್ಗೀತೆಗಳೇ ಪರಮ ಪ್ರಮಾಣ. ಈ ಶಾಸ್ತ್ರದಾಸ್ಯವನ್ನು ನಿರಾಕರಿಸಿ ಧರ್ಮಗುರು ಬಸವಣ್ಣನವರು ವೇದಾಗಮ, ಶೃತಿ -ಕೃತಿಗಳನ್ನೇ ಪರೀಕ್ಷೆಗೆ ಒಡ್ಡಿದರು. ಇವೆಲ್ಲಕ್ಕಿಂತ ಮಿಗಿಲು ಅನುಭವ ಮತ್ತು ಅನುಭಾವ ಪ್ರಮಾಣ ಎಂದು ಸಾರಿ ಹೇಳಿದರು. ಪರ್ಯಾಯವಾಗಿ ವಚನ ಶಾಸ್ತ್ರಸಂಹಿತೆಯನ್ನು ಕೊಟ್ಟರು. ವಚನ ಶಾಸ್ತ್ರವೇ ಇಂದು ಲಿಂಗಾಯತ ಧರ್ಮಕ್ಕೆ ಆಧಾರ.

1. ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು
ತವರಾಜದ ನೂರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ, ಉಪ್ಪನೀರನುಂಬುವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ
ನಿಮ್ಮ ವಚನಂಗಳ ಕೇಳದೆ ಅನ್ಯ ಪುರಾಣಂಗಳ ಕೇಳಿ ಕೆಟ್ಟೆನಯ್ಯಾ,

2. ವೇದಂಗಳ ಹಿಂದೆ ಹರಿಯದಿರು ಹರಿಯದಿರು
ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು
ಪುರಾಣಂಗಳ ಹಿಂದೆ ಬಳಲದಿರು, ಬಳಲದಿರು
ಸೌರಾಷ್ಟ್ರ ಸೋಮೇಶ್ವರನ ಕೈಪಿಡಿ,
ಶಬ್ದ ಜಾಲಂಗಳಿಗೆ, ಬಳಲದಿರು, ಬಳಲದಿರು.

3. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ
ಆಗಮದ ಮೂಗ ಕೊಯಿವೆ
ನೋಡಯ್ಯಾ, ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯಾ,

4.ನಾದದ ಬಲದಿಂದ ವೇದಂಗಳಾದವಲ್ಲದೆ, ವೇದ ಸ್ವಯಂಭುವಲ್ಲಿ ನಿಲ್ಲು.
ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ, ಶಾಸ್ತ್ರಸ್ವಯಂಭುವಲ್ಲ ನಿಲ್ಲು,
ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ, ಸಮಯ ಸ್ವಯಂಭುವಲ್ಲ ನಿಲ್ಲು.
ಇಂತೀ ಮಾತಿನ ಬಣವೆಯ ಮುಂದಿಟ್ಟುಕೊಂಡು ಆತನ ಕಂಡಿಹೆನೆಂದಡೆ, ಆತನತ್ಯತಿಷ್ಠದ್ದಶಾಂಗುಲ,
ಆತನಂತು ಸಿಲುಕುವನೆಂದಾತ ಅಂಬಿಗರ ಚೌಡಯ್ಯ,


ಜಗತ್ತಿನ ಎಲ್ಲ ಧರ್ಮಗಳಿಗೂ ತಮ್ಮದೇ ಆದ ಧರ್ಮಗ್ರಂಥಗಳಿವೆ. ಕ್ರಿಶ್ಚಿಯನ್ನರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್, ಸಿಬ್ಬರಿಗೆ ಗ್ರಂಥ ಸಾಹೇಬ್, ಬೌದ್ಧರಿಗೆ ತ್ರಿಪಿಟಕ, ಪಾರ್ಸಿಗಳಿಗೆ ಜೆಂಡ್ ಅವಸ್ಥಾ ಇರುವಂತೆ ವೈದಿಕರಿಗೆ ವೇದಗಳಿವೆ. ಈ ಎಲ್ಲ ಧರ್ಮಾನುಯಾಯಿಗಳನ್ನು ಅವರ ಆಚಾರಗಳನ್ನು ಕುರಿತು ಏಕೆ ಹೇಗೆ ಮಾಡುತ್ತೀರಿ ? ಎಂದು ಪ್ರಶ್ನಿಸಿದಾಗ ತಮ್ಮ ಧರ್ಮಗ್ರಂಥ ಹೀಗೆ ಹೇಳುತ್ತದೆ ಎಂದು ಉತ್ತರಿಸುವರು. ಅದೇ ರೀತಿ ಹಿಂದುಗಳು ತಮ್ಮ ಆಚರಣೆಗಳ ವಿಚಾರಣೆಗೆ ವೇದ, ಆಗಮ, ಗೀತೆ, ಪುರಾಣಗಳತ್ತ ಕೈ ತೋರಿಸುವರು. ಲಿಂಗಾಯತರು ಮಾರ್ಗದರ್ಶಿಯಾಗಿ ಇಟ್ಟುಕೊಳ್ಳಬೇಕಾದುದು ವಚನ ಸಾಹಿತ್ಯವನ್ನು. ಇದೇ ಲಿಂಗಾಯತರ ಆಚಾರ - ವಿಚಾರ -ಸಂಸ್ಕಾರಗಳನ್ನು ನಿಯಂತ್ರಿಸಬೇಕಾದ ಕೈಪಿಡಿ. ಶ್ರೀ ಮರುಳು ಶಂಕರ ದೇವರು ಹೇಳುತ್ತಾರೆ :
ಬಸವಣ್ಣ ನಡೆದುದೇ ಮಾರ್ಗ ನುಡಿದುದೇ ವೇದ

3. ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯ ಯಾಗ ಸಮಬಾರದಯ್ಯಾ
ಎಮ್ಮ ವಚನದೊಂದು ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ
ಕಪಿಲ ಸಿದ್ದಮಲ್ಲಿಕಾರ್ಜುನ


ಚಾರ್ವಾಕರು, ಜೈನರು, ಬೌದ್ಧರು. ಸಿಖ್ಯರು, ವೇದ ಪ್ರಾಮಾಣ್ಯವನ್ನು ನಿರಾಕರಿಸಿದುದರಿಂದ ಅವರು ವೈದಿಕರಲ್ಲ ಎನ್ನಲಾಗುತ್ತಿದೆ.

ಒಮ್ಮೆ ಗುಜರಾತಿನ ಸ್ವಾಮಿ ನಾರಾಯಣ ಪಂಥದವರು ತಾವು ಅಹಿಂದು ಪಂಥವೆಂದು ಅಲ್ಪ ಸಂಖ್ಯಾತರೆಂದು ಮನ್ನಣೆ ಪಡೆಯಲು 1966ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲನ್ನು ಹತ್ತಿದರು. ಆದರೆ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಮಾನ್ಯ ಶ್ರೀ ಪಿ.ಬಿ.ಗಜೇಂದ್ರ ಗಡಕರ್ ಅವರ ಅಧ್ಯಕ್ಷತೆಯಲ್ಲಿ ತೀರ್ಪು ಹೊರಬಂದಿತು. ತೀರ್ಪಿನ ಸಾರಾಂಶವೇನೆಂದರೆ “ವೇದಗಳನ್ನು ಭಕ್ತಿ- ಶ್ರದ್ಧೆಗಳಿಂದ ಮಾನ್ಯ ಮಾಡುವುದು, ಬಹುದೇವತೋಪಾಸನೆಯಲ್ಲಿನಂಬಿಕೆ ಇಡುವುದು, ಮೋಕ್ಷಸಾಧನೆಗೆ ಹಲವಾರು ಮಾರ್ಗಗಳಿವೆ ಎಂದು ಒಪ್ಪಿಕೊಳ್ಳುವುದೇ ಹಿಂದು ಧರ್ಮದ ಲಕ್ಷಣಗಳು ಎಂಬ ತಿಲಕರ ಅಭಿಪ್ರಾಯದ ಆಧಾರದ ಮೇಲೆ ಸ್ವಾಮಿ ನಾರಾಯಣ ಪಂಥದವರು ವೈದಿಕ ಆಚರಣೆಗಳನ್ನು ಮಾಡುವುದರಿಂದ ಅವರು ಹಿಂದುಗಳೇ ಎಂದು ತೀರ್ಪು ನೀಡಲಾಯಿತು. ಇದೇ ರೀತಿ ಕಲಕತ್ತಾದ ರಾಮಕೃಷ್ಣಾಶ್ರಮದವರೂ ಪ್ರಯತ್ನಿಸಿ ಸೋತರು. ಈ ಎರಡೂ ಪಂಥಗಳವರು ಹಿಂದು ದೇವತೆಗಳ ಪೂಜೆ ಮಾಡುವವರು, ವೇದಾಗಮಗಳನ್ನು ಒಪ್ಪುವವರು, ಹೋಮ - ಹವನ - ಯಜ್ಞಕಾರ್ಯಗಳಲ್ಲಿ ಆಸಕ್ತರು. ಅಂದಾಗ ಇವರು ಅಹಿಂದುಗಳು ಹೇಗಾಗುವರು?

ಲಿಂಗಾಯತ ಧರ್ಮವು ವೇದ ಪ್ರಾಮಾಣ್ಯವನ್ನು ಮನ್ನಿಸದೆ, ಹೋಮ ಹವನಾದಿಗಳನ್ನು ತಿರಸ್ಕರಿಸುವ, ಏಕದೇವ- ಇಷ್ಟಲಿಂಗ ಉಪಾಸಕ ಧರ್ಮವಾದ್ದರಿಂದ ಸ್ಪಷ್ಟವಾಗಿ ಅಹಿಂದು ಧರ್ಮ ಎನ್ನಿಸಿಕೊಳ್ಳುವುದು.

4. ಚತುರ್ವರ್ಣಗಳನ್ನು ನಂಬುತ್ತದೆ.

ಹಿಂದು ಸಮಾಜ ಶಾಸ್ತ್ರವು ಚತುರ್ವರ್ಣ ಮತ್ತು ಚತುರಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಇದರ ಪ್ರಕಾರ ಸಮಾಜದಲ್ಲಿ ವರ್ಣಾಧಾರಿತ ವಿಭಾಗಗಳು ನಾಲ್ಕು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಈ ನಾಲ್ಕು ವರ್ಣಗಳಿಂದ ಹೊರಗಿರುವವನು ಪಂಚಮ ವರ್ಣೀಯನಾದ ಅಸ್ಪೃಶ್ಯ. ಋಗ್ ವೇದದಲ್ಲಿ ಬರುವ ಪುರುಷ ಸೂಕ್ತದಲ್ಲಿ ದೇವರ ತಲೆಯಿಂದ ಬ್ರಾಹ್ಮಣನ ಉತ್ಪತ್ತಿ ಭುಜದಿಂದ ಕ್ಷತ್ರಿಯನ ಉತ್ಪತ್ತಿ, ತೊಡೆಯಿಂದ ವೈಶ್ಯನ, ಪಾದದಿಂದ ಶೂದ್ರನ ಉತ್ಪತ್ತಿ ಎಂದು ಹೇಳಲಾಗಿದೆ. ವೇದಾಧ್ಯಯನ ಅದರ ಆಧಾರದ ಮೇಲೆ ಧಾರ್ಮಿಕ ಪೌರೋಹಿತ್ಯ ನಡೆಸುವ ಅಧಿಕಾರ ಪಡೆದ ಬ್ರಾಹ್ಮಣ ಸರ್ವಶ್ರೇಷ್ಠ; ದೇಶ ರಕ್ಷಣೆಗೆ ಬಾಹುಬಲ ಪರಾಕ್ರಮದಿಂದ ಹೋರಾಡುವ ಕ್ಷತ್ರಿಯ ಬ್ರಾಹ್ಮಣನಿಗಿಂತ ಕೆಳಗೆ, ವ್ಯಾಪಾರ ವೃತ್ತಿಯ ವೈಶ್ಯ ಇನ್ನೂ ಕೆಳಗೆ, ದಾಸ್ಯ ವೃತ್ತಿಯನ್ನು ಮಾಡುವ ಶರೀರ ಶ್ರಮದಾಧಾರಿತ ಕೆಲಸಗಳನ್ನು ಮಾಡುವ ಶೂದ್ರ ಎಲ್ಲರಿಗಿಂತಲೂ ಕೆಳಗೆ ಇವನಿಗೆ ವೇದಾಧ್ಯಯನಕ್ಕೆ ಅವಕಾಶವಿಲ್ಲ, ಉಪನಯನ ಯಜ್ಯೋಪವೀತ ಧಾರಣೆ ಇಲ್ಲ. ಚತುರ್ವರ್ಣ ಕಕ್ಷೆಯಿಂದ ಹೊರಗಿರುವ ದಲಿತರು ಎಲ್ಲ ರೀತಿಯ ಧಾರ್ಮಿಕ ಹಾಗೂ ಸಾಮಾಜಿಕ ಹಕ್ಕುಗಳಿಂದ ಪೂರ್ಣ ವಂಚಿತರು. ಕ್ಷತ್ರಿಯ ವಿಶ್ವಾಮಿತ್ರ ಬ್ರಹ್ಮಜ್ಞಾನಿ ಎಂಬ ಬಿರುದು ಪಡೆಯಲು ಸರ್ವ ಸಾಹಸ ಮಾಡಿದನಾದರೂ ಅದು ಸಿದ್ಧಿಸದಂತೆ ತಡೆಯಲಾಯಿತು ಎಂಬುದು ಗಮನಾರ್ಹ. ಪರಸ್ಪರ ವೈರುದ್ಧಗಳಿಂದ ಕೂಡಿದ ಹಿಂದು ಸಮಾಜದಲ್ಲಿ ಕ್ಷತ್ರಿಯರಾದ ರಾಮ, ಕೃಷ್ಣರೇ ದೈವತ್ವವನ್ನು ಹೊಂದಿದರು ಎಂಬುದು ಅಷ್ಟೇ ಸೋಜಿಗದ ಸಂಗತಿ.

ಆಶ್ರಮಗಳು ನಾಲ್ಕು ಬ್ರಹ್ಮಚರ್ಯ, ಗೃಹಸ್ಥ ವಾನಪ್ರಸ್ತ ಸನ್ಯಾಸ, ಬ್ರಾಹ್ಮಣ ವರ್ಣೀಯನಿಗೆ ಈ ನಾಲ್ಕು ಲಭ್ಯ. ಕ್ಷತ್ರಿಯನಿಗೆ ಮೊದಲ ಮೂರು, ವೈಶ್ಯನಿಗೆ, ಮೊದಲ ಎರಡು, ಶೂದ್ರನಿಗೆ ಕೇವಲ ಗೃಹಸ್ಥ ಮಾತ್ರ. ಬ್ರಹ್ಮಚರ್ಯದಲ್ಲಿ ವಿದ್ಯಾರ್ಜನೆ, ಗ್ರಾಹಸ್ಥದಲ್ಲಿ ಸಂತಾನೋತ್ಪತ್ತಿ, ವಾನಪ್ರಸ್ಥದಲ್ಲಿ ನಿರ್ಲಿಪ್ತತೆ ಹೊಂದಿ ಅಧ್ಯಯನ ಮಾಡಬೇಕು. ಸನ್ಯಾಸದಲ್ಲಿ ಕಾಡಿಗೆ ಹೋಗಿ ಜ್ಞಾನ ಸಾಧನೆ ಮಾಡಬೇಕು. ಬಸವಾದಿ ಪ್ರಮಥರು ಈ ವಿಭಜನೆಯನ್ನು ಟೀಕಿಸಿದರು. ಹುಟ್ಟಿನಿಂದ ಯಾರೂ ಶ್ರೇಷ್ಠ -ಕನಿಷ್ಠರಾಗರು ಎಂದರಲ್ಲದೆ ಎಲ್ಲರಿಗೂ ವಿದ್ಯಾರ್ಜನೆ ಮತ್ತು ಜ್ಞಾನ ಸಾಧನೆಗೆ ಅವಕಾಶ ಮಾಡಿಕೊಟ್ಟರು. ಮಾನವ -ಶರಣ ಎಂಬ ಎರಡೇ ವರ್ಗಿಕರಣ ಮಾಡಿದರು. ಮರೆವಿನ ಅಜ್ಞಾನಿ ಮಾನವ, ಅರಿವಿನ ಸುಜ್ಞಾನಿ ಶರಣ ಎಂದು ನುಡಿದು ಮರೆದ ಮಾನವ ಅರಿದ ಸುಜ್ಞಾನಿಯಾಗಲು ಅವಕಾಶ ಮಾಡಿಕೊಟ್ಟರು. ಲಿಂಗಾಯತ ಸಮಾಜದಲ್ಲಿ ವರ್ಣ ಮತ್ತು ಆಶ್ರಮ ಪಾಲನೆ ಇಲ್ಲವೇ ಇಲ್ಲ.

“ಚತುರ್ವರ್ಣ ವ್ಯವಸ್ಥೆಯನ್ನು ದೇವರಿಂದ ನಿರ್ಮಾಣವಾದುದು. ಇದನ್ನು ಬದಲಾಯಿಸಲು ಬರದು; ಬದಲಾಯಿಸಲು ಎಳಸಿದರೆ ಅದು ದೈವ ದ್ರೋಹ. ಇದನ್ನು ನಂಬಿ ಪಾಲಿಸುವವರೇ ಹಿಂದುಗಳು.” ಎಂಬುದು ಕೆಲವರ ದೃಢ ವಿಶ್ವಾಸದ ವ್ಯಾಖ್ಯೆ. ಇದಕ್ಕೆ ಸನಾತನಿಗಳು ಕೊಡುವ ಮುಖ್ಯವಾದವೆಂದರೆ, ಚಾತುರ್ವರ್ಣ೦ ಮಯಾ ಸೃಷ್ಟ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ. ಹೀಗೆ ಪರಮಾತ್ಮನೇ ಹೇಳಿದ್ದಾನೆಂದ ಮೇಲೆ, ನಾವು ಅದನ್ನು ದೇವಶಾಸನವೆಂದು ನಂಬಬೇಕು. ಈ ವ್ಯಾಖ್ಯೆಯ ಪ್ರಕಾರ ಚತುರ್ವರ್ಣ ವ್ಯವಸ್ಥೆಯನ್ನು ದೇವ ನಿರ್ಮಿತವೆಂದೊಪ್ಪದ ಅವೈದಿಕ ಧರ್ಮಗಳೆಲ್ಲ ಹಿಂದೂ ಕಕ್ಷೆಯಿಂದ ಹೊರಗಾಗಬೇಕಾಗುವುದು.

ಅತಿವರ್ಣಾಶ್ರಮ ಸಮಾಜಶಾಸ್ತ್ರವನ್ನು ಪ್ರತಿಪಾದಿಸುವ ಲಿಂಗಾಯತ ಧರ್ಮವೇ ಮುಂತಾದ ಈ ಅವೈದಿಕ ಮತಗಳಾವುವೂ ಈ ವ್ಯವಸ್ಥೆಯನ್ನು ದೇವ ನಿರ್ಮಿತವೆಂದೊಪ್ಪದೆ ಮಾನವ ಕಲ್ಪಿತ ಎನ್ನುವವು. ಭಗವದ್ಗೀತೆಯಲ್ಲಿ ಈ ಶ್ಲೋಕದಲ್ಲಿ ಎಂತಹ ಗೊಂದಲ ತುಂಬಿದೆ ಎಂಬುದನ್ನಿಲ್ಲಿ ನೋಡೋಣ. “ಚತುರ್ವರ್ಣಗಳು ನನ್ನಿಂದ (ಶ್ರೀಕೃಷ್ಣನಿಂದ) ಗುಣಕರ್ಮಗಳ ಆಧಾರದ ಮೇಲೆ ನಿರ್ಮಿತವಾಗಿವೆ.” ಎಂದು ಶ್ರೀ ಕೃಷ್ಣ (ಪ್ರಾಮಾಣಿಕವಾಗಿಯೆ) ಹೇಳಿದ್ದಾನೆ. ಇದನ್ನು ಅಪರಿವರ್ತನೀಯ ವ್ಯವಸ್ಥೆಯನ್ನಾಗಿ ಭದ್ರಗೊಳಿಸಲು ಶ್ರೀ ಕೃಷ್ಣನನ್ನು ಜಗನ್ನಿಯಾಮಕ ಕರ್ತನೆಂದು ಮಾಡಿ ಅತಾರ್ಕಿಕವಾದ ತರ್ಕದ ಬಲದಿಂದ ಇದನ್ನು ಸಾಧಿಸುವ ವಿಶೇಷ ನೋಡಿರಿ.
ಶ್ರೀ ಕೃಷ್ಣನು ಚತುರ್ವರ್ಣ ವ್ಯವಸ್ಥೆಯನ್ನು ಮಾಡಿದ. ಶ್ರೀಕೃಷ್ಣನು ದೇವರು. ಆದ್ದರಿಂದ ದೇವರು ಚತುರ್ವರ್ಣ ವ್ಯವಸ್ಥೆಯನ್ನು ಮಾಡಿದ. ಇದೊಂದು ವಿಚಿತ್ರ ತರ್ಕ. ಶ್ರೀಕೃಷ್ಣನು ದೇವರು ಎಂಬ ಉಕ್ತಿಯನ್ನು -ಮಧ್ಯ ತರುವಲ್ಲೇ ಒಂದು ದೊಡ್ಡ ತಾರ್ಕಿಕ ದೋಷ ಸಂಭವಿಸುತ್ತಿದೆ. ಶ್ರೀ ಕೃಷ್ಣನು ಇದನ್ನು ಗಟ್ಟಿಗೊಳಿಸಿರಬಹುದು. ನಮಗಿದು ಸಂಬಂಧವಿಲ್ಲ ಎಂಬುದು ಅವೈದಿಕ ಧರ್ಮಗಳ ದೃಷ್ಟಿ ಕೋನ. ಇದನ್ನು ದೇವರು ಅಂದರೆ ಕರ್ತನು ಮಾಡಿರುವನೆ? ಸಾಧ್ಯವಿಲ್ಲ, ವರ್ಣ ಮತ್ತು ಜಾತಿ ವ್ಯವಸ್ಥೆಯು ದೇವರಿಂದ ನಿರ್ಮಾಣವಾಗಿಲ್ಲ.

1. ಯಾವುದೇ ದೇವ ನಿರ್ಮಿತವಿದ್ದುದು ಎಲ್ಲ ಕಡೆ ಒಂದೇ ತರಹ ಇರುತ್ತದೆ. ಹೆಣ್ಣು-ಗಂಡು ದೇವರು ಮಾಡಿದ ಜಾತಿಗಳು. ಎಲ್ಲ ದೇಶದಲ್ಲೂ ಹೆಣ್ಣು ಹೆಣ್ಣೆ, ಗಂಡು ಗಂಡೇ! ಪಕ್ಷಿಗಳು ಖೇಚರ ಪ್ರಾಣಿಗಳು; ಮೀನು ಜಲಚರ, ಹಸು ಎಮ್ಮೆ ಮುಂತಾದವು ಭೂಚರ, ಎಲ್ಲ ದೇಶದಲ್ಲಿಯೂ ಇದೇ ವ್ಯವಸ್ಥೆ ಹಾಗಾದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಎಲ್ಲಾ ದೇಶಗಳಲ್ಲಿ ಏಕಿಲ್ಲ? ಈ ವಿಭಜನೆ ದೇವ ನಿರ್ಮಿತವೇ ಆಗಿದ್ದರೆ ಎಲ್ಲ ಕಡೆ ಹೀಗೇ ಇರಬೇಕಾಗಿತ್ತು.

2. ದೇವ ನಿರ್ಮಿತವಾದ ಭಿನ್ನ ಜಾತಿಗಳ ಪ್ರಾಣಿಗಳು ಪರಸ್ಪರ ಸಂಗವನ್ನು ಮಾಡವು. ಮಾಡಿದರೂ ಸಂತಾನೋತ್ಪತ್ತಿಯಾಗದು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ ಸ್ತ್ರೀ ಪುರುಷರು ಸಂಸಾರ ಮಾಡಿದರೆ ಅವರಿಗೆ ಸಂತಾನವಾಗದೆ? ಆದ ಪ್ರಸಂಗಗಳು ಬೇಕಾದಷ್ಟಿವೆ.

3. ದೇವ ನಿರ್ಮಿತ ಜಾತಿಗಳಾದ ಗಿಳಿ, ಕಾಗೆ, ಗುಬ್ಬಿ ಹುಲಿ, ಕರಡಿಗಳನ್ನು ಯಾವುದೇ ಸಂಸ್ಕಾರದಿಂದ ಬದಲು ಮಾಡಲು ಬರದು. ಆದರೆ ಮಾನವರನ್ನು ಧರ್ಮ ಸಂಸ್ಕಾರದಿಂದ ಬದಲು ಮಾಡಿ ಪೂರ್ವಾಶ್ರಯವನ್ನು ಕಳೆಯಲು ಸಾಧ್ಯವಿದೆ. ಧರ್ಮ ಸಂಸ್ಕಾರದಿಂದ ಅಸ್ಪಶ್ಯನ ಅಸ್ಪೃಶ್ಯತೆ, ಶೂದ್ರನ ಶೂದ್ರತ್ವ ನಿರಸನವಾಗುವುವು.

ಅತಿ ವರ್ಣಾಶ್ರಮ ಸಮಾಜ ವ್ಯವಸ್ಥೆಯನ್ನು ಒಪ್ಪುವ, ಪ್ರತಿಪಾದಿಸುವ ಅವೈದಿಕ ಧರ್ಮಗಳು ಮಾನವ ಶರಣ, ಭವಿ - ಭಕ್ತ, ಬದ್ಧ-ಬುದ್ಧ ಅಜ್ಞಾನಿ- ಸುಜ್ಞಾನಿ ಎಂಬ ಎರಡೇ ವರ್ಗವನ್ನು ಮಾಡುವವು; ಅದೂ ಆಚಾರ -ಅರಿವು-ಅನುಭಾವಗಳ ತಳಹದಿಯ ಮೇಲೆ, ಹುಟ್ಟಿನ ಮೇಲಲ್ಲ,

ಹೊಲೆಗಂಡಲ್ಲದೆ ಪಿಂಡದ ನೆಲೆಗೆ ಆಶ್ರಯವಿಲ್ಲ
ಜಲ ಬಿಂದುವಿನ ವ್ಯವಹಾರ ಒಂದೆ
ಆಸೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೆ.
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುದ್ಭವಂ
ಆತ್ಮ ಜೀವ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನ?
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ;
ಲಿಂಗಸ್ಥಲವನರಿದವನೇ ಕುಲಜನು.


ಎಲ್ಲರ ಪಿಂಡೋತ್ಪತ್ತಿಯು ಒಂದೇ ಬಗೆಯಲ್ಲಿ ಹುಟ್ಟುವ ರೀತಿಯೂ ಒಂದೇ ಬಗೆಯದು, ಹುಟ್ಟಿ ಬಂದಾನಂತರ ಶಾರೀರಿಕ -ಮಾನಸಿಕ ಚಟುವಟಿಕೆಗಳೂ ಒಂದೇ ತರಹ, ಅಂದಾಗ ವರ್ಣ ವ್ಯವಸ್ಥೆಗೆ ಅರ್ಥವೆಲ್ಲಿದೆ? ಕಾಸುವವನು ಕಮ್ಮಾರ, ಬಟ್ಟೆ ತೊಳೆಯುವವನು ಮಡಿವಾಳ, ನೇದವ ನೇಕಾರ, ವೇದವನೋದುವವ ಬ್ರಹ್ಮಜ್ಞಾನಿ. ಯಾರಾದರೂ ಅನೈಸರ್ಗಿಕವಾಗಿ ಹುಟ್ಟುವದುಂಟೆ? ಪರಮಾತ್ಮನನ್ನು ಅರಿತವನೇ ಕುಲ ಶ್ರೇಷ್ಠನು. ಹೀಗೆ ಎಲ್ಲರೂ ಸಮಾನವಾಗಿ ಹುಟ್ಟುವ ಕಾರಣ ಯಾರೂ ಹುಟ್ಟಿನಿಂದಲೇ ಮೇಲಲ್ಲ- ಕೀಳಲ್ಲ; ಅವರ ಸಾಧನೆಯಿಂದಲೇ ಅವರಿಗೆ ಶ್ರೇಷ್ಠತ್ವ ಪ್ರಾಪ್ತಿ, ವ್ಯಕ್ತಿಯು ಯಾವುದೇ ಜಾತಿಯಲ್ಲಿ ಹುಟ್ಟಿದರೂ ಸತ್‌ಸಂಕಲ್ಪದಿಂದ, ಸಾಧನೆಯಿಂದ ಉತ್ತುಂಗ ನಿಲುವನ್ನು ಹೊಂದಬಲ್ಲ.

ಗುರು ಬಸವಣ್ಣನವರು ವರ್ಣಾಶ್ರಮ ಭೇದವಿಲ್ಲದೆ ಎಲ್ಲರಿಗೂ ಧರ್ಮದ ಮಹಾದ್ವಾರವನ್ನು ತೆರೆದುದರಿಂದ ತಮ್ಮ ಬದುಕನ್ನು ದೈವೀಕರಿಸಿಕೊಳ್ಳಲು ಎಲ್ಲ ವರ್ಣಿಯರಿಗೂ ಸಾಧ್ಯವಾಯಿತು. ಅನುಭವ ಮಂಟಪದ ಶರಣರಲ್ಲಿ ಶೂದ್ರ ಮತ್ತು ಪಂಚಮ ವರ್ಣಿಯರೇ ಹೆಚ್ಚು ಸಂಖ್ಯೆಯಲ್ಲಿ ಇರುವುದನ್ನು ಕಾಣಬಹುದು. ಮೇಲ್ಜಾತಿ ವರ್ಗದವರು ನಂತರವೇ ಪ್ರವೇಶ ಮಾಡಿದ್ದಾರೆ. ಲಿಂಗೀ ಬ್ರಾಹ್ಮಣರ ಪ್ರವೇಶವಾದ ಮೇಲೆಯೇ ಲಿಂಗಾಯತ ಧರ್ಮದ ಜನ್ಮಸಿದ್ದ ಪ್ರಖರತೆ ದುರ್ಬಲಗೊಂಡಿರಲೂ ಸಾಕು.

ಲಿಂಗಾಯತರು ಹಿಂದುಗಳು ಎನ್ನುವವರು ಒಂದು ಪ್ರಶ್ನೆಗೆ ಉತ್ತರ ಕೊಡಲು ಹೊಣೆಗಾರರಾಗುತ್ತಾರೆ. ಸನಾತನ ವೈದಿಕ ಧರ್ಮದ ಪ್ರಕಾರ ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರತ್ ದ್ವಿಜ ಉಚ್ಯತೆ! ಹುಟ್ಟಿನಿಂದ ಎಲ್ಲರೂ ಶೂದ್ರರು, ದ್ವಿಜ ಸಂಸ್ಕಾರದ ಬಳಿಕ ಅವರು ದ್ವಿಜರಾಗುತ್ತಾರೆ. ದ್ವಿಜರನ್ನು ಮಾಡುವುದು ಜನಿವಾರ ಧಾರಣೆ ಮತ್ತು ಗಾಯತ್ರಿ ಮಂತ್ರೋಪದೇಶ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಇವು ಉಂಟು. ಶೂದ್ರರಿಗೆ ಇಲ್ಲ. ಲಿಂಗಾಯತರು ಹಿಂದುಗಳು ಎಂದರೆ ಆಗ ಜನಿವಾರ ಧಾರಣೆ, ಉಪನಯನ, ಗಾಯತ್ರಿ ಮಂತ್ರೋಪದೇಶವಿಲ್ಲದ ಕಾರಣ ಅವರು ಶೂದ್ರ ವರ್ಣದಲ್ಲಿ ಸೇರ ಬೇಕಾಗುವುದು. ಒಂದು ಸ್ವತಂತ್ರ ಧರ್ಮಾನುಯಾಯಿಗಳಾದ ಶರಣರನ್ನು ಹಿಂದು ಧರ್ಮದೊಳಕ್ಕೆ ಸೇರಿಸಿ ಶೂದ್ರ ವರ್ಣಿಯರ ಸ್ಥಾನದಲ್ಲಿ ಇಡುವ ಡಾ|| ಚಿದಾನಂದ ಮೂರ್ತಿಯಂಥವರ ಪ್ರಯತ್ನವು ಹಾಸ್ಯಾಸ್ಪದ. ಒಕ್ಕಲಿಗರು, ಕುರುಬರು, ಕುಂಬಾರರು, ಮಡಿವಾಳರು, ಇತ್ಯಾದಿ ಇತ್ಯಾದಿ ಶ್ರಮಿಕ ವರ್ಗಗಳು ಶೂದ್ರ ವರ್ಣೀಯರಾಗಿ ಉಳಿದು ಧಾರ್ಮಿಕ ಹಕ್ಕುಗಳಿಂದ ವಂಚಿತರಾಗಿರುವುದು ಅನಿವಾರ್ಯ ಸತ್ಯವಾಗಿದೆ.

5. ದ್ವಿಜರಿಗೆ ಮಾತ್ರ ಉಪನಯನ

ವೈದಿಕ (ಹಿಂದು) ಧರ್ಮದ ಮುಖ್ಯ ಸಂಸ್ಕಾರವಾದ ಉಪನಯನವು ಕೇವಲ ದ್ವಿಜವರ್ಣಗಳವರಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಉಂಟು. ಉಪನಯನದ ಮುಖ್ಯ ವಿಧಿ ಎಂದರೆ ಯಜ್ಯೋಪವೀತ ಧಾರಣೆ ಮತ್ತು ಗಾಯತ್ರಿ ಮಂತ್ರೋಪದೇಶ, ಮೂರು ವರ್ಣಗಳವರಿಗೆ ಮಾತ್ರ ಈ ದ್ವಿಜ ಸಂಸ್ಕಾರ ಉಂಟು. ಚತುರ್ವರ್ಣೀಯರಾದ ಶೂದ್ರರು ಮತ್ತು ಪಂಚಮ ವರ್ಣಿಯರಾದ ಅಸ್ಪೃಶ್ಯರಿಗೆ ದ್ವಿಜ ಸಂಸ್ಕಾರವಿಲ್ಲ. ಎಲ್ಲ ವರ್ಣಗಳ ಮಹಿಳೆಯರನ್ನು ಶೂದ್ರರು ಎಂದು ಪರಿಗಣಿಸಲಾಗುವುದು. ಅವರಿಗೆ ಸಹ ದ್ವಿಜ ಸಂಸ್ಕಾರವಿಲ್ಲ.

ಲಿಂಗಾಯತ ಧರ್ಮವು ಕೇವಲ ಭವಿ -ಭಕ್ತ ಮಾನವ -ಶರಣ ಎಂಬ ಎರಡೇ ಎರಡು ವರ್ಗಗಳನ್ನು ಮಾಡುತ್ತದೆ. ಭವಿಯು ಸಂಸ್ಕಾರದಿಂದ ಭಕ್ತನಾಗುವನು. ಮರೆವಿನ ಮಾನವನು ಅರಿವು -ಅನುಭಾವಗಳಿಂದ ಶರಣನಾಗುವನು. ಹುಟ್ಟುತ್ತ ಎಲ್ಲರೂ ಮಾನವರಾಗಿ ಹುಟ್ಟುವರು, ಸಂಸ್ಕಾರ
ಅರಿವು-ಅನುಭಾವಗಳಿಂದ ಶರಣರಾಗುವರು.

ಉಂಬ ಬಟ್ಟಲು ಬೇರೆ ಕಂಚಲ್ಲ;
ಕಾಂಬ ದರ್ಪಣ ಬೇರೆ ಕಂಚಲ್ಲ
ಭಾಂಡ ಒಂದೇ ಭಾಜನ ಬೇರೆ ;
ಬೆಳಗೇ ಕನ್ನಡಿ ಎನಿಸಿಹುದಯ್ಯ
ಅರಿದೊಡೆ ಶರಣ ಮರದೂಡ ಮಾನವ
ಮರೆಯದ ಪೂಜಿಸು ಕೂಡಲಸಂಗಮದೇವನ


ವೈದಿಕ ಹಿಂದು ಧರ್ಮದಲ್ಲಿ ಹಿಂದುಯೇತರರನ್ನು ಒಳಗೆ ಬರಮಾಡಿಕೊಳ್ಳಲು ದೀಕ್ಷಾ ಸಂಸ್ಕಾರ ಎಂಬ ಬಾಗಿಲೇ ಇಲ್ಲ. ಹೀಗಾಗಿ ಮತಾಂತರಗೊಂಡು ಅನೇಕ ಜನರು ಹೊರಗೆ ಹೋಗುತ್ತಾರೆ. ಸ್ವಯಂ ಪ್ರೇರಣೆಯಿಂದ ಹಿಂದು ಧರ್ಮದೊಳಕ್ಕೆ ಬರುತ್ತೇವೆ ಎನ್ನುವ ಹಿಂದುಯೇತರರು ಒಳಗೆ ಬರಲು ಅವಕಾಶವೇ ಇಲ್ಲ. ಹೊರಗೆ ಹೋದ ಮತಾಂತರಿಗಳು ಸಹ ಪುನಃ ಮಾತೃಧರ್ಮಕ್ಕೆ ಬರುತ್ತೇವೆ ಎಂದರೆ ಅದಕ್ಕೂ ಅವಕಾಶವಿಲ್ಲ.

ಲಿಂಗಾಯತ ಧರ್ಮದ ಸಂಸ್ಕಾರ ಇಷ್ಟಲಿಂಗ ದೀಕ್ಷೆ, ಇದು ಎಲ್ಲರಿಗೂ ಲಭ್ಯ. ಗುರುಗಳು ಇಷ್ಟಲಿಂಗವನ್ನು ನೀಡಿ ಮಂತ್ರೋಪದೇಶ ಮಾಡಿ, ಧರ್ಮದೊಳಕ್ಕೆ ಸ್ವೀಕರಿಸುವರು. ಜಾತಿ ಮತ ಪಂಥ ಧರ್ಮ ಲಿಂಗ ಭೇದವಿಲ್ಲದೆ ಎಲ್ಲ ಮಾನವರಿಗೂ ಇದು ಲಭ್ಯವಿದೆ. ದೀಕ್ಷೆಯ ನಂತರ ಎಲ್ಲರೂ ಸಮಾನರು ಎಂಬ ಭಾವವಿದೆ.

6. ಸ್ತ್ರೀಯರಿಗೆ ಉಪನಯನವಿಲ್ಲ

ಎಲ್ಲ ವರ್ಣಗಳ ಸ್ತ್ರೀಯರನ್ನು ಶೂದ್ರರೆಂದೇ ಪರಿಗಣಿಸಲಾಗಿದೆ. ಶೂದ್ರ ಪುರುಷರಿಗೆ ಉಪನಯನವನ್ನು ನಿರಾಕರಿಸಿದಂತೆ ಸ್ತ್ರೀಯರಿಗೆ ಶೂದ್ರರೆಂದು ಕರೆದು ಉಪನಯನ ನಿರಾಕರಿಸಲಾಗಿದೆ. ಶ್ರೀ ದಯಾನಂದ ಸರಸ್ವತಿಯವರು ಸುಧಾರಣೆ ತರಲು ಬಯಸಿದರು, ವೇದಗಳ ಕಾಲದಲ್ಲಿ ಮಹಿಳೆಯರಿಗೆ ಉಪನಯನದ ಮೂಲಕ ಯಜ್ಯೋಪವೀತವನ್ನು ನೀಡಲಾಗುತ್ತಿತ್ತು ಎಂದು ಹೇಳಿ ಅವರು ಮಹಿಳೆಯರಿಗೆ ಮತ್ತು ಶೂದ್ರ ವರ್ಣಿಯ ಪುರುಷರಿಗೆ ಸಹ ಉಪನಯನದ ಅವಕಾಶವನ್ನು ಕಲ್ಪಿಸಿದರಾದರೂ ಸಂಪ್ರದಾಯವಾದಿಗಳನ್ನು ಅವರು ಎದುರು ಹಾಕಿಕೊಳ್ಳಬೇಕಾಯಿತು. ಮತ್ತು ಈ ಚಳುವಳಿ ಬಲಗೊಂಡು ಬೆಳೆಯಲೇ ಇಲ್ಲ.

ಮಹಿಳೆಯು ಮಾಸಿಕ ರಜೋಕ್ರಿಯೆಗೆ ಒಳಗಾಗುವಳು ಎಂಬ ಕಾರಣದಿಂದ ಸ್ತ್ರೀಗೆ ಉಪನಯನ ಮಾಡಲಾಗುತ್ತಿಲ್ಲ; ಆಕೆಯನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿ ಕಾಣಲಾಗುತ್ತಿದೆ. ಬ್ರಹ್ಮಸೂತ್ರಕ್ಕೆ ಭಾಷ್ಯಗಳನ್ನು ಬರೆದಿರುವ ಆಚಾರ್ಯರುಗಳಾದ ಶಂಕರ, ರಾಮಾನುಜ ಮತ್ತು ಮಧ್ವರು ಶೂದ್ರರಿಗೆ ಮೋಕ್ಷವಿಲ್ಲ ಎಂಬುದನ್ನು ಪ್ರತಿಪಾದಿಸಿದರು.

ಶೂದ್ರರಿಗೂ ಸ್ತ್ರೀಯರಿಗೂ ಮೋಕ್ಷವಿಲ್ಲ
ಏಕೆಂದರೆ, ಅವರಿಗೆ ಉಪನಯನವಿಲ್ಲ
ಯಜ್ಞಯಾಗಾದಿಗಳನ್ನು ಮಾಡುವ ಅಧಿಕಾರವಿಲ್ಲ
ಏಕೆಂದರೆ ಅವರಿಗೆ ಉಪನಯನವಿಲ್ಲ ( ಬಾದರಾಯಣನ ಬ್ರಹ್ಮಸೂತ್ರಗಳು. ಸೂತ್ರಗಳು 34-38)

ಇದರಲ್ಲಿ ಸೂತ್ರ 38, ಮನುಸ್ಮೃತಿ ಮುಂತಾದ ಕೃತಿಗಳಲ್ಲಿ ಶೂದ್ರರಿಗೆ ವೇದ ಶ್ರವಣ - ಅಧ್ಯಯನ - ಅರ್ಥಗಳನ್ನು ನಿಷೇಧಿಸಿರುವುದರಿಂದ ಅವರಿಗೆ ಬ್ರಹ್ಮವಿದ್ಯೆಯಿಲ್ಲ.

7. ಹಿಂದು ಧರ್ಮ -ಬಹುದೇವತೋಪಾಸನೆ

ಇಡೀ ಜಗತ್ತಿನಲ್ಲಿ ಬಹುದೇವತೋಪಾಸನೆ ಆಚರಿಸುವ ಧರ್ಮ ಹಿಂದು ಮಾತ್ರ. ಪುರಾತನ ಗ್ರೀಕ್ ದೇಶ ಅರಬ್ ದೇಶ ಮುಂತಾದಲ್ಲಿ ಬುಡಕಟ್ಟು ದೇವರುಗಳ ಉಪಾಸನೆ ಬಹು ಹಿಂದಿನ ಕಾಲದಲ್ಲಿ ಇದ್ದಿತಾದರೂ ಕ್ರೈಸ್ತ ಇಸ್ಲಾಂ ಧರ್ಮಗಳು ಹಬ್ಬಿದ ನಂತರ ವಿವಿಧ ಆಕಾರಗಳ ಅನೇಕ ದೇವತೆಗಳ ಪೂಜೆ ನಿಂತು ಒಬ್ಬ ದೇವನ ಪರಿಕಲ್ಪನೆ ಬಂದಿತು. ನಂತರ ಕೇವಲ ಒಬ್ಬನೇ ದೇವನ ಆರಾಧನೆ ಮಾತ್ರ ಉಳಿದು ಬಹುದೇವತೆಗಳ ಉಪಾಸನೆ ನಿಂತು ಹೋಯಿತು. ಆದರೆ ಹಿಂದು ಧರ್ಮದಲ್ಲಿ ಏಕದೇವನ ಪರಿಕಲ್ಪನೆ ಉಪನಿಷತ್ತುಗಳ ಕಾಲದಲ್ಲೇ ರೂಪುಗೊಂಡರೂ ಸಹ ಅದು ಬೆಳೆದು, ದೃಢಗೊಳ್ಳದೆ ಕೇವಲ ಬಹು ದೇವತೋಪಾಸನೆಯೇ ಬೆಳೆದು ಬಲಗೊಂಡು, ಕಳೆ ಜಾಸ್ತಿಯಾದಾಗ ಬೆಳೆಯು ನಾಶವಾಗುವಂತೆ ಮೂಢ ನಂಬಿಕೆಗಳ ಸಂತೆಯ ಮಧ್ಯೆ ನಿಜವಾದ ದೇವರ ಪರಿಕಲ್ಪನೆಯೇ ಜನರ ಮನದಿಂದ ಮರೆಯಾಯಿತು.

ಹಿಂದುಗಳಲ್ಲಿರುವ ಉಪಾಸ್ಯವಸ್ತುಗಳನ್ನು 9 ಪ್ರಕಾರವಾಗಿ ವಿಂಗಡಿಸಬಹುದು.

1. ಭೂತ ಪ್ರೇತಗಳ ಪೂಜೆ
2. ಪೌರಾಣಿಕ ದೇವತೆಗಳ ಪೂಜೆ
3. ಪಂಚಭೂತಗಳ ಪೂಜೆ
4. ಗಿಡಮರಗಳ ಪೂಜೆ
5. ಪ್ರಾಣಿಗಳ ಪೂಜೆ
6. ಪ್ರೇತಾತ್ಮಗಳ ಪೂಜೆ
7. ಗುರು (ಸಂತರ) ಪೂಜೆ
8. ವಿಭೂತಿ ಪೂಜೆ
9. ದೇವ ಪೂಜೆ

ಅತ್ಯಂತ ಕೆಳಮಟ್ಟದ, ಭಯಾಧಾರಿತವಾದ ಭೂತ ಪ್ರೇತಗಳ ಪೂಜೆಯನ್ನು ಮಾಡಲಾಗುವುದು; ಅವುಗಳಿಗೆ ಕೋಳಿ, ಕುರಿ ಮುಂತಾದುವನ್ನು ಬಲಿ ಕೊಡುವ ಕ್ಷುದ್ರ ಆಚರಣೆಗಳು ಹಿಂದು ಧರ್ಮದಲ್ಲಿವೆ.

ಕಾಲ್ಪನಿಕ ಪೌರಾಣಿಕ ದೇವತೆಗಳ ಸಂತೆಯಂತೂ ಲೆಕ್ಕಕ್ಕೇ ಸಿಗದು. ನವ ಗ್ರಹಗಳು, ಲಕ್ಷ್ಮಿ ಸರಸ್ವತಿಯಂತಹ ದೇವತೆಗಳು ಶುದ್ದ ಕಾಲ್ಪನಿಕ. ಇನ್ನು ಕೆಲವು ದೇವತೆಗಳನ್ನು ಒಂದು ಕಾಲದಲ್ಲಿ ಅವರು ಐತಿಹಾಸಿಕವಾಗಿ ಇದ್ದಿರಬಹುದು ಎಂದು ನಂಬಿದರೂ ಅವುಗಳ ಚರಿತ್ರೆ ಅತ್ಯಂತ ಕೀಳುಮಟ್ಟದ್ದು, ಉದಾ: ಇಂದ್ರ, ತುಳಸಿ ಪೂಜೆಯ ಹಿಂದಿರುವ ವಿಷ್ಣುವಿನ ಚರಿತ್ರೆ.
ಹಿಂದು ಧರ್ಮದಲ್ಲಿ ಎರಡು ಬಗೆಯ ಆಚರಣೆಗಳುಂಟು.

1. ವೇದ ಆಗಮ ಮುಂತಾದ ಶಾಸ್ತ್ರಿಯ ಕೃತಿಗಳಿಂದ ಬಳುವಳಿಯಾಗಿ ಪಡೆದ ಶಾಸ್ತ್ರೀಯ (Classical) ಆಚರಣೆಗಳು.

2. ಬುಡಕಟ್ಟು (Thibes) ಮತ್ತು ಬಣ(Clans) ಗಳಿಂದ ಪಡೆದ ಕ್ಷುದ್ರ (Petty) ಆಚರಣೆಗಳು,

ಉದಾಹರಣೆಗೆ: ಹೋಮ-ಹವನ ಶಾಸ್ತ್ರೀಯ ಆಚರಣೆಯಾದರೆ ಗಿಡ ಮರ ಬಳ್ಳಿಗಳ ಪೂಜೆ ಬಣಾಚರಣೆ. ಈ ಎರಡನ್ನೂ ಲಿಂಗಾಯತ ಧರ್ಮವು ನಿಷೇಧಿಸಿದೆ. ಅಗ್ನಿ ಪೂಜೆ, ಅಗ್ನಿ ಸಾಕ್ಷಿ ಇವೆಲ್ಲವನ್ನು ದೂರವಿಡಲಾಗಿದೆ. ಅದೇ ರೀತಿ ತುಳಸಿ -ಬಿಲ್ವ, ಆಲದ ಮರ-ಅರಳಿ ಗಿಡ, ಎಕ್ಕೆ -ಬನ್ನಿಗಿಡ ಮುಂತಾದ ಗಿಡಮರ ಪೂಜೆಗಳನ್ನು ನಿರಾಕರಿಸಲಾಗಿದೆ. ಹಿಂದುಗಳಲ್ಲಿ ಬಹು ಶ್ರದ್ಧೆಯಿಂದ ಮಾಡುವ ಗೋವು, ನಾಗ, ಇಲಿ, ಕೋತಿ, ಆನೆ ಮುಂತಾದ ಪ್ರಾಣಿಗಳ ಪೂಜೆಯನ್ನು ಲಿಂಗಾಯತ ಧರ್ಮದಲ್ಲಿ ನಿಷೇಧಿಸಲಾಗಿದೆ.

ಹಿಂದುಗಳಲ್ಲಿ ಬಹಳ ಪ್ರಚಲಿತವಿರುವುದು ಪ್ರೇತಾತ್ಮ ಪೂಜೆ ಅರ್ಥಾತ್ ಪಿತೃ ಪೂಜೆ. ಹಿಂದೆ ಸತ್ತು ಹೋದವರಿಗೆಲ್ಲ ಸ್ವರ್ಗ ಸಿಗಲಿ ಎಂದು ಪುಣ್ಯತಿಥಿ, ಪಿಂಡದಾನ ಮಾಡುವ ಪರಿಪಾಠ ಉಂಟು. ಪಿತೃ ಪಕ್ಷ ಎಂಬ ವಿಶೇಷ ಸಮಯವನ್ನು ಅದಕ್ಕಾಗಿ ನಿಗದಿ ಮಾಡಿದ್ದು ಆಗ ವಿಶೇಷ ಶ್ರಾದ್ಧಾದಿ ವಿಧಿಗಳನ್ನು ಮಾಡಲಾಗುವುದು. ಗ್ರಾಮೀಣ ಭಾಷೆಯಲ್ಲಿ ಹಿರೇರ ಹಬ್ಬ ಎಂದು ಕರೆದು ಆಚರಿಸುವರು. ಇವೆಲ್ಲವನ್ನೂ ಲಿಂಗಾಯತ ಧರ್ಮವು ನಿಷೇಧಿಸಿದೆ.

ವೈಚಾರಿಕ ಧರ್ಮವಾದ ಲಿಂಗಾಯತ ಧರ್ಮವು ಕೇವಲ ಜಂಗಮ (ಸಂತರ) ಪೂಜೆಗೆ ಮಾನ್ಯತೆ ನೀಡಿ ದೇವನ ಪ್ರತಿನಿಧಿ ಜಂಗಮ ಎಂದು ಗೌರವಿಸುತ್ತದೆ. ಗುರು ಬಸವಣ್ಣನವರು, ಅಲ್ಲಮ ಪ್ರಭುದೇವರು, ಸಿದ್ದರಾಮೇಶ್ವರರು ಮುಂತಾದ ಮಹಾನುಭಾವರನ್ನು ವಿಭೂತಿ ಪುರುಷರೆಂದು ಗೌರವಿಸಿ, ಪೂಜಿಸುತ್ತದೆ. ದೇವರು ನಿರಾಕಾರನೆಂದು ಸಾರಿ, ಸೃಷ್ಟಿಕರ್ತ ಲಿಂಗದೇವನ ಕುರುಹಾಗಿ ಇಷ್ಟಲಿಂಗವನ್ನು ಧರ್ಮಗುರು ಬಸವಣ್ಣನವರು ನೀಡಿದ್ದು ಇದರ ಹೊರತಾಗಿ ಬೇರೆ ಏನನ್ನು ಪೂಜಿಸಲು ಅನುಮತಿ ನೀಡುವುದಿಲ್ಲ. ಹಿಂದು ದೇವತೆಗಳಾದ ಗಣಪತಿ, ರಾಮ, ಕೃಷ್ಣ, ಹನುಮಂತ, ವಿಷ್ಣು, ದೇವಿ, ಲಕ್ಷ್ಮಿ, ಸರಸ್ವತಿ ಈ ಯಾವ ದೇವತೆಯನ್ನು ಪೂಜಿಸುವುದಿಲ್ಲ. ಹಿಂದು ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನನ್ನು ಸಹ ಆರಾಧಿಸುವುದಿಲ್ಲ. ಇದನ್ನು ಸ್ಪಷ್ಟವಾಗಿ ಲಿಂಗಾಯತ ಧರ್ಮದ ಸಂವಿಧಾನವಾದ ವಚನ ಸಾಹಿತ್ಯದಲ್ಲಿ ಹೇಳಲಾಗಿದೆ.

8. ಹಿಂದು ಧರ್ಮವು ತೀರ್ಥ ಕ್ಷೇತ್ರಗಳಲ್ಲಿ ನಂಬಿಕೆ ಇಟ್ಟಿದೆ.

ಹಿಂದು ಧರ್ಮವು ಭೌತಿಕ ಕ್ಷೇತ್ರಗಳಲ್ಲಿ ಅಪಾರ ಶ್ರದ್ದೆ ಇಟ್ಟಿದೆ. ಕಾಶಿ, ರಾಮೇಶ್ವರ, ಅಯೋಧ್ಯೆ, ತಿರುಪತಿ, ಮಥುರಾ ಮುಂತಾದ ಕ್ಷೇತ್ರಗಳ ದರ್ಶನ ಅತ್ಯಂತ ಪಾವನ. ಇದು ಪಾಪ ನಿವಾರಣೆ ಮಾಡಿ ಪುಣ್ಯವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ.

ಭಾರತ ದೇಶದಲ್ಲಿ ಹರಿಯುವ ಗಂಗಾ, ಯಮುನಾ, ಕಾವೇರಿ, ತುಂಗಭದ್ರಾ ಇತ್ಯಾದಿ ನದಿಗಳಲ್ಲಿ, ತೀರ್ಥಕ್ಷೇತ್ರಗಳ ಕಲ್ಯಾಣಿ, ಕೊಳಗಳಲ್ಲಿ ಮುಳುಗುವುದರಿಂದ ಪಾಪ ಕ್ಷಯವಾಗಿ ಪುಣ್ಯವು ಪ್ರಾಪ್ತಿಯಾಗುತ್ತದೆಂದು ನಂಬಲಾಗುತ್ತದೆ. ಕೆಲವು ವಿಶಿಷ್ಟ ದಿನಗಳಂದು, ವಿಶೇಷ ಮೂಹೂರ್ತದಲ್ಲಿ ಅಂಥ ನದಿ, ಪುಷ್ಕರಣಿಗಳಲ್ಲಿ ಮುಳುಗಿ ಎದ್ದರೆ ಅಪಾರ ಪುಣ್ಯ ಪ್ರಾಪ್ತಿ ಎಂದು ನಂಬಲಾಗುತ್ತದೆ. ನದಿಯ ದಂಡೆಯ ಕೊಳಕು ನೀರನಲ್ಲೇ ಸಾವಿರಾರು ಜನರು ಮುಳುಗಿ ಏಳುವುದನ್ನು ಅದೇ ನೀರನ್ನು ತೀರ್ಥವೆಂದು ಕುಡಿಯುವುದನ್ನು ನಾವು ಕಾಣಬಹುದು.

ಲಿಂಗಾಯತ ಧರ್ಮವು ಯಾವುದೇ ಭೌತಿಕ ಸ್ಥಾನವನ್ನು ಸಂದರ್ಶಿಸಿದ ಮಾತ್ರಕ್ಕೆ ಪುಣ್ಯ ಪ್ರಾಪ್ತಿಯಾಗುವುದೆಂದು ನಂಬುವುದಿಲ್ಲ. ಯಾವುದೇ ಭೌತಿಕ ಸ್ಥಾನವಾಗಲೀ ನದಿ, ಪುಷ್ಕರಿಣಿಯಾಗಲಿ ಪವಿತ್ರವೆಂದು ಭಾವಿಸುವುದಿಲ್ಲ. ಭೌತಿಕ ಜಲದಲ್ಲಿ ಮಿಂದ ಮಾತ್ರಕ್ಕೆ ಪಾಪ ನಿವಾರಣೆಯಾಗಿ, ಪುಣ್ಯ ಪ್ರಾಪ್ತಿಯಗುವುದೆಂದು ಭಾವಿಸುವುದಿಲ್ಲ. ವ್ಯಕ್ತಿ ಮಾಡುವ ಕೆಟ್ಟ ಕೆಲಸಗಳಿಂದ ಕಲಂಕಿತನಾಗುವನು, ಪಶ್ಚಾತಾಪದಿಂದ ಮಾತ್ರ ಶುದ್ಧನಾಗುವನು. ಉತ್ತಮ ಕೆಲಸಗಳಿಂದ ಪುಣ್ಯವಂತನಾಗುವನು ಎಂದು ದೃಢವಾಗಿ ನಂಬುವುದು.

1. ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಬೋ, ತೊರೆಯಿಂ ಬೋ
ಪರನಾರಿಯರ ಸಂಗವ ತೊರೆಯಿಂ ಭೋ |
ಪರಧನದಾಮಿಷವ ತೊರೆಯಿಂ ಬೊ
ಇವ ತೊರೆಯದೆ ಹೋಗಿ ತೆರೆಯ ಮಿಂದಡೆ,
ಬರುದೊರೆ ಹೋಹುದು, ಕೂಡಲಸಂಗಮದೇವಾ

2. ಒಬ್ಬರ ಮನವ ನೋಯಿಸಿ,
ಒಬ್ಬರ ಮನೆಯ ಘಾತವ ಮಾಡಿ,
ಗಂಗೆಯಲ್ಲಿ ಮುಳಗಿದಡೇನಾಗುವುದಯ್ಯಾ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು?
ಕಳಂಕ ಬಿಡದಾಯಿತ್ತಯ್ಯಾ,
ಅದು ಕಾರಣ, ಮನವ ನೋಯಿಸದವನೆ,
ಒಬ್ಬರ ಘಾತವ ಮಾಡದವನೆ,
ಪರಮ ಪಾವನ ನೋಡಾ, ಕಪಿಲ ಸಿದ್ಧ ಮಲ್ಲಿಕಾರ್ಜುನಾ

3. ನಿತ್ಯ ನೀರ್ಮುಳುಗುವನು | ಹತ್ತಿದಡೆ ಸ್ವರ್ಗವನು |
ಎತ್ತಿ ಜನ್ಮವನು ಜಲದೊಳಿಪ್ಪಾ ಕಪ್ಪ |
ಹತ್ತದೇಕೆಂದ ? ಸರ್ವಜ್ಞ


ಶರಣರು, ಜ್ಞಾನಿಗಳು ಪಾದವಿಟ್ಟ, ವಾಸ್ತವ್ಯ ಮಾಡಿರುವ ಸ್ಥಾನಗಳೇ ನಿಜವಾದ ಜಂಗಮ ಕ್ಷೇತ್ರಗಳು ಎಂಬ ಪ್ರತಿಪಾದನೆ ಶರಣರದು. ಆದರೆ ಇದರರ್ಥ ಒಬ್ಬವ್ಯಕ್ತಿ ಕೇವಲ ಆ ಸ್ಥಳವನ್ನು ಸಂದರ್ಶಿಸಿದ ಮಾತ್ರಕ್ಕೆ ಪುಣ್ಯವಂತನಾಗುವನು ಎಂಬುದನ್ನು ಲಿಂಗಾಯತ ಧರ್ಮ ಒಪ್ಪದು ವ್ಯಕ್ತಿಯು ಸ್ವತಃ ಸಾಧನೆ ಮಾಡಿ, ಅಂತರಂಗ ಬಹಿರಂಗ ಶುದ್ದಿಯನ್ನು ಸಾಧಿಸಬೇಕು.

ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸ ಪುರವಯ್ಯಾ
ಅಯ್ಯಾ ನಿಮ್ಮ ಶರಣರು ನಿಂದುದ ನಿಜ ನಿವಾಸವಯ್ಯ
ಚನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಸಂಗನ ಬಸವಣ್ಣನ ಶ್ರೀ ಪಾದಕ್ಕೆ ನಮೋ ನಮೋ ಎನುತಿರ್ದೆನು.

ಕಲ್ಯಾಣವೆಂಬುದು ಇನ್ನಾರಿಗೆ ಹೋಗಬಾರದು. ಅಸಾಧ್ಯವಯ್ಯಾ
ಆಸೆ ಆಮಿಷ ಅಳಿದವಂಗಿಲ್ಲದೆ ಕಲ್ಯಾಣದತ್ತ ಅಡಿಯಿಡಬಾರದು
ಒಳ ಹೊರಗು ಶುದ್ಧನಾದವಂಗಲ್ಲದೆ, ಕಲ್ಯಾಣವೆ ಹೋಗಬಾರದು,
ನಾನೆಂಬುದ ಹರಿದವಂಗಲ್ಲದೆ, ಕಲ್ಯಾಣವೆ ಹೋಗಬಾರದು
ಒಳಗೆ ತಿಳಿದು ಹೊರಿಗೆ ಮೆರೆದು ಚನ್ನಮಲ್ಲಿಕಾರ್ಜುನಗೊಲಿದು
ಉಭಯ ಲಜ್ಜೆಯ ಅಳಿದನಾಗಿ ಕಲ್ಯಾಣವೆ ಕಂಡು ನೋ ನಮೋ ಎನುತಿರ್ದೆನು

9. ಜ್ಯೋತಿಷ್ಯ, ಮುಹೂರ್ತ, ಜಾತಕದಲ್ಲಿ ನಂಬಿಕೆ.

ಹಿಂದು ಧರ್ಮವು ಜ್ಯೋತಿಷ್ಯವನ್ನು ಬಹಳಷ್ಟು ನಂಬುತ್ತದೆ. ಮಗುವು ಹುಟ್ಟಿದಾಗ ಜಾತಕವನ್ನು ಬರೆಸುವುದು, ಮದುವೆ ಕೂಡಿಸುವಲ್ಲಿ ಜಾತಕ ಹೊಂದಿಸುವುದು, ಶುಭಕಾರ್ಯಗಳಿಗೆ ಮುಹೂರ್ತವನ್ನು ನೋಡುವುದು, ಸಮಯದಲ್ಲಿ ಸಹ ಶ್ರೇಷ್ಠ, ಕನಿಷ್ಠ ವಿಪತ್ಕಾರಿ ಎಂದು ಲೆಕ್ಕ ಹಾಕುವುದು ಕಟ್ಟಡ ಕಟ್ಟಿಸುವಾಗ ವಾಸ್ತುವನ್ನು ನೋಡುವುದು, ಗ್ರಹಗಳ ಶಾಂತಿಗಾಗಿ ಹೋಮ ಅಥವಾ ಪೂಜೆಗಳನ್ನು ಮಾಡುವುದು ಹಿಂದೂ ಧರ್ಮದಲ್ಲಿ ಸ್ವಾಭಾವಿಕ. ಆದರೆ ಲಿಂಗಾಯತ ಧರ್ಮ ಇವೆಲ್ಲವನ್ನು ನಿರಾಕರಿಸುತ್ತದೆ.

ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ
ರಾಶಿ ಕೂಟ ಗಣ ಸಂಬಂಧವುಂಟೆದು ಹೇಳಿರಯ್ಯಾ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯಾ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ!


ಎಲ್ಲರ ಮನಸ್ಸುಗಳು ಒಂದಾವರೆ ಅದು ಉತ್ತಮವಾದ ಹೊಂದಾಣಿಕೆ (ಲಗ್ನ) ಎಂದುಕೊಳ್ಳಬೇಕು.

ಲಗ್ನವಲ್ಲಿಯದೂ ವಿಘ್ನವೆಲ್ಲಿಯದೂ ಸಂಗಯ್ಯಾ ?
ದೋಷವಲ್ಲಿಯ ದುರಿತವಲ್ಲಿಯದೂ, ಸಂಗಯ್ಯಾ
ನಿಮ್ಮ ಮಾಣದೆ ನೆನವಂಗೆ ಭವಕರ್ಮವೆಲ್ಲಿಯದೂ
ಕೂಡಲಸಂಗಮದೇವಯ್ಯಾ?


ಸೃಷ್ಟಿಕರ್ತನು, ಸರ್ವಶಕನು ಆದ ದೇವರನ್ನು ನಂಬಿದ ಮೇಲಿನ್ನು ಬೇರೆ ಭಯವೇಕೆ? ಜಗತ್ತೆಲ್ಲ ದೇವನ ಅಧೀನದಲ್ಲಿ ನಡೆಯುವುದಷ್ಟೇ, ಮಾನವ ಕಲ್ಪಿತವಾದ ಜ್ಯೋತಿಷ್ಯ, ವಾಸ್ತು ಇತ್ಯಾದಿ ಭ್ರಮೆಯನ್ನು ಉಂಟು ಮಾಡಿ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಕಾಲದಲ್ಲಿ ಭೇದ ಮಾಡಿ ರಾಹುಕಾಲ, ಗುಳಿಕ ಕಾಲ, ಯಮಗಂಡಕ ಎಂದೆಲ್ಲ ಭೇದ ಮಾಡುವುದನ್ನು ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ಖಂಡಿಸುತ್ತಾರೆ. ಕಾಲದಲ್ಲಿ ಯಾವುದೂ ಒಳ್ಳೆಯದು, ಕೆಟ್ಟದು ಎಂದಿಲ್ಲ. ವ್ಯಕ್ತಿ ಮಾಡುವ ಒಳ್ಳೆಯ, ಕೆಟ್ಟ ಕೆಲಸಗಳಿಂದ ಕಾಲವು ಒಳ್ಳೆಯದು ಕೆಟ್ಟದು ಎನ್ನಿಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾರೆ. ಹೀಗೆ ಹಿಂದು ಧರ್ಮವು ನಂಬುವ ಜ್ಯೋತಿಷ್ಯ, ವಾಸ್ತುಗಳನ್ನು ಲಿಂಗಾಯತ ಧರ್ಮವು ನಂಬುವುದಿಲ್ಲ.

10. ಹಿಂದು ಧರ್ಮದ ಮಂದಿರ | ಲಿಂಗಾಯತ ಧರ್ಮದ ಮಂಟಪ

ಹಿಂದು ಧರ್ಮದ ಶ್ರದ್ಧಾ ಕೇಂದ್ರ ದೇವಾಲಯಗಳು ಅರ್ಥಾತ್ ಮಂದಿರಗಳು, ಕ್ರೈಸ್ತರಿಗೆ ಚರ್ಚ್, ಮುಸಲೀಮರಿಗೆ ಮಸೀದಿ, ಸಿಬ್ಬರಿಗೆ ಗುರುದ್ವಾರ, ಬೌದ್ಧರಿಗೆ ವಿಹಾರ, ಜೈನರಿಗೆ ಬಸದಿಗಳು ಇರುವಂತೆ ಹಿಂದುಗಳಿಗೆ ದೇವಾಲಯಗಳು ಅರ್ಥಾತ್ ಮಂದಿರಗಳು ಶ್ರದ್ಧಾಕೇಂದ್ರಗಳು, ಗುರು ಬಸವಣ್ಣನವರು ಅನುಭವ ಮಂಟಪ ಎಂಬ ಸಂಸ್ಥೆಯನ್ನು ಮಾದರಿಯಾಗಿ ಮಾಡಿ ತೋರಿಸಿದಂತೆ ಬಸವ ಮಂಟಪಗಳೇ ಶ್ರದ್ಧಾ ಕೇಂದ್ರಗಳು. ಬಸವಾದಿ ಪ್ರಮಥರ ಪರಂಪರೆಯ ಶರಣರಾದ ಸೊಲ್ಲಾಪುರದ ಸಿದ್ಧರಾಮೇಶ್ವರ, ಉಳವಿ ಚನ್ನಬಸವೇಶ್ವರ, ಮಲೆಯ ಮಹದೇಶ್ವರ, ಎಡೆಯೂರು ಸಿದ್ದಲಿಂಗೇಶ್ವರ, ಜೇವರ್ಗಿಯ ಷಣ್ಮುಖ ಶಿವಯೋಗಿ, ಕಪಿಲ ಧಾರಾದ ಮನ್ಮಥ ಸ್ವಾಮಿ ಮುಂತಾದವರ ಸಮಾಧಿಸ್ಥಾನಗಳು, ಸಂಚರಿಸಿದ ಸ್ಥಳಗಳು ಸಹ ಲಿಂಗಾಯತರ ಶ್ರದ್ಧಾಕೇಂದ್ರಗಳಾಗಿವೆ. ಹಿಂದು ಮಂದಿರಗಳಲ್ಲಿ ಪೂಜೆಯ ಹಕ್ಕು ಬ್ರಾಹ್ಮಣರದಾಗಿದ್ದರೆ ಲಿಂಗಾಯತರ ಬಸವ ಮಂಟಪಗಳಲ್ಲಿ ಗದ್ದುಗೆಗಳಲ್ಲಿ ಶರಣರಲ್ಲಿ ಲಿಂಗಾಯತ ದೀಕ್ಷೆ ಪಡೆದ ಯಾವುದೇ ಜನಾಂಗದವರು ಪೂಜೆಯ ಹಕ್ಕನ್ನು ಹೊಂದಿರುತ್ತಾರೆ ಮತ್ತು ಎಲ್ಲರಿಗೂ ಪ್ರವೇಶ ಲಭ್ಯವಿರುತ್ತದೆ. ಬಸವ ಮಂಟಪಗಳು ಕೇವಲ ಭಕ್ತಿಯ ತಾಣಗಳಾಗಿರದೆ ಜ್ಞಾನ ದಾಸೋಹದ ಕೇಂದ್ರಗಳಾಗಿ ಇರುತ್ತವೆ.

11, ಹಿಂದುಗಳಲ್ಲಿ ಮಾಂಸಾಹಾರ -ಸಸ್ಯಾಹಾರ ಎರಡೂ ಉಂಟು.

ಹಿಂದುಗಳಲ್ಲಿ ಕೆಲವು ಸಮುದಾಯಗಳವರು ಸಸ್ಯಾಹಾರಿಗಳಾಗಿದ್ದರೆ ಮತ್ತೆ ಕೆಲವರು ಮಾಂಸಾಹಾರಿಗಳಾಗಿರುತ್ತಾರೆ. ಬ್ರಾಹ್ಮಣರಲ್ಲಿ ಕೆಲವು ಪಂಗಡಗಳವರು, ವೈಶ್ಯ ಸಮುದಾಯದವರು, ಸ್ವಯಂ ಇಚ್ಛೆಯಿಂದ ಸಸ್ಯಾಹಾರಿ ಜೀವನ ವಿಧಾನ ಸ್ವೀಕರಿಸಿದವರು ಮಾತ್ರ ಸಸ್ಯಾಹಾರಿಗಳು, ಬಾಕಿ ಹೆಚ್ಚಿನವರು ಮಾಂಸಾಹಾರಿಗಳು, ಲಿಂಗಾಯತ ಧರ್ಮವು ಕಡ್ಡಾಯವಾಗಿ ಸಸ್ಯಾಹಾರಿ ಜೀವನ ವಿಧಾನ ಬೋಧಿಸಿದೆ.

12. ಹೋಮ -ಹವನ, ಯಜ್ಞ ಯಾಗ ಹಿಂದು ಧರ್ಮದಲ್ಲಿ ಉಂಟು.

ಹಿಂದು ಧರ್ಮದ ಅತ್ಯಂತ ಮುಖ್ಯವಿಧಿ ಹೋಮ -ಹವನ, ಹೋಮ ಕುಂಡವನ್ನು ಮಾಡಿ ಅಗ್ನಿಯ ಮೂಲಕ ಹವಿಸ್ಸನ್ನು ಅರ್ಪಿಸುತ್ತೇನೆ ಎಂಬ ಅಗ್ನಿ ನಂಬಿಕೆಯಿಂದ ಹಲವಾರು ವಸ್ತುಗಳನ್ನು ಹೋಮ (ಯಜ್ಞ) ಕುಂಡದ ಅಗ್ನಿಯಲ್ಲಿ ಹಾಕಲಾಗುವುದು. ಅಜ ಯಾಗದಲ್ಲಿ ಹೋತವನ್ನು ಅಶ್ವ ಮೇಧಯಾಗದಲ್ಲಿ ಅಶ್ವವನ್ನು, ಗಜ ಯಾಗದಲ್ಲಿ ಆನೆಯನ್ನು - ಹೀಗೆಲ್ಲ ಶಾಸ್ರೋಕ್ತವಾಗಿ ಬಲಿ ಕೊಡಲಾಗುವುದು.

ಯೋಗಿರಾಜ ಶಿವನು ಯಜ್ಞವಿರೋಧಿ, ದಕ್ಷಬ್ರಹ್ಮನ ಯಜ್ಞವನ್ನು ವೀರಭದ್ರ ನಾಶಪಡಿಸಿದ್ದು ಇದಕ್ಕೆ ಸಾಕ್ಷಿ ರಾಮಾಯಣದಲ್ಲಿ ರಾಕ್ಷಸರು ಹೋಮ, ಯಜ್ಞಕುಂಡದಲ್ಲಿ ನೀರನ್ನು ಸುರಿದು ಆರಿಸುತ್ತಾರೆ ಎಂದು ಯಜ್ಞರಕ್ಷಣೆಗೆ ರಾಮ ಲಕ್ಷ್ಮಣರನ್ನು ಕರೆದೊಯ್ಯುವ ಸಂಗತಿ ಪ್ರಸ್ತಾಪವಾಗುತ್ತದೆ. ಅವರು ರಾಕ್ಷಸರಲ್ಲ, ಶಿವ ಭಕ್ತರು. ಅವರು ಯಜ್ಞವಿರೋಧಿಗಳು ಅದಕ್ಕಾಗಿ ಭಂಗಗೊಳಿಸುತ್ತಿದ್ದರು. ಅಮೂಲ್ಯ ವಸ್ತುಗಳನ್ನು ಬೆಂಕಿಯಲ್ಲಿ ಹಾಕಿ ಸುಡುವ ಈ ಧಾರ್ಮಿಕ ವಿಧಿಯನ್ನು ಕ್ರಾಂತಿಪುರುಷ ಬಸವಣ್ಣನವರು ವಿರೋಧಿಸಿದ್ದಾರೆ.

1. ಕಿಚ್ಚು ದೈವವೆಂದು ಹವಿಯನ್ನಿಕ್ಕುವ
ಹಾರುವನ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರು, ಬೀದಿಯ ಧೂಳವ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ!
ಕೂಡಲಸಂಗಮದೇವ
ವಂದನೆಯ ಮರೆದು ನಿಂದಿಸುತ್ತಿರ್ದರಯ್ಯಾ!.


ಅಗ್ನಿಯು ಪಂಚಭೂತಗಳಲ್ಲಿ ಒಂದು. ಇದನ್ನು ದೇವರು ಎಂದು ಆರಾಧಿಸುವ ಸಲುವಾಗಿ ತುಪ್ಪವನ್ನು ಅದರಲ್ಲಿ ಹಾಕಿ ಮಂತ್ರ ಹೇಳುವ ಬ್ರಾಹ್ಮಣ, ಆತನ ಮನೆಯನ್ನು ಬೆಂಕಿ ಸುಡುತ್ತಿದ್ದರೆ ಆಗೇಕೆ ಮಂತ್ರವನ್ನು ಹೇಳುವುದಿಲ್ಲ; ಹಾಳು ಬೆಂಕಿ ಎಂದು ಬೈಯುವುದಲ್ಲದೆ ಬೆಂಕಿ ಆರಿಸಲು ಬಚ್ಚಲ ನೀರು, ಬೀದಿಯ ಧೂಳನ್ನು ಎಸೆಯುವರು. ಮನೆಯನ್ನು ಅಗ್ನಿದೇವರು ನೈವೇದ್ಯವಾಗಿ ತೆಗೆದುಕೊಂಡಿದ್ದಾನೆ ಎಂದು ಏಕೆ ಭಾವಿಸುವುದಿಲ್ಲ ಎಂದು ಪ್ರಶ್ನಿಸುತ್ತಾರೆ.

2. ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು
ಎಲೆ ಹೋತೇ ಅಳು ಕಂಡ್ಯಾ !
ವೇದವನೋದಿದವರ ಮುಂದೆ ಅಳು ಕಂಡ್ಯಾ !
ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡ್ಯಾ !
ನೀನತ್ತುದಕ್ಕೆ ತಕ್ಕುದ ಮಾಡುವ ನಮ್ಮ ಕೂಡಲಸಂಗಮದೇವ.


ಅಜ ಯಜ್ಞದಲ್ಲಿ ಹೋತವನ್ನು ಬಲಿಕೊಡುವ ಮೂರ್ಖತನವನ್ನು ತೀಕ್ಷವಾಗಿ ಖಂಡಿಸಿದ್ದಾರೆ.

3. ಇಟ್ಟೆಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತೆಂದಡೆ,
ಜಗಕ್ಕೆ ಇರುಳಪ್ಪುದ ಮರುಳೆ ?
ಹೋಮದ ನೆವದಲ್ಲಿ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು; ಕೂಡಲಸಂಗಮದೇವಾ ?


ದೇವನನ್ನು ಪ್ರಾರ್ಥಿಸಿ, ಪೂಜಿಸಿ, ಧ್ಯಾನಿಸಿ ಆರಾಧಿಸಬೇಕೇ ವಿನಾ ಅಗ್ನಿಗೆ ಹವಿಸನ್ನು ಅರ್ಪಿಸುವ ಮೂಲಕ ಅಲ್ಲಎಂದು ಗುರು ಬಸವಣ್ಣನವರು ಖಡಾ ಖಂಡಿತವಾಗಿ ಹೇಳುವರು. ವೇದಗಳ ಜ್ಞಾನ ಕಾಂಡ ಕುರಿತು ಹೆಚ್ಚು ಟೀಕಿಸಿಲ್ಲವಾದರೂ ಕರ್ಮಕಾಂಡ ಕುರಿತು ತೀಕ್ಷವಾಗಿ ಟೀಕಿಸಿದ್ದಾರೆ.

ಈ ಯಜ್ಞ-ಯಾಗಾದಿಗಳು ದ್ವಿಜ ವರ್ಣದವರು ಮಾಡುವ ಧಾರ್ಮಿಕ ವಿಧಿಗಳಾಗಿದ್ದರೆ ಮಾರಿ, ದುರ್ಗಿ, ಕಾಳಿ ಮುಂತಾದ ಉಗ್ರದೇವತೆಗಳಿಗೆ ಕುರಿ, ಕೋಣ, ಕೋಳಿಗಳನ್ನು ಬಲಿಗೊಡುವ ಕ್ರೂರ ಸಂಪ್ರದಾಯವು ಹಿಂದು ಧರ್ಮದಲ್ಲಿದೆ. ಇದನ್ನು ಸಹ ಲಿಂಗಾಯತ ಧರ್ಮವು ಖಂಡಿಸುತ್ತದೆ. ಇಂಥ ಮುಗ್ಧ ಮೂಕ ಪ್ರಾಣಿಗಳನ್ನು ಕೊಂದು ಸೃಷ್ಟಿಕರ್ತನ ಕೋಪಕ್ಕೆ ಪಾತ್ರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತದೆ.

ಕುರಿ ಸತ್ತು ಕಾವುದೇ ಹರ ಮುಳಿದವರ ? ಎಂದು ಪ್ರಶ್ನಿಸಿ, ಕುರಿ ಬೇಡ ಮರಿ ಬೇಡ ಬರಿಯ ಪತ್ರೆಯ ತಂದು ಪೂಜಿಸು ಕೂಡಲಸಂಗಮದೇವನ ಎಂದು ಬೋಧೆ ಮಾಡುತ್ತದೆ.

13. ವಿವಾಹದಲ್ಲಿ ಅಗ್ನಿ ಸಾಕ್ಷಿ, ಸಪ್ತಪದಿ, ಪೌರೋಹಿತ್ಯ ಉಂಟು

ವೈದಿಕ ಧರ್ಮವು ಅಗ್ನಿ ಸಾಕ್ಷಿ ನಂಬುತ್ತದೆ. ಲಿಂಗಾಯತರಲ್ಲಿ ಅಗ್ನಿಗೆ ಪ್ರಾಮುಖ್ಯತೆ ಇಲ್ಲ. ವೈದಿಕ ಧರ್ಮದಲ್ಲಿ ಅಗ್ನಿ ಸಾಕ್ಷಿಗೆ ಬಹಳ ಮಹತ್ವ ಕೊಡಲಾಗಿದೆ. ಎಲ್ಲ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಹೋಮ-ಹವನ ಮಾಡುವುದಲ್ಲದೆ ವಿವಾಹದಲ್ಲಿ ಅಗ್ನಿ ಸಾಕ್ಷಿಯೇ ಮುಖ್ಯ ವಿಧಿಗಳು, ಲಿಂಗಾಯತ ಧರ್ಮವು ಅಗ್ನಿ ಸಾಕ್ಷಿಯನ್ನು ಪ್ರತಿಪಾದಿಸುವುದಿಲ್ಲ ಇಲ್ಲಿ ಸಪ್ತಪದಿ ಇಲ್ಲ. ಗುರು ಲಿಂಗ ಜಂಗಮ ಸಾಕ್ಷಿಯಾಗಿ ವಿವಾಹವನ್ನು ನೆರವೇರಿಸಲಾಗುವುದು.

14.ಹಿಂದು ಧರ್ಮದಲ್ಲಿ ದ್ವಿಜರ ಶವಗಳನ್ನು ಸುಡುವರು

ಹಿಂದು ಧರ್ಮಿಯರ ಶವಗಳನ್ನು ಅಗ್ನಿಯಲ್ಲಿ ದಹಿಸಲಾಗುವುದು. ಲಿಂಗಾಯತರಲ್ಲಿ ಶವಗಳನ್ನು ಹುಗಿಯಲಾಗುವುದು. ಇದರ ಉದ್ದೇಶ ಪಂಚಭೂತಗಳಲ್ಲಿ ಪಂಚಭೂತಾತ್ಮಕ ಶರೀರವನ್ನು ವಿಲೀನಗೊಳಿಸುವುದು, ಪ್ರಕೃತಿಯಿಂದ ಪಡೆದ ಕಾಯವನ್ನು ಪ್ರಕೃತಿಗೆ ಸಲ್ಲಿಸಿ, ಶುದ್ಧೀಕರಣಗೊಂಡ ಅಂಗ (ಆತ್ಮವನ್ನು ಸಚ್ಚಿದಾನಂದ ನಿತ್ಯ ಪರಿಪೂರ್ಣ ಲಿಂಗ (ಪರಮಾತ್ಮ) ದೇವನೊಡನೆ ಸಮರಸ (ವಿಲೀನ) ಮಾಡುವುದೇ ಲಿಂಗಾಯತ ಧರ್ಮದ ಶೂನ್ಯ ಸಿದ್ದಾಂತದ ಗುರಿ.

15. ಪುರೋಹಿತನ ಮೂಲಕ ಪೂಜೆ

ವೇದೋಕ್ತ ಹಿಂದು ಧರ್ಮದಲ್ಲಿ ಪೂಜಾರಿಯ ಮೂಲಕ ಪೂಜೆ ನಡೆಯುತ್ತದೆ. ಶಾಸ್ತ್ರೀಯ ಶಿಷ್ಟ ದೇವತೆಗಳ ಪೂಜೆಯನ್ನು ಬ್ರಾಹ್ಮಣನಿಗೆ ಮಾತ್ರ ಮಾಡುವ ಅಧಿಕಾರವಿದೆ. ಪೂಜಾರಿ ಪೂಜಿಸುತ್ತಾನೆ ಭಕ್ತರು ದರ್ಶನ ತೀರ್ಥ ಪ್ರಸಾದ ಪಡೆಯುತ್ತಾರೆ. ಲಿಂಗಾಯತ ಧರ್ಮದಲ್ಲಿ ಭಕ್ತನೇ ನೇರವಾಗಿ ಗುರು- ಲಿಂಗ-ಜಂಗಮದ ಪೂಜೆ ಮಾಡಿ, ಕರುಣೋದಕ ಕರುಣ ಪ್ರಸಾದ ಪಡೆದುಕೊಳ್ಳುತ್ತಾರೆ. ವಿಧವೆ -ಮುತ್ತೈದೆ ಎಂಬ ಭೇದ ಸಹ ಇಲ್ಲದೆ ಪೂಜಿಸಲು ಅವಕಾಶ ಉಂಟು.

ತನ್ನಾಶ್ರಯದ ಸತಿಸುಖವನ್ನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರೆಲ್ಲರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ ?

16. ಹಿಂದು ಧರ್ಮದ ಭಿನ್ನ ವರ್ಣ, ಜಾತಿಗಳವರ ಮಧ್ಯೆ ವಿವಾಹವಿಲ್ಲ.

ವೈದಿಕ ಹಿಂದು ಧರ್ಮದಲ್ಲಿ ವರ್ಣಗಳು ನಾಲ್ಕು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಜಾತಿಗಳು ನೂರಾರು, ವಿಭಿನ್ನ ವರ್ಣ ಹಾಗೂ ಜಾತಿಗಳವರ ಮಧ್ಯೆ ವೈವಾಹಿಕ ಸಂಬಂಧವಿಲ್ಲ, ವರ್ಣ ಮತ್ತು ಜಾತಿಗಳನ್ನೊಪ್ಪದ ಲಿಂಗಾಯತ ಧರ್ಮವು ಯಾರಿಗೆ ಬೇಕಾದರೂ ದೀಕ್ಷೆ ನೀಡಿ ವಿವಾಹ ಸಂಬಂಧವನ್ನು ಒಪ್ಪಿಕೊಳ್ಳುವುದು.

17. ಹುಟ್ಟಿನಿಂದ ಹಿಂದು, ಇತರರ ಸ್ವೀಕಾರವಿಲ್ಲ.

ಹಿಂದು ಧರ್ಮದ ಅನುಯಾಯಿತ್ವ ಹುಟ್ಟಿನಿಂದ ಬರುತ್ತದೆ; ಹಿಂದುಯೇತರರನ್ನು ಹಿಂದುಗಳನ್ನಾಗಿ ಧರ್ಮಾಂತರ ಮಾಡಲು ಯಾವುದೇ ದೀಕ್ಷೆ ಮಂತ್ರೋಪದೇಶ ಇಲ್ಲ, ದ್ವಿಜ ಲಕ್ಷಣಗಳಾದ ಜನಿವಾರವನ್ನು, ಗಾಯಿತ್ರಿ ಮಂತ್ರೋಪದೇಶವನ್ನು ನೀಡಲಾಗುವುದಿಲ್ಲ. ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗ ದೀಕ್ಷೆ ಸಂಸ್ಕಾರವಿದೆ. ಗುರುವು ಲಿಂಗದೀಕ್ಷೆಯ ಮೂಲಕ ಯಾರನ್ನು ಬೇಕಾದರೂ ಲಿಂಗಾಯತ ಸಮಾಜದೊಳಕ್ಕೆ ತೆಗೆದಕೊಳ್ಳಬಹುದು. ಹಾಗೆ ಬಂದವರ ಮಧ್ಯೆ ಊಟೋಪಚಾರ ಮತ್ತು ವಿವಾಹ ಸಂಬಂಧ ಎರಡೂ ನಡೆಯುತ್ತವೆ.

18. ಹಿಂದು ಧರ್ಮ ಪಂಚ ಸೂತಕಗಳನ್ನು ನಂಬಿ ಆಚರಿಸುತ್ತದೆ.

ಜನನವಾದ ಮನೆಯಲ್ಲಿ ಸೂತಕ, ಮರಣವಾದವರ ಮನೆಯಲ್ಲಿ ಸೂತಕ ಪರಸ್ಪರ ಭಿನ್ನಾಜಾತಿಯವರು ಮುಟ್ಟಿದರೆ ಸೂತಕ, ಮಹಿಳೆ ಮುಟ್ಟಾದಾಗ ರಜೋ ಸೂತಕ, ವಸ್ತುಗಳು ಎಂಜಲಾಗುತ್ತವೆ, ಮಡಿಕೆಡುತ್ತವೆ ಎಂಬ ಭ್ರಾಂತಿಯ ನಂಬಿಕೆ ಹಿಂದುಗಳಲ್ಲಿದೆ. ಲಿಂಗಾಯತ ಧರ್ಮವು ಈ ಸೂತಕವನ್ನು ನಂಬುವುದಿಲ್ಲ.

19. ಪಾಪಕ್ಕೆ ಪ್ರಾಯಶ್ಚಿತ್ತವಿದೆ.

ಕೆಲವೊಂದು ಘಟನೆ ನಡೆದಾಗ ಪಾಪವು ಸಂಭವಿಸಿತು ಎಂಬ ಭಾವ ಉಂಟಾದಾಗ ಪ್ರಾಯಶ್ಚಿತ್ತವಾಗಿ ಕೆಲವು ಪೂಜಾದಿ ವ್ರತಗಳನ್ನು ಆಚರಿಸುವ, ದಾನ ಮಾಡುವ ಪದ್ಧತಿಯುಂಟು. ಲಿಂಗಾಯತ ಧರ್ಮವು ಕೇವಲ ಪಶ್ಚಾತ್ತಾಪ (epentance)ವನ್ನು ನಂಬುವುದೇ ವಿನಾ ಪ್ರಾಯಶ್ಚಿತವನ್ನಲ್ಲ.

ಎಲವೊ, ಎಲವೋ, ಪಾಪಕರ್ಮವ ಮಾಡಿದವನೇ,
ಎಲವೊ, ಎಲವೋ, ಬ್ರಹ್ಮಹತ್ಯವ ಮಾಡಿದವನೇ,
ಒಮ್ಮೆ 'ಶರಣೆ' ನೆಲವೋ
ಒಮ್ಮೆ 'ಶರಣೆಂದಡೆ ಪಾಪಕರ್ಮ ಓಡುವುವು.
ಸರ್ವಪ್ರಾಯಶ್ಚಿತಕ್ಕೆ ಹೊನ್ನ ಪರ್ವತಂಗದಾವು:
ಒಬ್ಬಂಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ !

20. ಉಪವಾಸ ವ್ರತ

ದೇವರನೊಲಿಸಲು ಉಪವಾಸ ವ್ರತ, ವಿವಿಧ ದೇವತೆಗಳ ಹೆಸರಿನಲ್ಲಿ ವಿವಿಧ ದಿನಗಳಂದು ಉಪವಾಸ, ಪ್ರಾಯಶ್ಚಿತವಾಗಿ ಉಪವಾಸ ಮುಂತಾದ ಆಚರಣೆ ಹಿಂದು ಧರ್ಮದಲ್ಲುಂಟು. ಲಿಂಗಾಯತ ಧರ್ಮದಲ್ಲಿ ಉಪವಾಸ ಒಂದು ಧಾರ್ಮಿಕ ವಿಧಿಯಾಗಿಲ್ಲ, ದೇವರನ್ನೊಲಿಸುವ ಸಾಧನವೂ ಅಲ್ಲ. ಆರೋಗ್ಯ ದೃಷ್ಟಿಯಿಂದ ಮಾತ್ರ ಐಚ್ಛಿಕವಾಗಿ ಉಪವಾಸವನ್ನು ಮಾಡಬಹುದು.

21. ಹಿಂದು ಧರ್ಮದಲ್ಲಿ ಉದ್ಯೋಗಗಳಲ್ಲಿ ಮೇಲು ಕೀಳು ಎಂಬ ಭಾವವಿದೆ.

ವೈದಿಕ ಹಿಂದು ಧರ್ಮದಲ್ಲಿ ಉದ್ಯೋಗಗಳಲ್ಲಿ ವಿಭಜನೆ, ವರ್ಗಿಕರಣ ಇದೆ. ಅದರ ಆಧಾರದ ಮೇಲೆ ಉದ್ಯೋಗಗಳಲ್ಲಿ ಸಹ ವರ್ಗಿಕರಣವಾಗಿದೆ. ಲಿಂಗಾಯತ ಧರ್ಮವು ಹುಟ್ಟಿನಿಂದ ಜಾತಿಯನ್ನಾಗಲೀ, ಉದ್ಯೋಗವನ್ನಾಗಲೀ ನಿರ್ಧರಿಸುವುದಿಲ್ಲ. ಉದ್ಯೋಗಗಳನ್ನು ಶ್ರೇಷ್ಠ ಕನಿಷ್ಠಎಂದು ವರ್ಗಿಕರಿಸುವುದೂ ಇಲ್ಲ. ಸಮಾಜದ ಪ್ರಗತಿಗೆ ಎಲ್ಲ ಉದ್ಯೋಗಗಳು ಅತ್ಯಗತ್ಯವಾದ ಕಾರಣ ಅವುಗಳಲ್ಲಿ ಭೇದ ಮಾಡಬಾರದು ಎಂದು ಹೇಳುತ್ತದೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗೆ ಆಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ:
ಆಸೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೆ.
ಏನನೋದಿ, ಏನ ಕೇಳಿ, ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿಸಮುದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?
ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ;
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗ ಸ್ಥಲವನರಿದವನೆ ಕುಲಜನು !


ಪ್ರತಿಯೊಬ್ಬರೂ ಹುಟ್ಟುವುದು ಒಂದೇ ರೀತಿಯಲ್ಲಿ ಹುಟ್ಟಿ ಬಂದಾನಂತರದ ಶಾರೀರಿಕ ಕ್ರಿಯೆಗಳೆಲ್ಲ ಒಂದೇ ಬಗೆಯವು. ಸುಖ ದುಃಖಾದಿ ಮಾನಸಿಕ ಕ್ರಿಯೆಗಳೂ ಒಂದೇ ತೆರನಾಗಿರುತ್ತವೆ. ಎಲ್ಲರ ಶರೀರಗಳು ಸಪ್ತಧಾತುಗಳಿಂದಾಗಿ, ಆತ್ಮ - ಶರೀರಗಳ ಜೋಡಣೆಯಿಂದ ಮಾನವ ಜನ್ಮ ರೂಪುಗೊಂಡಿರುತ್ತದೆ. ಕಬ್ಬಿಣ ಕಾಸಿದವನು ಕಮ್ಮಾರ, ಬಟ್ಟೆ ತೊಳೆಯುವವ ಮಡಿವಾಳ, ಬಟ್ಟೆ ನೇಯುವ ನೇಕಾರ, ಜ್ಞಾನಿಯಾದವನೇ ಬ್ರಾಹ್ಮಣ, ಯಾರು ಬೇಕಾದರೂ ಬ್ರಹ್ಮ ಜ್ಞಾನಿಯಾಗಿ, ಬ್ರಾಹ್ಮಣನಾಗಬಹುದು. ಹುಟ್ಟಿದ ಜಾತಿಯಾಗಲಿ, ಉದ್ಯೋಗವಾಗಲಿ ಜ್ಞಾನಿಯಾಗಲು ಅಡ್ಡಿಯಾಗವು. ದೇವರನ್ನು ಅರಿತವನು, ಒಲಿಸಿಕೊಂಡವನೇ ಕುಲ ಶ್ರೇಷ್ಠನು ಎಂಬುದೇ ಲಿಂಗಾಯತ ಧರ್ಮದ ನಂಬಿಕೆ; ಇದು ವೈದಿಕ ಹಿಂದು ಧರ್ಮದ ಮೂಲ ಸಿದ್ದಾಂತದಿಂದ ಸ್ಪಷ್ಟವಾಗಿ ಬೇರೆಯಾಗಿದೆಯಲ್ಲವೆ?

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಹಿಂದು ಧರ್ಮ ಎಂದರೇನು ? ಲಿಂಗಾಯತ ಧರ್ಮದ ಲಕ್ಷಣಗಳು Next