Previous ವಚನಕಾರ್ತಿಯರ ಧ್ವನಿಗಳು ಧರ್ಮವನ್ನು ಒಡೆಯುವುದು – ಹಾಗೆಂದರೇನು? Next

ಶರಣರು ಮಾಂಸಹಾರವನ್ನ ವಿರೋಧಿಸಿದ್ದಾರೆ

*

- ✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ.

ಶರಣರು ಮಾಂಸಹಾರವನ್ನ ವಿರೋಧಿಸಿದ್ದಾರೆ

ನಮ್ಮ ಶರಣರು ಮಾಂಸಹಾರವನ್ನು ಸೇವಿಸಲು ಯಾವುದೇ ತಮ್ಮ ವಚನಗಳಲ್ಲಿ ಹೇಳಿಲ್ಲ. ಆದರೂ ಇತ್ತೀಚೆಗೆ ಕೆಲವರು ಶರಣರು ಮಾಂಸಹಾರವನ್ನ ವಿರೋಧಿಸಿಲ್ಲ ಎಂಬ ಹೇಳಿಕೆಯನ್ನ ಕೊಟ್ಟಿದ್ದಾರೆ. ಇಂಥವೊಂದು ಹೇಳಿಕೆ ಸಮಾಜದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀಳಬಹುದು ಎಂಬುದರ ಅರಿವಿಲ್ಲದೆ ನುಡಿದಿದ್ದಾರೆ. ನಮ್ಮ ಶರಣರು ಅಪ್ಪಟ ಸಸ್ಯಹಾರಿಗಳಾಗಿದ್ದು ಮಾಂಸಹಾರವನ್ನ ವಿರೋಧಿಸಿದ್ದರು. ಈ ರೀತಿ ಮಾಂಸಹಾರವನ್ನ ವಿರೋಧಿಸಿದ್ದನ್ನು ಶರಣರ ವಚನಗಳಲ್ಲಿ ಆಧಾರವಿದೆ. ಅದಕ್ಕೆ ನಾನೀಗ ಕೆಲ ವಚನದ ಸಾಲುಗಳನ್ನ ಮಾತ್ರ ಇಲ್ಲಿ ಉಲ್ಲೇಖಿಸಿ ಹೇಳುತ್ತೇನೆ.
ಮೊಟ್ಟಮೊದಲಿಗೆ ಬಸವಣ್ಣನವರು. ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೆ ಧರ್ಮದ ಮೂಲವಯ್ಯ.* ಎಂಬುದಾಗಿ ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ ಇಲ್ಲಿ ಬಸವಣ್ಣನವರು. ಮತ್ತೊಂದೆಡೆ ಬಸವಣ್ಣನವರು.

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಚೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು?
ಲಿಂಗಪಥವ ತಪ್ಪಿ ನಡೆವವರು
ಜಂಗಮ ಮುಖದಿಂದ ನಿಂದೆ ಬಂದಡೆ
ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ

ಎಂಬುದಾಗಿ ಬಸವಣ್ಣನವರು ಪ್ರಶ್ನೆ ಮಾಡಿದ್ದಾರೆ, ಅಂದರೆ ಇಲ್ಲಿ ಬಸವಣ್ಣನವರು ಮಾಂಸಹಾರವನ್ನ ವಿರೋಧಿಸಿದ್ದಾರೆ ಎನ್ನುವುದನ್ನ ನಾವಿಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ಈ ರೀತಿ ಲಿಂಗವಂತರಾದವರು ಮಾಂಸವನ್ನು ಸೇವಿಸಿದರೆ ಸಮಾಜದಿಂದ ಕೆಟ್ಟ ಹೆಸರು ಬರುವುದು ತಪ್ಪುವುದಿಲ್ಲ, ನಾವು ಲಿಂಗವ ಕಟ್ಟಿದ್ದು ಸಾರ್ಥಕವಿಲ್ಲದಂತಾಗುತ್ತದೆ ಹಾಗಾಗಿ ನಾವು ಮಾಂಸಹಾರವನ್ನ ಸಂಪೂರ್ಣ ತ್ಯಜಿಸಬೇಕು ಎಂಬುದೆ ಬಸವಣ್ಣನವರ ಮೂಲ ಆಶಯವಾಗಿದೆ ಇಲ್ಲಿ.

ಅದೆ ರೀತಿ ಅಕ್ಕಮಹಾದೇವಿಯವರು ಸಹ ಪ್ರಾಣಿಹಿಂಸೆಯನ್ನ ವಿರೋಧಿಸಿದ್ದಾರೆ.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ.
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕೇಕೆ ಮರುಗ?
ಜಾಲಗಾರನ ದುಃಖ ಜಗಕ್ಕೆಲ್ಲ ನಗೆಗೆಡೆ.
ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ?

ಎಂಬುದಾಗಿ ಪ್ರಶ್ನಿಸಿದ್ದಾರೆ ಅಕ್ಕನವರು. ಅಂದರೆ ಇಲ್ಲಿಯೂ ಸಹ ಮಾಂಸಹಾರವನ್ನ ವಿರೋಧಿಸಿದ್ದಾರೆ ಎಂಬುದು ನಮಗಿಲ್ಲಿ ಕಂಡುಬರುತ್ತದೆ.

ಅದೆ ರೀತಿಯಾಗಿ ಅಕ್ಕಮ್ಮ ಎಂಬ ಶರಣೆ ತನ್ನ ವಚನದ ಸಾಲಿನಲ್ಲಿ ಈ ರೀತಿ ಹೇಳುತ್ತಾರೆ.
ಅಡಗು ಸುರೆ ಕಟಕ ಪಾರದ್ವಾರ ಮುಂತಾದ ಇಂತಿವ ಬೆರೆಸುವವರ ನಾ ಬೆರೆಸೆನೆಂದು.
ಅಂದರೆ ಲಿಂಗವಂತನಾದವನು ಮಾಂಸ ಮದ್ಯ ಮೋಸ ಪರಸ್ತ್ರೀ ಸಂಗದಲ್ಲಿ ತೊಡಗಿರುವವರ ಜೊತೆಗೆ ನಾನು ಬೆರೆಯಲಾರೆ, ಅಂದರೆ ಅವರ ಸಂಗ ಮಾಡಲಾರೆ ಎಂಬುದನ್ನ ಇಲ್ಲಿ ಹೇಳಿದ್ದಾರೆ.

ಅದರಂತೆ ಜೇಡರ ದಾಸಿಮಯ್ಯನವರು ಕೂಡ ತಮ್ಮದೊಂದು ವಚನದ ಸಾಲಿನಲ್ಲಿ ಹೀಗೆ ಕೇಳಿದ್ದಾರೆ.
ಅಡಗವ ತಿನ್ನಬಹುದೆ ಕಣಕದ ಅಡುಗೆಯ ಇರಲಿಕ್ಕೆ?
ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಅಂದರೆ ಒಳ್ಳೆ ಕಣಕದ ಹಿಟ್ಟಿನಿಂದ ಅಡುಗೆ ಮಾಡಿರುವಾಗ ಮಾಂಸಹಾರವನ್ನ ಸೇವಿಸುವುದು ಸರಿಯೆ? ಎಂಬುದು ಅವರ ತಾತ್ವಿಕ ವಿಚಾರವಾಗಿದೆ ಇಲ್ಲಿ. ಏಕೆಂದರೆ ಒಂದು ಪ್ರಾಣಿಯನ್ನು ಕೊಲ್ಲುವಾಗ ಅದು ಎಷ್ಟು ಹಿಂಸೆಯನ್ನು ಅನುಭವಿಸಿ ಸಾಯುತ್ತದೆ ಎಂಬುದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ. ಆ ರೀತಿ ಹಿಂಸೆಯಿಂದ ಸತ್ತ ಪ್ರಾಣಿಗಳ ಮಾಂಸವನ್ನು ನಾವು ತಿನ್ನುವುದು ಅದೆಷ್ಟು ಸಮಂಜಸವಾದುದು? ಎಂಬುದು ನನ್ನ ಮುಂದಿನ ಪ್ರಶ್ನೆಯಾಗಿದೆ. ಒಟ್ಟಾರೆ ಹೇಳಬೇಕೆಂದರೆ ನಮ್ಮ ಶರಣರು ಮಾಂಸದ ಆಹಾರವನ್ನು ತಿನ್ನಲು ಪ್ರೇರಿಪಿಸಿಲ್ಲ. ಕೆಲ ತಿಳಿಗೇಡಿಗಳು ನಮ್ಮ ಬಸವಣ್ಣನವರು ಒಂದು ಸಂದರ್ಭದಲ್ಲಿ ಹೇಳಿದ ವಚನವನ್ನು ತಮ್ಮ ಮುಂದಿಟ್ಟುಕೊಂಡು ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ, ಆವೊಂದು ವಚನವು ಈ ರೀತಿ ಇದೆ.
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ,
ಬಾಯಲಿ ಸುರೆಯ ಗಡಿಗೆ,
ಕೊರಳಲಿ ದೇವರಿರಲು ಅವರ ಲಿಂಗನೆಂಬೆ,
ಸಂಗನೆಂಬೆ, ಕೂಡಲಸಂಗಮದೇವಾ,
ಅವರ ಮುಖಲಿಂಗಿಗಳೆಂಬೆನು.

ಎಂದಿದ್ದಾರೆ, ಈ ವಚನದ ಭಾವರ್ಥ ಈ ರೀತಿಯಾಗಿ ಇದೆ.ಅಪ್ಪ ಬಸವಣ್ಣನವರು ಮಾತೃ ಹೃದಯವಂತರಾಗಿದ್ದು, ಅಂದಿನ ಎಲ್ಲ ಶೋಷಿತ ಧಮನಿತ ದಲಿತರನ್ನ ಅಪ್ಪಿಕೊಂಡು, ಅವರ ಮನ ಪರಿವರ್ತನೆ ಮಾಡುವ ಮೂಲಕ ವಚನಚಳುವಳಿಯನ್ನ ಆರಂಭಿಸಿದರು. ಅವರಿಗೆ ಇಷ್ಟಲಿಂಗ ಕರುಣಿಸುವ ಮುಖಾಂತರ ಸರ್ವಸಮಾನತೆಯನ್ನ ಘೋಷಿಸಿದರು. ಅಂದು ಬಸವಣ್ಣನವರು ಸ್ತ್ರೀಪರ, ಕಳ್ಳರಪರ, ವೇಶ್ಯೆಯರಪರ, ಹೀಗೆ ಎಲ್ಲರ ಪರ ಧ್ವನಿಯಾಗಿ ಅವರಿಗೆ ಸಾಮಾಜಿಕ ನ್ಯಾಯವನ್ನ ಕೊಡಿಸಿದರು. ಅವರೆಲ್ಲರು ತಮ್ಮ ಪೂರ್ವಶ್ರಯವನ್ನ ಕಳೆದುಕೊಂಡು ವಚನಕ್ರಾಂತಿಗೆ ಮುಂದಾದರು. ಅವರೆಲ್ಲರಗಳಲ್ಲಿಯೂ ಮಾಂಸಹಾರಿಗಳು, ಮದ್ಯಪಾನ ಮಾಡುವವರು ಸಹ ಇದ್ದರು. ಅವರಿಗೂ ಸಹ ಇಷ್ಟಲಿಂಗವನ್ನ ಧರಿಸಿಕೊಳ್ಳಬೇಕೆಂಬ ಆಸೆ ಇತ್ತು, ಆದರೆ ಅವರು ನಾವು ಮಾಂಸಹಾರಿಗಳು ಮತ್ತು ಮದ್ಯಪಾನ ಮಾಡುವವರು ನಮಗೆ ಈ ಇಷ್ಟಲಿಂಗವನ್ನ ಧರಿಸುವ ನೈತಿಕ ಹಕ್ಕು ಇದೆ ಇಲ್ಲವೊ? ಎಂಬ ಪ್ರಶ್ನೆ ಕಾಡುವ ಸಂದರ್ಭದಲ್ಲಿ ಅವರ ಮುಖದಲ್ಲಿನ ಆಸೆಯನ್ನ ಕಂಡುಕೊಂಡು ಬಸವಣ್ಣನವರು, ಅವರಲ್ಲಿರುವ ಸಂಶಯ ಹಾಗು ಸಂಕುಚಿತ ಮನೋಭಾವವನ್ನು ಹೋಗಲಾಡಿಸಲು ಮೇಲಿನ ವಚನವನ್ನ ಅವರ ಮನ ಪರಿವರ್ತನೆ ಆಗುವ ರೀತಿಯಲ್ಲಿ ಹೇಳುತ್ತಾರೆ. ಎಡಗೈಯಲ್ಲಿ ಕತ್ತಿ, ಬಲಗೈಯಲ್ಲಿ ಮಾಂಸ, ಬಾಯಿಯಲ್ಲಿ ಮದ್ಯದ ಗಡಿಗೆ ಇದ್ದರು ಸಹ, ಆತನ ಕೊರಳಿನಲ್ಲಿ ದೇವರಿರಲು ಅಂದರೆ ಅರಿವಿನ ಕುರುಹು ಇರಲು ಅವರನ್ನು ನಾನು ಲಿಂಗವೆಂದು ಹೇಳುತ್ತೇನೆ ಮತ್ತು ಸಂಗನೆಂದು ಹೇಳುತ್ತೇನೆ ಎನ್ನುತ್ತಾರೆ ಅಪ್ಪ ಬಸವಣ್ಣನವರು. ಈ ರೀತಿ ಹೇಳಬೇಕಾದರೆ ಬಸವಣ್ಣನವರಲ್ಲಿ ಒಂದು ಕಾರಣವಿದೆ. ಅದೇನೆಂದರೆ, ಬಸವಣ್ಣನವರು ಪ್ರತಿಯೊಬ್ಬರ ಸ್ಥಾನದಲ್ಲಿ ನಿಂತುಕೊಂಡು, ಅವರ ಇರುವಿಕೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ತಾವು ಅವರಂತೆ ಆಡಿ, ನಂತರ ತಮ್ಮಡೆಗೆ ಸೆಳೆದುಕೊಂಡು ಮರಳಿ ಅವರು ಮತ್ತೆ ಆ ದುಶ್ಚಟಗಳಿಗೆ ಹೋಗದಂತೆ ಇಷ್ಟಲಿಂಗವನ್ನ ಅವರಿಗೆ ಕರುಣಿಸಿ ಅವರ ಬದುಕಿನ ಧಿಕ್ಕನೆ ಬದಲಾಯಿಸಿದ್ದರು. ಮುಂದೆಂದು ಅವರು ಈ ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡದ ಹಾಗೆ ಅವರಲ್ಲಿ ಅಷ್ಟೊಂದು ಬದಲಾವಣೆಯನ್ನ ತಂದಿದ್ದರು ಅಪ್ಪ ಬಸವಣ್ಣನವರು. ಈ ರೀತಿಯಾಗಿ ಜನಗಳನ್ನು ಬದಲಾಯಿಸಿ ಪ್ರತಿಯೊಬ್ಬರಲ್ಲಿಯೂ ಕೂಡಲಸಂಗಮನಾಥನನ್ನ ಕಾಣತೊಡಗಿದರು. ಈ ರೀತಿಯಾಗಿ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ ಅವರ ಮುಖಲಿಂಗಿಗಳೆಂಬೆನು. ಎನ್ನುತ್ತಾರೆ ತಮ್ಮ ವಚನದ ಕೊನೆಯ ಸಾಲಿನಲ್ಲಿ, ಅಂದರೆ ನಾನು ಅಂಥವರನ್ನು ಸಾಕ್ಷಾತ್ ಲಿಂಗಸ್ವರೂಪಿಗಳೆಂದು ಭಾವಿಸುತ್ತೇನೆ, ಎಂಬುದಾಗಿ ಬಸವಣ್ಣನವರು ಇಲ್ಲಿ ಹೇಳಿದ್ದಾರೆ. ಈ ರೀತಿಯಾಗಿ ಮಾಂಸಹಾರಿಗಳನ್ನ, ಮದ್ಯಪಾನ ಮಾಡುವವರನ್ನ, ಇನ್ನು ಮುಂತಾದ ದುಶ್ಚಟಗಳಿಗೆ ಬಲಿಯಾದವರನ್ನ ಅವರಿಗೆ ಇಷ್ಟಲಿಂಗ ಕರುಣಿಸುವ ಮುಖಾಂತರ ಅವರನ್ನು ಬದಲಾಯಿಸಲು ಈ ರೀತಿಯಾಗಿ ಬಸವಣ್ಣನವರು ಹೂಡಿದ ತಂತ್ರಗಾರಿಕೆ ಅಷ್ಟೆ, ಬಸವಣ್ಣನವರು ಇಲ್ಲಿ ಮಾಂಸಹಾರವನ್ನ ಸೇವನೆ ಮಾಡುವರನ್ನಾಗಲಿ ಮತ್ತು ಮದ್ಯಪಾನ ಮಾಡುವವರನ್ನಾಗಲಿ ಸಮರ್ಥಿಸಿಕೊಂಡಿಲ್ಲ ಎಂಬುದನ್ನ ನಾವಿಲ್ಲಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು, ಅವರನ್ನು ಬದಲಾಯಿಸುವ ಶಕ್ತಿ ಬಸವಣ್ಣನವರಿಗೆ ಮಾತ್ರ ಇತ್ತು ಎಂಬುದನ್ನ ನಾನಿಲ್ಲಿ ಹೇಳಲು ಇಚ್ಛಿಸುತ್ತೇನ
ನಮ್ಮ ಶರಣರ ವಚನಗಳನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡದೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟರೆ ಸಮಾಜಕ್ಕೆ ನೀವು ದ್ರೋಹ ಬಗೆದಂತಾಗುತ್ತದೆ ಮತ್ತು ಬಸವಾದಿ ಶರಣರಿಗು ಅಪಚಾರ ಮಾಡಿದಂತಾಗುತ್ತದೆ ಹಾಗಾಗಿ ತಾವೆಲ್ಲ ಸರಿಯಾದ ರೀತಿಯಲ್ಲಿ ವಚನಗಳ ಪರಿಕಲ್ಪನೆಯನ್ನ ಅರ್ಥ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ.

*
ಪರಿವಿಡಿ (index)
Previous ವಚನಕಾರ್ತಿಯರ ಧ್ವನಿಗಳು ಧರ್ಮವನ್ನು ಒಡೆಯುವುದು – ಹಾಗೆಂದರೇನು? Next