Previous ಲಂಡನ್‌ನಲ್ಲಿ ಧರ್ಮಗುರು ಬಸವೇಶ್ವರ ಪ್ರತಿಮೆ ವಿಶ್ವಕಲ್ಯಾಣ ಮಿಷನ್‌ ಚಾರಿಟಬಲ್‌ (ರಿ) ಟ್ರಸ್ಟ್‌ Next

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ (ಎಂ.ಎಂ.ಕಲಬುರಗಿ)

*
Dr. M. M. Kalburgi

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮-೨೦೧೫ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧೃಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ.

ಕನ್ನಡದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತ ಪ್ರತಿಶಾಸ್ತ್ರ, ಗ್ರಂಥ ಸಂಪಾದನಾಶಾಸ್ತ್ರ, ನಾಮಶಾಸ್ತ್ರ, ಮುಂತಾದ ಹಲವಾರು ಸಂಶೋಧನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಲಬುರ್ಗಿಯವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಗುಬ್ಬೆವಾಡದಲ್ಲಿ ೧೯೩೮ರ ನವಂಬರ್ ೨೮ ರಂದು. ತಂದೆ ಮಡಿವಾಳಪ್ಪ, ತಾಯಿ ಗುರವ್ವ. ಪ್ರಾಥಮಿಕ ವಿದ್ಯಾಭ್ಯಾಸ ಯರಗಲ್ ಶಾಲೆಯಲ್ಲಿ, ಮುಲ್ಕಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ. ಸಿಂಧಗಿಯಲ್ಲಿ ಎಸ್.ಎಸ್.ಎಲ್.ಸಿ. ಪ್ರಥಮ ರ್ಯಾಂಕ್ ವಿದ್ಯಾರ್ಥಿ. ಬಿ.ಎ. ಪದವಿ ಪಡೆದ ನಂತರ ಎಂ.ಎ. ಓದಲು ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ. ಡಾ. ಆರ್.ಸಿ.ಹಿರೇಮಠ ರವರ ಮಾರ್ಗದರ್ಶನದಲ್ಲಿ ‘ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಮಹಾ ಪ್ರಬಂಧ ಮಂಡಿಸಿ ಪಡೆದ ಡಾಕ್ಟರೇಟ್. ನಂತರ ಇವರು, ಸಾಹಿತ್ಯ ಮಾರ್ಗಕ್ಕಿಂತ ಸಂಶೋಧನಾ ಮಾರ್ಗವನ್ನೇ ಆಯ್ದುಕೊಂಡರು.

೧೯೬೨ ರಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ೧೯೬೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇರ್ಪಡೆಯಾದರು. ಕನ್ನಡ ಪೀಠವನ್ನು ಬೆಳೆಸುವುದರ ಜೊತೆಗೆ ತಾವೂ ಬೆಳೆದರು. ಅಧ್ಯಾಪಕರಾಗಿ ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೋಧಿಸತೊಡಗಿದ ನಂತರ ಸಂಶೋಧನೆಯಲ್ಲಿ ನಿರತರಾದರು. ಕನ್ನಡ ಅಧ್ಯಯನ ಪೀಠದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಬಸವ ಪೀಠದ ಪ್ರಾಧ್ಯಾಪಕರಾಗಿ, ಕನ್ನಡ ಪೀಠದ ಮುಖ್ಯಸ್ಥರಾಗಿದಷ್ಟೇ ಅಲ್ಲದೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದರು.

ಇವರ ಮೊದಲ ಸಂಶೋಧನಾ ಕೃತಿ ‘ಬಸವಣ್ಣನವರನ್ನು ಕುರಿತ ಶಾಸನಗಳು’ (೧೯೬೮); ಶಾಸನಗಳಲ್ಲಿ ಶಿವಶರಣು (೧೯೭೦); ಶಾಸನ ವ್ಯಾಸಂಗ; ಸಮಾಧಿ, ಬಲಿದಾನ, ವೀರಮರಣ, ಸ್ಮಾರಕಗಳು (೧೯೮೦); ಮೊದಲಾದ ೧೧ ಶಾಸನ ಗ್ರಂಥಗಳು. ಕರ್ನಾಟಕ ಕೈಫಿಯತ್ತುಗಳು ಮತ್ತು ಶ್ರೀ ತೋಂಟಾದಾರ್ಯ ಸಂಸ್ಥಾನ ಮಠದ ದಾಖಲೆ ಸಾಹಿತ್ಯ ಸಂಪುಟಗಳು

ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರ, ಶಬ್ದಮಣಿ ದರ್ಪಣ, ಪ್ರತಿಬಿಂಬ, ಕನ್ನಡ ಸಂಶೋಧನ ಶಾಸ್ತ್ರ ಮೊದಲಾದ ೬ ಶಾಸ್ತ್ರ ಸಂಬಂಧಿ ಗ್ರಂಥಗಳು-

ಮಲ್ಲಿನಾಥ ಪುರಾಣ ಸಂಗ್ರಹ, ಶಿವಯೋಗ ಪ್ರದೀಪಿಕಾ, ಇಮ್ಮಡಿ ಚಿಕ್ಕ ಭೂಪಾಲ ಸಾಂಗತ್ಯ, ಬಸವಣ್ಣನವರ ಟೀಕಿನ ವಚನಗಳು, ಕೊಂಡ ಕಾಳಿ ಕೇಶಿ ರಾಜ ಕೃತಿಗಳು, ಮುಂತಾದ ೪೧ ಪ್ರಾಚೀನ ಗ್ರಂಥ ಸಂಪಾದನೆಗಳು-

ಅರಟಾಳ ರುದ್ರಗೌಡರ ಚರಿತ್ರೆ, ಫ.ಗು. ಹಳಕಟ್ಟಿ ಆತ್ಮಚರಿತ್ರೆ, ಷಣ್ಮುಕಪ್ಪ ಅಂಗಡಿಯವರ ಜೀವನ ಚರಿತ್ರೆ, ದಿಗಂಬರ, ಬೆಳ್ವೊಲ, ಕೆಳದಿ ಸಂಸ್ಥಾನ, ಸ್ವಾದಿ ಅರಸು ಮನೆತನ, ಬೀಳಗಿ ಅರಸು ಮನೆತನ ಮೊದಲಾದ ೨೮ ಸಂಪಾದಿತ ಆಧುನಿಕ ಗ್ರಂಥಗಳು –

ಉತ್ತರ ಕರ್ನಾಟಕ ಜಾನಪದ ಸಾಹಿತ್ಯ, ಜಾನಪದ ಮಾರ್ಗ ಎಂಬ ಎರಡು ಜಾನಪದ ಗ್ರಂಥಗಳು-

ನೀರು ನೀರಡಿಸಿತ್ತು (ಕವನ ಸಂಕಲನ), ಕೆಟ್ಟಿತ್ತು ಕಲ್ಯಾಣ, ಖರೇ ಖರೇ ಸಂಗ್ಯಾಬಾಳ್ಯ (ಸಣ್ಣಾಟ) ಮುಂತಾದ ಸೃಜನ ಶೀಲ ಕೃತಿಗಳು ಸೇರಿ ೧೦೦ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟಿದ್ದಾರೆ.

‘ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ’ ಎಂಬ ನಂಬಿಕೆಯಿಂದ ಸತ್ಯಾನ್ವೇಷಣೆಯ ದುರ್ಗಮ ಹಾದಿಯಲ್ಲಿ ನಡೆದವರು. ಹಸ್ತಪ್ರತಿಗಳ ಶೋಧಕ್ಕಾಗಿ ಲಂಡನ್, ಆಕ್ಸ್ ಫರ್ಡ್, ಕೇಂಬ್ರಿಜ್ ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿದ್ದಾರೆ.

ಸಂಶೋಧನೆ, ಸಂಪಾದನೆಯ ಜೊತೆಗೆ ಹಲವಾರು ಸಂಸ್ಥೆಗಳ ಯೋಜನೆಗಳ ರೂವಾರಿ. ಗದುಗಿನ ತೋಂಟದಾರ್ಯ ಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’, ಬೆಳಗಾವಿಯ ನಾಗನೂರು ಮಠದ ‘ಲಿಂಗಾಯತ ಅಧ್ಯಯನ ಅಕಾಡಮಿ’, ಶಿವಮೊಗ್ಗದ ಆನಂದ ಪುರ ಮಠದ ‘ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ’, ನಿಡುಸೋಸಿಯ ‘ಶರಣ ಸಂಸ್ಕೃತಿ ಅಕಾಡಮಿ’, ಮೈಸೂರಿನ ಸುತ್ತೂರು ಮಠದ ಸಮಗ್ರ ‘ಸ್ವರ ವಚನ ಮಾಲೆ’ ಜೊತೆಗೆ ಕರ್ನಾಟಕ ಸರಕಾರ ಪ್ರಕಟಿಸಿರುವ ‘ಸಮಗ್ರ ವಚನ ಸಂಪುಟ’ ಮತ್ತು ‘ಸಮಗ್ರ ದಾಸ ಸಾಹಿತ್ಯ’ ಯೋಜನೆಯ ರೂವಾರಿ.

ಸಂದ ಪ್ರಶಸ್ತಿ ಗೌರವಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದೆಹಲಿಯ ಕನ್ನಡ ವಿದ್ಯಾರಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.

ಪಂಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಜೊತೆಗೆ ನೀಡಿದ ಒಂದು ಲಕ್ಷ ರೂ. ಹಣವನ್ನು ಸರಕಾರಕ್ಕೆ ಹಿಂದಿರುಗಿಸಿ ಪಂಪನ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆಗೆ ಕಾರಣರಾದರು.

೧೯೯೮ ರಲ್ಲಿ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗ್ರಂಥಗಳು ‘ಕಲುಬುರ್ಗಿ – ೬೦’ ಹಾಗೂ ‘ಮಹಾಮಾರ್ಗ’.

ಕಲಬುರ್ಗಿಯವರೆಂದರೆ ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆಗಳ ಸಂಗಮ. ಜೊತೆಗೆ ಸಮರ್ಥ, ನಿರ್ಭೀತ ಮತ್ತು ತೀಕ್ಷ್ಣ ದೃಷ್ಟಿಯ ಸಂಶೋಧಕರು.

'ಬಸವಣ್ಣನವರ ಕುರಿತ ಶಾಸನಗಳು' ಎಂ.ಎಂ.ಕಲಬುರಗಿ ಅವರ ಮೊದಲ ಕೃತಿ. 41 ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿರುವ ಅವರು, 100 ಕೃತಿಗಳನ್ನು ರಚನೆ ಮಾಡಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.

ಕನ್ನಡದ ಜನಪ್ರಿಯ ವಚನ ಸಾಹಿತ್ಯದ ಅದ್ಭುತ ವಿದ್ವಾಂಸ, ಸಂಶೋಧಕ ಮತ್ತು ಭಾರತದ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಶಿಕ್ಷಣತಜ್ಞರನ್ನು 30 ಆಗಸ್ಟ್ 2015 ರಂದು ಧಾರವಾಡದ ಕಲ್ಯಾಣನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಿಗ್ಗೆ 8.40 ಕ್ಕೆ ಅಪರಿಚಿತ ದೂಕುಧಾರಿಗಳಿಂದ ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯು ಎಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ (BBC, CNN, ನ್ಯಾಷನಲ್ ನ್ಯೂಸ್....) ಸುದ್ದಿಗಳಲ್ಲಿ ಸದ್ದು ಮಾಡಿತು.

ಪರಿವಿಡಿ (index)
*
Previous ಲಂಡನ್‌ನಲ್ಲಿ ಧರ್ಮಗುರು ಬಸವೇಶ್ವರ ಪ್ರತಿಮೆ ವಿಶ್ವಕಲ್ಯಾಣ ಮಿಷನ್‌ ಚಾರಿಟಬಲ್‌ (ರಿ) ಟ್ರಸ್ಟ್‌ Next