Previous ವಚನಗಳ ಆವಿಷ್ಕಾರದ ಪ್ರಭಾವ ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ Next

ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು

*

ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಇತರ ಕೆಲವು ವಾದಗಳು

೧. ವೀರಶೈವರು ವೀರಭದ್ರನ ಅನುಯಾಯಿಗಳೆ?
೨. ವೀರಶೈವರು ಮತ್ತು ವೀರವತಿಗಳು ಒಂದೇ?
೩. ವೀರಶೈವರು ವೀರಮಾಹೇಶ್ವರಂತೆಯೇ?
೪. ಆರಾಧ್ಯರು ವೀರಶೈವರು?

ಈ ಎರಡನೆಯ ಭಾಗದಲ್ಲಿ ಈ ವಾದಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

೧. ವೀರಶೈವರು ವೀರಭದ್ರನ ಅನುಯಾಯಿಗಳೆ?

ವೀರಶೈವರು ವೀರಭದ್ರನ ಅನುಯಾಯಿಗಳು ಎಂಬುದನ್ನು ಸೂಚಿಸುವ ಕೆಲವೊಂದು ಆಧಾರಗಳಿವೆ. ಸರ್ವವಿದಿತವಾಗಿರುವಂತೆ ವೀರಭದ್ರನು ಪರಶಿವನ ಶಿಷ್ಯ (ಅಥವಾ ಪ್ರಮಥ).

ವೀರಶೈವರ ಗೋತ್ರಗಳಲ್ಲಿ ವೀರಭದ್ರನನ್ನು ಪ್ರತಿನಿಧಿಸುವ ವೀರಗೋತ್ರವೂ ಒಂದು. ಹಾಗೆಯೇ ನಂದಿ, ಶೃಂಗಿ, ರೇಣುಕ, ದಾರುಕ ಇವರೂ ಸಹ ವೀರಶೈವರ ಗೋತ್ರಕರ್ತರೇ ಆಗಿದ್ದಾರೆ. ವೀರಶೈವರು ಈ ಗೋತ್ರಗಳನ್ನು ಅನುಸರಿಸುತ್ತಾರೆಂಬುದು ಎಲ್ಲರಿಗೂ ತಿಳಿದ ಸಂಗತಿ, ಗೋತ್ರ, ಸೂತ್ರ, ಸೂತಕ ಇತ್ಯಾದಿಗಳನ್ನು ನಿರಾಕರಿಸುವ ಲಿಂಗಾಯತರಿಗಿಂತ ವೀರಶೈವರು ಬೇರೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ.

ವೀರಭದ್ರನು ಹಿಂದೂ ಕಲ್ಪನೆ ಮತ್ತು ಪುರಾಣಗಳ ವಸ್ತು. ಅವನು ಶಿವನ ಒಂದು ಅವತಾರ. ಶಿವನ ಪತ್ನಿ ಸತಿಯ ಆತ್ಮಹತ್ಯೆಗೆ ಕಾರಣನಾದ ದಕ್ಷನ ಯಜ್ಞವನ್ನು ಧ್ವಂಸಗೊಳಿಸಿ, ಅವನ ಶಿರಚ್ಛೇದನ ಮಾಡಿದವನು.

ವೀರಭದ್ರನು ಬಾಳೆಹಳ್ಳಿಯಲ್ಲಿರುವ ರಂಭಾಪುರಿ ವೀರಶೈವ ಪೀಠದ ಸ್ಥಾನದೈವ. ರಂಭಾಪುರಿ ಸ್ವಾಮಿಗಳು ಪ್ರಮುಖ ಸಂದರ್ಭಗಳಲ್ಲಿ ವೀರಭದ್ರನಿಗೆ ಪೂಜೆ ಸಲ್ಲಿಸುತ್ತಾರೆ.

ವೀರಭದ್ರನಿಗೆ ಸಂಬಂಧಿಸಿದಂತೆ ಸಂಪ್ರದಾಯದ ನಾಲ್ಕು ಪದ್ಧತಿಗಳಿವೆ. ಜನಪದ ನೃತ್ಯ ವೀರಗಾಸೆ, ಅಗ್ನಿಕುಂಡ ಹಾಯುವುದು, ಗುಗ್ಗಳಸೇವೆ ಮತ್ತು ಪುರವಂತಿಕೆ, ಸಾಮಾನ್ಯವಾಗಿ ಇವುಗಳನ್ನು ಸೇವೆಯ ರೂಪದಲ್ಲಿ ಗೊಡಚಿ, ಮುಚಖಂಡಿ, ಯಡೂರು ಮೊದಲಾದ ಕಡೆ ವೀರಭದ್ರ ದೇವಾಲಯಗಳಲ್ಲಿ ಆಚರಿಸಲಾಗುತ್ತಿದೆ.

ವೀರಭದ್ರನು ವೀರಶೈವರ ಪ್ರವರ್ತಕನೆಂದು ಡಾ. ಜ.ಚ.ನಿ. ಅವರು ಹೇಳುತ್ತಾರೆ. ಹಾಗೆಯೇ ಮೊದಲ ಭಾಗದಲ್ಲಿ ಪರಾಮರ್ಶಿಸಿರುವ ಗ್ರಂಥದಲ್ಲಿ ಡಾ. ಸವದತ್ತಿಮಠ ಅವರೂ ಸಹ ವೀರಭದ್ರನು ವೀರಶೈವರ ಮೂಲಪುರುಷನೆಂದೇ ಹೇಳುತ್ತಾರೆ.

ವೀರಶೈವರು ವೀರಭದ್ರನ ನೇರ ಅನುಯಾಯಿಗಳಾಗಿದ್ದರೆ ಅವರದೊಂದು ಚಿಕ್ಕ ಗುಂಪಾಗುತ್ತದೆ. ವಾಸ್ತವವಾಗಿ, ಅವರ ಅನೇಕ ಆಚರಣಾ ಪದ್ಧತಿಗಳು ಮತವಿಧಿಯ ಸ್ವರೂಪದವೇ ಆಗಿವೆ. ಈ ಯಾವ ಪದ್ಧತಿ ಅಥವಾ ಆಚರಣೆಗಳನ್ನೂ ಲಿಂಗಾಯತರು ಒಪ್ಪುವುದೂ ಇಲ್ಲ; ನಂಬುವುದೂ ಇಲ್ಲ.

೨. ವೀರಶೈವರು ವೀರವ್ರತಿಗಳೂ ಒಂದೇ?

ಸಿದ್ಧಾಂತ ಶಿಖಾಮಣಿಯು ವೀರಶೈವರನ್ನು ವೀರವ್ರತಿಗಳೆಂದು ಕರೆಯುತ್ತದೆ. ಕೆಲವೊಂದು ವೀರವ್ರತಗಳನ್ನು ಆಚರಿಸುವವನು ವೀರವ್ರತಿ. ಅದೊಂದು ಗುಣವಾಚಕ ವಾಗಿ ಬಳಕೆಯಾಗಿದೆ. ಈಗಾಗಲೇ ಹೇಳಿರುವಂತೆ, ಕೊಂಡಗುಳಿ ಕೇಶಿರಾಜನು ಅರವತ್ತೆರಡು ವ್ರತಗಳನ್ನು ಹೇಳಿದ್ದಾನೆ. ಅವುಗಳಲ್ಲಿ ಅನೇಕವು ಬಾಲಿಶವಾಗಿವೆ. ವೀರಶೈವನಾದವನು ತನ್ನ ಹಸುಗಳಿಗೆ ನಂದಿಯ ಮುದ್ರೆ ಒತ್ತಬೇಕು. ಅಷ್ಟೇ ಅಲ್ಲ; ತನ್ನ ಮನೆ, ತನ್ನ ಭೂಮಿ ಮತ್ತು ತನ್ನ ಪ್ರತಿಯೊಂದು ಸಾಧನ ಸಲಕರಣೆಯ ಮೇಲೂ ನಂದಿಯ ಮುದ್ರೆ ಇರಬೇಕು. ವ್ರತಿಗಳಲ್ಲದವರ ಮನೆಯಲ್ಲಿ ಊಟ ಮಾಡಬಾರದು. ಧರಿಸಿದ ಲಿಂಗ ಕಳೆದುಕೊಂಡರೆ, ಆತ ಮರಣ ಹೊಂದಬೇಕು. ನೆಲವನ್ನು ಅಗೆಯುವ, ತಲೆಹೊರೆಗಳನ್ನು ಹೊರುವ ಇತ್ಯಾದಿ ದೈಹಿಕ ಶ್ರಮದ ಕೆಲಸಗಳನ್ನು ಮಾಡಕೂಡದು. ಇಂತಹ ಹಾಸ್ಯಾಸ್ಪದ ವ್ರತಗಳನ್ನು ಕೇಶಿರಾಜ ಹೇಳಿದ್ದಾನೆ.

ವೀರವ್ರತಿಗಳನ್ನು ಬಸವಣ್ಣನವರ ನಾಲೈದು ವಚನಗಳಲ್ಲೂ ಪ್ರಸ್ತಾಪಿಸಲಾಗಿದೆ. ಆದರೆ ಅದು ವ್ಯಂಗ್ಯ ಪ್ರಸ್ತಾಪ! ಅವರ ಒಂದು ವಚನ ಹೀಗಿದೆ:

ವೀರವ್ರತಿ ಭಕ್ತನೆಂದು ಹೊಗಳಿಕೊಂಬರಿ ಕೇಳಿರಯ್ಯಾ
ವೀರನಾದಡೆ ವೈರಿಗಳು ಮೆಚ್ಚಬೇಕು
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು
ಭಕ್ತನಾದಡೆ ಜಂಗಮವೆ ಮೆಚ್ಚಬೇಕು
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ (ಸ.ವ.ಸಂ. ೧, ವ. ೧೪೬, ಪು. ೧೬೮)

ಹೀಗೆಯೇ ಅಲ್ಲಮಪ್ರಭು, ರೇಕಮ್ಮ, ರೆಮ್ಮವ್ವ ಮೊದಲಾದ ಕೆಲವು ಶರಣರೂ ವೀರವ್ರತಿಗಳನ್ನು ವ್ಯಂಗ್ಯರೀತಿಯಲ್ಲಿ ಪ್ರಸ್ತಾಪಿಸುತ್ತಾರೆ. ಈ ವಚನಗಳಿಂದ ಹನ್ನೆರಡನೆಯ ಶತಮಾನದ ಸುಮಾರಿನಲ್ಲಿ ಈ ವೀರವ್ರತಿಗಳ ಒಂದು ಪದ್ಧತಿಯಿತ್ತು ಎಂಬುದು ತಿಳಿದುಬರುತ್ತದೆ.

ಡಾ. ಎಂ.ಎಂ. ಕಲಬುರ್ಗಿ ಅವರು ಹೇಳಿರುವಂತೆ, ವೀರವ್ರತಿಗಳು ದೇವಸ್ಥಾನಗಳು, ಅಗ್ರಹಾರಗಳು ಮುಂತಾದ ಶೈವಸಂಸ್ಥೆಗಳನ್ನು ರಕ್ಷಿಸುವ ಭದ್ರತಾ ದಳವಾಗಿದ್ದರು. ಶಿವಾಲಯಗಳು, ಶಿವಗ್ರಾಮಗಳು, ಶಿವನಮೂರ್ತಿಗಳು, ದೇವರ ಆಭರಣಗಳು ಮತ್ತು ಆಸ್ತಿಗಳ ರಕ್ಷಣೆ ನೋಡಿಕೊಳ್ಳುವುದು ಅವರ ವ್ರತಗಳಲ್ಲಿ ಸೇರಿತ್ತು.

ಕದಂಬರ ಕಾಲದಿಂದ ಕರ್ನಾಟಕದಲ್ಲಿ ಬ್ರಾಹ್ಮಣರ ವಾಸಕ್ಕೆ ಮೀಸಲಾದ ಅಗ್ರಹಾರಗಳೆಂಬ ಹೆಸರಿನ ಅನೇಕ ಬ್ರಾಹ್ಮಣ ವಸತಿಸ್ಥಳಗಳಿದ್ದವೆಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಅಂತಹ ವಸತಿಸ್ಥಳಗಳಿಗೆ ಧಾಳಿಕಾರರ ವಿರುದ್ಧ ರಕ್ಷಣೆಯ ಅಗತ್ಯವಿತ್ತು. ವೀರವ್ರತಿಗಳು ಆ ರಕ್ಷಣೆಯ ಕಾರ್ಯವನ್ನು ನಿರ್ವಹಿಸಿದರು.

ಶಿವ ಅಥವಾ ಪಾರ್ವತಿಯರನ್ನು ಅಥವಾ ಅವರ ಗಣಗಳನ್ನು ಟೀಕಿಸುವ ಅಥವಾ ಪರಿಹಾಸ್ಯ ಮಾಡುವವರನ್ನು ಶಿಕ್ಷಿಸುವ ಕೆಲಸವೂ ವೀರವ್ರತಿಗಳದ್ದಾಗಿರಬೇಕು. ಅದನ್ನು ನಿರ್ವಹಿಸಲಾಗದ ದುರ್ಬಲ ವೀರವ್ರತಿಗಳು ತಮ್ಮ ಕರ್ತವ್ಯ ಪಾಲಿಸದಿದ್ದುದಕ್ಕಾಗಿ ಆ ಸ್ಥಳವನ್ನು ಬಿಟ್ಟು ಪ್ರಾಯಶ್ಚಿತ್ತವಾಗಿ ದೇಹದಂಡನೆ ಮಾಡಿಕೊಳ್ಳಬೇಕಾಗಿತ್ತು.

ಅಂತಹ ಕರ್ತವ್ಯ ಪಾಲನೆಯೇ ಅವರ ವ್ರತವಾಗಿತ್ತು; ವೃತ್ತಿಯಾಗಿತ್ತು. ಅಂತಹ ವೃತ್ತಿಪರ ವ್ರತಪಾಲಕರನ್ನು ಇಂದಿನ ವೀರಭದ್ರ ದೇವಾಲಯಗಳಲ್ಲೂ ನಿರ್ದಿಷ್ಟ ವೇತನದ ಮೇಲೆ ನೇಮಿಸಿಕೊಂಡಿರುವುದನ್ನು ಕಾಣುತ್ತೇವೆ. ಅವರು ವೀರಶೈವ ಕುಟುಂಬಗಳಲ್ಲಿ ಮದುವೆ, ಗೃಹಪ್ರವೇಶ, ಅಭಿಷೇಕ ಇತ್ಯಾದಿ ಧಾರ್ಮಿಕ ಆಚರಣೆ ಸಂದರ್ಭಗಳಲ್ಲಿ ಗುಗ್ಗಳ ಸೇವೆ, ವೀರಗಾಸೆ ಕುಣಿತಗಳನ್ನು ಮಾಡುತ್ತಾರೆ. ಈ ದೃಷ್ಟಿಯಿಂದ ಸಹ ವೀರಶೈವರನ್ನು ವೀರವ್ರತಗಳ ವೃತ್ತಿಪಾಲಕರೆಂದು ಕರೆಯುವುದು ಸೂಕ್ತವಾಗೇ ಇದೆ.

ವೀರಶೈವರು ತಾವು ವೀರವ್ರತಿಗಳೆಂದು ಕರೆದುಕೊಳ್ಳುವುದು ಕುತೂಹಲಕಾರಿಯಾಗಿದೆ. ಆದರೆ ವೀರವ್ರತಿಗಳ ಸಾಹಿತ್ಯದಲ್ಲಿ ಅವರು ತಾವು ವೀರಶೈವರೆಂದು ಕರೆದುಕೊಂಡಿರುವ ಯಾವುದೇ ನಿದರ್ಶನವಿಲ್ಲ. ಹಾಗಾಗಿ, ನಂತರದ ಕಾಲದಲ್ಲಿ ವೀರಶೈವರು, ವೀರವ್ರತಿಗಳು ಆಚರಿಸುತ್ತಿದ್ದ ಕೆಲವು ವ್ರತ(ವೃತ್ತಿ)ಗಳನ್ನು ನಕಲು ಮಾಡಿಕೊಂಡಿರುವ ಸಾಧ್ಯತೆ ಇದೆ. ವಾಸ್ತವವಾಗಿ ವೀರವ್ರತಿಗಳ ಪ್ರಾಚೀನ ಪದ್ಧತಿ ಹಿಂದೂ ಶೈವರಲ್ಲಿ ರೂಢಿಯಲ್ಲಿತ್ತು. ನಂತರ ಬಂದ ವೀರಶೈವರು ಕೆಲಮಟ್ಟಿಗೆ ಆ ಪದ್ಧತಿಯನ್ನೇ ಅನುಕರಿಸಿದ್ದಾರೆ.

ಈ ಮೊದಲೇ ಹೇಳಿರುವಂತೆ, ವೀರವ್ರತಿಗಳು ವೀರಶೈವರೇ ಎಂದು ಡಾ. ಎಂ. ಚಿದಾನಂದಮೂರ್ತಿ ಅವರು ಹೇಳುತ್ತಿದ್ದುದೂ ಸಹ ಸ್ವಾರಸ್ಯಕರವಾಗಿದೆ. ಅವರು ಹಾಗೆ ಹೇಳಲು ಅವರಿಗಿದ್ದ ಮುಖ್ಯ ಉದ್ದೇಶವೆಂದರೆ, ವೀರಶೈವರ ಪ್ರಾಚೀನತೆಯನ್ನು ಬಸವಣ್ಣನವರಿಗಿಂತ ಹಿಂದಕ್ಕೆ ಒಯ್ದು ವೀರಶೈವವು ಬಸವಣ್ಣನವರಿಗಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ಪ್ರತಿಪಾದಿಸುವುದಾಗಿತ್ತು. ಆದರೆ ಇಲ್ಲಿನ ಚರ್ಚೆಯ ಬೆಳಕಿನಲ್ಲಿ ವಿಚಾರ ಮಾಡಿದರೆ, ಚಿದಾನಂದಮೂರ್ತಿ ಅವರದು ಶುದ್ಧ ತಪ್ಪುವಾದವೆನ್ನುವುದು ಸ್ಪಷ್ಟವಾಗುತ್ತದೆ.

೩. ವೀರಶೈವರು ವೀರಮಾಹೇಶ್ವರಂತೆಯೇ?

ಡಾ. ಚಿದಾನಂದಮೂರ್ತಿ ಅವರು ತಮ್ಮ ಅನೇಕ ಕೃತಿಗಳಲ್ಲಿ ವೀರಶೈವರಂತೆಯೇ ವೀರಮಾಹೇಶ್ವರರು ಮತ್ತು ವೀರವ್ರತಿಗಳು ಒಂದೇ ಎಂದು ಹೇಳಿದ್ದಾರೆ. ಇದು ಅವರ ಮತ್ತೊಂದು ಅತ್ಯಂತ ತಪ್ಪು ಹೇಳಿಕೆ.

ಮಾಹೇಶ್ವರ ಅಥವಾ ವೀರಮಾಹೇಶ್ವರ ಶಬ್ದವನ್ನು ಅನೇಕ ಶಾಸನಗಳು ಮತ್ತು ಗ್ರಂಥಗಳಲ್ಲಿ ಆಗಾಗ ಬಳಸಲಾಗಿದೆ. ಅದು ಉನ್ನತರೆನ್ನುವ ಸಾಂಪ್ರದಾಯಕ ಶೈವಬ್ರಾಹ್ಮಣರನ್ನು ಕುರಿತದ್ದು. ಬಸವಣ್ಣ, ಚನ್ನಬಸವಣ್ಣ, ಮಡಿವಾಳ ಮಾಚಿದೇವರಂತಹ ಶರಣರ ವಚನಗಳಲ್ಲಿ ಮಾಹೇಶ್ವರ ಶಬ್ದದ ಬಳಕೆಯಾಗಿದೆ. ಅದು ಶೈವಭಕ್ತಿಯ ಸಂಪ್ರದಾಯ ಪಾಲಕರಿಗೆ ಸಂಬಂಧಿಸಿದೆ.

ಸಿದ್ಧಾಂತ ಶಿಖಾಮಣಿಯು ತನ್ನ ಐದನೆಯ ಅಧ್ಯಾಯದ ೧೯ರಿಂದ ೨೧ನೆಯ ಶ್ಲೋಕಗಳಲ್ಲಿ ವೀರವ್ರತಿಗಳು ಮತ್ತು ವೀರಮಾಹೇಶ್ವರರನ್ನು ಪ್ರತ್ಯೇಕಿಸಿದೆ. ಡಾ. ಚಿದಾನಂದಮೂರ್ತಿ ಅವರು ಈ ಶ್ಲೋಕಗಳನ್ನು ನೋಡದೆ ಇಲ್ಲ. ಆದರೂ ಅವೆರಡೂ ಒಂದೇ ಎಂದು ಹೇಳಿದ್ದಾರೆ. ಇದೂ ಸಹ ವೀರಶೈವವು ಬಸವಣ್ಣನವರಿಗಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ಸಮರ್ಥಿಸುವ ಉದ್ದೇಶವೇ ಆಗಿದೆ. ಆಗಲೇ ಹೇಳಿರುವಂತೆ ವೀರಶೈವವನ್ನು ಯಾರು, ಯಾವಾಗ ಸ್ಥಾಪಿಸಿದರು ಎಂಬುದು ಅವರಿಗೂ ಗೊತ್ತಿಲ್ಲ. ಹಾಗಾಗಿ ವೀರಶೈವರಂತೆಯೇ ವೀರವ್ರತಿಗಳು ಮತ್ತು ವೀರಮಾಹೇಶ್ವರರೂ ಒಂದೇ ಎನ್ನುವ ಪ್ರಾಸಂಗಿಕ ಪ್ರಸ್ತಾಪಕ್ಕೂ ಯಾವುದೇ ಅರ್ಥವಿಲ್ಲ.

ಈ ಹಿಂದೆ ಪರಾಮರ್ಶಿಸಿರುವ ಡಾ. ಸವದತ್ತಿಮಠ ಅವರ ಕೃತಿಯಲ್ಲಿ ವೀರಶೈವರಿಗಿಂತ ಮುಂಚೆ ವೀರವ್ರತಿಗಳು ಮತ್ತು ವೀರಮಾಹೇಶ್ವರ ಪದ್ಧತಿಗಳಿದ್ದವು ಎಂದು ಹೇಳಲಾಗಿದೆ. ಈ ಅಂಶವು ವಚನಕಾರರ ಅನೇಕ ವಚನಗಳಲ್ಲೇ ದೃಢೀಕರಿಸಲ್ಪಟ್ಟಿದೆ. ಆ ಪ್ರಕಾರ ಶೈವರಲ್ಲಿ ವೀರವ್ರತಿಗಳು, ವೀರಮಾಹೇಶ್ವರರು, ಗೋಸಾಯಿಗಳು ಇತ್ಯಾದಿ ಪಂಥಗಳು ೧೨ನೆಯ ಶತಮಾನಕ್ಕೆ ಮುಂಚೆ ಅಸ್ತಿತ್ವದಲ್ಲಿದ್ದವು ಎಂಬ ನಿರ್ಣಯಕ್ಕೆ ನಾವು ಬರಬಹುದು. ಆಕಸ್ಮಿಕವೆಂಬಂತೆ ಆ ಪಂಥಗಳ ಕೆಲವೊಂದು ಲಕ್ಷಣಗಳು ವೀರಶೈವರಿಗೆ ಸಲ್ಲಬಹುದು.

೪. ಆರಾಧ್ಯರು ವೀರಶೈವರೆ?

ಆಂಧ್ರಪ್ರದೇಶದಲ್ಲಿ ಇಂದಿಗೂ ಆರಾಧ್ಯರು ಎಂದು ಕರೆಯದಾಗಿರುವ ಒಂದು ಬ್ರಾಹ್ಮಣೀಯ ಒಳಪಂಗಡವಿದೆ ಎನ್ನುವುದು ವಾಸ್ತವ ಸಂಗತಿ. ಅವರು ಏಕರೂಪದ ಪರಶಿವನ ಮಹಾಭಕ್ತರು. ಇತ್ತೀಚೆಗೆ ನಿಧನವಾದ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶದ ಒಬ್ಬ ಆರಾಧ್ಯ ಬ್ರಾಹ್ಮಣರಾಗಿದ್ದರು. ಅವರ ಪೂರ್ಣ ಹೆಸರು ಶ್ರೀಪತಿಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ. ೧೨ನೆಯ ಶತಮಾನದ ಶ್ರೀಪತಿಪಂಡಿತ ಬ್ರಹ್ಮಸೂತ್ರಗಳಿಗೆ ಶ್ರೀಕರ ಭಾಷ್ಯ ಬರೆದವನು. ಅವನು ಆರಾಧ್ಯ ಬ್ರಾಹ್ಮಣರ ಮೂವರು ಪಂಡಿತರಲ್ಲಿ ಒಬ್ಬನಾಗಿದ್ದ.

ಈ ಆರಾಧ್ಯ ಬ್ರಾಹ್ಮಣರು ಮೊದಲು ಉಪನಯನ ಮತ್ತು ದೀಕ್ಷೆಯ ಸಾಮಾನ್ಯ ಬ್ರಾಹ್ಮಣೀಯ ಮತಾಚರಣೆಗೆ ಒಳಪಟ್ಟು, ಜನಿವಾರವೆಂಬ ಪವಿತ್ರ ದಾರವನ್ನು ಧರಿಸಿ, ಅದಾದ ನಂತರ ಕೊರಳಿಗೆ ಇಷ್ಟಲಿಂಗ ಧರಿಸಿ, ಲಿಂಗಧಾರಣ ಸಂಸ್ಕಾರವನ್ನೂ ಪಡೆಯುವುದು ಒಂದು ಸೋಜಿಗವಾಗಿದೆ. ಆರಾಧ್ಯ ಬ್ರಾಹ್ಮಣರು ಶ್ರೀಪತಿಪಂಡಿತ, ಮಂಚಣಪಂಡಿತ ಮತ್ತು ಮಲ್ಲಿಕಾರ್ಜುನ ಪಂಡಿತ ಮೂವರನ್ನು 'ಪಂಡಿತತ್ರಯ'ರೆಂದು ಪರಿಗಣಿಸುತ್ತಾರೆ. ಹಾಗೆಯೇ ಅವರಲ್ಲಿ 'ಆಚಾರ್ಯತ್ರಯ' ಮತ್ತು 'ಆರಾಧ್ಯತ್ರಯ'ಗಳೂ ಇವೆ.

ಪ್ರಾಸಂಗಿಕವಾಗಿ, ವೀರಶೈವರ ಶ್ರೀಶೈಲ ಪೀಠಕ್ಕೆ ಮಲ್ಲಿಕಾರ್ಜುನಪಂಡಿತನ ಹೆಸರೇ ಇದೆ. ಈ ಪೀಠದ ಮುಖ್ಯಸ್ಥರನ್ನು ವೀರಶೈವ ಪಂಚಾಚಾರ್ಯರು “ಪಂಡಿತಾರಾಧ್ಯ' ಎಂದು ಕರೆಯುತ್ತಾರೆ. ಇದು ವೀರಶೈವ ಪಂಚಪೀಠಗಳು ಮತ್ತು ಆರಾಧ್ಯ ಬ್ರಾಹ್ಮಣರ ನಡುವಿನ ಸಂಭವನೀಯ ಸಂಬಂಧದ ಸುಳಿವು ನೀಡುತ್ತದೆ.

ವಿಶೇಷವೆಂದರೆ, ನಾಲ್ವರು ಆರಾಧ್ಯ ಬ್ರಾಹ್ಮಣರ (ಪಾಲ್ಕುರಿಕೆ ಸೋಮನಾಥ, ಪಿಡುಪರ್ತಿ ಸೋಮನಾಥ, ನಂಜಣಾರಾಧ್ಯ, ಕಂಚಿ ಶಂಕರಾರಾಧ್ಯ) ಜೊತೆಗೆ ಮತ್ತಿಬ್ಬರು ತೆಲುಗು ಮತ್ತು ಸಂಸ್ಕೃತದಲ್ಲಿ ಐದು 'ಬಸವ ಪುರಾಣ'ಗಳನ್ನು ರಚಿಸಿರುವುದು. ಈ ಆರಾಧ್ಯರು ಬಸವಣ್ಣನವರನ್ನು ತಮ್ಮ ಮಾರ್ಗದರ್ಶಕರೆಂದು ಪರಿಗಣಿಸಿದ್ದಾರೆ.

ಅನೇಕ ಇತರ ಬ್ರಾಹ್ಮಣರಂತೆ ಆಂಧ್ರಪ್ರದೇಶದ ಆರಾಧ್ಯ ಬ್ರಾಹ್ಮಣರೂ ಬಸವಣ್ಣನವರ ಕ್ರಾಂತಿಕಾರಕ ತತ್ತ್ವಜ್ಞಾನದಿಂದ ಆಕರ್ಷಿತರಾಗಿದ್ದರೆಂಬುದನ್ನು ಈ ಸತ್ಯಸಂಗತಿಗಳು ತಿಳಿಸುತ್ತವೆ. ಆದರೆ ಅವರು ಬಸವಣ್ಣನವರಂತೆ ಬ್ರಾಹ್ಮಣ್ಯವನ್ನು ತ್ಯಜಿಸಲಿಲ್ಲ. ಈ ಸಂಗತಿಯು ಬಸವಣ್ಣನವರು ಮತ್ತು ಮಲ್ಲಿಕಾರ್ಜುನ ಪಂಡಿತಾರಾಧ್ಯರ ನಡುವಿನ ಸಂವಾದದಲ್ಲಿ ದಾಖಲಾಗಿದೆ. ಬಸವಣ್ಣನವರನ್ನು ಕಾಣಬೇಕೆಂದಿದ್ದು ಅಷ್ಟರಲ್ಲಿ ಅವರು ಲಿಂಗೈಕ್ಯರಾದುದನ್ನು ತಿಳಿದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ತಮ್ಮ 'ಬಸವಗೀತೆ'ಯಲ್ಲಿ ಬಸವಣ್ಣನವರಿಗೆ ಭಾವಪೂರ್ಣ ಗೌರವ ಸಲ್ಲಿಸಿದ್ದಾರೆ.

ವಿಜಯನಗರ ಆಡಳಿತದ ಕಾಲದಲ್ಲಿ ಹಂಪಿಗೆ ಆಂಧ್ರದ ಆರಾಧ್ಯ ಬ್ರಾಹ್ಮಣರ ಒಳಹರಿವು ನಡೆದಿದೆ. ಆಗಿನ ಚರಿತ್ರೆಯಲ್ಲಿ ಬರುವ ೧೦೧ ವಿರಕ್ತರು ವಾಸ್ತವವಾಗಿ ಆರಾಧ್ಯರೇ ಆಗಿದ್ದರು. ೧೨ನೆಯ ಶತಮಾನದ ಶರಣರ ವಚನಗಳಲ್ಲಿ ವೇದ, ಆಗಮ ಮತ್ತು ಉಪನಿಷತ್ತುಗಳ ಸುಮಾರು ೬೪೮ರಷ್ಟು ಸಂಸ್ಕೃತ ಶ್ಲೋಕಗಳನ್ನು ಬೆರಕೆ ಮಾಡಿದವರೇ ಈ ಆರಾಧ್ಯರು.

೧೮೪೦ರಲ್ಲಿ ಜಂಗಮ ಸಮುದಾಯ ಕುರಿತು ಪ್ರವರ್ತಕ ಸಂಶೋಧನೆ ನಡೆಸಿ ಬರೆದ ಪ್ರಬಂಧದಲ್ಲಿ ಪಿ.ಸಿ. ಬ್ರೌನ್ ಎಂಬ ಪಾಶ್ಚಿಮಾತ್ಯ ವಿದ್ವಾಂಸನು ಆರಾಧ್ಯರು ಜಂಗಮರನ್ನು (ಬಸವ ಭಕ್ತರು) ದ್ವೇಷಿಸುತ್ತಾರೆ ಎಂದು ತಿಳಿಸಿದ್ದಾನೆ. ಹಾಗೆಯೇ ಆರಾಧ್ಯ ಬ್ರಾಹ್ಮಣರನ್ನು ಇತರ ಬ್ರಾಹ್ಮಣರೂ ಗೌರವಿಸುವುದಿಲ್ಲ ಎಂದೂ ಹೇಳಿದ್ದಾನೆ. ಹೀಗೆ ಜನಿವಾರ ಮತ್ತು ಇಷ್ಟಲಿಂಗ ಎರಡನ್ನೂ ಧರಿಸುವ ಆಂಧ್ರದ ಆರಾದ್ಯರು ಇತ್ತಲೂ ಅಲ್ಲ, ಅತ್ತಲೂ ಇಲ್ಲ ಎಂಬಂತೆ ಅರ್ಧ ಬಸವಾನುಯಾಯಿಗಳಾಗಿ, ಇನ್ನರ್ಧ ಬ್ರಾಹ್ಮಣರಾಗೇ ಇರುವಂತೆ ಕಾಣುತ್ತದೆ. ಬಹುಶಃ ಅವರ ಲಿಂಗಧಾರಣೆಯು, ಅವರು ಬಸವಣ್ಣನವರನ್ನು ಮೀನಮೇಷ ಎಣಿಸಿ ಒಪ್ಪಿಕೊಂಡುದರ ಫಲ ಎನ್ನಬಹುದು. ಆದರೂ ಅವರು ಬ್ರಾಹ್ಮಣ್ಯವನ್ನು ತ್ಯಜಿಸಲು ಹಿಂಜರಿಯುತ್ತಾರೆ.

ಕರ್ನಾಟಕಕ್ಕೆ ವಲಸೆ ಬಂದ ಆರಾಧ್ಯರು ಹೆಚ್ಚಾಗಿ ತುಮಕೂರು, ಬೆಂಗಳೂರು ಮತ್ತು ಹಳೆಯ ಮೈಸೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರೆಲ್ಲ ಜನಿವಾರ ಬಿಟ್ಟಿದ್ದಾರೆ. ಆದರೆ ಬಸವಣ್ಣನವರು ಮತ್ತು ಶರಣರನ್ನು ಗೌರವಿಸಲು ಹಿಂಜರಿಯುತ್ತಾರೆ. ಅವರ ಗುರುಗಳು ಪಂಚಾಚಾರ್ಯರು!

ಮೇಲೆ ಪ್ರಸ್ತಾಪಿಸಿದ ಪಿ.ಸಿ.ಬ್ರೌನ್ ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿ, ನಾಲ್ಕು ಆರಾಧ್ಯರು ವೀರಶೈವರ ಅಥವಾ ಜಂಗಮರ ಗುರುವಾದದ್ದು ಹೇಗೆ ಎಂದಿದ್ದಾರೆ. ನಂತರ ೧೯೨೦ರಲ್ಲಿ ಟಿ.ಎಸ್. ವೆಂಕಣ್ಣಯ್ಯನವರು (ಕುವೆಂಪು ಅವರ ಗುರು) 'ಮಲ್ಲಿಕಾರ್ಜುನ ಪಂಡಿತಾರಾಧ್ಯರ ಶಿವತತ್ತ್ವ ಸಾರದ ಧರ್ಮವು ಬಸವಧರ್ಮ ಅಥವಾ ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿದೆ' ಎಂದು ತಿಳಿಸಿದ್ದಾರೆ. ಈ ವಿಷಯ ಇನ್ನೂ ವಿವಾದದಲ್ಲೇ ಇದೆ.

೧೮೯೧ರವರೆಗೆ ವೀರಶೈವರನ್ನು ಲಿಂಗಾಯತರು ಎಂದು ಪರಿಗಣಿಸಿಯೇ ಇರಲಿಲ್ಲ. ೧೮೯೦ರಲ್ಲಿ ಚಳವಳಿ ನಡೆದ ನಂತರ ವೀರಶೈವರನ್ನು ಲಿಂಗಾಯತದ ಒಂದು ಸಣ್ಣ ಒಳಪಂಗಡವಾಗಿ ಸೇರಿಸಲಾಯಿತು. ಈಗ ಅವರು ಒಂದು ಸಣ್ಣ ಒಳಗುಂಪಲ್ಲದೆ ಬೇರೇನೂ ಅಲ್ಲ. ಹೀಗೆ ಚರಿತ್ರೆ ಮತ್ತು ತತ್ತ್ವಜ್ಞಾನದ ಸರಳ ಸತ್ಯ ಸಂಗತಿಗಳನ್ನು ಸಂಕೀರ್ಣಗೊಳಿಸುತ್ತಿರುವುದು ವೀರಶೈವ ಮಹಾಸಭಾದ ಸಂಕುಚಿತ ಮತ್ತು ಅಪಕ್ವ ರಾಜಕೀಯ ಎನ್ನಬೇಕಾಗಿದೆ. ✿

ದಾಖಲೆಗಳು :

೧. ಅಕ್ಕೂರಮಠ ಎಸ್., ೨೦೦೪, ಶಿವಾಗಮಗಳಲ್ಲಿ ವೀರಶೈವ ಧರ್ಮ, ರಂಭಾಪುರಿ ವೀರಶೈವ ಸಂಶೋಧನ ಸಂಸ್ಥೆ, ಬಾಳೆಹಳ್ಳಿ
೨. ಅರುಣಾಚಲಂ ಎಂ., ೧೯೮೦, ವೀರಶೈವ ಸೆಯಿಂಟ್ಸ್, ಗಾಂಧಿ ವಿದ್ಯಾಲಯಮ್, ಮದ್ರಾಸ್
೩. ಆಳ್ವರ್ ಜೋಸೆಫ್, ೧೯೮೬, ಎನ್‌ಸೈಕ್ಲೋಪಿಡಿಯಾ ಆಫ್ ಜೂಯಿಷ್ ಹಿಸ್ಟರಿ, ಆನ್ ಲೈನ್ ಬುಕ್ಸ್
೪. ಬಸವರಾಜು ಎಲ್., ೧೯೬೩, ಶಿವದಾಸ ಗೀತಾಂಜಲಿ, ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು
೫. ಬಿಜ್ಜರಗಿ ಚಂದ್ರಕಾಂತ, ೨೦೦೯, ಕುರುಬರ ಕುಲಗುರು ರೇವಣಸಿದ್ಧರು, ಶೈಲಚಂದ್ರ ಪ್ರಕಾಶನ, ಬಿಜಾಪುರ
೬. ಬೋರಟ್ಟಿ ವಿ.ಕೆ., ೨೦೨೦, ಮೈಸೂರು ರಾಜ್ಯದ ಹಳೆಯ ಜನಗಣತಿಗಳು - ಲಿಂಗಾಯತರು ಮತ್ತು ಚತುರ್ವಣ್ರ ನಂಬಿಕೆ, ಜಿ.ಎಲ್.ಎಂ., ಬೆಂಗಳೂರು
೭. ಬ್ರೌನ್ ಸಿ.ಪಿ., ೧೮೪೦, “ಎಸ್ಸೇಸ್ ಆನ್ ದಿ ಕ್ರೀಡ್, ಕಸ್ಟಮ್ಸ್ ಅಂಡ್ ಲಿಟರೇಚರ್ ಆಫ್ ಜಂಗಮಾಸ್”, ಮದ್ರಾಸ್ ಜರ್ನಲ್ ಆಫ್ ಲಿಟರೇಚರ್ ಅಂಡ್ ಸೈನ್ಸ್
೮. ಚಂದ್ರಶೇಖರ ಸ್ವಾಮಿ, ೧೯೮೮, ವೀರಶೈವ ಪಂಚಪೀಠ ಪರಂಪರೆ, ಶೈವ ಭಾರತಿ ಶೋಧ ಪ್ರತಿಷ್ಠಾನ, ವಾರಣಾಸಿ
೯. ಚಿದಾನಂದಮೂರ್ತಿ ಎಂ.,
(i) ವೀರಶೈವ ಧರ್ಮ ಮತ್ತು ಭಾರತೀಯ ಸಂಸ್ಕೃತಿ, ೧೯೯೯, ಮಿಂಚು ಪ್ರಕಾಶನ, ಬೆಂಗಳೂರು
(ii) ಅಂತಿಮ ತೆರೆ, ೨೦೦೦, ಸಾಧನೆ
೧೦. ದೇವೇಂದ್ರಪ್ಪ ಜಾಜಿ, ೨೦೦೭, ಆಂಧ್ರರು ಚಿತ್ರಿಸಿದ ಬಸವಣ್ಣ, ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
೧೧. ದುಬೋಯ್ಸ್ ಅಬ್ಬೆ, ೧೮೧೬, ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರೆಮನೀಸ್, ರೂಪ ಪಬ್ಲಿಷರ್ಸ್, ನವದೆಹಲಿ
೧೨. ಎಂಥೋವೆನ್ ಆರ್., “ಲಿಂಗಾಯತ” ೧೯೨೦, ಎನ್ಸೆಕ್ಲೋಪಿಡಿಯಾ ಆಫ್ ರಿಲಿಜನ್ಸ್ ಅಂಡ್ ಎಥಿಕ್ಸ್ (ಸಂ.: ಜೇಮ್ಸ್ ಹೇಸ್ಟಿಲಿನ್ಸ್), ಟಿ ಕ್ಲರ್ಕ್, ಲಂಡನ್
೧೩. ಗುಂಡಾಶಾಸ್ತ್ರಿ ಎನ್., ೧೯೩೫, ಕಾಶೀನಾಥಶಾಸ್ತ್ರಿಗಳ ನಿಜ ಜೀವನ ಚರಿತ್ರೆ, ಮೈಸೂರು
೧೪. ಗುಂಜಾಳ ಎಸ್‌.ಆರ್., ೧೯೯೯, ವಿಶ್ವವಿದ್ಯಾಲಯಗಳಲ್ಲಿ ವೀರಶೈವ ಸಂಶೋಧನೆ, ದಿವ್ಯದಾನ್ ಪ್ರಕಾಶನ, ಲೋಣಿ
೧೫. ಹರಾರಿ ಯುವರ್‌ನೋಹಾ, ೨೦೧೧, ಸೇಪಿಯನ್ಸ್ - ಎ ಬೀಫ್ ಹಿಸ್ಟರಿ ಆಫ್ ಹ್ಯುಮನ್‌ಕೈಂಡ್, ವಿಂಟೇಜ್, ಲಂಡನ್
೧೬. ಹಿರೇಮಠ ಆರ್.ಸಿ., ೧೯೮೫, ಮಹಾಯಾತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೧೭. ಈಶ್ವರನ್ ಹಿರೇಮಲ್ಲೂರು, ೧೯೮೩, ರಿಲಿಜನ್ ಅಂಡ್ ಸೊಸೈಟಿ ಅಮಾಂಗ್ ಲಿಂಗಾಯಟ್ಸ್ ಆಫ್ ಸೌತ್ ಕರ್ನಾಟಕ, ವಿಕಾಸ್ ಪಬ್ಲಿಷರ್ಸ್, ನವದೆಹಲಿ
೧೮. ಹೋಲಿ ಬೈಬಲ್, ೨೦೦೫, ಟಿಂಡ್ಡೆ ಹೌಸ್ ಪಬ್ಲಿಷರ್ಸ್, ನವದೆಹಲಿ
೧೯. ಹೋಲಿ ಖುರಾನ್, ೨೦೦೦, ಮೌಲಾನ ಸೈಯದ್ ಅಬ್ದುಲ್ ಆಲಾ ಮೌ ಆದಿ, ಶಾಂತಿ ಪ್ರಕಾಶನ, ಮಂಗಳೂರು
೨೦. ಲಕ್ಷಣ ಕುಂಟೆ, ೨೦೧೭, ಲಿಂಗಾಯತ ಸ್ವತಂತ್ರ ಧರ್ಮ, ಬಸವಧರ್ಮ ಪ್ರಚಾರ ಸಂಸ್ಥೆ, ಬೀದ‌ರ.
೨೧. ಜೀರಗೆ ಎಸ್., ೧೯೨೩, ಹೂ ಆರ್ ಫೌಂಡರ್ಸ್ ಆಫ್ ವೀರಶೈವಸಮ್,
೨೨. ಕಲಬುರ್ಗಿ ಎಂ.ಎಂ., -
(i) “ವೀರಶೈವದ ಇತಿಹಾಸ ಮತ್ತು ಭೂಗೋಳ”, ಮಾರ್ಗ-೭, ಸ್ವಪ್ನ ಬುಕ್‌ ಹೌಸ್, ಬೆಂಗಳೂರು
(ii) “ಪಂಚಾಚಾರ್ಯರ ನಿಜ ಸ್ವರೂಪ”, ಮಾರ್ಗ-೭, ಸ್ವಪ್ನ ಬುಕ್‌ಹೌಸ್, ಬೆಂಗಳೂರು
(iii) 'ಲಿಂಗಾಯತ ಧರ್ಮ ಮತ್ತು ಡಾ. ಚಿದಾನಂದಮೂರ್ತಿ, ಸಂಯುಕ್ತ ಕರ್ನಾಟಕ ೧೭- ೭-೨೦೨೯
(iv) 'ಕರ್ನಾಟಕ ಶರಣ ಜಂಗಮದ ಮೇಲೆ ಆಂಧ್ರದ ಆರಾಧ್ಯ ಜಂಗಮರ ಸವಾರಿ', ಪ್ರಜಾವಾಣಿ, ೭-೫-೨೦೧೦,
(v) ಲಿಂಗಾಯತ ಸ್ವತಂತ್ರ ಧರ್ಮ (ಸಂ.: ಡಾ. ವೀರಣ್ಣ ರಾಜೂರ) (ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ)
೨೩. ಶಿವಬಸವಸ್ವಾಮಿಗಳು, ೨೦೦೪, ಸಿದ್ದಾಂತ ಶಿಖಾಮಣಿ ಮತ್ತು ಶ್ರೀಕರಭಾಷ್ಯ, ನಿಜದ ನಿಲವು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು
೨೪. ಮಹದೇವಪ್ಪ ಎನ್‌.ಜಿ., ೨೦೧೫, ಬಸವಣ್ಣ : ಲಿಂಗಾಯತ ಧರ್ಮ ಸ್ಥಾಪಕರು, ವಚನ ಅಧ್ಯಯನ ಕೇಂದ್ರ, ಬೆಳಗಾವಿ
೨೫. ಮಜುಮ್‌ದಾರ್ ಆರ್.ಸಿ., ಹಿಸ್ಟ್ರಿ ಆಂಡ್ ಕಲ್ಟರ ಆಫ್ ಇಂಡಿಯನ್ ಪೀಪಲ್, ೧೯೭೭, ಭಾರತೀಯ ವಿದ್ಯಾಭವನ, ಮುಂಬಯಿ
೨೬. ಮಲ್ಲಪ್ಪ, ಚನ್ನಮಲ್ಲಿಕಾರ್ಜುನರ ಶ್ರೀ ರೇವಣಸಿದ್ಧರು (ಟಿ.ಎನ್‌., ಪ್ರಸ್ತಾವನೆ), ೧೯೫೮, ಸದ್ಧರ್ಮ ದೀಪಿಕೆ, ಮೈಸೂರು
೨೭. ಮ್ಯಾಕ್ ಲಿಯಾಡ್, ಡಬ್ಲೂ.ಹೆಚ್., ೧೯೯೯, ಸಿಖ್ ಅಂಡ್ ಸಿಬ್ಬಿಸಮ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್
೨೮. ಮಾರ್ಷೆಲ್, ಮೊಹೆಂಜೊದಾರೋ ಅಂಡ್ ಇಂಡಸ್ ಸಿವಿಲೈಸೇಶನ್, ೧೯೩೧, ಆರ್ತ‌ ಪ್ರೊ. ಬೆಸ್ಟೈನ್, ಲಂಡನ್
೨೯. ನಾಗರಾಜ್ ಎಂ.ಜಿ., ಕೊಡಗಿನ ಹಾಲೇರಿ ವಂಶ, ಆರ್ಕಿಯಾಲಜಿ ಮತ್ತು ಮ್ಯೂಸಿಯಮ್ ಇಲಾಖೆ, ಕರ್ನಾಟಕ ಸರ್ಕಾರ
೩೦. ನಂದೀಮಠ ಎಸ್.ಸಿ.,
(i) ೧೯೬೧, ವೀರಶೈವರ ಇತಿಹಾಸ ಮತ್ತು ಧರ್ಮ
(ii) ೧೯೬೭, ವೀರಶೈವರ ಆಗಮಗಳು
ನಂದಿಮಠ, ಲೇಖನಗಳು ೨೦೦೭ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೩೧. ಪಾವಟೆ, ಡಿ.ಸಿ., ೧೯೭೩, ಇಂಡಿಯನ್ ಎಕ್ಸ್‌ಪ್ರೆಸ್ ಲೇಖನ ೨೩.೧೨.೧೯೭೩
೩೨. ಪೂಜಾರಿ ಸಿದ್ಧರಾಮ, ೨೦೦೦, ವೀರಶೈವ - ಲಿಂಗಾಯತ ಧರ್ಮದ ಮಠ-ಪೀಠಗಳ ಮೂಲಾಧಾರ, ಬಸವ ಚೇತನ ಪ್ರಕಾಶನ, ಮೀರಜ್
೩೩. ಪ್ರೆಬಿಸ್ಟ್ ಚಾರ್ಲ್ಸ್, ಎಸ್., ೨೦೦೨, ದಿ ಎ ಟು ಜೆಡ್ ಆಫ್ ಬುದ್ಧಿಸಮ್, ವಿಜನ್ ಬುಕ್ಸ್, ನವದೆಹಲಿ
೩೪. ಸದಾಶಿವಯ್ಯ ಹೆಚ್., ಎ.ಡಿಸ್‌ಕೋರ್ಸ್ ಆಫ್ ವೀರಶೈವಿಜಮ್ - ಎನ್ ಅನ್‌ರಿಟನ್ ಚಾಪ್ಟರ್ ಇನ್ ದಿ ರಿಲಿಜಸ್ ಹಿಸ್ಟರಿ ಆಫ್ ಇಂಡಿಯಾ, ಭಾರತೀಯ ವಿದ್ಯಾಭವನ
೩೫. ಸಾಖ್ರೆ., ೧೯೪೨, ಹಿಸ್ಟರಿ ಅಂಡ್ ಫಿಲಾಸಫಿ ಆಫ್ ಲಿಂಗಾಯತ್ ರಿಲಿಜನ್, ಕರ್ನಾಟಕ ವಿಶ್ವವಿದ್ಯಾಲಯ.
೩೬. ವದತ್ತಿ ಮಠ ಎಸ್.. ೨೦೧೭ ವೀರಶೈವ-ಲಿಂಗಾಯತ, ಇತಿಹಾಸ ಮತ್ತು ನಿಜ ಸಂಗತಿಗಳು; ಜಗದ್ಗುರು ರಂಭಾಪುರೀಶ್ವರ ಗ್ರಂಥ ಪ್ರಕಾಶನ, ಹುಬ್ಬಳ್ಳಿ
೩೭. ಸಿದ್ದಲಿಂಗಪ್ಪ ಎಸ್‌.ಆ‌., ೨೦೧೧, ಸಿದ್ಧಾಂತ ಶಿಖಾಮಣಿ, ಶೈವಭಾರತಿ ಶೋಧ ಪ್ರತಿಷ್ಠಾನ, ವಾರಣಾಸಿ
೩೮. ಶಿಂಧೆ ವಿ ಮತ್ತು ನೀರಜ್ ರಾಯ್, ೨೦೧೯. ರಾಖಿಗಡಿ ಜೆನೋಮ್ ಸ್ಟಡಿ
೩೯. ರ್ಸ್ಟನ್ ಎಡ್ಗರ್, ೧೯೧೯, ಕ್ಯಾಸ್ಟ್ ಅಂಡ್ ಟ್ರೈಬ್ ಆಫ್ ಸೌತ್ ಇಂಡಿಯಾ
೪೦. ತಿಪ್ಪೇರುದ್ರಸ್ವಾಮಿ ಹೆಚ್., ೨೦೧೫, ಶರಣ ಸಾಹಿತ್ಯ ಸಂಸ್ಕೃತಿ ಅಧ್ಯಯನ, ವಚನ ಅಧ್ಯಯನ ಕೇಂದ್ರ, ಬೆಳಗಾವಿ
೪೧. ಟೋನಿ ಜೋಸೆಫ್, ೨೦೧೮, ಅಲ್ಲಿ ಇಂಡಿಯನ್ಸ್, ವೆಬ್ ಬುಕ್ಸ್
೪೨. ವಾಸ್ಮಿಕನಾಥನ್, ಪೆರಿಯ ಪುರಾಣಮು, ೧೯೮೫, ರಾಮಕೃಷ್ಣಾಶ್ರಮ, ಮದ್ರಾಸು
೪೩. ವಿದ್ಯಾಶಂಕರ, ೨೦೦೭, ಶ್ರೀ ರೇವಣಸಿದ್ದರು, ಬಸವತತ್ವ ಪ್ರಚಾರ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು.
೪೪. ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ವರದಿ ೧೯೦೪, ಬೆಂಗಳೂರು ಮತ್ತು ಶಿವಾನುಭವ ಪ್ರಕಾಶನ, ಬಿಜಾಪುರ.

ಗ್ರಂಥ ಋಣ:
1) ವೀರಶೈವ ಧರ್ಮವು ೧೨ನೇಯ ಶತಮಾನಕ್ಕಿಂತ ಮುಂಚೆ ಆಸ್ತಿತ್ವದಲ್ಲಿತ್ತೆ? ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಚನಗಳ ಆವಿಷ್ಕಾರದ ಪ್ರಭಾವ ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ Next