ವಚನ ಸಾಹಿತ್ಯ (ಲಿಂಗಾಯತ ಸಾಹಿತ್ಯ) | ಲಿಂಗಾಯತ ಸೇವೆಗಳು |
ಲಿಂಗಾಯತ ಧರ್ಮದ ಸಂಸ್ಕಾರಗಳು |
ಶರಣರು ತಮ್ಮವೇ ಆದ ಕೆಲವು ಸಂಸ್ಕಾರಗಳನ್ನು ರೂಪಿಸಿಕೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಜನ್ಮ ಸಂಸ್ಕಾರ, ಲಿಂಗದೀಕ್ಷಾ ಸಂಸ್ಕಾರ, ವಿವಾಹ ಸಂಸ್ಕಾರ ಮತ್ತು ಅಂತ್ಯ ಸಂಸ್ಕಾರ. ಇವು ಅನೇಕ ಅಂಶಗಳಲ್ಲಿ ಸಾಂಪ್ರದಾಯಿಕ ಹಿಂದೂ (ವೈದಿಕ) ಸಂಸ್ಕಾರಗಳಿಂದ ಭಿನ್ನವಾಗಿವೆ.
ಜಾತಕರ್ಮ, ಶುಭಕರ್ಮ, ಪ್ರೇತಕರ್ಮವ
ಮಾಡುವರು ಲೋಕದ ಮನುಜರು.
ಅದೆಂತೆಂದಡೆ:
ಈರಿಲು, ಮೂವಟ್ಟಲು; ಹಸೆ-ಹಂದರ ತೊಂಡಿಲು ಬಾಸಿಂಗ;
ಹಣೆಯಕ್ಕಿ ಹೆಣನ ಸಿಂಗಾರ ಶ್ರಾದ್ಧಕೂಳು
ಈ ಪರಿಯ ಮಾಡುವನೇ ಶಿವಭಕ್ತ? (ಅಲ್ಲ)
ಅದೆಂತೆಂದಡೆ:
ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ,
ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ,
ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿ ವೀಳೆಯೊಗೊಟ್ಟು
ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ.
ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ,
ಲಿಂಗದೂರ ಅಘೋರನರಕಿಯಯ್ಯಾ ಕೂಡಲಚೆನ್ನಸಂಗಮದೇವಾ. (ಸ.ವ.ಸ.-೩/೧೨೨೯)#
ಸಂಸ್ಕಾರ: ಒಂದು ವಸ್ತುವಿನಲ್ಲಿರುವ ಅವಗುಣಗಳನ್ನ ತೊಳೆದು, ಶುದ್ಧಗೊಳಿಸಿ, ಅದಕ್ಕೆ ಚೇತನ, ಕಾಂತಿ, ತುಂಬಿಸಿ ಹೊಳಪು ನೀಡುವುದೇ ಸಂಸ್ಕಾರದ ಮೂಲ ಅರ್ಥ. ಸಂಸ್ಕಾರದಿಂದ ವಸ್ತುವು ತನ್ನ ಹೊಸ ರೂಪಕ್ಕೆ ಕಾರಣವಾಗುತ್ತದೆ ಮತ್ತು ಬಳಸಲು ಉಪಯುಕ್ತವಾಗುತ್ತದೆ. ಉದಾಹರಣೆಗೆ. ಕಲ್ಲಿಗೆ ಸಂಸ್ಕಾರ ಕೊಟ್ಟಾಗ ಒಂದು ಉತ್ತಮ ಮೂರ್ತಿಯಾಗಬಲ್ಲದು. ಕಟ್ಟಿಗೆಗೆ ಸಂಸ್ಕಾರ ಕೊಟ್ಟಾಗ ಒಂದು ಕುರ್ಚಿ ಅಥವಾ ಮೇಜು ಆಗುವುದು. ಅದೆ ತರಹ ಮನುಷ್ಯ ಹುಟ್ಟಿದಾಗ ಒಂದು ಪ್ರಾಣಿಯಾಗಿರುತ್ತಾನೆ ಅವನಿಗೆ ಸಂಸ್ಕಾರ ಕೊಟ್ಟಾಗ ಮಾನವನಾಗಿ ಸಮಾಜಕ್ಕೆ ಉಪಯುಕ್ತನಾಗುತ್ತಾನೆ. ಆದ್ದರಿಂದ ಮನುಷ್ಯನಿಗೆ ಸಂಸ್ಕಾರಗಳು ಅಗತ್ಯ. ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ.
ಸಂಸ್ಕಾರ: ಯಾವ ಕ್ರಿಯೆಯಿಂದ ಮನುಷ್ಯನ ಆಂತರಿಕ ದೋಷ ನಿವಾರಣೆ ಆಗಿ ಸದ್ಗುಣ ವಿಕಸಿಸಿ ಶಕ್ತಿ ಸಂವರ್ಧನೆ ಆಗುತ್ತೋ ಅದು ಸಂಸ್ಕಾರ. ಎಲ್ಲ ಸಂಸ್ಕಾರಗಳನ್ನ ಗುರುಗಳು, ಮಗುವಿನ ತಂದೆ ತಾಯಿ ಮತ್ತು ಬಂಧುಗಳು ಮಾಡುವುದಿರುತ್ತದೆ. ಲಿಂಗಾಯತ ಧರ್ಮದಲ್ಲಿ ಈ ಕೆಳಗಿನ ಸಂಸ್ಕಾರಗಳನ್ನು ಮಾಡಲಾಗುತ್ತದೆ.
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ,
ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ.
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು.
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ. - ಶಿವನಾಗಮಯ್ಯ 135 #
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.
ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?
ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ?
ತನ್ನ ಮನೆಗೆ ಕಟ್ಟಳೆ ಇರಬೇಕು.
ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ,
ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ
ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ
ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.
ಇಂತೀ ಇಷ್ಟರ ಕ್ರೀಯಲ್ಲಿ ಸತತ ವ್ರತ ಇರಬೇಕು.
ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ.
ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.- ಅಕ್ಕಮ್ಮ -೫/೪೫೬ #
೧) ಗರ್ಭಲಿಂಗಧಾರಣೆ- (ಸೀಮಂತ)
೨) ಲಿಂಗಧಾರಣೆ-ನಾಮಕರಣ
೩) ಜಾವಳ(ಪ್ರಥಮ ಚೌಲ)
೪) ಅನ್ನ ಪ್ರಸಾದ ಸ್ವಿಕಾರ
೫) ವಿದ್ಯಾರಂಭ -ವಚನಾಭ್ಯಾಸ
೬) ಶಾಲು ಹೊದಿಸುವುದು-ಕಿರುಗುಣಿ-ಇಷ್ಟಲಿಂಗ ದೀಕ್ಷೆ
೭) ಮೈನೆರೆಯುವಿಕೆ-ಶುದ್ಧಿಕರಣ
೮) ಕ್ರೀಯಾ ಮೂರ್ತಿ ದೀಕ್ಷೆ- (ಜಂಗಮ ದೀಕ್ಷೆ) (ಅಯ್ಯಾಚಾರ)
೯) ವಿವಾಹ (ಪುನರ್ ವಿವಾಹ-ವಿಧವಾವಿವಾಹ-ವಯಸ್ಕರ ವಿವಾಹ)
೧೦) ವಿಭೂತಿ ವೀಳ್ಯ
೧೧) ಲಿಂಗೈಕ್ಯ ಸಂಸ್ಕಾರ
೧೨) ಐಚ್ಚಿಕ ವಿಧಿಗಳು: ದತ್ತು ಸ್ವಿಕಾರ, ಷಷ್ಠಬ್ದಿ, ವಿವಾಹ ವಾರ್ಷಿಕೋತ್ಸವ , ಹುಟ್ಟು ಹಬ್ಬ, ಪುನಃಶ್ಚೇತನ, ಗಣಾಚಾರ ದೀಕ್ಷೆ.
ಮೇಲಿನ ಸಂಸ್ಕಾರಗಳು ಮನುಷ್ಯ ಹುಟ್ಟಿನಿಂದ ಲಿಂಗೈಕ್ಯನಾಗುವವರೆಗೆ ಮಾಡುವುದಿರುತ್ತದೆ
ಜನ್ಮಸಂಸ್ಕಾರ)
ಕೂಸು ಹುಟ್ಟಿದ ಕೂಡಲೇ-ಅದು ಗಂಡಿರಲಿ, ಹೆಣ್ಣಿರಲಿ-ಅದಕ್ಕೆ ಲಿಂಗಧಾರಣೆ ಮಾಡಬೇಕು.
ಲಿಂಗದೀಕ್ಷೆ
ವೈದಿಕರ ಪ್ರಕಾರ ಎಲ್ಲ ಕೂಸುಗಳೂ ಹುಟ್ಟಿದಾಗ ಶೂದ್ರ, ಆದರೆ ಎಂಟು ವರ್ಷಗಳ ನಂತರ ಗಂಡು ಕೂಸಿಗೆ ಉಪನಯನ ಸಂಸ್ಕಾರ ಮಾಡಿದಾಗ, ಅದು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರೆ ಬ್ರಾಹ್ಮಣ, ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರೆ ಕ್ಷತ್ರಿಯ ಮತ್ತು ವೈಶ್ಯಕುಲದಲ್ಲಿ ಹುಟ್ಟಿದ್ದರೆ ವೈಶ್ಯ ಆಗುತ್ತದೆ. ಶೂದ್ರರಿಗೂ ತ್ರೈವರ್ಣಿಕ ಸ್ತ್ರೀಯರಿಗೂ ಅಸ್ಪೃಶ್ಯರಿಗೂ ಉಪನಯನ ಸಂಸ್ಕಾರವಿಲ್ಲ. ಆದರೆ ಶರಣರ ಪ್ರಕಾರ ಪ್ರತಿ ಕೂಸು ಹುಟ್ಟಿದ ಕೂಡಲೇ ಅದಕ್ಕೆ ಲಿಂಗದೀಕ್ಷೆ ಮಾಡಲಾಗುತ್ತದೆ. ಇದಕ್ಕೆ ಹೆಣ್ಣುಗಂಡು ಎಂಬ ಭೇದವಿಲ್ಲ.
ಎರಡನೆಯದಾಗಿ, ವೈದಿಕರ ಪ್ರಕಾರ ವರ್ಣಸಂಕರ ಮಹಾಪಾಪ. ಬ್ರಾಹ್ಮಣನಾಗಿ ಹುಟ್ಟಿದವನು ಸಾಯುವ ವರೆಗೂ ಬ್ರಾಹ್ಮಣನಾಗೇ ಇರುತ್ತಾನೆ, ಅವನು ಕ್ಷತ್ರಿಯನಾಗಲಿ ಶೂದ್ರನಾಗಲಿ ಆಗುವಂತಿಲ್ಲ. ಶೂದ್ರನು ಯಾವೊಬ್ಬ ತ್ರಿವರ್ಣಿಕನೂ ಆಗುವಂತಿಲ್ಲ. ಆದರೆ ಶರಣರ ಪ್ರಕಾರ, ಎಲ್ಲರೂ ಲಿಂಗದೀಕ್ಷೆಗೆ ಅರ್ಹರು. ಅಂದರೆ, ಬೇರೆ ಕುಲದಲ್ಲಿ ಹುಟ್ಟಿ ಮುಂದೆ ಯಾವಾಗ ಬೇಕಾದರೂ ಅವನು ಲಿಂಗವಂತ ಧರ್ಮ ಸ್ವೀಕರಿಸಬಹುದು.
ಲಿಂಗದೀಕ್ಷೆಯಲ್ಲಿ ಮುಖ್ಯವಾದ ಒಂದು ಅಂಗವೆಂದರೆ ಹಸ್ತಮಸ್ತಕ ಸಂಯೋಗ, ಇದರ ಹಿಂದಿನ ತತ್ವ ಹೀಗಿದೆ: ಪ್ರತಿಯೊಬ್ಬ ಮಾನವನಲ್ಲಿ ಶಿವಕಳೆ (ಚಿತ್ಕಳೆ) ಅಂತಸ್ಥವಾಗಿದೆ. ಗುರುವಾದವನು ಶಿಷ್ಯನ ತಲೆಯಿಂದ ಈ ಚಿತ್ಕಳೆಯನ್ನು ಹೊರತೆಗೆದು ಅದನ್ನು ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸುತ್ತಾನೆ. ಅಲ್ಲಿಂದ ಮುಂದಕ್ಕೆ ಇಷ್ಟಲಿಂಗವು ಕೇವಲ ಕಲ್ಲಿನ ತುಂಡಲ್ಲ, ಚಿತ್ಕಳೆಯನ್ನುಳ್ಳ ಲಿಂಗ ಅಥವಾ ದೇವನ ಪ್ರತೀಕ ಅಥವಾ ಕುರುಹು. ವಾಸ್ತವವಾಗಿ ಚಿತ್ಕಳೆಯನ್ನು ಗುರು ಹೊರತೆಗೆಯುವುದಿಲ್ಲ; ತೆಗೆಯಲು ಯಾರಿಗೂ ಸಾಧ್ಯವಿಲ್ಲ. ಅದೊಂದು ಸಾಂಕೇತಿಕ ಕ್ರಿಯೆ, ಅಷ್ಟೆ. ಅದನ್ನು ತೆಗೆದಂತೆ ಮಾಡುತ್ತಾನೆ. ಅಂದರೆ ಚಿತ್ಕಳೆ ನಿನ್ನಲ್ಲೇ ಇದೆ, ಅದನ್ನು ಇಷ್ಟಲಿಂಗದ ಮೂಲಕ ಸಾಕ್ಷಾತ್ಕರಿಸಿಕೊ ಎಂದು ಹೇಳುವ ಒಂದು ಕ್ರಿಯೆ.
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ದೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಂದು ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ ಅದು ಅಖಂಡತೇಜವನೆ
ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ.
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ. (೧: ೯೮೬)
ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿದ ಮೇಲೆ;
ಮತ್ತೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸೂತಕ,
ಎಂಜಲಸೂತಕ ಬಿಡದನ್ನಕ್ಕರ ಇವರನೆಂತು ಭಕ್ತರೆಂಬೆನಯ್ಯಾ?
ಇವರನೆಂತು ಯುಕ್ತರೆಂಬೆನಯ್ಯಾ? ಇವರನೆಂತು ಮುಕ್ತರೆಂಬೆನಯ್ಯಾ?
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು,
ಹಸ್ತಮಸ್ತಕಸಂಯೋಗವಂ ಮಾಡಿ, ಕರ್ಣಮಂತ್ರಮಂ ತುಂಬಿ,
ಕರಸ್ಥಲಕ್ಕೆ ಶಿವಲಿಂಗಮಂ ಬಿಜಯಂಗೈಸಿ ಕೊಟ್ಟ ಬಳಿಕ
ಕಾಡಿಚ್ಚಿನ ಕೈಯಲ್ಲಿ ಕರಡವ ಕೊಯ್ದಿದಂತಿರಬೇಕು ಭಕ್ತನು!
ಹಿಂದೆ ಮೆದೆಯಿಲ್ಲ ಮುಂದೆ ನಿಲವಿಲ್ಲ -
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ನಿಮ್ಮ ಸದ್ಭಕ್ತರು ಸೂತಕವ ಮಾಡಲಿಲ್ಲ. (೩: ೧೩೪೮)
ಹೃದಯಕಮಲದ ಅಷ್ಟದಳದ
ದ್ವಾತ್ರಿಂಶತ್‌ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ.
ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ
ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ,
ಆ ಅಗ್ನಿಯ ಮಧ್ಯದಲ್ಲಿಪ್ಪುದಾ ಕಾಂತಿ,
ಆ ಕಾಂತಿಯ ಮಧ್ಯದಲ್ಲಿಪ್ಪುದಾ ಸುಜ್ಞಾನ.
ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ.
ಆ ಚಿದಾತ್ಮನ ಮಧ್ಯದಲ್ಲಿಪ್ಪನಾ ಚಿತ್ರಕಾಶರೂಪನಪ್ಪ ಪರಶಿವನು.
ಇಂತಪ್ಪ ಪರಿಶಿವನ
ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ,
ಮನ ಭಾವ ಕರಣೇಂದ್ರಿಯಂಗಳಿಂ ಸ್ವರೂಪೀಕರಿಸಿ,
ದೃಷ್ಟಿಗೆ ತೋರಿ,
ಕೈಯಲ್ಲಿ ಲಿಂಗವ ಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ. (೪: ೧೧೬೦)
ಶಿವಶಿವಾ, ಶ್ರೀಗುರುಲಿಂಗಯ್ಯದೇವರು ತನ್ನ ಕರಸ್ಥಲವ ತಂದು
ಎನ್ನ ಶಿರಸ್ಥಲದ ಮೇಲಿರಿಸಿದ ಬಳಿಕ
ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ, ತನ್ನ ಎನ್ನಂತೆ ಮಾಡಿದ;
ಎನ್ನಲ್ಲಿ ತನ್ನಲ್ಲಿ ತೆರಹಿಲ್ಲದೆ ಮನಕ್ಕೆ ತೋರಿದ.
ತನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ಕರಸ್ಥಲದೊಳಗೆ ಮೂರ್ತಿಗೊಳಿಸಿದ.
ಎನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ತನುವಿನ ಮೇಲೆ ಮೂರ್ತಿಗೊಳಿಸಿದ.
ತನ್ನ ತನುವಿನ ಮೇಲಣ ಶಿವಲಿಂಗದೇವರನು
ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ.
ಎನ್ನ ಜ್ಞಾನವೆಂಬ ಮಂಟಪದೊಳಗಣ ಶಿವಲಿಂಗದೇವರನು
ಮಹಾಘನದಲ್ಲಿ ಮೂರ್ತಿಗೋಳಿಸಿದ
ಕಬ್ಬಿನ ತನಿರಸವ ಕೊಂಡು ಸಿಪ್ಪೆಯ ಬಿಡುವಂತೆ,
ಮನದ ಮೇಲಣ ಶಿವಲಿಂಗದೇವರಿರಲು
ತನುವಿನ ಮೇಲಣ ಶಿವಲಿಂಗದೇವರು ಹೋಯಿತ್ತೆಂದು
ಆತ್ಮಘಾತವ ಮಾಡಿಕೊಂಬ ಬ್ರಹ್ಮತಿ ಸೂಳೆಗಾರರ ನೋಡಯ್ಯಾ,
ಚನ್ನಮಲ್ಲಿಕಾರ್ಜುನಾ (೫: ೩೭೯)
ಶಿಷ್ಯ ದೀಕ್ಷಾರ್ಥಿಯಾಗಿ ಗುರುವಿನ ಬಳಿ ಹೋಗುವಾಗ ಅವನಿಗೆ ಶರಣಧರ್ಮದ ಸಿದ್ಧಾಂತ ಮತ್ತು ಆಚರಣೆಗಳ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದುದರಿಂದ ಅವನ್ನು ತಿಳಿಸಿಕೊಡುವುದು ಗುರುವಾದವನ ಕರ್ತವ್ಯ. ಆದರೆ ಗುರುವೇ ಆ ಬಗ್ಗೆ ಅಜ್ಞಾನಿಯಾಗಿರಬಾರದು. ಅಂಥ ಗುರು ಯಾರಿಗೂ ದೀಕ್ಷೆ ಕೊಡಬಾರದು.
ಈ ಕೆಳಗಿನ ಸಂಸ್ಕಾರಗಳನ್ನು ಯಾವುದೆ ಹೊಸ ಕೆಲಸ ಅಥವಾ ಉದ್ಘಾಟನೆ, ಅಂಗಡಿ ಪ್ರಾರಂಭಕ್ಕೆ ಮುಂಚೆ ಮಾಡಲಾಗುತ್ತದೆ.
ಶುದ್ಧಿಕರಣ (ವ್ಯಕ್ತಿ ಮತ್ತು ವಸ್ತು )
#: ಈ ತರಹದ ಸಂಖ್ಯೆಯ ವಿವರ: ಸವಸ-1/628 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-628 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*ವಚನ ಸಾಹಿತ್ಯ (ಲಿಂಗಾಯತ ಸಾಹಿತ್ಯ) | ಲಿಂಗಾಯತ ಸೇವೆಗಳು |