Previous ದಲಿತರಿಗೆ ದನಿಯಾದ ಗುರು ಬಸವಣ್ಣ ಬಸವೋತ್ತರ ಯುಗ Next

ಮೂಢನಂಬಿಕೆಗಳಿಲ್ಲದ ಬಸವಧರ್ಮ

ಮೂಢನಂಬಿಕೆ ಹೋಗಬೇಕಾದರೆ ವಿಚಾರಕ್ರಾಂತಿಯಾಗಬೇಕು. ಆದರೆ ದಯಾಭಾವವಿಲ್ಲದೆ ವಿಚಾರಕ್ರಾಂತಿಯಾಗದು. ಅಂತೆಯ ಬಸವಣ್ಣನವರು ದಯವೇ ಧರ್ಮದ ಮೂಲ ಎಂದು ತಿಳಿಸಿದ್ದಾರೆ. ದಯೆಯು ಧರ್ಮದ ಮೂಲವೂ ಆಗುವುದು, ಸಮಾನತೆಯ ಮೂಲವೂ ಆಗುವುದು, ಮೂಢ ನಂಬಿಕೆಗಳನ್ನು ಹೊಡೆದೋಡಿಸುವುದಕ್ಕೂ ಇದೇ ಮೂಲವಾಗುವುದು.

ದಲಿತರನ್ನು ಕೆಲವರು ಮೇಲ್ಜಾತಿಯವರು ಮುಟ್ಟಿಸಿಕೊಳ್ಳಲು ಹಿಂಜರಿಯುತ್ತಾರೆ. ಮುಟ್ಟಿದರೆ ಮೈಲಿಗೆಯಾಗುವುದೆಂಬ ಮೂಢನಂಬಿಕೆಯಿಂದಾಗಿ ಅವರು ಮಾನಸಿಕವಾಗಿ ಹಿಂದುಳಿದವರಾಗಿರುತ್ತಾರೆ. ಆದರೆ ದಲಿತರ ಮಗುವೊಂದು ನೀರಿನಲ್ಲಿ ಮುಳುಗುತ್ತಿರುವ ಸಂದರ್ಭದಲ್ಲಿ ಅಂಥವರು ಆ ಮಗುವನ್ನು ರಕ್ಷಿಸಿದರೆ, ಮೂಢನಂಬಿಕೆಯಿಂದ ಹೊರಬಂದು ವೈಚಾರಿಕತೆಯ ಕಡೆಗೆ ಸಾಗುವಂಥವರಾಗುತ್ತಾರೆ. ಅಸ್ಪಶ್ಯತೆ ಕೂಡ ಮೂಢನಂಬಿಕೆ ಎಂಬುದರ ಅರಿವಾದಾಗ ಮಾತ್ರ ಮೇಲ್ಜಾತಿಯವರು ಅಂಥ ಅನಿಷ್ಟ ಪದ್ದತಿಯಿಂದ ಹೊರಬರಲು ಸಾಧ್ಯ. ಹೀಗೆ ಪ್ರತಿಯೊಬ್ಬರಲ್ಲಿ ವಿಚಾರಕ್ರಾಂತಿಯಾದಾಗ ಬಸವಣ್ಣನವರು ಕಟ್ಟಿದ್ದ ಸಮಾನತೆಯ ಸಮಾಜ ಮತ್ತೆ ರೂಪ ತಾಳಲು ಸಾಧ್ಯ. ಹೀಗೆ ಎಲ್ಲರೀತಿಯ ಸಮಾನತೆಯನ್ನು ಬಯಸುವ ಮನುಷ್ಯರು ಮಾತ್ರ ವ್ಯಕ್ತಿತ್ವ ವಿಕಸನಗೊಂಡ ಮನುಷ್ಯರು.

ಜೀವಕಾರುಣ್ಯವಿಲ್ಲದೆ ವ್ಯಕ್ತಿತ್ವವಿಕಸನಗೊಳ್ಳದು. ವ್ಯಕ್ತಿತ್ವವಿಕಸನಗೊಳ್ಳದೆ ಸಮತಾಭಾವ ಬರವುದಿಲ್ಲ. ಸಮತಾಭಾವ ಬರದೆ ದಾಸೋಹ ಭಾವ ಬರುವುದಿಲ್ಲ. ದಾಸೋಹ ಭಾವ ಬರದೆ ಲಿಂಗವಂತನಾಗುವುದಿಲ್ಲ. ಇದು ಲಿಂಗತತ್ವ ಹೀಗೆ ಲಿಂಗವಂತನ ಮೂಲ ಹೃದಯವಂತಿಕೆಯಲ್ಲಿದೆ. ಈ ಹೃದಯವಂತಿಕೆ ಮೂಲಕವೇ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಮಾನವಧರ್ಮದ ಭಾವ, ಸಮತಾ ಭಾವ ಮತ್ತು ವೈಚಾರಿಕ ಪ್ರಜ್ಞೆ ಮೂಡಲು ಸಾಧ್ಯ. ಆ ಮೂಲಕ ಮೂಢನಂಬಿಕೆಗಳಿಂದ ಹೊರಬರಲು ಸಾಧ್ಯ.

ಜಗತ್ತಿನಲ್ಲಿ ವಿವಿಧ ಧರ್ಮಗಳಿವೆ. ಅವುಗಳಲ್ಲಿ ಕೆಲವು ಹಿಂಸಾ ಭಕ್ತಿಂದ ಕೂಡಿವೆ. ಮತ್ತೆ ಕೆಲವು ದಯಾಭಕ್ತಿಂದ ಕೂಡಿವೆ. ಹಿಂಸಾಭಕ್ತಿಯಲ್ಲಿ ಬಲಿ ಕೊಡುವ ಪದ್ಧತಿ ಇದೆ. ವೈದಿಕರು ಯಜ್ಞ ಯಾಗಗಳಲ್ಲಿ ಪಶುಬಲಿ ಕೊಡುವ ಹಿಂಸಾ ಪದ್ಧತಿ ಇಂದಿಗೂ ಅಲ್ಲಲ್ಲಿ ಉಳಿದುಕೊಂಡು ಬಂದಿದೆ. ದೇವಿಗೆ ನರಬಲಿ ಮತ್ತು ಕೋಣಬಲಿ ಕೊಡುವ ಕ್ರೂರ ಪದ್ಧತಿ ಕೂಡ ಭಾರತದಲ್ಲಿ ಇಂದಿಗೂ ಜೀವಂತವಿದೆ. ಮಾಯ ಮಾಟಗಳಿಗೆ ಸಂಬಂಧಿಸಿದಂತೆ ಮಕ್ಕಳ ಬಲಿ ಕೊಡುವ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ.. ಕುರಿ ಕೋಳಿ ಬಲಿಯಂತೂ ಸಾಮಾನ್ಯವಾಗಿದೆ.

ಬೌದ್ಧ ಧರ್ಮದಿಂದಾಗಿ ಬ್ರಾಹ್ಮಣರು ಯಜ್ಞದಲ್ಲಿ ಪಶುಬಲಿ ಕೊಡುವ ಪದ್ಧತಿ ಬಹಳ ಕಡಿಮೆಯಾಯಿತು. ಆದರೆ ಅವರು ಆಹಾರ ಪದಾರ್ಥಗಳನ್ನು ಹಾಗೂ ರೇಷ್ಮೆ ಬಟ್ಟೆಗಳನ್ನು ಯಜ್ಞಕ್ಕೆ ಹಾಕಿ ಸುಡುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಬಲಿ ಕೊಡುವ ಮತ್ತು ಪ್ರಸಾದವನ್ನು ಬೆಂಕಿಗೆ ಸುರಿಯುವಂತೆ ಮಾಡುವ ಯಜ್ಞ ಪದ್ದತಿಯನ್ನು ಬಸವಾದಿ ಶರಣರು ತೀವ್ರವಾಗಿ ವಿರೋಧಿಸಿದ್ದಾರೆ.
ಸುಗ್ಗಿಯ ದಿನಗಳಲ್ಲಿ ಶಾಖಾಹಾರಿ ರೈತರು ಕೂಡ ಮಾಂಸಾಹಾರಿಗಳ ಮೂಲಕ ರಾಶಿಗೆ ಕುರಿ ಬಲಿ ಕೊಡುವ ಪದ್ಧತಿ ಹೈದರಾಬಾದ ಕರ್ನಾಟಕ ಪ್ರದೇಶದ ಕೆಲವೆಡೆ ಇಂದಿಗೂ ಉಳಿದುಕೊಂಡು ಬಂದಿದೆ. ತೆಂಗಿನಕಾಯಿ, ಲಿಂಬೆಹಣ್ಣು ಮತ್ತು ಬೂದುಗುಂಬಳಕಾಯಿ ಮುಂತಾದ ಆಹಾರಪದಾರ್ಥಗಳನ್ನು ಬಲಿಕೊಡುವ ಪದ್ಧತಿಯನ್ನು ಲಿಂಗವಂತರು ಕೂಡ ಇಂದಿಗೂ ಉಳಿಸಿಕೊಂಡು ಬಂದಿರುವುದು ದುಃಖಕರ ಸಂಗತಿ. ಈ ಹಣ್ಣು ಕಾಯಿಗಳು ಲಿಂಗವಂತ ಧರ್ಮದ ಪ್ರಕಾರ ಪ್ರಸಾದ ಎನ್ನಿಸಿಕೊಳ್ಳುವವು. ಪ್ರಸಾದವನ್ನು ಹಾಳು ಮಾಡುವುದು ಲಿಂಗವಂತ ಧರ್ಮಕ್ಕೆ ಅಪಮಾನ ಮಾಡುವಂಥದ್ದು.

ತೆಂಗಿನಕಾಯಿ ಒಡೆಯುವುದರ ಮೂಲ ಹಿಂಸಾಪದ್ಧತಿಯಲ್ಲಿದೆ. ಎಷ್ಟೋ ಜನರು ಪೂಜಾದಿನಗಳಲ್ಲಿ ತಮ್ಮ ಅಂಗಡಿಯ ಮುಂದಿರುವ ರಸ್ತೆಯಲ್ಲಿ ತೆಂಗಿನ ಕಾಯಿ ಒಡೆಯುವರು. ಆಗ ಆ ಕಾಯಿಗಳು ಚೂರುಚೂರಾಗಿ ಮಣ್ಣುಪಾಲಾಗುವವು. ಹೀಗೆ ಪ್ರಸಾದವು ಬಲಿಯಾಗುವ ಪದ್ದತಿ ಲಿಂಗವಂತರಿಗಂತೂ ಗೌರವ ತರುವಂಥದ್ದಲ್ಲ. ಅಮಾವಾಸ್ಯೆ ಮುಂತಾದ ಸಂದರ್ಭದಲ್ಲಿ ಹಾಗೂ ಹೊಸ ವಾಹನಗಳನ್ನು ಖರೀದಿಸಿದಾಗ ವಾಹನಗಳ ಗಾಲಿಗಳ ಕೆಳಗೆ ಲಿಂಬೆ ಹಣ್ಣುಗಳನ್ನು ಇಟ್ಟು ಬಲಿಕೊಡುವ ಪದ್ಧತಿ ಕೂಡ ಭಾರತದಾದ್ಯಂತ ಜಾರಿಯಲ್ಲಿದೆ. ಹೀಗೆ ಪ್ರಸಾದವನ್ನು ಮಣ್ಣುಗೂಡಿಸುವ ಮತ್ತೊಂದು ಅಸಹ್ಯ ಪದ್ಧತಿ ಎಂದರೆ ದೀಪಾವಳಿ, ದಸರಾ, ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಕುಂಕುಮ ತುಂಬಿದ ಬೂದುಗುಂಬಳಗಳನ್ನು ಒಡೆದು ಬೀದಿಗೆ ಎಸೆಯುವುದು. ಇದೊಂದು ವಿಕೃತ ಆಚರಣೆ. ಏಕೆಂದರೆ ಬೂದುಗುಂಬಳ ಬಹಳ ಉಪಯುಕ್ತ ಆಹಾರ ಪದಾರ್ಥವಾಗಿದೆ. ನಿಸರ್ಗದ ಅಮೂಲ್ಯ ಕೊಡುಗೆಯಾಗಿದೆ.

ಅದರಲ್ಲಿನ ರಂಜಕದ ಅಂಶ ನಮ್ಮ ಮೆದುಳಿನ ಬೆಳವಣಿಗೆಗೆ ಅವಶ್ಯವಾಗಿದೆ. ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಅದಾಗಿದೆ. ಅಂಥ ಬೂದುಗುಂಬಳವನ್ನು ಮಣ್ಣುಪಾಲು ಮಾಡುವ ಪದ್ಧತಿ ನಮ್ಮ ಅನಾಗರಿಕ ಮನಸ್ಸಿನ ಪ್ರತೀಕವಾಗಿದೆ. ಹೀಗೆ ನಮ್ಮ ದೇಶದಲ್ಲಿ ಕೋಟ್ಯಂತರ ಲಿಂಬೆಹಣ್ಣು, ಬೂದುಗುಂಬಳ ಮತ್ತು ತೆಂಗಿನಕಾಯಿಗಳು ಜನರ ಬಾಯಿಗೆ ಹೋಗುವ ಬದಲು ಮಣ್ಣಿನ ಬಾಯಿಗೆ ಹೋಗುತ್ತವೆ. ಸ್ಥಾವರಲಿಂಗಕ್ಕೆ ಮತ್ತು ಇತರೆ ಮೂರ್ತಿಗಳಿಗೆ ಅಭಿಷೇಕದ ಹೆಸರಿನಲ್ಲಿ ಹಾಲು, ಮೊಸರು ಮತ್ತು ತುಪ್ಪ ಮುಂತಾದ ಪದಾರ್ಥಗಳನ್ನು ಚರಂಡಿಯ ಬಾಯಿಗೆ ಹೋಗುವಂತೆ ಮಾಡುವುದು ಕೂಡ ಅನಾಗರಿಕ ಪದ್ಧತಿಯೇ ಆಗಿದೆ.
ಇಷ್ಟಲಿಂಗ ಪೂಜೆಗೆ ಬೇಕಾಗಿರುವುದು ವಿಭೂತಿ, ಬಿಲ್ವಪತ್ರೆ, ನೀರು ಮುಂತಾದ ಪದಾರ್ಥಗಳು ಮಾತ್ರ ಇವೆಲ್ಲ ಔಷಧೀಯ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದನ್ನೂ ಹಾಳು ಮಾಡಲಿಕ್ಕಾಗದು. ಅಷ್ಟೊಂದು ಎಚ್ಚರಿಕೆಯಿಂದ ಹಾಗೂ ಪ್ರಸಾದ ಪ್ರಜ್ಞೆಯಿಂದ ಇವುಗಳ ಬಳಕೆಯಾಗುತ್ತದೆ. ಯಾವ ವಸ್ತುಗಳನ್ನು ಲಿಂಗಪೂಜೆಗೆ ಬಳಸುವುದಿಲ್ಲವೋ ಅವುಗಳನ್ನು ಲಿಂಗವಂತರು ಪೂಜೆಯ ಹೆಸರಿನಲ್ಲಿ ಬಳಸಬಾರದು. ಬಲಿ ಪದ್ಧತಿಗೆ ವಿರುದ್ಧವಾಗಿಯೇ ದಯಾ ಪದ್ಧತಿಯನ್ನು ಬಸವಣ್ಣನವರು ಜಾರಿಗೆ ತಂದಿದ್ದಾರೆ. ತೆಂಗಿನಕಾಯಿ ಒಡೆಯುವುದು, ಲಿಂಬೆಹಣ್ಣುಗಳನ್ನು ವಾಹನಗಳ ಚಕ್ರಗಳ ಕೆಳಗೆ ಇಡುವುದು ಮತ್ತು ಬೂದುಗುಂಬಳವನ್ನು ವಿಕಾರವಾಗಿ ಸೀಳಿಹಾಕುವುದು ಮುಂತಾದ ಬಲಿಮೂಲದ ಪದ್ಧತಿಗಳು ಲಿಂಗವಂತರಿಗೆ ಮತ್ತು ವಿಚಾರವಾದಿಗಳಿಗೆ ಸಮ್ಮತವಲ್ಲ.

ಪ್ರಾಣಿಬಲಿ ಕೊಡಲಾಗದವರು ತೆಂಗಿನಕಾಯಿ ಒಡೆಯುತ್ತಾರೆ. ಆ ಮೂಲಕ ಬಲಿ ಕೊಡುವ ಸಂಪ್ರದಾಯವನ್ನು ಉಳಿಸಿಕೊಳ್ಳುತ್ತಾರೆ. ಇಷ್ಟಲಿಂಗಕ್ಕೆ ಯಾರಾದರೂ ತೆಂಗಿನಕಾಯಿ ಒಡೆಯುತ್ತಾರಾ? ಇಲ್ಲ. ಆದ್ದರಿಂದ ಇದು ಬಸವ ಪರಂಪರೆಯಲ್ಲ. ಶರಣರ ಭಕ್ತಿ ಪ್ರೇಮಮಯ ಭಕ್ತಿ. ದಯಾಮಯ ಭಕ್ತಿ, ಬಲಿ ಕೊಡುವ ಭಕ್ತಿ ಅಲ್ಲ.

ಪರಿವಿಡಿ (index)
Previous ದಲಿತರಿಗೆ ದನಿಯಾದ ಗುರು ಬಸವಣ್ಣ ಬಸವೋತ್ತರ ಯುಗ Next