"ಕರ್ನಾಟಕ ಗಾಂಧಿ" ಹರ್ಡೇಕರ ಮಂಜಪ್ಪ (1886-1947)

*

ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ

ಬನವಾಸಿಯ ಬಡಕುಟುಂಬವೊಂದರಲ್ಲಿ ಫೆಬ್ರವರಿ ೧೮ ೧೮೮೬ ರಂದು ಜನನ ತಂದೆ ಮಧುಕೇಶ್ವರಪ್ಪ. ೧೯೦೩ರಲ್ಲಿ ಕನ್ನಡ ಮುಲ್ಕೀ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭ ಸಂಬಳ ೭ ರೂಪಾಯಿ ಪ್ರತಿ ತಿಂಗಳಿಗೆ. ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ ವಾರ ಪತ್ರಿಕೆ ಪ್ರಕಟನೆಯ ಆರಂಭ. ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೫ನೆ ವಯಸ್ಸಿನಲ್ಲಿ) ನಿರ್ಧಾರ ಹಾಗೂ ಬ್ರಹ್ಮ ಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭ ಉಪ್ಪು, ಹುಳಿ, ಖಾರ ಹಾಗು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸಿದರು. ೧೯೧೧ ರಲ್ಲಿ ದಾವಣಗೆರೆಯಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳವರ ಸಹಕಾರದೋಂದಿಗೆ ಶ್ರಾವಣ ಉಪನ್ಯಾಸಮಾಲೆ (ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮ) ಪ್ರಾರಂಭ. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು.

Karnataka Gandhi Hardekar Manjappa, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ

೧೯೧೩ರಲ್ಲಿ ಆಧುನಿಕ ರೀತಿಯಲ್ಲಿ ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಪ್ರಾರಂಭ. ೧೯೧೫ರಲ್ಲಿ ’ಸ್ವಕರ್ತವ್ಯ ಸಿದ್ಧಾಂತ’ ಪ್ರಥಮ ಗ್ರಂಥ ಪ್ರಕಟನೆ. ೧೯೧೯ರಲ್ಲಿ ಗಾಂಧೀಜಿಯವರ ಕಾರ್ಯ ಚಟುವಟಿಕೆಯಿಂದ ಪ್ರಭಾವಿತ. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ’ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟನೆ.

೧೯೨೨ರಲ್ಲಿ ’ಸತ್ಯಾಗ್ರಹ ಧರ್ಮ’ ಗ್ರಂಥ ಪ್ರಕಟನೆ ಹಾಗೂ ಹುಬ್ಬಳ್ಳಿಯಲ್ಲಿ ’ಸತ್ಯಾಗ್ರಹ ಸಮಾಜ’ ಸ್ಥಾಪನೆ.

೧೯೨೩ ಹರಿಹರದ ಬಳಿ ತುಂಗಭದ್ರಾ ನದಿ ತೀರದಲ್ಲಿ ’ಸತ್ಯಾಗ್ರಹ ಆಶ್ರಮ’ಸ್ಥಾಪನೆ.

೧೯೨೪ ’ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ಮಾರ್ಚ ತಿಂಗಳಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ವಾಸ್ತವ್ಯ. ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಅಧಿವೇಶನಕ್ಕೆ ’ಬಸವೇಶ್ವರ ಸೇವಾದಳ’ ದೊಂದಿಗೆ ಪ್ರಯಾಣ ಹಾಗೂ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಗಾಂಧೀಜಿಯವರಿಗಿತ್ತಿದ್ದು.

೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ ಹಾಗೂ ಜನರಲ್ಲಿ ಬೇರು ಬಿಟ್ಟ ದುಶ್ಚಟಗಳ ನಿರ್ಮೂಲನಕ್ಕಾಗಿ ದೇಶೀ ಚಳವಳಿಯ ಆರಂಭ.

೧೯೨೬ ’ಬಸವ ಭೋಧಾಮೃತ’ ಗ್ರಂಥ ಪ್ರಕಟನೆ.

೧೯೨೭ ಮಾರ್ಚ್ ೨೭ರಂದು ಕಲಬುರ್ಗಿಯಲ್ಲಿ ಗಾಂಧೀಜಿಯವರನ್ನು ಕಂಡು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮಾರ್ಗ ದರ್ಶನ ಕೋರಿಕೆ. ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ.

೧೯೩೧ ’ಶರಣ ಸಂದೇಶ’ ವಾರಪತ್ರಿಕೆ ಪ್ರಕಟನೆಯ ಆರಂಭ.

೧೯೩೫ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭ.

೧೯೩೮ ’ಶುದ್ಧಿ ಮತ್ತು ಸಂಘಟನೆ’ ಹಾಗೂ ’ವಚನಕಾರರ ಸಮಾಜ ರಚನೆ’ ಗ್ರಂಥಗಳ ಪ್ರಕಟನೆ.

೧೯೪೨ ಯುದ್ಧ ಸಮಯದಲ್ಲಿ ಕಾಗದದ ಅಭಾವ, ಕೈ ಕಾಗದ ತಯಾರಿಸಿ ’ಶರಣ ಸಂದೇಶ’ ಪ್ರಕಟನೆಯ ಮುಂದುವರಿಸುವಿಕೆ.

೧೯೪೭ ಜನವರಿ ೩ ರಂದು ಲಿಂಗೈಕ್ಯರಾದರು.

ಶರಣ ಹರ್ಡೇಕರ ಮಂಜಪ್ಪನವರನ್ನು ಕುರಿತು

ಪೂಜ್ಯ ಹರ್ಡೇಕರ ಮಂಜಪ್ಪನವರು ಒಂದು ಹಿರಿಯ ವಿಭೂತಿ ವ್ಯಕ್ತಿ.

-ಕುವೆಂಪು

ಮಂಜಪ್ಪ ಹರ್ಡೇಕರರು ಕರ್ನಾಟಕದಲ್ಲಿ ಈಚೆಗೆ ಆಗಿಹೋದ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕರ್ತರಲ್ಲಿ ಪ್ರಮುಖರಾಗಿದ್ದರು. ಅವರ ಭಾಷಣಗಳು ಉದ್ಭೋಧಕವಾಗಿಯೂ ಹೃದಯವನ್ನು ಸ್ಪರ್ಶಿಸುವಂಥವೂ ಇರುತ್ತಿದ್ದವು.

- ಫ. ಗು. ಹಳಕಟ್ಟಿಯವರು

ಮಂಜಪ್ಪನವರು ಮುಖ್ಯತ: ಸಾತ್ವಿಕರು, ಸಜ್ಜನರು ಸಂಭಾವಿತರು, ಸುಶೀಲರು, ಸ್ಪಷ್ಟವಾದಿಗಳು, ಸಹನಶೀಲತೆಯುಳ್ಳವರು, ಸಾಹಸ ವೃತ್ತಿಯವರು. ಸಾಧುಗಳು, ಅವರ ದೊಡ್ಡ ಗುಣವೆಂದರೆ ನಿರಹಂಕಾರ ವೃತ್ತಿ.

-ಅಲೂರ ವೆಂಕಟರಾಯರು

ಮಂಜಪ್ಪನವರು ಹುಟ್ಟಾ ಬೋಧಕರು, ಶಿಕ್ಷಕರು, ಸುಧಾರಕರು. ಅವರು ಸ್ವಭಾವತ: ಪ್ರಯೋಗ ಶರಣರು ಅವರ ಕ್ರಿಯೆ ಆದಕ್ಕೆ ಬೇಕಾದ ಜ್ಞಾಯೋದಯವೇ ನಮ್ಮ ನಾಡಿನ ಭಾಗ್ಯೋದಯ.

-ದ. ರಾ. ಬೇಂದ್ರೆಯವರು

ತಮ್ಮ ನಿಸರ್ಗದತ್ತವಾದ ಬುದ್ಧಿ ವೈಭವ, ವಕ್ತೃತ್ವಶಕ್ತಿ, ತ್ಯಾಗ ಬುದ್ಧಿ, ಸೇವಾಧರ್ಮ ಮೊದಲಾದ ಸದ್ಗುಣಗಳ ಪರಂಪರೆಯಿಂದ ತಪಸ್ವಿ ಮಂಜಪ್ಪನವರು ಕನ್ನಡ ಜನಾಂಗಕ್ಕೆ ಸಲ್ಲಿಸಿದ ಸೇವೆಯು ಆಪಾರವಾಗಿದ.

-ಮುದವೀಡು ಕೃಷ್ಣರಾಯರು

ಮಂಜಪ್ಪನವರ ಮಾತಿನಲ್ಲಿ ಜನರನ್ನು ಹುರಿದುಂಬಿಸುವ ಮಂತ್ರಶಕ್ತಿಯಿತ್ತು. ಅವರ ಲೇಖನಗಳಿಂದ ಅನೇಕರು ಹೊಸದೃಷ್ಟಿಯನ್ನು ಪಡೆದುಕೊಂಡರು.

-ಶಂ. ಬಾ. ಜೋಶಿಯವರು

ಮಂಜಪ್ಪನವರ ಪರಿಶುದ್ಧವಾದ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ಒಂದು ದಾರಿ ದೀಪ.

-ಎಸ್. ಆರ್‌. ಕಂಠಿ

ಮಂಜಪ್ಪನವರು ಅಭಿನವ ಸರ್ವಜ್ಞರು, ಅವರು ಬರೆದುದು ಜನಾಂಗ ನಿರ್ಮಾಪಕ ಜೀವಂತ ಸಾಹಿತ್ಯ -ಜ್ವಲಂತ ಸಾಹಿತ್ಯ, ಜೀವನದಾಯಿನೀ ಸಾಹಿತ್ಯ

-ಸಿದ್ಧಯ್ಯ ಪುರಾಣಿಕರು

ಪರಿವಿಡಿ (index)
*
Previousಹಿರೇಮಠ ಸಂಸ್ಥಾನ ಭಾಲ್ಕಿಕಲ್ಯಾಣ ಕ್ರಾಂತಿ Kalyana RevolotionNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.