"ಜಗದ್ಗುರು" ಪದ - ಒಂದು ಅವಲೋಕನ
|
|
*
"ಜಗದ್ಗುರು" ಪದ - ಒಂದು ಅವಲೋಕನ
ಶರಣ ಸಂಸ್ಕೃತಿ ಯಲ್ಲಿ ನಾವು ಧರ್ಮಗುಗುಗಳಿಗೆ, ಧರ್ಮಪೀಠ ಅಧ್ಯಕ್ಷರಿಗೆ ಸಾಮಾನ್ಯವಾಗಿ "ಜಗದ್ಗುರು" ಎಂದು ಸಂಬೋಧಿಸುತ್ತೇವೆ. ಆದರೆ ಈ "ಜಗದ್ಗುರು" ಪದದ ಮೂಲ ಯಾವುದು, ಅದರ ವ್ಯಾಪ್ತಿ, ಅರ್ಥ, ಔಚಿತ್ಯವೇನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯದಲ್ಲಿ ಈ ಪದದ ಉಲ್ಲೇಖದ ಬಗ್ಗೆ ಗಮನ ಹರಿಸಬೇಕಾಗಿದೆ.
"ಜಗದ್ಗುರು" ಸರಳ ಅರ್ಥದಲ್ಲಿ "ಜಗತ್ತಿನ / ಬ್ರಹ್ಮಾಂಡ / ಸೃಷ್ಟಿಯ ಗುರು" (Guru of the Universe) ಎಂದಾಗುವದು. ಇಲ್ಲಿ ಸಹಜವಾಗಿ ಹುಟ್ಟುವ ಪ್ರಶ್ನೆ ಜಗತ್ತು ಒಂದೇ ಆದಲ್ಲಿ ಗುರುವೂ ಒಬ್ಬರೇ ಇರಬೇಕಲ್ಲವೇ?
ಇನ್ನು "ಜಗದ್ಗುರು" ಪದದ ಮೂಲ ನೋಡಬೇಕಾದರೆ ಮೊದಲು ಈ ಪದವನ್ನು ವೇದಾಂತ ಶಾಸ್ತ್ರದಲ್ಲಿ ಮಹಾಕಾವ್ಯಗಳಿಗೆ ಸಂಸ್ಕೃತ ಭಾಷ್ಯಗಳನ್ನು ಬರೆದ ಆಚಾರ್ಯರಿಗೆ ಕರೆದದ್ದು ಕಂಡು ಬರುತ್ತದೆ (ಉದಾಹರಣೆಗೆ: ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬರ್ಕಆಚಾರ್ಯ, ವಲ್ಲಭಾಚಾರ್ಯ). ಅವರು ಕೇವಲ "ಜಗದ್ಗುರು" ಗಳಷ್ಟೇ ಆಗದೇ ತಮ್ಮದೇ ಆದ "ಜಗದ್ಗುರು" ಪರಂಪರೆಯನ್ನು (Lineage) ಬೆಳೆಸಿಕೊಂಡು ಬಂದಿದ್ದನ್ನು ಕಾಣಬಹುದು.
ಒಂದು ಧಾರ್ಮಿಕ ಸಂಘಟನೆಯ ಗುರುಗಳನ್ನು "ಜಗದ್ಗುರು" ಎಂದು ಕರೆದಾಗ ಸಹಜವಾಗಿ ಅದು ಅಲ್ಲಿ ಸರ್ವಾಧಿಕಾರತ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಹಿಂಬಾಲಕರ ಅಂಧ ಭಕ್ತಿಗೆ ಕಾರಣವಾಗುತ್ತದೆ. ಅಲ್ಲಿ ಗುರುವು ಪ್ರಶ್ನಾತೀತ ವ್ಯಕ್ತಿ, ಅವರು ಅವರ ಯಾವದೇ ಕೆಲಸಗಳಿಗೂ ಉತ್ತರದಾಯಿಯಲ್ಲ ಎಂಬ ಚಿತ್ರಣ ಕೊಡುತ್ತದೆ. ಇಂತಹ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಪ್ರಜಾಪ್ರಭುತ್ವವನ್ನು, ಮುಕ್ತ ಚರ್ಚೆ, ಅಭಿವ್ಯಕ್ತಿ ಸ್ವಾತಂತ್ರ ಹೇಗೆ ಅಪೇಕ್ಷಿಸಬಹುದು ?
ಎಲ್ಲಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಸರ್ವ ಶರಣರ ಸಂಪೂರ್ಣ ವಚನ ಸಾಹಿತ್ಯದಲ್ಲಿ ಕೇವಲ ೩ ಬಾರಿ "ಜಗದ್ಗುರು" ಪದವನ್ನು ಬಳಸಿದ್ದಾರೆ (೨ ವಚನ ಬಾಲಸಂಗಯ್ಯ ಅಪ್ರಮಾಣ ದೇವ, ೧ ವಚನ ಚನ್ನಬಸವಣ್ಣನವರು) ಆದರೆ ಈ ಮೂರೂ ಬಾರಿ ಈ "ಜಗದ್ಗುರು" ಪದವನ್ನು ಅವರು ಯಾವದೇ ವ್ಯಕ್ತಿಗಾಗಲಿ, ಗುರುವಿಗಾಗಲಿ, ಧರ್ಮಬೋಧಕರಿಗಾಗಲಿ ಬಳಸಿಲ್ಲ. ಒಂದು ರೀತಿಯಲ್ಲಿ ನೋಡಿದರೆ ವಚನ ಸಾಹಿತ್ಯದಲ್ಲಿ "ಜಗದ್ಗುರು" ಎಂಬ ಪದದ ಉಲ್ಲೇಖವಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.
"ಜಗದ್ಗುರು" ಪದಕ್ಕೆ ತದ್ವಿರುದ್ಧವೆನ್ನುವಂತೆ ಕಂಡುಬರುವ "ಜಂಗಮ" ಪದವನ್ನು ಧಾರಾಳವಾಗಿ ಬಳಸಿದ್ದಾರೆ. "ಜಗದ್ಗುರು" ಪದದಲ್ಲಿ ಕಂಡುಬರುವ ಸರ್ವಾಧಿಕಾರತ್ವ "ಜಂಗಮ" ಪದದಲ್ಲಿ ಕಂಡುಬರಲು ಸಾಧ್ಯವಿಲ್ಲ. ಇಲ್ಲಿ ಪೊಳ್ಳು ಆಡಂಬರ, ಅಸ್ತಿ ಸಂಗ್ರಹಣೆ, ಅಂಧ ಭಕ್ತಿ, ಮುಖಸ್ತುತಿಗೆ ಆಸ್ಪದ ಕಡಿಮೆ. ಜಂಗಮತ್ವದಿಂದ ಅರ್ಥಹೀನ ಧಾರ್ಮಿಕ ಆಚರಣೆಗಳಿಗಿಂತ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಅನುಭಾವಕ್ಕೆ ಆದ್ಯತೆ ಕೊಟ್ಟಂತಾಗುತ್ತದೆ.
ಜಂಗಮ ಪರಂಪರೆ ಮತ್ತು ಜಗದ್ಗುರು ಪರಂಪರೆ ಬಗ್ಗೆ ಮತ್ತೊಮ್ಮೆ ಅವಲೋಕಿಸಬೇಕಾಗಿದೆ. ಇವೆರಡರಲ್ಲಿ ಒಂದು ಒಳ್ಳೆಯ ಆಯ್ಕೆಯನ್ನೂ ಮಾಡಬೇಕಾಗಿದೆ.
*