Previous ವಿಶ್ಲೇಷಣೆ -ವೀರಶೈವ ಧರ್ಮ ವಚನಗಳ ಆವಿಷ್ಕಾರದ ಪ್ರಭಾವ Next

ಸತ್ಯವನ್ನು ಒಪ್ಪಿಕೊಳ್ಳದ ಭಂಡತನ

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ವೀರಶೈವ ಗ್ರಂಥಕರ್ತರ ಭಂಡತನ

ವೀರಶೈವ ಗಂಥಕರ್ತರು ಏಕೆ ಪಕ್ಷಪಾತಿಗಳಾಗುತ್ತಾರೆಂಬುದು ವಿಚಿತ್ರವೆನಿಸುತ್ತದೆ, ವಿಷಾದವೂ ಆಗುತ್ತದೆ. ಸತ್ಯವನ್ನು ತಿಳಿದಿದ್ದರೂ ಕೆಲವು ವೀರಶೈವ ಗ್ರಂಥಕರ್ತರು ಲಿಂಗಾಯತ ಧರ್ಮವನ್ನು ಯಾರು ಸ್ಥಾಪಿಸಿದರು ಮತ್ತು ಅದು ಹನ್ನೆರಡನೆಯ ಶತಮಾನಕ್ಕೆ ಹಿಂದೆ ಅಸ್ತಿತ್ವದಲ್ಲಿತ್ತೆ ಎಂಬ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರೂ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಅದಕ್ಕೆ ಸ್ಪಷ್ಟವಾದ ಕೆಲವು ಉದಾಹರಣೆ ಗಳೆಂದರೆ - ಪ್ರಸಕ್ತ ಕಾಲದವರೇ ಆದ ಎಸ್.ಸಿ. ನಂದೀಮಠ, ಗುರುಶಾಂತಶಾಸ್ತ್ರಿ, ಆರ್.ಸಿ ಹಿರೇಮಠ, ಹೆಚ್. ತಿಪ್ಪೇರುದ್ರಸ್ವಾಮಿ, ಸಂಗಮೇಶ ಸವದತ್ತಿ ಮಠ, ಎಂ. ಚಿದಾನಂದಮೂರ್ತಿ ಅವರು. ಇವರೆಲ್ಲರೂ ಜಂಗಮರಾಗಿದ್ದು, ಲಿಂಗಾಯತ ಧರ್ಮ ಸ್ಥಾಪಕರು ಬಸವಣ್ಣನವರು ಎನ್ನುವುದನ್ನು ಸಾಕ್ಷಾಧಾರಗಳ ಮೂಲಕ ಸಿದ್ಧಪಡಿಸಿ ದರೂ ಅವರು ಒಪ್ಪಿಕೊಳ್ಳುವುದಿಲ್ಲ. ಅವರ ಕೆಳಗಿನ ಹೇಳಿಕೆಗಳನ್ನು ಗಮನಿಸಿ :

೧. ಡಾ. ಎಸ್.ಸಿ. ನಂದಿಮಠ :

ಉತ್ತರಾಗಮಗಳ ವಿಶ್ವಾಸಾರ್ಹತೆಯನ್ನು ಮೊದಲು ಪ್ರಶ್ನಿಸಿದವರು ಡಾ. ಎಸ್.ಸಿ. ನಂದೀಮಠ ಅವರು : “ಶಿವಾಗಮಗಳ ನಂತರದ ಭಾಗಗಳು ವೀರಶೈವ ಧರ್ಮವನ್ನು ಭೋದಿಸುತ್ತವೆ ಎಂದು ನಂಬಲಾಗಿದೆ. ಆದರೆ ಆ ಉತ್ತರ ಶಿವಾಗಮಗಳು ಈಗ ದೊರೆಯುತ್ತಿಲ್ಲ. ನನಗೆ ದೊರೆತು ಓದಿದ ಶಿವಾಗಮಗಳಲ್ಲಿ ವೀರಶೈವರ ಪ್ರಸ್ತಾಪವಿಲ್ಲ”.

“ವಾತುಲ ಶುದ್ಧಾಖ್ಯ ತಂತ್ರದ ಕೆಲವು ಶ್ಲೋಕಗಳು ಸಾಮಾನ್ಯ, ವಿಶೇಷ ಮತ್ತು ನಿರಾಭಾರ ವೀರಶೈವವನ್ನು ಪ್ರಸ್ತಾಪಿಸುತ್ತವೆ. ಆದರೆ ಅವುಗಳಲ್ಲಿ ಅನೇಕ ಪ್ರಾಚೀನ ವಿಷಯಗಳ ಮಧ್ಯೆ ಆಧುನಿಕ ವಿಷಯಗಳು ನುಸುಳಿಕೊಂಡಿವೆ. ಹಾಗಾಗಿ ಅವು ಯಾವಾಗ ರಚಿತವಾದವು ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವುದು ಪ್ರಾಚೀನ, ಯಾವುದು ಅರ್ವಾಚೀನ ಎಂಬುದನ್ನು ನಿರ್ಧರಿಸುವುದು ಕಷ್ಟ” (ವೀರಶೈವರ ಇತಿಹಾಸ ಮತ್ತು ಧರ್ಮ, ಶಿವಾನುಭವ, ಆಗಸ್ಟ್ ೩-೬, ೪೮೨-೮೩)

ಪಂಚಪೀಠಗಳ ಪ್ರಾಚೀನತೆಯನ್ನು ನಂದೀಮಠರೂ ಒಪ್ಪುವುದಿಲ್ಲ, “ಪಂಚಾಚಾರ್ಯರು ವೀರಶೈವದ ಅನುಷ್ಠಾನಿಗಳೆಂಬುದು ಪುರಾಣಗಳಿಂದ ತಿಳಿಯುತ್ತದೆ. ಆದರೆ ಅದಕ್ಕೆ ಯಾವುದೇ ಚಾರಿತ್ರಿಕ ಆಧಾರವಿಲ್ಲ. ಪಂಚಾಚಾರ್ಯರು ವೀರಶೈವ ಧರ್ಮಸ್ಥಾಪಕರು ಎನ್ನುವುದನ್ನು ಸಾಬೀತುಮಾಡುವವರೆಗೆ ವೀರಶೈವದ ಮೂಲವೂ ತಿಳಿಯುವುದಿಲ್ಲ ಎಂದೇ ಭಾವಿಸಬೇಕಾಗುತ್ತದೆ” (ಅದೇ., ಪು. ೪೩೭) “ಅವರಿಗೆ ಪುರಾಣಗಳು ಮಾತ್ರ ಇವೆ, ಚರಿತ್ರೆ ಇಲ್ಲ' ಎಂದು ಅವರೇ ಹೇಳುತ್ತಾರೆ. “ಹನ್ನೆರಡನೆಯ ಶತಮಾನಕ್ಕಿಂತ ಮುಂಚೆ ವೀರಶೈವವನ್ನು ಕುರಿತ ಯಾವ ಗ್ರಂಥವೂ ಇರಲಿಲ್ಲ. ಹನ್ನೆರಡನೆಯ ಶತಮಾನಕ್ಕೆ ಮುಂಚಿನವೆಂದು ಸ್ಥಿರಪಟ್ಟಿರುವ ಸಂಸ್ಕೃತ, ಕನ್ನಡ, ತಮಿಳು ಮತ್ತು ತೆಲುಗಿನ ಯಾವುದೇ ಗ್ರಂಥ ದೊರೆಯುವುದಿಲ್ಲ ಎಂಬುದಕ್ಕೆ ಸಂಶಯವೇ ಇಲ್ಲ. ಪ್ರಾಚೀನವೆಂದು ಹೇಳಲಾಗಿರುವ ಅನೇಕ ಗ್ರಂಥಗಳೂ ಸಹ ತೀರ ಇತ್ತೀಚಿಗೆ ರಚಿತವಾದವು” ಎನ್ನುತ್ತಾರೆ. (ಶಿವಾನುಭವ ೬-೫, ಡಿಸೆಂಬರ್ ೧೯೨೧, ಪು.೪೮೩)

ವೀರಶೈವದ ಮೂಲದ ಬಗೆಗಿನ ನಂದಿಮಠ ಅವರ ನಿಲುವು ಇನ್ನೂ ವಿಸ್ಮಯಕಾರಿಯಾಗಿದೆ : “ಅದು ಅಸ್ತಿತ್ವದಲ್ಲಿ ಇದ್ದಿದ್ದರೆ ಹನ್ನೆರಡನೆಯ ಶತಮಾನಕ್ಕೆ ಮುಂಚೆ ವೀರಶೈವ ಧರ್ಮದ ಹೆಸರೇನಿತ್ತು? ಅದು ಯಾವುದಾದರೂ ಪ್ರಾಚೀನ ಗ್ರಂಥಗಳಲ್ಲಿ ದೊರಕುತ್ತದೆಯೆ? ಧರ್ಮದ ತತ್ತ್ವಗಳಿಗೂ, ಇಂದು ಅನುಷ್ಠಾನದಲ್ಲಿರುವ ವೀರಶೈವ ತತ್ತ್ವಗಳಿಗೂ ಏನಾದರೂ ಸಾಮ್ಯತೆಗಳಿವೆಯೆ? ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಹಣ ಮತ್ತು ಸೂಕ್ತ ಅನುಕೂಲ ಬೇಕಾಗುತ್ತದೆ. ಆದ್ದರಿಂದ ಈಗ ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ. (ಅದೇ., ಪು.೪೮೩)

ಲಿಂಗಾಯತ ಧರ್ಮ ಸ್ಥಾಪಕರು ಬಸವಣ್ಣನವರು ಎನ್ನುವುದನ್ನು ನಂದಿಮಠ ಅವರು ಒಪ್ಪುವುದಿಲ್ಲ. ಆ ಬಗೆಗಿನ ಅವರ ಹೇಳಿಕೆ ಹೀಗಿದೆ : “ಲಿಂಗಾಯತ /ವೀರಶೈವ ಧರ್ಮವನ್ನು ಸ್ಥಾಪಿಸಿದವರು ಬಸವಣ್ಣನವರು ಎಂಬುದು ಅನೇಕರ ನಂಬಿಕೆ. ಅದು ಸರಿಯಿರುವಂತೆ ಕಾಣುವುದಿಲ್ಲ... ಬಸವಣ್ಣನವರು ಶರಣರ ಗುರುವಾಗಿರಲಿಲ್ಲ. ಬದಲಾಗಿ ಅವರೇ ಶರಣರನ್ನು ಆರಾಧಿಸುತ್ತಿದ್ದರು. ಅವರು ಧರ್ಮದ ಸ್ಥಾಪಕರಾಗಿದ್ದಿದ್ದರೆ ಅದು ಹೀಗೆ ಇರುತ್ತಿರಲಿಲ್ಲ” (ಅದೇ., ಪು.೪೭೮- ೯) ಎಂದು ಹೇಳುತ್ತಾ, ಮತ್ತೆ “ಬಸವಣ್ಣನವರು ಧರ್ಮಸ್ಥಾಪಕರು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಏಕೆಂದರೆ, ಕನ್ನಡ ಮತ್ತು ಸಂಸ್ಕೃತದಲ್ಲಿರುವ ಯಾವ ಗ್ರಂಥದಲ್ಲೂ ಬಸವಣ್ಣನವರು ಅದನ್ನು ಸ್ಥಾಪಿಸಿದರು ಎಂದು ಹೇಳಿಲ್ಲ” ಎಂದಿದ್ದಾರೆ. (ಹ್ಯಾಂಡ್ ಬುಕ್ ಆಫ್ ವೀರಶೈವಿಜಮ್, ಪು.೪) ಆ ಪುಸ್ತಕಗಳೆಲ್ಲವೂ ವೀರಶೈವರು ಬರೆದವು. ಅವರು ಈ ಬಗ್ಗೆ ಸುಳ್ಳು ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ವೀರಶೈವ ಗ್ರಂಥಗಳಲ್ಲಿ ಬಸವಣ್ಣನವರ ಧರ್ಮ ಸಂಸ್ಥಾಕರು ಎಂದು ಬರೆಯಲಾಗಿದೆ. ಅವುಗಳ ಹೆಸರುಗಳು ಈ ಕೆಳಗಿನಂತಿವೆ :

೧) ಪಾಲ್ಕುರಿಕೆ ಸೋಮನಾಥನು ತನ್ನ “ಗಣ ಸಹಸ್ರನಾಮ ಪುಸ್ತಕದಲ್ಲಿ ಬಸವಣ್ಣನನ್ನು ಈ ಧರ್ಮದ ಆತ್ಮವೆಂದೂ “ಪ್ರಥಮಾಚಾರ್ಯ”ನೆಂದೂ ಬಣ್ಣಿಸಿದ್ದಾನೆ.
೨) ಚಾಮರಸನು (ಕ್ರಿ.ಶ. ೧೪೩೦) ತನ್ನ “ಪ್ರಭುಲಿಂಗ ಲೀಲೆಯಲ್ಲಿ ಬಸವಣ್ಣನನ್ನು ವೀರಶೈವ/ಲಿಂಗಾಯತದ “ಮೂಲ ಗುರು” ಎಂದು ಹೇಳಿದ್ದಾನೆ.
೩) “ಆರಾಧ್ಯ ಚರಿತ್ರೆ”ಯನ್ನು ಬರೆದ ನೀಲಕಂಠಾಚಾರ್ಯನು (೧೫ನೇ ಶತಮಾನ) ಬಸವಣ್ಣನನ್ನು ಕುರಿತು “ವೀರಶೈವವನ್ನು ಸ್ಥಾಪಿಸಿ ಪ್ರಸಾರಿಸಲು ಬಸವನಲ್ಲದೆ ಮುತ್ತಾರು?” ಎಂದು ಕೇಳಿದ್ದಾನೆ.
೪) ಮೊಗ್ಗೆಯ ಮಾಯಿದೇವನು (ಕ್ರಿ.ಶ. ೧೪೭೮) “ಶತಕತ್ರಯದಲ್ಲಿ ಬಸವಣ್ಣನನ್ನು ವೀರಶೈವ ಧರ್ಮದ ಮೂಲರೂಪವೆಂದು ಹೇಳಿದ್ದಾನೆ.
೫) “ಸಿದ್ಧೇಶ್ವರ ಚರಿತ್ರೆ”ಯಲ್ಲಿ ಮರಿತೋಂಟದಾರ್ಯನು (ಕ್ರಿ.ಶ. ೧೫೬೦) ಬಸವಣ್ಣನೇ ವೀರಶೈವ ಸ್ಥಾಪಕನೆಂದು ದೃಢಪಡಿಸಿದ್ದಾನೆ.
೬) ಕೆಳದಿಯ ರಾಜ, ಬಸವಪ್ಪ ನಾಯಕನು “ಶಿವತತ್ವ ರತ್ನಾಕರದಲ್ಲಿ ಬಸವಣ್ಣನೇ ಈ ಧರ್ಮವನ್ನು ಸ್ಥಾಪಿಸಿ ಪ್ರಚುರಪಡಿಸಿದನು ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ.
೭) ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮೇಶ್ವರ ಮತ್ತು ಹತ್ತಾರು ಶರಣರು ಬಸವಣ್ಣನಿಂದಲೇ ಈ ಧರ್ಮ ಮತ್ತು ಇಷ್ಟಲಿಂಗ ಹುಟ್ಟಿತು ಎಂದು ಅನೇಕ ವಚನಗಳಲ್ಲಿ ಹೇಳಿದ್ದಾರೆ.
೮) ಗುರುರಾಜ ಕವಿಯು (೧೬ನೆಯ ಶತಮಾನ), “ಗುರುರಾಜ ಚರಿತ್ರೆ”ಯಲ್ಲಿ “ವೀರಶೈವ ಧರ್ಮಸ್ಯ ಸರಣಿಂ ಪರಮೇಶ್ವರ ಅವಿಜ್ಜಿನ್ನಾಂ ಸ್ಥಪಯಿತುಂ ಕೋ ವಾ ಶಕ್ರೋ ಮಹಿತಲೆ ಬಸವೇಂದ್ರ ತು ಪ್ರಾಣಾ" ಎಂದಿದ್ದಾನೆ.

೨. ಡಾ. ಆರ್.ಸಿ ಹಿರೇಮಠ :

ಡಾ. ಆರ್.ಸಿ. ಹಿರೇಮಠ ಅವರು ತಮ್ಮ 'ಮಹಾಯಾತ್ರೆ' ಗ್ರಂಥದಲ್ಲಿ ವೀರಶೈವದ ಮೂಲವನ್ನು ಕಂಡುಕೊಳ್ಳುವುದು ಹೇಗೆ ಕಷ್ಟ ಎಂಬುದನ್ನು ಈ ಮಾತುಗಳಲ್ಲಿ ವಿವರಿಸಿದ್ದಾರೆ : “ಇದೊಂದು ಮಹಾಯಾತ್ರೆ, ವೀರಶೈವದ ಈ ಮಹಾಯಾತ್ರೆಯಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ಬಗೆಗೆ ಕಳೆದ ನಾಲೈದು ದಶಕಗಳಿಂದ ಚರ್ಚೆ ನಡೆದಿದೆ. ಕನ್ನಡ, ಸಂಸ್ಕೃತ ಮತ್ತು ತೆಲುಗು ಸಾಹಿತ್ಯದ ಧಾರ್ಮಿಕ ಬೃಹತ್ ಗ್ರಂಥಗಳನ್ನು ಅಧ್ಯಯನ ಮಾಡಿದ ನಂತರ ಆ ಸಮಸ್ಯೆಗಳಿಗೆ ಒಂದು ಸಮಾಧಾನಕರ ಪರಿಹಾರ ದೊರಕಿತು.” (ಮಹಾಯಾತ್ರೆ - ಪ್ರಸ್ತಾವನೆ, ಕನ್ನಡ ವಿಶ್ವವಿದ್ಯಾಲಯ, ೧೯೯೭),

ಡಾ. ಹಿರೇಮಠ ಅವರು ಸೂಚಿಸಿರುವ ಸಮಸ್ಯೆಗಳು, ಬಸವಣ್ಣನವರಿಗಿಂತ ಮುಂಚೆ ವೀರಶೈವ ಧರ್ಮದ ಅಸ್ತಿತ್ವವಿತ್ತು ಎಂಬುದನ್ನು ಸಾಧಿಸಲು ಅಗತ್ಯವಾದಷ್ಟು ಚಾರಿತ್ರಿಕ ಆಧಾರಗಳನ್ನು ದೊರಕಿಸಿಕೊಳ್ಳುವಲ್ಲಿ ಇದ್ದ ತೊಂದರೆಗೆ ಸಂಬಂಧಿಸಿದವು. ಅವರು ತಮ್ಮ ಧರ್ಮದ ಮೂಲಗಳನ್ನು ಅದೇ ಆಗಮಗಳಲ್ಲಿ ಹುಡುಕಲು ಪ್ರಯತ್ನಿಸಿದ್ದಾರೆ. (ಅವರ 'ಮಹಾಯಾತ್ರೆ' ಮತ್ತೊಂದು ವಿವಾದಾತ್ಮಕ ಕೃತಿ. ಅವರು ಹಿಂದೆ ವಿಕೃತ ವಚನಗಳ 'ಮುಕ್ತಿಕಂಠಾಭರಣ' ಎಂಬ ವಿವಾದಾತ್ಮಕ ಕೃತಿಯನ್ನು ಪ್ರಕಟಿಸಿ, ಸಾರ್ವಜನಿಕ ವಿರೋಧದಿಂದ (ಪ್ರಕಟಣೆ : ಕರ್ನಾಟಕ ವಿಶ್ವವಿದ್ಯಾಲಯ) ಅದನ್ನು ಹಿಂದಕ್ಕೆ ಪಡೆದ ಬಗೆಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ.) ಡಾ. ಹಿರೇಮಠ ಅವರು 'ಬಸವಣ್ಣನವರು ಧರ್ಮ ಸುಧಾರಕರೇ ಹೊರತು ಧರ್ಮಸ್ಥಾಪಕರಲ್ಲ' ಎಂದು ಘೋಷಿಸುತ್ತಾರೆ.

೩. ಚಿದಾನಂದಮೂರ್ತಿ :

ಚಿದಾನಂದ ಮೂರ್ತಿಯವರ ವಾದಗಳು ನಂದಿಮಠರ ವಾದಗಳಂತೆಯೇ ಇವೆ. ಹೀಗಿದೆ ಅವರ ವಾದ : “ಬಸವಣ್ಣನವರು ವೀರಶೈವ/ಲಿಂಗಾಯತ ಧರ್ಮದ ಸ್ಥಾಪಕರೆ? ಖಂಡಿತ ಅಲ್ಲ. ರೇಣುಕರು ಸ್ಥಾಪಕರೆ? ಖಂಡಿತ- ಅಲ್ಲ. ಹಾಗಾದರೆ, ಈ ಧರ್ಮವನ್ನು ಯಾರು ಸ್ಥಾಪಿಸಿದರು? ಅಂಥ ಯಾವುದೇ ಸಂಸ್ಥಾಪಕರು ಇದ್ದರೆ ಅದು ನಮಗೆ ಗೊತ್ತಿಲ್ಲ” (ಪುಟ ೪೪ “ವೀರಶೈವ ಧರ್ಮ ಮತ್ತು ಭಾರತೀಯ ಸಂಸ್ಕೃತಿ, ಮಿಂಚು ಪ್ರಕಾಶನ, ಬೆಂಗಳೂರು)

೪. ಎಚ್‌. ತಿಪ್ಪೇರುದ್ರಸ್ವಾಮಿ :

ತಿಪ್ಪೇರುದ್ರಸ್ವಾಮಿಯವರು ಲಿಂಗಾಯತ/ವೀರಶೈವ ಧರ್ಮದ ಸ್ಥಾಪಕರ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಹೊಂದಿಲ್ಲ. “ವೀರಶೈವದ ಪ್ರಾಚೀನತೆಯ ಬಗ್ಗೆ ಈಗಿರುವ ಪುರಾವೆಗಳಿಂದ ಏನೂ ಹೇಳಲು ಸಾಧ್ಯವಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಅದು ಒಂದು ನಿರ್ದಿಷ್ಟರೂಪ ಪಡೆಯಿತು ಮತ್ತು ಅದು ಬಹು ಶಕ್ತಿಶಾಲಿ ಧರ್ಮವಾಗಿ ಬೆಳೆದು ಸಮಾನತೆಯ ತತ್ವವನ್ನು ಸಾಧಿಸಿತು. ಆದರೆ ಅದು ಬಸವಣ್ಣನವರಿಂದ ಹುಟ್ಟಿತು ಎಂದು ಹೇಳಲಾಗುವುದಿಲ್ಲ” (ಪುಟ ೩೫೨-೩೫೩), “ಯುಗಯುಗಳಲ್ಲಿ ಈ ಧರ್ಮವು ಪಂಚಾಚಾರ್ಯರಿಂದ ಉಗಮವಾಯಿತೆಂಬ ಮಾತನ್ನು ಇತಿಹಾಸಕಾರರು ಒಪ್ಪಲು ಸಾಧ್ಯವಿಲ್ಲ. ಅದು ಕೇವಲ ಊಹಾತ್ಮಕ ಕಲ್ಪನೆ ಮಾತ್ರ” ಅದೇ ಪುಟ ೩೫೪ “ನಿರುಪಯೋಗಿ ಚರ್ಚೆಯನ್ನು ಬಿಟ್ಟು, ಸಧ್ಯಕ್ಕೆ ವೀರಶೈವದ ಪ್ರಾಚೀನತೆಯನ್ನು ಕುರಿತು ಏನನ್ನೂ ಹೇಳಲು ಪುರಾವೆಗಳು ಲಭ್ಯವಿಲ್ಲ”. (ಅದೇ, ಪುಟ ೩೫೫)

೫. ಡಾ. ಸಂಗಮೇಶ ಸವದತ್ತಿ ಮಠ :

ಶರಣ ಧರ್ಮವನ್ನು ವೀರಶೈವದೊಂದಿಗೆ ಬೆರೆಸುವ ಮತ್ತು ಅಪವ್ಯಾಖ್ಯಾನಿಸುವ ಮೂಲಕ ನಿರಂತರವಾಗಿ ಶರಣಧರ್ಮವನ್ನು ವಿರೂಪಗೊಳಿಸುತ್ತಿರುವ ಪ್ರಮುಖ ವೀರಶೈವ ವಿದ್ವಾಂಸರೆಂದರೆ ಡಾ. ಸಂಗಮೇಶ ಸವದತ್ತಿಮಠ, (ವೀರಶೈವ - ಲಿಂಗಾಯತ, ಜಗದ್ಗುರು ರಂಭಾಪುರೀಶ್ವರ ಗ್ರಂಥ ಪ್ರಕಾಶನ, ಹುಬ್ಬಳ್ಳಿ, ೨೦೧೮; ವೀರಶೈವ ಆಕರಗಳು, ಸರ್ವ ಶ್ರೀಮದ್ವೀರಶೈವ ಸದ್ಯೋದನ ಸಂಸ್ಥೆ, ಬಾಳೆಹೊನ್ನೂರು, ೨೦೦೯) ಅವರು ಹೇಳುವ ಮೂಲಗಳೆಲ್ಲ ಪ್ರಶ್ನಾರ್ಹ ಆಗಮಗಳು ಮತ್ತು ೧೫ ರಿಂದ ೧೮ನೆಯ ಶತಮಾನದ ಅವಧಿಯಲ್ಲಿ ಹೊರಬಂದಿರುವ ವೀರಶೈವ ಗ್ರಂಥಕರ್ತರ - ಹುಸಿಸಾಹಿತ್ಯ ಕೃತಿಗಳೇ ಇವೆ. ಅವೂ ಕೂಡ ನಂತರದ ಪುನರ್ಮುದ್ರಣ ಸಂದರ್ಭದಲ್ಲಿ ಕೆಲವು ಭಾಗಗಳ ಸೇರ್ಪಡೆಯ ಮೂಲಕ ಅಪಾರ್ಥಕ್ಕೆ ಒಳಗಾಗಿವೆ. ಅಂತಹ ಮುದ್ರಣಗಳು ನಡೆದಿರುವುದು ೧೮೭೦-೧೯೩೦ರ ಅವಧಿ ಮತ್ತು ೧೯೨೮-೧೯೫೦ರ ಅವಧಿಯಲ್ಲಿ, ಇವು ಪ್ರಕಟಗೊಂಡಿರುವುದು ಸೊಲ್ಲಾಪುರದ ವಾರದ ಮಲ್ಲಪ್ಪನವರ ಲಿಂಗಿಬ್ರಾಹ್ಮಣ ಗ್ರಂಥಮಾಲೆ ಮತ್ತು ಕಾಶಿನಾಥ ಗ್ರಂಥಮಾಲೆಗಳಿಂದ. ಜೊತೆಗೆ, ವೀರಶೈವ ಧರ್ಮದ ಸ್ವರೂಪದ ಬಗೆಗೆ ಬೊಂಬಾಯಿ ಸರ್ಕಾರ ಕೇಳಿದ್ದಕ್ಕೆ ಉತ್ತರವಾಗಿ (ವೀರಶೈವ ನಿರ್ಣಯ ಚಿಂತಾಮಣಿ' ಪ್ರಕಾಶ) ಐದು ಜನ ಲಿಂಗಾಯತ ಪ್ರಮುಖರ ಒಂದು ಸಮಿತಿ ೧೮೮೨-೧೮೮೬ರ ಮಧ್ಯೆ ಉದ್ದೇಶಪೂರ್ವಕವಾಗಿ ಕೆಲವು ಖೋಟಾ ಪುಸ್ತಕಗಳನ್ನು ಬರೆಸಿ ಪ್ರಕಟಿಸಿತು.

ಬಸವಣ್ಣನವರು ಮತ್ತು ಶರಣರ ಹೆಸರಿಗೆ ಕುಂದುಂಟು ಮಾಡುತ್ತಾ ಹೋದವರಲ್ಲಿ ಇನ್ನೊಬ್ಬ ವೀರಶೈವ ಸಿರಸಿ ಗುರುಶಾಂತಶಾಸ್ತ್ರಿ ಎನ್ನುವವರು. ಎಲ್ಲರಿಗೂ ತಿಳಿದಂತೆ, ಖೋಟಾ ಕೃತಿಗಳನ್ನು ರಚಿಸಿ ಕಾಶೀನಾಥ ಗ್ರಂಥಮಾಲೆಯಿಂದ ಪ್ರಕಟಿಸುತ್ತಿದ್ದ (೧೯೨೮-೧೯೫೦) ಕುಖ್ಯಾತ ಕಾಶೀನಾಥ ಶಾಸ್ತ್ರಿ ಮತ್ತೊಬ್ಬರು (ಕಾಶೀನಾಥ ಶಾಸ್ತ್ರಿಗಳ ನಿಜ ಚರಿತ್ರೆ - ಗುಂಡಾಶಾಸ್ತ್ರಿ; ೧೯೩೫;, ಹೆಚ್. ಈಶ್ವರನ್, ವಿಕಾಸ್ ಪಬ್ಲಿಷಿಂಗ್ ಹೌಸ್, ೧೯೮೩, ಪು.೬೦). ಇದೇ ಗುಂಪಿಗೆ ಸೇರಿದ ಇನ್ನೊಬ್ಬ ಲೇಖಕರೆಂದರೆ ಡಾ. ಎಮ್.ಜಿ. ನಾಗರಾಜ ಅವರು. ಅವರ ಅನೇಕ ಲೇಖನಗಳಲ್ಲಿ ಕಾಶೀನಾಥ ಶಾಸ್ತ್ರಿಗಳಂತಹ ಮೊಂಡು ವಾದಗಳನ್ನೇ ಮಂಡಿಸುತ್ತಾರೆ.

ಬಸವಣ್ಣನವರು ಲಿಂಗಾಯತ ಧರ್ಮಸ್ಥಾಪಕರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೆಲವು ಜಂಗಮ ವಿದ್ವಾಂಸರ ಪ್ರವೃತ್ತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡಿರುವ ಡಾ. ಎನ್.ಜಿ. ಮಹಾದೇವಪ್ಪ ಅವರು, “ತಮಗೆ ಅಥವಾ ತಮ್ಮ ಸ್ವಪ್ರತಿಷ್ಠೆಗೆ ವಿರೋಧವಾದ ಸಂಗತಿಗಳು ಬುದ್ಧಿಗ್ರಾಹ್ಯವಲ್ಲವೆಂದು ತಿಳಿದು, ಸತ್ಯ ಯಾವುದೇ ಇದ್ದರೂ ಇದನ್ನು ಒಪ್ಪಿಕೊಳ್ಳಲಾಗದು ಎನ್ನುವುದು ಏಕೆ ಎಂಬುದು ತಿಳಿಯದಾಗಿದೆ” ಎಂದು ವಿಷಾದಿಸಿದ್ದಾರೆ (ಬಸವಣ್ಣ – ಲಿಂಗಾಯತ ಧರ್ಮ ಸ್ಥಾಪಕ, ೨೦೧೫, ಪು.೮೯)

ಬಸವಣ್ಣನವರ ಕಾಲಕ್ಕಿಂತ ಮುಂಚೆ ವೀರಶೈವ ಧರ್ಮವು ಅಸ್ತಿತ್ವದಲ್ಲಿದ್ದ ಬಗೆಗೆ ನಿಸ್ಸಂದಿಗ್ಧ ಆಧಾರವಿಲ್ಲದಿರುವುದರಿಂದ, ವೀರಶೈವ ಧರ್ಮವು ೧೨ನೆಯ ಶತಮಾನಕ್ಕೆ ಮುಂಚೆ ಅಸ್ತಿತ್ವದಲ್ಲಿ ಇರಲಿಲ್ಲ ಎಂದು ಅಂತಿಮವಾಗಿ ಹೇಳಬಹುದು.

ಒಂದು ಕೃತಕ ಇತಿಹಾಸವನ್ನು ಸೃಷ್ಟಿಸುವ ಸಲುವಾಗಿ, ವೀರಶೈವರು ಅಲ್ಲಿಂದ - ಇಲ್ಲಿಂದ, ಅಷ್ಟಿಷ್ಟು ಚೂರು-ಪಾರುಗಳನ್ನು ಸಂಗ್ರಹಿಸಿ, ಅವುಗಳಿಂದ ತಮ್ಮ ಪರವಾದ ಒಂದು ತಲೆಸವರುವ ವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಇದುವರೆಗೆ ಅದರಲ್ಲಿ ಯಶಸ್ವಿಯಾಗಿಲ್ಲ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಿಶ್ಲೇಷಣೆ -ವೀರಶೈವ ಧರ್ಮ ವಚನಗಳ ಆವಿಷ್ಕಾರದ ಪ್ರಭಾವ Next