Previous ಪಂಚಾಚಾರ್ಯರ ನಿಜಸ್ವರೂಪ ಲಿಂಗಾಯತವು ಪೂರ್ಣಧರ್ಮ Next

ಗುರು ಬಸವಣ್ಣ : ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ

Basavanna: An Inevitability of Ancient Lingayat Literature

*

✍ ಡಾ. ಎಂ. ಎಂ. ಕಲಬುರ್ಗಿ.

ಗುರು ಬಸವಣ್ಣ : ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ

ಕನ್ನಡ ಲಿಂಗಾಯತ ಸಾಹಿತ್ಯದಲ್ಲಿ ಅತೀ ಹೆಚ್ಚು ಸಲ ಪ್ರಸ್ತಾಪವಾದವರು ಗುರು ಬಸವಣ್ಣ. ೮೦೦ ವರ್ಷಗಳಷ್ಟು ಸುದೀರ್ಘ ಇತಿಹಾಸವುಳ್ಳ ಈ ಸಾಹಿತ್ಯದ ಯಾವುದೇ ಕೃತಿಯ ಲಿಪಿಕರಣಕಾರವನ್ನು ಲಿಪಿಕಾರ ಆರಂಭಿಸುವುದೇ “ಶ್ರೀ ಗುರು ಬಸವ ಲಿಂಗಾಯನಮಃ” ಎಂಬ ನಮಸ್ಕಾರ ವಾಕ್ಯದಿಂದ. ಕನ್ನಡ ಕೃತಿ ಲಿಪಿಕಾರರಂತೆ ಸಂಸ್ಕೃತ ಕೃತಿ ಲಿಪಿಕಾರರೂ ಈ ಪದ್ಧತಿಯನ್ನು ಅನುಸರಿಸಿದ್ದಾರೆ. 'ಸಿದ್ಧಾಂತ ಶಿಖಾಮಣಿ', 'ಶೈವ ರತ್ನಾಕರ' ಮೊದಲಾದ ಸಂಸ್ಕೃತ ಕೃತಿಗಳ ಅನೇಕ ಹಸ್ತಪ್ರತಿಗಳು ಇದಕ್ಕೆ ನಿದರ್ಶನವೆನಿಸಿವೆ. [೧]

ಈ ವಿವರಣೆ ಹಸ್ತಪ್ರತಿ ಲಿಪಿಕಾರರ, ಜನಸಾಮಾನ್ಯರ ಮನಸ್ಸನ್ನು ಬಸವಣ್ಣ ಎಷ್ಟು ಆವರಿಸಿದ್ದನೆಂಬುದಕ್ಕೆ ನಿದರ್ಶನವೆನಿಸಿದೆ. ಈ ಲಿಪಿಕಾರರನ್ನು ಬಿಟ್ಟರೆ ಕವಿಗಳು ಯಾರನ್ನೇ, ಏನನ್ನೇ ಕುರಿತು ಬರೆಯಲಿ, ಸಾಮಾನ್ಯವಾಗಿ ಆರಂಭದ ಸ್ತುತಿ ಪ್ರಸಂಗದಲ್ಲಿ ಬಸವಣ್ಣನಿಗೆ ಮುಖ್ಯ ಸ್ಥಾನ ಕಲ್ಪಿಸಿದ್ದಾರೆ. ಪಂಚಾಚಾರ್ಯ ಸಂಪ್ರದಾಯದವರೂ ಈ ಕ್ರಮವನ್ನು ಅನುಸರಿಸಿರುವುದು ಅವಶ್ಯ ಗಮನಿಸಬೇಕಾದ ಅಂಶವಾಗಿದೆ. ಉದಾ: ನೀಲಕಂಠ ನಾಗನಾಥಾಚಾರ್ಯನು (೧೩ನೆಯ ಶತಮಾನ) ತನ್ನ ಸಂಸ್ಕೃತ ವೀರಮಾಹೇಶ್ವರಾಚಾರ ಸಂಗ್ರಹದಲ್ಲಿ ಶಿವ, ನಂದೀನಾಥ, ಶೃಂಗೀನಾಥ, ವೀರಭದ್ರ, ಶರಭ-ಹೀಗೆ ಶಿವಲೋಕದ ದೈವತಗಳನ್ನು ಸ್ತುತಿಸಿದ ಬಳಿಕ ಮರ್ತ್ಯಲೋಕದವರ ಸ್ತುತಿಯನ್ನು

ನಮೋ ಬಸವರಾಜಾಯ ವೃಷೇಂದ್ರಾ ಪರಮೂರ್ತಯೇ |
ಚರಾಚರೈಕ ನಿಷ್ಠಾಯ ಶಿವಾಚಾರ ಪ್ರವರ್ತಿನೆ |

ಎಂದು ಬಸವಣ್ಣನಿಂದಲೇ ಆರಂಭಿಸುತ್ತಾನೆ. ಪಂಚಾಚಾರ್ಯ ಗುರುಪರಂಪರೆಯ ಸಿದ್ಧನಂಜೇಶನ ಗುರುರಾಜ ಚಾರಿತ್ರ, ರಾಘವಾಂಕ ಚರಿತ್ರೆಗಳಲ್ಲಿಯೂ ಈ ಕ್ರಮವಿದೆ. ಕನ್ನಡ, ಸಂಸ್ಕೃತ ಕೃತಿಗಳಲ್ಲಿ ಇಂತಹ ಅನೇಕ ಉದಾಹರಣೆಗಳು ಸಿಗುತ್ತಿದ್ದು, ಇವೆಲ್ಲ ಅವನ ವ್ಯಕ್ತಿತ್ವ ವೈವಿಧ್ಯವನ್ನು ಬಿಡಿಸಿ
ಹೇಳಿವೆ.

ಈ ರೀತಿಯ ಪೀಠಿಕಾ ಸ್ತುತಿಯನ್ನು ಬಿಟ್ಟರೂ ಬೇರೆ ರೀತಿಯಲ್ಲಿ ಸ್ವತಂತ್ರವಾಗಿಯೂ ಅವನು ಸ್ತುತಿಸಲ್ಪಟ್ಟಿದ್ದಾನೆ. ಈ ಪ್ರಕ್ರಿಯೆ ಸಮಕಾಲೀನ ಶರಣರ ವಚನಗಳಲ್ಲಿಯೇ ಕಾಣಿಸಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ೫೦ ಜನ ವಚನಕಾರರ ೧೦೦೦ ವಚನಗಳಲ್ಲಿ ಬಸವಣ್ಣನ ಸ್ತುತಿ ಕಾಣಿಸಿಕೊಂಡಿದೆ.

“ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತಿರ್ದುದಯ್ಯ ಶಿವನ ಪ್ರಕಾಶ”,


“ಮರ್ತ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು, ದೇವಾ ನೀವು ಕಲ್ಯಾಣಕ್ಕೆ ಬಂದವತರಿಸಿದಲ್ಲಿ”

ಎಂಬಂಥ ನೂರಾರು ಧ್ವನಿಪೂರ್ಣ ವಚನಗಳು ಬಸವಣ್ಣನ ಅವತಾರದ ಸಾರ್ಥಕತೆಯನ್ನು ಎತ್ತಿ ಹೇಳುತ್ತವೆ. ಇಷ್ಟು ಸಾಲದೆಂಬಂತೆ ಸಮಕಾಲೀನ ಸಿದ್ದರಾಮ “ಬಸವ ಸ್ತೋತ್ರದ ತ್ರಿವಿಧಿ” ಹೆಸರಿನ ಸ್ವತಂತ್ರ ಕೃತಿಯನ್ನೇ ರಚಿಸಿದ. ಈ ದಾರಿಯಲ್ಲಿ ತರುವಾಯದವರು ಬಸವಸ್ತೋತ್ರದ ವಚನಗಳು ಹೆಸರಿನಲ್ಲಿ ಹಲವು ವಚನ ಸಂಕಲನಗಳನ್ನು ರೂಪಿಸಿದರು. ಇನ್ನೂ ಮುಂದುವರೆದು ಬಸವಕಂದ, ಬಸವ ತಾರಾವಳಿ, ಬಸವ ಪವಾಡ ರಗಳೆ, ಬಸವ ನಾಮಾವಳಿ, ಬಸವ ಶತಕ, ಬಸವಾಷ್ಟಕ, ಬಸವೇಶ್ವರನ ನೂರೆಂಟು ನಾಮ, ಬಸವೇಶ್ವರ ಸಹಸ್ರ ನಾಮಾವಳಿ ಇತ್ಯಾದಿ ಹೆಸರುಗಳಲ್ಲಿ ಕೃತಿ ರಚಿಸಿರುವುದುಂಟು.

ಇಂಥವುಗಳನ್ನು ಬಿಟ್ಟರೆ ಬಸವಣ್ಣನವರ ವಚನಗಳಿಗೆ, ಅವನನ್ನು ಕುರಿತ ಕೃತಿಗಳಿಗೆ ಟೀಕೆ, ಕಥಾಸಾರ ಇತ್ಯಾದಿಗಳು ಹುಟ್ಟಿಕೊಂಡಿವೆ. ಬಸವಣ್ಣನವರ ವಚನಗಳು ಷಟ್ಟಲಕ್ರಮದಲ್ಲಿಯೂ ಸಿಗುತ್ತಿದ್ದು, ಈ ಕೃತಿ ಕನ್ನಡದಲ್ಲಿ ತುಂಬ ಪ್ರಸಿದ್ಧಿ ಪಡೆದಿರುವ ದ್ಯೋತಕವೆಂಬಂತೆ ಈವರೆಗೆ ಸೋಮಶೇಖರ ಶಿವಯೋಗಿ, ಪರ್ವತ ಶಿವಯೋಗಿ, ಗುರುಬಸವರಾಜ, ನಿರಂಜನಸ್ವಾಮಿ, ಇನ್ನೊಬ್ಬ ಅನಾಮಧೇಯ ಹೀಗೆ ೫ ಜನ ಟೀಕೆ ಬರೆದಿದ್ದಾರೆ. ಇದಲ್ಲದೆ “ಬಸವೇಶ್ವರ ವಚನದ ಕಥಾಸಾರ'ವೆಂಬ ಇನ್ನೊಂದು ಕೃತಿ ರಚಿಸಿದ್ದಾರೆ.

ಗುರು ಬಸವಣ್ಣನನ್ನು ಕುರಿತು ಅನೇಕ ಕೃತಿಗಳಿಗೆ ಟೀಕೆ, ತಾತ್ಪರ್ಯ ಇತ್ಯಾದಿ ಬರೆದ ಕೃತಿಗಳು ಹಲವು ಸಂಖ್ಯೆಯಲ್ಲಿ ಹುಟ್ಟಿವೆ. ಭೀಮಕವಿಯ ಬಸವಪುರಾಣವನ್ನು ಆಧರಿಸಿ ಉತ್ತರ ದೇಶದ ಬಸವಲಿಂಗನು “ಬಸವೇಶ್ವರ ದೇವರ ಪುರಾಣದ ಕಥಾಸಾಗರ” ಹೆಸರಿನ ಕೃತಿ ರಚಿಸಿದರೆ, ಷಡಕ್ಷರದೇವನ 'ವೃಷಭೇಂದ್ರವಿಳಾಸದ ಘಟ್ಟ ನುಡಿಗಳಿಗೆ ಒಬ್ಬ ಅನಾಮಧೇಯನು ಟೀಕೆಯನ್ನು, ಇನ್ನೊಬ್ಬ ಅನಾಮಧೇಯನು 'ವೃಷಭೇಂದ್ರ ವಿಜಯ ಪುರಾಣದ ಲಲಿತ ಪದ ವೃತ್ತ ನಾಂದ್ಯ ಹೆಸರಿನ ಸಂಗ್ರಹವನ್ನು ರೂಪಿಸಿದ್ದಾರೆ.

ಇಂಥ ಸ್ತೋತ್ರ ಮೊದಲಾದ ಲಘು ಕೃತಿಗಳನ್ನು ಟೀಕೆ-ವ್ಯಾಖ್ಯಾನ ಮೊದಲಾದ ವಿವರಣಾತ್ಮಕ ಕೃತಿಗಳನ್ನು ಬಿಟ್ಟರೆ ಬಸವಣ್ಣನವರನ್ನು ಕುರಿತು ರಗಳೆ, ಷಟ್ಪದಿ, ಸಾಂಗತ್ಯ, ತ್ರಿಪದಿ, ಚಂಪೂ, ಯಕ್ಷಗಾನ-ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿಯೂ ವಿಪುಲ ಕೃತಿಗಳು ಹುಟ್ಟಿಕೊಂಡಿವೆ. ನೇರವಾಗಿ ಇವನನ್ನೇ ಕುರಿತು ಬರೆದವು ಹೋಗಲಿ, ಯಾರನ್ನೇ, ಏನನ್ನೇ ವಸ್ತುವನ್ನಾಗಿಟ್ಟುಕೊಂಡು ಬರೆಯಲಿ, ಅಲ್ಲೆಲ್ಲ ಬಸವಣ್ಣ ಅನಿವಾರ‍್ಯವೆನಿಸಿರುವುದು ಗಮನಿಸಬೇಕಾದ ವಿಷಯವಾಗಿವೆ. ವೀರಶೈವ ಪರಂಪರೆಯಲ್ಲಿ ಬಸವಣ್ಣನ ಕುರಿತು ಹುಟ್ಟಿದ ಸಾಹಿತ್ಯಕ್ಕೆ ಜೊತೆಗೆ ಹೋಲಿಸಿದರೆ ಪ್ರಭುದೇವ, ಸಿದ್ಧರಾಮ, ಚೆನ್ನಬಸವಣ್ಣ, ಮಹಾದೇವಿಗಳಂಥ ಸಮಕಾಲೀನ ಗಣ್ಯರನ್ನು ಕುರಿತು ಹುಟ್ಟಿದುದು ತೀರ ಕಡಿಮೆ. ರೇವಣಸಿದ್ದಾದಿ ಪಂಚಾಚಾರರನ್ನು ಕುರಿತುದುದು ಇನ್ನೂ ಕಡಿಮೆ. ಹರಿಹರನನ್ನೇ ಗಮನಿಸಿ ಹೇಳುವುದಾದರೆ ಗಾತ್ರದ ದೃಷ್ಟಿಯಿಂದಲೂ ಬಸವರಾಜದೇವರ ರಗಳೆಗಳ ಮುಂದೆ ಪ್ರಭುದೇವರ, ರೇವಣಸಿದ್ಧೇಶ್ವರನ ರಗಳೆ ಸಣ್ಣ, ಸಾಮಾನ್ಯ ಕೃತಿಗಳು.

ಬಸವಣ್ಣನನ್ನೇ ನೇರವಾಗಿ ಕುರಿತ ಭೀಮಕವಿ, ಸಿಂಗಿರಾಜ, ಹರಿಹರ ಎಂಬ ಮೂರು ಕಥಾ ಸಂಪ್ರದಾಯಗಳಲ್ಲಿ ನೂರಾರು ಕೃತಿಗಳು ಹುಟ್ಟಿಕೊಂಡಿವೆ. ಭೀಮಕವಿ ಚರಿತೆಗೆ ಪುರಾಣದ ಆವರಣ ಕಲ್ಪಿಸಿದರೆ, ಸಿಂಗಿರಾಜ ಬಸವಣ್ಣನ ವ್ಯಷ್ಟಿಕೇಂದ್ರಿತ ವ್ಯಕ್ತಿತ್ವಕ್ಕೆ, ಹರಿಹರ ಸಮಷ್ಟಿಕೇಂದ್ರಿತ ವ್ಯಕ್ತಿತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಇವುಗಳಲ್ಲಿ ಹರಿಹರನ ಸಂಪ್ರದಾಯವನ್ನು ಯಾರೂ ಮುಂದುವರೆಸಲಿಲ್ಲ. ಸಿಂಗಿರಾಯನ ಸಂಪ್ರದಾಯ ಲಕ್ಕಣ್ಣದಂಡೇಶನಲ್ಲಿ ತಲೆದೋರಿ ನಿಂತು ಬಿಟ್ಟಿತು. ಭೀಮಕವಿ ಸಂಪ್ರದಾಯ ಮಾತ್ರ ಬಸವೇಶ್ವರನ ಕಾವ್ಯ(ಗರಣಿ ಬಸವ ಲಿಂಗ-ಸಾಂಗತ್ಯ), ಭಕ್ತಿರಸ ಸೋನೆ (ಮಂಚಯ್ಯ-ಸಾಂಗತ್ಯ), ವೃಷಭೇಂದ್ರವಿಜಯ (ಷಡಕ್ಷರಿ- ಚಂಪೂ) ಇತ್ಯಾದಿ ಕಾವ್ಯಗಳಿಗೆ ಮಾತೃಕೆಯಾಯಿತು. ಕಾವ್ಯಗಳನ್ನು ಬಿಟ್ಟರೆ ಯಕ್ಷಗಾನ-ಬಯಲಾಟ (ಸಣ್ಣಾಟ)ಗಳೂ ಇವನ ಬಗ್ಗೆ ಹುಟ್ಟಿಕೊಂಡಿವೆ. ಚನ್ನಪ್ಪಕವಿ ಕೃತ ಶರಣಲೀಲಾಮೃತ ಇತ್ಯಾದಿಗಳು ಇದಕ್ಕೆ ನಿದರ್ಶನವೆನಿಸಿವೆ. ಯಕ್ಷಗಾನವೇ ಆಗಿದ್ದರೂ ಪ್ರತ್ಯೇಕ ಹೇಳಬೇಕಾದ ಕೃತಿ ವೃಷಭೇಂದ್ರ ವಿಳಾಸ. ಇದು ವರ್ಣ ಚಿತ್ರಯುಕ್ತ ಪಠ್ಯ. ಒಂದರ್ಥದಲ್ಲಿ ಅಕ್ಷರ ಪಠ್ಯಕ್ಕಿಂತ ಚಿತ್ರ ಪಠ್ಯವೇ ಪ್ರಧಾನವಾಗಿರುವ ಇದು ವಾಚನ, ಮತ್ತು ವೀಕ್ಷಣ ಎರಡೂ ಪ್ರಕಾರದ ಕಲಾಕೃತಿಯಾಗಿದೆ.


ಬಸವಣ್ಣನನ್ನು ಕುರಿತ ಕೃತಿಗಳನ್ನು ಬಿಟ್ಟರೆ ಅನ್ಯ ಶರಣರನ್ನು ಕುರಿತು ಹುಟ್ಟಿದ ಕೃತಿಗಳಲ್ಲಿಯೂ ಅವನು ದಟ್ಟವಾಗಿ ಕಾಣಿಸಿಕೊಂಡಿದ್ದಾನೆ. ಇಲ್ಲಿ ಅವನ ಅನಿವಾರ‍್ಯತೆ ಎದ್ದು ಕಾಣುತ್ತದೆ. ಉದಾ: ಪ್ರಭುಲಿಂಗಲೀಲೆ ಅಲ್ಲಮನನ್ನು ಕುರಿತಾಗಿದ್ದರೂ ೧-೭ ರವರೆಗೆ ಮಾಯೆ ಅಲ್ಲಮನ ಪ್ರಸಂಗ ಮುಗಿಯುತ್ತಲೇ “ಬಸವಾದಿ ಪ್ರಮಥರು ಜನಿಸಿದ ಗತಿಯಲ್ಲಿ ಕಾಣಿಸಿಕೊಂಡ ಬಸವಣ್ಣ” “ಪ್ರಭುದೇವರು ಕಲ್ಯಾಣಕ್ಕೆ ಬಂದ ಗತಿ' ಯಿಂದ ಮುಂದೆಯೂ ಪ್ರಧಾನ ಅಪ್ರಧಾನವಾಗಿ ನಮ್ಮ ಗಮನ ಸೆಳೆಯುತ್ತಾನೆ. “ಬಸವ ಮಾಡಿದೊಡಾಯ್ತು ಗುರುನೆಲೆ, ಬಸವ ಮಾಡಿದೊಡಾಯ್ತು ಲಿಂಗವು, ಬಸವ ಮಾಡಿದೊಡಾಯ್ತು ಜಂಗಮ” ಎಂಬಂಥ ಹೇಳಿಕೆಗಳ ಮೂಲಕ ಅವನ ಕಾಣಿಕೆಗಳನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಅಂಥ ಇನ್ನೊಂದು ಗ್ರಂಥ ಚೆನ್ನಬಸವಪುರಾಣ. ಇಲ್ಲಿ ಆಗಾಗ ಬಸವಣ್ಣನ ವಿಷಯ ಪ್ರವೇಶಿಸಿ, ೫೭ನೆಯ ಸಂಧಿಯ ಮಧ್ಯದಿಂದ ಸಮಗ್ರ ಚರಿತ್ರೆಯೇ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ನೀಲಕಂಠಾಚಾರ‍್ಯನ ಆರಾಧ್ಯ ಚರಿತ್ರೆಯ ದೀಕ್ಷಾ ಪ್ರಕರಣದ ೧೩ನೆಯ ಸಂಧಿ ಬಸವೇಶ್ವರೋದ್ಭವ, ಶಿವಯೋಗ ನಿದ್ರೆಯನ್ನು, ಮಹಿಮ ಪ್ರಕರಣದ ೧೦ನೆಯ ಸಂಧಿ ಬಸವೇಶ್ವರನ ಕುರಿತು ಪಂಡಿತಾರಾಧ್ಯರ ಪ್ರಲಾಪವನ್ನು ಚಿತ್ರಿಸಿದೆ. ಸಿದ್ಧನಂಜೇಶನ ಗುರುರಾಜಚಾರಿತ್ರದ ೮ನೆಯ ಸಂಧಿ ಬಸವಣ್ಣ ಮತ್ತು ಪ್ರಮಥರ ಚರಿತ್ರೆಯಿಂದ ಕೂಡಿದೆ. ಈ ಬಗೆಯ ನೂರಾರು ಚಾರಿತ್ರಿಕ ಕೃತಿಗಳು ಕನ್ನಡದಲ್ಲಿ ಹುಟ್ಟಿಕೊಂಡಿವೆ.


ಮೇಲೆ ಹೇಳಿದ ಶರಣ “ಚರಿತ್ರೆ” ಕೇಂದ್ರಿತ ಕೃತಿಗಳಲ್ಲಿ ಶರಣ ಸಮೂಹದ ನಾಯಕನಾದ ಬಸವಣ್ಣನ ಕಥೆ ಬೆಸೆದುಕೊಳ್ಳುವುದು ಅನಿವಾರ್ಯ. ಆದರೆ ಶಿವತತ್ವ ಚಿಂತಾಮಣಿ, ವೀರಶೈವಾಮೃತ ಮಹಾಪುರಾಣಗಳಂಥ “ತಾತ್ವಿಕ ಕೃತಿಗಳಲ್ಲಿಯೂ ಅವನು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾನೆ. ಶಿವತತ್ವ ಚಿಂತಾಮಣಿಯ ೫೪ ಸಂಧಿಗಳಲ್ಲಿ ಶಿವನ ಲೀಲೆ-ಸಿದ್ಧಾಂತ ಪ್ರತಿಪಾದನೆಗೆ ೪೪ ಸಂಧಿ ಮೀಸಲು. ೨೯ರಿಂದ ೩೮ ಹೀಗೆ ೧೦ ಸಂಧಿಗಳು ಶರಣರ ಚರಿತ್ರೆಗೆ ಮೀಸಲು. ಈ ೧೦ರಲ್ಲಿ ೫ ಸಂಧಿ ಬಸವಣ್ಣನ ಚರಿತ್ರೆ ಆವರಿಸಿದ್ದು, ಒಟ್ಟು ಕೃತಿ ವ್ಯಾಪ್ತಿಯಲ್ಲಿ ಬಸವಣ್ಣನಿಗೆ ದೊಡ್ಡ ಪಾಲು ಮೀಸಲಿಟ್ಟಂತಾಗಿದೆ. ಇಲ್ಲಿಯ ಬಸವಣ್ಣನ ಜನನ ಮಿತಿ ಇತ್ಯಾದಿ ವಿಚಾರಗಳು ಚರಿತ್ರೆಗೆ ನೂತನ ಕೊಡುಗೆಗಳೆನಿಸಿವೆ.
ಕನ್ನಡ ಸಾಹಿತ್ಯದಲ್ಲಿ ಚತುರಾಚಾರ್ಯರ ಪ್ರಸ್ತಾಪಕ್ಕೆ ಮೊದಲು ಅವಕಾಶ ಮಾಡಿಕೊಟ್ಟುದು ವೀರಶೈವಾಮೃತ ಮಹಾಪುರಾಣ (೧೫೩೦). ಇಲ್ಲಿ ಶಿವನ ಲೀಲೆ, ಶಿವತತ್ತ್ವ, ಶಿವಶರಣರ ಚರಿತ್ರೆಗಳ ನಡುವೆ ಚತುರಾಚಾರ್ಯರ ವಿಷಯ ಕೆಲವೇ ಪದ್ಯಗಳಲ್ಲಿ ಮುಗಿದುಹೋಗಿದ್ದರೆ, ಬಸವಣ್ಣನ ಚರಿತ್ರೆ ೪ ಸಂಧಿಗಳನ್ನು (೧೧೫-೧೧೮) ವ್ಯಾಪಿಸಿದೆ. ಮುಂದುವರೆದು “ಪೂರ್ವಾಚಾರಿಯೆನಿಪ ಬಸವಣ್ಣ” (೮-೧೭-೫೮), “ಷಟ್‌ಷ್ಥಲದ ನಿರ್ಣಯವನಿಟ್ಟವಂ ಬಸವನಲ್ಲದಿನ್ನಾರು ಮಗನೇ”(೮-೧೮-೪)-ಇತ್ಯಾದಿ ಮಹತ್ವಪೂರ್ಣ ಮಾತುಗಳನ್ನು ಹೇಳಿದ್ದಾನೆ. ಏಕೋತ್ತರ ಶತಸ್ಥಲ ಸಿದ್ಧಾಂತವನ್ನು ರೇಣುಕರು ಅಗಸ್ತ್ಯನಿಗೆ ಬೋಧಿಸಿದರೆಂದು ಇಂದು ಪ್ರಚಾರ ಮಾಡುತ್ತ ಬರಲಾಗಿದೆ. ಆದರೆ ಬಸವಣ್ಣನೆ ಈ ಸಿದ್ಧಾಂತ ಸ್ಥಾಪಕನೆಂದು ಕೆಲವು ಶಾಸ್ತ್ರ ಕೃತಿಗಳು ವರ್ಣಿಸಿವೆ. ಮಗ್ಗೆಯ ಮಾಯಿದೇವನ 'ಪದೈಕೋತ್ತರ ಶತಸ್ಥಲ' ಕೃತಿಯು-

ದೇವ ಸಭೆಯೊಳಗೆ ದೇವರ ದೇವನೊಲಿದು ಗಿರಿ
ಜಾವನಿತೆಗೊರೆದ ಏಕೋತ್ತರಶತಸ್ಥಲದ
ಭಾವದನುಭಾವಮಂ ಭೂಮಿಯೊಳು ಪೇಳ್ವ ಬಸವೇಶ ಸದ್ಭಕ್ತ ಜನಕೆ ||

ಎಂದು ಆರಂಭದಲ್ಲಿಯೇ ಈ ಸತ್ಯವನ್ನು ಸ್ಥಾಪಿಸುತ್ತದೆ. ಜಕ್ಕಣಾರನ ಸಂಸ್ಕೃತ “ಏಕೋತ್ತರ ಶತಸ್ಥಲೀ”ಯಲ್ಲಿ ಪ್ರಭು, ಬಸವಣ್ಣ, ಚೆನ್ನಬಸವಣ್ಣನವರನ್ನು ಸ್ಮರಿಸಲಾಗಿದೆ. ಅದರ ಶ್ಲೋಕದ ಟೀಕೆಯಲ್ಲಿ “ಪ್ರಭು ವೃಷಾಂಕದಂಡೇಶ್=ಅಲ್ಲಮಪ್ರಭು ಬಸವರಾಜ ಚೆನ್ನಬಸವರಾಜರೆಂಬ” ಎಂದು ಅರ್ಥ ಹೇಳಿದುದು ಗಮನಾರ್ಹವೆನಿಸಿದೆ. ಹೀಗೆ ಶಾಸ್ತ್ರ ಕೃತಿಗಳಲ್ಲಿಯೂ ಬಸವಣ್ಣನ ಸಾಧನೆಯನ್ನು ಸೂಚಿಸುತ್ತ ಬರಲಾಗಿದೆ.

ಈ ಸಂದರ್ಭದಲ್ಲಿ ಎತ್ತಿ ಹೇಳಬೇಕಾದ ಒಂದು ಅಂಶವೆಂದರೆ ಬಸವಣ್ಣನನ್ನು ಚತುರಾಚಾರ್ಯ ಪರಂಪರೆಯವರೂ ವಿಶೇಷ ಮನ್ನಿಸಿದುದು. ಬಾಳೆಹಳ್ಳಿ ಪೀಠದ ಕುಮಾರ ಚನ್ನಬಸವನು (೧೫೬೯) “ಬಸವೇಶ್ವರ ಪುರಾಣದೊಳು ಗುಪ್ತಮೆನಿಸುವ ಪುರಾತನರ ಚರಿತೆ” ಬರೆಯುವ ಮೂಲಕ ಇಲ್ಲಿಯವರೆಗೆ ಆ ಪರಂಪರೆಯವರು ಬಸವನಿಷ್ಠರಾಗಿದ್ದರೆಂದು ಪರ‍್ಯಾಯವಾಗಿ ಸೂಚಿಸಿದ್ದಾನೆ. ಇದನ್ನು ಬೆಂಬಲಿಸುವಂತೆ ತಾನು “ಶಶಿಧರಾರ್ಚಕ ಜನಕೆ ಬಸವೇಶನಂದದಿ” ಇರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಪಂಚಾಚಾರ ಪರಂಪರೆಯ ಹೂಲಿಯ ಸಿದ್ಧನಂಜೇಶನು
“ಬಸವ ಶತಕ' ಹೆಸರಿನ ಕೃತಿ ಬರೆದು “ಬಸವಣ್ಣನಿಂದಧಿಕ ದೈವಮಿಲ್ಲ” ಎಂದು ಅವನನ್ನು ಗೌರವಿಸಿದ್ದಾನೆ. ೧೭ನೆಯ ಶತಮಾನದ ಷಡಕ್ಷರದೇವ ಚತುರಾಚಾರ‍್ಯ ಪರಂಪರೆಯವನಾಗಿದ್ದರೂ 'ವೃಷಭೇಂದ್ರ ವಿಜಯಂ' ಹೆಸರಿನ ಮಹಾಕಾವ್ಯ ಬರೆದುದು ಈ ಸಾಮರಸ್ಯಕ್ಕೆ ಪರಮಾವಧಿ ನಿದರ್ಶನವೆನಿಸಿದೆ.

೧೬ನೆಯ ಶತಮಾನದ 'ನಂದಿ ಆಗಮಲೀಲೆ' ಬಸವಚರಿತ್ರೆಯ ಒಂದು ವಿಶಿಷ್ಟ ಗ್ರಂಥ. ಹರಿಹರ, ಪಾಲ್ಕುರಿಕೆ ಸೋಮ, ಸಿಂಗಿರಾಜ ಸಂಪ್ರದಾಯಗಳಿಗಿಂತ ಭಿನ್ನ ಸಂಪ್ರದಾಯದ ಕೃತಿ. ಇದನ್ನು ಬರೆದವನು ವಿಜಯನಗರ ಕೃಷ್ಣದೇವರಾಯನ ಸಮಕಾಲೀನನಾದ ಕೊಡೆಕಲ್ಲ ಬಸವಣ್ಣನ ಮರಿಮೊಮ್ಮಗ ವೀರಸಂಗಯ್ಯ, ಇವನಿಗೆ ತನ್ನ ಪೂರ್ವಜನಾದ ಕೊಡೆಕಲ್ಲ ಬಸವಣ್ಣನ ಚರಿತ್ರೆ ಬರೆಯುವುದು ಮುಖ್ಯ ಉದ್ದೇಶ. ಹೀಗಿದ್ದೂ ೧೫ ಸಂಧಿಗಳ ಈ ಕೃತಿಯ ಮೊದಲಿನ ೬ ಸಂಧಿ ಕಲ್ಯಾಣ ಬಸವಣ್ಣನಿಗೆ ಮೀಸಲು. ಕಲ್ಯಾಣ ಬಸವಣ್ಣನೇ ಮುಂದಿನ ಜನ್ಮದಲ್ಲಿ ಕೊಡೆಕಲ್ಲ ಬಸವಣ್ಣನಾಗಿ ಹುಟ್ಟಿದನೆಂದು ಹೇಳುವಷ್ಟು ಕಲ್ಯಾಣ ಬಸವಣ್ಣನಿಗೆ ಈತ ಮಹತ್ವ ನೀಡಿದ್ದಾನೆ. ಬಸವಣ್ಣನನ್ನು ಕುರಿತಂತೆ ಮೇಲೆ ಹೇಳಿದ ೩ ಸಂಪ್ರದಾಯಗಳ ಜೊತೆ ಈಗ ನಾಲ್ಕನೆಯದಾಗಿ ಈ ಕೃತಿಯನ್ನು ಸೇರಿಸಬಹುದಾಗಿದೆ.

ಹೀಗೆ ಬಸವಣ್ಣ ವೀರಶೈವ ಯಾವುದೇ ಸಾಹಿತ್ಯದ, ವೀರಶೈವ ಯಾವುದೇ ಧಾರ್ಮಿಕ ಪಂಗಡದ ಅನಿವಾರ‍್ಯ ವ್ಯಕ್ತಿಯೆನಿಸಿದ್ದಾನೆ.

ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು

೧. ಮೈಸೂರಿನ ಓ.ಆರ್.ಆಯ್. ಪ್ರಕಟಿಸಿದ 'ಶೈವರತ್ನಾಕರ, ಪಠ್ಯದ ಆರಂಭದಲ್ಲಿ 'ಶ್ರೀ ಗುರು ಬಸವಲಿಂಗಾಯ ನಮಃ' ಎಂದು ಸಂಸ್ಕೃತ ಲಿಪಿಯಲ್ಲಿ ಬರೆಯಲಾಗಿದೆ.

*
ಪರಿವಿಡಿ (index)
Previous ಪಂಚಾಚಾರ್ಯರ ನಿಜಸ್ವರೂಪ ಲಿಂಗಾಯತವು ಪೂರ್ಣಧರ್ಮ Next